Tag: parliament

  • ಅಸೆಂಬ್ಲಿಯಲ್ಲಿ ಮಾತನಾಡದವರು ಪಾರ್ಲಿಮೆಂಟ್‍ನಲ್ಲಿ ಮಾತಾಡಿರ್ತಾರಾ- ಶ್ರೀರಾಮುಲುಗೆ ಸಿದ್ದರಾಮಯ್ಯ ತಿರುಗೇಟು

    ಅಸೆಂಬ್ಲಿಯಲ್ಲಿ ಮಾತನಾಡದವರು ಪಾರ್ಲಿಮೆಂಟ್‍ನಲ್ಲಿ ಮಾತಾಡಿರ್ತಾರಾ- ಶ್ರೀರಾಮುಲುಗೆ ಸಿದ್ದರಾಮಯ್ಯ ತಿರುಗೇಟು

    – ಅದೇನೇನು ಮಾತಾಡಿದ್ದಾರೆ ಪಾರ್ಲಿಮೆಂಟ್‍ನಲ್ಲಿ ದಾಖಲೆ ಕೊಡ್ರಪ್ಪ, ನೋಡೋಣ: ಮಾಜಿ ಸಿಂಎ ವ್ಯಂಗ್ಯ

    ಬಳ್ಳಾರಿ: ವಿಧಾನಸಭೆಯಲ್ಲಿಯೇ ಮಾತನಾಡದಿದ್ದವರು, ಸಂಸತ್‍ನಲ್ಲಿ ಮಾತಾಡಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಜಿಲ್ಲೆಯ ಸಂಡೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ನಾನು ನಿನ್ನೆ ಹೂವಿನ ಹಡಗಲಿಯಲ್ಲಿ ಮಾತನಾಡುವಾಗ ಶ್ರೀರಾಮುಲು ಅವರು ಪಾರ್ಲಿಮೆಂಟ್‍ನಲ್ಲಿ ಬಾಯಿ ಬಿಟ್ಟಿಲ್ಲ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕರು ದಾಖಲೆ ನೀಡಿದ್ದಾರೆ. ಆದರೆ ಈಗಲು ಹೇಳುತ್ತೇನೆ ಶ್ರೀರಾಮುಲು ಅವರಿಗೆ 371 ಜೆ ಅಂದರೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಾಗೂ ಶಾಸಕರಿಗೆ ಗೊತ್ತಿರುವುದು ಐಪಿಸಿ ಸೆಕ್ಷನ್ ಮಾತ್ರ, ಮಾತ್ರ ಎಂದು ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್‍ಗಿಂತ ನಾನೇ ಆಕ್ಟೀವ್- ದಾಖಲೆ ರಿಲೀಸ್ ಮಾಡಿ ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು

    ನಾನು ಮುಖ್ಯಮಂತ್ರಿ ಆಗಿದ್ದಾಗ ಅವರು ಶಾಸಕರಾಗಿದ್ದರು, ಆಗ ಒಂದು ದಿನವು ಅಸೆಂಬ್ಲಿಯಲ್ಲಿ ಮಾತನಾಡಲಿಲ್ಲ. ಅವರು ಅಸೆಂಬ್ಲಿಗೆ ಬರುತ್ತಿರುವುದೇ ವಿರಳವಾಗಿತ್ತು. ವಿಧಾನಸಭೆಯಲ್ಲಿ ಮಾತನಾಡದವರು ಸಂಸತ್‍ನಲ್ಲಿ ಮಾಡನಾಡಿದ್ದಾರೆ ಎನ್ನುವುದೇ ಸಂದೇಹ ಎಂದ ಮಾಜಿ ಸಿಎಂ, ಪಾರ್ಲಿಮೆಂಟ್‍ನಲ್ಲಿ ಅದೇನೇನು ಮಾತನಾಡಿದ್ದಾರೆ ದಾಖಲೆ ಕೊಡ್ರಪ್ಪ ನೋಡೋಣ. ವಿದೇಶಾಂಗ ನೀತಿ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಚರ್ಚೆ ಮಾಡಿದ್ದಾರಾ ದಾಖಲೆ ತನ್ನಿ ಎಂದು ಕಾಲೆಳೆದರು.

    ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲ ಅಂದಿದ್ದು ಅವಮಾನವೇ? ಹಾಗಿದ್ದರೆ ಅವರು ಬಹಿರಂಗ ಚರ್ಚೆಗೆ ಬಂದರೆ ನಾನು ಸಿದ್ಧ. ವಕೀಲರೊಬ್ಬರು ಮಧ್ಯಸ್ಥಿಕೆಯಲ್ಲಿ ಚರ್ಚೆ ಮಾಡೋಣ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಸಂತೋಷ್ ಹೆಗ್ಡೆ ಅವರೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದನ್ನು ಹೇಳಿದರೆ ನಿನಗೆ ಯಾಕಪ್ಪ ಕೋಪ? ಜಾತಿ ಎತ್ತಿಕಟ್ಟೋಕೆ ನೋಡ್ತಿಯಾ? ನನಗೆ ಬೈದರೆ ಕುರುಬರಿಗೆ ಬೈಯ್ದ ಹಾಗಾ? ನಾನು ತಪ್ಪು ಮಾಡಿದರೆ ಕುರುಬರು ತಪ್ಪು ಮಾಡಿದ ಹಾಗಾ ಎಂದು ಪ್ರಶ್ನಿಸಿ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು.

