Tag: parliament

  • Parliament Attack| ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದು ಫೇಮಸ್‌ ಆಗಬೇಕೆಂದುಕೊಂಡಿದ್ದ ಆರೋಪಿಗಳು

    Parliament Attack| ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದು ಫೇಮಸ್‌ ಆಗಬೇಕೆಂದುಕೊಂಡಿದ್ದ ಆರೋಪಿಗಳು

    – ಕಳೆದ ವರ್ಷ ಸಂಸತ್‌ ಮೇಲೆ ದಾಳಿ ನಡೆಸಿದ್ದ ಆರೋಪಿಗಳು
    – ಮೈಸೂರಿನ ಮನೋರಂಜನ್‌ ಪ್ರಮುಖ ಸಂಚುಕೋರ

    ನವದೆಹಲಿ: ಸಂಸತ್‌ ಮೇಲೆ ದಾಳಿ ನಡೆಸಲು (Parliament Security Breach) ಸಂಚು ರೂಪಿಸಿದ್ದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಬಯಸಿದ್ದರು ಎಂಬ ಸ್ಫೋಟಕ ಅಂಶ ಈಗ ಬಯಲಾಗಿದೆ.

    ಸಂಸತ್‌ನಲ್ಲಿ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 1 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಿದ್ದಾರೆ,

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಭಾರತದ (India) ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಂಬಿದ್ದ ಆರೋಪಿಗಳು ಅದನ್ನು ಬದಲಿಸಬೇಕು ಎನ್ನುವ ಉದ್ದೇಶ ಹೊಂದಿದ್ದರು. 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದು ಅದನ್ನು ಕಾರ್ಯಗತಗೊಳಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ತಮ್ಮ ನಡೆಯನ್ನು ಯೋಜಿಸಿದ್ದರು.  ಇದನ್ನೂ ಓದಿ: MUDA Scam | ಹೈಕೋರ್ಟ್‌ ತೀರ್ಪಿನ ಬಳಿಕ ರಾಜ್ಯದಲ್ಲಿ ಅಸಲಿ ಗೇಮ್‌ ಶುರು?

    ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಸ್ನೇಹಿತರಾಗಿದ್ದ ಇವರು ಮೈಸೂರು, ಗುರುಗ್ರಾಮ, ದೆಹಲಿ ಸೇರಿ ಐದು ಕಡೆ ಸಭೆ ನಡೆಸಿ ಸಂಸತ್ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು. ಈ ಮೂಲಕ ಶೀಘ್ರದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆಯಲು ಬಯಸಿದ್ದರು.

    ಮೈಸೂರಿನ ಮನೋರಂಜನ್ (Mysuru Manoranjan) ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಮೈಸೂರಿನಲ್ಲೇ ಮನೋರಂಜನ್ ನೇತೃತ್ವದಲ್ಲಿ ಮೊದಲ ಸಭೆ ನಡೆದಿತ್ತು. ಮೊದಲ ಸಭೆಯಲ್ಲಿ ಹತ್ತು ಮಂದಿ ಭಾಗಿಯಾಗಿದ್ದರು.

    ಸಭೆಯಲ್ಲಿ ಹಿಂಸಾತ್ಮಕ ವಿಡಿಯೋ ತೋರಿಸಿ, ಪ್ರತ್ಯೇಕ ಸಂಘಟನೆ ಹುಟ್ಟುಹಾಕುವ ಯೋಜನೆಯನ್ನು ಮನೋರಂಜನ್ ವಿವರಿಸಿದ್ದ. ಎರಡನೇ ಸಭೆಯನ್ನು ಹರ್ಯಾಣದ ಗುರುಗ್ರಾಮದಲ್ಲಿ ನಡೆಸಲಾಗಿತ್ತು. ಇದರಲ್ಲಿ ಏಳು ಮಂದಿ ಭಾಗಿಯಾಗಿದ್ದರು. ಕಾನೂನು ಉಲ್ಲಂಘನೆಯಾಗುವ ಭೀತಿಯಲ್ಲಿ ಮೊದಲ ಸಭೆಯಲ್ಲಿದ್ದ ಮೂವರು ಎರಡನೇ ಸಭೆಗೆ ಗೈರಾಗಿದ್ದರು.

    ತಂಡಕ್ಕೆ ಮಹಿಳೆಯರನ್ನು ಸೇರಿಕೊಳ್ಳುವ ಉದ್ದೇಶದಿಂದ ನೀಲಂಳನ್ನು ಸೇರಿಸಿಕೊಳ್ಳಲಾಗಿತ್ತು. ಬಳಿಕ ದೆಹಲಿಯಲ್ಲಿ ಮೂರನೇ ಸಭೆ ನಡೆಸಿದ್ದರು. ಕಡೆಯದಾಗಿ ಇಂಡಿಯಾ ಗೇಟ್ ಬಳಿ ಸೇರಿ ಅಲ್ಲಿಂದ ಸ್ಮೋಗ್ ಕ್ಯಾನ್ ಬಳಸಿ ದಾಳಿ ಮಾಡಲು ಸಂಸತ್ ಗೆ ತೆರಳಿದ್ದರು. ಇದನ್ನೂ ಓದಿ: ಅಕ್ಕಿ ಕೊಡ್ತೀವಿ ಅಂದ್ರೂ ರಾಜ್ಯ ಸರ್ಕಾರ ತಗೋತಿಲ್ಲ – ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ

    ಅಲ್ಟ್ರಾ ಮಾವೋವಾದಿ-ಪ್ರೇರಿತ ಚಿಂತನೆಯಿಂದ ಪ್ರಚೋದನೆಗೆ ಒಳಗಾಗಿದ್ದ ಮನೋರಂಜನ್‌ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದ್ದ. ಅರ್ಧದಲ್ಲೇ ಎಂಜಿನಿಯರಿಂಗ್ ಕೋರ್ಸ್‌ ಬಿಟ್ಟಿದ್ದ ಮನೋರಂಜನ್‌ 2014 ರಲ್ಲಿ ಕಾಂಬೋಡಿಯಾಗೆ ಪ್ರಯಾಣ ಬೆಳೆಸಿ ಅಲ್ಲಿ 8 ತಿಂಗಳು ತಂಗಿದ್ದ.

    ಭಾರತಕ್ಕೆ ಮರಳಿದ ನಂತರ 2015 ರಲ್ಲಿ ಮೋಟಾರ್‌ಸೈಕಲ್‌ನಲ್ಲಿ ಲಡಾಖ್‌ಗೆ ಪ್ರಯಾಣಿಸಿದ್ದ. ಲಡಾಖ್‌ ಪ್ರವಾಸದ ಸಮಯದಲ್ಲಿ  ಹೈದರಾಬಾದ್‌ನಲ್ಲಿ ಓದುತ್ತಿದ್ದ ಒಬ್ಬ ಚೀನೀ ವಿದ್ಯಾರ್ಥಿಯ ಸ್ನೇಹವಾಗುತ್ತದೆ. ಅತನ ಜೊತೆ ದೆಹಲಿಯವರೆಗೆ ಮನೋರಂಜನ್‌ ಸವಾರಿ ಮಾಡಿದ್ದ.

    ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಅವರನ್ನು ದಾಳಿ ಮಾಡಿದ ದಿನವಾದ 2013ರ ಡಿ.13 ರಂದು ಬಂಧಿಸಲಾಗಿತ್ತು. ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ಕ್ರಮವಾಗಿ ಡಿಸೆಂಬರ್ 15 ಮತ್ತು 16 ರಂದು ಬಂಧಿಸಲಾಯಿತು. ಎಲ್ಲಾ ಆರೋಪಿಗಳು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

    ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ 16 ಮತ್ತು 18 ರ ಅಡಿಯಲ್ಲಿ ದೆಹಲಿ ಪೋಲೀಸ್‌ನ ಭಯೋತ್ಪಾದನಾ-ವಿರೋಧಿ ಘಟಕ, ಸ್ಪೆಷಲ್‌ ಸೆಲ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.

     

  • 2030ರಲ್ಲೂ ನಾವಿಲ್ಲೇ ಇರುತ್ತೇವೆ; ನೀವಲ್ಲೇ.. ಇರುತ್ತೀರಿ: ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್‌

    2030ರಲ್ಲೂ ನಾವಿಲ್ಲೇ ಇರುತ್ತೇವೆ; ನೀವಲ್ಲೇ.. ಇರುತ್ತೀರಿ: ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್‌

    ನವದೆಹಲಿ: 2030 ರಲ್ಲೂ ನಾವು ಇಲ್ಲೇ ಇರುತ್ತೇವೆ. ನೀವು ಅಲ್ಲೇ ಇರುತ್ತೀರಿ ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟರು.

    ಸದನದಲ್ಲಿ ಇಲಾಖೆ ಕಾರ್ಯ ಯೋಜನೆ ಸಾಧನೆ ಬಗ್ಗೆ ಪ್ರಸ್ತಾಪಿಸುತ್ತಿದ್ದ ವೇಳೆ ಪ್ರತಿಪಕ್ಷ ಸದಸ್ಯರ ಮಾತಿಗೆ ಹೀಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಆ.9 ಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ‌ 2 ಲಕ್ಷ‌ ಜನ ಸೇರಿಸುವ ಗುರಿ

    ನೀವು ಕಳೆದ ಹತ್ತು ವರ್ಷದಿಂದ ಹತಾಶರಾಗಿದ್ದೀರಿ. ಆದರೆ ನಾವು ಆಶಯ ಹೊಂದಿದ್ದೇವೆ. ಈ ಐದು ವರ್ಷ ಮಾತ್ರವಲ್ಲ, 2030 ರಲ್ಲೂ ನಾವು ಅಧಿಕಾರಕ್ಕೆ ಬರುತ್ತೇವೆ. ನಾವು ಮಂತ್ರಿಯಾಗಿ ಸದನಕ್ಕೆ ಮಾಹಿತಿ ಕೊಡುತ್ತಲೇ ಇರುತ್ತೇವೆ. ನೀವು ಅಲ್ಲಿ ಕೇಳಿಸಿಕೊಳ್ಳುತ್ತಲೇ ಇರುತ್ತೀರಿ ಎಂದು ವಿಪಕ್ಷ ಸದಸ್ಯರನ್ನು ಕುಟುಕಿದರು.

    ನಮಗೆ ಹೆಮ್ಮೆಯಿದೆ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 500GW ಸಾಮರ್ಥ್ಯವನ್ನು ಸಾಧಿಸಿದ ವಿಚಾರವನ್ನು ಹಂಚಿಕೊಳ್ಳಲು ನಮಗೆ ಹೆಮ್ಮೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದ ಡಾ.ಕೆ.ಸುಧಾಕರ್‌

    ಯುಪಿಎ ಅವಧಿಯಲ್ಲಿ ಹಗರಣದ್ದೇ ಸಾಧನೆ: ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಯೋಜನೆಗಳ ಒಟ್ಟು ಮೊತ್ತ 1,60,000 ಕೋಟಿ ರೂ. ಆಗಿದೆ. ಆದರೆ, ಯುಪಿಎ ಆಡಳಿತದ ಅವಧಿಯಲ್ಲಿ ಇಷ್ಟು ಮೊತ್ತದ ಹಗರಣಗಳೇ ನಡೆದಿವೆ ಎಂದು ಜೋಶಿ ತಿರುಗೇಟು ಕೊಟ್ಟರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತೀಯರ ಕಲ್ಯಾಣಕ್ಕಾಗಿ ಪ್ರತಿ ಯೋಜನೆಯೂ ಹೀಗೆ ಬೃಹತ್ ಮೊತ್ತದ್ದಾಗಿದೆ ಎಂದರು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದಲ್ಲಿ ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಶೇ.165ರಷ್ಟು ಏರಿಕೆ ಕಂಡಿದೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್‌ ಕೊಟ್ಟಿಲ್ಲ: ಟಿಜೆ ಅಬ್ರಹಾಂ

    2014ರಲ್ಲಿ ಕೇವಲ 76.38 GW ಉತ್ಪಾದನಾ ಸಾಮರ್ಥ್ಯ ಇತ್ತು. ಕಳೆದ 10 ವರ್ಷಗಳಲ್ಲಿ ಶೇ.165 ರಷ್ಟು ವೃದ್ಧಿಸಿದ್ದು, ಪ್ರಸ್ತುತ 2003.1 GW ತಲುಪಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಮಾಹಿತಿ ನೀಡಿದರು.

  • ಶಿರೂರು ಗುಡ್ಡ ಕುಸಿತ ಪ್ರಕರಣ; ಸಂಸತ್‌ನಲ್ಲಿ ಧ್ವನಿ ಎತ್ತಿದ ಕಾಗೇರಿ

    ಶಿರೂರು ಗುಡ್ಡ ಕುಸಿತ ಪ್ರಕರಣ; ಸಂಸತ್‌ನಲ್ಲಿ ಧ್ವನಿ ಎತ್ತಿದ ಕಾಗೇರಿ

    ಕಾರವಾರ/ನವದೆಹಲಿ: ಶಿರೂರು ಗುಡ್ಡ ಕುಸಿತ (Shirur Landslide) ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri) ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಭೂಕುಸಿತವಾಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣ. ಶಿರೂರು ಭೂಕುಸಿತದಲ್ಲಿ ಮೃತರಾದವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ನೀಡಬೇಕು. NDRFನ ಮತ್ತೊಂದು ತಂಡವನ್ನು ಶಿರೂರಿಗೆ ಶೋಧ ಕಾರ್ಯ ನಡೆಸಲು ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Shirur Landslide; ನಾಪತ್ತೆಯಾದವರ ಕುಟುಂಬಸ್ಥರ ಕಣ್ಣೀರು ನೋಡಿ ಮತ್ತೆ ಕಾರ್ಯಾಚರಣೆ ನಿರ್ಧಾರ: ಈಶ್ವರ್ ಮಲ್ಪೆ

    ವಯನಾಡಿನಲ್ಲಿ ಆಗಿರುವಂತೆ ಶಿರೂರಿನಲ್ಲಿ ಸಹ ಗುಡ್ಡ ಕುಸಿತವಾಗಿದೆ. ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಮಾಡುವಾಗ ವೈಜ್ಞಾನಿಕ ಅಧ್ಯಯನದ ವರದಿ ಮೂಲಕ ಅಭಿವೃದ್ಧಿ ಮಾಡಬೇಕು. ಪಶ್ಚಿಮಘಟ್ಟ ಬಹಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅದರ ಕ್ಯಾರಿಂಗ್ ಕ್ಯಪಾಸಿಟಿ ಅಧ್ಯಯನ ಆಗುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿರುವ ಕೆಲಸ ಅವೈಜ್ಞಾನಿಕವಾಗಿದೆ. ಅವೈಜ್ಞಾನಿಕವಾಗಿರುವುದರಿಂದಲೇ ಗುಡ್ಡ ಕುಸಿದಿದೆ ಎಂಬುದಾಗಿ ಹೇಳಲಾಗುತ್ತಿದೆ ಎಂದು ಸಂಸತ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: Landslide In Karnataka: ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ

    ಮುಂದಿನ ದಿನಗಳಲ್ಲಿಯಾದರೂ ಕಾಮಗಾರಿ ಮಾಡುವಾಗ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಆಗಬೇಕು ಎಂದು ಸಂಸತ್‌ನಲ್ಲಿ ಕಾಗೇರಿ, ಜಿಲ್ಲೆಯ ಸಮಸ್ಯೆ ಕುರಿತು ಸಂಸತ್ ಗಮನಕ್ಕೆ ತಂದಿದ್ದಾರೆ.

