Tag: party

  • ಪಾರ್ಟಿ ಮುಗಿಸಿ ಮಲಗಿದ್ದ ಸ್ನೇಹಿತನ ಪತ್ನಿಯನ್ನು ರೇಪ್‍ಗೈದ ಟೆಕ್ಕಿ

    ಪಾರ್ಟಿ ಮುಗಿಸಿ ಮಲಗಿದ್ದ ಸ್ನೇಹಿತನ ಪತ್ನಿಯನ್ನು ರೇಪ್‍ಗೈದ ಟೆಕ್ಕಿ

    ಬೆಂಗಳೂರು: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟೆಕ್ಕಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

    ನೀಲಬ್ ನಯನ್(26) ಬಂಧಿತ ಆರೋಪಿ. ಸಂತ್ರಸ್ತ ಮಹಿಳೆ ಭಾನುವಾರ ಮಧ್ಯರಾತ್ರಿ ಬೆಳ್ಳಂದೂರಿನ ಕಸವನಹಳ್ಳಿಯಲ್ಲಿ ತನ್ನ ಪತಿಯ ಹುಟ್ಟುಹಬ್ಬ ಆಚರಿಸಿದ್ದಳು. ಈ ಬರ್ತ್ ಡೇ ಪಾರ್ಟಿಯಲ್ಲಿ ಎಚ್‍ಎಸ್‍ಆರ್ ಲೇಔಟ್ ನಿವಾಸಿಯಾಗಿರುವ ಆರೋಪಿ ನಯನ್ ಕೂಡ ಆಗಮಿಸಿದ್ದನು.

    ಭಾನುವಾರ ಮಹಿಳೆ ತನ್ನ ಪತಿಯ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದಳು. ನಯನ್ ಸೇರಿ ಸಂತ್ರಸ್ತೆ ಪತಿಯ ನಾಲ್ವರು ಸ್ನೇಹಿತರು ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ ಗೆ ಆಗಮಿಸಿ ಪಾರ್ಟಿ ಮಾಡಿದ್ದರು. ಬಳಿಕ ಎಲ್ಲರೂ ಹುಟ್ಟುಹಬ್ಬದ ಪಾರ್ಟಿಯನ್ನು ಮುಂದುವರಿಸಲು ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಿದ್ದರು.

    ನಮ್ಮ ಸ್ನೇಹಿತನ ಮನೆಗೆ ಹೋಗುವ ಮೊದಲು ಕ್ರೀಡಾಂಗಣದಲ್ಲಿ ನಾವೆಲ್ಲಾ ಸೇರಿ ವಿವಿಧ ಆಟಗಳನ್ನು ಆಡಿದ್ದರಿಂದ ನಾನು ತುಂಬಾ ಆಯಾಸಗೊಂಡಿದ್ದೆ. ನನ್ನ ಪತಿ ಹಾಗೂ ಅವರ ಸ್ನೇಹಿತರು ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ನಾನು ರೂಮಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದೆ. ರೂಮಿನಲ್ಲಿ ಲೈಟ್ ಡಿಮ್ ಆಗಿತ್ತು. ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬ ನನ್ನ ಉಡುಪು ತೆಗೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಅದು ನನ್ನ ಪತಿ ಅಲ್ಲ ಎಂದು ತಿಳಿದ ತಕ್ಷಣ ನಾನು ಜೋರಾಗಿ ಕಿರುಚಲು ಶುರು ಮಾಡಿದೆ. ಆಗ ಆರೋಪಿ ನನ್ನ ನಯನ್ ತನ್ನ ಕೈಯಿಂದ ನನ್ನ ಬಾಯಿ ಮುಚ್ಚಿ ಹಲ್ಲೆ ಮಾಡಿದ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

