Tag: Patiala Court

  • NIAಯಿಂದ ಸಾಕ್ಷಿ ಕೊರತೆ: ಭಟ್ಕಳ ಮೂಲದ ಉಗ್ರಗಾಮಿ ವಾಯಿದ್‌ಗೆ ಬಿಗ್ ರಿಲೀಫ್‌ ನೀಡಿದ ಕೋರ್ಟ್‌

    NIAಯಿಂದ ಸಾಕ್ಷಿ ಕೊರತೆ: ಭಟ್ಕಳ ಮೂಲದ ಉಗ್ರಗಾಮಿ ವಾಯಿದ್‌ಗೆ ಬಿಗ್ ರಿಲೀಫ್‌ ನೀಡಿದ ಕೋರ್ಟ್‌

    ಕಾರವಾರ: ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್‌ನಲ್ಲಿ ಆರೋಪಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಉಗ್ರಗಾಮಿ ಅಬ್ದುಲ್ ವಾಯಿದ್ ಸಿದ್ದಿಬಪ್ಪಗೆ (Abdul Wahid Siddibappa) ದೆಹಲಿ ಪಟಿಯಾಲ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣ ವರ್ಗಾವಣೆ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಪ್ರಕರಣ ರದ್ದು ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ.

    ದುಬೈನಲ್ಲಿ ಕುಳಿತು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಆರೋಪದಡಿ ಅಲ್ಲಿನ ಸರ್ಕಾರ ಈತನನ್ನು ಗಡಿಪಾರು ಮಾಡಿತ್ತು. ನಂತರ 2016ರ ಮೇ 20 ರಲ್ಲಿ NIA ದೆಹಲಿಯಲ್ಲಿ ಬಂಧಿಸಿತ್ತು. ಇದನ್ನೂ ಓದಿ: ಸ್ವಂತ ಮನೆಯಿಲ್ಲ ಎಂದಿದ್ದ ರಾಹುಲ್‌ ಗಾಂಧಿಗೆ 4 ಅಂತಸ್ತಿನ ಮನೆ ನೀಡಿದ ಕಾಂಗ್ರೆಸ್‌ ʻರಾಜಕುಮಾರಿʼ

    ಈತನ ವಿರುದ್ಧ ಇಂಡಿಯನ್ ಮುಜಾಹಿದ್ದಿನ್ (ಸಿಮಿ) ಸಂಘಟನೆಗೆ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ದಂಧೆ, ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್‌ನಲ್ಲಿ ಸಹ ಈತನ ಕೈವಾಡ ಇರುವ ಕುರಿತು NIA ಪ್ರಕರಣ ದಾಖಲಿಸಿತ್ತು.

    ಭಟ್ಕಳ ಮೂಲದ ಅಬ್ದುಲ್ ವಾಯಿದ್ ಸಿದ್ದಿಬಪ್ಪ ವಿರುದ್ಧ NIA ದಾಖಲಿಸಿದ್ದ, ಭಯೋತ್ಪಾದನೆ ಸಂಘಟನೆಗೆ ಹಣ ಒದಗಿಸಿದ ಕುರಿತು ಇರುವ ದೂರಿನಲ್ಲಿ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ಪ್ರಕರಣವನ್ನು ದೆಹಲಿ ಪಟಿಯಾಲ ಕೋರ್ಟ್‌ ಶನಿವಾರ ರದ್ದುಪಡಿಸಿತು. ಅಲ್ಲದೇ ವಾಯಿದ್‌ ಬಿಡುಗಡೆ ಮಾಡುವಂತೆ ಸೋಮವಾರ ಆದೇಶ ಮಾಡಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ – ಅಮಿತ್ ಶಾ ಗುಡುಗು

  • ಸಿಧು ಈಗ ಖೈದಿ ನಂ.241383 – 8 ಕೊಲೆ ಪಾತಕಿಗಳಿರುವ ಸೆಲ್‍ನಲ್ಲಿ ವಾಸ

    ಸಿಧು ಈಗ ಖೈದಿ ನಂ.241383 – 8 ಕೊಲೆ ಪಾತಕಿಗಳಿರುವ ಸೆಲ್‍ನಲ್ಲಿ ವಾಸ

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದು, ಇದೀಗ ಪಟಿಯಾಲ ಜೈಲಿನಲ್ಲಿ ಖೈದಿ ಸಂಖ್ಯೆ 241383 ಆಗಿದ್ದಾರೆ.

