Tag: parliament

  • ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    – ಬ್ರೀಚ್ ಆಫ್ ಪ್ರಿವಿಲೇಜ್ ಎಚ್ಚರಿಕೆ ನೀಡಿದ ಸೂರ್ಯ
    – ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲವೆಂಬ ಆರೋಪ

    ನವದೆಹಲಿ: ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೊಲೀಸರಿಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿರುವ ಅವರು, ಜರಸಂಕೊ ಠಾಣೆಯ ಮಮತಾ ಪೊಲೀಸರು ಮೂವರು ಸಂಸದರು ನೀಡಿರುವ ದೂರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕಂಟ್ರಿ ಬಾಂಬ್ ಎಸೆದಿರುವ ಕುರಿತು ಸಂಸದರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಲ್ಲ. ಈ ಮೂಲಕ ಮೂವರು ಸಂಸದರನ್ನು ಅವಮಾನಿಸಿದ್ದಾರೆ, ದೂರು ನೀಡಿದ್ದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ನಾನು ಹಾಗೂ ಸಂಸದರಾದ ನಿಸಿತ್ ಪ್ರಮಣಿಕ್, ಜ್ಯೋತಿರ್ಮಯ ಸಿಂಗ್ ಮಹತೋ ಅವರು ದೂರು ನೀಡಿದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ತಪ್ಪು ಮಾಡಿದ ಹಾಗೂ ಸೊಕ್ಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಮೋಶನ್ ಮೂವ್ ಮಾಡುತ್ತೇವೆ ಎಂದು ಗುಡುಗಿದ್ದಾರೆ.

    ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ:
    ನಾವು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರೆ ಎಂದು ಮಧ್ಯರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾದಿದ್ದೇವೆ. ಆದರೆ ಎಫ್‍ಐಆರ್ ದಾಖಲಿಸಿದೆ 3 ಸಂಸತ್ ಸದಸ್ಯರಿಗೆ ಅವಮಾನಿಸಿದ್ದಾರೆ. ಹೀಗಾಗಿ ನಾವು ಮೋಶನ್ ಫಾರ್ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುತ್ತೇವೆ. ಈ ಮೂಲಕ ಮಮತಾ ಪೊಲೀಸರುಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಪೊಲೀಸ್ ಠಾಣೆ ಬಳಿಯ ವಿಡಿಯೋವನ್ನು ಸಹ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಅಪರಾಧ ನಡೆದಿರುವುದನ್ನು ಕಂಡರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇದರಿಂದಾಗಿ ಕಾನೂನು ಸಂಪೂರ್ಣವಾಗಿ ಕುಸಿದಿರುವುದು ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಪೊಲೀಸರ ವಿರುದ್ಧ ಕಿಡಿಕಾರಿರುವ ಅವರು, ಬಂಗಾಳದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜರಸಂಕೊ ಪೊಲೀಸ್ ಠಾಣೆ ಮುಂದೆ ಜಮಾವಣೆಯಾಗಿದ್ದಾರೆ. ಪೊಲೀಸರ ಮುಂದೆ ಎರಡು ಆಯ್ಕೆಗಳಿವೆ ಕಾನೂನು ರೀತಿ ಎಫ್‍ಐಆರ್ ದಾಖಲಿಸಿ ಇಲ್ಲವೇ ಪೊಲೀಸ್ ಸಮವಸ್ತ್ರ ತೆಗೆದು ಟಿಎಂಸಿ ಪಕ್ಷದ ಬಾವುಟಗಳನ್ನು ಹಿಡಿಯಿರಿ ಎಂದು ಗುಡುಗಿದ್ದಾರೆ.

    ನಬಣ್ಣ ಬಳಿ ಉದ್ವಿಗ್ನ ಪರಿಸ್ಥಿತಿ
    ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ಯುವ ಮೋರ್ಚಾದಿಂದ ಜಾಥಾ ನಡೆಸಲಾಗಿತ್ತು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳ ಪೊಲೀಸರ ಮಧ್ಯೆ ಭಾರೀ ಪ್ರಮಾಣದ ಸಂಘರ್ಷ ನಡೆದಿತ್ತು. ಅಶ್ರುವಾಯು, ಜಲ ಫಿರಂಗಿ ಹಾಗೂ ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿತ್ತು. ಅಲ್ಲದೆ ಜಾಥಾ ವೇಳೆ ತೃಣಮೂಲ ಕಾಂಗ್ರೆಸ್‍ನವರು ಕಂಟ್ರಿ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

    ಪಶ್ಚಿಮ ಬಂಗಾಳದ ಹೌರಾದ ಸಚಿವಾಲಯ ಕಚೇರಿ `ನಬಣ್ಣ’ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪಶ್ಚಿಮ ಬಂಗಾಳದ ಸಚಿವಾಲಯ `ನಬಣ್ಣ’ ಕಡೆಗೆ ಬಿಜೆಪಿ ಯುವ ಮೋರ್ಚಾದ ಮೆರವಣಿಗೆ ತೆರಳುತ್ತಿದ್ದಂತೆ ಪೊಲೀಸರು ಸಾವಿರಾರು ಕಾರ್ಯಕರ್ತರ ಕಡೆಗೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