    ರಾಮಾಯಣ ಬರೆದ ವಾಲ್ಮೀಕಿ ಬಗ್ಗೆ ಅಪಾರ ಗೌರವ ಇಟ್ಟಕೊಂಡವರಲ್ಲಿ ನಾನು ಒಬ್ಬ. ವಾಲ್ಮಿಕೆ ಪ್ರತಿಮೆ ವಿಧಾನಸೌಧದ ಬಳಿ ಸ್ಥಾಪಿಸಿದ್ದು ನಮ್ಮ ಸರ್ಕಾರ. ವಾಲ್ಮೀಕಿ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು? ನಾ ಕಾವೋಂಗಾ ನಾ ಕಾನೇದೂಂಗಾ ಮೇ ಚೌಕಿ ದಾರ್ (ನಾನು ಭ್ರಷ್ಟಾಚಾರ ಮಾಡಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡಲ್ಲ, ನಾನೊಬ್ಬ ಭಾರತದ ಕಾವಲುಗಾರ) ಅಂತಾರೆ. ಮಿಸ್ಟರ್ ಚೌಕಿದಾರ್ ರಫೆಲ್ ಹಗರಣ ಎಷ್ಟು ದೊಡ್ಡ ಹಗರಣ ಗೊತ್ತಾ? 40 ಸಾವಿರ ಕೋಟಿ ರೂ. ಹಗರಣ. ಮಿಸ್ಟರ್ ಚೌಕಿದಾರ್ ವೈ ಯುರ್ ಕಿಪ್ ಇನ್ ಕೊಯ್ಟ್ (ಏಕೆ ನೀವು ಸುಮ್ಮನಿರುವಿರಿ). ಪ್ರಧಾನಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಇನ್ನೊಬ್ಬರನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ಫೈನಲ್: ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ಫೈನಲ್: ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ಬೆಂಗಳೂರು: ಬಳ್ಳಾರಿ ಲೋಕಸಭೆ ಉಪ ಚುನಾವಣೆಯ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪನವರನ್ನು ಕಾಗ್ರೆಸ್ ಆಯ್ಕೆ ಮಾಡಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಲವು ಗೊಂದಲಗಳು ಏರ್ಪಟ್ಟಿದ್ದರೂ, ಕೊನೆಯದಾಗಿ ಉಗ್ರಪ್ಪನ ಹೆಸರನ್ನು ಅಂತಿಮಗೊಳಿಸಲಾಗಿದೆ.

    ಈ ಮೊದಲು ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಆದರೆ ನಾಗೇಂದ್ರ ಸಹೋದರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡುವೆ ಬಂಡಾಯ ಉಂಟಾಗುವ ಸಾಧ್ಯತೆಯಿತ್ತು. ಹೀಗಾಗಿ ಕಾಂಗ್ರೆಸ್ ಅಂತಿಮವಾಗಿ ವಿ.ಎಸ್.ಉಗ್ರಪ್ಪನ ಹೆಸರನ್ನು ಫೈನಲ್ ಮಾಡಿದೆ.

    ಉಗ್ರಪ್ಪ ಆಯ್ಕೆ ಏಕೆ?
    ಬಳ್ಳಾರಿ ಜಿಲ್ಲೆಗೆ ಸಂಬಂಧಪಟ್ಟವರನ್ನೆ ಕಣಕ್ಕಿಳಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುವುದು ಕೈ ನಾಯಕರಿಗೆ ಗೊತ್ತೊದೆ. ಅಲ್ಲದೇ ಸ್ಥಳೀಯ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಜಿಲ್ಲಾ ಮುಖಂಡರು ಹಾಗೂ ಶಾಸಕರಲ್ಲಿ ಗೊಂದಲ ಏರ್ಪಟಿದೆ. ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದರೆ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ತೀವ್ರ ಬಂಡಾಯ ಉಂಟಾಗುವ ಸಾಧ್ಯತೆ ಇದೆ. ಉಗ್ರಪ್ಪನವರು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು. ಈ ಹಿಂದೆ ರೆಡ್ಡಿ ಸಹೋದರರ ವಿರುದ್ಧ ತೊಡೆ ತಟ್ಟಿ, ಹೋರಾಟವನ್ನು ಸಹ ಮಾಡಿದ್ದರು. ಉಗ್ರಪ್ಪನವರು ಜಿಲ್ಲೆಯ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದಲ್ಲದೇ ಹಂಪಿ ವಿಶ್ವವಿದ್ಯಾನಿಲಯದಲ್ಲಿ ವಾಲ್ಮೀಕಿ ಪೀಠ ಸ್ಥಾಪನೆಯಲ್ಲಿ ಉಗ್ರಪ್ಪನವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿದೆ.

