Tag: Parliment

  • ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ನವದೆಹಲಿ: ಮೇ 28ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi) ಉದ್ಘಾಟನೆಗೊಳ್ಳಲಿರುವ ಹೊಸ ಸಂಸತ್ತಿನಲ್ಲಿ (Parliment) ಚಿನ್ನದ ರಾಜದಂಡವನ್ನು ಇಡಲಾಗುತ್ತದೆ.

    ಗೃಹ ಸಚಿವ ಅಮಿತ್ ಶಾ (Amit Shah) ಸುದ್ದಿಗೋಷ್ಠಿ ನಡೆಸಿ ಹೊಸ ಸಂಸತ್ತಿನಲ್ಲಿ ಸ್ಪೀಕರ್ ಸ್ಥಾನದ ಬಳಿ ನರೇಂದ್ರ ಮೋದಿಯವರು ಐತಿಹಾಸಿಕ ಚಿನ್ನದ ರಾಜದಂಡ ‘ಸೆಂಗೊಲ್’ (Sengol) ಇರಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಬ್ರಿಟಿಷ್ ಆಡಳಿತ ಹಸ್ತಾಂತರಿಸಿತ್ತು. ಈ ರಾಜದಂಡವನ್ನು ‘ಸೆಂಗೊಲ್’ ಎಂದು ಕರೆಯಲಾಗುತ್ತದೆ. ಇದು ತಮಿಳು ಪದ ‘ಸೆಮ್ಮೈʼನಿಂದ ಬಂದಿದೆ ಎಂದರು.

    ಸೆಂಗೊಲ್‌ನ ಇತಿಹಾಸ ಮತ್ತು ಮಹತ್ವ ಅನೇಕರಿಗೆ ತಿಳಿದಿಲ್ಲ. ಹೊಸ ಸಂಸತ್ತಿನಲ್ಲಿ ಇದನ್ನು ಸ್ಥಾಪಿಸುವುದರಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಮ್ಮ ಆಧುನಿಕತೆಯೊಂದಿಗೆ ಜೋಡಿಸುವ ಪ್ರಯತ್ನವಾಗುತ್ತದೆ. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವ ಯೋಜನೆಯು ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಸೆಂಗೊಲ್ ಈಗ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿದೆ. ಅಲ್ಲಿಂದ ಸಂಸತ್ತಿಗೆ ತಂದು ಪ್ರಧಾನಿ ಮೋದಿಯವರು ಸ್ಪೀಕರ್ ಸ್ಥಾನದ ಬಳಿ ಅದನ್ನು ಸ್ಥಾಪಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ಸೆಂಗೊಲ್ ಅನ್ನು ರಾಜಕೀಯಕ್ಕೆ ಜೋಡಿಸಬಾರದು. ಆಡಳಿತವು ಕಾನೂನಿನ ನಿಯಮದಿಂದ ನಡೆಯಬೇಕೆಂದು ನಾವು ಬಯಸುತ್ತೇವೆ. ಇದು ಯಾವಾಗಲೂ ಅದನ್ನು ನಮಗೆ ನೆನಪಿಸುತ್ತದೆ. ಅಲ್ಲದೇ ಸಂಸತ್ತಿನಲ್ಲಿ ರಾಜದಂಡದ ಸ್ಥಾಪನೆಯು ಮರೆತುಹೋದ ಇತಿಹಾಸವನ್ನು ನಮಗೆ ನೆನಪಿಸುವಂತೆ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

    ಸೆಂಗೊಲ್ ಮಹತ್ವವೇನು?
    ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಅವರ ಜೊತೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು. ಇವರು ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿದರು. ಆ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದ್ದು, ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ಯನ್ನು ಹೊಂದಿದೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

    ವರದಿಗಳ ಪ್ರಕಾರ, ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ನಂತರ ರಾಜದಂಡವನ್ನು ಪಡೆದ ಗಂಗಾಜಲವನ್ನು ಸಿಂಪಡಿಸಿದರು. 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹಲವಾರು ನಾಯಕರು ಮತ್ತು ಉನ್ನತ ಗಣ್ಯರ ಸಮ್ಮುಖದಲ್ಲಿ ಸೆಂಗೊಲ್ ಅನ್ನು ಸ್ವೀಕರಿಸಿದರು. ಇದು ಬ್ರಿಟಿಷರಿಂದ ಸ್ವತಂತ್ರ ಭಾರತದ ಜನರಿಗೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಭಾರತ ಸ್ವಾತಂತ್ರ‍್ಯ ಗಳಿಸಿದ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಈ ಸ್ಮರಣೀಯ ಘಟನೆಗಳು ನಡೆದಿತ್ತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ಮೊಳಗಿಸಲಾಯಿತು. ಇದನ್ನೂ ಓದಿ: ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ

    ತಮಿಳು ಸಂಸ್ಕೃತಿಯಲ್ಲಿ ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೊಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಪೀಠದ ಬಳಿ ರಾಜದಂಡ ಇಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

  • ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ

    ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾವಿಬ್ಬರು, ನಮಗಿಬ್ಬರು ಎನ್ನುವ ತತ್ವದಡಿ ದೇಶವನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ಸಂಸತ್‍ನಲ್ಲಿ ಆಕ್ರೋಶಭರಿತರಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ನಾವಿಬ್ಬರು, ನಮಗಿಬ್ಬರು ತತ್ವದ ಆಧಾರದಲ್ಲಿಯೇ ಬಿಜೆಪಿ ಸರ್ಕಾರ ನಗದು ಅಮಾನ್ಯೀಕರಣ ಮಾಡಿದೆ, ಜಿಎಸ್‍ಟಿ ತಂದಿದೆ, ಲಾಕ್‍ಡೌನ್ ಹಾಗೂ ಇತ್ತೀಚೆಗೆ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದ್ದಾರೆ.

    ಜನಸಂಖ್ಯೆ ನಿಯಂತ್ರಣಕ್ಕೆ ಈ ಹಿಂದೆ ಕುಟುಂಬ ಕಲ್ಯಾಣ ಇಲಾಖೆಯಿಂದ ನಾವಿಬ್ಬರು, ನಮಗಿಬ್ಬರು ಘೋಷ ವಾಕ್ಯವನ್ನು ಜಾರಿಗೆ ತರಲಾಗಿತ್ತು. ಇದೇ ಘೋಷವಾಕ್ಯದ ಮೂಲಕ ಇದೀಗ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರಮಣ ಮಾಡಿದ್ದಾರೆ. ನೇರವಾಗಿ ಯಾರ ಹೆಸರನ್ನೂ ಹೇಳದೆ, ನಾವಿಬ್ಬರು, ನಮಗಿಬ್ಬರು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದರು.

    ಇತ್ತೀಚೆಗೆ ರೈತರು ಮಾತ್ರ ಹೋರಾಟ ನಡೆಸಿದ್ದಾರೆ. ಆದರೆ ಇದು ಕೇವಲ ರೈತರ ಹೋರಾಟ ಮಾತ್ರವಲ್ಲ. ಇದು ಇಡೀ ದೇಶದ ಹೋರಾಟವಾಗಿದೆ. ಹೋರಾಟದ ಪ್ರತಿನಿಧಿಗಳಾಗಿ ರೈತರು ಮಾತ್ರ ಭಾಗವಹಿಸಿದ್ದಾರೆ. ಇದು ಕೇವಲ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವಾಗಿದೆ. ಈ ಕಾನೂನುಗಳು ರೈತರನ್ನು ಹಾಳು ಮಾಡುವುದು ಮಾತ್ರವಲ್ಲ, ಮಧ್ಯವರ್ತಿಗಳನ್ನು ಮುಗಿಸಿ, ಸಣ್ಣ ಅಂಗಡಿಯವರು, ಸಣ್ಣ ಉದ್ಯಮಿಗಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತವೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭಾರೀ ಹೊಡೆತ ಬೀಳಲಿದೆ. ಈ ಕಾನೂನುಗಳು ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಭಾರತ ಬೆಳವಣಿಗೆ ಹೊಂದಲು ಸಾಧ್ಯವಾಗುವುದಿಲ್ಲ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಕಾರಣ ಹಮ್ ದೋ, ಹಮಾರೆ ದೋ ಪದ್ಧತಿ. ಇವರ ಲಾಭಕ್ಕಾಗಿ ನಮ್ಮ ದೇಶದ ಬೆನ್ನಲುಬನ್ನು ಸರ್ವ ನಾಶ ಮಾಡಲಾಗುತ್ತಿದೆ ಎಂದರು.