    ನಯನ್ ನನ್ನ ಬಾಯನ್ನು ಮುಚ್ಚಿದಾಗ ನಾನು ಆತನನ್ನು ಚಿವುಟಿ ಆತನ ಹಿಡಿತದಿಂದ ತಪ್ಪಿಸಿಕೊಂಡು ಜೋರಾಗಿ ಕಿರುಚಲು ಶುರು ಮಾಡಿದೆ. ನಾನು ಕಿರುಚುವುದನ್ನು ಕೇಳಿದ ನನ್ನ ಪತಿ ಹಾಗೂ ಅವರ ಸ್ನೇಹಿತರು ರೂಮಿನತ್ತ ಓಡಿ ಬಂದು ಬಾಗಿಲು ತಟ್ಟುತ್ತಿದ್ದರು. ರೂಮಿನ ಬಳಿ ಎಲ್ಲರೂ ಬರುತ್ತಿದ್ದಂತೆ ನಯನ್ ಬಾತ್‍ರೂಮಿಗೆ ಓಡಿ ಹೋಗಿದ್ದ. ಆಗ ನಾನು ಬಾಗಿಲು ತೆಗೆದೆ. ಏನಾಗಿತು ಎಂದು ಎಲ್ಲರೂ ತಿಳಿದುಕೊಳ್ಳುವಷ್ಟರಲ್ಲಿ ನಯನ್ ಅಲ್ಲಿಂದ ಪರಾರಿಯಾದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

    ಪ್ರಾಥಮಿಕ ತನಿಖೆಯಲ್ಲಿ ಬಿಹಾರ್ ಮೂಲದವನಾಗಿರುವ ನಯನ್ ಬಾಲ್ಕನಿಯಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದನು. ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಕೆಳಗಡೆ ಬಂದಾಗ ರೂಮಿನಲ್ಲಿ ಸಂತ್ರಸ್ತೆ ಮಲಗಿರುವುದನ್ನು ನೋಡಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹಾಗೂ ಆಕೆಯ ಪತಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಬೆಳ್ಳಂದೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಿಎ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತಿಟ್ಟ

    ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಿಎ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತಿಟ್ಟ

    ಮುಂಬೈ: ಪಾರ್ಟಿ ಮುಗಿಸಿ ಕ್ಯಾಬ್‍ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಸಿಎ (ಚಾರ್ಟರ್ಡ್ ಅಕೌಂಟೆಂಟ್) ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತು ಕೊಟ್ಟ ಯುವಕನನ್ನು ಮಹಾರಾಷ್ಟ್ರದ ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ನವೆಂಬರ್ 9ರಂದು ನಡೆದಿದ್ದು, ಪೊಲೀಸರು ಆರೋಪಿಗಳನ್ನು ಶನಿವಾರ ಮುಂಬೈನ ಲೋಖಂಡ್ವಾಲಾದಲ್ಲಿ ಬಂಧಿಸಿದ್ದಾರೆ. ಪಾರ್ಟಿ ಮುಗಿಸಿ ಕ್ಯಾಬ್‍ನಲ್ಲಿ ಮನೆಗೆ ಹೋಗುವ ವೇಳೆ ಯುವಕ ಬಲವಂತವಾಗಿ ಮುತ್ತು ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವರದಿಗಳ ಪ್ರಕಾರ, ಆರೋಪಿ ಅಂಧೇರಿಯ ವೀರಾ ದೇಸಾಯಿ ರೋಡಿನಲ್ಲಿರುವ ಬಾರಿನಲ್ಲಿ ನಡೆದ ಪಾರ್ಟಿಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದನು. ವಿದ್ಯಾರ್ಥಿನಿ ತನ್ನ ಸ್ನೇಹಿತರ ಜೊತೆಯಲ್ಲಿ ಆ ಪಾರ್ಟಿಗೆ ಆಗಮಿಸಿದ್ದಳು.