  • 8,500 ರೂ. ಬಂದಿದ್ಯಾ ಇಲ್ವಾ ಅಂತಾ ಜನ ಬ್ಯಾಂಕ್ ಖಾತೆ ಚೆಕ್ ಮಾಡ್ತಿದ್ದಾರೆ- ರಾಗಾಗೆ ಮೋದಿ ಟಾಂಗ್

    8,500 ರೂ. ಬಂದಿದ್ಯಾ ಇಲ್ವಾ ಅಂತಾ ಜನ ಬ್ಯಾಂಕ್ ಖಾತೆ ಚೆಕ್ ಮಾಡ್ತಿದ್ದಾರೆ- ರಾಗಾಗೆ ಮೋದಿ ಟಾಂಗ್

    ನವದೆಹಲಿ: ಜುಲೈ 1 ರಂದು ಜನರು 8,500 ರೂ. ಬಂದಿದ್ಯಾ ಇಲ್ವ ಅಂತಾ ಬ್ಯಾಂಕ್ ಖಾತೆ ಚೆಕ್ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್ ನೀಡಿದರು.

    ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ, ಇದು ಕಾಂಗ್ರೆಸ್‍ನ ಸುಳ್ಳಿಗೆ ದೊಡ್ಡ ಉದಾಹರಣೆ. ಈ ಸುಳ್ಳಿನಿಂದ ಮಹಿಳೆಯರಿಗೆ ನೋವಾಗಿದೆ, ಅವರು ಪಾಠ ಕಲಿಸಲಿದ್ದಾರೆ. ಇವಿಎಂ, ಸಂವಿಧಾನ, ಮೀಸಲಾತಿ ಎಲ್ಲದರಲ್ಲೂ ಸುಳ್ಳು. ಇದಕ್ಕೂ ಮೊದಲು ಎಲ್‍ಐಸಿ, ಬಿಇಎಲ್, ರಫೇಲ್ ವಿಚಾರದಲ್ಲೂ ಸುಳ್ಳು ಹೇಳಿದರು. ಸೋಮವಾರ ಅಗ್ನಿವೀರ್ ವಿಚಾರದಲ್ಲಿ ಸದನದಲ್ಲಿ ಸುಳ್ಳು ಹೇಳಲಾಯಿತು. ಕನಿಷ್ಠ ಬೆಂಬಲ ಬೆಲೆ (MSP) ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಸದನದಲ್ಲಿ ಹೇಳುವ ಸುಳ್ಳು, ಅದರ ಗೌರವಕ್ಕೆ ಧಕ್ಕೆ ತಂದಿದೆ ಎಂದು ರಾಹುಲ್ ಗಾಂಧಿಯನ್ನು (Rahul Gandhi) ಟಾರ್ಗೆಟ್ ಮಾಡಿದರು.

    ತುರ್ತು ಪರಿಸ್ಥಿತಿಯ ಐವತ್ತನೇ ವರ್ಷ. ಅಧಿಕಾರಕ್ಕಾಗಿ ಸರ್ವಾಧಿಕಾರಿ ಶಾಸನ ಹೇರಲಾಯಿತು. ಕಾಂಗ್ರೆಸ್ (Congress) ಕ್ರೂರತೆಯ ಎಲ್ಲೆ ಮೀರಿತ್ತು. ಸರ್ಕಾರ ಬೀಳಿಸುವುದು, ಮಾಧ್ಯಮ ನಿಯಂತ್ರಣ ಮೂಲಕ ಸಂವಿಧಾನದ ವಿರುದ್ಧ ಕಾಂಗ್ರೆಸ್ ನಡೆದುಕೊಂಡಿದೆ. ದಲಿತರು, ಹಿಂದುಳಿದ ಜನರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಇದೇ ಕಾರಣಕ್ಕಾಗಿ ಅಂಬೇಡ್ಕರ್, ನೆಹರು ಸಂಪುಟದಿಂದ ರಾಜೀನಾಮೆ ನೀಡಿ ಹೊರ ಬಂದರು. ಅಂಬೇಡ್ಕರ್ ರಾಜೀನಾಮೆ ನೀಡುವ ವೇಳೆ ಕಾರಣ ನೀಡಿದ್ದರು. ಆ ಕಾರಣ ಕಾಂಗ್ರೆಸ್ ಚರಿತ್ರೆ ಹೇಳುತ್ತದೆ. ಎಸ್‍ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಬಳಿಕ ನೆಹರು ಅಂಬೇಡ್ಕರ್ ರಾಜಕೀಯ ಜೀವನ ಮುಗಿಸಲು ಎಲ್ಲ ಪ್ರಯತ್ನ ಮಾಡಿದರು. ಷಡ್ಯಂತ್ರ ಮಾಡಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಆ ಸೋಲಿಯ ವಿಜಯೋತ್ಸವ ಮಾಡಲಾಯಿತು, ಇದು ಒಂದು ಪತ್ರದಲ್ಲಿ ದಾಖಲಾಗಿದೆ ಎಂದು ಹೇಳಿದರು.

    ಬಾಬು ಜಗಜೀವನ್ ರಾವ್ ಅವರಿಗೆ ಅವರ ಹಕ್ಕು ನೀಡಲಿಲ್ಲ. ತುರ್ತು ಪರಿಸ್ಥಿತಿ ಬಳಿಕ ಜಗಜೀವನ್ ರಾವ್ ಪ್ರಧಾನಿಯಾಗಬೇಕಿತ್ತು. ಯಾವುದೇ ಕಾರಣಕ್ಕೆ ರಾವ್ ಪ್ರಧಾನಿಯಾಗಬಾರದು ಎಂದು ಇಂದಿರಾಗಾಂಧಿ ಹೇಳಿದ್ದರು. ಚೌಧರಿ ಚರಣ್ ಸಿಂಗ್ ವಿಚಾರದಲ್ಲಿ ಹೀಗೆ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು

    ಕಾಂಗ್ರೆಸ್ ಮೀಸಲಾತಿ ವಿರೋಧಿಯಾಗಿತ್ತು. ಸಿಎಂಗಳಿಗೆ ಪತ್ರ ಬರೆದು ನೆಹರು ಮೀಸಲಾತಿ ವಿರೋಧಿಸಿದ್ದರು. ಮಂಡಲ ಕಮಿಷನ್ ವರದಿ ತಡೆ ಹಿಡಿಯಲಾಯಿತು. ರಾಜೀವ್ ಗಾಂಧಿ ವಿರೋಧ ಪಕ್ಷದಲ್ಲಿದ್ದಾಗ ಮೀಸಲಾತಿ ವಿರುದ್ಧ ಮಾತನಾಡಿದ್ದರು. ಸಂಸತ್ ನ ರೆಕಾರ್ಡ್ ನಲ್ಲಿ ಈಗಲೂ ಈ ದಾಖಲೆ ಇದೆ ಎಂದರು.

