Tag: party

  • ಮದ್ವೆಯಾದ 28 ದಿನದ ನಂತ್ರ ಸ್ನೇಹಿತರಿಗೆ ಪಾರ್ಟಿ ಕೊಡಿಸುವಾಗ್ಲೇ ಯುವಕ ಸಾವು

    ಮದ್ವೆಯಾದ 28 ದಿನದ ನಂತ್ರ ಸ್ನೇಹಿತರಿಗೆ ಪಾರ್ಟಿ ಕೊಡಿಸುವಾಗ್ಲೇ ಯುವಕ ಸಾವು

    – ಪಾರ್ಟಿ ಮಾಡಲು ಹೋದವ ವಾಪಸ್ ಬರಲೇ ಇಲ್ಲ
    – ಕೃಷ್ಣಾ ನದಿಗೆ ಬಿದ್ದು ನವ ವಿವಾಹಿತ ಸಾವು

    ಹೈದರಾಬಾದ್: ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿದ್ದ ಯುವಕ ನದಿಯಲ್ಲಿ ಬಿದ್ದು ವಿವಾಹವಾದ 28 ದಿನಗಳಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ತಡೆಪಲ್ಲಿ ಗ್ರಾಮದ ನಿವಾಸಿ ವೆಂಕಟ ವರಪ್ರಸಾದ್ ಮತ್ತು ಲಕ್ಷ್ಮಿ ದಂಪತಿಯ ಪುತ್ರ ಸಾಯಿಫಕೀರ್ (22) ಮೃತ ಯುವಕ. ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿ ಕೃಷ್ಣಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ತಡೆಪಲ್ಲಿ ನಗರ ಪ್ರದೇಶದ ಕೃಷ್ಣಾ ನದಿಯ ರೈಲ್ವೆ ಸೇತುವೆ ಅಡಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.

    ಏನಿದು ಪ್ರಕರಣ?
    ಸಾಯಿಫಕೀರ್ (22) ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ತಂದೆಯ ಸಾವಿನ ನಂತರ ತಾನೇ ಕುಟುಂಬವನ್ನು ಪೋಷಿಸುತ್ತಿದ್ದನು. ಕಳೆದ ತಿಂಗಳು ಅಂದರೆ ಆಗಸ್ಟ್ 8 ರಂದು ಅದೇ ಗ್ರಾಮದ ವೈಷ್ಣವಿ ಜೊತೆ ವಿವಾಹವಾಗಿದ್ದನು. ಮದುವೆಯಾದ 28 ದಿನಗಳ ನಂತರ ಸ್ನೇಹಿತರು ಪಾರ್ಟಿ ಕೊಡಿಸುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಸಾಯಿಫಕೀರ್ ಭಾನುವಾರ ರಾತ್ರಿ ಕೃಷ್ಣಾ ನದಿ ರೈಲ್ವೆ ಸೇತುವೆ ಬಳಿ ಪಾರ್ಟಿ ಮಾಡಲು ಸ್ನೇಹಿತರ ಜೊತೆ ಹೋಗಿದ್ದಾನೆ. ಆದರೆ ಪಾರ್ಟಿ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೃಷ್ಣಾ ನದಿಗೆ ಸಾಯಿಫಕೀರ್ ಬಿದ್ದಿದ್ದಾನೆ.

    ತಕ್ಷಣ ಸ್ನೇಹಿತರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ನುರಿತು ಈಜುಗಾರರನ್ನು ಕರೆದುಕೊಂಡು ಬಂದಿದ್ದು, ಆತನಿಗೆ ಶೋಧ ನಡೆಸಿದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆಯ ನಂತರ ಮುಳುಗಿದ್ದ ಸಾಯಿಫಕೀರ್ ನನ್ನು ಹೊರತೆಗೆಯಲಾಯಿತು.

    ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಸಾಯಿಫಕೀರ್ ಮೃತಪಟ್ಟಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯ ಸಾವಿನ ನಂತರ ಸಾಯಿಫಕೀರ್ ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದನು. ಆದರೆ ಮದುವೆಯಾದ 28 ದಿನಗಳಲ್ಲೇ ಸಾವನ್ನಪ್ಪಿದ್ದು, ಕುಟುಂಬದರ ಆಕ್ರಂದನ ಮುಗಿಲು ಮುಟ್ಟಿದೆ. ತಡೆಪಲ್ಲಿ ಟೌನ್ ಪೊಲೀಸ್ ಅಧಿಕಾರಿ ಸುಬ್ರಮಣ್ಯಂ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು

    ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು

    – ಅಪಘಾತ ಮಾಡಿ ಆಸ್ಪತ್ರೆಗೆ ಹೋಗದೆ ಮನೆಗೆ ಬಂದು ಸೂಸೈಡ್

    ಬೆಂಗಳೂರು: ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.

    ಕೌಶಿಕ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೃತ ಕೌಶಿಕ್ ಆನೇಕಲ್ಲಿನ ಅಲೈನ್ಸ್ ಕಾಲೇಜಿನಲ್ಲಿ ಲಾ ವ್ಯಾಸಂಗ ಮಾಡುತ್ತಿದ್ದನು. ಕಾಲೇಜು ರಜಾ ಇರುವುದರಿಂದ ಪಕ್ಕದಲ್ಲಿನ ಈಡನ್ ಗಾರ್ಡನ್‍ನಲ್ಲಿ ಮನೆ ಮಾಡಿಕೊಂಡು ವಾಸವಿದ್ದನು.

    ಮೃತ ಕೌಶಿಕ್ ಭಾನುವಾರ ರಾತ್ರಿ ಸ್ನೇಹಿತನ ಜೊತೆ ಹೋಗಿ ಕುಡಿದು ಪಾರ್ಟಿ ಮಾಡಿದ್ದನು. ಪಾರ್ಟಿ ಮುಗಿಸಿ ಹೊಸೂರಿನಿಂದ ಬರುವಾಗ ಕಾರು ಅಪಘಾತಕ್ಕೀಡಾಗಿತ್ತು. ಆನೇಕಲ್-ಹೊಸೂರು ರಸ್ತೆಯ ಗುಡ್ಡನಹಳ್ಳಿಯಲ್ಲಿ ಕಾರು ಅಪಘಾತವಾಗಿದ್ದು, ಪಲ್ಟಿಯಾದ ರಭಸಕ್ಕೆ ಕಾರು ಮೂರು ಪಲ್ಟಿ ಹೊಡೆದಿತ್ತು. ಈ ವೇಳೆ ಸ್ಥಳೀಯರು ಕೌಶಿಕ್‍ನನ್ನು ರಕ್ಷಿಸಿ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಕೌಶಿಕ್ ಆಸ್ಪತ್ರೆಗೆ ಹೋಗದೆ ಮನೆಗೆ ಬಂದಿದ್ದನು.

    ಮನೆಯ ಮೊದಲ ಮಹಡಿಯಲ್ಲಿ ಬೀಗ ಒಡೆದು ಸ್ನೇಹಿತನ ಜೊತೆ ಕೌಶಿಕ್ ಮನೆಯೊಳಗೆ ಹೋಗಿದ್ದನು. ಮನೆ ಒಳಗೆ ಹೋದ ನಂತರ ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿ ಕೌಶಿಕ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ರೂಮಿನಲ್ಲಿದ್ದ ಸ್ನೇಹಿತ ಕೂಗಾಡಿಕೊಂಡ ನಂತರ ಸ್ಥಳೀಯರು ಬಂದು ನೋಡಿದ್ದಾರೆ. ಆದರೆ ಅಷ್ಟರಲ್ಲಿ ಕೌಶಿಕ್ ಸಾವನ್ನಪ್ಪಿದ್ದನು.

    ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕೌಶಿಕ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.

