Tag: Party Worker

  • ದಾಂಡೇಲಿ-ಧಾರವಾಡ ರೈಲು ಕ್ರೆಡಿಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಫೈಟ್

    ದಾಂಡೇಲಿ-ಧಾರವಾಡ ರೈಲು ಕ್ರೆಡಿಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಫೈಟ್

    ಕಾರವಾರ: ದಾಂಡೇಲಿ-ಧಾರವಾಡ ಪ್ರಯಾಣಿಕರ ರೈಲು ಸಂಚಾರಕ್ಕೆ ಕ್ರೆಡಿಟ್‌ಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡ ಪ್ರಸಂಗ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆಯಿತು.

    ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ದಾಂಡೇಲಿ-ಧಾರವಾಡ ನೂತನ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿ ರೈಲು ತಂದ ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನಿಸಿದರು. ಇದನ್ನೂ ಓದಿ: 100 ವರ್ಷಗಳ ಇತಿಹಾಸದ ರೈಲು ಮಾರ್ಗಕ್ಕೆ ಚಾಲನೆ

    ತಾಲೂಕಿನ ಅಂಬೇವಾಡಿಯಿಂದ ಅಳ್ನಾವರ ಮೂಲಕ ಸಂಚರಿಸುವ ನೂತನ ರೈಲ್ವೆಗೆ ಭಾನುವಾರ ಅಂಬೇವಾಡಿಯ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಕರಾಗಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಇನ್ನಿತರ ನಾಯಕರು ವೇದಿಕೆ ಏರಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಆರ್.ವಿ. ದೇಶಪಾಂಡೆ ಪರ ಘೋಷಣೆ ಕೂಗಿದರು. ಇನ್ನೊಂದು ಬದಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರ ಘೋಷಣೆ ಕೂಗಿದರು.

    ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಅವರು ಭಾಷಣ ಮಾಡುವಾಗ ರೈಲ್ವೆ ತರಲು ಪ್ರಯತ್ನಿಸಿದ ದೇಶಪಾಂಡೆ ಅವರನ್ನು ನೆನೆದರು. ಆದರೆ ಈ ವೇಳೆ ಮತ್ತೆ ಕಲಮ ಪಡೆಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆ ಕೂಗಿದರು. ಇದು ಹೀಗೆ ಕೆಲ ಕಾಲ ಮುಂದುವರಿದಾಗ ಪ್ರಹ್ಲಾದ್ ಜೋಶಿ ಅವರು ಮಧ್ಯ ಪ್ರವೇಶಿಸಿ ಎಲ್ಲರೂ ರೈಲು ತರಲು ಶ್ರಮಿಸಿದ್ದಾರೆ. ಇದು ಒಬ್ಬರಿಂದಾದ ಕೆಲಸವಲ್ಲ. ಇದಕ್ಕೆ ಎಲ್ಲ ಪಕ್ಷಗಳ ನಾಯಕರು ಶ್ರಮಿಸಿದ್ದಾರೆ ಎಂದು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಬಳಿಕ ಮಾಜಿ ಸಚಿವ ದೇಶಪಾಂಡೆ ಅವರು, ಕೆಲಸ ಯಾರು ಮಾಡಿದ್ದರೂ ಅದನ್ನು ಶ್ಲಾಘಿಸಬೇಕು. ಚುನಾವಣೆ ಸಂದರ್ಭದಲ್ಲಿನ ರಾಜಕೀಯ ಬೇರೆ ಎಂದರು.

  • ಪುರಸಭೆ ಮುಖ್ಯಾಧಿಕಾರಿ ಮೇಲೆ ಜೆಡಿಎಸ್ ಕಾರ್ಯಕರ್ತನಿಂದ ಹಲ್ಲೆ

    ಪುರಸಭೆ ಮುಖ್ಯಾಧಿಕಾರಿ ಮೇಲೆ ಜೆಡಿಎಸ್ ಕಾರ್ಯಕರ್ತನಿಂದ ಹಲ್ಲೆ

    ವಿಜಯಪುರ: ಕರ್ತವ್ಯನಿರತ ಪುರಸಭೆ ಮುಖ್ಯಾಧಿಕಾರಿಯ ಮೇಲೆ ಜೆಡಿಎಸ್ ಕಾರ್ಯಕರ್ತನೊಬ್ಬ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ಇಂದು ನಡೆದಿದೆ.

    ಜೆಡಿಎಸ್ ಕಾರ್ಯಕರ್ತ ಸಲೀಂ ಜಮನಾಳ ಹಲ್ಲೆ ಮಾಡಿದ ಆರೋಪಿ. ಪುರಸಭೆ ಮುಖ್ಯಾಧಿಕಾರಿ ಸೈಯ್ಯದ್ ಅಹ್ಮದ್ ಅವರಿಗೆ ಸಲೀಂ ಹೊಡೆದಿದ್ದಾನೆ. ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅಧ್ಯಕ್ಷತೆಯ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಘಟನೆ ನಡದಿದೆ.