    ಮಧ್ಯರಾತ್ರಿ ಸುಮಾರು 1.30ಗೆ ಪಾರ್ಟಿ ಮುಗಿದಿದ್ದು, ವಿದ್ಯಾರ್ಥಿನಿ ತನ್ನ ಸ್ನೇಹಿತರ ಜೊತೆಗೆ ಮನೆಗೆ ಹೋಗಲು ನಿರ್ಧರಿಸಿದ್ದಳು. ಈ ವೇಳೆ ಆಕೆಯ ಮೊಬೈಲ್ ಕೆಲಸ ಮಾಡದ ಕಾರಣ ಆರೋಪಿಯ ಮೊಬೈಲಿನಲ್ಲಿಯೇ ಕ್ಯಾಬ್ ಬುಕ್ ಮಾಡಿದ್ದರು. ಆರೋಪಿ ಯುವತಿಯರಿಗೆ ತಮ್ಮ ಮನೆವರೆಗೂ ಬಿಡುವುದಾಗಿ ಹೇಳಿ ಕಾರಿನ ಮುಂಭಾಗದಲ್ಲಿರುವ ಸೀಟಿನಲ್ಲಿ ಕುಳಿತಿದ್ದನು. ಆದರೆ ವಿದ್ಯಾರ್ಥಿನಿ ತನ್ನ ಜೊತೆ ಬರದಂತೆ ಆರೋಪಿಗೆ ಹೇಳುತ್ತಾಳೆ. ಆದರೆ ಆರೋಪಿ ಆಕೆಯ ಮಾತನ್ನು ನಿರ್ಲಕ್ಷ್ಯಿಸಿದ್ದನು.

    ವಿದ್ಯಾರ್ಥಿನಿಯ ಸ್ನೇಹಿತೆ ನಿದ್ದೆಗೆ ಜಾರಿದ್ದನ್ನು ನೋಡಿದ ಆರೋಪಿ ಹಿಂಬದಿ ಸೀಟಿನಲ್ಲಿ ಬಂದು ಕೂರುತ್ತಾನೆ. ಈ ವೇಳೆ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ. ಆರೋಪಿಯ ವರ್ತನೆಯಿಂದ ಭಯಗೊಂಡ ವಿದ್ಯಾರ್ಥಿನಿ ಕ್ಯಾಬ್ ನಿಲ್ಲಿಸಲು ಹೇಳಿ ಅಲ್ಲಿಂದ ಆಟೋದಲ್ಲಿ ತನ್ನ ಮನೆಗೆ ತಲುಪಿದ್ದಾಳೆ. ಈ ಘಟನೆಯಿಂದ ವಿದ್ಯಾರ್ಥಿನಿ ಗಾಬರಿಗೊಂಡಿದ್ದು, ಆ ಆಘಾತದಿಂದ ಆಕೆಗೆ ಹೊರಬರಲು ಆಗಲಿಲ್ಲ. ಬಳಿಕ ನ. 23ರಂದು ಅಂಬೋಲಿ ಪೊಲೀಸ್ ಠಾಣೆಗೆ ಹೋಗಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಳು.

    ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354(ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

  • ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯ ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್  ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾರ್ಟಿ ಮಾಡಿದ್ದಾರೆ.

    ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮುಜಾಹಿದ್ದೀನ್ ಅಕ್ಟೋಬರ್ 13ರಂದು ಜಾಮೀನಿನ ಆಧಾರದ ಮೇಲೆ ಹೊರ ಬಂದಿದ್ದ. ಅಂದು ರಾತ್ರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಮುಜಾಹಿದ್ದೀನ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಐಎಂಎ ಪ್ರಕರಣದಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮುಜಾಹಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು. ಆದರೆ ಅಕ್ಟೋಬರ್ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನೀಡಿತ್ತು. ಅಕ್ಟೋಬರ್ 13ರಂದು ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನ ಹೊರಗೆ ನಿಂತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದರು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಹಾಸನ: ಸರ್ಕಾರಿ ಪ್ರವಾಸಿ ಮಂದಿರ (ಐಬಿ)ಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಹೊಳೇನರಸೀಪುರ ತಹಶೀಲ್ದಾರ್ ಪರ ಮಾಜಿ ಸಚಿವ ಎಚ್.ಡಿ.ರೇವಣ್ಣ ಬ್ಯಾಟ್ ಬೀಸಿದ್ದಾರೆ.

    ಐಬಿಯಲ್ಲಿ ಅಧಿಕಾರಿಗಳ ಎಣ್ಣೆ ಪಾರ್ಟಿ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಹೊಳೇನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಪ್ರಾಮಾಣಿಕ ವ್ಯಕ್ತಿ. ಅವರು ಮದ್ಯ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಒಟ್ಟಿಗೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಸಂಸದರು ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯ ಬಳಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರೋ ಇಬ್ಬರು ಮದ್ಯ ಸೇವಿಸಿ ಐಬಿಗೆ ನುಗ್ಗಿದ್ದರು. ಅಷ್ಟೇ ಅಲ್ಲದೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದುರುದ್ದೇಶದಿಂದ ಯಾರೋ ಹೀಗೆ ಮಾಡಿದ್ದಾರೆ ಎಂದು ದೂರಿದರು.

