– ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆ
ಬೆಂಗಳೂರು: ನಗರದಲ್ಲಿ ಮಳೆ ಎಫೆಕ್ಟ್ ರೋಗಿಗಳಿಗೂ ತಟ್ಟಿದೆ. ಎಚ್‍ಎಸ್‍ಆರ್ ಲೇಔಟ್ ನ ಗ್ರೀನ್ ವ್ಯೂ ಆಸ್ಪತ್ರೆ ಕೆಳಮಹಡಿ ಸಂಪೂರ್ಣ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಆಸ್ಪತ್ರೆ ಕೆಳಮಹಡಿಯಲ್ಲಿ ಬೈಕ್ ಗಳು, ಆಕ್ಸಿಜನ್ ಸಿಲಿಂಡರ್‍ಗಳು ನೀರಿನಲ್ಲಿ ಮುಳುಗಿವೆ. ಗ್ರೀನ್ ವ್ಯೂ ಆಸ್ಪತ್ರೆಯ ಐಸಿಯುನಲ್ಲಿದ್ದ ಇಬ್ಬರು ರೋಗಿಗಳನ್ನ ಮಾರ್ವೆಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಳಮಹಡಿಯಲ್ಲಿದ್ದ ಡಯಾಲಿಸಿಸ್ ಸಂಪೂರ್ಣ ಜಲಾವೃತವಾಗಿದೆ. ಅಗ್ನಿಶಾಮಕ ವಾಹನದ ಸಹಾಯದಿಂದ ಆಸ್ಪತ್ರೆ ಸಿಬ್ಬಂದಿ ಕೆಳಮಹಡಿಯಿಂದ ನೀರನ್ನ ಹೊರಕಾಕುತ್ತಿದ್ದಾರೆ.

ಇನ್ನೆರಡು ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ರಾಜ್ಯದ ಕೆಲ ಭಾಗದಲ್ಲಿ ಮಾತ್ರ ಮಳೆಯಾಗತ್ತಿದೆ. ಬೆಂಗಳೂರು, ಮೈಸೂರು ,ಚಾಮರಾಜಪೇಟೆ ಭಾಗದಲ್ಲಿ ಮಾತ್ರ ಮಳೆಯಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಬೆಂಗಳೂರಿನ ಅರಾಧ್ಯನ ಲೇಔಟ್ ಹಾಗೂ ಈಜಿಪುರದಲ್ಲಿ ಮನೆಗೆ ನೀರು ನುಗ್ಗಿದೆ. ಕಾರು, ಬೈಕ್ ಜಲಾವೃತವಾಗಿವೆ. ಶಾಂತಿನಗರದ ಕೆಎಸ್‍ಆರ್‍ಟಿಸಿ ವಸತಿ ನಿಲಯ ಜಲಾವೃತವಾಗಿದೆ. ಎಚ್‍ಎಸ್‍ಆರ್ ಲೇಔಟ್ ನ ಏಳನೇ ಹಂತದಲ್ಲಿ ನೆರೆ ಬಂದಿರೋ ವಾತಾವರಣ ನಿರ್ಮಾಣವಾಗಿದೆ. ಮ್ಯಾನ್ ಹೋಲ್ ಗಳು ಓಪನ್ ಆಗಿ ರಸ್ತೆ ತುಂಬೆಲ್ಲಾ ಕೊಳಚೆ ನೀರು ಹರಿಯುತ್ತಿದೆ. ಜನ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಜನರ ಅಹವಾಲು ಆಲಿಸಿ ನೀರನ್ನ ಹೊರಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜೆಟ್ಟಿಂಗ್ ಮಷಿನ್ ತಂದು ನೀರನ್ನ ಹೊರಹಾಕುವಂತೆ ಸೂಚನೆ ನೀಡಲಾಗಿದೆ. ಈ ಪ್ರಮಾಣದಲ್ಲಿ ಮಳೆಯಾಗತ್ತೆ ಅಂತ ನಿರೀಕ್ಷಿಸಿರಲಿಲ್ಲ. ರಾತ್ರಿಯಿಂದಲೇ ಜನ ಕಂಪ್ಲೇಂಟ್ ಮಾಡೋಕೆ ಶುರುಮಾಡಿದ್ರು, ತಕ್ಷಣಕ್ಕೆ ಸ್ಪಂದಿಸುತ್ತಿದ್ದೇವೆ. ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಬಹುತೇಕ ಕಡೆ ಇದೇ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸುವ ಕೆಲಸ ತಕ್ಷಣಕ್ಕೆ ಮಾಡ್ತೇವೆ ಅಂತ ಪಬ್ಲಿಕ್ ಟಿವಿಗೆ ಶಾಸಕ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ರು.

ಭಾರಿ ಮಳೆ ಹಿನ್ನಲೆಯಲ್ಲಿ ಮೇಯರ್ ಪದ್ಮಾವತಿ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ರಾತ್ರಿ ಇಡೀ ಭಾರಿ ಮಳೆಯಾಗಿದೆ. ಬಿಬಿಎಂಪಿಗೆ ಸಾಕಷ್ಟು ಕರೆಗಳು ಬರತ್ತಿವೆ. ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆ. ನೀರು ನುಗ್ಗಿದ ಪ್ರದೇಶಗಳಲ್ಲಿ ಪಂಪ್ ಮೂಲಕ ನೀರನ್ನು ತೆರವು ಮಾಡುವ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡಲಿದ್ದಾರೆ. ನಮ್ಮ ಒಂಭತ್ತು ತಂಡ ನೀರನ್ನು ಹೊರಹಾಕಲು ಸಿದ್ಧವಾಗಿದೆ ಎಂದು ಹೇಳಿದ್ರು. ಜೆಸಿ ರೋಡ್ ಕುಂಬಾರಗುಂಡಿಗೆ ಮೇಯರ್ ಪದ್ಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಬೆಳಗಿನ ಜಾವ 5ರ ವೇಳೆಗೆ 100 ಎಂಎಂ ಮಳೆಯಾಗಿದೆ. 64.5 ಎಂಎಂ ಮಳೆಯಾದರೆ ಅದನ್ನ ಭಾರೀ ಮಳೆ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಬೆಂಗಳೂರಲ್ಲಿ ದಾಖಲೆಯ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ. ಮಹದೇವಪುರ, ಕೆ.ಆರ್ ಪುರ, ಎಚ್‍ಎಸ್‍ಆರ್ ಲೇಔಟ್, ಬನ್ನೇರುಘಟ್ಟ ಭಾಗದಲ್ಲಿ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ. ಬೆಂಗಳೂರು, ಮೈಸೂರು ರಾಮನಗರದಲ್ಲಿ ಹೆಚ್ಚು ಮಳೆಯಾಗಿದ್ದು, ನಿರೀಕ್ಷೆಗೂ ಮೀರಿದ ಮಳೆಗೆ ಬೆಂಗಳೂರು ಸಾಕ್ಷಿಯಾಗಿದೆ.