    ಉಗ್ರಪ್ಪನವರ ಆಯ್ಕೆಯನ್ನು ಎಲ್ಲಾ ಶಾಸಕರೂ ಹಾಗೂ ಜಿಲ್ಲಾ ಮುಖಂಡರು ಒಪ್ಪುತ್ತಾರೆ. ನಾಗೇಂದ್ರ ಕೂಡ ಅನಿವಾರ್ಯವಾಗಿ ಉಗ್ರಪ್ಪನವರ ಪರ ಪ್ರಚಾರ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉಗ್ರಪ್ಪನವರು ಬಳ್ಳಾರಿ ಜಿಲ್ಲೆಯ ಯಾವೊಬ್ಬ ಕೈ ಮುಖಂಡರ ಜೊತೆಗೂ ಗುರುತಿಸಿಕೊಂಡಿಲ್ಲ. ಜಿಲ್ಲಾ ಕಾಂಗ್ರೆಸ್ಸಿನ ಮಟ್ಟಿಗೆ ಉಗ್ರಪ್ಪನವರ ಅಜಾತಶತ್ರು. ಹೀಗಾಗಿ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಉಪ ಚುನಾವಣೆ ಎದುರಿಸಬಹುದು ಎನ್ನುವ ಕಾರಣಕ್ಕೆ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದೆ.

    ಶ್ರೀರಾಮುಲು ಶಾಸಕರಾಗಿ ಆಯ್ಕೆಯಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ?

    ನವದೆಹಲಿ: ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಸಿದ್ಧವಾಗಿರುವ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ ಅವರು, ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡುವ ಸಾಧ್ಯತೆಯಿದೆ.

    ಆಗಸ್ಟ್ 11 ರಂದು ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಅವರು, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) ಮುಖ್ಯಸ್ಥರನ್ನು ಆಹ್ವಾನಿಸಲಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವರು ಎಂದು ಪಿಟಿಐ ಪಕ್ಷದ ಮೂಲಗಳು ತಿಳಿಸಿವೆ.

    ಜುಲೈ 25ರಂದು ನಡೆದ ಪಾಕಿಸ್ತಾನ ನಡೆದ ಸಂಸತ್ ಚುನಾವಣೆಯಲ್ಲಿ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಸರ್ಕಾರ ರಚನೆಗೆ ತುದಿಗಾಲಿನಲ್ಲಿ ಇಮ್ರಾನ್ ಖಾನ್ ನಂತಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

    ನರೇಂದ್ರ ಮೋದಿ ಇಮ್ರಾನ್ ಖಾನ್‍ಗೆ ಫೋನ್ ಕರೆ ಮಾಡಿ ವಿಜಯೋತ್ಸವದ ಶುಭಾಶಯ ತಿಳಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಇಮ್ರಾನ್ ಖಾನ್ ಅವರು, ದ್ವಿಪಕ್ಷೀಯ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿ, ಹೊಸ ಅಧ್ಯಾಯ ಬರೆಯಬೇಕು ಎಂದು ಹೇಳಿದ್ದರು.

    ಪಿಟಿಐ ಪಕ್ಷದ ವಕ್ತಾರ ಪವಾದ್ ಚೌಧರಿ ಕೂಡಾ ನರೇಂದ್ರ ಮೋದಿ ಆಹ್ವಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕುರಿತು ವಿದೇಶಾಂಗ ಸಚಿವಾಯದ ಜೊತೆ ಚರ್ಚೆ ನಡೆಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು.

  • ಅವಿಶ್ವಾಸ ಮಂಡನೆಗೂ ಮುನ್ನ ಪ್ರಧಾನಿ ಮೋದಿ ಟ್ವೀಟ್!

    ಅವಿಶ್ವಾಸ ಮಂಡನೆಗೂ ಮುನ್ನ ಪ್ರಧಾನಿ ಮೋದಿ ಟ್ವೀಟ್!

    ನವದೆಹಲಿ: ಇಂದು ಸಂಸತ್ತಿನಲ್ಲಿ ನಡೆಯುವ ಅವಿಶ್ವಾಸ ಗೊತ್ತುವಳಿಯ ಮಂಡನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಸಹದ್ಯೋಗಿಗಳು ನಮಗೆ ಬೆಂಬಲ ನೀಡುತ್ತಾರೆಂದು ಟ್ವೀಟ್ ಮಾಡಿದ್ದಾರೆ.

    ಬುಧವಾರ ಸಂಸತ್ತಿನಲ್ಲಿ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತವಳಿಯನ್ನು ಅಂಗೀಕರಿಸಿದ್ದರಿಂದ ಇಂದು ಸಂಸತ್ತಿನಲ್ಲಿ ನಡೆಯಲಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಕುತೂಹಲ ಕೆರಳಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಇಂದು ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತಿದ್ದು, ಈ ಕುರಿತು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.

    “ಭಾರತೀಯ ಸಂಸದೀಯ ವ್ಯವಸ್ಥೆಯಲ್ಲೇ ಇದು ಅತ್ಯಂತ ಪ್ರಮುಖವಾದ ದಿನವಾಗಿದೆ. ನನ್ನ ಸಂಸತ್ ಸಹೋದ್ಯೋಗಿ ಮಿತ್ರರಾದ ಲೋಕಸಭೆ ಸದಸ್ಯರು ರಚನಾತ್ಮಕ, ಸಮಗ್ರ ಮತ್ತು ಅಡೆ-ತಡೆ ಇಲ್ಲದ ಚರ್ಚೆಗೆ ಅವಕಾಶ ಮಾಡಿಕೊಡುತ್ತಾರೆಂದು ನಾನು ನಂಬಿದ್ದೇನೆ. ಈ ವಿಚಾರದಲ್ಲಿ ನಾವು ಜನರಿಗೆ ಬದ್ಧರಾಗಿರಬೇಕು. ಈ ಸನ್ನಿವೇಶವನ್ನು ಇಡೀ ದೇಶ ಅತ್ಯಂತ ಕುತೂಹಲದಿಂದ ನೋಡುತ್ತಿದೆ.” ಎಂದು ಟ್ವೀಟ್ ಮಾಡಿದ್ದಾರೆ.

