Tag: parliament session

  • Union Budget 2023: ಮಂಗಳವಾರದಿಂದ ಬಜೆಟ್ ಅಧಿವೇಶನ – ಫೆ. 1ಕ್ಕೆ ಬಜೆಟ್ ಮಂಡನೆ

    Union Budget 2023: ಮಂಗಳವಾರದಿಂದ ಬಜೆಟ್ ಅಧಿವೇಶನ – ಫೆ. 1ಕ್ಕೆ ಬಜೆಟ್ ಮಂಡನೆ

    ನವದೆಹಲಿ: ಮಂಗಳವಾರದಿಂದ ಬಜೆಟ್ ಅಧಿವೇಶನ (Budget Session) ಪ್ರಾರಂಭವಾಗುತ್ತಿದ್ದು, ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ ಐದನೇ ಬಾರಿ ಬಜೆಟ್ (Budget) ಮಂಡಿಸಲಿದ್ದಾರೆ.

    2024ರ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಸತ್ ಭವನದಲ್ಲಿಂದು ಸರ್ವಪಕ್ಷ ಸಭೆ ಕರೆದಿತ್ತು. ಲೋಕಸಭೆ ಉಪ ನಾಯಕ ರಾಜನಾಥ್ ಸಿಂಗ್ (Rajnath Singh), ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ನೇತೃತ್ವದಲ್ಲಿ ನಡೆದ ಸಭೆಗೆ, ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪ ಸಮಾರಂಭದ ಕಾರಣ ಕಾಂಗ್ರೆಸ್ ನಾಯಕರು ಗೈರಾಗಿದ್ದರು. ಉಳಿದಂತೆ, ಡಿಎಂಕೆ, ಟಿಎಂಸಿ, ಬಿಆರ್‌ಎಸ್‌, ವೈಎಸ್‍ಆರ್ ಕಾಂಗ್ರೆಸ್, ಜೆಡಿಯು, ಶಿವಸೇನಾ ಸೇರಿ 27 ಪಕ್ಷಗಳ 37 ನಾಯಕರು ಪಾಲ್ಗೊಂಡಿದ್ರು. ಸುಗಮ ಕಲಾಪಕ್ಕೆ ಅವಕಾಶ ನೀಡ್ಬೇಕೆಂದು ವಿಪಕ್ಷಗಳಿಗೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಕೋರಿದ್ರು. ಇದನ್ನೂ ಓದಿ: ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಅಮಿತ್ ಶಾ ಸಹಿತ ಬಿಜೆಪಿ ನಾಯಕರಿಗೆ ಅಸಾಧ್ಯ – ಅವರಿಗೆ ಭಯವಿದೆ: ರಾಹುಲ್ ಗಾಂಧಿ

    ಈ ನಡುವೆ ಹಿಂಡನ್‍ಬರ್ಗ್ ವರದಿಯ ಚರ್ಚೆಗೆ ಅವಕಾಶ ನೀಡ್ಬೇಕೆಂದು ಎಎಪಿ ಆಗ್ರಹಿಸಿತು. ಜಾತಿ ಗಣತಿಗೆ ವೈಎಸ್‍ಆರ್ ಕಾಂಗ್ರೆಸ್ ಒತ್ತಾಯಿಸಿತು. ಈ ಮಧ್ಯೆ, ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣವನ್ನು ಬಹಿಷ್ಕರಿಸಲು ಬಿಆರ್‌ಎಸ್‌ ನಿರ್ಧರಿಸಿದೆ. ಮಂಗಳವಾರ ಸಂಜೆ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಒಟ್ಟು ಎರಡು ಹಂತದಲ್ಲಿ ಈ ಅಧಿವೇಶನ ನಡೆಯಲಿದೆ. ನಾಳೆಯಿಂದ ಫೆಬ್ರವರಿ 13 ರವರೆಗೆ ಮತ್ತು ಕೊನೆಯ ಹಂತ ಮಾರ್ಚ್ 13 ರಿಂದ ಏಪ್ರಿಲ್ 6ರವರೆಗೆ ಅಧಿವೇಶನ ನಡೆಯಲಿದೆ. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ಸಾಯುತ್ತೇನೆ: ನಿತೀಶ್ ಕುಮಾರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೃಹ ಸಚಿವರು ಚಪ್ಪಲಿ ಧರಿಸಬಹುದು, ಅವರ ಭೇಟಿಗೆ ಹೋದವ್ರು ಧರಿಸುವಂತಿಲ್ಲ: ರಾಗಾ ಆರೋಪಕ್ಕೆ BJP ವಿರೋಧ