  • ಪಾರ್ಟಿಯಲ್ಲಿ ಹಣ ಪಾವತಿಸುವ ಬಗ್ಗೆ ಜಗಳ – ಸ್ನೇಹಿತನ ಎದೆಗೆ ಗುಂಡು ಹಾರಿಸಿದ ಅಪ್ರಾಪ್ತ

    ಪಾರ್ಟಿಯಲ್ಲಿ ಹಣ ಪಾವತಿಸುವ ಬಗ್ಗೆ ಜಗಳ – ಸ್ನೇಹಿತನ ಎದೆಗೆ ಗುಂಡು ಹಾರಿಸಿದ ಅಪ್ರಾಪ್ತ

    ನವದೆಹಲಿ: ಪಾರ್ಟಿಯಲ್ಲಿ ಹಣ ಕೊಡುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿದ್ದು, ಪರಿಣಾಮ 17 ವರ್ಷದ ಅಪ್ರಾಪ್ತ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಇಬ್ಬರು ಅಪ್ರಾಪ್ತರು ಸ್ನೇಹಿತರೊಡನೆ ಜಹಾಂಗೀರ್‍ಪುರಿಯಲ್ಲಿರುವ ತಮ್ಮ ಗುಡಿಸಲಲ್ಲಿ ಪಾರ್ಟಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಾರ್ಟಿಯಲ್ಲಿ ಹಣ ಪಾವತಿಸುವ ಬಗ್ಗೆ ಮೃತ ಹುಡುಗ ಮತ್ತು ಅಪ್ರಾಪ್ತನ ನಡುವೆ ಜಗಳ ನಡೆದಿದೆ. ಆಗ 17 ವರ್ಷದ ಹುಡುಗ ಸ್ನೇಹಿತನ ಎದೆಗೆ ಗುಂಡು ಹಾರಿಸಿದ್ದನು. ನಾವು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿರುವುದಾಗಿ ಪಾರ್ಟಿಯಲ್ಲಿದ್ದ ಗೆಳೆಯ ಪೊಲೀಸರಿಗೆ  ತಿಳಿಸಿದ್ದಾನೆ.

    ಅವರಲ್ಲಿ ಯಾರೂ ಮದ್ಯಪಾನ ಮಾಡುತ್ತಿದ್ದುದ್ದು ಕಂಡುಬಂದಿಲ್ಲ. ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಸದ್ಯಕ್ಕೆ ಬಾಲಾಪರಾಧಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ ವೈರಲ್

    ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ ವೈರಲ್

    – 200ಕ್ಕೂ ಹೆಚ್ಚು ಮಂದಿ ಸಾಮೂಹಿಕ ಡ್ಯಾನ್ಸ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಅದ್ಧೂರಿಯಾಗಿ ಮದುವೆ ಪಾರ್ಟಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಮ್ಮುಂಜೆ ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಹಲವಾರು ಜನರು ಸಾಮೂಹಿಕ ಡ್ಯಾನ್ಸ್ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರು ಮೆಹಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಮಾಸ್ಕ್ ಕೂಡ ಹಾಕದೇ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಉಲ್ಲಂಘಿಸಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೊರೊನಾ ಸಂದರ್ಭದಲ್ಲಿ 50ಕ್ಕಿಂತ ಅಧಿಕ ಜನರು ಮದುವೆ, ಸಮಾರಂಭದಲ್ಲಿ ಭಾಗಿಯಾಗಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮದುವೆಯ ಮೊದಲ ಕಾರ್ಯಕ್ರಮವಾದ ಮೆಹಂದಿ ಶಾಸ್ತ್ರದಲ್ಲಿ ನೂರಾರು ಜನರು ಸೇರಿ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಎಸ್‍ಪಿ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ದೊಡ್ಡ ಪಾರ್ಟಿ ಬೇಕಿತ್ತಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಮನೆಯಲ್ಲಿಯೇ ಈ ರೀತಿಯ ಪಾರ್ಟಿಯನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಲಕ್ಷ್ಮಿ ಪ್ರಸಾದ್, ಶನಿವಾರ ಸಂಜೆ ಈ ಎರಡು ವಿಡಿಯೋ ಲಭ್ಯವಾಗಿದೆ. ಮದುವೆ ಮನೆಯಲ್ಲಿ ನಡೆದಿದೆ. ವಿಚಾರಣೆ ಮಾಡಿದಾಗ ಕಳೆದ ವರ್ಷ ಈ ಪಾರ್ಟಿ ಮಾಡಿರುವುದು ಎಂದು ಯುವಕರು ಹೇಳುತ್ತಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ಒಂದು ವೇಳೆ ಲಾಕ್‍ಡೌನ್ ಸಂದರ್ಭದಲ್ಲಿ ಈ ರೀತಿ ಪಾರ್ಟಿ ಮಾಡಿವುದು ಖಚಿತವಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಂಡೇ ಲಾಕ್‍ಡೌನ್:
    ಇನ್ನೂ ಜಿಲ್ಲೆಯಲ್ಲಿ ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ಮನೆಗಳಲ್ಲೇ ಇದ್ದಾರೆ. ಹಾಲು, ಪೇಪರ್, ಮೆಡಿಕಲ್, ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ತರಕಾರಿ, ಮೀನು, ಮಾಂಸ ಮಾರಾಟ ಸೇರಿದಂತೆ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಮಾಡಲಾಗಿದೆ. ಜನ ರಸ್ತೆಗಿಳಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ವಾಹನಗಳು ಸಹ ರಸ್ತೆಗಿಳಿಯದಂತೆ ಪೋಲಿಸರು ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿಯನ್ನು ಹಾಕಿದ್ದಾರೆ.