    ಸೋಮವಾರ ಸದನದಲ್ಲಿ ನಡೆದ ಬೆಳವಣಿಗೆಯನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ. 131 ವರ್ಷ ಹಿಂದೆ ಸ್ವಾಮಿ ವಿವೇಕಾನಂದ ಹೇಳಿದ್ದರು. ಇಡೀ ವಿಶ್ವಕ್ಕೆ ಸಹಿಷ್ಣುತೆ ಕಲಿಸಿದ ಧರ್ಮ ನನ್ನದು ಎಂದು ಹೇಳಿದ್ದರು. ಹಿಂದೂ ಸಹಿಷ್ಣುತೆಯ ಧರ್ಮ, ಎಲ್ಲರೂ ತನ್ನವರು ಎಂದು ಜೀವಿಸುವ ಧರ್ಮ ಅದಕ್ಕಾಗಿ ಭಾರತ ವೈವಿಧ್ಯಮಯವಾಗಿದೆ. ಆದರೆ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ, ಗಂಭೀರ ಷಡ್ಯಂತ್ರ ಮಾಡಲಾಗುತ್ತಿದೆ. ಹಿಂದೂ ಹಿಂಸಕರು ಎಂದು ಹೇಳಿದ್ದಾರೆ. ಇದು ನಿಮ್ಮ ಆಲೋಚನೆಯಾ?. ಈ ದೇಶ ಇದನ್ನು ಎಂದಿಗೂ ಮರೆಯುವುದಿಲ್ಲ. ಶಕ್ತಿಯ ವಿನಾಶದ ಬಗ್ಗೆ ಮಾತನಾಡುತ್ತಾರೆ. ಹಿಂದೂ ಆತಂಕವಾದ ಶಬ್ದ ಬಳಕೆಯ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

    ಈಶ್ವರದ ಪ್ರತಿ ರೂಪ ದರ್ಶನಕ್ಕಾಗಿದೆ. ಈಶ್ವರನ ಯಾವ ರೂಪ ಸ್ವಾರ್ಥ ಪ್ರದರ್ಶನಕ್ಕಾಗಿಲ್ಲ. ದೇವಾನುದೇವತೆಗಳ ಅಪಮಾನ ದೇಶದ ಜನರಿಗೆ ನೋವು ಮಾಡಿದೆ. ದೇಶದ ಜನರು ಇದನ್ನು ಕ್ಷಮಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

  • ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್‌ ತರಾಟೆ

    ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್‌ ತರಾಟೆ

    ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಮಂಗಳವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡರು.

    ಇಂದು ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಪ್ರದಾನಿಯವರು ಭಾಷಣ ಪ್ರಾರಂಭ ಮಾಡುತ್ತಿದ್ದಂತೆಯೇ ವಿಪಕ್ಷ ನಾಯಕರು ಸಿಡಿದೆದ್ದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತೆ ರಾಹುಲ್ ಗಾಂಧಿಯವರು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಈ ಮೂಲಕ ಪ್ರಧಾನಿ ಭಾಷಣಕ್ಕೆ ತಡೆಯೊಡ್ಡಲು ಮುಂದಾದರು.

    ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರು, ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಗಾಗೆ ಸ್ಪೀಕರ್‌ ತಿಳಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು

    ಸ್ಪೀಕರ್‌ ಹೇಳಿದ್ದೇನು..?: ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿಹೊಂದುವುದಿಲ್ಲ. ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಸಮಯವನ್ನು ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ. ಸದಸ್ಯರನ್ನು ಸದನದ ಬಾವಿಗೆ ಬರುವಂತೆ ನಿರ್ದೇಶಿಸುತ್ತಿದ್ದೀರಾ? ಇದಕ್ಕಾಗಿ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರೇ? ಬಿರ್ಲಾ ಅವರು ರಾಹುಲ್ ಗಾಂಧಿಗೆ ಛೀಮಾರಿ ಹಾಕಿದರು. ‌

  • ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು

    ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು

    – ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಸಂಸತ್‌ನಲ್ಲಿ ಮೋದಿ ಮೊದಲ ಭಾಷಣ

    ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸತ್‌ನಲ್ಲಿ ನರೇಂದ್ರ ಮೋದಿ (Narendra Modi) ಅವರು ಮೊದಲ ಭಾಷಣ ಮಾಡಿದರು. ಭಾಷಣದುದ್ದಕ್ಕೂ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

    ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿಗಳು ನಮಗೆ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅದಕ್ಕಾಗಿ ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ನಿನ್ನೆ ಮತ್ತು ಇಂದು ಬಹಳಷ್ಟು ನಾಯಕರು ಈ ಭಾಷಣದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಆಯ್ಕೆಯಾಗಿ ಬಂದ ಸಂಸದರು ಮಾತನಾಡಿದರು. ಅನುಭವಿ ಸಂಸದರ ರೀತಿಯಲ್ಲಿ ಮಾತನಾಡಿದರು. ಮೊದಲ ಸಲವಾದರೂ ಸದನ ಗೌರವ ಹೆಚ್ಚಿಸಿದ್ದಾರೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್‌ ತರಾಟೆ

    ವಿಶ್ವದ ಅತಿದೊಡ್ಡ ಚುನಾವಣೆ ಭಾರತದಲ್ಲಿ ನಡೆದಿದೆ. ದೇಶದ ಜನರು ಈ ಚುನಾವಣಾ ಅಭಿಯಾನದಲ್ಲಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾನು ಕೆಲವರ ನೋವು ಅರ್ಥ ಮಾಡಿಕೊಳ್ಳಬಲ್ಲೆ. ಸಾಕಷ್ಟು ಪ್ರಯತ್ನದ ಬಳಿಕ ಸೋತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ವೇಳೆ ವಿಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಿದರು. ಗದ್ದಲದ ನಡುವೆಯೂ ಮೋದಿ ತಮ್ಮ ಭಾಷಣ ಮುಂದುವರಿಸಿದರು.

    ಭಾರತದ ಜನರು ಮೂರನೇ ಬಾರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸಾಕಷ್ಟು ಯೋಚಿಸಿಯೇ ದೇಶದ ಜನರು ಜನಾದೇಶ ನೀಡಿದ್ದಾರೆ. ಹತ್ತು ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹೇಗೆ ಕೆಲಸ ಮಾಡಿದ್ದೇವೆ ಎಂದು ಜನರು ಗಮನಿಸಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದ್ದೇವೆ. ಸ್ವಾತಂತ್ರ್ಯದ ಬಳಿಕ ಇಷ್ಟು ದೊಡ್ಡ ಮಟ್ಟದಲ್ಲಿ ಬಡತನ ನಿರ್ಮೂಲಕ ಮಾಡುವ ಯತ್ನ ನಡೆದಿಲ್ಲ. 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ವಿರುದ್ಧ 0% ಸಹಿಷ್ಣುತೆ ಹೊಂದಿದ್ದೇವೆ ಅಂತಾ ಹೇಳಿದ್ದೇವೆ. ಅದರಂತೆ ಭ್ರಷ್ಟಾಚಾರ ವಿರುದ್ಧ ನೀತಿಗಳನ್ನು ರೂಪಿಸಿದ್ದೇವೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಕೇಜ್ರಿವಾಲ್‌ ಬಂಧನ- ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

