Tag: Party Workers

  • ಟ್ರಬಲ್ ಶೂಟರ್ ವಿಚಾರಣೆ ಖಂಡಿಸಿ ಸ್ವಕ್ಷೇತ್ರದಲ್ಲಿ ಪ್ರತಿಭಟನೆ

    ಟ್ರಬಲ್ ಶೂಟರ್ ವಿಚಾರಣೆ ಖಂಡಿಸಿ ಸ್ವಕ್ಷೇತ್ರದಲ್ಲಿ ಪ್ರತಿಭಟನೆ

    ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸರ್ಕಾರ ಇಡಿ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಕನಕಪುರದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಬೇಕಂತಲೇ ಇಡಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಡಿಕೆಶಿಯವರನ್ನು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಡಿಕೆಶಿಯವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ ಎಂಬ ಉದ್ದೇಶದಿಂದ ಅವರಿಗೆ ಖೆಡ್ಡಾ ತೋಡಲಾಗುತ್ತಿದೆ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದರು.

    ಶುಕ್ರವಾರ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಸಂಜೆ 6 ಗಂಟೆಯಿಂದ ರಾತ್ರಿ 11.30ರ ವರಿಗೆ ವಿಚಾರಣೆ ನಡೆಸಿತ್ತು. ನಂತರ ಮತ್ತೆ ಶನಿವಾರ 11 ಗಂಟೆಗೆ ಬರುವಂತೆ ಸೂಚಿಸಿತ್ತು. ಇಡಿ ಸೂಚನೆಯಂತೆ 11 ಗಂಟೆಗೆ ಬಂದ ಡಿಕೆಶಿ ಕೆಲವು ಅಪ್ತರ ಜೊತೆ ಇಡಿ ಕಚೇರಿಯಲ್ಲಿರುವ ಪೊಲೀಸ್ ಚೌಕಿಯೊಳಗೆ ಕುಳಿತು ಮಾತನಾಡಿದ್ದಾರೆ. ನಂತರ ಈಗ ಕೆಲವು ದಾಖಲೆಯ ಜೊತೆಗೆ ಇಡಿ ಕಚೇರಿಯೊಳಗೆ ತೆರಳಿದ್ದಾರೆ.

    ವಿಚಾರಣೆಯ ಎರಡನೇ ದಿನವಾದ ಇಂದು ಇಡಿ ಕಚೇರಿಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳು ವಿಚಾರಣೆಗೆ ಕರೆದರೂ ನಾನು ಹಾಜರಾಗುತ್ತೇನೆ, ತನಿಖೆಗೆ ಸಹಕರಿಸುತ್ತೇನೆ ಎಂದು ತಿಳಿಸಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲ ನಾನು ಹೆದರಲ್ಲ. ನಾನೇ ಈ ಇದರ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತಿಲ್ಲ. ನೀವು ಯಾಕೆ ಇಷ್ಟೊಂದು ಚಿಂತೆ ಮಾಡುತ್ತಿದ್ದಿರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

  • ನಳಿನ್ ಅಹಂಕಾರ ಬಿಡಲಿ: ಬಿಜೆಪಿ ಕಾರ್ಯಕರ್ತರಿಂದ ಅಸಮಾಧಾನ

    ನಳಿನ್ ಅಹಂಕಾರ ಬಿಡಲಿ: ಬಿಜೆಪಿ ಕಾರ್ಯಕರ್ತರಿಂದ ಅಸಮಾಧಾನ

    – ನೀವು ಗೆಲ್ಲುತ್ತೀರಿ, ಆದ್ರೆ ನಾವು ವಿಜಯೋತ್ಸವ ಆಚರಿಸಲ್ಲ

    ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಮುಗಿದು ಹೋಗಿದೆ. ಆದರೆ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಪಕ್ಷದ ಕಾರ್ಯಕರ್ತರ ಅಸಮಾಧಾನ ಮಾತ್ರ ನಿಂತಿಲ್ಲ.

    ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ನಳಿನ್ ಕುಮಾರ್ ಗೆಲ್ಲುತ್ತಾರೆ, ಗೆಲ್ಲಿಸುತ್ತೇವೆ. ಅವರು ಅಹಂಕಾರ ಬಿಡಲಿ. ತಮ್ಮನ್ನು ಬೆಳೆಸಿದ ಕಾರ್ಯಕರ್ತರ ಜೊತೆ ಅಹಂ ತೋರಿಸುವುದು ಬೇಡ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಮೋದಿಗಾಗಿ ವೋಟ್, ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ಕೇಂದ್ರದಲ್ಲಿ ಮೋದಿ ಮತ್ತೆ ಬರಬೇಕೆಂಬ ನೆಲೆಯಲ್ಲಿ ಬಿಜೆಪಿಗೆ ವೋಟ್ ಹಾಕುತ್ತೇವೆ. ನಳಿನ್ ಕುಮಾರ್ ಅವರಿಗೆ ಅಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಗೂ ಮುನ್ನವೇ ನಳಿನ್ ಕುಮಾರ್ ಬದಲಾವಣೆಗಾಗಿ ಒತ್ತಡ ಕೇಳಿಬಂದಿತ್ತು. ಹೀಗಾಗಿ ಸಂಘ ಪರಿವಾರದಲ್ಲೂ ಕೆಲವು ಪ್ರಮುಖರು ಕೂಡ ಇದಕ್ಕೆ ಪಟ್ಟು ಹಿಡಿದಿದ್ದರು. ಆದರೆ ಕೊನೆ ಕ್ಷಣದಲ್ಲಿ ನಳಿನ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಳಿಕ ಅಸಮಾಧಾನಗೊಂಡಿದ್ದ ಕಾರ್ಯಕರ್ತರು ಮೋದಿಗಾಗಿ ನಮ್ಮ ವೋಟ್ ಅನ್ನುತ್ತಾ ಭಿನ್ನರಾಗದಲ್ಲೇ ಪ್ರಚಾರದಲ್ಲಿ ತೊಡಗಿದ್ದರು.

    ಚುನಾವಣೆ ಮುಗಿದರೂ, ಕಾರ್ಯಕರ್ತರ ಆಕ್ರೋಶ ನಿಂತಿಲ್ಲ. ನಳಿನ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು, ನೀವು ಗೆಲ್ಲುತ್ತೀರಿ. ಹಾಗಂತ ನಾಡಿದ್ದು ಮತ ಎಣಿಕಾ ಕೇಂದ್ರಕ್ಕೆ ಬಂದು ವಿಜಯೋತ್ಸವ ಆಚರಿಸಲ್ಲ ಎಂಬುದಾಗಿ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?:
    ಚುನಾವಣೆ ಮಗಿದಿದೆ. ನಾಡಿದ್ದು ನೀವು ಗೆದ್ದೇ ಗೆಲ್ಲುತ್ತೀರ. ಗೆಲ್ಲಲೇ ಬೇಕು ಕೂಡ. ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ದುಡಿದಿದ್ದೇವೆ. ಮೊನ್ನೆ ತಾನೆ ಮತಾದಾನ ಗುರುತಿನ ಕಾರ್ಡ್ ಮಾಡಿಸಿದ ಯುವ ಮತದಾರನಿಂದ ಹಿಡಿದು ಅಜ್ಜ- ಅಜ್ಜಿಯರನ್ನು ಕೂಡ ಮತಗಟ್ಟೆಗೆ ಕರೆತಂದು ಮತ ಹಾಕಿಸಿದ್ದೇವೆ. ಅದರರ್ಥ ನಿಮ್ಮ ಮೇಲಿನ ಪ್ರೀತಿಯಿಂದ ನಾವು ಮತ ಹಾಕಿದ್ದಲ್ಲ. ಮೋದಿ ಎನ್ನುವ ಮಹಾನ್ ವ್ಯಕ್ತಿ ನಮ್ಮಂತಹ ಸಾಮಾನ್ಯ ಕಾರ್ಯಕರ್ತನ ಹೃದಯ ಮಂದಿರದಲ್ಲಿ ಶಕ್ತಿಯಾಗಿ ರೂಪುಗೊಂಡಿದ್ದಾರೆ. ಅವರ ಗೆಲುವು ನಮಗೆ ಮುಖ್ಯ. ಮೋದಿ ಭಾರತದ ಅನಿವಾರ್ಯತೆ ಮತ್ತು ಅವಶ್ಯಕತೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವಾಗ ನಿಮ್ಮನ್ನು ಬೆಳೆಸಿದ ಸಂಘದ ಹಿರಿಯರನ್ನು ಕಡೆಗಣಿಸುವ ಮಟ್ಟಕ್ಕೆ ಬಂದುಬಿಟ್ಟಿರೋ, ಯಾವಾಗ ಸಂಘಟನೆಗಾಗಿ ಬದುಕನ್ನೇ ಮುಡುಪಾಗಿಟ್ಟವರನ್ನು ಬದಿಗಿರಿಸುವ ಪ್ರಯತ್ನ ಮಾಡಿದಿರೋ ಅವಾಗಲೇ ನಮ್ಮೆಲ್ಲರಿಂದ ದೂರವಾಗಿದ್ದೀರಿ ನಳಿನ್ ಜೀ.

