Tag: party

  • ಉಪೇಂದ್ರ ಪಕ್ಷದ ಪ್ರಣಾಳಿಕೆ ಬಿಡುಗಡೆ: 24 ಅಂಶಗಳು ಇಲ್ಲಿದೆ

    ಉಪೇಂದ್ರ ಪಕ್ಷದ ಪ್ರಣಾಳಿಕೆ ಬಿಡುಗಡೆ: 24 ಅಂಶಗಳು ಇಲ್ಲಿದೆ

    ಬೆಂಗಳೂರು: ನಟ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ತಮ್ಮ ಪಕ್ಷದ ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.

    ಪ್ರಣಾಳಿಕೆಯಲ್ಲಿ ಇರುವ ಪ್ರಮುಖ ಅಂಶಗಳು:
    1. ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.

    2. ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು.

    3. ಪ್ರಜೆಗಳು ಮೊಬೈಲ್ ಅಪ್ಲಿಕೇಶನ್‍ನಲ್ಲಿ ತಮ್ಮ ಕ್ಷೇತ್ರದ/ ಪ್ರದೇಶದ ಸಮಸ್ಯೆ/ ದೂರುಗಳನ್ನು (ಲಿಖಿತ, ಫೋಟೊ, ವಿಡಿಯೋ, ಆಡಿಯೋ ಮೂಲಕ) ಸಂಬಂಧಪಟ್ಟ ಇಲಾಖೆಗಳ ನೌಕರರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ (ಗ್ರಾಮ ಪಂಚಾಯತಿ ಸದಸ್ಯರು, ಕಾರ್ಪೋರೇಟರ್) ಸಲ್ಲಿಸಬಹುದು. ಪ್ರಜೆಗಳ ದೂರನ್ನು ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಂಬಂಧಪಟ್ಟವರು ವಿಫಲರಾದಲ್ಲಿ (ವಿಫಲರಾದವರು ಈ ಹೊಣೆಗಾರಿಕೆಯನ್ನು ಹೊರಬೇಕು) ಆ ದೂರು ಕೂಡಲೇ ಮೇಲ್ಮಟ್ಟದ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ (ಶಾಸಕರು) ವರ್ಗಾವಣೆಗೊಳ್ಳುವುದು ಅವರು ನಿರ್ಧಿಷ್ಟ ಕಾಲಾವಧಿಯೊಳಗೆ ಆ ದೂರನ್ನು ಪರಿಹರಿಸಬೇಕು. ಈ ಪ್ರಕ್ರಿಯೆ ರಾಜ್ಯದ ಮುಖ್ಯಮಂತ್ರಿಗಳ ಕಛೇರಿವರೆಗೂ ವಿಸ್ತರಿಸಲ್ಪಟ್ಟಿರುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುತ್ತದೆ.

    4. ಸಕಾಲಕ್ಕೆ ಸಮಸ್ಯೆಗಳು ಹಾಗೂ ದೂರುಗಳನ್ನು ಉತ್ತಮವಾಗಿ ಪರಿಹರಿಸಿದಂತಹ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯಗಳನ್ನು ಪುರಸ್ಕರಿಸಲಾಗುವುದು ಮತ್ತು ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಚುನಾಯಿತ ಜನ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಖ್ಯ ಅರ್ಹತೆಗಳಾಗಿರುತ್ತವೆ ಮತ್ತು ಅಧಿಕಾರಿಗಳಿಗೆ ಈ ಅಂಕಗಳೇ ಬಡ್ತಿಗಳಿಗೆ ಮಾನದಂಡವಾಗಿರುತ್ತವೆ. (ಕಾರ್ಪೋರೇಟ್ ಟಿಕೆಟಿಂಗ್ ಟೈಮ್‍ಲೈನ್ ಟಾರ್ಗೆಟ್ಸ್ ರೀತಿ)

    5. ಕನಿಷ್ಟ ಹಾಗೂ ನಿಗದಿತ ಅಂಕಗಳನ್ನು ಉತ್ತಮ ಕಾರ್ಯರೀತಿಯಿಂದ ಪಡೆಯತಕ್ಕದ್ದು, ತಪ್ಪಿದಲ್ಲಿ ಶಿಸ್ತು ಕ್ರಮಗಳೊಂದಿಗೆ ವೇತನದಲ್ಲಿ ಕಡಿತ ಸಹಾ ಮಾಡಲಾಗುತ್ತದೆ.

    6. ಕಡ್ಡಾಯವಾಗಿ ಪ್ರತಿ ಸರ್ಕಾರಿ ನೌಕರರು ಪೂರ್ಣ ಹೆಸರು, ಹುದ್ದೆ, ಇಲಾಖೆಯ ಬ್ಯಾಡ್ಜ್‍ಗಳನ್ನು ಮತ್ತು ಸಚಿವಾಲಯಗಳ ಅನುಸಾರ ಏಕರೂಪದ ಬಣ್ಣದ ಸಮವಸ್ತ್ರವನ್ನು ಧರಿಸಿರುತ್ತಾರೆ. ಪ್ರಜೆಗಳು ಆಯಾ ಸರ್ಕಾರಿ ಇಲಾಖೆಗಳ ನೌಕರರನ್ನು ಗುರುತಿಸಲು ಈ ಪ್ರಕ್ರಿಯೆಯು ನೆರವಾಗುತ್ತದೆ.