    1988ರ ರಸ್ತೆಯಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು ಶುಕ್ರವಾರ ನವಜೋತ್ ಸಿಂಗ್ ಸಿಧು ನ್ಯಾಯಾಲಯಕ್ಕೆ ಶರಣಾಗಿದ್ದರು. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಇದನ್ನೂ ಓದಿ: 1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು

    ಜೈಲಿಗೆ ಹೋದ ಸಿಧು ಅವರಿಗೆ ಖೈದಿಗಳಂತೆ ಸಂಖ್ಯೆಯೊಂದನ್ನು ನೀಡಿ, 10ನೇ ಬ್ಯಾರಕ್‍ನಲ್ಲಿದ್ದಾರೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಂಟು ಮಂದಿಯೊಂದಿಗೆ ಸಿಧು ಅವರು ಸೆಲ್ ಹಂಚಿಕೊಳ್ಳುತ್ತಿದ್ದಾರೆ ಮತ್ತು ಸಿಮೆಂಟ್ ಕಟ್ಟೆಯ ಮೇಲಿರುವ ಹಾಸಿಗೆ ಮೇಲೆ ಮೊದಲ ದಿನ ಮಲಗಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

    ಶುಕ್ರವಾರ ಸಂಜೆ 7:15 ಕ್ಕೆ ಸಿಧುಗೆ ದಾಲ್ ಮತ್ತು ರೋಟಿಯನ್ನು ನೀಡಲಾಗಿದೆ. ಆದರೆ ಅನಾರೋಗ್ಯದ ಕಾರಣ ನೀಡಿ ಅವರು ಅದನ್ನು ಸೇವಿಸಲು ನಿರಾಕರಿಸಿದರು. ಅವರು ಸಲಾಡ್ ಮತ್ತು ಕೆಲವು ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಸಿಧು ಅವರಿಗೆ ಒಂದು ಟೇಬಲ್, ಒಂದು ಕುರ್ಚಿ, ಎರಡು ಪೇಟಗಳು, ಒಂದು ಬೀರು, ಒಂದು ಹೊದಿಕೆ, ಮೂರು ಸೆಟ್ ಒಳ ಉಡುಪು, ಎರಡು ಟವೆಲ್, ಒಂದು ಸೊಳ್ಳೆ ಪರದೆ, ಒಂದು ಪೆನ್ನು, ಒಂದು ನೋಟ್ ಬುಕ್, ಒಂದು ಜೊತೆ ಶೂ, ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಎರಡು ಬೆಡ್ ಶೀಟ್, ನಾಲ್ಕು ಜೊತೆ ಕುರ್ತಾ ಪೈಜಾಮ ಮತ್ತು ಎರಡು ದಿಂಬಿನ ಕವರ್ ನೀಡಲಾಗಿದೆ ಎನ್ನಲಾಗುತ್ತಿದೆ.

  • ಅತ್ಯಾಚಾರದಂತಹ ಅಪರಾಧ ತಡೆಯಲು ಯೋಗ, ನೈತಿಕ ಶಿಕ್ಷಣ ಪಠ್ಯದ ಭಾಗವಾಗಬೇಕು: ಬಾಬಾ ರಾಮ್‍ದೇವ್

    ಅತ್ಯಾಚಾರದಂತಹ ಅಪರಾಧ ತಡೆಯಲು ಯೋಗ, ನೈತಿಕ ಶಿಕ್ಷಣ ಪಠ್ಯದ ಭಾಗವಾಗಬೇಕು: ಬಾಬಾ ರಾಮ್‍ದೇವ್

    – ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು
    – ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು

    ನವದೆಹಲಿ: ಮಹಿಳೆಯರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರದಂತಹ ಭೀಕರ ಅಪರಾಧಗಳನ್ನು ತಡೆಯಲು ಸರ್ಕಾರ ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

    ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಾದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯದ ಭಾಗವಾಗಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

    ನರಭಕ್ಷಕರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಂಗವು ಇತಿಹಾಸ ನಿರ್ಮಿಸಿದೆ. ಇಂತಹ ಕೃತ್ಯ ಎಸಗಿದವರಿಗೆ ಯಾವ ರೀತಿಯ ಶಿಕ್ಷೆಯಾಗುತ್ತದೆ ಎಂಬುದನ್ನು ತೋರಿಸಿದೆ. ಅಲ್ಲದೆ ಮುಂದೆ ಯಾರಾದರೂ ಇಂತಹ ಘೋರ ಅಪರಾಧಗಳನ್ನು ಮಾಡುವವರಿಗೆ ಭಯ ಹುಟ್ಟಿಸುವಂತೆ ಮಾಡಿದೆ. ಈ ಪ್ರಕರಣವು ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಚಿತ್ರಣವನ್ನು ಬಿಂಬಿಸಿದೆ ಎಂದು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

    2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

    ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟಿಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು.

    ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತು. ಇತ್ತ ಅರ್ಜಿ ವಜಾಗೊಳ್ಳುತ್ತಿದ್ದಂತೆ ತಿಹಾರ್ ಜೈಲಿನ ಮುಂದೆ ಜನ ಸೇರಲು ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಹಾರ ಜೈಲಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

  • ಕೊರೊನಾದಿಂದಾಗಿ ಜೆರಾಕ್ಸ್ ಆಗಿಲ್ಲ – ಮಧ್ಯರಾತ್ರಿ ಹೈಡ್ರಾಮಾ, ನಿರ್ಭಯಾ ರೇಪಿಸ್ಟ್‌ಗಳ ಅರ್ಜಿ ವಜಾ

    ಕೊರೊನಾದಿಂದಾಗಿ ಜೆರಾಕ್ಸ್ ಆಗಿಲ್ಲ – ಮಧ್ಯರಾತ್ರಿ ಹೈಡ್ರಾಮಾ, ನಿರ್ಭಯಾ ರೇಪಿಸ್ಟ್‌ಗಳ ಅರ್ಜಿ ವಜಾ

    ನವದೆಹಲಿ: ಕೊನೆಯ ಕ್ಷಣದಲ್ಲಿ ಮಧ್ಯರಾತ್ರಿಯ ವೇಳೆ ನಿರ್ಭಯಾ ರೇಪಿಸ್ಟ್‌ಗಳು ಹೈಡ್ರಾಮಾ ಮಾಡಿದ್ದರೂ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

    ಪಟಿಯಾಲ ಕೋರ್ಟಿನಲ್ಲಿ ನಮ್ಮ ಅರ್ಜಿ ವಜಾಗೊಂಡಿದೆ. ಹೀಗಾಗಿ ತುರ್ತಾಗಿ ನಮ್ಮ ಅರ್ಜಿಯನ್ನು ವಿಚಾರಣೆ ನಡೆಸಿ ಶುಕ್ರವಾರ ಬೆಳಗ್ಗೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ಪುರಸ್ಕರಿಸದ ನ್ಯಾ. ಮನಮೋಹನ್ ಅವರು ಅರ್ಜಿಯನ್ನು ವಜಾಗೊಳಿಸಿದರು. ಇದನ್ನೂ ಓದಿ: ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರೆ ಅಪರಾಧಿಗಳ ಪರ ಎ.ಪಿ ಸಿಂಗ್ ವಾದ ಮಂಡಿಸಿದರು.

    ವಿಚಾರಣೆ ಹೀಗಿತ್ತು:
    ಪಟಿಯಾಲ ಕೋರ್ಟ್ ನಮ್ಮ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ರಾತ್ರಿ ನಮ್ಮ ಕಕ್ಷಿದಾರರ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಎಪಿ ಸಿಂಗ್ ವಾದ ಮಂಡಿಸಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಮೆಹ್ರಾ ಎಲ್ಲ ಕಾನೂನು ಹೋರಾಟಗಳು ಅಂತ್ಯಗೊಂಡಿದೆ. ಹೈಕೋರ್ಟ್ ಮುಂದೆ ಗಲ್ಲು ಶಿಕ್ಷೆಗೆ ತಡೆ ಕೇಳುವಂತಿಲ್ಲ. ಸುಪ್ರೀಂಕೋರ್ಟ್ ಜನವರಿಯಲ್ಲೇ ಆದೇಶವನ್ನು ಎತ್ತಿ ಹಿಡಿದಿದೆ. ಡೆತ್ ವಾರೆಂಟ್ ತಡೆ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಬಹುದು ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರು.

    ಈ ವೇಳೆ ಎಪಿ ಸಿಂಗ್ ಕೋರ್ಟ್ ಮುಂದೆ ದೋಷಿಗಳಿಗೆ ವಿವಿಧ ಅರ್ಜಿಗಳ ಬಾಕಿ ಉಳಿದಿರುವ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿದರು. ಇದಕ್ಕೆ ರಾಹುಲ್ ಮೆಹ್ರಾ, ಈ ಪ್ರಕರಣಕ್ಕೂ ವಿಚ್ಛೇದನಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು. ಈ ಆಕ್ಷೇಪಕ್ಕೆ ನ್ಯಾ.ಮನಮೋಹನ್ ಅವರು ಒಪ್ಪಿಗೆ ಸೂಚಿಸಿದರು.

    ನಂತರ ದೋಷಿಗಳಿಗೆ ಯಾವುದೇ ಕ್ರಿಮಿನಲ್ ಪ್ರಕರಣದ ಹಿನ್ನೆಲೆ ಇಲ್ಲ. ಸಾಕ್ಷಿ ವಿರುದ್ಧ ನಡೆಸಿದ ಕುಟುಕು ಕಾರ್ಯಚರಣೆಯನ್ನು ಪ್ರಸಾರ ಮಾಡಲು ಅವಕಾಶ ಸಿಕ್ಕಿಲ್ಲ. ಪ್ರಕರಣ ಮೇಲೆ ಪರಿಣಾಮ ಬೀರುವ ಕಾರಣ ನೀಡಿ ಪ್ರಸಾರ ಮಾಡಿಲ್ಲ. ಈ ಪ್ರಕರಣ ಹೈಕೋರ್ಟಿನಲ್ಲಿ ಬಾಕಿ ಉಳಿದಿದೆ ಎಂದು ಎ.ಪಿ ಸಿಂಗ್ ವಾದ ಮಾಡಿದರು.

    ಅಷ್ಟೇ ಅಲ್ಲದೇ ನನ್ನ ಹತ್ತಿರ ಎಲ್ಲ ದಾಖಲೆಗಳಿದೆ. ಅದನ್ನು ಈಗ ನ್ಯಾಯಾಲಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜೆರಾಕ್ಸ್ ಅಂಗಡಿ ತೆರೆಯದ ಕಾರಣ ದಾಖಲೆ ತರಲು ಸಾಧ್ಯವಾಗಿಲ್ಲ. ಮೂರು ದಿನ ಅವಕಾಶ ನೀಡಿ ಎಂದು ಮತ್ತೊಂದು ಬಲವಾದ ಕಾರಣ ನೀಡಿದರು. ಈ ಕಾರಣಕ್ಕೆ ಸಿಟ್ಟಾದ ನ್ಯಾಯಾಧೀಶರು ಇದೊಂದು ಅಡಿಪಾಯ ಇಲ್ಲದ ಅರ್ಜಿ ಎಂದು ಹೇಳಿ ಚಾಟಿ ಬೀಸಿದರು.