    ಬ್ರೀಚ್ ಆಫ್ ಪ್ರಿವಿಲೇಜ್ ಎಂದರೇನು?
    ಸಂಸತ್ ಸದಸ್ಯರಿಗೆ ಸಂವಿಧಾನದಲ್ಲಿ ಸಂಸದೀಯ ಸವಲತ್ತುಗಳನ್ನು ನಿಡಲಾಗಿದೆ. ಇದಕ್ಕೆ ಪಾರ್ಲಿಮೆಂಟರಿ ಪ್ರಿವಿಲೇಜ್ ಎನ್ನುತ್ತಾರೆ. ಸಂಸದರು ತಮ್ಮ ವೈಯಕ್ತಿಕ ಸಾಮಥ್ರ್ಯದಿಂದ ಹಕ್ಕು ಚಲಾಯಿಸಬಹುದು ಹಾಗೂ ವಿನಾಯಿತಿಗಳನ್ನು ಸಹ ಇದರ ಅಡಿಯಲ್ಲಿ ನೀಡಲಾಗಿದೆ. ಈ ಯಾವುದೇ ಹಕ್ಕುಗಳು ಹಾಗೂ ವಿನಾಯಿತಿಗಳನ್ನು ಕಡೆಗಣಿಸಿದಾಗ ಇದನ್ನು ಬ್ರೀಚ್ ಆಫ್ ಪ್ರಿವಿಲೇಜ್ ಎಂದು ಕರೆಯಲಾಗುತ್ತದೆ. ಇದು ಸಂಸತ್ತಿನ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ.

  • ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ನವದೆಹಲಿ: ಸಂಸತ್ತಿನಿಂದ ಆದೇಶ ಕೊಟ್ಟರೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಓಕೆ) ವಶಕ್ಕೆ ಪಡೆಯಲು ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಹೇಳಿದ್ದಾರೆ.

    ಆರ್ಮಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ ಎಂಬುದು ಸಂಸತ್ತಿನ ನಿರ್ಣಯವಾಗಿದೆ. ಸಂಸತ್ತು ಬಯಸಿದರೆ ಆ ಪ್ರದೇಶವೂ (ಪಿಒಕೆ) ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ನಮ್ಮ ಸೈನ್ಯಕ್ಕೆ ಆದೇಶ ಸಿಕ್ಕರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಭಾರತೀಯ ಸೇನೆಯು ಮೊದಲಿಗಿಂತ ಈಗ ಉತ್ತಮವಾಗಿ ತಯಾರಾಗಿದೆ ಎಂದು ತಿಳಿಸಿದರು.

    ನಾವು ಭಾರತದ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡುತ್ತೇವೆ. ಸಂವಿಧಾನವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಹಾಗೂ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ನೀಡುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಿದಂತೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಅಧಿಕಾರಿಗಳಿಗೆ ಹಾಗೂ ಯೋಧರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

    ಭವಿಷ್ಯದ ಯುದ್ಧಗಳಿಗೆ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವುದು, ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸುವುದನ್ನು ಸ್ವಾಗತಿಸುತ್ತೇನೆ ಎಂದ ಮನೋಜ್ ಮುಕುಂದ್ ನಾರವಾಣೆ ಅವರು, ಇದು ಏಕೀಕರಣದತ್ತ ಒಂದು ದೊಡ್ಡ ಹೆಜ್ಜೆ ಎಂದು ತಿಳಿಸಿದರು.

    ಚೀನಾ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಗಡಿಯಲ್ಲಿ ಸವಾಲುಗಳನ್ನು ಎದುರಿಸಲು ಸೈನ್ಯವು ಸಿದ್ಧವಾಗಿದೆ. ಸಿಯಾಚಿನ್ ನಮಗೆ ಬಹಳ ಮುಖ್ಯವಾಗಿದೆ. ಅಲ್ಲಿ ಒಂದು ತಂಡವು ಪಶ್ಚಿಮ ಮತ್ತು ಉತ್ತರ ಪ್ರದೇಶಗಳನ್ನು ನೋಡಿಕೊಳ್ಳುತ್ತದೆ. ಇದು ಆಯಕಟ್ಟಿನ ಮಹತ್ವದ್ದಾಗಿದೆ. ಅಲ್ಲಿಂದಲೇ ಒಡಂಬಡಿಕೆ ಸಂಭವಿಸಬಹುದು ಎಂದು ಹೇಳಿದರು.

    ಅಧಿಕಾರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜನರಲ್ ನಾರವಾಣೆ, ಅಧಿಕಾರಿಗಳ ಕೊರತೆ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸುವ ಜನರ ಕೊರತೆ ಅಲ್ಲ. ನಾವು ಅಧಿಕಾರಿಗಳನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಕಡಿಮೆ ಮಾಡಿಲ್ಲ ಎಂದರು.

  • ಸಂಸತ್ತಿಗೆ ಓಡೋಡಿ ಬಂದ ಪಿಯೂಷ್ ಗೋಯಲ್ – ನೆಟ್ಟಿಗರಿಂದ ಪ್ರಶಂಸೆ

    ಸಂಸತ್ತಿಗೆ ಓಡೋಡಿ ಬಂದ ಪಿಯೂಷ್ ಗೋಯಲ್ – ನೆಟ್ಟಿಗರಿಂದ ಪ್ರಶಂಸೆ

    ನವದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಂಸತ್ ಕಲಾಪಕ್ಕೆ ಓಡೋಡಿ ಬಂದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

    ಬುಧವಾರ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸಭೆ ಮುಗಿಸಿ ಸಂಸತ್ ಕಲಾಪಕ್ಕೆ ಓಡೋಡಿ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಚಿವರ ಈ ಶ್ರದ್ಧೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚಿಗಷ್ಟೇ ಸಂಸತ್ತಿನಲ್ಲಿ ಪ್ರಶ್ನಾವಳಿಯ ಸಮಯದಲ್ಲಿ ಸಂಸದರು ಮತ್ತು ಸಚಿವರು ಗೈರಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಸಂಸತ್ತಿನಲ್ಲಿ ನಡೆದ ಪ್ರಶ್ನಾವಳಿಯ ಸಮಯಕ್ಕೆ ಹಾಜರಾಗಲು ಪಿಯೂಷ್ ಗೋಯಲ್ ಅವರು ಈ ರೀತಿ ಓಡಿ ಬಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನು ಓದಿ: ಕೇಂದ್ರ ಮಂತ್ರಿಗೆ ಕ್ಲಾಸ್ – ಗೈರಾದ ಸಂಸದರಿಗೂ ಬಿಸಿ ಮುಟ್ಟಿಸಿದ ಸ್ಪೀಕರ್

    ಗೋಯಲ್ ಓಡಿ ಬರುತ್ತಿರುವ ಫೋಟೋವನ್ನು ಬಿಜೆಪಿಯ ಸುರೇಶ್ ನಖುವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಚಿವ ಪಿಯುಷ್ ಗೋಯಲ್ ಜಿ ಅವರು ಕ್ಯಾಬಿನೆಟ್ ಸಭೆಯ ನಂತರ ಸಂಸತ್ತಿನ ಪ್ರಶೋತ್ತರ ಸಮಯಕ್ಕೆ ಹಾಜರಾಗಲು ಓಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಗೋಯಲ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ಕೆಲ ಟ್ವಿಟ್ಟರ್ ಬಳಕೆದಾರರು, ಈ ಫೋಟೋಗಳು ಪಿಯೂಷ್ ಗೋಯಲ್ ಅವರಿಗೆ ಅವರ ಕೆಲಸದ ಮೇಲೆ ಇರುವ ಶ್ರದ್ಧೆಯನ್ನು ಸೂಚಿಸುತ್ತದೆ. ಮೋದಿ ಜೀ ಅವರ ಸರ್ಕಾರದಲ್ಲಿ ನೀವು ಅತ್ಯಂತ ಬುದ್ಧಿವಂತ ಮತ್ತು ಒಳ್ಳೆಯ ಕೆಲಸ ಮಾಡುವ ಮಂತ್ರಿ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಕಾಯಕವೇ ಕೈಲಾಸ ಎಂಬುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ಪಿಯೂಷ್ ಗೋಯಲ್ ಅವರ ಬಗ್ಗೆ ತಿಳಿಯದ ಮಾಹಿತಿ ಎಂದರೆ ನಾನು ಒಂದು ಬಾರಿ ಅವರ ಜೊತೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದೇವೆ. ಅವರು ಯಾವುದೇ ಸೆಕ್ಯೂರಿಟಿ ಇಲ್ಲದೆ ಬಂದಿದ್ದರು ಮತ್ತು ಟರ್ಮಿನಲ್ ವರಿಗೂ ವಿಶೇಷ ವಾಹನ ಬಳಸದೆ ನಮ್ಮ ಜೊತೆ ಶಟಲ್ ಬಸ್ಸಿನಲ್ಲೇ ಬಂದರು ಎಂದು ಟ್ವಿಟ್ಟರ್ ಬಳಕೆದಾರ ರಾಜಿನೀಶ್ ಕಮೆಂಟ್ ಮಾಡಿದ್ದಾರೆ.

    https://twitter.com/Rajnish_Sood_/status/1202139764041953283

  • ಸಂಸತ್ ಕಲಾಪಕ್ಕೆ ಆಗಮಿಸಿದ ಪಿ.ಚಿದಂಬರಂ

    ಸಂಸತ್ ಕಲಾಪಕ್ಕೆ ಆಗಮಿಸಿದ ಪಿ.ಚಿದಂಬರಂ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿನ್ನೆಯಷ್ಟೇ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದಿದ್ದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ ಇಂದು ಸಂಸತ್ ಕಲಾಪಕ್ಕೆ ಹಾಜರಾದರು.

    ದೆಹಲಿಯ ತಿಹಾರ್ ಜೈಲಿನಲ್ಲಿ ಬರೋಬ್ಬರಿ 105 ದಿನಗಳ ಕಾಲ ಇದ್ದ ಚಿದಂಬರಂ ಅವರನ್ನು ಆಗಸ್ಟ್ 21 ರಂದು ಸಿಬಿಐ ಬಂಧನ ಮಾಡಿತ್ತು. 2007 ರಲ್ಲಿ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿಯಿಂದ ದೊರೆತ ಅನುಮೋದನೆಯನ್ನು ಪುತ್ರ ಕಾರ್ತಿ ಚಿದಂಬರಂ ಅವರ ಶಿಫಾರಸಿನ ಮೇಲೆ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಅವರ ಮೇಲೆ ಕೇಳಿ ಬಂದಿತ್ತು.

    ನ್ಯಾ. ಆರ್ ಭಾನುಮತಿ ನೇತೃತ್ವದ ತ್ರಿ ಸದಸ್ಯ ಪೀಠ ಚಿದಂಬರಂ ಡಿ.4 ರಂದು ಷರತ್ತುಬದ್ಧ ಜಾಮೀನು ನೀಡಿತ್ತು. ಈ ಮೂಲಕ ಸುಮಾರು 105 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಕೇಂದ್ರದ ಮಾಜಿ ಸಚಿವರಿಗೆ ಬುಧವಾರ ಬಿಡುಗಡೆಯ ಭಾಗ್ಯ ದೊರೆತಿತ್ತು. 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಸೇರಿದಂತೆ, ಅನುಮತಿಯಿಲ್ಲದೆ ದೇಶ ಬಿಡುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

    ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಮಾಜಿ ಸಚಿವರು ಸಾರ್ವಜನಿಕ ಹೇಳಿಕೆ ಹಾಗೂ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಎಂದು ಕೋರ್ಟ್ ಸೂಚಿಸಿತ್ತು. ನವೆಂಬರ್ 15ರಂದು ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಐಎನ್ ಎಕ್ಸ್ ಪ್ರಕರಣದಲ್ಲಿ ಚಿದಂಬರಂ ಅವರದ್ದು ಪ್ರಮುಖ ಪಾತ್ರವಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.  ಇದನ್ನೂ ಓದಿ:  ಬಂಧನಕ್ಕೊಳಗಾದ ನಂತರ ಚಿದಂಬರಂ ತೂಕ 8-9 ಕೆಜಿ ಕಡಿಮೆಯಾಗಿದೆ – ಕುಟುಂಬಸ್ಥರ ಬೇಸರ

  • ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ನವದೆಹಲಿ: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು ಸಂವಿಧಾನ ದಿನದ ಅಂಗವಾಗಿ ಸಂಸತ್ತಿನಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಭಾರತ ಮತ್ತು ಭಾರತೀಯರ ಘನತೆ ಮತ್ತು ಐಕ್ಯತೆಯ ಭಾಗವಾಗಿ ನಿಂತಿದೆ. ಇದನ್ನು ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು ಎಂದು ಹೇಳಿದರು.

    ಸಂವಿಧಾನವನ್ನು ಅಂಗೀಕರಿಸಿದ 70 ವರ್ಷಗಳಲ್ಲಿ ಭಾರತ ತನ್ನ ಪ್ರಜಾಪ್ರಭುತ್ವವನ್ನು ತುಂಬಾ ಬಲಪಡಿಸಿಕೊಂಡಿದೆ. ಸಂವಿಧಾನದಲ್ಲಿ ಎರಡು ಮಂತ್ರಗಳಿವೆ. ಒಂದು ಭಾರತೀಯರ ಘನತೆ ಇನ್ನೊಂದು ಭಾರತದ ಐಕ್ಯತೆ. ಈ ರೀತಿಯ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಆರ್ ಅಂಬೇಡ್ಕರ್ ಅವರಿಗೆ ನನ್ನ ಧನ್ಯವಾದಗಳು. ದೇಶದ ಮೊದಲ ಕಾನೂನು ಸಚಿವರಾಗಿದ್ದವರು ಯಾರು ಕೂಡ ಖುಷಿಯಿಂದ ಇರಲು ಸಾಧ್ಯವಿಲ್ಲ. ಆದ್ದರಿಂದ ಅಂಬೇಡ್ಕರ್ ಇಂದು ಬದುಕಿದ್ದರೆ ಸಂತೋಷವಾಗಿ ಇರುತ್ತಿದ್ದರು ಎಂದು ಮೋದಿ ಅಭಿಪ್ರಾಯಪಟ್ಟರು.

    ವಿರೋಧ ಪಕ್ಷದ ಪ್ರತಿಭಟನೆಯ ನಡುವೆಯೂ ಮಾತನಾಡಿದ ಮೋದಿ, ನಾನು 130 ಕೋಟಿ ಭಾರತೀಯರಿಗೆ ವಂದನೆ ಹೇಳುತ್ತೇನೆ. ಏಕೆಂದರೆ ಅವರು ಭಾರತದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಎಂದಿಗೂ ಕಡಿಮೆ ಮಾಡಿಲ್ಲ. ನಾನು ಯಾವಾಗಲೂ ನಮ್ಮ ಸಂವಿಧಾನವನ್ನು ಪವಿತ್ರ ಪುಸ್ತಕ ಮತ್ತು ಮಾರ್ಗದರ್ಶಕ ಬೆಳಕು ಎಂದು ಪರಿಗಣಿಸಿದ್ದೇನೆ ಎಂದು ಮೋದಿ ಬಣ್ಣಿಸಿದರು.

    ಇದೇ ವೇಳೆ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮಾತನಾಡಿದ ಮೋದಿ, ಭಾರತದ ಸಂವಿಧಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ತೋರಿಸುತ್ತದೆ. ಗಾಂಧೀಜಿ ಅವರು ಹೇಳಿರುವಂತೆ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ನಾವು ನಮ್ಮ ಮೂಲಭೂತ ಹಕ್ಕುಗಳನ್ನು ನಿರೀಕ್ಷಿಸಬಹುದು. ಹೀಗಾಗಿ ಗಾಂಧೀಜಿ ಹೇಳಿರುವಂತೆ ಕರ್ತವ್ಯಗಳು ಮತ್ತು ಹಕ್ಕುಗಳು ನೇರವಾಗಿ ಸಂಬಂಧ ಹೊಂದಿವೆ. ನಮ್ಮ ಪ್ರಜೆಗಳು ನಿರ್ವಹಿಸಬಹುದಾದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಹಲವಾರು ಸುಲಭ ಕರ್ತವ್ಯಗಳು ನಮ್ಮ ಸಂವಿಧಾನದಲ್ಲಿ ಇವೇ ಎಂದು ಮೋದಿ ತಿಳಿಸಿದ್ದಾರೆ.

    ಒಬ್ಬ ನಾಗರಿಕ ಒಂದು ಹನಿ ನೀರನ್ನು ಉಳಿಸಿದರೆ ಅದು ಅವನ ಕರ್ತವ್ಯ. ಚುನಾವಣೆಯಲ್ಲಿ ಮತದಾನ ಮಾಡಿದರೆ ಅದು ದೇಶಕ್ಕಾಗಿ ಮಾಡುವ ಒಂದು ಕೆಲಸ. ನಮ್ಮ ದೇಶದ ಪ್ರಜೆಗಳು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ಅದು ಆತ ದೇಶದ ಅಭಿವೃದ್ಧಿಗಾಗಿ ಮಾಡುವ ಒಂದು ಕರ್ತವ್ಯ. ಸರಿಯಾದ ಸಮಯಕ್ಕೆ ಆತ ರೋಗನಿರೋಧಕ ಔಷಧಿಯನ್ನು ತೆಗೆದುಕೊಂಡರೆ ಅದು ಕೂಡ ದೇಶಕ್ಕಾಗಿ ಮಾಡುವ ಕರ್ತವ್ಯ ಎಂದು ಮೋದಿ ಪ್ರಜೆಗಳ ಕರ್ತವ್ಯವನ್ನು ನೆನಪಿಸಿದ್ದಾರೆ.

    ಈ ಭಾಷಣದ ವೇಳೆ 2011 ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ ಮೋದಿ, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂಸತ್ತಿನ ಒಳಗೆ ಭಾಷಣ ಮಾಡುತ್ತಿದ್ದರೆ ಸಂಸತ್ತಿನ ಹೊರಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವುದನ್ನು ವಿರೋಧಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತು.

  • ಚಾಕು ಹಿಡಿದು ಸಂಸತ್ ಪ್ರವೇಶಕ್ಕೆ ಮುಂದಾದ ಯುವಕ

    ಚಾಕು ಹಿಡಿದು ಸಂಸತ್ ಪ್ರವೇಶಕ್ಕೆ ಮುಂದಾದ ಯುವಕ

    ನವದೆಹಲಿ: ಚಾಕು ಹಿಡಿದು ಘೋಷಣೆ ಕೂಗುತ್ತಾ ಸಂಸತ್ ಪ್ರವೇಶಿಸಲು ಮುಂದಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ದೆಹಲಿಯ ಲಕ್ಷ್ಮಿ ನಗರದ ನಿವಾಸಿ ಸಾಗರ್ ಇನ್ಸ ಇಂದು ಸಂಸತ್ ಭವನ ಪ್ರವೇಶಕ್ಕೆ ಮುಂದಾಗಿದ್ದನು. ಯುವಕ ಸ್ವಾಮಿ ರಾಮ್ ರಹೀಂ ಪರ ಘೋಷಣೆ ಕೂಗುತ್ತಿದ್ದನು. ಸಾಗರ್ ತನ್ನ ಬೈಕ್ ಮೂಲಕ ಸಂಸದ್ ಪ್ರವೇಶಿಸಿದ್ದನು. ಇದೀಗ ಪೊಲೀಸರು ಯುವಕ ಮತ್ತು ಆತನ ಬಳಿಯಲ್ಲಿದ್ದ ಚಾಕು, ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾರ್ಲಿಮೆಂಟ್ ಪೊಲೀಸರ ವಶದಲ್ಲಿರುವ ಸಾಗರ್ ವಿಚಾರಣೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಸಂಸದ್ ಭವನದ ಬಳಿ ಬಂದ ಯುವಕ ಚಾಕು ಹಿಡಿದು ಗುರಮಿತ್ ರಾಮ್ ರಹೀಂ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದನು. ಪ್ರವೇಶ ದ್ವಾರದ ಬಳಿಯಲ್ಲಿದ್ದ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ‘ಸುಮಲತಾ ಎಲ್ಲಿದ್ಯಮ್ಮಾ’ – ಟ್ರೋಲ್‍ಗಳಿಗೆ ಕಿವಿಕೊಡಲ್ಲ ಎಂದ ಸುಮಲತಾ

    ‘ಸುಮಲತಾ ಎಲ್ಲಿದ್ಯಮ್ಮಾ’ – ಟ್ರೋಲ್‍ಗಳಿಗೆ ಕಿವಿಕೊಡಲ್ಲ ಎಂದ ಸುಮಲತಾ

    ಮಂಡ್ಯ: ನಾನು ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರ ಬಿಟ್ಟು ದೆಹಲಿಗೆ ಹಾಲಿಡೇ ಟ್ರಿಪ್‍ಗೆ ತೆರಳಿರಲಿಲ್ಲ. ಅಧಿವೇಶನಕ್ಕೆ ತೆರಳಿದ್ದೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.

    ನಿಖಿಲ್ ಎಲ್ಲಿದ್ಯಪ್ಪಾ ಎಂದು ಟ್ರೋಲ್ ಮಾಡಿದ ರೀತಿಯಲ್ಲಿ, ಸುಮಲತಾ ಎಲ್ಲಿದ್ಯಮ್ಮಾ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಸಿರುವ ಅವರು, ಸೋಶಿಯಲ್ ಮೀಡಿಯಾದ ಟ್ರೋಲ್ ಹಾಗೂ ಟೀಕೆಗಳನ್ನು ಗಂಭಿರವಾಗಿ ಪರಿಗಣಿಸುವುದಿಲ್ಲ. ನಾನು ರಜೆಯ ಮಜಾ ಮಾಡಲು ದೆಹಲಿಗೆ ಹೋಗಿರಲಿಲ್ಲ. ಬದಲಿಗೆ ಅಧಿವೇಶನಕ್ಕೆ ತೆರಳಿದ್ದೆ. ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ಸದನಕ್ಕೆ ಹಾಜರಾಗದಿದ್ದಲ್ಲಿ ಜನರಲ್ಲಿ ತಪ್ಪು ತಿಳುವಳಿಕೆ ಉಂಟಾಗುತ್ತದೆ. ಹೀಗಾಗಿ ಅಧಿವೇಶನದಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದ್ದಾರೆ.

    ಒಬ್ಬ ಸಂಸದೆಯಾಗಿ ಕೇಂದ್ರದ ನಾಯಕರೊಂದಿಗೆ ಸಂಪರ್ಕ ಸಾಧಿಸದಿದ್ದಲ್ಲಿ ಕ್ಷೇತ್ರದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏನೇ ಟೀಕೆ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ನಂಬಿಕೆ ನನಗಿದೆ ಎಂದರು.

    ದರ್ಶನ್ ಬರುತ್ತಿಲ್ಲ, ಯಶ್ ಬರುತ್ತಿಲ್ಲ ಎಂದು ಹೇಳುವುದಲ್ಲ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಕೆಲಸ ಮಾಡಬೇಕು. ಡೇಂಜರ್, ರೆಡ್ ಅಲರ್ಟ್ ರೀತಿಯ ವಾತಾವರಣ ಮಂಡ್ಯದಲ್ಲಿಲ್ಲ. ಡೇಂಜರ್ ರೀತಿಯಲ್ಲಿ ಯಾವುದೇ ಪ್ರವಾಹವಿಲ್ಲ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ. ಕಾವೇರಿ ನೀರಿನ ವಿಚಾರ ಕಾವೇರಿ ಪ್ರಾಧಿಕಾರದ ಅಡಿಯಲ್ಲಿ ನಡೆಯಲಿದೆ. ಕಾವೇರಿ ಟ್ರಿಬ್ಯುನಲ್ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಮಂಗಳವಾರದಿಂದ ಸೆಪ್ಟೆಂಬರ್ ವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದೇನೆ. ಅಧಿಕಾರಿಗಳು, ಸಾರ್ವಜನಿಕರ ಜೊತೆ ಸಭೆ ಕರೆದು ಚರ್ಚಿಸಲಾಗುವುದು. ಸಮಾವೇಶದಿಂದ ಸಮಯ ವ್ಯರ್ಥವಾಗಲಿದೆ. ಹೀಗಾಗಿ ಸಮಾವೇಶದ ಬದಲಿಗೆ ಜನರ ಬಳಿಗೆ ಹೋಗುತ್ತೇವೆ. ಜನತಾ ದರ್ಶನದ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಅಧಿಕೃತವಾಗಿ ಕಚೇರಿ ತೆರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಈ ಮೂಲಕ ಜನರ ಸಮಸ್ಯೆ ಪರಿಹಾರ, ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.

    ನೆರೆ ಪೀಡಿತರ ನೆರವಿಗೆ ಸಿನಿಮಾ ಇಂಡಸ್ಟ್ರಿ ಮೂಲಕ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ಚರ್ಚೆ ನಡೆಸಲಾಗುವುದು. ಆದರೆ, ಕನ್ನಡ ಫಿಲ್ಮ್ ಇಂಡಸ್ಟ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಉತ್ತಮ ನಿರ್ಧಾರ
    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಉತ್ತಮವಾಗಿದೆ. ನಾವು ಹಲವು ಬಾರಿ ಶೂಟಿಂಗ್‍ಗಾಗಿ ಕಾಶ್ಮೀರಕ್ಕೆ ತೆರಳಿದಾಗ ಅಲ್ಲಿನ ಹಲವು ಷರತ್ತುಗಳು ಅರಿವಿಗೆ ಬಂದಿದ್ದವು. ಇದ್ಯಾವ ನ್ಯಾಯ ಎಂದು ಮನಸ್ಸಿಗೆ ಆಗಲೇ ಅನ್ನಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ರದ್ದಾಗಿರುವುದು ಸಂತೋಷ ತಂದಿದೆ ಎಂದು ಸುಮಲತಾ ತಿಳಿಸಿದರು.