    ಒಂದು ನೆನಪಿಡಿ… ನಾಡಿದ್ದು ಮತ ಎಣಿಕೆಯಂದು ನೀವು ಗೆದ್ದಾಗ ನಮ್ಮ ಮನೆಯಲ್ಲಿ ಸಿಹಿ ಹಂಚುತ್ತೇವೆ. ಮನೆ ಪಕ್ಕ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ. ಆದರೆ ಮತ ಎಣಿಕೆ ಕೇಂದ್ರದೆಡೆಗೆ ಬಂದು ಸಂಭ್ರಮಿಸಲಾರೆವು. ನಿಮ್ಮನ್ನು ಹೆಗಲ ಮೇಲೆ ಹೊತ್ತೊಯ್ದು ಸಂಭ್ರಮಿಸಲಾರೆವು, ನಮ್ಮೂರಿಗೆ ಕರೆದು ವಿಜಯೋತ್ಸವವನ್ನೂ ಮಾಡಲಾರೆವು.. ಕಾರಣ ನಿಮ್ಮ ಮೇಲೆ ಹೇಳಲಾರದಷ್ಟು ನೋವಿದೆ ನಳಿನ್ ಜೀ. ಈಗಲೂ ನೀವು ನಿಮ್ಮ ದುರಹಂಕಾರದ ವರ್ತನೆಯಿಂದ ಬದಲಾದರೆ ಮಾತ್ರ ನಿಮಗೆ ಶ್ರೇಯಸ್ಕರ. ಮತ್ತೊಮ್ಮೆ ಹೇಳುತ್ತೇವೆ. ನೀವು ಗೆಲ್ಲುತ್ತೀರ. ಖಂಡಿತಾ ಗೆಲ್ಲಿಸಿದ್ದೇವೆ ಕೂಡ. ಆದರೆ ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ನವ ಭಾರತ ನಿರ್ಮಾಣದ ಕನಸು ಹೊತ್ತ ಮೋದಿಗಾಗಿ ನಿಮ್ಮನ್ನು ಗೆಲ್ಲಿಸುತ್ತಿದ್ದೇವೆ ಅಷ್ಟೆ. ನೀವು ಬದಲಾಗುವಿರಿ ಎನ್ನುವ ನಿರೀಕ್ಷೆಯೊಂದಿಗೆ.