    ಇಂದು 11 ಗಂಟೆಗೆ ಸಂಸತ್ ನಲ್ಲಿ ಅವಿಶ್ವಾಸ ಮಂಡಳಿಯ ಮೇಲೆ ಚರ್ಚೆ ಆರಂಭವಾಗಿದೆ. ನಿಲುವಳಿಯ ಬಗ್ಗೆ ಎಲ್ಲ ಪಕ್ಷಗಳು ತಮ್ಮ ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಿವೆ. ಆಡಳಿತರೂಢ ಬಿಜೆಪಿ ಕೂಡ ಈಗಾಗಲೇ ತನ್ನ ಮಿತ್ರ ಪಕ್ಷಗಳನ್ನು ಸಂಪರ್ಕಿಸಿ ಅವಿಶ್ವಾಸ ಮಂಡಳಿಯ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದೆ. ಮುನಿಸು ಶಮನ ಮಾಡುವ ಕಾರ್ಯಕ್ಕೂ ಕೈ ಹಾಕಿದೆ ಎಂದು ತಿಳಿದು ಬಂದಿದೆ.

  • 10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ವೆಂಕಯ್ಯ ನಾಯ್ಡು

    10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ವೆಂಕಯ್ಯ ನಾಯ್ಡು

    ನವದೆಹಲಿ: ಉಪರಾಷ್ಟ್ರಪತಿ, ರಾಜ್ಯಸಭಾ ಸ್ಪೀಕರ್ ಆಗಿರುವ ಎಂ ವೆಂಕಯ್ಯ ನಾಯ್ಡು ಅವರು ಸದನದಲ್ಲಿ 10 ಭಾಷೆಗಳಲ್ಲಿ ಮಾತನಾಡುವ ಮೂಲಕ ದಾಖಲೆ ಬರೆದಿದ್ದಾರೆ.

    ಮಾನ್ಸೂನ್ ಅಧಿವೇಶನದ ಮೊದಲ ದಿನದ ಬುಧವಾರದಂದು ಸದನ ವೇಳೆ ವೆಂಕಯ್ಯ ನಾಯ್ಡು ಅವರು ಮಾತನಾಡಿ, ಸದನದಲ್ಲಿ ಇಂಗ್ಲೀಷ್ ಸೇರಿದಂತೆ ಭಾರತೀಯ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ತಿಳಿಸಿದರು.

    ಇದೂವರೆಗೂ ಇದ್ದ 17 ಭಾಷೆಗಳಲ್ಲಿ ಪ್ರಮುಖವಾದ ಆಸ್ಸಾಮಿಸ್, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳ್, ತೆಲುಗು ಮತ್ತು ಉರ್ದು ಭಾಷೆಗಳೊಂದಿಗೆ ಹೆಚ್ಚವರಿಯಾಗಿ ಕೊಂಕಣಿ, ದೋಗ್ರಿ, ಕಾಶ್ಮೀರಿ, ಸಂಥಾಲಿ, ಸಿಂಧಿ ಭಾಷೆಗಳು ಮಾತನಾಡಬಹುದು. ಆದರೆ ಈ ಕುರಿತು ಸಂಸದರು ಮಾತನಾಡುವ ಮೊದಲು ಸಭೆಗೆ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ನೀಡಿದರು.

    ಈ ಕುರಿತು ಘೋಷಣೆ ಮಾಡಿದ ವೇಳೆ ಕೆಲ ಪದಗಳನ್ನು ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ವತಃ ತಾವೇ ಮಾತನಾಡಿದ್ದು ದಾಖಲೆಯಾಗಿದೆ.

  • ಕಾವೇರಿಗಾಗಿ ಸಂಸತ್ತಲ್ಲಿ ಒಗ್ಗಟ್ಟು ಪ್ರದರ್ಶಿಸಿ- ರಾಜ್ಯದ ಸಂಸದರಲ್ಲಿ ಎಚ್‍ಡಿಕೆ ಮನವಿ

    ಕಾವೇರಿಗಾಗಿ ಸಂಸತ್ತಲ್ಲಿ ಒಗ್ಗಟ್ಟು ಪ್ರದರ್ಶಿಸಿ- ರಾಜ್ಯದ ಸಂಸದರಲ್ಲಿ ಎಚ್‍ಡಿಕೆ ಮನವಿ

    ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಸಂಸತ್ತಲ್ಲಿ ಒಗ್ಗಟ್ಟಾಗಿ ಹೋರಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಬುಧವಾರ ರಾಜ್ಯದ ಸರ್ವಪಕ್ಷಗಳ ಸಂಸದರ ಸಭೆ ನಡೆದಿದ್ದು, ಈ ವೇಳೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಾಧಿಕಾರ ರಚನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಅದನ್ನು ಪ್ರಶ್ನಿಸಿ ಸಂಸತ್ತು ಮತ್ತು ಸುಪ್ರೀಂಕೋರ್ಟ್‍ನಲ್ಲಿ ಹೋರಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

    ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಒಗ್ಗಟಾಗಬೇಕೆಂದು ಸಭೆಯಲ್ಲಿ ಸಿಎಂ ಮನವಿ ಮಾಡಿದ್ರು. ಆದ್ರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಈ ಅಧಿಸೂಚನೆ ಹೊರಡಿಸಿರುವುದರಿಂದ ರಾಜ್ಯ ಬಿಜೆಪಿ ಸಂಸದರು ಕಾವೇರಿ ಅಧಿಸೂಚನೆ ವಿರೋಧಿಸಿ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಿದರೂ, ಸ್ಪೀಕರ್ ಸುಮಿತ್ರಾ ಮಹಾಜನ್ ಚರ್ಚೆಗೆ ಅನುಮತಿ ನೀಡುವುದು ಅನುಮಾನ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

    ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯ್ತು?:
    ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಆದೇಶನ್ವಯ ರಚಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸಂಸತ್ತಿನಲ್ಲಿ ವಿರೋಧಿಸುವುದು. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮುಂದುವರಿಸುವುದು. ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು. ಈ ಬಗ್ಗೆ ಚರ್ಚೆ ಮಾಡಲು ಮತ್ತೊಮ್ಮೆ ಹಿರಿಯ ಸಂಸದರ ಕರೆ ಕರೆಯುವುದು. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ರಾಜ್ಯ ಸಂಸದರ ನಿಯೋಗ ಕರೆದೊಯ್ದು ಸಂಸತ್‍ನಲ್ಲಿ ವಿಷಯ ಪ್ರಸ್ತಾಪಿಸಲು ಒತ್ತಡ ಹಾಕುವುದು. ಪ್ರಾಧಿಕಾರದಲ್ಲಾದ ಅನ್ಯಾಯದ ಬಗ್ಗೆ ಸಂಸದರಿಗೆ ರಾಜ್ಯ ಸರ್ಕಾರ ಟಿಪ್ಪಣಿ ನೀಡಲು ಸಲಹೆ ನೀಡಲಾಗಿದೆ. ಕಾವೇರಿ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ನೆನೆಗುದಿಗೆ ಬಿದ್ದಿರುವ ಕೇಂದ್ರದ ಯೋಜನೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

    ಇಂದು ಕಾವೇರಿ ನಿಯಂತ್ರಣ ಸಮಿತಿಯ ಎರಡನೇ ಸಭೆ:
    ಇಂದು ಕಾವೇರಿ ನೀರು ನಿಯಂತ್ರಣ ಸಮಿತಿಯ ಎರಡನೇ ಸಭೆ ನಡೆಯಲಿದೆ. ದೆಹಲಿಯಲ್ಲಿರುವ ಜಲ ಆಯೋಗದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಮಿತಿ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮೊದಲ ಸಭೆಯಲ್ಲಿ ಪ್ರಾಧಿಕಾರ ಆದೇಶ ಪಾಲನೆ ಬಗ್ಗೆ ಚರ್ಚಿಸಿರುವ ಸಮಿತಿ, ಇಂದಿನ ಸಭೆಯಲ್ಲಿ ಕೇಂದ್ರ ಕಚೇರಿ ಸ್ಥಾಪನೆ ಕುರಿತು ಚರ್ಚೆ ಮಾಡಲಿದೆ. ನಿಯಂತ್ರಣ ಸಮಿತಿಯ ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾಯಿಸಬೇಕಾಗಿದ್ದು, ಪೀಠೋಪಕರಣ ಹಾಗೂ ಸಿಬ್ಬಂದಿ ನೇಮಕ ಹಾಗೂ ಇತರೆ ಕಾರ್ಯ ಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

    ಸುಪ್ರೀಂನಲ್ಲಿಂದು ಕೇರಳ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ:
    ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಕಾವೇರಿ ನೀರಿನಲ್ಲಿ ಹಂಚಿಕೆಯಾಗಿರುವ 30 ಟಿಎಂಸಿ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಹಂಚಿಕೆಯಾಗಿರುವ ತನ್ನ ಪಾಲಿನ ನೀರಿನ ಬಳಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂತೆ ಪುನರ್ ಪರಿಶೀಲನಾ ಅರ್ಜಿಯಲ್ಲಿ ಕೇರಳ ಉಲ್ಲೇಖಿಸಿದೆ. 30 ಟಿಎಂಸಿ ನೀರನ್ನ ಕುಡಿಯಲು ಹಾಗೂ ನೀರಾವರಿ ಯೋಜನೆಗಳಿಗೆ ಬಿಟ್ಟು ಬೇರೆ ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ. ಹಾಗೂ ಅದರ ನೈಸರ್ಗಿಕ ಹರಿವುವನ್ನು ಬದಲಾಯಿಸುವಂತಿಲ್ಲ ಅಂತಾ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕಾವೇರಿ ಪ್ರಾಧಿಕಾರಕ್ಕೆ ಎಲ್ಲ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿರುವುದರಿಂದ ಕೇರಳ ಸಲ್ಲಿಸಿರುವ ಅರ್ಜಿ ವಜಾ ಆಗುವ ಸಾಧ್ಯತೆಯೂ ಇದೆ.

  • ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ರಮ್ಯಾ!

    ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ರಮ್ಯಾ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಧೈರ್ಯವಿಲ್ಲ ಅಂತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಲೇವಡಿ ಮಾಡಿದ್ದಾರೆ.

    ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ರಮ್ಯಾ ಮತ್ತೆ ಮೋದಿ ಕಾಲೆಳೆದಿದ್ದಾರೆ. ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ ಮೋದಿ ಮಾರ್ಕ್ಸ್ ಕಾರ್ಡ್ ರಮ್ಯಾಗೆ ಸಿಕ್ತಂತೆ!

    ರಮ್ಯಾ ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಹಲವಾರು ಪರ ವಿರೋಧ ಚರ್ಚೆಗಳು ಆರಂಭವಾದವು. ರಾಹುಲ್ ಗಾಂಧಿಯವರಿಗೆ ಚೀಟಿ ಇಲ್ಲದೇ 15 ನಿಮಿಷ ನಿರರ್ಗಳವಾಗಿ ಮಾತನಾಡುವ ಧೈರ್ಯವಿದೆಯೇ? ಅವರಿಗೆ ನೀವು ಬರೆದ ಅಕ್ಷರಗಳನ್ನೇ ಓದಲು ಆಗುತ್ತಿಲ್ಲ ಅಂತ ಹೇಳಿದ್ದಾರೆ.

  • ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ಲಾಗೋಸ್: ನೈಜೀರಿಯಾದ ಸಂಸತ್ ಕಲಾಪದ ವೇಳೆ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಒಳಪ್ರವೇಶಿಸಿ ಸದನದ ಸ್ಪೀಕರ್ ಮುಂದುಗಡೆ ಇದ್ದ ಗೌರವ ದಂಡವನ್ನು ಎತ್ತಿಕೊಂಡು ಪರಾರಿಯಾಗಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

    ಸಂಸತ್ ಭವನದಲ್ಲಿ ಭದ್ರತಾ ಸಿಬ್ಬಂದಿಗಳ ಮುಂದೆಯೇ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ವ್ಯಕ್ತಿಯನ್ನು ತಡೆಯಲು ಅಧಿಕಾರಿಗಳು ಯತ್ನಿಸಿದರೂ ಆತ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಗೌರವ ದಂಡವನ್ನು ಮರಳಿ ಪಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸತ್ ವಕ್ತಾರರೊಬ್ಬರು, ಸಂಸತ್ ನಿಂದ ಅಮಾನತುಗೊಂಡಿದ್ದ ಸದಸ್ಯರ ಬೆಂಬಲದೊಂದಿಗೆ ಈ ವ್ಯಕ್ತಿ ಕೃತ್ಯ ನಡೆಸಿದ್ದಾನೆ. ಸರ್ಕಾರವನ್ನು ಉರುಳಿಸುವ ತಂತ್ರವಾಗಿ ಆತ ಈ ಕೆಲಸ ಮಾಡಿದ್ದಾನೆ. ಇದೊಂದು ದೇಶದ್ರೋಹದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಗೌರವ ದಂಡ ಇಲ್ಲದೇ ನೈಜೀರಿಯಾ ಸಂಸತ್ ನಲ್ಲಿ ಯಾವುದೇ ಕಾನೂನು ಪಾಸ್ ಮಾಡಬಾರದು ಎನ್ನುವ ನಿಯಮವಿದೆ. ಈ ಘಟನೆಯ ಬಳಿಕ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ 109 ಸದಸ್ಯರು ಕಲಾಪ ಮುಂದುವರಿಸುವಂತೆ ಪಟ್ಟುಹಿಡಿದಿದ್ದರು. ಹೀಗಾಗಿ ಮತ್ತೊಂದು ಗೌರವ ದಂಡವನ್ನು ಇಡುವ ಮೂಲಕ ಸದನದ ಕಲಾಪ ಮುಂದುವರಿಯಿತು.

    https://www.youtube.com/watch?v=OStFIHPD42w&feature=youtu.be&t=70&has_verified=1&utm_source=inshorts&utm_medium=referral&utm_campaign=fullarticle

  • ಮೋದಿ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿದರ ಹಿಂದಿದೆ ರಾಹುಲ್ ವಿನೂತನ ತಂತ್ರ!

    ಮೋದಿ ಭಾಷಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿದರ ಹಿಂದಿದೆ ರಾಹುಲ್ ವಿನೂತನ ತಂತ್ರ!