    ಪ್ರಧಾನಿಯವರನ್ನು ಭೇಟಿ ಮಾಡಿದ ವೇಳೆ ಮಂಡ್ಯದ ಅಭಿವೃದ್ಧಿಗೆ ಮನವಿ ಮಾಡಿದ್ದೆ. ನಿಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದ್ದರು. ಡ್ಯಾಂ ಸೇಫ್ಟಿ ಬಿಲ್ ವಿಚಾರ ಬಂದಾಗ ಕೆಆರ್ ಎಸ್ ಬಗ್ಗೆ ಮಾತನಾಡಿದ್ದು, ಲೋಕಸಭೆಯಲ್ಲಿ ಗಮನ ಸೆಳೆಯಲಾಗುವುದು. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ಸಭೆ ಕರೆದಾಗಲೂ ಈ ಕುರಿತು ಮನವಿ ಮಾಡಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

  • ಪಂಜಾಬ್ ಸಿಎಂ ಪತ್ನಿಗೆ ಬಂತು ‘ಬ್ಯಾಂಕ್’ ಕಾಲ್ – 23 ಲಕ್ಷ ರೂ. ಹೋಯ್ತು

    ಪಂಜಾಬ್ ಸಿಎಂ ಪತ್ನಿಗೆ ಬಂತು ‘ಬ್ಯಾಂಕ್’ ಕಾಲ್ – 23 ಲಕ್ಷ ರೂ. ಹೋಯ್ತು

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರೀನೀತ್ ಕೌರ್ ಸೈಬರ್ ವಂಚನೆಗೆ ಬಲಿಯಾಗಿದ್ದು, 23 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

    ಪಟಿಯಾಲಾದ ಕಾಂಗ್ರೆಸ್ ಸಂಸದೆಯೂ ಆಗಿರುವ ಪ್ರೀನೀತ್ ಕೌರ್ ಅವರನ್ನು ಕೆಲ ದಿನಗಳ ಹಿಂದೆ ವಂಚಿಸಲಾಗಿತ್ತು. ಜಾರ್ಖಂಡ್‍ನ ರಾಂಚಿಯಲ್ಲಿ ಆರೋಪಿಯ ಫೋನ್ ಕರೆಗಳನ್ನು ಟ್ರೇಸ್ ಮಾಡಿ ಆತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರ ತಂಡ ಯಶಸ್ವಿಯಾಗಿದೆ. ಆತನನ್ನು ಜಾರ್ಖಂಡ್‍ನಿಂದ ಕರೆ ತರಲಾಗುತ್ತಿದೆ ಎಂದು ಪಟಿಯಾಲಾದ ಹಿರಿಯ ಎಸ್‍ಪಿ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

    ವಂಚಿಸಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಪ್ರೀನೀತ್ ಕೌರ್ ಅವರು ಸಂಸತ್ ಅಧಿವೇಶನಕ್ಕೆ ದೆಹಲಿಗೆ ತೆರಳಿದ್ದರು. ಆಗ ಅವರು ಕರೆಯೊಂದನ್ನು ಸ್ವೀಕರಿಸಿದ್ದಾರೆ. ನಾನು ರಾಷ್ಟ್ರೀಕೃತ ಬ್ಯಾಂಕ್‍ನ ಮ್ಯಾನೇಜರ್ ಎಂದು ವ್ಯಕ್ತಿಯೊಬ್ಬ ಫೋನ್ ಕರೆಯಲ್ಲಿ ಹೇಳಿದ್ದಾನೆ. ಸಂಬಳವನ್ನು ನಿಮ್ಮ ಖಾತೆಗೆ ಹಾಕಬೇಕು ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ತಿಳಿಸಿ ಎಂದು ನಯವಾಗಿ ಕೇಳಿದ್ದಾನೆ.

    ಆರೋಪಿಯು ಬ್ಯಾಂಕ್ ಮ್ಯಾನೇಜರ್ ರೀತಿ ಮಾತನಾಡಿ ಸಂಸದೆಯನ್ನು ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲದೆ, ಅವರಿಂದ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ಪಿನ್, ಸಿವಿವಿ ನಂಬರ್ ಹಾಗೂ ಸಂಸದ ಮೊಬೈಲ್‍ಗೆ ಬಂದಿದ್ದ ಓಟಿಪಿ(ಒನ್ ಟೈಮ್ ಪಾಸ್ವರ್ಡ್) ಸಹ ಪಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಹಿತಿ ಪಡೆದು ವ್ಯಕ್ತಿ ಕಾಲ್ ಕಟ್ ಮಾಡುವಷ್ಟರಲ್ಲಿ ಬ್ಯಾಂಕ್ ಅಕೌಂಟ್‍ನಿಂದ 23 ಲಕ್ಷ ರೂ. ತೆಗೆಯಲಾಗಿದೆ ಎಂದು ಸಂಸದೆ ಪ್ರೀನೀತ್ ಕೌರ್ ಅವರಿಗೆ ಎಸ್‍ಎಂಎಸ್ ಬಂದಿದೆ. ತಕ್ಷಣವೇ ಕೌರ್ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಆರೋಪಿಯ ಮೊಬೈಲ್ ಟ್ರೇಸ್ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    – 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್