    ಗೃಹ ಸಚಿವರು ಚಪ್ಪಲಿ ಧರಿಸಬಹುದು, ಅವರ ಭೇಟಿಗೆ ಹೋದವ್ರು ಧರಿಸುವಂತಿಲ್ಲ: ರಾಗಾ ಆರೋಪಕ್ಕೆ BJP ವಿರೋಧ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮನೆಯಲ್ಲಿ ಮಣಿಪುರದ ರಾಜಕಾರಣಿಗಳ ಗುಂಪೊಂದು ತಮ್ಮ ಶೂಗಳನ್ನು ತೆಗೆಯುವಂತೆ ಒತ್ತಾಯಿಸಲಾಗಿತ್ತು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಯಿತು.

    ಸರ್ಕಾರದ ನೀತಿಗಳ ಕುರಿತು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಕಾಂಗ್ರೆಸ್‌ ನಾಯಕರು ಸಂಸತ್ತಿನಲ್ಲಿ ಈ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ

    ಅಮಿತ್‌ ಶಾ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಭಾಷಣ ಮಾಡಿದ ರಾಹುಲ್‌ ಗಾಂಧಿ ಅವರು, ಗೃಹ ಸಚಿವರು ಕ್ಷಮೆಯಾಚಿಸಬೇಕು. ಕೆಲವು ದಿನಗಳ ಹಿಂದೆ ಮಣಿಪುರದಿಂದ ಕೆಲವು ರಾಜಕೀಯ ನಾಯಕರು ನನ್ನ ಬಳಿಗೆ ಬಂದರು. ಅವರು ತುಂಬಾ ಉದ್ರೇಕಗೊಂಡಿದ್ದರು. ಮಣಿಪುರದ ರಾಜಕಾರಣಿಗಳ ನಿಯೋಗವು ಗೃಹ ಸಚಿವರನ್ನು ನೋಡಲು ಹೋಗಿತ್ತು. ಅವರ ಮನೆಯ ಹೊರಗೆ ರಾಜಕಾರಣಿಗಳ ಬೂಟುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದರು. ಆದರೆ ಮನೆಯೊಳಗಡೆ ಗೃಹ ಸಚಿವರು ಚಪ್ಪಲಿ ಧರಿಸಿದ್ದನ್ನು ಕಂಡಿದ್ದೆವು ಎಂದು ರಾಜಕಾರಣಿಗಳು ದೂರಿದ್ದಾರೆ ಎಂದು ರಾಹುಲ್‌ ಗಾಂಧಿ ತಿಳಿಸಿದ್ದರು.

    ಏನಿದರ ಅರ್ಥ? ಗೃಹ ಸಚಿವರು ತಮ್ಮ ಮನೆಯಲ್ಲಿ ಚಪ್ಪಲಿ ಧರಿಸಬಹುದು. ಆದರೆ ಅವರನ್ನು ಭೇಟಿಯಾಗಲು ಹೋದವರು ಮಾತ್ರ ಧರಿಸಬಾರದು ಎಂದರೆ ಅರ್ಥವೇನು? ಇದು ಭಾರತದ ಜನರೊಂದಿಗೆ ವ್ಯವಹರಿಸುವ ಮಾರ್ಗವಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು. ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