    7. ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಪ್ರದೇಶಗಳಿಗೆ ಅನುಸಾರವಾಗಿ ವೀಕ್ಷಣಾ ಸೌಲಭ್ಯ ಕಲ್ಪಿಸಲಾಗುವುದು.

    8. ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಚಟುವಟಿಕೆಗಳು, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ಹಾಗೂ ಅಧಿವೇಶನಗಳು ಅಧಿಕೃತ ದಾಖಲೆ, ಪುರಾವೆಗಳು ಹಾಗೂ ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.

    9. ಎಲ್ಲಾ ಮಂತ್ರಿಗಳು, ಶಾಸಕರು, ಕಾರ್ಪೊರೇಟರ್‍ಗಳು, ತಾಲೂಕು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ-ಪುರಾವೆಗಳೊಂದಿಗೆ ದೃಶ್ಯ ಮಾಧ್ಯಮಗಳ ಮುಖಾಂತರ ನೇರಪ್ರಸಾರದೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಹಾಗೂ ಈ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ನೇರ ಪ್ರಸಾರದಲ್ಲಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಪ್ರಜಾ ಪ್ರಭುಗಳು ವೀಕ್ಷಿಸುವಂತೆ ಬಿತ್ತರಿಸಬೇಕು ಹಾಗೂ ಸದನದ ಪ್ರಕ್ರಿಯೆಗಳಲ್ಲಿ ಪ್ರಜೆಗಳು ದೂರವಾಣಿ ಮುಖಾಂತರ ನೇರವಾಗಿ ಚರ್ಚೆಯಲ್ಲಿ ಭಾಗವಹಿಸಬಹುದು.

    10. ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಅದರ ಪ್ರತಿಯೊಂದು ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಆನ್‍ಲೈನ್‍ನಲ್ಲೇ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಮತ್ತು ಟೆಂಡರ್ ಪಡೆದವರ ಮಧ್ಯೆ ವೈಯಕ್ತಿಕ ಸಂಪರ್ಕಗಳನ್ನು ನಿರ್ಬಂಧಿಸಲಾಗುವುದು ಹಾಗೂ ಟೆಂಡರ್ ಪ್ರಕ್ರಿಯೆಗಳ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.

    11. ಯಾವುದೇ ಕಂಟ್ರಾಕ್ಟರ್‍ಗಳಿಗೆ ಕೊಡಲಾಗುವ ಯೋಜನೆಗಳ ಖರ್ಚು- ವೆಚ್ಚಗಳನ್ನು ಅಧಿಕೃತ ದೃಶ್ಯ ದಾಖಲೆಗಳ(ಬಿಲ್) ಮತ್ತು ಹಾಜರಾತಿ ವಿವರಣೆಗಳ ಆಧಾರದ ಮೇಲೆಯೇ ಕೊಡಲಾಗುವುದು. ಪ್ರತಿಯೊಬ್ಬ ಕಾರ್ಮಿಕರ ಹಾಜರಾತಿ ದಾಖಲೆಗಳ(ಬಯೋಮೆಟ್ರಿಕ್, ಸಿಸಿ ಟಿವಿ ಕ್ಯಾಮೆರಾ, ಆರ್.ಎಫ್ ಐಡಿ) ಮೂಲಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸತಕ್ಕದ್ದು. ಯೊಜನೆಗಳ ಪಾವತಿ ಹಣಕ್ಕಾಗಿ ಸರ್ಕಾರದ ಯಾವುದೇ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ.

    12. ಪ್ರತಿಯೊಂದು ಸರ್ಕಾರಿ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಮಾಡುವ ಅಧಿಕಾರಿಗಳು, ಕಂಟ್ರಾಕ್ಟರ್‍ಗಳು ಅದರ ಖರ್ಚು-ವೆಚ್ಚ, ಕಾಲಾವಧಿ ಹಾಗೂ ಹಂತ ಹಂತವಾದ ಬೆಳವಣಿಗೆಗಳ ದಾಖಲೆಗಳೊಂದಿಗೆ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.

    13. ಕಡ್ಡಾಯವಾಗಿ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಅವರವರ ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಗಡವಾಗಿ ಅವರವರ ಸಾಮಾಜಿಕ ಜಾಲತಾಣಗಳಲ್ಲಿ, ಅವರವರ ಕ್ಷೇತ್ರದ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.

    14. ಪ್ರಜೆಗಳು ಹಾಗೂ ಚುನಾಯಿತ ಸದಸ್ಯರ, ಸರ್ಕಾರಿ ಅಧಿಕಾರಿಗಳ ನಡುವಿನ ನೇರ ಸಂವಾದಗಳು ತಿಂಗಳಿಗೊಮ್ಮೆ ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರಗೊಳ್ಳುತ್ತವೆ.

    15. ನಿರಂತರವಾದ ನಿಗ್ರಹಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ಕಾಲಕಾಲಕ್ಕೆ ಸಂಬಂಧಿಸಿದ ಸಚಿವರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ನಡೆಸುತ್ತಿರುತ್ತಾರೆ, ಈ ಪ್ರಕ್ರಿಯೆಗಳು ವಿಡಿಯೋ ರೆಕಾರ್ಡಿಂಗ್ ಆಗುತ್ತದೆ ಹಾಗೂ ಪ್ರಜೆಗಳಿಗೆ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ.