  • ಪಿಎಸ್‍ಐಗೆ ಮಗ ಹುಟ್ಟಿದ್ದಕ್ಕೆ ಕೊಟ್ಟ ಪಾರ್ಟಿಗೆ ತೆರಳಿ ಸೋಂಕು ತಗುಲಿಸಿಕೊಂಡ ಸಿಪಿಐ

    ಪಿಎಸ್‍ಐಗೆ ಮಗ ಹುಟ್ಟಿದ್ದಕ್ಕೆ ಕೊಟ್ಟ ಪಾರ್ಟಿಗೆ ತೆರಳಿ ಸೋಂಕು ತಗುಲಿಸಿಕೊಂಡ ಸಿಪಿಐ

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯ 51 ವರ್ಷದ ಸಿಪಿಐಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತ ಸಿಪಿಐ ಅವರನ್ನು ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಕಳೆದ ಒಂದು ವಾರದ ಹಿಂದೆ ಕಂಪ್ಲಿ ಪೊಲೀಸ್ ಠಾಣೆ ಪಿಎಸ್‍ಐ ಅವರಿಗೆ ಗಂಡು ಮಗು ಜನಿಸಿತ್ತು. ಹೀಗಾಗಿ ನಗರದ ಹೊರ ವಲಯದ ಸಮುದಾಯ ಭವನದಲ್ಲಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ಅದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಂಪ್ಲಿ ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಕಾರಣ ಸಂಪೂರ್ಣ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

    ಅದೇ ಪಾರ್ಟಿಯಲ್ಲಿ ಕಂಪ್ಲಿ ಸಿಪಿಐ ಸಹ ಭಾಗಿ ಆಗಿದ್ದರು. ಹೀಗಾಗಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಹೋಮ್ ಗಾರ್ಡ್ ಅವರನ್ನು ಕ್ವಾರೆಂಟೈನ್ ನಾಡಲಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿಯ ರ್ಯಾಂಡಮ್ ಟೆಸ್ಟ್ ಮಾಡಿದ್ದು ನಿನ್ನೆ 52 ಜನರಲ್ಲಿ ಸಿಪಿಐ ಅವರಿಗೆ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಉಳಿದ ಸಿಬ್ಬಂದಿಯಲ್ಲಿ ಸಹ ಕೊರೊನಾ ಭಯ ಉಂಟು ಮಾಡಿದೆ.