    ರಾಹುಲ್‌ ಗಾಂಧಿ ಅವರ ಈ ಆರೋಪವನ್ನು ಬಿಜೆಪಿ ಸಂಸದರು ಅಲ್ಲಗಳೆದು, ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

  • ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಲು ರಾಜ್ಯಸಭೆಯಲ್ಲಿ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹ

    ಆನ್‌ಲೈನ್ ರಮ್ಮಿ ಗೇಮ್ ನಿಷೇಧಿಸಲು ರಾಜ್ಯಸಭೆಯಲ್ಲಿ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹ

    ನವದೆಹಲಿ: ಆನ್‌ಲೈನ್ ರಮ್ಮಿ ಗೇಮ್‍ನಿಂದ ದೇಶದ ಯುವಕರು ದಾರಿ ತಪ್ಪುತ್ತಿದ್ದು, ಹಣ ಕಳೆದುಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ರಮ್ಮಿ ನಿಷೇಧಿಸುವಂತೆ ರಾಜ್ಯಸಭೆ ಸಂಸದ ಕೆ.ಸಿ ರಾಮಮೂರ್ತಿ ಆಗ್ರಹಿಸಿದ್ದಾರೆ.

    ಇಂದು ರಾಜ್ಯಸಭೆಯಲ್ಲಿ ಈ ಬಗ್ಗೆ ವಿಶೇಷ ಗಮನ ಸೆಳೆದ ಕೆ.ಸಿ ರಾಮಮೂರ್ತಿ, ಕ್ರಿಕೆಟಿಗ ಎಂ.ಎಸ್ ಧೋನಿ ಮತ್ತು ಅನೇಕ ನಟ-ನಟಿಯರು ಈ ಗೇಮ್ ಗಳಿಗೆ ಜಾಹೀರಾತು ನೀಡುತ್ತಿದ್ದು ಇದರಿಂದ ದೇಶದ ಯುವಕರು ಪ್ರೇರಣೆಗೊಳ್ಳುತ್ತಿದ್ದಾರೆ ಎಂದರು.

    ಆನ್‌ಲೈನ್ ರಮ್ಮಿ ಕೌಶಲ್ಯಯುತ ಆಟ ಎಂದು ಪರಿಗಣಿಸಿದೆ ಆದರೆ ಹೆಚ್ಚಿನ ಹಣ ಪಡೆಯುವ ದುರಾಸೆಯಲ್ಲಿ ಹೆಚ್ಚಿನ ಹಣವನ್ನು ಜೂಜಿನಲ್ಲಿಡಲಾಗುತ್ತಿದೆ. ಬೆಟ್ಟಿಂಗ್ ಎನ್ನುವುದು ಕೌಶಲ್ಯವಲ್ಲ ಈ ಬೆಳವಣಿಗಳನ್ನು ಕುಟುಂಬದ ಆರ್ಥಿಕತೆಯನ್ನು ಹಾಳು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಬೆಟ್ಟಿಂಗ್ ದಂಧೆಗೆ ಬೀಳುವ ಯುವಕರು ಆನ್‌ಲೈನ್ ಗೇಮಿಂಗ್ ವ್ಯಸನಿಗಳಾಗುತ್ತಿದ್ದಾರೆ. ವಿಶೇಷ ಜಾಹೀರಾತು ಬಳಸಿ ಇದು ಲಾಭದಾಯಕ ಎಂದು ಬಿಂಬಿಸಲಾಗುತ್ತಿರುವುದು ದುರದೃಷ್ಟಕರ. ಇದನ್ನು ನಂಬಿ ಯುವಕರು ಹಣ ಕಳೆದುಕೊಂಡು ಬಳಿಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ಕೆಪಿಎಂಜಿ ವರದಿಯನ್ನು ಉಲ್ಲೇಖಿಸಿದ ಅವರು, ಆನ್‍ಲೈನ್ ರಿಯಲ್ ಮನೀ ಗೇಮಿಂಗ್ ಉದ್ಯಮವು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಇದು ವಾರ್ಷಿಕವಾಗಿ 30% ರಷ್ಟು ಬೆಳೆಯುತ್ತಿದೆ. 2023 ರ ವೇಳೆಗೆ 12,000 ಕೋಟಿ ರೂ ಆಗಲಿದೆ.