    16. ಆಡಳಿತ ಸರ್ಕಾರವು ಯಾವುದೇ ಸರ್ಕಾರೀ ವರ್ಗಾವಣೆಗಳನ್ನು ಮಾಡುವಾಗ ಸರಿಯಾದ ಕಾರಣ, ದಾಖಲೆಗಳು ಮತ್ತು ಸಾಕ್ಷಿಗಳನ್ನು ಕೊಟ್ಟು ನೇರ ಪ್ರಸಾರದೊಂದಿಗೆ ವರ್ಗಾವಣೆಗಳನ್ನು ಮಾಡಬೇಕು.

    17. ಎಲ್ಲಾ ಸರ್ಕಾರೀ ಇಲಾಖೆಗಳ ಸಂದರ್ಶನಗಳು ಹಾಗೂ ಆಯ್ಕೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರದೊಂದಿಗೆ ಪ್ರಜೆಗಳಿಗೆ ತೆರೆದಿಡಲಾಗುವುದು.

    18. ಎಲ್ಲಾ ಸರ್ಕಾರೀ ತೆರಿಗೆ ಸಂಗ್ರಹಗಳು ಮತ್ತು ಆದಾಯಗಳು ದಾಖಲೆ ಸಹಿತವಾಗಿ ಪ್ರದೇಶಗಳಿಗೆ ಅನುಸಾರವಾಗಿ ತಿಂಗಳಿಗೊಮ್ಮೆ ಸಾರ್ವಜನಿಕರಿಗೆ ತೆರೆದಿಡಲಾಗುವುದು.

    19. ಚುನಾಯಿತ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ನೀಡುವ ವೇತನಗಳು, ಸೌಲಭ್ಯಗಳು ಮತ್ತು ಎಲ್ಲಾ ಸರ್ಕಾರಿ ವಸತಿ, ಪ್ರಯಾಣ, ವೈದ್ಯಕೀಯ ಮತ್ತು ಎಲ್ಲಾ ಇತರ ಭತ್ಯೆ, ವೆಚ್ಚ ಹಾಗೂ ಪ್ರಯೋಜನಗಳು ಸರಿಯಾದ ಕಾರಣ ಮತ್ತು ದಾಖಲೆಗಳೊಂದಿಗೆ ಸಾರ್ವಜನಿಕರಿಗೆ ಜಾಲತಾಣಗಳಲ್ಲಿ ತೆರೆದಿಟ್ಟಿದ್ದರೆ ಮಾತ್ರ ದೊರೆಯುತ್ತದೆ.

    20. ಪ್ರಜೆಗಳು ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡುವಂತೆ ನಿವೃತ್ತರಾಗಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಮಗೆ ದೊರೆಯುವ ಪಿಂಚಣಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬಹುದು.

    21. ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಾದ ಪಿಂಚಣಿಗಳಿಂದ ಸಂಗ್ರಹಗೊಳ್ಳುವ ಹಣವನ್ನು ವೃದ್ದಾಶ್ರಮಗಳು ಹಾಗೂ ವಸತಿ ರಹಿತರ ಅಭಿವೃಧ್ಧಿಗಳಿಗಾಗಿ ಬಳಸಲಾಗುವುದು.

    22. ಎಲ್ಲಾ ಸರ್ಕಾರಿ ಯೋಜನೆಗಳು ಸಂಪೂರ್ಣಗೊಂಡು ಸಂಬಂಧಪಟ್ಟ ಅಧಿಕಾರಿಗಳ ಪರೀಕ್ಷೆ-ಅನುಮತಿ ನಂತರ ಸಾರ್ವಜನಿಕರ ಬಳಕೆಗೆ ನೇರವಾಗಿ ತೆರೆದಿಡಲಾಗುವುದು, ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು/ ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ.

    23. ಕರ್ನಾಟಕ ಶಾಸಕಾಂಗ ವೇತನಗಳು: “ಪಿಂಚಣಿ ಮತ್ತು ಭತ್ಯೆ ಆಕ್ಟ್ 1952” ಅನ್ನು ಸರಳಗೊಳಿಸುವಂತೆ ಕಾನೂನು ತಿದ್ದುಪಡಿ ಮಾಡಲಾಗುವುದು.

    24. ಈ ಮೇಲ್ಕಂಡ ಅಂಶಗಳನ್ನು ಜಾರಿಗೆ ತರಲು ಬೇಕಾಗುವಂತಹ ಅವಶ್ಯಕ ಕಾನೂನು-ತಿದ್ದುಪಡಿಗಳನ್ನು ಮಾಡಲಾಗುವುದು.

    ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಪಕ್ಷದ ಅಂತಿಮ ಹಾಗೂ ಅಧಿಕೃತ ಪ್ರಣಾಳಿಕೆಯ ಪೂರ್ಣ ಭಾಗವನ್ನು ಬಿಡುಗಡೆಗೊಳಿಸುವುದಾಗಿ ಉಪೇಂದ್ರ ತಿಳಿಸಿದ್ದಾರೆ.

  • ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಉಡುಪಿ: ಭಿನ್ನ ಕೋಮಿನ ಆರು ಯುವಕ-ಯುವತಿಯರಿಂದ ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಪೋಷಕರೇ ಯುವಕರಿಗೆ ಏಟು ನೀಡಿದ ಘಟನೆ ಉಡುಪಿಯ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ.

    ಬೀಚ್ ನಲ್ಲಿ ಬರ್ತ್ ಡೇ ಪಾರ್ಟಿ ನೆಪದಲ್ಲಿ ಅನುಚಿತ ವರ್ತನೆ ತೋರಿದ ಯುವಕ-ಯುವತಿಯರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿ ಮತ್ತು ಶೃಂಗೇರಿಯ ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದು, ಪೋಷಕರೇ ಏಟು ನೀಡಿದ್ದಾರೆ.

    ಈ ನಡುವೆ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮೂವರು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಮುಚ್ಚಳಿಕೆ ಬರೆಸಿ ಪೋಷಕರ ಜೊತೆ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ. ಇದೇ ವೇಳೆ ಬೀಚ್ ನಲ್ಲಿ ಅನುಚಿತ ವರ್ತನೆಗೆ ಅವಕಾಶ ಕೊಡಬೇಡಿ ಎಂದು ಸ್ಥಳೀಯರು ಒತ್ತಾಯಿಸಿದ್ರು.

  • ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ಹುಬ್ಬಳ್ಳಿ: ನಟ ಉಪೇಂದ್ರ ತಮ್ಮ `ಪ್ರಜಾಕೀಯ’ (ಕೆಪಿಜೆಪಿ) ಪಕ್ಷದ ಅಧಿಕೃತ ಚಿಹ್ನೆ “ಆಟೋ ರಿಕ್ಷಾ” ಎಂದು ಘೋಷಣೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಟೋ ರಿಕ್ಷಾ ಪಕ್ಷದ ಚಿಹ್ನೆಯಾಗಿ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ. ಕನ್ನಡ ಅಭಿಮಾನಿಗಳ ನೆಚ್ಚಿನ ನಟ ಶಂಕರ್ ನಾಗ್ ಸರ್ ಅವರಿಗೆ ಇದನ್ನು ಅರ್ಪಣೆ ಮಾಡುತ್ತೇನೆ. ಶಂಕರ್ ನಾಗ್ ಅವರು ಹಲವು ಕನಸುಗಳನ್ನು ಹೊಂದಿದ್ದರು. ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ಭಾರತಕ್ಕೆ ಮೆಟ್ರೋ ರೈಲು, ಬಡವರಿಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವಂತಹ ಹಲವು ಯೊಜನೆಗಳನ್ನು ಹೊಂದಿದ್ದರು. ಅವರ ಆಟೋ ರಾಜ ಸಿನಿಮಾ ಮೂಲಕ ಎಲ್ಲರಿಗೂ ಪ್ರೇರಣೆ, ಅವರ ಚಿಂತನೆಗಳಿಂದ ಸ್ಫೂರ್ತಿ ಪಡೆದು ನಾನು ಖಾಕಿ ಬಟ್ಟೆ ಧರಿಸಿ, ಪಕ್ಷ ಸ್ಥಾಪನೆ ಮಾಡಿದೆ ಎಂದು ಹೇಳಿದರು.

    ಇನ್ನು ಪಕ್ಷದ ಚಿಹ್ನೆಯ ಕುರಿತು ವಿವರಣೆ ನೀಡಿದ ಅವರು, ಆಟೋ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ನಮಗೇ ನಾಯಕರು ಬೇಡ, ಕಾರ್ಮಿಕರು ಬೇಕು ಎಂಬ ಹಿನ್ನೆಲೆಯಲ್ಲಿ ಖಾಕಿ ಧರಿಸಿ ಕೆಪಿಜಿಪಿ ಪಕ್ಷ ಸಂಘಟನೆ ಮಾಡಿದ್ದೇವೆ. ಆಟೋ ಎಂಬ ಪದ ಮಿಷನ್, ಆಟೋಮೆಟಿಕ್ ಆಂದರೆ ಸ್ವಯಂ ಚಾಲಿತವಾದದ್ದು ಎಂಬ ಅರ್ಥ ಹೊಂದಿದೆ. ಸರ್ಕಾರವು ಹಾಗೆಯೇ ಕಾರ್ಯ ನಿರ್ವಹಿಸಬೇಕು. ಒಂದು ದೊಡ್ಡ ಕಾಪೋರೇಟ್ ಸಂಸ್ಥೆ ಹೇಗೆ ಭ್ರಷ್ಟಚಾರ ಮುಕ್ತವಾಗಿ ನಡೆಯುತ್ತದೆ. ಅಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕೋಟ್ಯಾಂತರ ಹಣ, ಬಜೆಟ್ ಹೊಂದಿದ್ದರೂ ಸರ್ಕಾರದಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮಾಡುವ ನಾಯಕರು ಬೇಡ. ಜನರ ಸಂಪರ್ಕದಲ್ಲಿರುವ ಸೇವಕರು ಬೇಕಾಗಿದ್ದಾರೆ. ಪ್ರಜಾಕೀಯದ ಮೂಲಕ ಆಡಳಿತದಲ್ಲಿ ಪರದರ್ಶಕತೆ ತರುವುದು ನಮ್ಮ ಉದ್ದೇಶವಾಗಿದೆ. ಆದೇ ರೀತಿ ಸರ್ಕಾರವು ಭ್ರಷ್ಟಚಾರ ಮುಕ್ತವಾಗಿ ನಡೆಯಬೇಕು ಎಂದರು.