    ಮರಳು ಅಕ್ರಮ ಸಾಗಾಣಿಕೆ ಶ್ರೀನಿವಾಸ್ ಅವರು ಅವಕಾಶ ನೀಡಲ್ಲ. ತಾಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಬ್ಲಾಕ್‍ಮೇಲ್ ಮಾಡಲು ಕೆಲವು ಎಣ್ಣೆ ಬಾಟಲಿ ಇಟ್ಟು ವಿಡಿಯೋ ಮಾಡಿದ್ದಾರೆ. ಈ ಸಂಬಂಧ ತನಿಖೆ ಆಗಬೇಕಿದೆ ಎಂದು ಹೊಸ ಬಾಂಬ್ ಸಿಡಿಸಿದರು.

  • ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಹಾಸನ: ಹಾಸನದ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಸೇರಿ ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.

    ಇತ್ತೀಚೆಗೆ ತಮಕೂರಿನ ಕುಣಿಗಲ್‍ನಲ್ಲಿ ಇದೇ ರೀತಿ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಕಾರಿ ಐಬಿಯಲ್ಲಿ ಪಾರ್ಟಿ ಮಾಡಿದ್ದರು. ಈಗ ಇದೇ ರೀತಿಯ ಘಟನೆ ಹಾಸನದಲ್ಲಿ ನಡೆದಿದ್ದು, ಮಹಿಳಾ ತಹಶೀಲ್ದಾರ್ ಗಳು ಸೇರಿದಂತೆ ಹೊಳೆನರಸೀಪುರ, ಹಾಸನ, ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಹಶೀಲ್ದಾರ್ ಸೇರಿ ಐಬಿಯಲ್ಲಿ ಪಾರ್ಟಿ ಮಾಡಿದ್ದಾರೆ.

    ಶುಕ್ರವಾರ ತಡರಾತ್ರಿ ಈ ಪಾರ್ಟಿ ನಡೆದಿದ್ದು, ಜಿಲ್ಲೆಯ ಆರು ತಾಲೂಕಿನ ತಹಶೀಲ್ದಾರ್ ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇನಕಾಗಾಂಧಿ ಸೇರಿ ಒಟ್ಟು ಏಳು ಜನ ತಹಶೀಲ್ದಾರ್ ಗಳು ಸೇರಿಕೊಂಡು ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.

    ಇದನ್ನು ಬಿಜೆಪಿ ಕಾರ್ಯಕರ್ತ ನಾಗೇಶ್ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ಕಂಡ ತಹಶೀಲ್ದಾರ್ ಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೇಳೆ ವಿಡಿಯೋ ಮಾಡಿದ ನಾಗೇಶ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಡಿಯೋ ಚಿತ್ರೀಕರಣ ಹಿನ್ನೆಲೆಯಲ್ಲಿ ನಾಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