    ನವದೆಹಲಿ: ಸಂಸತ್ ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಕಾಂಗ್ರೆಸ್ ನಾಯಕರು ಅಡ್ಡಿಪಡಿಸಿ ಘೋಷಣೆ ಕೂಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಕುರಿತಗಾಗಿ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾವಹಿಸಿ ಮಾತನಾಡುತ್ತಿದ್ದರು. ಈ ವೇಳೆ ಪ್ರಧಾನಿಗಳ ಭಾಷಣಕ್ಕೆ ಅಡ್ಡಿ ಪಡಿಸಲು ರಾಹುಲ್ ಗಾಂಧಿ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರು `ಗೆರಿಲ್ಲಾ ಶೈಲಿ’ಯನ್ನು ಬಳಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಪ್ರಕಾರ ಕಾಂಗ್ರೆಸ್ ಸಂಸದರಿಗೆ ಬುಧವಾರ ಮಾಧ್ಯಹ್ನ 12 ಗಂಟೆ ವೇಳೆಗೆ ಸದನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ಈ ಗೆರಿಲ್ಲಾ ತಂತ್ರಕ್ಕೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ತಂತ್ರಕ್ಕೆ ಸ್ವಲ್ಪ ಹಿಂಜರಿದಿದ್ದರು. ಆದರೆ ರಾಹುಲ್ ಈ ಕ್ರಮಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದರು. ಇದರ ಉಸ್ತುವಾರಿಯನ್ನು ಕಾಂಗ್ರೆಸ್ ನ ಜ್ಯೋತಿ ಅದಿತ್ಯ ಸಿಂಧಿಯಾ ಅವರಿಗೆ ನೀಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಹೊರಡಿಸಲಾಗಿದ್ದ ಪ್ಲೇ ಕಾರ್ಡ್‍ಗಳನ್ನು ಹಿಡಿದು ಘೋಷಣೆ ಕೂಗಿದ್ದರು. ಈ ವೇಳೆ ಯುಪಿಎ ಬೆಂಬಲಿತ ಪಕ್ಷಗಳ ಸದಸ್ಯರ ಸಹಕಾರವನ್ನು ಕಾಂಗ್ರೆಸ್ ಕೇಳಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

    ಘೋಷಣೆ ಕೂಗುವ ವೇಳೆ ಯಾವ ರೀತಿಯ ಘೋಷಣೆ ಕೂಗಬೇಕು ಎಂಬುದನ್ನು ರಾಹುಲ್ ಸೂಚಿಸಿದ್ದರು. ಈ ವೇಳೆ ವೈಯಕ್ತಿಕ ಅಂಶಗಳಿಗೆ ಅವಕಾಶವನ್ನು ನೀಡದೆ ವಿಷಯಾಧಾರಿತವಾದ ಘೋಷಣೆಗಳನ್ನು ಕೂಗಲು ತಿಳಿಸಿದ್ದರು ಎಂದು ಕಾಂಗ್ರೆಸ್ ಸಂಸದ ರಂಜಿತ್ ರಂಜನ್ ಅವರು ಹೇಳಿದ್ದಾರೆ.

    ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಂತೆ “ಬಂದ್ ಕರೋ.. ಬಂದ್ ಕರೋ, ನಾಟಕ್ ಬಂದ್ ಕರೋ” ಎಂದು ಕೂಗುವ ಮೂಲಕ ಮೋದಿ ಭಾಷಣಕ್ಕೆ ಕೈ ಸಂಸದರು ನಿರಂತರ ಅಡ್ಡಿಪಡಿಸುತ್ತಿದ್ದರು. ವಿಪಕ್ಷಗಳ ವಿರೋಧದ ನಡುವೆಯೂ ಮೋದಿ ಏರುಧ್ವನಿಯಲ್ಲಿ ಮಾತನಾಡಿ ತಮ್ಮ ಭಾಷಣವನ್ನು ಪೂರ್ಣಗೊಳಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಅಂದ್ರೆ ವಿಭಜನೆ – ಲೋಕಸಭೆಯಲ್ಲಿ ಸಿಎಂ ಸಿದ್ದು ವಿರುದ್ಧ ಮೋದಿ ವಾಗ್ದಾಳಿ

    ರೇಣುಕಾಗೆ ಟಾಂಗ್: ರಾಜ್ಯ ಸಭೆಯಲ್ಲಿ ಮೋದಿ ಭಾಷಣಕ್ಕೆ ತೀವ್ರ ರೀತಿಯಲ್ಲಿ ಅಡ್ಡಿ ಪಡಿಸಲು ನಿರ್ಧರಿಸಿದ್ದ ಕಾಂಗ್ರೆಸ್ ನಾಯಕರು ಗದ್ದಲವನ್ನು ನಿರ್ಮಿಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿಚಿತ್ರವಾಗಿ ನಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಮೋದಿ ಅವರು ತಮ್ಮ ಭಾಷಣದಲ್ಲಿ 1998 ರಲ್ಲಿ ಅಂದಿನ ಗೃಹಸಚಿವರಾಗಿದ್ದ ಎಲ್ ಕೆ ಅಡ್ವಾನಿ ಅವರು ಸಾರ್ವಜನಿಕ ಗುರುತಿನ ಚೀಟಿಯ (ಆಧಾರ್) ಪರಿಕಲ್ಪನೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದರು. ಈ ಮಾತು ಕೇಳುತ್ತಿದಂತೆ ರೇಣಿಕಾ ಚೌಧರಿ ಅವರು ಜೋರಾಗಿ ನಗಲು ಆರಂಭಿಸಿದರು. ಇದನ್ನು ಕಂಡು ಕಸಿವಿಸಿಗೊಂಡ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಏನಾದರೂ ಸಮಸ್ಯೆ ಇದ್ದರೆ ವೈದ್ಯರ ನೆರವು ಪಡೆಯಲು ಸೂಚಿಸಿದ್ದರು. ಈ ವೇಳೆ ಸಭಾಪತಿಗಳನ್ನು ಮಧ್ಯದಲ್ಲೇ ತಡೆದ ಪ್ರಧಾನಿ ಮೋದಿ ಅವರು, ರೇಣುಕಾ ಚೌಧರಿ ಅವರಿಗೆ ಏನನ್ನೂ ಹೇಳಬೇಡಿ. ರಾಮಾಯಣ ಧಾರಾವಾಹಿ ನೋಡುತ್ತಿದ್ದ ಕಾಲದ ನಂತರ ಮೊದಲ ಬಾರಿಗೆ ಇಂಥ ನಗುವನ್ನು ನೋಡುವ ಅವಕಾಶ ಲಭಿಸಿದೆ ಎಂದು ವ್ಯಂಗ್ಯವಾಡಿದ್ದರು. ಮೋದಿ ಮಾತು ಕೇಳಿ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಕುಟ್ಟಿ ನಕ್ಕಿದ್ದರು. ಮೋದಿ ಅವರ ಈ ಮಾತು ಸದನದಲ್ಲಿದ್ದ ವಿರೋಧಿ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿತ್ತು.