    ಪ್ರಪಂಚದಲ್ಲಿ ಈ ವೇಗದಲ್ಲಿ ಬೆಳೆಯಬಲ್ಲ ಯಾವುದೇ ಉದ್ಯಮವನ್ನು ನಾನು ನೋಡಿಲ್ಲ, ಆನ್‍ಲೈನ್ ರಮ್ಮಿಯನ್ನು ಒಳಗೊಂಡ ಆನ್‍ಲೈನ್ ನೈಜ ಹಣದ ಗೇಮಿಂಗ್ ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಹೀಗಾಗಿ ಆನ್‍ಲೈನ್ ರಮ್ಮಿ ಗೇಮ್ ನಿಷೇಧಿಸುವಂತೆ ಒತ್ತಾಯಿಸಿದರು.

  • ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ 17 ಸಂಸದರಿಗೆ ಕೊರೊನಾ

    ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ 17 ಸಂಸದರಿಗೆ ಕೊರೊನಾ

    ನವದೆಹಲಿ: ಮೊದಲ ದಿನದ ಸಂಸತ್ ಅಧಿವೇಶನದ ವೇಳೆ 17 ಜನ ಸಂಸದರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.

    ದೇಶದಲ್ಲಿ ಕೊರೊನಾ ಸಂಕಷ್ಟವಿದ್ದರೂ ಹಲವಾರು ಮನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಂಡು ಇಂದು ಸಂಸತ್ ಅಧಿವೇಶನವನ್ನು ಆರಂಭ ಮಾಡಲಾಗಿತ್ತು. ಆದರೆ ಇದರಲ್ಲಿ ಭಾಗವಹಿಸಿದ್ದ ಬಿಜೆಪಿಯ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ಮೋದಿಯವರು, ಈ ಬಾರಿ ವಿಭಿನ್ನ ಪರಿಸ್ಥಿತಿಯಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಕೊರೊನಾ ಜೊತೆಗೆ ಕರ್ತವ್ಯ ನಿರ್ವಹಿಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ನಮ್ಮ ಸಂಸದರು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಬಜೆಟ್ ಅಧಿವೇಶನವನ್ನ ಸಮಯಕ್ಕಿಂಂತ ಮುಂಚಿತವಾಗಿ ನಿಲ್ಲಿಸಬೇಕಾಯ್ತು ಎಂದಿದ್ದರು.

    ಮಾಹಾಮಾರಿ ಕೊರೊನಾಗೆ ಲಸಿಕೆ ಸಿಗೋವರೆಗೂ ನಿರ್ಲಕ್ಷ್ಯ ಬೇಡ. ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವಲ್ಲಿ ಆದಷ್ಟು ಬೇಗ ಸಫಲರಾಗಬೇಕಿದೆ. ವಿಶ್ವದ ಯಾವುದೇ ಮೂಲೆಯಿಂದ ಔಷಧಿ ಸಿದ್ಧವಾದ್ರೆ ಅದುವೇ ಸಂತೋಷದ ವಿಚಾರ. ಹಾಗೆ ಪತ್ರಕರ್ತರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಕೊರೊನಾ ವೈರಸ್ ಹಿನ್ನೆಲೆ ಸದನಗಳಲ್ಲಿ ಹಲವು ನಿಯಮಗಳನ್ನ ರೂಪಿಸಲಾಗಿದ್ದು, ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದರು.

    ಕೊರೊನಾ, ಆರ್ಥಿಕತೆ ಕುಸಿತ ಸೇರಿದಂತೆ ದೇಶದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ ನಡುವೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯ ನಡುವೆ ಇಂದಿನಿಂದ ಸಂಸತ್ ಕಲಾಪ ಆರಂಭವಾಗಿತ್ತು.

  • ಕೊರೊನಾ ಸಂಕಷ್ಟದ ಬಳಿಕ ಸಂಸತ್ ಮೊದಲ ಅಧಿವೇಶನ

    ಕೊರೊನಾ ಸಂಕಷ್ಟದ ಬಳಿಕ ಸಂಸತ್ ಮೊದಲ ಅಧಿವೇಶನ

    – ಸುರಕ್ಷತೆಗೆ ಆದ್ಯತೆ, ಸಂಸತ್ತಿನಲ್ಲಿ ಹಲವು ಹೊಸತನಕ್ಕೆ ಮುನ್ನುಡಿ
    – ಐವರು ಸಂಸದರಿಗೆ ಕೊರೊನಾ

    ನವದೆಹಲಿ: ಕೊರೊನಾ ಭಾರತವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ಸಂಕಷ್ಟದ ನಡುವೆ ಇಂದಿನಿಂದ ಸಂಸತ್ ಅಧಿವೇಶನಗಳು ಆರಂಭವಾಗಲಿದೆ. ಕೊರೊನಾ ಭೀತಿ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಕಲಾಪಗಳನ್ನು ನಡೆಯುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಹಲವು ಹೊಸತನಕ್ಕೆ ಆದ್ಯತೆ ನೀಡಲಾಗುತ್ತಿದೆ.

    ಕೊರೊನಾ, ಆರ್ಥಿಕತೆ ಕುಸಿತ ಸೇರಿದಂತೆ ದೇಶದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ ನಡುವೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯ ನಡುವೆ ಇಂದಿನಿಂದ ಸಂಸತ್ ಕಲಾಪ ಆರಂಭವಾಗಲಿದೆ.

    ಕೊರೊನಾ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಹಿನ್ನೆಲೆ ಸಾಕಷ್ಟು ವಿಶೇಷ ತಯಾರಿಗಳನ್ನು ಈ ಬಾರಿ ಸಂಸತ್ ಭವನದಲ್ಲಿ ಮಾಡಿಕೊಳ್ಳಲಾಗಿದೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.

    ಈ ಬಾರಿ ಸಂಸತ್ ಅಧಿವೇಶನದ ವಿಶೇಷತೆಗಳು:
    * ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಕ್ಕಾಗಿ ಸದನದ ಗ್ಯಾಲರಿ ಹಾಗೂ ಚೇಂಬರ್‌ಗಳನ್ನು ಕೂಡ ಬಳಸಲಾಗುತ್ತಿದೆ.
    * ಸದಸ್ಯರಿಗಾಗಿ ಎರಡೂ ಕಡೆಗಳಲ್ಲಿ 85 ಅಂಗುಲದ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ.
    * ವೈರಸ್ ಹಾಗೂ ಇತರ ಸೋಂಕು ನಿವಾರಣೆಗಾಗಿ ಏರ್ ಕಂಡೀಷನರ್‌ಗಳಲ್ಲಿ ನೇರಳಾತೀತ ವಿಕಿರಣಗಳನ್ನು ಬಳಸಲಾಗುತ್ತಿದೆ.
    * ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

    * ಪಕ್ಷಗಳ ಸಂಖ್ಯಾಬಲ ಆಧರಿಸಿ ಗ್ಯಾಲರಿ ಅಥವಾ ಚೇಂಬರ್‌ಗಳಲ್ಲಿ ಆಸನ ವ್ಯವಸ್ಥೆಯಾಗಿದೆ.
    * ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸಭಾ ನಾಯಕರು, ವಿಪಕ್ಷಗಳ ನಾಯಕರಿಗೆ ರಾಜ್ಯಸಭೆಯ ಚೇಂಬರ್‌ನಲ್ಲಿ ಅವಕಾಶ
    * ಮಾಜಿ ಪ್ರಧಾನಿಗಳಾದ ಮನಮೋಹನ್‌ಸಿಂಗ್ ಹಾಗೂ ಎಚ್.ಡಿ. ದೇವೇಗೌಡ ಅವರಿಗೂ ಚೇಂಬರ್‍ನಲ್ಲಿಯೇ ಆಸನ ವ್ಯವಸ್ಥೆ ಮಾಡಿದೆ.

    ಈ ಬಾರಿ ಕಲಾಪಗಳು ಕೇವಲ ನಾಲ್ಕು ಗಂಟೆಗಷ್ಟೇ ಸೀಮಿತವಾಗಲಿದೆ. ಇಂದು ಮೊದಲು ಲೋಕಸಭೆ ಬಳಿಕ ರಾಜ್ಯಸಭೆ ಕಲಾಪ ನಡೆಯಲಿದೆ. ನಾಳೆಯಿಂದ ಬೆಳಗ್ಗೆ ರಾಜ್ಯಸಭೆ ಮತ್ತು ಮಧ್ಯಾಹ್ನ ಲೋಕಸಭೆ ಕಲಾಪ ನಡೆಯಲಿವೆ. ಸಮಯ ಅಭಾವದ ಹಿನ್ನೆಲೆಯಲ್ಲಿ ಪ್ರಶ್ನಾವಳಿ ಸಮಯ ರದ್ದು ಮಾಡಿದ್ದು, ಶೂನ್ಯ ಅವಧಿಯನ್ನು ಅರ್ಧಕ್ಕೆ ಇಳಿಸಲಾಗಿದೆ.

    ಕಲಾಪಗಳಲ್ಲಿ ಭಾಗಿಯಾಗುವ ಸಂಸದರಿಗೆ 72 ಗಂಟೆ ಮುಂಚೆ ಕೊರೊನಾ ಟೆಸ್ಟ್ ಮಾಡಿಸಲು ಸೂಚಿಸಲಾಗಿತ್ತು. ಅದರಂತೆ ಕೊರೊನಾ ಟೆಸ್ಟ್ ಮಾಡಿಸಿರುವ ಸಂಸದರ ಪೈಕಿ ಐದು ಮಂದಿ ಲೋಕಸಭೆ ಸದಸ್ಯರಿಗೆ ಪಾಸಿಟಿವ್ ಇರುವುದು ದೃಢವಾಗಿದೆ.

    ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸೇರಿ ಎಲ್ಲಾ ವಿಪಕ್ಷಗಳು ಸಿದ್ಧವಾಗಿದೆ. ದೇಶದಲ್ಲಿನ ಆರ್ಥಿಕ ಕುಸಿತ, ಜಿಡಿಪಿ ಕುಸಿತ, ಉದ್ಯೋಗ ನಷ್ಟ, ಭಾರತ ಮತ್ತು ಚೀನಾ ಗಡಿ ವಿಚಾರ ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಈ ಸಂಬಂಧ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ. ವಿಪಕ್ಷಗಳ ಟೀಕೆಗೆ ಉತ್ತರ ನೀಡಲು ಮೋದಿ ಮತ್ತು ತಂಡ ಕೂಡ ಸಿದ್ಧವಾಗಿದೆ.

  • ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ – ವಿಪಕ್ಷವಿಲ್ಲದೆ ಸಂಸತ್‍ನಲ್ಲಿ ಮೋದಿ 2.0 ಸರ್ಕಾರದ ಆಟ

    ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ – ವಿಪಕ್ಷವಿಲ್ಲದೆ ಸಂಸತ್‍ನಲ್ಲಿ ಮೋದಿ 2.0 ಸರ್ಕಾರದ ಆಟ

