Tag: patila puttappa

  • ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಹುಬ್ಬಳ್ಳಿ: ಸೋಮವಾರ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಜರುಗಿತು.

    ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16ರ ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದರು.

    ಕಡಿಮೆ ರಕ್ತದೊತ್ತಡ, ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದಿದ್ದಾರೆ.

    ಹುಬ್ಬಳ್ಳಿಯ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ನಂತರ ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

  • ನಾಡೋಜ ಪಾಪು ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನಾಡೋಜ ಪಾಪು ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಶತಾಯುಷಿ ಪಾಟೀಲ ಪುಟ್ಟಪ್ಪ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿರುವ ಪಾಟೀಲ ಪುಟ್ಟಪ್ಪ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಮ್ಮು ಹಾಗೂ ಕಫದ ಸಮಸ್ಯೆಯಿಂದಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಸಾಹಿತಿಗೆ ಕಳೆದ ನಾಲ್ಕು ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕೆಮ್ಮು, ಕಫ ಹೆಚ್ಚಾದ ಕಾರಣ ಇನ್ಫೆಕ್ಷನ್ ಆಗಿರುವ ಸಾಧ್ಯತೆ ಹೆಚ್ಚಾಗಿದ್ದು, ಅವರಿಗೆ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಪಾಪು ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

  • ಗೋವಾಗಿಂತ ದೊಡ್ಡದಾದ ಕೊಡಗಿನ ಬಗ್ಗೆ ಮಾತ್ನಾಡೋರು ಯಾರಿಲ್ಲ- ಪಾಟೀಲ ಪುಟ್ಟಪ್ಪ

    ಗೋವಾಗಿಂತ ದೊಡ್ಡದಾದ ಕೊಡಗಿನ ಬಗ್ಗೆ ಮಾತ್ನಾಡೋರು ಯಾರಿಲ್ಲ- ಪಾಟೀಲ ಪುಟ್ಟಪ್ಪ

    ಧಾರವಾಡ: ಕೊಡಗು ಅನಾಥ ಸ್ಥಿತಿ ಅನುಭವಿಸುತ್ತಿದೆ. ಕೊಡಗು ಗೋವಾಗಿಂತ ದೊಡ್ಡದು. ಆದರೆ ಅದರ ಪರ ಮಾತನಾಡುವವರು ಯಾರೂ ಇಲ್ಲ ಅಂತ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತ ಏನಂದ್ರೆ ಲೋಕಸಭೆಯಲ್ಲಿ ಒಬ್ಬ ಮನುಷ್ಯ ಆರಿಸಿ ಬರುತ್ತಾನೆ. ಆದ್ರೆ ಅವನು ಕೊಡಗಿನವನಲ್ಲ. ಅವನು ಮೈಸೂರಿನವನು. ಅವನು ಸ್ಫರ್ಧೆ ಮಾಡಿ ಆರಿಸಿ ಬರುತ್ತಾನೆ. ಕೊಡಗಿನ ಪ್ರತಿನಿಧಿ ಅವನು ತಮ್ಮವನು ಅಂತ ಅವರು ತಿಳಿದುಕೊಳ್ಳಬೇಕು. ಆದ್ರೆ ಕೊಡಗಿನ ಪ್ರತಿನಿಧಿ ಯಾರೂ ಕೇಂದ್ರ ಸರ್ಕಾರದಲ್ಲಿಲ್ಲ. ಕೊಡಗು ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂದಿದೆ. ಈಗ ಕೊಡಗನ್ನು ಮೈಸೂರಿನ ಒಬ್ಬ ಮನುಷ್ಯ ಕೇಂದ್ರ ಪಾರ್ಲಿಮೆಂಟಿನಲ್ಲಿ ಪ್ರತಿನಿಧಿಸುತ್ತಾ ಇದ್ದಾನೆ. ಅವನಿಗೂ ಕೊಡಗಿಗೂ ಏನೂ ಸಂಬಂಧ ಇಲ್ಲ. ಆದ್ರೆ ಅವನು ಕೊಡಗಿನ ಪ್ರತಿನಿಧಿ. ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಇವತ್ತು ಅನಾಥ ಸ್ಥಿತಿಯಲ್ಲಿದೆ ಅಂತ ಅವರು ಹೇಳಿದ್ರು.

    ಗೋವಾ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯವಾಗಿದೆ. ಆದ್ರೆ ಕೊಡಗು ಏನೂ ಲೆಕ್ಕಕ್ಕೇ ಇಲ್ಲ. ಕೊಡಗು ಗೋವೆಗಿಂತ ದೊಡ್ಡದಾಗಿತ್ತು. ಆದ್ರೆ ಇವತ್ತು ಅದರ ಪರವಾಗಿ ಮಾತನಾಡುವವರು ಯಾರು ಇಲ್ಲದಂತಾಗಿದೆ. ಅದರ ಪರವಾಗಿ ಧ್ವನಿಯೆತ್ತುವಂತಹ ಒಂದು ಸೌಹಾರ್ದ ಸಹಾಯವಾಗುತ್ತಿಲ್ಲ ಅಂದ್ರು.

    ಯಾರಿಂದಲೂ ಸೋಲಿಸಲು ಸಾಧ್ಯವಾಗದ ಕೊಡಗನ್ನು ಇಂದು ವರುಣ ಸೋಲಿಸಿದ್ದಾನೆ. ಇತ್ತೀಚೆಗೆ ಕೊಡಗಿನ ಬಗ್ಗೆ ಒಂದು ಕನಸು ಬಿತ್ತು. ಇಡೀ ದಿನ ಅದೇ ಕನಸು. ಅಲ್ಲಿ ಕೊಡಗಿನ ಶಾಲೆಗಳನ್ನು ನೋಡಬೇಕು ಅಂತ ಹೋದೆ. ಆದ್ರೆ ಅಲ್ಲಿ ಶಾಲೆಗಳು ಇದ್ದವು ಎಂಬುದಕ್ಕೆ ಕುರುಹು ಕೂಡ ಇರಲಿಲ್ಲ. ಇವತ್ತಿಗೂ ಕೂಡ ಅದೇ ಪರಿಸ್ಥಿತಿ ಇದೆ. ನನಗೆ ಈಗ ಅಪರಾಧಿ ಮನೋಭಾವ ಕಾಡುತ್ತಿದೆ. ಕೊಡಗನ್ನ ನೂತನ ರಾಜ್ಯದಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದೆ. ಇವತ್ತು ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ರಾಕ್ಷಸ ಮಳೆಗೆ ಕಾಫಿ, ಏಲಕ್ಕಿ, ಮೆಣಸು ಕೊಚ್ಚಿ ಹೋಗಿದೆ. ಸರ್ಕಾರ ಅವರನ್ನ ಉಳಿಸುವ ಕೆಲಸ ಮಾಡಬೇಕು. ಹಣ ಎತ್ತಿ ಜೆಬಿಗೆ ತುಂಬಿಕೊಳ್ಳೊ ಜನರು ಇದ್ದಾರೆ. ಅದರ ದುರುಪಯೋಗ ಆಗಬಾರದು ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv