Tag: Paru Maduve

  • ಪಾರುಗೆ ಒಲಿದು ಬಂದ ಕಂಕಣಭಾಗ್ಯ

    ಪಾರುಗೆ ಒಲಿದು ಬಂದ ಕಂಕಣಭಾಗ್ಯ

    ಬೆಂಗಳೂರು: ಸದಾ ನವನವೀನ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡುವ ಮೂಲಕ ಜೀ ಕನ್ನಡವಾಹಿನಿ ಕನ್ನಡಿಗರ ಮನೆಮಾತಾಗಿದೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ರಿಯಾಲಿಟಿ ಷೋಗಳು ಹಾಗೂ ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುವ ಮೂಲಕ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸುತ್ತಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರಿಗೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಡುತ್ತಿದೆ. ಅಂಥ ಹೊಸ ಅಲೆಯ ಧಾರಾವಾಹಿಗಳಲ್ಲಿ ‘ಪಾರು’ ಧಾರಾವಾಹಿಯೂ ಒಂದು. ಈಗಾಗಲೇ ‘ಪಾರು’ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಮುನ್ನಡೆದಿದೆ.

    ಅರಸನ ಕೋಟೆಯ ಅಖಿಲಾಂಡೇಶ್ವರಿಯ ಪಾತ್ರದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಾಗಿದ ಅಭಿನಯ, ದಿಟ್ಟ ಮಾತುಗಳು ಇದರ ಜೊತೆ ನಾಯಕಿ ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆಗಳು ವೀಕ್ಷಕರನ್ನು ಇನ್ನೂ ಹೆಚ್ಚಾಗಿ ತಲುಪುವಂತೆ ಮಾಡಿದೆ. ಪಕ್ಕಾ ಸಿನಿಮಾ ಶೈಲಿಯ ಮೇಕಿಂಗ್ ವೀಕ್ಷಕರನ್ನು ಸೆಳೆಯುತ್ತಿದೆ. ಅದ್ದೂರಿ ಬಂಗಲೆಗಳು, ಪಾತ್ರಧಾರಿಗಳ ಕಾಸ್ಟೂಮ್ಸ್, ಖಡಕ್ ಡೈಲಾಗ್‍ಗಳು ವೀಕ್ಷಕರಿಗೆ ಹೊಸತನ ನೀಡಿದೆ. ಪಾರು ಧಾರಾವಾಹಿಯಲ್ಲಿನ ಗಟ್ಟಿ ಕಥಾಹಂದರ ಪ್ರತಿ ಎಪಿಸೋಡನ್ನು ವೀಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದೆ.

    ಕಥಾಹಂದರದ ಬಗ್ಗೆ ಹೇಳುವುದಾದರೆ ಅಖಿಲಾಂಡೇಶ್ವರಿಯ ಮನೆಗೆ ಬರುವ ನಾಯಕಿ ಪಾರು ಅವರ ಮನೆಯಲ್ಲೇ ಅಡುಗೆ ಕೆಲಸಕ್ಕೆ ಸೇರುತ್ತಾಳೆ. ಅಖಿಲಾಂಡೇಶ್ವರಿಯ ಶಿಸ್ತಿನ ಅರಮನೆಯಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುತ್ತಲೇ ಮುಂದೆ ಸಾಗುತ್ತಾಳೆ. ಮುಂದೆ ಅಖಿಲಾಂಡೇಶ್ವರಿ ಸಾಮ್ರಾಜ್ಯಕ್ಕೇ ರಾಯಭಾರಿಯಾಗುತ್ತಾಳೆ. ಈಗ ನಾಯಕಿ ಪಾರು ಬದುಕಲ್ಲೊಂದು ನಾಟಕೀಯ ತಿರುವು ಎದುರಾಗಿದೆ. ಪಾರುವಿಗೆ ಮದುವೆಯ ಯೋಗ ಕೂಡಿಬಂದಿದೆ. ಅದೂ ಯಾರೊಂದಿಗೆ ಗೊತ್ತಾ? ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್ ಆಫ್ ಕಂಪನೀಸ್ ಒಡೆಯ ಆದಿತ್ಯನೊಂದಿಗೆ. ಆದಿತ್ಯ ಮತ್ತು ಪಾರು ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಭರ್ಜರಿಯಾಗಿ ಚಿತ್ರೀಕರಿಸಲಾಗಿದೆ.

    ಅಖಿಲಾಂಡೇಶ್ವರಿಯನ್ನು ಸದಾ ದೇವತೆಯಂತೆ ಆರಾಧಿಸುವ, ಅವರ ಮಾತನ್ನು ವೇದವಾಕ್ಯದಂತೆ ಪಾಲಿಸುವ ಪಾರು ಅಖಿಲಾಂಡೇಶ್ವರಿಯ ಮಗನನ್ನು ಮದುವೆಯಾಗಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಸಹಜವಾಗಿಯೇ ಕಾಡುತ್ತದೆ. ಇದಕ್ಕೆಲ್ಲ ಉತ್ತರ ಪಾರು ಮುಂದಿನ ಸಂಚಿಕೆಗಳಲ್ಲಿ ಸಿಗಲಿದೆ. ಪಾರು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.