    ನವದೆಹಲಿ: ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಧಾನಿ ಮೋದಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗುವಿನ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ನನ್ನನ್ನು ಭೇಟಿಯಾಗಲು ಸಂಸತ್‍ಗೆ ವಿಶೇಷ ಸ್ನೇಹಿತರೊಬ್ಬರು ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮಹಾರಾಷ್ಟ್ರದ ಉಜ್ಜೈನಿ ಬಿಜೆಪಿ ಸಂಸದ ಸತ್ಯನಾರಾಯಣ ಜಾಟಿಯಾ ಕುಟುಂಬ ಇಂದು ಸಂಸತ್ತು ನೋಡಲು ಆಗಮಿಸಿತ್ತು. ಈ ವೇಳೆ ಸದಸ್ಯರು ಪ್ರಧಾನಿ ಕಚೇರಿಗೆ ಭೇಟಿ ನೀಡಿದಾಗ ಈ  ಮೋದಿ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗನನ್ನು ಎತ್ತಿ ಆಡಿಸಿದ್ದರು.

    https://www.instagram.com/p/B0QPjPLFlUo/

    ಈ ಫೋಟೋ ಅಪ್‍ಲೋಡ್ ಆದ ಕೇವಲ 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್, ಫೇಸ್‍ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ಕಮೆಂಟ್ ಮಗು ಯಾರದ್ದು ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.

    ನರೇಂದ್ರ ಮೋದಿ ಅವರು ಮುದ್ದಾದ ಮಗುವನ್ನು ಎತ್ತಿಕೊಂಡು ಆಟವಾಗಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಮೋದಿ ಅವರು ಮಗುವಿನ ಕಾಲು ಹಿಡಿದು ತೋಳುಗಳಲ್ಲಿ ಆಟ ಆಡುವ ಕಂದನ ನಗುವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗು ಟೇಬಲ್ ಮೇಲೆ ಇಟ್ಟಿರುವ ಚಾಕೋಲೆಟ್‍ಗಳನ್ನು ಕಂಡು ಖುಷಿ ಪಡುತ್ತಿರುವ ಕ್ಷಣವನ್ನು ನಗುವಿನೊಂದಿಗೆ ಗಮನಿಸುತ್ತಿದ್ದಾರೆ.

    ಪ್ರಧಾನಿ ಮೋದಿ ಅವರು ಮಕ್ಕಳನ್ನು ಎತ್ತಿ ಮುದ್ದಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಸಂದರ್ಶನ, ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಮುದ್ದಾಡಿದ್ದಾರೆ. ಆದರೆ ಈ ಬಾರಿ ವಿಶೇಷ ಅತಿ ಎಂದು ಹೇಳಿರುವುದು ನೆಟ್ಟಿಗರ ಕುತೂಹಲಕ್ಕೆ ಕಾರಣಂವಾಗಿದೆ.

  • ಅಂಚೆ ಇಲಾಖೆಯ ಎಕ್ಸಾಮ್: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮರು ಪರೀಕ್ಷೆ

    ಅಂಚೆ ಇಲಾಖೆಯ ಎಕ್ಸಾಮ್: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮರು ಪರೀಕ್ಷೆ

    ನವದೆಹಲಿ: ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಜುಲೈ 14ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಮರು ಪರೀಕ್ಷೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಜುಲೈ 14ರಂದು ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ದೇಶದ ವಿವಿಧ ರಾಜ್ಯದ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಪರೀಕ್ಷೆ ಬರೆದಿದ್ದರು. ಆದರೆ ಕಳೆದ ವರ್ಷ ಇದೇ ಪರೀಕ್ಷೆಯನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ 15 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿತ್ತು. ಆದರೆ ಈ ವರ್ಷ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗಿದೆ. ಅಷ್ಟೇ ಅಲ್ಲದೆ ಪರೀಕ್ಷೆಗೆ ಮೂರು ದಿನಗಳು ಬಾಕಿ ಇರುವಾಗ ಅಂದರೆ ಜುಲೈ 11ರಂದು ಈ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಆಘಾತ ಉಂಟಾಗಿತ್ತು. ಈ ದಿಢೀರ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಮಂಗಳವಾರದ ಲೋಕಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಗುಡುಗಿ, ಮರು ಪರೀಕ್ಷೆ ನಡೆಸಬೇಕು ಒತ್ತಾಯಿದರು.

    ಈ ಕುರಿತು ಧ್ವನಿ ಎತ್ತಿದ ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದರು, ಪರೀಕ್ಷೆಗೆ ಕೇವಲ 3 ದಿನ ಬಾಕಿ ಇರುವಾಗ ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು? ಸರ್ಕಾರದ ಈ ನಡೆಯಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿಕೊಂಡರು ಎಂದು ಚಾಟಿ ಬೀಸಿದರು.

    ವಿರೋಧ ಪಕ್ಷದ ಸಂಸದರ ಒತ್ತಾಯಕ್ಕೆ ಮಣಿದ ಅಂಚೆ ಇಲಾಖೆ ಸಚಿವ ರವಿ ಶಂಕರ್ ಪ್ರಸಾದ್ ಅವರು, ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಜುಲೈ 14ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗುತ್ತದೆ. ಈ ಮೂಲಕ 15 ಪ್ರಾದೇಶಿಕ ಭಾಷೆಗಳಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.