    ರಾಜಕೀಯದಲ್ಲಿ ಹಣ, ಜಾತಿ, ಜನರ ಮನೋಭಾವನೆ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಬದಲಾಗಬೇಕಿದೆ. ಅದರಿಂದಲೇ ಪ್ರಜಾಕೀಯ ಎಂಬ ವೇದಿಕೆ ಸೃಷ್ಟಿಯಾಗಿದೆ. ಪ್ರತಿಯೊಬ್ಬರಲ್ಲೂ ಹಲವಾರು ಯೋಜನೆ, ಚಿಂತನೆಗಳು ಇರುತ್ತವೆ. ಅವುಗಳನ್ನು ನಮಗೆ ತಿಳಿಸಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

    ಚುನಾವಣೆಯಲ್ಲಿ ವಿಷಯಾಧಾರಿತವಾದ ಅಂಶಗಳ ಮೇಲೆ ಚರ್ಚೆ ನಡೆದು, ಅವುಗಳ ಮೇಲೆ ಮತದಾನ ಮಾಡುವ ನಿರ್ಣಯ ಮಾಡಬೇಕಿದೆ. ತಂತ್ರಜ್ಞಾನವನ್ನು ಬಳಸಿ ಪ್ರತಿಯೊಂದು ಕಾರ್ಯವನ್ನ ಪರದರ್ಶಕವಾಗಿ ಮಾಡಬಹುದು. ಪ್ರತಿ ಸರ್ಕಾರಿ ಅಧಿಕಾರಿಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಸಮಸ್ಯೆಗಳ ಕುರಿತು ಚರ್ಚೆ ಮಾಡುವ ಬದಲು ಅವುಗಳಿಗೆ ಪರಿಹಾರ ಹುಡುಕುವ ಕಾರ್ಯ ನಡೆಯಬೇಕಿದೆ. ಪಕ್ಷ ಪ್ರಣಾಳಿಕೆಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅವುಗಳ ಕುರಿತು ವಿಸ್ತಾರ ಚರ್ಚೆ ಮಾಡಲಾಗುತ್ತದೆ. ನಾನು ಸಾಮಾನ್ಯ ಪ್ರಜೆಯಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

     

  • 80ರ ದಶಕದ ಸೌಥ್ ಸ್ಟಾರ್ ಗಳ Get-Together: ಪಾರ್ಟಿಗೆ ಷರತ್ತು ಏನಿತ್ತು ಗೊತ್ತಾ?

    80ರ ದಶಕದ ಸೌಥ್ ಸ್ಟಾರ್ ಗಳ Get-Together: ಪಾರ್ಟಿಗೆ ಷರತ್ತು ಏನಿತ್ತು ಗೊತ್ತಾ?

    ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ 80ರ ದಶಕದ ಕಲಾವಿದರು ಒಟ್ಟಿಗೆ ಸೇರಿ ಗೆಟ್-ಟು-ಗೆದರ್ ಆಚರಿಸಿದ್ದಾರೆ. ಎರಡು ದಿನಗಳ ಕಾಲ ಚೆನ್ನೈನ ರೆಸಾರ್ಟ್ ಒಂದರಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ 30ಕ್ಕೂ ಹೆಚ್ಚಿನ ಕಲಾವಿದರು ಕುಣಿದು ಸಂಭ್ರಮಿಸಿದ್ದಾರೆ.

    2009ರಲ್ಲಿ ನಟಿ ಸುಹಾಸಿನಿ ಈ ವಿಭಿನ್ನವಾದ ಕಾನ್ಸೆಪ್ಟ್ ಶುರು ಮಾಡಿದ್ದರು. ಇದು ಪ್ರತಿ ವರ್ಷ ನಡೆಯುತ್ತಿದ್ದು, ಎಲ್ಲಾ ತಾರೆಯರು ಗೆಟ್-ಟು-ಗೆದರ್ ಅಲ್ಲಿ ತಪ್ಪದೇ ಭಾಗವಹಿಸುತ್ತಾರೆ. ನವೆಂಬರ್ 17ರಂದು 8ನೇ ವರ್ಷದ ಗೆಟ್-ಟು-ಗೆದರ್ ನಡೆದಿದ್ದು, ಕಲಾವಿದರು ಸನ್ ಗ್ಲಾಸ್, ಹವಯಿಯಾನ್ ಶರ್ಟ್‍ಗಳನ್ನು ಧರಿಸಿ ಬಂದಿದ್ದರು.