    ರಾಹುಲ್ ಗಾಂಧಿ ಮಾತನಾಡುವುದನ್ನು ಮುಗಿಸುವ ಸಂದರ್ಭದಲ್ಲಿ ಹುತಾತ್ಮ ರೈತರಿಗೆ 2 ನಿಮಿಷ ಮೌನಾಚರಣೆ ನಡೆಸಿದರು. ಸದನದ ಒಪ್ಪಿಗೆ ಪಡೆಯದೆ ಮೌನಾಚರಣೆ ಆಚರಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

  • ಪಾರ್ಲಿಮೆಂಟ್ ಎನೆಕ್ಷ್ ಕಟ್ಟಡದ 6ನೇ ಮಹಡಿಯಲ್ಲಿ ಬೆಂಕಿ ಅವಘಡ

    ಪಾರ್ಲಿಮೆಂಟ್ ಎನೆಕ್ಷ್ ಕಟ್ಟಡದ 6ನೇ ಮಹಡಿಯಲ್ಲಿ ಬೆಂಕಿ ಅವಘಡ

    ನವದೆಹಲಿ: ಇಂದು ಬೆಳಗ್ಗೆ ಪಾರ್ಲಿಮೆಂಟ್ ನ ಎನೆಕ್ಸ್ ಕಟ್ಟಡದ ಆರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಸದ್ಯ ಬೆಂಕಿಯನ್ನು ನಂದಿಸಲಾಗಿದೆ.

    ಕಟ್ಟಡದ ಆರನೇ ಮಹಡಿಯ ಎಲೆಕ್ಟ್ರಿಕ್ ಬೋರ್ಡ್ ಬಳಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕದಳಕ್ಕೆ ಪಾರ್ಲಿಮೆಂಟ್ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಐದು ವಾಹನಗಳಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ತಂಡ ಬೆಂಕಿ ನಂದಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

    ಅಧಿಕಾರಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಅಧಿಕಾರಿಗಳು ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    – ಬಿಜೆಪಿ ವಿರುದ್ಧ ಸಂಸತ್ತಿನ ಮುಂದೆ ಕೈ ಸಂಸದರ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮವನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ಸಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣವೆಂದು ಆರೋಪಿಸಿ ಸಂಸತ್ತಿನ ಮುಂದೆ ಕೈ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಕೈ ಸಂಸದರು ಭಾಗಿಯಾಗಿದ್ದರು. ಸಂಸತ್ತಿನ ಸಂಕೀರ್ಣದ ಮುಂದಿರುವ ಗಾಂಧೀಜಿ ಪುತ್ಥಳಿಯ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಫಲಕಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಈ ತಂತ್ರಗಾರಿಕೆ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ, ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಕೆಡವುದು ಬಿಜೆಪಿಯ ಪ್ಲಾನ್. ಅಲ್ಲದೆ ಸರ್ಕಾರದ ಸಂಖ್ಯಾಬಲ ಕಡಿಮೆಯಾಗಿದೆ, ಹೀಗಾಗಿ ಸಿಎಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು.

    ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಕೈತಪ್ಪಿ ಹೋಗಿದ್ದಾರೆ. ಒಟ್ಟು 15 ಮಂದಿ ಶಾಸಕರಲ್ಲಿ 10 ಮಂದಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿ ತಲುಪಲು ಕೇಸರಿ ಪಕ್ಷವೇ ಕಾರಣ. ಅವರಿಂದಲೇ ನಮ್ಮ ಪಕ್ಷಕ್ಕೆ ಈ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

  • ಸಂಸತ್‍ನಲ್ಲಿ ಕನ್ನಡದಲ್ಲಿ ಸುಮಲತಾ ಮೊದಲ ಮಾತು

    ಸಂಸತ್‍ನಲ್ಲಿ ಕನ್ನಡದಲ್ಲಿ ಸುಮಲತಾ ಮೊದಲ ಮಾತು

    – ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ

    ನವದೆಹಲಿ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕನ್ನಡದಲ್ಲಿ ಮಾತು ಆರಂಭಿಸಿ ಮಂಡ್ಯ ಜನತೆಗೆ ಶುಭ ಕೋರಿದ್ದಾರೆ.

    ಸುಮಲತಾ ಅಂಬರೀಶ್ ಅವರು ಸಂಸತ್ತಿನಲ್ಲಿ, ನನ್ನ ಹೆಮ್ಮೆಯ ಕ್ಷೇತ್ರವಾದ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದು ಮಂಡ್ಯ ಜನತೆಗೆ ಕನ್ನಡದಲ್ಲಿ ಶುಭಾಶಯ ಕೋರಿ ಇಂಗ್ಲಿಷ್‍ನಲ್ಲಿ ತಮ್ಮ ಮಾತನ್ನು ಮುಂದುವರಿಸಿದರು.

    ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರ ಮಂಡ್ಯದಲ್ಲಿ ಜನರು ತೀವ್ರ ಬರ ಎದುರಿಸುತ್ತಿದ್ದಾರೆ. ಮಾನ್ಸೂನ್ ಮಳೆ ನಿಗದಿತ ಪ್ರಮಾಣದಲ್ಲಿ ಬಂದಿಲ್ಲ. ಅಲ್ಲದೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಬ್ಬು ಹಾಗೂ ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

    ರೈತರು ಕೃಷಿ ಸಾಲ ತೀರಿಸಲಾರದ ಪರಿಸ್ಥಿತಿ ತಲುಪಿದ್ದಾರೆ. ನಾವು ಎಲ್ಲರೂ ಕೂಡಲೇ ರೈತರ ನೆರವಿಗೆ ಬರಬೇಕು. ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವರು ಈ ಬಗ್ಗೆ ತುರ್ತು ಗಮನ ಕೊಡಬೇಕು. ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸುಮಲತಾ ಮನವಿ ಮಾಡಿಕೊಂಡರು.

    ಸುಮಲತಾ ಅವರು ರೈತರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದಾದ ಬಳಿಕ ಸುಮಲತಾ ಅವರು ಜೈ ಜವಾನ್, ಜೈ ಕಿಸಾನ್, ಜೈ ಹಿಂದ್, ಜೈ ಕರ್ನಾಟಕ ಎಂದು ಘೋಷಣೆ ಮಾಡುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

  • ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಪ್ರಗ್ಯಾ ಸಿಂಗ್ ಠಾಕೂರ್ ವಿವಾದ

    ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಪ್ರಗ್ಯಾ ಸಿಂಗ್ ಠಾಕೂರ್ ವಿವಾದ

    ನವದೆಹಲಿ: ಲೋಕಸಭಾ ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿವಾದ ಸೃಷ್ಟಿಸಿದ್ದು, ತಮ್ಮ ಗುರುವಿನ ಹೆಸರನ್ನು ಉಲ್ಲೇಖಿಸುವ ಮೂಲಕ ವಿರೋಧ ಪಕ್ಷದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ‘ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಆದ ನಾನು, ಪೂರ್ಣ ಚೆತ್ನಾಂದ ಅವಧೇಶಾನಂದ ಗಿರಿ’ ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದಾರೆ. ಸಾಧ್ವಿ ಪ್ರಗ್ಯಾ ಸಿಂಗ್ ಅವರು ಪ್ರಮಾಣ ವಚನದ ಪದಗಳನ್ನೇ ಬದಲಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಗ್ಯಾ ಅವರು ತಮ್ಮ ಗುರು ಸ್ವಾಮಿ ಅವಧೇಶಾನಂದ ಗಿರಿ ಅವರ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೆವಿಟ್‍ನಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಹೆಸರು ಬಳಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.

    ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವೀರೇಂದ್ರ ಕುಮಾರ್, ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಅರಿವಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

    ಲೋಕಸಭಾ ಅಧಿಕಾರಿಗಳು ಇದೇ ವೇಳೆ ಪ್ರಗ್ಯಾ ಅವರಿಗೆ ತಮ್ಮ ತಂದೆಯ ಹೆಸರನ್ನು ಪ್ರಮಾಣ ವಚನ ಸಂದರ್ಭದಲ್ಲಿ ಉಲ್ಲೇಖಿಸುವಂತೆ ಸೂಚಿಸಿದ್ದಾರೆ. ಸ್ಪೀಕರ್ ವೀರೇಂದ್ರ ಕುಮಾರ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಚುನಾವಣಾ ಆಯೋಗ ನೀಡಿದ ವಿಜಯದ ಪತ್ರದಲ್ಲಿದ್ದಂತೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಕರೆದಿದ್ದಾರೆ. ಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾದ್ದರಿಂದ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಶಾಂತತೆ ಕಾಪಾಡುವಂತೆ ಅವರು ಸೂಚಿಸುತ್ತಿದ್ದರು.

    ಎರಡು ಬಾರಿ ಅಡಚಣೆ ಮಾಡಿದ ನಂತರ ಮೂರನೇ ಬಾರಿಗೆ ಪ್ರಗ್ಯಾ ಸಿಂಗ್ ಅವರು ತಮ್ಮ ಪ್ರಮಾಣ ವಚನವನ್ನು ಸ್ವೀಕರಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಎರಡು ಬಾರಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಜಯಗಳಿಸಿದ್ದಾರೆ.