  • ಬೆತ್ತಲೆ ಪಾರ್ಟಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ಬೆತ್ತಲೆ ಪಾರ್ಟಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ಪಣಜಿ: ಉತ್ತರ ಗೋವಾದ ಮೊರ್ಜಿಮ್ ನಲ್ಲಿ ‘ಬೆತ್ತಲೆ ಪಾರ್ಟಿ’ ನಡೆಯುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಪ್ರೈವೇಟ್ ಗೋವಾ ಪಾರ್ಟಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಗೋವಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸರು ಈಗ ಈ ಪಾರ್ಟಿ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    ಈ ಕುರಿತು ಹೆಚ್ಚಿನ ವಿವರ ಪಡೆಯಲು ಪೊಲೀಸರು ತಮ್ಮ ಮಾಹಿತಿ ಜಾಲವನ್ನು ಚುರುಕುಗೊಳಿಸಿದ್ದು, ಪಾರ್ಟಿ ನಡೆಯುವ ಸಾಧ್ಯತೆ ಇರುವ ಕುರಿತು ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ವಿವರವಾದ ವಿಳಾಸ ಅಥವಾ ದಿನಾಂಕವನ್ನು ಪೋಸ್ಟರ್‍ನಲ್ಲಿ ಹಾಕಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    10-15 ವಿದೇಶಿಯರು ಹಾಗೂ 10ಕ್ಕೂ ಹೆಚ್ಚು ಭಾರತೀಯ ಹುಡುಗಿಯರು ಭಾಗವಹಿಸಲಿದ್ದಾರೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಆದರೆ ರಾಜ್ಯದಲ್ಲಿ ಯಾವುದೇ ಬೆತ್ತಲೆ ಪಾರ್ಟಿ ನಡೆಯಲು ನಾವು ಬಿಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಂಟಿನ್ಹೋ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ಕೂಡಲೇ ಮಧ್ಯೆ ಪ್ರವೇಶಿಸಿ ಅಂತಹ ಪಾರ್ಟಿಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

    ಕಲಬುರಗಿ: ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 28 ವರ್ಷದ ಪ್ರಶಾಂತ್ ಕೊಟರಗಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯವರ ಜೊತೆ ಜಗಳಮಾಡಿಕೊಂಡು ಸ್ನೇಹಿತರೊಡೆನೆ ಪಾರ್ಟಿಗೆ ತೆರಳಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

    ಕೌಟುಂಬಿಕ ಕಾರಣದ ಹಿನ್ನಲೆ ಮನೆಯಲ್ಲಿ ಜಗಳ ಮಾಡಿಕೊಂಡ ಪ್ರಶಾಂತ್ ಕೊಟರಗಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಪಾರ್ಟಿ ಮಾಡಲು ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲ ಸೇರಿ ಕಂಠ ಪೂರ್ತಿ ಮದ್ಯಸೇವನೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರು ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಪ್ರಶಾಂತ್ ಕೊಟರಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.

  • ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳ ಎಣ್ಣೆ ಪಾರ್ಟಿ

    ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳ ಎಣ್ಣೆ ಪಾರ್ಟಿ

    -ಗುತ್ತಿಗೆದಾರರಿಂದ 10 ಲಕ್ಷ ಪಡೆದು ಮಸ್ತಿ!

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯ ನಿಷೇಧಿಸಲಾಗಿದೆ. ಆದರೂ ಕೂಡ ಅಧಿಕಾರಿಗಳು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

    ಸರ್ಕಾರಿ ಐಬಿಯಲ್ಲಿ ಮದ್ಯಪಾನ ನಿಷೇಧ ಇದ್ದರೂ ತಡ ರಾತ್ರಿಯವರೆಗೂ ಮದ್ಯ-ಮಾಂಸ ತಿಂದು ಅಧಿಕಾರಿಗಳು ಮೋಜು ಮಸ್ತಿ ಮಾಡಿದ್ದಾರೆ. ಕುಣಿಗಲ್ ಪಿಡಬ್ಲ್ಯೂಡಿ ಎಂಜಿನಿಯರ್ ದಿವಾಕರ್ ವರ್ಗಾವಣೆ ಆಗಿದ್ದಕ್ಕೆ ಐಬಿಯಲ್ಲಿ ಅವರಿಗೆ ಸೆಂಡ್ ಆಫ್ ಪಾರ್ಟಿ ಏರ್ಪಡಿಸಲಾಗಿತ್ತು. ದಿವಾಕರ್ ಅವರು ವರ್ಗಾವಣೆಗೊಳ್ಳುವ ಆತುರದಲ್ಲಿ ಗುತ್ತಿಗೆದಾರರಿಗೆ ಬಾಕಿ ಇದ್ದ ಸುಮಾರು 28 ಕೋಟಿ ರೂ. ಬಿಲ್ ಪಾಸ್ ಮಾಡಿದ್ದಾರೆ. ಈ ಕೆಲಸ ಮಾಡಿಕೊಡಲು ಗುತ್ತಿಗೆದಾರರಿಂದ ಸುಮಾರು 10 ಲಕ್ಷ ರೂ. ವಸೂಲಿ ಮಾಡಲಾಗಿತ್ತು. ಈ ಹಣದಲ್ಲಿಯೇ ಅಧಿಕಾರಿಗಳು ಗುಂಡು-ತುಂಡು ತಿಂದು ಸಖತ್ ಎಂಜಾಯ್ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಈ ಪಾರ್ಟಿಯಲ್ಲಿ ಗುತ್ತಿಗೆದಾರರೂ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ರಾಜಕೀಯ ಮುಖಂಡರು ಕೂಡ ಬಾಡೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ತಡರಾತ್ರಿ 3 ಗಂಟೆವರೆಗೂ ಅಧಿಕಾರಿಗಳು-ಗುತ್ತಿಗೆದಾರರು ಮದ್ಯಾರಾಧನೆ ಮಾಡಿ ಸರ್ಕಾರಿ ಬಂಗಲೆಯನ್ನ ರಾಜಾರೋಷವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ.

  • ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಅಶ್ವಾಸನೆ ನೀಡಿದ್ದಾರೆ: ಶ್ರೀರಾಮಲು

    ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಅಶ್ವಾಸನೆ ನೀಡಿದ್ದಾರೆ: ಶ್ರೀರಾಮಲು

    ಬಳ್ಳಾರಿ: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಅಶ್ವಾಸನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ, ಪಕ್ಷದ ತೀರ್ಮಾನ ತೆಗೆದುಕೊಂಡಿದ್ದಕ್ಕೆ ನಾನು ಬದ್ಧ. ವೈಯಕ್ತಿಕ ಅಭಿಪ್ರಾಯ ಬದಿಗೊತ್ತಿ ಕೆಲಸ ಮಾಡಿ. ಯಾವುದೇ ಪ್ರತಿಭಟನೆ ಮಾಡಬೇಡಿ. ಪಕ್ಷಕ್ಕೆ ಮುಜುಗರ ತರೋ ಕೆಲಸ ಯಾರು ಮಾಡಬೇಡಿ. ಪಕ್ಷಕ್ಕಾಗಿ ಎಲ್ಲರೂ ಸೇರಿ ದುಡಿಯೋಣ ಎಂದು ರಾಜ್ಯದ ಜನರಲ್ಲಿ ವಿನಂತಿ ಮಾಡಿಕೊಂಡರು.

    ಎಲ್ಲಾ ಜನರಿಗೆ ನ್ಯಾಯಕೊಡಿಸೋ ಕೆಲಸ ಬಿಜೆಪಿ ಪಕ್ಷ ಸೇರಿದಂತೆ ನಾನು ಮಾಡುತ್ತೇನೆ. ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ನೀಡುವ ಕೆಲಸವಾಗಬೇಕಿದೆ. ಸಿಎಂ ಯಡಿಯೂರಪ್ಪ ಈ ಬಗ್ಗೆ ಅಶ್ವಾಸನೆ ನೀಡಿದ್ದಾರೆ. ಅದು ಸಿಕ್ಕರೆ ವಾಲ್ಮೀಕಿ ಸಮುದಾಯದಕ್ಕೆ ಎಲ್ಲಾ ಸಿಕ್ಕಂತೆ. ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ, ಶಿವನಗೌಡ ಮತ್ತು ರಾಜುಗೌಡ ಎಲ್ಲಾರು ಒಂದಾಗಿದ್ದೇವೆ ಎಂದು ತಿಳಿಸಿದರು.

    ಈ ವೇಳೆ ಜಿಲ್ಲಾ ಉಸ್ತುವಾರಿ ವಿಚಾರವಾಗಿ ಮಾತನಾಡಿದ ಅವರು, ನಾನು ಈ ವಿಷಯಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ. ಸದ್ಯ ನಾನು ನೆರೆ ಪೀಡಿತ ಪ್ರದೇಶಾಭಿವೃದ್ಧಿಗೆ ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಉಸ್ತುವಾರಿಯಾಗಿದ್ದೇನೆ. ನನಗೆ ಯಾವುದೇ ಭಿನ್ನಮತ ಇಲ್ಲ ಎಂದು ಸ್ಪಷ್ಟನೆ ನೀಡಿದರು.