    ಪಾರ್ಟಿಯ ಜಾಗವನ್ನು ನೇರಳೆ ಆರ್ಕಿಡ್ ಗಳು, ಬಲೂನ್, ಮುಖವಾಡಗಳು, ಕಾನ್ಫೆಟ್ಟಿ, ಕಲೆ ಮತ್ತು ಕಲಾಕೃತಿಗಳು ಎಲ್ಲಾ ನೀಲಿ ಬಣ್ಣಗಳಿಂದ ತಯಾರಿಸಲಾಗಿತ್ತು. ಕಲಾವಿದರು ಎರಡೂ ದಿನಗಳ ಕಾಲ ಜೊತೆಯಾಗಿದ್ದು ಸಂಭ್ರಮಿಸಿದ್ದಾರೆ.

    ಹಿರಿಯ ನಟರಾದ ಚಿರಂಜೀವಿ, ವೆಂಕಟೇಶ್, ಶರತ್ ಕುಮಾರ್, ಜಾಕಿ ಶ್ರಾಫ್, ನರೇಶ್, ಭಾನು ಚುನ್ದರ್, ಸುರೇಶ್, ಭಾಗ್ಯರಾಜ್ ಜೊತೆ ನಟಿಯರಾದ ರಮ್ಯಕೃಷ್ಣ, ಸುಮಲತಾ, ರಾಧಿಕಾ, ರೇವತಿ, ನದೀಯಾ, ಸುಹಾಸಿನಿ, ಜಯಸುಧಾ, ಖುಷ್ಬೂ ಸೇರಿ ಮತ್ತಷ್ಟು ನಟಿಯರು ಕಾಣಿಸಿಕೊಂಡಿದ್ದಾರೆ.

    ರಾಜಕುಮಾರ್ ಸೆತುಪತಿ ಜೊತೆ ಸೇರಿ ಸುಹಾಸಿನಿ, ಪೂರ್ಣಿಮಾ ಭಾಗ್ಯರಾಜ್ ಹಾಗೂ ಖುಷ್ಬೂ ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಅದ್ಧೂರಿಯಾಗಿ ನಡೆದ ಪಾರ್ಟಿಯಲ್ಲಿ ಎಲ್ಲಾ ತಾರೆಯರೂ ನೀಲಿ ಬಣ್ಣದ ಉಡಪುಗಳನ್ನು ಧರಿಸಿ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಪುರಷರ ಫ್ಯಾಶನ್ ಶೋ ಕೂಡ ನಡೆದಿದ್ದು, ನಟ ಚಿರಂಜೀವಿ ಗೆದ್ದಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ಕಾರ್ಯಕ್ರಮದಲ್ಲಿ ರಜನೀಕಾಂತ್, ಅಂಬರೀಶ್, ರಮೇಶ್ ಅರವಿಂದ್, ಪ್ರಭು, ಮೋಹನ್ ಲಾಲ್ ಭಾಗವಹಿಸರಲಿಲ್ಲ.

    ಪಾರ್ಟಿಗೆ ಷರತ್ತು ಏನಿತ್ತು? ಇದು 80ರ ದಶಕದ ಕಲಾವಿದರಿಗೆ ಇರುವ ವಿಶೇಷ ಕಾರ್ಯಕ್ರಮವಾಗಿರುವ ಕಾರಣ, ಬೇರೆ ಯಾರನ್ನು ಬರಲು ಬಿಡುವುದಿಲ್ಲ. ಚಿತ್ರರಂಗದವರು ಆಗಿದ್ದರೆ ಮಾತ್ರ ನಟ ಅಥವಾ ಅವರ ಪತ್ನಿಯರನ್ನು ಬರಲು ಅವಕಾಶವಿದೆ. ಕಲಾವಿದರ ಮನೆಯರನ್ನು ಕರೆತರಲು ಅವಕಾಶವಿಲ್ಲ. ದಕ್ಷಿಣ ಭಾರತದ ಕಲಾವಿದರು ಮಾತ್ರ ಈ ರೀತಿಯ ಪಾರ್ಟಿ ಆಯೋಜಿಸುತ್ತಿದ್ದು, ನಾವೆಲ್ಲ ವಾಟ್ಸಪ್ ನಲ್ಲಿ ಗ್ರೂಪ್ ಮಾಡಿಕೊಂಡು ಪರಸ್ಪರ ಸಂಪರ್ಕದಲ್ಲಿರುತ್ತೇವೆ ಎಂದು ನಟಿ ಸುಹಾಸಿನಿ ತಿಳಿಸಿದ್ದಾರೆ.

    https://twitter.com/SMKSMART/status/932977410957438976

    \

  • ಲೋಕಲ್ ಚಾನೆಲ್ ಮಾಲೀಕನಿಂದ ನಡು ರಸ್ತೆಯಲ್ಲೇ ಪಾರ್ಟಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್!

    ಲೋಕಲ್ ಚಾನೆಲ್ ಮಾಲೀಕನಿಂದ ನಡು ರಸ್ತೆಯಲ್ಲೇ ಪಾರ್ಟಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್!

    ಬೆಂಗಳೂರು: ನಡು ರಸ್ತೆಯಲ್ಲಿಯೇ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದ ಲೋಕಲ್ ಚಾನೆಲ್ ಮಾಲೀಕನೊಬ್ಬನನ್ನು ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಅವಾಜ್ ಹಾಕಿರುವ ಘಟನೆ ನಗರದ ಅಂದ್ರಹಳ್ಳಿಯಲ್ಲಿ ನಡೆದಿದೆ.