    – ಮಾಜಿ ಪ್ರಧಾನಿಗಳಿಲ್ಲದ ಮೊದಲ ಸೆಷನ್

    ನವದೆಹಲಿ: ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಸೋಲಿನ ಆಘಾತದಿಂದ ಹೊರಬರದ ಸ್ಥಿತಿಯಲ್ಲಿರುವ ಪ್ರತಿಪಕ್ಷ ನಾಯಕರ ನಿರಾಸಕ್ತಿ ನಡುವೆ ಕಲಾಪ ಆರಂಭವಾಗಲಿದ್ದು, ಇಂದು ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಜುಲೈ 26ರವರೆಗೆ ಒಟ್ಟು 40 ದಿನಗಳ ಕಾಲ ನಡೆಯುವ ಅಧಿವೇಶನಲ್ಲಿ ಮೊದಲೆರಡು ದಿನ ನೂತನ ಸಂಸದರಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ವಿರೇಂದ್ರ ಕುಮಾರ್ ಇಂದಿನಿಂದ ಎಲ್ಲಾ ನೂತನ ಸಂಸದರಿಗೆ ಪ್ರಮಾಣವಚನ ಭೋದಿಸಲಿದ್ದಾರೆ. ಇದೇ ತಿಂಗಳ 19ರಂದು ಸ್ಪೀಕರ್ ಹುದ್ದೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 20ರಂದು ಸಂಸತ್‍ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಜುಲೈ 4ರಿಂದ ಪ್ರಶ್ನೋತ್ತರ ಕಲಾಪ ಆರಂಭವಾಗಲಿದೆ.

    ಸುಗಮ ಕಲಾಪಕ್ಕೆ ಪ್ರಧಾನಿ ಮನವಿ:
    17ನೇ ಲೋಕಸಭೆಗೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರ ಭಾನುವಾರ ಸಂಸತ್ ಭವನದಲ್ಲಿ ಸರ್ವಪಕ್ಷ ನಾಯಕರ ಕರೆಯಲಾಗಿತ್ತು. ಸಭೆಯಲ್ಲಿ ಸಂಸತ್ ಅಧಿವೇಶನ ಸುಗಮವಾಗಿ ನಡೆಸಲು ಪ್ರತಿಪಕ್ಷಗಳು ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಬಜೆಟ್ ಮಂಡನೆಯ ಜೊತೆಗೆ ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆ ಆಗಲಿದ್ದು, ಕಾವೇರಿದ ಚರ್ಚೆಗೆ ಕಾರಣವಾಗಲಿದೆ.

    ಸಂಸತ್‍ನಲ್ಲಿ ಗಟ್ಟಿಧ್ವನಿ ಕೇಳಲ್ಲ:
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳು ಸೋಲನುಭವಿಸಿದ್ದಾರೆ. ಈ ಬಾರಿ ಬಹುತೇಕ ಸಂಸದರು ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ ದೇವೇಗೌಡ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಸಂಸತ್ ಕಲಾಪವನ್ನು ತಪ್ಪಿಸಿಕೊಂಡ ಹಿರಿಯರೆನಿಸಿದ್ದಾರೆ. ಮೊದಲ ಅಧಿವೇಶನಕ್ಕೆ ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. ಮೊದಲ ದಿನ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವಿಪಕ್ಷ ಇನ್ನೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ಇದರ ಜೊತೆಗೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಸಂಸತ್ತಿನಲ್ಲಿ ತನ್ನ ವಿಪಕ್ಷ ನಾಯಕನನ್ನು ಘೋಷಣೆ ಮಾಡದೆ ಇರುವುದು ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣಿಸುವಂತೆ ಮಾಡಿದೆ.