  • ಮೈತ್ರಿ ನಾಯಕರು ಒಟ್ಟಾದ್ರೂ ಕಾರ್ಯಕರ್ತರು ಮಾತ್ರ ಸಾಥ್ ಕೊಡ್ತಿಲ್ಲ!

    ಮೈತ್ರಿ ನಾಯಕರು ಒಟ್ಟಾದ್ರೂ ಕಾರ್ಯಕರ್ತರು ಮಾತ್ರ ಸಾಥ್ ಕೊಡ್ತಿಲ್ಲ!

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಯೇನೋ ಆಗಿರಬಹುದು. ಆದ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಮೈತ್ರಿಯಲ್ಲಿ ಅಸಹಕಾರದ ಭಯ ಕಾಡುತ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನ ಮಣಿಸಲೇಬೇಕೆಂದು ಹಠಕ್ಕೆ ಬಿದ್ದು ಮೈತ್ರಿ ಮಾಡಿಕೊಂಡಿರೋ ಜೆಡಿಎಸ್ – ಕಾಂಗ್ರೆಸ್ ಸ್ಥಿತಿ ಇದೀಗ ಅಕ್ಷರಃ ಗೊಂದಲದ ಗೂಡಾಗಿದೆ. ಮೇಲ್ನೋಟಕ್ಕೆ ಮೈತ್ರಿ ನಾಯಕರ ನಡುವೆ ಕೊಂಚ ಸಮನ್ವಯತೆ ಕಂಡರೂ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕರ್ತರ ನಡುವಿನ ಒಗ್ಗಟ್ಟು ಹೇಳತೀರದು. ಹಾವು-ಮುಂಗುಸಿಯಂತಿದ್ದ ಕೈ ಹಾಗೂ ತೆನೆ ಹೊತ್ತ ಕಾರ್ಯಕರ್ತರು ಸದ್ಯಕ್ಕೆ ಒಂದಾಗೋ ಲಕ್ಷಣಗಳು ಕಾಣಿಸ್ತಾ ಇಲ್ಲ. ಇದರಿಂದ ಮೈತ್ರಿ ನಾಯಕರಲ್ಲಿ ಆತಂಕ ಶುರುವಾಗಿದೆ. ಹೀಗಾಗಿಯೇ ರಾಹುಲ್ ಗಾಂಧಿ ಭಾನುವಾರ ಬೆಂಗಳೂರಿನಲ್ಲಿ ನಡೆದ ಮೈತ್ರಿ ನಾಯಕರ ಪ್ರಚಾರ ಸಭೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಸಮನ್ವಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದರು.

    ರಾಹುಲ್ ತಮ್ಮ ಮಾತಿನುದ್ದಕ್ಕೂ ಜೆಡಿಎಸ್ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಸಹಕರಿಸಬೇಕು. ಮೈತ್ರಿ ಪಕ್ಷದ ಪರ ಪ್ರಚಾರ ನಡೆಸಬೇಕು ಅನ್ನೋದನ್ನೇ ಹೈಲೈಟ್ ಮಾಡಿದ್ದರು. ಅಂದಹಾಗೆ ರಾಹುಲ್ ಸಮನ್ವಯತೆ ಜಪ ಮಾಡೋದರ ಹಿಂದೆ ದಳಪತಿಗಳ ಮನವಿ ಇತ್ತಾ ಅನ್ನೋದು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಮಂಡ್ಯದಲ್ಲಿ ರಾಜ್ಯ ನಾಯಕರ ಎಚ್ಚರಿಕೆ ನಡುವೆಯೂ ಕೈ ಕಾರ್ಯಕರ್ತರು ಜೆಡಿಎಸ್‍ಗೆ ಸಾಥ್ ನೀಡ್ತಿಲ್ಲ. ಹೀಗಾಗಿ ರಾಹುಲ್ ಬಾಯಿಂದಲೇ ಕಾರ್ಯಕರ್ತರಿಗೆ ಮೈತ್ರಿ ನಾಯಕರು ಸಮನ್ವಯತೆಯ ಪಾಠ ಮಾಡಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಈ ವೇಳೆ ಸಿಎಂ ಕುಮಾರಸ್ವಾಮಿ ಕೂಡ ಕೈ ಅಭ್ಯರ್ಥಿಗಳು ಇರೋ ಕಡೆ ದಳ ಕಾರ್ಯಕರ್ತರು ಹೆಗಲು ಕೊಟ್ಟು ದುಡಿಯಿರಿ ಎಂದು ಕರೆ ನೀಡಿದರು.