    ಲೋಕಲ್ ಚಾನೆಲ್ ಮಾಲೀಕ ಮುರಳಿ ಎಂಬಾತ ರಸ್ತೆಯಲ್ಲಿ ಪಾರ್ಟಿ ಮಾಡಿರುವುದನ್ನು ಪೊಲೀಸರು ಪ್ರಶ್ನೇ ಮಾಡಿದ್ದಾರೆ. ಅದಕ್ಕೆ ನಾನು ಮೀಡಿಯಾದವನು ಎಲ್ಲಿ ಬೇಕಾದರೂ ಪಾರ್ಟಿ ಮಾಡುತ್ತೇನೆ. ಅದನ್ನ ಕೇಳೋಕೆ ನಿವ್ಯಾರು ಅಂತ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.

    ಅಂದ್ರಹಳ್ಳಿಯ ಮಧ್ಯರಾತ್ರಿ ನಡು ಬೀದಿಯಲ್ಲಿ ಮುರಳಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದನು. ಆದರೆ ಪಾರ್ಟಿಯಲ್ಲಿ ಕೂಗಾಟ ಜೋರಾಗಿದ್ದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಆದ್ದರಿಂದ ಸ್ಥಳೀಯರು ಬ್ಯಾಡರಹಳ್ಳಿ ಪೆÇಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಬೀಟ್ ಪಿಸಿಗಳು ಇದನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಮುರಳಿ, ನಾನು ಮನಸ್ಸು ಮಾಡಿದರೆ ನಿಮ್ಮ ಜಾಗವನ್ನು ಖಾಲಿ ಮಾಡಿಸುತ್ತೇನೆ. ನನ್ನ ಎದುರು ಹಾಕ್ಕೊಂಡ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಬೆದರಿಕೆ ಹಾಕಿ ಧಮ್ಕಿ ಹಾಕಿದ್ದಾನೆ.

    ಮುರಳಿ ರಾದ್ಧಾಂತ ಜೋರಾಗಿದ್ದರೀಂದ ಸ್ಥಳಕ್ಕೆ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ಮತ್ತು ಪಿಎಸ್‍ಐ ಮಂಜುನಾಥ್ ಭೇಟಿ ನೀಡಿ ಆರೋಪಿ ಮುರುಳಿ ಮತ್ತು ಜೊತೆಗಿದ್ದ ಅಭಿಷೇಕ್ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ.

  • ಕುಡಿದು ಪಾರ್ಟಿ ಮಾಡಿ, ಮಹಿಳೆಯನ್ನ ಟೆರೆಸ್ ನಿಂದ ತಳ್ಳಲೆತ್ನಿಸಿದ ವಿದ್ಯಾರ್ಥಿಗಳ ಬಂಧನ

    ಕುಡಿದು ಪಾರ್ಟಿ ಮಾಡಿ, ಮಹಿಳೆಯನ್ನ ಟೆರೆಸ್ ನಿಂದ ತಳ್ಳಲೆತ್ನಿಸಿದ ವಿದ್ಯಾರ್ಥಿಗಳ ಬಂಧನ

    ಬೆಂಗಳೂರು: ವಿದ್ಯಾರ್ಥಿಗಳು ಅಂತಾ ಬಾಡಿಗೆ ಕೊಟ್ರೆ ಮನೆಯನ್ನೇ ಬಾರ್ ಮಾಡ್ಕೊಂಡ ಯುವಕರು ತಾವಲ್ಲದೇ ಇತರರನ್ನ ಕರೆಯಿಸಿ ರಾತ್ರಿಯೆಲ್ಲಾ ಫುಲ್ ಪಾರ್ಟಿ ಮಾಡಿದ್ದಲ್ಲದೆ ಮಹಿಳೆಯನ್ನು ಟೆರೆಸ್ ಮೇಲಿನಿಂದ ಕೆಳಗೆ ತಳ್ಳಲು ಯತ್ನಿಸಿದ್ದು, ಸದ್ಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮೈಕೋಲೇಔಟ್ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಶ್ನಿಸಲು ಹೋಗಿದ್ದ ಸ್ಥಳಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಸ್ಥಳೀಯ ಮಹಿಳೆಯನ್ನ ಟೆರೆಸ್ ಮೇಲಿನಿಂದ ಕೆಳಗೆ ತಳ್ಳಲು ಯತ್ನಿಸಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ಸ್ಥಳೀಯರು ಗೃಹಬಂಧನ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://youtu.be/et0yEPmdIkI

  • ಪಾರ್ಟಿ ವೇಳೆ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಂದೇ ಬಿಟ್ಟ

    ಪಾರ್ಟಿ ವೇಳೆ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಂದೇ ಬಿಟ್ಟ

    ಬೆಂಗಳೂರು: ಪಾರ್ಟಿ ಮಾಡುವಾಗ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಅನೇಕಲ್ ತಾಲೂಕಿನ ತಟ್ನಹಳ್ಳಿಯ ಕೆರೆಯ ಬಳಿ ಬುಧವಾರ ರಾತ್ರಿ ನಡೆದಿದೆ.