    ಕಂಪ್ಲಿ ಠಾಣೆ ಸಿಪಿಐ ವಾಹನದ ಚಾಲಕ ಸೇರಿ ಕಂಪ್ಲಿ ಹಾಗೂ ಕಮಲಾಪುರ ಠಾಣೆಯ ಮೂವರು ಪಿಎಸ್‍ಐಗಳು ಹಾಗೂ ಪೇದೆಗಳು ಸಂಪರ್ಕದಲ್ಲಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಪಟ್ಟಣದ ಠಾಣೆಯ ಎಲ್ಲಾ ಸಿಬ್ಬಂದಿಯನ್ನು ಕ್ವಾರೈಂಟೈನಲ್ಲಿ ಇಡಲಾಗುವುದು. ಅಲ್ಲದೇ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ. ಕಂಪ್ಲಿ ಪೊಲೀಸ್ ಠಾಣೆಯ ಸಿಪಿಐ ಅವರ ಮನೆಗೆ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

  • ಸಚಿವರಿಂದ್ಲೇ ನೈಟ್ ಕರ್ಫ್ಯೂ ಉಲ್ಲಂಘನೆ- ಬರ್ತ್‍ಡೇ ಪಾರ್ಟಿ ಆಯೋಜಿಸಿದ ಆರ್. ಅಶೋಕ್

    ಸಚಿವರಿಂದ್ಲೇ ನೈಟ್ ಕರ್ಫ್ಯೂ ಉಲ್ಲಂಘನೆ- ಬರ್ತ್‍ಡೇ ಪಾರ್ಟಿ ಆಯೋಜಿಸಿದ ಆರ್. ಅಶೋಕ್

    ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಹುಟ್ಟುಹಬ್ಬ ಬುಧವಾರವಿದ್ದು, ಈ ಹಿನ್ನೆಲೆಯಲ್ಲಿ ಸಚಿವರೇ ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಿದ್ದಾರೆ.

    ಹೌದು. ಚಿಕ್ಕಮಗಳೂರಿನ ಕೈಮರ ಸಮೀಪ ಇರುವ ಖಾಸಗಿ ಹೋಟೆಲಿನಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದಾರೆ. ನೈಟ್ ಪಾರ್ಟಿಯಿಂದ ಸೋಂಕು ಹೆಚ್ಚುತ್ತೆ ಅಂದವರೇ ಪಾರ್ಟಿ ಮಾಡಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ಆರ್.ಅಶೋಕ್ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಪಾರ್ಟಿಯಲ್ಲಿ ಶೆಟ್ಟರ್, ಸಿ.ಟಿ.ರವಿ, ಸತೀಶ್ ರೆಡ್ಡಿ ಸೇರಿ ಹಲವರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

    ಒಟ್ಟಿನಲ್ಲಿ ನೈಟ್ ಕರ್ಫ್ಯೂ ಇದ್ದರೂ ಡಿನ್ನರ್‍ಗೆ ಒಂದೆಡೆ ಸೇರಬೇಕಾ..?, ಜನಸಾಮಾನ್ಯರಿಗೊಂದು ನ್ಯಾಯ..? ರಾಜಕಾರಣಿಗಳಿಗೊಂದು ನ್ಯಾಯನಾ..?, ರೂಲ್ಸ್ ಮಾಡುವವರಿಂದಲೇ ರೂಲ್ಸ್ ಬ್ರೇಕ್ ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

  • ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    – ಬಿಯರ್ ಬಾಟಲ್‍ಗಳಿಂದ ಹಲ್ಲೆ

    ಬೆಂಗಳೂರು: ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಣಿ ಕೊಲೆಯಾದ ಯುವಕ. ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಸೇರಿ ಮಣಿಯನ್ನು ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮೃತ ಮಣಿ ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ನಾಲ್ವರು ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಸೇರಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ನಾಲ್ವರ ನಡುವೆ ಗಲಾಟೆ ಶುರುವಾಗಿ. ಗಲಾಟೆ ವಿಕೋಪಕ್ಕೆ ಹೋಗಿ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಮೂವರು ಸೇರಿ ಮಣಿ ಮೇಲೆ ಬಿಯರ್ ಬಾಟಲ್‍ಗಳಿಂದ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಮಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಕೆಂಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