    ಇದಿಷ್ಟೇ ಅಲ್ಲ ಸಮಾವೇಶದ ಬಳಿಕ ನಡೆದ ಸಭೆಯಲ್ಲೂ 2 ಪಕ್ಷಗಳ ಕಾರ್ಯಕರ್ತರ ನಡುವಿನ ಸಹಕಾರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಿತೆನ್ನಲಾಗಿದೆ. ಅಲ್ಲದೆ ಜಂಟಿ ಸಮಾವೇಶದ ಮೂಲಕ ದೇಶಕ್ಕೆ ಮಹಾಮೈತ್ರಿಯ ಸಂದೇಶ ಕಳುಹಿಸಲು ಸಜ್ಜಾಗಿದ್ದ ಮೈತ್ರಿ ನಾಯಕರಿಗೆ ಕಾರ್ಯಕರ್ತರ ಮುನಿಸು ತಲೆನೋವಾಗಿ ಪರಿಣಮಿಸಿದೆ.

  • ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ನವದೆಹಲಿ: ಅಮೇರಿಕದಲ್ಲಿ ಚಿಕೆತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ ಎಂದು ವಿಡಿಯೊ ಮೂಲಕ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಿಕ್ಕರ್ ಕಳುಹಿಸಿದ್ದ ವಿಡಿಯೊವನ್ನು ಕಾರ್ಯಕರ್ತರಿಗೆ ತೋರಿಸಿದ್ದಾರೆ.

    ಕಳೆದ 2 ತಿಂಗಳಿಂದ ನಾನು ನಿಮ್ಮ ಜೊತೆಯಲ್ಲಿ ಇಲ್ಲ. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯಲ್ಲಿದ್ದೇನೆ. ಆರೋಗ್ಯ ಸಮಸ್ಯೆಯಿಂದ ಕಾರ್ಯಕರ್ತರ ಸಭೆಗೆ ಬರಲಿಕ್ಕೆ ಆಗಲಿಲ್ಲ. ಕೆಲವು ವಾರಗಳಲ್ಲಿ ಗೋವಾಗೆ ಮರಳುತ್ತೇನೆ ಎಂದು ರೆಕಾರ್ಡೆಡ್ ವಿಡಿಯೊದಲ್ಲಿ ಹೇಳಿದ್ದಾರೆ.

    ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗುವುದು ದೇಶದ ಅವಶ್ಯಕತೆಯಾಗಿದೆ. 2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    62 ವಯಸ್ಸಿನ ಪರಿಕ್ಕರ್ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೊದಲಿಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ ಮೊದಲ ವಾರದಲ್ಲಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪರಿಕ್ಕರ್ ಅವರ ದೀರ್ಘ ಕಾಲದ ಅನುಪಸ್ಥಿತಿಯಿಂದಾಗಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯನ್ನು ನೇಮಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹ ಮಾಡಿತ್ತು. ಪರಿಕ್ಕರ್ ಅವರ ಅನುಪಸ್ಥಿತಿಯಲ್ಲಿ ಸಚಿವ ಸಂಪುಟದ ಸದಸ್ಯರನ್ನು ಒಳಗೊಂಡತೆ ಮೂರು ಜನರ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ದೈನಂದಿನ ಚಟುವಟಿಕೆಗಳನ್ನು ಸಮಿತಿ ನೋಡಿಕೊಳ್ಳುತ್ತಿದೆ.