Tag: Party Office

  • ಪಕ್ಷದ ಕಚೇರಿ ಮುಂದೆಯೇ ಪತ್ನಿಗೆ ಥಳಿಸಿದ ಬಿಜೆಪಿ ಮುಖಂಡ

    ಪಕ್ಷದ ಕಚೇರಿ ಮುಂದೆಯೇ ಪತ್ನಿಗೆ ಥಳಿಸಿದ ಬಿಜೆಪಿ ಮುಖಂಡ

    ನವದೆಹಲಿ: ಪಕ್ಷದ ಕಚೇರಿ ಮುಂದೆಯೇ ಬಿಜೆಪಿ ಮುಖಂಡ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಿಜೆಪಿಯ ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ತಮ್ಮ ಪತ್ನಿ, ದಕ್ಷಿಣ ದೆಹಲಿಯ ಮಾಜಿ ಮೇಯರ್ ಸರಿತಾ ಚೌಧರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಆಜಾದ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚುನಾವಣೆ ಸಿದ್ಧತೆ ವಿಚಾರವಾಗಿ ಗುರುವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ಕೂಡ ಸಭೆಗೆ ಹಾಜರಾಗಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಪತ್ನಿಯನ್ನು ನೋಡಿದ ಆಜಾದ್ ಸಿಂಗ್ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಜಾವೆಡೆಕರ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಬಿಜೆಪಿ ಕಚೇರಿಯಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.

    ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು, ಮಹಿಳೆಯ ಮೇಲೆ ನಡೆದ ಹಲ್ಲೆಯ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖಾ ಸಮಿತಿಯನ್ನು ರಚಿಸಿದ್ದೇವೆ. ಜೊತೆಗೆ ಆಜಾದ್ ಸಿಂಗ್ ಅವರನ್ನು ಮೆಹ್ರೌಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

    ದಕ್ಷಿಣ ದೆಹಲಿ ಮಾಜಿ ಮೇಯರ್ ಸರಿತಾ ಹಾಗೂ ಪತಿ ಆಜಾದ್ ಸಿಂಗ್ ಮಧ್ಯೆ ಈ ಹಿಂದೆಯೂ ಜಗಳವಾಗಿತ್ತು. ಕೌಟುಂಬಿಕ ಕಲಹದಿಂದಾಗಿ ದಂಪತಿಯು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಆದರೆ ಈ ಘಟನೆಯ ಕುರಿತು ಇದುವರೆಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಪೋಲಿಸ್ ಅಧಿಕಾರಿಯೊಬ್ಬರು, ಘಟನೆಯಲ್ಲಿ ಭಾಗಿಯಾದ ಯಾರಿಂದಲೂ ನಮಗೆ ಯಾವುದೇ ದೂರು ಬಂದಿಲ್ಲ. ನಮಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದು ಹೇಳಿದ್ದಾರೆ.

    ಸಭೆಗೆ ಆಗಮಿಸಿದ್ದ ಪತ್ನಿ ಸರಿತಾ ಚೌಧರಿ ಅವರು ಮೊದಲು ನನ್ನನ್ನು ನಿಂದಿಸಿದರು. ಅಷ್ಟೇ ಅಲ್ಲ ಹಲ್ಲೆಗೆ ಯತ್ನಿಸಿದರು. ತಕ್ಷಣವೇ ರಕ್ಷಣೆಗಾಗಿ ಅವರನ್ನು ತಳ್ಳಿದ್ದೇನೆ ಎಂದು ಆಜಾದ್ ಸಿಂಗ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  • ಬಿಜೆಪಿ ನಾಯಕರಿಂದ ಕುಂದಗೋಳ ಕಾಂಗ್ರೆಸ್ ಕಚೇರಿ ಎತ್ತಂಗಡಿ

    ಬಿಜೆಪಿ ನಾಯಕರಿಂದ ಕುಂದಗೋಳ ಕಾಂಗ್ರೆಸ್ ಕಚೇರಿ ಎತ್ತಂಗಡಿ

    – ಕಚೇರಿ ಇಲ್ಲದೇ ‘ಕೈ’ ನಾಯಕರು ಕಂಗಾಲು

    ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಬಿಗ್ ಫೈಟ್ ಏರ್ಪಟ್ಟಿದೆ. ಪ್ರಚಾರದ ಕಾವು ಏರುತ್ತಿರುವಾಗಲೇ ಕುಂದಗೋಳ ಪಟ್ಟಣದ ಹೊರವಲಯದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಬಿಜೆಪಿ ನಾಯಕರು ಎತ್ತಂಗಡಿ ಮಾಡಿಸಿದ್ದಾರೆ.

    ಕುಂದಗೋಳದ ಮರಾಠಾ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಚೇರಿ ಮಾಡಲಾಗಿತ್ತು. ಈ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡವನ್ನು ಕಾಂಗ್ರೆಸ್ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಬಿಜೆಪಿ ದೂರು ನೀಡಿದ್ದರಿಂದ ಚುನಾವಣಾ ಆಯೋಗವು ಕಾಂಗ್ರೆಸ್ ಕಚೇರಿಯನ್ನು ಜಪ್ತಿ ಮಾಡಿದೆ. ಇದರಿಂದಾಗಿ ಪಕ್ಷದ ಕಚೇರಿ ಇಲ್ಲದೇ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಸದ್ಯ ಸ್ಥಳೀಯ ಮುಖಂಡರ ಮನೆಯನ್ನೇ ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ.

    ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮೇ 19ರಂದು ನಡೆಯಲಿದ್ದು, ಫಲಿತಾಂಶವು ಮೇ 23ರಂದು ಹೊರ ಬೀಳಲಿದೆ. ಎರಡೂ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಮತ ಬೇಟೆ ನಡೆಸಿದ್ದಾರೆ.

  • ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಸೋಲಿನ ಪರಾಮರ್ಶೆ ಸಭೆ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ್ದು ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲೂ ನೋಡಿಲ್ಲ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದರು.

    ಜಯನಗರ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಮೋದಿ ವರ್ಸಸ್ ಆಲ್ ಅದರ್ಸ್, ಬಿಜೆಪಿ ವರ್ಸಸ್ ಆಲ್ ಅದರ್ಸ್ ಎನ್ನುವ ರೀತಿಯಾಗಿದೆ. ಕರ್ನಾಟಕದಲ್ಲಿ ಕೂಡ ಅದೇ ವಾತಾವರಣ ಇದೆ ಎಂದರು.

    ಕಾಂಗ್ರೆಸ್ ಜೆಡಿಎಸ್ ಅದೇ ರೀತಿ ಇಲ್ಲೂ ಕುತಂತ್ರ ನಡೆಸುವುದಕ್ಕೆ ಹೊರಟಿದ್ದಾರೆ. ಜನ ಇಂತಹ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.