  • ತ್ರಿಕೋನ ಪ್ರೇಮ ಕಥೆಯಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರೇಯಸಿ ಸಾವು

    ತ್ರಿಕೋನ ಪ್ರೇಮ ಕಥೆಯಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರೇಯಸಿ ಸಾವು

    ಬೆಂಗಳೂರು: ಪ್ರಿಯಕರನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೋನಿಕಾ (22) ಮೃತ ಯುವತಿ. ಜೂನ್ 7 ರಂದು ಮೃತ ಮೋನಿಕಾ ಮೇಲೆ ಪ್ರಿಯಕರ ಹಲ್ಲೆ ಮಾಡಿದ್ದನು. ಅಂದಿನಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಇಂದು ಫಲಕಾರಿಯಾಗದೆ ಮೋನಿಕಾ ಸಾವನ್ನಪ್ಪಿದ್ದಾಳೆ.

    ಏನಿದು ಪ್ರಕರಣ?
    ಮೃತ ಮೋನಿಕಾ ಕಳೆದ 4 ವರ್ಷಗಳಿಂದ ಆರೋಪಿ ಬಬೀತ್‍ನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಬಬೀತ್ ಜೊತೆ ಲವ್ ಬ್ರೇಕ್ ಅಪ್ ಆಗಿತ್ತು. ನಂತರ ಮೋನಿಕಾ ಕಳೆದ 5 ತಿಂಗಳಿನಿಂದ ರಾಹುಲ್‍ನನ್ನು ಪ್ರೀತಿಸುತ್ತಿದ್ದಳು. ಜೂನ್ 7 ರಂದು ರಾಹುಲ್ ಹುಟ್ಟುಹಬ್ಬವಿತ್ತು. ಅಂದು ಮೋನಿಕಾ ಬರ್ತ್ ಡೇ ಪಾರ್ಟಿಗೆಂದು ರಾಹುಲ್ ಮನೆಗೆ ಹೋಗಿದ್ದಳು. ಈ ಬಗ್ಗೆ ತಿಳಿದು ಆರೋಪಿ ಬಬೀತ್ ನೇರವಾಗಿ ರಾಹುಲ್ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.

    ರಾಹುಲ್ ಮನೆಯಿಂದ ಮೋನಿಕಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆಯ ಗೋಡೆಗೆ ತಲೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಪೋಷಕರಿಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ ಎಂದು ನಂಬಿಸಿದ್ದನು. ಪ್ರಜ್ಞೆ ತಪ್ಪಿದ್ದ ಮೋನಿಕಾಳನ್ನು ಜೂನ್ 7 ರಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾಳೆ.

    ಅನುಮಾನಗೊಂಡ ಪೋಷಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಮಾಡಿದ ನಂತರ ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವನ್ನ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಬಬೀತ್ ಮತ್ತು ರಾಹುಲ್ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನ ಕೊಲೆ ಪ್ರಕರಣವನ್ನಾಗಿ ಬದಲಾಯಿಸಿ ತನಿಖೆ ಮುಂದುವರಿಸಲಾಗಿದೆ.

  • ಕೊರೊನಾ ರಣಕೇಕೆ ಮಧ್ಯೆ ಭರ್ಜರಿ ನೈಟ್ ಪಾರ್ಟಿ- ಕೆಆರ್‍ಎಸ್ ಡ್ಯಾಂ ಬಳಿ ಮಜಾ

    ಕೊರೊನಾ ರಣಕೇಕೆ ಮಧ್ಯೆ ಭರ್ಜರಿ ನೈಟ್ ಪಾರ್ಟಿ- ಕೆಆರ್‍ಎಸ್ ಡ್ಯಾಂ ಬಳಿ ಮಜಾ

    ಮಂಡ್ಯ: ಒಂದೆಡೆ ದೇಶದಲ್ಲಿ ಕೊರೊನಾ ರಣತಾಂಡವವಾಡ್ತಿದೆ. ಹೀಗಿರುವಾಗ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದೆ. ಆದರೆ ಇದನ್ನ ಉಲ್ಲಂಘಿಸಿ ಕೆಆರ್‍ಎಸ್ ಡ್ಯಾಂ ಬಳಿ ಭರ್ಜರಿ ಪಾರ್ಟಿ ನಡೆದಿದೆ.