    ಮನೋಜ್ ಕೊಲೆಯಾದ ಯುವಕ

    ಅನೇಕಲ್ ತಾಲೂಕಿನ ಅವಡದೆನಹಳ್ಳಿಯ 24 ವರ್ಷದ ಮನೋಜ್ ಕೊಲೆಯಾದ ಯುವಕ. ಯಶವಂತ್ ಎಂಬಾತನ ಚಾಕು ಇರಿದ ಆರೋಪಿ. ಯಶವಂತ್ ಮತ್ತು ಮನೋಜ್ ನಡುವೆ ಈ ಹಿಂದೆಯೂ ಗಲಾಟೆಗಳು ನಡೆದಿದ್ದವು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರೂ ಜಗಳ ಮಾಡಿಕೊಂಡಿದ್ದು ಪರಸ್ಪರ ಒಬ್ಬರಿಗೊಬ್ಬರು ಚಾಕು ಇರಿದುಕೊಂಡಿದ್ದಾರೆ.

    ಯಶವಂತ್

    ಕೆರೆ ಬಳಿ ನಡೆದಿದ್ದೇನು?: ಯಶಂವಂತ್ ತನ್ನ ಸ್ನೇಹಿತರೊಂದಿಗೆ ಕೆರೆಯಲ್ಲಿ ಪಾರ್ಟಿ ಮಾಡುವ ವೇಳೆ ಮನೋಜ್ ಹಾಗೂ ಆತನ ಕೆಲ ಸ್ನೇಹಿತರು ಕೆರೆಗೆ ಬಂದು ಕಿರಿಕ್ ಮಾಡಿದ್ದಾರೆ. ಈ ವೇಳೆ ಇಬ್ಬರ ಜಗಳ ತಾರಕಕ್ಕೇರಿದ್ದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೂ ಗಲಾಟೆಯಲ್ಲಿ ಗಾಯಗೊಂಡ ಯಶವಂತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಾವನ್ನಪ್ಪಿರುವ ಮನೋಜ್ ಈ ಹಿಂದೆ ಯಶವಂತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದನು. ಇತ್ತೀಚಿಗಷ್ಟೇ ಜಾಮೀನು ಪಡೆದಕೊಂಡು ಜೈಲಿನಿಂದ ಹೊರ ಬಂದಿದ್ದನು. ಮನೋಜ್ ಆನೇಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

    ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ನವದೆಹಲಿ: ನೀರಿಗೆ ಬಿದ್ದ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಐಎಎಸ್ ಅಧಿಕಾರಿಯೊಬ್ಬರು ನೀರು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಬೆರ್ ಸರೈನಲ್ಲಿರೋ ಫಾರಿನ್ ಸರ್ವಿಸ್ ಇನ್ ಸ್ಟಿಟ್ಯೂಟ್‍ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಂಗಳವಾರದಂದು ಈ ಅವಘಡ ಸಂಭವಿಸಿದ್ದು, ಮೃತ ಐಎಎಸ್ ಅಧಿಕಾರಿಯನ್ನು ಆಶಿಶ್ ದಹಿಯಾ ಎಂಬುವುದಾಗಿ ಗುರುತಿಸಲಾಗಿದೆ. ಇವರು ಹರಿಯಾಣದ ಸೊನಿಪತ್ ನಿವಾಸಿಯಾಗಿದ್ದಾರೆ.

    ಆಶಿಶ್ ತನ್ನ ಇಂಡಿಯನ್ ಫಾರಿನ್ ಅಂಡ್ ರೆವೆನ್ಯೂ ಸರ್ವೀಸ್‍ನ ಗೆಳೆಯರೊಂದಿಗೆ ಪೂಲ್ ಪಾರ್ಟಿಗೆ ಹೋಗಿದ್ರು. ಈ ವೇಳೆ ಕ್ಲಬ್ ನಲ್ಲಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ನಿರ್ಧರಿಸಿದ್ದರು. ಪಾರ್ಟಿಗೆ ಬಂದವರು ಮದ್ಯಪಾನ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಈ ವೇಳೆ ಮಹಿಳಾ ಸಹೋದ್ಯೋಗಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲೆಂದು ಆಶಿಶ್ ಸೇರಿದಂತೆ ಇತರೆ ಅಧಿಕಾರಿಗಳು ನೀರಿಗೆ ಹಾರಿದ್ದಾರೆ. ನಂತರ ಮಹಿಳೆಯನ್ನ ರಕ್ಷಣೆ ಮಾಡಿ ಹೊರಗೆಳೆದಿದ್ದಾರೆ. ಆದ್ರೆ ಈ ವೇಳೆ ಆಶಿಶ್ ಕಾಣಿಸುತ್ತಿರಲಿಲ್ಲ. ನಂತರ ನೋಡಿದಾಗ ಆಶಿಶ್ ನೀರಿನಲ್ಲಿ ತೇಲುತ್ತಿದ್ದರು.

    ಕೂಡಲೇ ಸ್ವಿಮ್ಮಿಂಗ್ ಪೂಲ್‍ನಿಂದ ಆಶಿಶ್‍ರನ್ನು ಮೇಲಕ್ಕೆತ್ತಿ ಸ್ಥಳೀಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಅದಾಗಲೇ ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

    ಸದ್ಯ ಮೃತ ಆಶೀಶ್ ಕುಟುಂಬಸ್ಥರು ದೆಹಲಿ ತಲುಪಿದ್ದಾರೆ.