    ಸಿಂದಗಿಯ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಇಂದು ಸಭೆ ನಡೆಸಲಾಗಿತ್ತು. ಈ ವೇಳೆ ನೀರಿನ ವಿಚಾರವಾಗಿ ಚರ್ಚೆ ನಡೆಸಿದ್ದಾಗ ಅಶೋಕ ಮನಗೂಳಿ ಅವರ ಎದುರಲ್ಲಿಯೇ ಸಲೀಂ ಪುರಸಭೆ ಮುಖ್ಯಾಧಿಕಾರಿ ಸೈಯ್ಯದ್ ಅಹ್ಮದ್ ಮೇಲೆ ಕೈ ಮಾಡಿದ್ದಾನೆ. ಸಲೀಂ ವರ್ತನೆಗೆ ಪುರಸಭಾ ಪೌರ ಕಾರ್ಮಿಕರ ಸಂಘ ಖಂಡನೆ ವ್ಯಕ್ತಪಡಿಸಿದ್ದು, ಪುರಸಭೆ ಎದುರು ಪ್ರತಿಭಟನೆ ನಡೆಸಿ ಸಲೀಂ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ಕೊಲ್ಕತ್ತಾ: ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ ಕೊಲೆ ಮಾಡಿ ನೇಣು ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯ ಬಲರಾಮ್‍ಪುರ ಪ್ರದೇಶದಲ್ಲಿ ನಡೆದಿದೆ.

    ಪುರುಲಿಯಾ ಜಿಲ್ಲೆಯ ಬಲರಾಮ್‍ಪುರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮರಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ದೊರೆತ ಮಾಹಿತಿ ಆಧರಿಸಿ ಮೃತ ವ್ಯಕ್ತಿಯು ಸ್ಥಳೀಯ ಬಿಜೆಪಿ ಕಾರ್ಯಕರ್ತನೆಂದು ತಿಳಿದು ಬಂದಿದೆ. ಮೃತ ವ್ಯಕ್ತಿಯ ಟೀಶರ್ಟ್ ಮೇಲೆ “ಬಿಜೆಯ ಅಧಿಕಾರ 18 ವರ್ಷಮಾತ್ರ” ಎಂದು ಬರೆದಿದ್ದು, ಹಾಗೂ ಬಿಜೆಪಿ ಪರ ಕೆಲಸ ಮಾಡುವ ಕಾರ್ಯಕರ್ತರಿಗೆ ಇದೇ ಶಿಕ್ಷೆ ಎಂಬ ಪತ್ರ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವ್ಯಕ್ತಿಯು 21 ವರ್ಷದ ತ್ರಿಲೋಚನ್ ಮಹಾಟೊ ಆಗಿದ್ದು, ಈತ ಬಲರಾಮ್‍ಪುರದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಬಿಜೆಪಿ ಯುವ ಮೋರ್ಚಾ ಘಟಕದ ಸದಸ್ಯನಾಗಿದ್ದ.

    ಈ ಕುರಿತಂತೆ ತ್ರಿಲೋಚನ್ ತಂದೆ ಹರಿರಾಮ್ ಮಹಾಟೊ ಮಾತನಾಡಿ, ಮಗ ಮಂಗಳವಾರದಂದು ಕೆಲಸದ ನಿಮಿತ್ತ ಮನೆಯಿಂದ ತೆರಳಿದ್ದು, ಸಂಜೆ ಹೊತ್ತಿಗೆ ಬರುತ್ತೇನೆಂದು ತನ್ನ ಅಣ್ಣನ ಬಳಿ ಹೇಳಿ ಹೋಗಿದ್ದನು. ಇದ್ದಕ್ಕಿದ್ದ ಹಾಗೆ ಸಂಜೆ 8 ಗಂಟೆಗೆ ಫೋನ್ ಮಾಡಿ ಯಾರೋ ನನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆಂದು ಹೇಳಿದ್ದ. ಕೂಡಲೇ ನಾವು ಪೊಲೀಸರಿಗೆ ದೂರು ನೀಡಿ ಹುಡುಕಿಸಿದರೂ ಆತನ ಸುಳಿವು ಸಿಗಲಿಲ್ಲ. ಬುಧವಾರ ಬೆಳಿಗ್ಗೆ ಮನೆಯ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಸಿಕ್ಕಿದೆ. ಆತನನ್ನು ಅಪಹರಿಸಿದವರೆ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

    ಬಿಜೆಪಿ ನಾಯಕನ ಹತ್ಯೆಗೆ ಕುರಿತಂತೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದು, ಬಿಜೆಪಿ ನಾಯಕನ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಕಾರ್ಯಕರ್ತನನ್ನು ಕ್ರೂರವಾಗಿ ಕೊಲ್ಲಲಾಗಿದ್ದು, ಈ ಘಟನೆಯಿಂದ ನಮಗೆ ತೀವ್ರ ನೋವುಂಟಾಗಿದೆ ಎಂದು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಚಕ್ರವರ್ತಿಯವರು ತ್ರಿಲೋಚನ್ ಕೊಲೆಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದಿದ್ದಾರೆ. ಬಲರಾಮ್‍ಪುರದ ಶಾಸಕ ಶಾಂತಿರಾಮ್ ಮಹಾಟೊ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಕೊಲೆಗೆ ಕೌಟುಂಬಿಕ ಕಾರಣ ಕಂಡುಬಂದಿದ್ದು, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪುರುಲಿಯಾ ಎಸ್‍ಪಿ ಜಾಯ್ ಬಿಸ್ವಾನ್‍ರವರು ಹೇಳಿಕೆ ನೀಡಿದ್ದಾರೆ.