  • ನಾನು 23 ದಿನಗಳ ಸಂಸದರ ಸಂಬಳವನ್ನು ಪಡೆಯುತ್ತೇನೆ: ಸುಬ್ರಮಣಿಯನ್ ಸ್ವಾಮಿ

    ನಾನು 23 ದಿನಗಳ ಸಂಸದರ ಸಂಬಳವನ್ನು ಪಡೆಯುತ್ತೇನೆ: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: 23 ದಿನಗಳ ಕಲಾಪ ನಡೆಯದಿರುವುದಕ್ಕೆ ನಾನು ಕಾರಣ ಅಲ್ಲ. ಹೀಗಾಗಿ ನಾನು ಸಂಸದರ ಸಂಬಳವನ್ನು ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

    ಅಧಿವೇಶನದ ಎಲ್ಲಾ ದಿನಗಳೂ ಹಾಜರಿದ್ದೇನೆ. 23 ದಿನಗಳೂ ಕಲಾಪ ನಡೆದಿಲ್ಲ ಇದರಲ್ಲಿ ನನ್ನ ತಪ್ಪೇನು ಇಲ್ಲ. ನಾನು ರಾಷ್ಟ್ರಪತಿಗಳ ಪ್ರತಿನಿಧಿ. ಅವರು ಹೇಳೋ ತನಕ ನಾನು ಹೇಗೆ ಸಂಬಳ ಬೇಡವೆಂದು ಹೇಗೆ ಹೇಳಲಿ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

    ಈ ಬಾರಿ ಅಧಿವೇಶನದ ಎಲ್ಲಾ ದಿನಗಳೂ ವ್ಯರ್ಥವಾಗಿದೆ. ಕಾಂಗ್ರೆಸ್‍ನ ಅಸಂವಿಧಾನಿಕ ರಾಜಕಾರಣದಿಂದಾಗಿ ಲೋಕಸಭೆ ಮತ್ತು ರಾಜ್ಯಸಭಾ ಕಲಾಪಗಳಿಗೆ ಅಡ್ಡಿಯಾಗಿದೆ. ಇದರಿಂದಾಗಿ ಬಹಳಷ್ಟು ಮಸೂದೆಗಳು ಅಂಗೀಕಾರ ಆಗಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಯಾವ ವಿಚಾರಗಳನ್ನು ಚರ್ಚಿಸಿಲ್ಲ. ಸಾರ್ವಜನಿಕರ ಕೆಲಸಗಳನ್ನು ಮಾಡಿದಾಗ ಮಾತ್ರ ಸಂಬಳವನ್ನು ತೆಗೆದುಕೊಳ್ಳಬೇಕು. ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಸಂಸದರು ಅಧಿವೇಶನದ ಸಂಬಳ ಮತ್ತು ಭತ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಮಿತ್ರ ಪಕ್ಷಗಳೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ನಿನ್ನೆ ತಿಳಿಸಿದ್ದರು.

    ನಾವು ಜನರ ಹಣವನ್ನು ಪಡೆದು ಪ್ರಜೆಗಳ ಸೇವೆ ಮಾಡುತ್ತೇವೆ. ಜನರ ಸೇವೆ ಮಾಡಲು ಸಾಧ್ಯವಾಗದೇ ಇದ್ದರೆ ಅವರ ಹಣವನ್ನು ಪಡೆಯಲು ನಮಗೆ ಯಾವುದೇ ಹಕ್ಕಿಲ್ಲ ಎಂದು ಅನಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

    ಸಂಬಳ ಮತ್ತು ಭತ್ಯೆ ತೆಗೆದುಕೊಳ್ಳುವುದಿಲ್ಲ ಅನ್ನುವುದು ಸಚಿವ ಸಂಪುಟದ ನಿರ್ಣಯವಾಗಿದೆ. ಅಧಿವೇಶನದ ಎಲ್ಲಾ ದಿನಗಳು ವ್ಯರ್ಥವಾಗಿದ್ದಕ್ಕೆ ವಿರೋಧ ಪಕ್ಷಗಳೇ ಕಾರಣ ಎನ್ನುವ ಸಂದೇಶವನ್ನು ಜನರಿಗೆ ತಿಳಿಸಲು ಎನ್‍ಡಿಎ ಸದಸ್ಯರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.