  • ‘ಅಪ್ಪ, ಅಮ್ಮ ನನ್ನ ಮೃತದೇಹ ಇಲ್ಲಿರುತ್ತೆ, ತೆಗೆದುಕೊಂಡು ಹೋಗಿ’ ಎಂದು ಯುವಕ ಆತ್ಮಹತ್ಯೆ

    ‘ಅಪ್ಪ, ಅಮ್ಮ ನನ್ನ ಮೃತದೇಹ ಇಲ್ಲಿರುತ್ತೆ, ತೆಗೆದುಕೊಂಡು ಹೋಗಿ’ ಎಂದು ಯುವಕ ಆತ್ಮಹತ್ಯೆ

    ನವದೆಹಲಿ: ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತೆರಳಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಕೊನೆಯ ಬಾರಿಗೆ ಯುವಕ ತನ್ನ ಪೋಷಕರಿಗೆ ಸಂದೇಶ ಕಳುಹಿಸಿದ್ದಾನೆ.

    ಹರ್ಷ (26) ನಾಪತ್ತೆಯಾಗಿರುವ ಯುವಕನಾಗಿದ್ದು, ಜುಲೈ 1 ರ ಬೆಳಗ್ಗೆ ಈತ ತನ್ನ ಪೋಷಕರೊಂದಗೆ ಮಾತನಾಡಿದ್ದ. ಆದರೆ ಕೆಲ ಸಮಯದ ಬಳಿಕ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿದ್ದ ಎಂದು ಪೋಷಕರು ತಿಳಿಸಿದ್ದಾರೆ.

    ವಾಟ್ಸಪ್ ಸಂದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಘಟನೆ ನಡೆದ 3 ದಿನಗಳ ಬಳಿಕ ಪೊಲೀಸರು ಮೃತ ದೇಹವನ್ನು ಯಮುನಾ ನದಿಯಲ್ಲಿ ಪತ್ತೆ ಮಾಡಿದ್ದಾರೆ.

    ಜೂನ್ 30ರ ರಾತ್ರಿ ಹರ್ಷ ತನ್ನ 6 ಜನರೊಂದಿಗೆ ಗೆಳೆಯನ ಪತ್ನಿಯ ಹುಟ್ಟುಹಬ್ಬ ಪಾರ್ಟಿಗೆ ತೆರಳಿದ್ದ. ಜುಲೈ 1 ರಂದು ಆತನ ಮೊಬೈಲ್ ನಿಂದ ಪೋಷಕರಿಗೆ ಹಾಗೂ ಕೆಲ ಆತ್ಮೀಯರಿಗೆ ವಾಟ್ಸಪ್ ಸಂದೇಶ ಬಂದಿತ್ತು. ಇದರಲ್ಲಿ ‘ಅಪ್ಪ ಅಮ್ಮ ಕ್ಷಮಿಸಿ. ನನ್ನ ಸ್ಕೂಟರ್, ಪರ್ಸ್ ಮತ್ತು ವಸ್ತುಗಳು ಐಟಿಒ ಸೇತುವೆ ಬಳಿ ಸಿಗುತ್ತದೆ. ನನ್ನ ಮೃತದೇಹ ಸೇತುವೆಯ ಕೆಳಗಿರುತ್ತದೆ ತೆಗೆದುಕೊಳ್ಳಿ ಎಂದು ಬರೆಯಲಾಗಿದೆ.

    ವಾಟ್ಸಪ್ ಸಂದೇಶದಿಂದ ಆತಂಕಗೊಂಡ ಪೋಷಕರು ಕೂಡಲೇ ದೆಹಲಿಯ ಐಟಿಒ ಸೇತುವೆ ಬಳಿ ಆಗಮಿಸಿದ್ದು, ಸಂದೇಶದಲ್ಲಿ ಇರುವಂತೆ ಆತನ ವಸ್ತುಗಳು ಸೇತುವೆ ಬಳಿ ಪತ್ತೆಯಾಗಿತ್ತು. ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ವೇಳೆ ಪೊಲೀಸರು ತಮ್ಮ ದೂರಿನ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಯುವಕ ಆನ್‍ಲೈನ್ ಶಾಪಿಂಗ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.