    ವಿಶ್ವದಲ್ಲಿ ಭಾರತಕ್ಕೆ ಗೌರವ ಸಿಗುತ್ತಿದೆ. ಎಲ್ಲ ದೇಶಗಳು ಗೌರವದಿಂದ ನೋಡುತ್ತಿವೆ. ದೇಶ ಮೊದಲು ಎನ್ನುವ ನಿಲುವು ಹೊಂದಿದ್ದೇವೆ. ನಮ್ಮ ಪ್ರತಿ ಕೆಲಸದಲ್ಲೂ ಇದೇ ಭಾವನೆಯಲ್ಲಿ ಕೆಲಸ ಮಾಡಿದ್ದೇವೆ. ಹತ್ತು ವರ್ಷದಲ್ಲಿ ನಮ್ಮ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ದೇಶ ದೀರ್ಘಾವಧಿ ತುಷ್ಟೀಕರಣ ರಾಜಕೀಯ ನೋಡಿದೆ. ಮೊದಲ ಬಾರಿಗೆ ಎನ್‌ಡಿಎ ಜಾತ್ಯತೀತ ಸರ್ಕಾರ ನೀಡಿದೆ. ತುಷ್ಟೀಕರಣ ಅಲ್ಲ, ಸಂತುಷ್ಟೀಕರಣ ಸರ್ಕಾರವನ್ನು ಜನರು ನೋಡಿದ್ದಾರೆ. ಪ್ರತಿ ಯೋಜನೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದೇವೆ ಎಂದು ಹೇಳಿದರು.

  • ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಬೆಂಗಳೂರು: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು (New Criminal Laws) ಜಾರಿಯಾಗಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BSN), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ 63 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸ್‌ ಇಲಾಖೆ (Police department) ಮಾಹಿತಿ ನೀಡಿದೆ.

    ಭಾರತೀಯ ನ್ಯಾಯ ಸಂಹಿತೆ ಕಾನೂನು ಅಡಿಯಲ್ಲಿ ಸೋಮವಾರ (ಜು.1) ಒಂದೇ ದಿನ ರಾತ್ರಿ 8 ಗಂಟೆ ವರೆಗೆ 63 ಎಫ್‌ಐಆರ್ (FIR) ದಾಖಲಾಗಿದೆ ಎಂದು ಮಾಹಿತಿ ನೀಡಿದೆ.

    ಬ್ರಿಟಿಷ್ ಕಾಲದ ಕಾನೂನಿಗೆ ಗುಡ್‌ಬೈ:
    ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

    ಪ್ರಮುಖ ಸೆಕ್ಷನ್‌ಗಳು ಯಾವುವು?
    420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್ 420ರ ಅಡಿ ಕೇಸ್ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 318 ಆಗಿದೆ.
    302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
    307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್ 103 ಆಗಿದೆ.
    376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
    304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
    304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
    359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್ 137 ಆಗಿದೆ.
    309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್ ಅಡಿ 226 ಆಗಿದೆ.

  • ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್‌ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

    ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್‌ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

    – ರಾಗಾ ಹೇಳಿಕೆಗೆ ಓಂ ಬಿರ್ಲಾ ಸ್ಪಷ್ಟನೆ

    ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದಾಗ ತಲೆಬಾಗಿ ನಮಸ್ಕರಿಸಿದ್ದರು. ಆದರೆ ರಾಹುಲ್‌ ಗಾಂಧಿ ಮುಂದೆ ನೇರವಾಗಿ ನಿಂತು ಕೈ ಕುಲುಕಿದ್ದರು. ಈ ವಿಚಾರವನ್ನು ವಿರೋಧ ಪಕ್ಷದ ನಾಯಕ ರಾಗಾ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

    ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಲೋಕಸಭಾ ಸ್ಪೀಕರ್ ಆಯ್ಕೆ ದಿನವನ್ನು ಉಲ್ಲೇಖಿಸಿ, ನಾನು ನಿಮ್ಮೊಂದಿಗೆ ಕೈಕುಲುಕಿದಾಗ ನೀವು ನೇರವಾಗಿ ನಿಂತು ನನ್ನ ಕೈಕುಲುಕಿದ್ದೀರಿ. ಆದರೆ ಮೋದಿಜಿ ಕೈಕುಲುಕಿದಾಗ ತಲೆಬಾಗಿ ನಮಸ್ಕರಿಸಿ ಕೈಕುಲುಕಿದ್ದೀರಿ ಎಂದು ಹೇಳಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದು, ಇದು ಪೀಠಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಇಡೀ ಹಿಂದೂ ಸಮಾಜ ಅವಮಾನಿಸಿದ್ದಾರೆ: ಅಶ್ವಿನಿ ವೈಷ್ಣವ್

    ರಾಹುಲ್‌ ಗಾಂಧಿಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್‌ ಓಂ ಬಿರ್ಲಾ (Om Birla) ಅವರು, ಪ್ರಧಾನಿಯವರು ಸದನದ ನಾಯಕ. ಸಾರ್ವಜನಿಕ ಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ನಮಗಿಂತ ಹಿರಿಯರನ್ನು ಭೇಟಿಯಾದಾಗ ಅವರಿಗೆ ತಲೆಬಾಗಿ ನಮಸ್ಕರಿಸಿ ಗೌರವ ನೀಡುವುದು ನಮ್ಮ ಸಂಸ್ಕೃತಿಯಾಗಿದೆ. ನಾನು ಈ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅನುಸರಿಸುತ್ತೇನೆ. ಹಿರಿಯರಿಗೆ ನಮಸ್ಕರಿಸುವುದು ಮತ್ತು ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ಕೂಡ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬಿರ್ಲಾ ಮಾತಿಗೆ ಮತ್ತೆ ಪ್ರತಿಕ್ರಿಯಿಸಿದ ರಾಗಾ, ಸ್ಪೀಕರ್‌ ಅವರ ಮಾತನ್ನು ಗೌರವಿಸುತ್ತೇನೆ. ಆದರೆ ಈ ಸದನದಲ್ಲಿ ನಿಮಗಿಂತ ದೊಡ್ಡವರು ಯಾರೂ ಇಲ್ಲ. ಇಲ್ಲಿ ನಿಮ್ಮ ಮಾತೇ ಕೊನೆಯದು. ಎಲ್ಲರೂ ನಿಮ್ಮನ್ನು ಗೌರವಿಸಬೇಕು. ನಾನು ನಿಮ್ಮ ಮುಂದೆ ತಲೆಬಾಗುತ್ತೇನೆ ಮತ್ತು ಇಡೀ ಪ್ರತಿಪಕ್ಷಗಳು ನಿಮ್ಮ ಮುಂದೆ ತಲೆಬಾಗುತ್ತವೆ. ಲೋಕಸಭಾ ಸದಸ್ಯರಾದ ನಾವು ಸ್ಪೀಕರ್‌ಗೆ ಅಧೀನರಾಗಿದ್ದೇವೆ. ನೀವು ಏನು ಹೇಳಿದರೂ ನಾವು ಕೇಳುತ್ತೇವೆ. ಆದರೆ ಸದನದಲ್ಲಿ ನಿಷ್ಪಕ್ಷಪಾತವಾಗಿರುವುದು ಮುಖ್ಯ ಎಂದು ಹೇಳಿದರು.

  • ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರೋ ರಾಹುಲ್ ಗಾಂಧಿಗೆ ಯಾವೆಲ್ಲಾ ಅಧಿಕಾರಗಳಿವೆ?- ಯಾಕೆ ಈ ಹುದ್ದೆ ಮುಖ್ಯ?

    ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರೋ ರಾಹುಲ್ ಗಾಂಧಿಗೆ ಯಾವೆಲ್ಲಾ ಅಧಿಕಾರಗಳಿವೆ?- ಯಾಕೆ ಈ ಹುದ್ದೆ ಮುಖ್ಯ?

    ತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಸಂಸದ 54 ವರ್ಷದ ರಾಹುಲ್ ಗಾಂಧಿ (Rahul Gandhi) ಅವರನ್ನು ಕೊನೆಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಇತ್ತೀಚೆಗೆ ನಡೆದ ಇಂಡಿಯಾ ಬ್ಲಾಕ್ ಸಭೆಯಲ್ಲಿ ರಾಹುಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಇದಾದ ನಂತರ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಂಗಾಮಿ ಸ್ಪೀಕರ್ ಭರ್ತ್ರಿಹರಿ ಮಹತಾಬ್ ಅವರಿಗೆ ಪತ್ರ ಬರೆದು ಈ ನಿರ್ಧಾರವನ್ನು ತಿಳಿಸಿದ್ದಾರೆ. ಜೂನ್ 26 ರಂದು ರಾಹುಲ್ ಸದನದಲ್ಲಿ ಜವಾಬ್ದಾರಿ ವಹಿಸಿಕೊಂಡರು.

    ಹೌದು. 2014ರಲ್ಲಿ ಮೋದಿ ಸರ್ಕಾರ ರಚನೆಯಾದ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಕಳೆದ 10 ವರ್ಷಗಳಿಂದ ಖಾಲಿ ಉಳಿದಿತ್ತು. ಸದ್ಯ ರಾಹುಲ್ ಗಾಂಧಿ ಈ ಸ್ಥಾನವನ್ನು ತುಂಬಿದ್ದಾರೆ. ಈ ಮೂಲಕ ರಾಗಾಗೆ ಸಂಪುಟ ಸಚಿವ ಸ್ಥಾನಮಾನ ಸಿಕ್ಕಿದೆ. ಇದು ಪ್ರೊಟೋಕಾಲ್ ಪಟ್ಟಿಯಲ್ಲಿ ಅವರ ಸ್ಥಾನವನ್ನು ಹೆಚ್ಚಿಸುತ್ತದೆ ಮತ್ತು ವಿರೋಧ ಪಕ್ಷದ ಮೈತ್ರಿಕೂಟದ ಪ್ರಧಾನಿಗೆ ಅವರು ಸಹಜ ಸ್ಪರ್ಧಿಯಾಗಬಹುದು. ಎರಡೂವರೆ ದಶಕಗಳಿಗೂ ಹೆಚ್ಚು ಕಾಲದ ತಮ್ಮ ರಾಜಕೀಯ ಜೀವನದಲ್ಲಿ ರಾಹುಲ್ ಗಾಂಧಿ ನಿರ್ವಹಿಸಿದ ಮೊದಲ ಸಾಂವಿಧಾನಿಕ ಹುದ್ದೆ ಇದಾಗಿದೆ. ರಾಹುಲ್ 5ನೇ ಬಾರಿ ಸಂಸದರಾಗಿದ್ದಾರೆ. ಕೈಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶೇಷವಾಗಿತ್ತು.

    ಐದನೇ ಬಾರಿಗೆ ಸಂಸದ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಗೆದ್ದಿದ್ದಾರೆ. ಆದರೆ ಅವರು ವಯನಾಡ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ವಯನಾಡಿನಲ್ಲಿ ಉಪಚುನಾವಣೆ ನಡೆಯಲಿದ್ದು, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ. 2004ರಲ್ಲಿ ರಾಜಕೀಯ ಪ್ರವೇಶಿಸಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಅಮೇಠಿಯಿಂದ ಮೊದಲ ಬಾರಿಗೆ ಗೆದ್ದಿದ್ದರು. ಅವರು ಅಮೇಥಿಯಿಂದ 3 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. 2019ರಲ್ಲಿ ಅವರು ವಯನಾಡಿನಿಂದ ಗೆದ್ದಿದ್ದರು.

    ಹುದ್ದೆಗೆ ಏಕೆ ಮಹತ್ವ..?: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ 1977 ರಲ್ಲಿ ಶಾಸನಬದ್ಧ ಮಾನ್ಯತೆ ನೀಡಲಾಯಿತು. ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ಸಂಸತ್ತಿನ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸಾಂವಿಧಾನಿಕ ಹುದ್ದೆಗಳ ನೇಮಕಾತಿಯಲ್ಲಿ ರಾಹುಲ್ ಪಾತ್ರವಿದೆ. ವಾಸ್ತವವಾಗಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಗಳನ್ನು ಪೂರೈಸುವುದರ ಜೊತೆಗೆ ರಾಹುಲ್ ಗಾಂಧಿ ಅನೇಕ ಜಂಟಿ ಸಂಸದೀಯ ಸಮಿತಿಗಳು ಮತ್ತು ಆಯ್ಕೆ ಸಮಿತಿಗಳ ಭಾಗವಾಗಿದ್ದಾರೆ.

    ಇವುಗಳಲ್ಲಿ ಸಿಬಿಐ ನಿರ್ದೇಶಕರು, ಕೇಂದ್ರ ವಿಜಿಲೆನ್ಸ್ ಕಮಿಷನರ್, ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು, ಮುಖ್ಯ ಮಾಹಿತಿ ಆಯುಕ್ತರು, ಲೋಕಾಯುಕ್ತ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕವನ್ನು ಆಯ್ಕೆ ಮಾಡುವ ಸಮಿತಿಗಳು ಸೇರಿವೆ. ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಈ ನಿರ್ಧಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುತ್ತಾರೆ. ಈ ಸಮಿತಿಗಳ ನಿರ್ಧಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ರಾಗಾ ಒಪ್ಪಿಗೆಯೂ ಅಗತ್ಯವಾಗಿರುತ್ತದೆ.

    ಸಿಬಿಐ ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸರ್ಕಾರವನ್ನು ಪದೇ ಪದೇ ಪ್ರಶ್ನಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ಈ ಏಜೆನ್ಸಿಗಳ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಅವರೂ ಪ್ರಮುಖ ಪಾತ್ರ ವಹಿಸಲಿದ್ದಾರೆ.

    ಸರ್ಕಾರಿ ಸಮಿತಿಗಳ ಭಾಗವಾಗಲಿದ್ದಾರೆ: ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಲೆಕ್ಕಪತ್ರ ಸಮಿತಿಯ ಮುಖ್ಯಸ್ಥರೂ ಆಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಸರ್ಕಾರದ ಆರ್ಥಿಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಅಕೌಂಟ್ಸ್ ಕಮಿಟಿ ಮಾತ್ರ ಸರ್ಕಾರದ ವೆಚ್ಚವನ್ನು ಪರಿಶೀಲಿಸುತ್ತದೆ. ಆದ್ದರಿಂದ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿ ಈ ಜವಾಬ್ದಾರಿಯನ್ನು ಸ್ವಯಂಚಾಲಿತವಾಗಿ ಪಡೆಯಲಿದ್ದಾರೆ.

    ರಾಹುಲ್ ಗಾಂಧಿ ಅವರು ಸಂಸತ್ತಿನ ಪ್ರಮುಖ ಸಮಿತಿಗಳಿಗೆ ವಿರೋಧ ಪಕ್ಷದ ನಾಯಕರಾಗಿ ಸೇರಲು ಸಾಧ್ಯವಾಗುತ್ತದೆ ಮತ್ತು ಸರ್ಕಾರದ ಕಾರ್ಯವೈಖರಿಯನ್ನು ನಿರಂತರವಾಗಿ ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ.

    ಪ್ರಧಾನಿಯವರೊಂದಿಗೆ ರಾಹುಲ್ ಕೂಡ ಸಭೆಯಲ್ಲಿ ಭಾಗಿ: ಈ ಎಲ್ಲಾ ನೇಮಕಾತಿಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ರಾಹುಲ್ ಅವರು ಪ್ರಧಾನಿ ಮತ್ತು ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಈ ನೇಮಕಾತಿಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪ್ರಧಾನಿಯವರು ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರ ಒಪ್ಪಿಗೆಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಅವರ ಅಭಿಪ್ರಾಯ ಮತ್ತು ಸಲಹೆ ಮುಖ್ಯವಾಗುತ್ತದೆ.

    ಯಾವೆಲ್ಲಾ ಸೌಲಭ್ಯಗಳು ಸಿಗಲಿದೆ..?
    – ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಶ್ರೇಣಿ
    – ಸರ್ಕಾರಿ ಸುಸಜ್ಜಿತ ಬಂಗಲೆ
    – ಸಚಿವಾಲಯದಲ್ಲಿನ ಕಚೇರಿ
    – ಉನ್ನತ ಮಟ್ಟದ ಭದ್ರತೆ
    – ಉಚಿತ ವಿಮಾನ ಪ್ರಯಣ
    – ಉಚಿತ ರೈಲು ಪ್ರಯಾಣ

    – ಸರ್ಕಾರಿ ವಾಹನ ಅಥವಾ ಸಾರಿಗೆ ಭತ್ಯೆ
    – ರೂ 3.30 ಲಕ್ಷ ಮಾಸಿಕ ವೇತನ ಮತ್ತು ಭತ್ಯೆಗಳು
    – ತಿಂಗಳಿಗೆ ಆತಿಥ್ಯ ಭತ್ಯೆ
    – ದೇಶದೊಳಗೆ ಪ್ರತಿ ವರ್ಷದಲ್ಲಿ 48 ಕ್ಕೂ ಹೆಚ್ಚು ಪ್ರಯಾಣಗಳಿಗೆ ಭತ್ಯೆ
    – ದೂರವಾಣಿ, ಕಾರ್ಯದರ್ಶಿಯ ನೆರವು ಮತ್ತು ವೈದ್ಯಕೀಯ ಸೌಲಭ್ಯಗಳು

    ವಿರೋಧ ಪಕ್ಷದ ನಾಯಕನ ಕಾರ್ಯಗಳೇನು?: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಕೆಲಸವು ಸಭಾನಾಯಕನ ಕಾರ್ಯಕ್ಕೆ ವಿರುದ್ಧವಾಗಿದೆ. ಈ ಜವಾಬ್ದಾರಿಯನ್ನು ಸದನದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿರೋಧ ಪಕ್ಷವು ಸರ್ಕಾರದ ಅವಿಭಾಜ್ಯ ಅಂಗವಾಗಿದೆ. ಆಡಳಿತ ಪಕ್ಷವು ಸರ್ಕಾರವನ್ನು ನಡೆಸುತ್ತದೆ ಮತ್ತು ಪ್ರತಿಪಕ್ಷಗಳು ಟೀಕಿಸುತ್ತವೆ. ಹೀಗಾಗಿ ಇಬ್ಬರಿಗೂ ಕರ್ತವ್ಯ ಮತ್ತು ಹಕ್ಕುಗಳಿವೆ. ಸರ್ಕಾರ ಮತ್ತು ಮಂತ್ರಿಗಳ ಮೇಲೆ ವಾಗ್ದಾಳಿ ಮಾಡುವುದು ಪ್ರತಿಪಕ್ಷಗಳ ಕೆಲಸ. ಪ್ರತಿಪಕ್ಷಗಳು ದೋಷಪೂರಿತ ಆಡಳಿತವನ್ನು ಪ್ರಶ್ನಿಸಬೇಕು ಮತ್ತು ಅದನ್ನು ಬಲವಾಗಿ ವಿರೋಧಿಸಬೇಕಾಗಿದೆ. ಪ್ರತಿಪಕ್ಷಗಳು ಮತ್ತು ಸರ್ಕಾರವು ಸಮಾನವಾಗಿ ಒಮ್ಮತದಿಂದ ಕೆಲಸ ಮಾಡುತ್ತವೆ.

    ಗಾಂಧಿ ಕುಟುಂಬದ 3ನೇ ವ್ಯಕ್ತಿಗೆ ಜವಾಬ್ದಾರಿ: ಇದು ಮೂರನೇ ಬಾರಿಗೆ ಗಾಂಧಿ ಕುಟುಂಬದ ಸದಸ್ಯರೊಬ್ಬರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿದ್ದಾರೆ. ಇದಕ್ಕೂ ಮುನ್ನ ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ನಿರ್ವಹಿಸಿದ್ದಾರೆ. ಸೋನಿಯಾ ಗಾಂಧಿಯವರು 1999ರ ಅಕ್ಟೋಬರ್ 13 ರಿಂದ 2004ರ ಫೆಬ್ರವರಿ 06 ರವರೆಗೆ ವಿರೋಧ ಪಕ್ಷದ ನಾಯಕಿಯ ಜವಾಬ್ದಾರಿಯನ್ನು ಹೊಂದಿದ್ದರು. ಇನ್ನು ರಾಜೀವ್ ಗಾಂಧಿ ಅವರು 1989ರ ಡಿಸೆಂಬರ್ 18 ರಿಂದ 1990 ರ ಡಿಸೆಂಬರ್ 24 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

    ಕಾಂಗ್ರೆಸ್ ಹೇಳಿದ್ದೇನು?: ರಾಹುಲ್ ಗಾಂಧಿಯವರು 18ನೇ ಲೋಕಸಭೆಯಲ್ಲಿ ಜನರ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗುತ್ತಾರೆ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಮಣಿಪುರದಿಂದ ಮಹಾರಾಷ್ಟ್ರದವರೆಗೆ ಇಡೀ ದೇಶವನ್ನು ಸುತ್ತಿದ್ದಾರೆ. ಅವರು ಜನರ ಧ್ವನಿ ಎತ್ತುತ್ತಾರೆ ಎಂದು ರಾಹುಲ್ ಆಯ್ಕೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಕಾಂಗ್ರೆಸ್ 99 ಸಂಸದರ ಅತಿ ದೊಡ್ಡ ಪಕ್ಷವಾಗಿ ಆಯ್ಕೆ: 10 ವರ್ಷಗಳ ನಂತರ ಕಾಂಗ್ರೆಸ್‍ಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿದೆ. 2014 ಮತ್ತು 2019ರಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೇರಲು ಕಾಂಗ್ರೆಸ್‍ಗೆ ಸಾಕಷ್ಟು ಸಂಸದರಿರಲಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿದೆ. 2019ರಲ್ಲಿ ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 99 ಸ್ಥಾನಗಳನ್ನು ಗೆದ್ದಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2014 ಮತ್ತು 2019ರಲ್ಲಿ ಬಿಜೆಪಿ ನಂತರ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ 10 ಪ್ರತಿಶತಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿರುವ ಪಕ್ಷವು ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ.

  • ಬ್ರಿಟಿಷರ ಕಾಲದ `ಐಪಿಸಿ’ಗೆ ತಿಲಾಂಜಲಿ – ಇದು ಭಾರತೀಯರೇ ರೂಪಿಸಿದ ಪಕ್ಕಾ ದೇಸಿ ಕಾನೂನು!

    ಬ್ರಿಟಿಷರ ಕಾಲದ `ಐಪಿಸಿ’ಗೆ ತಿಲಾಂಜಲಿ – ಇದು ಭಾರತೀಯರೇ ರೂಪಿಸಿದ ಪಕ್ಕಾ ದೇಸಿ ಕಾನೂನು!

    ಬ್ರಿಟಿಷರ ಕಾಲದ ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಬದಲಿಗೆ ರೂಪಿಸಲಾಗಿರುವ ಹೊಸ ಕಾನೂನು ಇಂದಿನಿಂದ ಜಾರಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BNS), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ಮೂಲಕ ಹೊಸ ಕ್ರಿಮಿನಲ್‌ ಕಾನೂನುಗಳು (New Criminal Laws) ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್‌ ಪೊಲೀಸ್‌ ಅಧಿಕಾರಿಗಳು (Civil Police Officers) ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

    ಅಷ್ಟಕ್ಕೂ ಏನಿದು ಕ್ರಿಮಿನಲ್‌ ಕಾನೂನು? ಹೊಸ ಕಾನೂನಿನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಯಾವ ಅಪರಾಧಗಳಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    2020ರಲ್ಲಿ ಕಾನೂನು ಪರಿಣತರ ಸಮಿತಿ ರಚನೆ:

    ಕೇಂದ್ರ ಸರ್ಕಾರವು (Central Government) 2020ರ ಮಾರ್ಚ್‌ನಲ್ಲಿ ಐಪಿಸಿ, ಸಿಆರ್‌ಪಿಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್‌ ಅನ್ನು ಪರಿಷ್ಕರಿಸಲು ಅಪರಾಧ ಕಾನೂನು ಸುಧಾರಣಾ ಸಮಿತಿ ರಚಿಸಿತ್ತು. ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಆಗಿನ ಉಪ ಕುಲಪತಿ ಪ್ರೊಫೆಸರ್ ಡಾ.ರಣಬೀರ್ ಸಿಂಗ್ ನೇತೃತ್ವದ ಸಮಿತಿಯು, ಎನ್‌ಎಲ್‌ಯು-ಡಿಯ ಹಿಂದಿನ ರಿಜಿಸ್ಟ್ರಾರ್ ಪ್ರೊ ಡಾ ಜಿ.ಎಸ್ ಬಾಜಪಾಯಿ, ಡಿಎನ್‌ಎಲ್‌ಯುದ ಉಪ ಕುಲಪತಿ ಪ್ರೊ.ಡಾ.ಬಾಲರಾಜ್ ಚೌಹಾಣ್, ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ದೆಹಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ಜಡ್ಜ್ ಜಿ.ಪಿ ಥರೇಜಾ ಅವರನ್ನ ಒಳಗೊಂಡಿತ್ತು. 2022ರ ಫೆಬ್ರವರಿಯಲ್ಲಿ ಸಮಿತಿಯು ಸಾರ್ವಜನಿಕರ ಸಲಹೆಗಳನ್ನು ಪಡೆದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅಪರಾಧ ಕಾನೂನುಗಳ ಸಮಗ್ರ ಪರಾಮರ್ಶೆಗೆ ಪ್ರಕ್ರಿಯೆ ಆರಂಭಿಸಿರುವುದಾಗಿ ರಾಜ್ಯಸಭೆಗೆ ಕಾನೂನು ಸಚಿವಾಲಯ 2022ರ ಏಪ್ರಿಲ್‌ನಲ್ಲಿ ತಿಳಿಸಿತ್ತು.

    ಭಯೋತ್ಪಾದನೆಗೆ ಹೊಸ ವ್ಯಾಖ್ಯಾನ:

    ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಲ್ಲದೇ ಹೊಸ ಕಾಯ್ದೆಗಳಲ್ಲಿ ಸಂಘಟಿತ ಭಯೋತ್ಪಾದನೆಯನ್ನು ವ್ಯಾಖ್ಯಾನ ಮಾಡಲಾಗಿದೆ. ದೇಶದ್ರೋಹ ಪದವನ್ನು ಬದಲಿಸಿ, ವಿಶ್ವಾಸದದ್ರೋಹ ಪದ ಬಳಸಲಾಗಿದೆ.

    ಅತ್ಯಾಚಾರಕ್ಕೆ ಮರಣ ದಂಡನೆ ಶಿಕ್ಷೆ:

    ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತದೆ. ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸಾಮೂಹಿಕ ಅತ್ಯಾಚಾರಕ್ಕೂ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

    ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ:

    ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯ್ದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆ ವಿಧಿಸಲು ಬಯಸುತ್ತದೆ.

    ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ:

    ʻಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆʼ ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ. ಅಕ್ರಮ ಚಟುವಟಿಕೆಗಳು ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಕೃತ್ಯದಲ್ಲಿ ತೊಡಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಹಾಗೂ ಗರಿಷ್ಠ ಪ್ರಮಾಣದ ದಂಡ ವಿಧಿಸಬಹುದು.

    45 ದಿನಗಳ ಒಳಗೆ ಕೋರ್ಟ್‌ ತೀರ್ಪು:

    ಹೊಸ ಕಾಯ್ದೆಗಳ ಪ್ರಕಾರ ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣೆ ಮುಗಿದು, 45 ದಿನಗಳ ಒಳಗೆ ಕೋರ್ಟ್‌ ತೀರ್ಪು ನೀಡಬೇಕು. ಕೋರ್ಟ್‌ನಲ್ಲಿ ಮೊದಲ ವಿಚಾರಣೆ ನಡೆದು 60 ದಿನಗಳ ಒಳಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳ ಸಂತ್ರಸ್ತರ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಬೇಕು. ವೈದ್ಯಕೀಯ ವರದಿ 7 ದಿನಗಳ ಒಳಗೆ ಬರಬೇಕು. ಜೊತೆಗೆ 3 ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲಿಸಬಹುದಾಗಿದೆ.

    ಭಾರತೀಯರೇ ರೂಪಿಸಿದ ಕಾನೂನು:

    ಹೊಸ ಕಾನೂನುಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ʻಈ ಕಾನೂನುಗಳು ಭಾರತೀಯರೇ ಭಾರತೀಯರಿಗಾಗಿ ರೂಪಿಸಿದ ಕಾನೂನು, ಭಾರತೀಯ ಸಂಸತ್ತು ಇವುಗಳನ್ನು ಅಂಗೀಕರಿಸಿದೆ. ತನ್ಮೂಲಕ ಬ್ರಿಟಿಷ್‌ ಕಾಲದ ಕ್ರಿಮಿನಲ್‌ ಕಾಯ್ದೆಗಳಿಗೆ ವಿದಾಯ ಹೇಳಲಾಗಿದೆ. ಇದರೊಂದಿಗೆ ಎಲ್ಲವೂ ಭಾರತೀಯವೇ ಆಗಿದೆ ಎಂದು ಶ್ಲಾಘಿಸಿದ್ದಾರೆ.

    420 ಅಲ್ಲ 318 ಎಂದು ಹೇಳಬೇಕು: ಯಾವ ಸೆಕ್ಷನ್‌ ಏನು ಹೇಳುತ್ತೆ?

    420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್‌ 420ರ ಅಡಿ ಕೇಸ್‌ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್‌ 318 ಆಗಿದೆ.
    302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್‌ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
    307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್‌ 103 ಆಗಿದೆ.
    376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್‌ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
    304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್‌ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
    304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
    359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್‌ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್‌ 137 ಆಗಿದೆ.
    309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್‌ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್‌ ಅಡಿ 226 ಆಗಿದೆ.