    ನಂತರ ಪ್ರಧಾನಿಗಳ ಈ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ. ಇಂತಹ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೇಣುಕಾ ಚೌಧರಿ ಕಿಡಿಕಾರಿದ್ದರು.    ಇದನ್ನೂ ಓದಿ : ಪ್ರಧಾನಿ ಮೋದಿ ಭಾಷಣಕ್ಕೆ ಸಚಿವೆ ಉಮಾಶ್ರೀ ಆಕ್ಷೇಪ !

    https://www.youtube.com/watch?v=97AkLw8FYpk

  • ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ನವದೆಹಲಿ: ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾವನ್ನು ಮಾರಾಟ ಮಾಡಿ ಮೋದಿ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

    ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ವ್ಯಾಪಾರಿ ಆಗುವುದು ಉತ್ತಮ. ಪಕೋಡಾ ಮಾರಾಟ ಮಾಡಲು ಯಾವುದೇ ಮುಜುಗರ ಪಡಬೇಕಿಲ್ಲ ಎಂದರು.

    ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಹಲವು ಸರ್ಕಾರಗಳು ಬಡತನ ನಿರ್ಮೂಲನೆ ಎಂಬ ಘೋಷಣೆಗಳನ್ನು ಇಟ್ಟು ಅಧಿಕಾರ ವಹಿಸಿಕೊಂಡರೂ ಯಶಸ್ವಿಯಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬರುತ್ತಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ನಮ್ಮ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮಿದೊಮ್ಮೆಗೆ ಬದಲಾವಣೆ ಮಾಡಲು ಸಾಧ್ಯವೇ? ವಿರೋಧಿಗಳ ಟೀಕೆಗಳನ್ನು ಕೇಳಲು ನಮಗೆ ಸಂತಸವಾಗುತ್ತಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್ 60 ವಷಗಳ ಅಧಿಕಾರ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಾವು ಈಗಾಗಲೇ ಉದ್ಯೋಗ ಸೃಷ್ಟಿಯ ಬಗ್ಗೆ ಕಾರ್ಯಪ್ರವೃತ್ತವಾಗಿದ್ದೇವೆ. ಸರ್ಕಾರದ ಸ್ಮಾರ್ಟ್ ಆಫ್ ಇಂಡಿಯಾ, ಮುದ್ರಾ ಯೋಜನಾ ಮುಂತಾದ ಯೋಜನೆಗಳು ಪ್ರಗತಿಯಲ್ಲಿದೆ ಎಂದರು.

    2014 ರಲ್ಲಿ ದೇಶದ ಜನರು ಶಕ್ತಿಶಾಲಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ ಅಭಿವೃದ್ಧಿ, ಶಾಂತಿಯನ್ನು ಬಯಸಿದ್ದಾರೆ. ಸರ್ಕಾರ ರಚನೆ ಮಾಡಲು ಸಂಪೂರ್ಣ ಬಹುಮತವಿದ್ದರೂ ಬಿಜೆಪಿ ಎನ್‍ಡಿಎ ಒಕ್ಕೂಟದ ಮಿತ್ರ ಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಿದೆ ಎಂದರು.

    ಅಮಿತ್ ಶಾ ಮೊದಲ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಭಾರತದಲ್ಲಿ #ShahSpeaksInRajyaSabha ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು.

    ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗವಾಗಿದ್ದು, ಪಕೋಡಾ ಮಾರಾಟ ಮಾಡುವ ವ್ಯಕ್ತಿ ಪ್ರತಿದಿನ ಸಂಜೆ 200 ರೂ. ಗಳಿಸುತ್ತಾರೆ ಎಂದಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿತ್ತು.

    ಬೆಂಗಳೂರಿನ ಆರಮನೆ ಮೈಧಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆ ವೇಳೆಯು ಪ್ರಧಾನಿಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿಶ್ವವಿದ್ಯಾಲಯ ಘಟಿಕೋತ್ಸವದ ದಿನ ವಿದ್ಯಾರ್ಥಿಗಳು ಧರಿಸುವ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪಕೋಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.