    ಕೆಆರ್‍ಎಸ್ ಸಮೀಪದ ತೋಟದಲ್ಲಿ ಆರ್ಕೆಸ್ಟ್ರಾ ಧ್ವನಿವರ್ಧಕ ಬಳಸಿ, ಪೆಂಡಾಲ್ ಹಾಕಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮೈಸೂರು ಮೂಲದ ಸಂಜಯ್ ಎಂಬವರಿಗೆ ಸೇರಿದ ತೋಟ ಇದಾಗಿದೆ.

    ಪೊಲೀಸ್ ಠಾಣೆ ಸಮೀಪ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದರು. ಅಲ್ಲದೆ ತಡರಾತ್ರಿಯಲ್ಲಿ ಇದನ್ನ ಕೇಳಲು ಹೋದ ಸಾರ್ವಜನಿಕರಿಗೆ ಅವಾಜ್ ಹಾಕಿದ್ದಾರೆ.

  • ತಡರಾತ್ರಿವರೆಗೂ ಡಿಜೆ ಹಾಕಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಶಾಸಕನ ಆಪ್ತ

    ತಡರಾತ್ರಿವರೆಗೂ ಡಿಜೆ ಹಾಕಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಶಾಸಕನ ಆಪ್ತ

    ಚಿಕ್ಕೋಡಿ/ಬೆಳಗಾವಿ: ಡೆಡ್ಲಿ ಕೊರೊನಾ ಮಧ್ಯೆಯೂ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಶಾಸಕನ ಆಪ್ತನೊಬ್ಬ ಡಿಜೆ ಹಾಕಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಆಪ್ತ ಹಾಗೂ ಬಗರ ಹುಕುಂ ಸಮಿತಿ ಸದಸ್ಯ ನರಸು ತುಳಸಿಗೇರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸಂಜೆ 7 ನಂತರ ನಿಷೇಧಾಜ್ಞೆ ಇದ್ದರೂ ತಡರಾತ್ರಿವರೆಗೂ ಲಾಕ್‍ಡೌನ್ ನಿಯಮಗಳನ್ನ ಗಾಳಿಗೆ ತೂರಿ ಕೊರೊನಾ ನಡುವೆಯೂ ಡಿಜೆ ಹಾಕಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಮಾಸ್ಕ್ ಧರಿಸದೇ, ಸಾಮಾಜಿಕ ಅಂತವಿಲ್ಲದೇ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಗುಂಪು ಗುಂಪಾಗಿ ಪಾರ್ಟಿ ಮಾಡಿದ್ದಾರೆ. ಶಾಸಕರ ಆಪ್ತ ಅನ್ನುವ ಕಾರಣಕ್ಕೆ ಪೊಲೀಸರು ಇತನನ್ನ ಪ್ರಶ್ನೆ ಮಾಡಿಲ್ಲ. ಪೊಲೀಸ್ ಠಾಣೆಯಿಂದ 5 ಕಿಲೋಮೀಟರ್ ದೂರದಲ್ಲಿರುವ ನಿಲಜಿ ಗ್ರಾಮದಲ್ಲಿ ಶಾಸಕನ ಆಪ್ತನ ಬಗ್ಗೆ ಪೊಲೀಸರ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

    ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಜನರಿಗೆ ಕೊರೊನಾ ಮಹಾಮಾರಿಯಿಂದ ರಕ್ಷಣೆ ಮಾಡಬೇಕಿರುವ ಶಾಸಕರು ತಮ್ಮ ಆಪ್ತರು ಹೀಗೆಲ್ಲ ದರ್ಬಾರ ಮಾಡುತ್ತಿದ್ದರೂ ಸುಮ್ಮನಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.