    ಸಮಯ ರಾತ್ರಿ 11 ಆಗುತ್ತಿದೆ. ಬೆಳಗ್ಗೆ 5:30ಕ್ಕೆ ಶಿಕ್ಷೆ ಇದೆ. ಗಲ್ಲು ಶಿಕ್ಷೆಗೆ ತಡೆ ನೀಡಲು ಯಾವುದಾದರೂ ಒಂದು ಮುಖ್ಯ ಅಂಶವನ್ನು ತಿಳಿಸಿ ಎಂದು ನ್ಯಾಯಾಧೀಶರು ವಕೀಲರಿಗೆ ಸೂಚಿಸಿದರು. ಇದಕ್ಕೆ ಎಪಿ ಸಿಂಗ್ ಒಮ್ಮೆ ಅಪರಾಧಿಗಳ ಕುಟುಂಬನ್ನು ಗಮನಿಸಿ, ಅಷ್ಟೇ ಅಲ್ಲದೇ ಹಿಂದೆ ಇವರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಎಂದು ಹೇಳಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾ. ಮನಮೋಹನ್ ಅರ್ಜಿಯನ್ನು ವಜಾಗೊಳಿಸಿದರು.

     

  • ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಕೃತ್ಯ ಎಸಗಿ 2012ರ ಡಿಸೆಂಬರ್ 16ರಿಂದ ಇಂದಿನವರೆಗೆ ಅಂದ್ರೆ 7 ವರ್ಷ 3 ತಿಂಗಳು, 3 ದಿನಗಳು ಕಳೆದಿವೆ. ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಈವರೆಗೂ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ನಾಳೆ ಬೆಳಗ್ಗೆ ನಾಲ್ವರನ್ನೂ ಗಲ್ಲಿಗೆ ಏರಿಸುವುದು ಖಚಿತವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಗೆ ನಡೆಯಲಿದೆ. ನಿನ್ನೆ ಅರ್ಜಿ ಸಲ್ಲಿಸಿರುವ ನಾಲ್ವರು ದೋಷಿಗಳು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ನಾಲ್ವರು ದೋಷಿಗಳ ಕಾನೂನು ಹೋರಾಟ ಬಾಕಿ ಉಳಿದಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಕ್ಷಮಾದಾನ ಅರ್ಜಿ ವಜಾ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ಇನ್ನು ಬಾಕಿ ಇದ್ದು, ಈ ಅರ್ಜಿ ಇತ್ಯರ್ಥವಾಗಬೇಕಿದೆ. ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ. ಹೀಗಾಗಿ ಶಿಕ್ಷೆ ಕಡಿತಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಕ್ಯುರೆಟಿವ್ ಅರ್ಜಿ ಬಾಕಿ ಇದೆ. ಅಲ್ಲದೆ ತಿಹಾರ್ ಜೈಲು ಸಿಬ್ಬಂದಿ ಥಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಬೇಕಿದ್ದು, ಈ ವೇಳೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ದೋಷಿ ಪವನ್ ಗುಪ್ತಾ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

    ಪ್ರಕರಣದ ಮತ್ತೊರ್ವ ಆರೋಪಿ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ನೀಡುವಂತೆ ಬಿಹಾರದಲ್ಲಿ ಕೊರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸಹ ನಡೆಬೇಕಿದೆ. ವಿನಯ್ ಶರ್ಮಾ ತನ್ನ ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕುರಿತು ವಿಚಾರಣೆ ನಡೆಬೇಕಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಇಷ್ಟು ಮಾತ್ರವಲ್ಲದೆ ಮೂವರು ದೋಷಿಗಳು ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳು ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮುನ್ನ ಅಪರಾಧಿಗಳನ್ನು ಶಿಕ್ಷಿಸುವುದು ಸರಿಯಲ್ಲ ಎಂದು ವಕೀಲ ಎ.ಪಿ.ಸಿಂಗ್ ಪಟಿಯಾಲ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.

    ಇಂದು ಈ ಅರ್ಜಿ ನ್ಯಾ.ಧರ್ಮೇಂದ್ರ ರಾಣಾ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಈಗಾಗಲೇ ನಾಲ್ಕು ಬಾರಿ ಜೀವದಾನ ಸಿಕ್ಕಿರುವ ನಾಲ್ವರು ದೋಷಿಗಳಿಗೆ ಸಾವಿನ ಕಡೆಯ ದಿನ ಐದನೇ ಬಾರಿ ಜೀವದಾನ ಸಿಕ್ಕುತ್ತಾ, ಅಥವಾ ಗಲ್ಲು ನಿಶ್ಚಿತವೇ ಎಂಬುದನ್ನು ಕಾದು ನೋಡಬೇಕಿದೆ.

    ವಿಚ್ಛೇದನ ಅರ್ಜಿ:
    ಗಲ್ಲಿಗೇರಿಸುವ ಎರಡು ದಿನಗಳ ಮೊದಲು ತಪ್ಪಿತಸ್ಥ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಕೋರಿ ಬಿಹಾರದ ಔರಂಗಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ನಾನು ವಿಧವೆಯಾಗಿ ಬದುಕಲು ಬಯಸುವುದಿಲ್ಲ. ಆದ್ದರಿಂದ ನೇಣು ಹಾಕುವ ಮೊದಲು ನಾವು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.

    ಈ ಅರ್ಜಿಯಿಂದಾಗಿ ಅಪರಾಧಿಗಳ ಗಲ್ಲಿಗೇರಿಸುವುದನ್ನು ಮುಂದೂಡಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿಚ್ಛೇದನವು ಸಿವಿಲ್ ಪ್ರಕರಣಗಳಲ್ಲಿ ಬರುತ್ತದೆ. ಹೀಗಾಗಿ ಆ ಅರ್ಜಿ ಕ್ರಿಮಿನಲ್ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಮಾರ್ಚ್ 20ರಂದು ಬೆಳಗ್ಗೆ 5:30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

    ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್:
    ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ.

    ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.

  • ನೇಣು ಕುಣಿಕೆಯಿಂದ ಮತ್ತೆ ಪಾರಾದ ಕೀಚಕರು- ನಿರ್ಭಯಾ ಅತ್ಯಾಚಾರಿಗಳಿಗೆ ಸದ್ಯಕ್ಕಿಲ್ಲ ಗಲ್ಲು

    ನೇಣು ಕುಣಿಕೆಯಿಂದ ಮತ್ತೆ ಪಾರಾದ ಕೀಚಕರು- ನಿರ್ಭಯಾ ಅತ್ಯಾಚಾರಿಗಳಿಗೆ ಸದ್ಯಕ್ಕಿಲ್ಲ ಗಲ್ಲು

    ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಮತ್ತೆ ನೇಣು ಕುಣಿಕೆಯಿಂದ ಪಾರಾಗಿದ್ದಾರೆ. ಮುಂದಿನ ಆದೇಶದವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ದೆಹಲಿಯ ಪಟಿಯಾಲ ಕೋರ್ಟ್ ಆದೇಶ ನೀಡಿದೆ.

    ಸುಪ್ರೀಂಕೋರ್ಟಿನಲ್ಲಿ ಗಲ್ಲು ಶಿಕ್ಷೆಯನ್ನು ಮರಣದಂಡನೆ ಇಳಿಸುವಂತೆ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿ ವಜಾ ಆಗುತ್ತಿದ್ದಂತೆ, ತಿರಸ್ಕೃತಗೊಂಡಿರುವ ಕ್ಷಮಾದಾನ ಅರ್ಜಿಯನ್ನು ಮರು ಪರಿಶೀಲನೆ ನಡೆಸುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದ ಹಿನ್ನೆಲೆ ನಾಳೆ ಬೆಳಗ್ಗೆ ನಿಗದಿಯಾಗಿದ್ದ ಗಲ್ಲು ಶಿಕ್ಷಗೆ ತಡೆ ನೀಡುವಂತೆ ಪವನ್ ಗುಪ್ತಾ ಪರ ವಕೀಲ ಎ.ಪಿ ಸಿಂಗ್ ಮನವಿ ಮಾಡಿದರು. ಇದರ ಜೊತೆಗೆ ಮತ್ತೋರ್ವ ದೋಷಿ ಅಕ್ಷಯ್ ಠಾಕೂರ್ ನ ತಿರಸ್ಕೃತಗೊಂಡ ಕ್ಷಮಾದಾನ ಅರ್ಜಿಯ ಮರು ಪರಿಶೀಲನಾ ಅರ್ಜಿ ಬಾಕಿ ಇದೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಧರ್ಮೇಂದರ್ ರಾಣಾ ಅರ್ಜಿದಾರರ ಪರ ವಕೀಲ ಎ.ಪಿ ಸಿಂಗ್ ವಿರುದ್ಧ ಹರಿಹಾಯ್ದರು. ಒಂದು ವಾರದಲ್ಲಿ ಕಾನೂನು ಹೋರಾಟವನ್ನು ಮುಗಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದ್ಯಾಗೂ ನೀವೂ ಕಾನೂನು ಹೋರಾಟಗಳನ್ನು ಅಂತ್ಯಗೊಳಿಸಿಲ್ಲ ನೀವೂ ಬೆಂಕಿಯ ಜೊತೆ ಆಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎರಡು ಗಂಟೆಗೆ ವಿಚಾರಣೆ ನಡೆಸಿದ್ದ ಪಟಿಯಾಲ ಕೋರ್ಟ್ ದಿಢೀರ್ ಬೆಳವಣಿಗೆಯಿಂದ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದ್ದು, ಮುಂದಿನ ಆದೇಶವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ತಿಹಾರ್ ಜೈಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಸತತವಾಗಿ ಮೂರನೇ ಬಾರಿ ಗಲ್ಲು ಶಿಕ್ಷೆಯಿಂದ ನಾಲ್ವರು ದೋಷಿಗಳು ಪಾರಾಗಿದ್ದಾರೆ.

    ಪಟಿಯಾಲ ಕೋರ್ಟ್ ತೀರ್ಪು ಬಳಿಕ ಮಾತನಾಡಿದ ದೋಷಿಗಳ ಪರ ವಕೀಲ ಎ.ಪಿ ಸಿಂಗ್, ನಾಳಿನ ಗಲ್ಲು ಶಿಕ್ಷೆಗೆ ವಿಶೇಷ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದವರೆಗೂ ತಡೆ ನೀಡಿದೆ. ನಾಲ್ವರು ದೋಷಿಗಳಿಗೂ ನಾಳೆ ಶಿಕ್ಷೆ ಆಗುವುದಿಲ್ಲ ಎಂದರು.

    ಕೋರ್ಟ್ ಆದೇಶ ಬಗ್ಗೆ ನಾನೇನು ಹೇಳಲಿ, ಪದೇ ಪದೇ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿದೆ ಭಾರತದಲ್ಲಿ ಅಪರಾಧಿಗಳಿಗೆ ಬೆಂಬಲ ಸಿಗುತ್ತಿದೆ. ಇಡೀ ಸಮಾಜ ಈ ಬೆಳವಣಿಗೆ ನೋಡುತ್ತಿದೆ. ಗಲ್ಲು ಶಿಕ್ಷೆ ಯಾವಾಗ ಎಂದು ನೀವೇ ಕೋರ್ಟ್ ಮತ್ತು ಸರ್ಕಾರವನ್ನು ಕೇಳಿ ಎಂದು ಸಂತ್ರಸ್ತೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದರು.