Tag: Park

  • ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಮುಂಬೈ: ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪಾರ್ಕ್ ಮಾಡಿದ್ದ 7 ವಾಹನಗಳ ಮೇಲೆ ಕಾರು ಹರಿಸಿ ದಾಂಧಲೆ ಎಬ್ಬಿಸಿದ್ದ ಪ್ರಸಿದ್ಧ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಏ.2ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿತ್ತು. ಪ್ರಕರಣ ಸಂಬಂಧ ನಟಿ ರೂಹಿ ಹಾಗೂ ಆಕೆಯ ಇಬ್ಬರು ಗೆಳೆಯರಾದ ರಾಹುಲ್ ಹಾಗೂ ಸ್ವಪ್ನಿಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಘಟನೆ ವಿವರ:
    ರೂಹಿ, ರಾಹುಲ್ ಹಾಗೂ ಸ್ವಪ್ನಿಲ್ ರಾತ್ರಿ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದರು. ಹೀಗೆ ಹಿಂದಿರುಗುತ್ತಿದ್ದಾಗ ಮೂವರಿಗೆ ವಾಶ್ ರೂಮ್ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅವರು ತಮ್ಮ ದಾರಿಯಲ್ಲೇ ಸಿಗುವ ಪ್ರಸಿದ್ಧ ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದ್ದಾರೆ. ಆದ್ರೆ ಅದಾಗಲೇ ತಡವಾಗಿದ್ದು ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿದ್ದರು. ಈ ವೇಳೆ ಈ ಮೂವರು ತಮಗೆ ವಾಶ್ ರೂಮ್ ಗೆ ಹೋಗಬೇಕು. ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಆದ್ರೆ ರೆಸ್ಟೋರೆಂಟ್ ಸಿಬ್ಬಂದಿ ಇವರ ಮಾತಿಗೆ ಸಮ್ಮತಿ ಸೂಚಿಸಿರಲಿಲ್ಲ. ಅಲ್ಲದೆ ಈಗಾಗಲೇ ನಾವು ರೆಸ್ಟೋರೆಂಟ್ ಕ್ಲೋಸ್ ಮಾಡಿದ್ದು ತೆರೆಯಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ.

    ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟುಕೊಂಡ ಮೂವರು ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ನಡೆಸಿ ರೆಸ್ಟೋರೆಂಟ್ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಇದರಿಂದ ಬೆದರಿದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಕ್ಯಾರೇ ಎನ್ನದ ಈ ಮೂವರು ಕುಡಿದ ಮತ್ತಿನಲ್ಲಿ ತಮ್ಮ ಹುಚ್ಚಾಟವನ್ನು ಮುಂದುವರಿಸಿದ್ದಾರೆ. ಅಲ್ಲದೆ ರೆಸ್ಟೋರೆಂಟ್ ಎದುರು ಪಾರ್ಕ್ ಮಾಡಿದ್ದ 4 ದ್ವಿಚಕ್ರವಾಹನಗಳು ಹಾಗೂ ಮೂರು ಕಾರುಗಳಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಹಾನಿ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    https://www.instagram.com/p/BvuVX81nxkJ/?utm_source=ig_embed

  • ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

    ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಮೈ ಬೆವರಿಳಿಸಲು ವಾಕಿಂಗ್ ಜಾಗಿಂಗ್ ಎಂದು ಪಾರ್ಕಿಗೆ ಕಾಲಿಟ್ಟವರು ಒಂದು ಕ್ಷಣ ನಡುಗಿ ಹೋಗಿದ್ದರು. ಪಾರ್ಕಿನಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ರಾಶಿ ರಾಶಿ ಹೆಣ ಅಲ್ಲಿ ಬಿದ್ದಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ತೊಂಬತ್ತು ಪಾರಿವಾಳಗಳು ಸಾಲಾಗಿ ಮೃತಪಟ್ಟಿತ್ತು.

    ಪಾರಿವಾಳಗಳನ್ನು ನೋಡುವುದಕ್ಕಾಗಿಯೇ ಪಾರ್ಕಿಗೆ ಬರುತ್ತಿದ್ದ ಅವುಗಳು ಸತ್ತು ಬಿದ್ದಿರುವುದನ್ನು ಕಂಡು ಜನ ಕಣ್ಣೀರು ಹಾಕಿದರು. ದಿನನಿತ್ಯ ಕಾಳು ಹಾಕಿ ಖುಷಿಪಡುತ್ತಿದ್ದ ಮಕ್ಕಳು ಇಂದು, ಅಮ್ಮಾ ಪಾರಿವಾಳಗಳು ನಿದ್ದೆ ಮಾಡುತ್ತಿದ್ದಾವಾ ಎಂದು ಮುಗ್ಧವಾಗಿ ಕೇಳುತ್ತಿದ್ದತು. ಬುಲ್ ಟೆಂಪಲ್ ಗಣೇಶ್ ದೇಗುಲದ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಈ ಅಮಾನವೀಯ ದೃಶ್ಯ ಕಂಡುಬಂದಿದೆ.

    ರಾತ್ರೋರಾತ್ರಿ ಈ ಪಕ್ಷಿಗಳಿಗೆ ಆಹಾರದಲ್ಲಿ ವಿಷ ಬೆರೆಸಲಾಗಿದೆ. ಕೆಲ ಪಕ್ಷಿಗಳನ್ನು ಕತ್ತು ಕೊಯ್ದು ಸಾಯಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮೂಕ ಪ್ರಾಣಿ ಪಕ್ಷಿಗಳನ್ನು ಅಧಿಕಾರ ದಾಹಕ್ಕಾಗಿ ಚಿತ್ರ ವಿಚಿತ್ರವಾಗಿ ಕೊಲ್ಲಲಾಗುತ್ತದೆ. ಇದು ಕೂಡ ಅಮಾವಾಸ್ಯೆ ದಿನ ನಡೆದ ಕೃತ್ಯವಾಗಿದ್ದು, ವಾಮಾಚಾರದ ಉದ್ದೇಶದಿಂದಲೇ ಸಾಯಿಸಲಾಗಿದೆ ಎಂದು ಜನ ಕಿರಿಕಾಡಿದ್ದಾರೆ.

    ಪಾರಿವಾಳಗಳು ಸೇರಿದಂತೆ ಪಾರ್ಕಿನಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಅಷ್ಟು ಪಕ್ಷಿಗಳು ಸಾವನ್ನಪ್ಪಿದೆ. ಜನ ಕಣ್ಣೀರಿಟ್ಟು ಪಾರ್ಕಿನಲ್ಲೇ ಸಮಾಧಿ ಮಾಡಿದರು. ಮೂಕ ಪಕ್ಷಿಗಳನ್ನು ಕೊಲ್ಲುವ ಪ್ರವೃತ್ತಿಯವರೆಗೆ ಮೊದಲು ಶಿಕ್ಷಯಾಗಲಿ ಎಂದು ಜನ ಇದೇ ವೇಳೆ ಆಗ್ರಹಿಸಿದರು.

  • ಮನೆ ಮುಂದೆ ವಾಹನ ಪಾರ್ಕ್ ಮಾಡಿದ್ರೂ ಕಟ್ಟಬೇಕು ದುಡ್ಡು!

    ಮನೆ ಮುಂದೆ ವಾಹನ ಪಾರ್ಕ್ ಮಾಡಿದ್ರೂ ಕಟ್ಟಬೇಕು ದುಡ್ಡು!

    ಬೆಂಗಳೂರು: ವಾಹನಗಳನ್ನು ಎಲ್ಲೆಂದರಲ್ಲಿ ರಸ್ತೆಯಲ್ಲಿ ಪಾರ್ಕ್ ಮಾಡೋರು, ಪಾರ್ಕಿಂಗ್ ಜಾಗ ಇಲ್ಲದೆ ಮನೆ ಮುಂದಿನ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡೋರು ಇನ್ಮುಂದೆ ದುಡ್ಡು ಕಟ್ಟಲೇಬೇಕು.

    ಅರೇ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಪಾರ್ಕ್ ಮಾಡಿದ್ರೆ ನಾವ್ಯಾಕೆ ಕಟ್ಟೋಣ ಅಂತೆಲ್ಲ ಹೇಳಂಗಿಲ್ಲ. ಏಕೆಂದರೆ ಸ್ಟ್ರೀಟ್ ಪಾರ್ಕಿಂಗ್ ಹಾವಳಿಗೆ ತಡೆಯೊಡ್ಡಲು ಸರ್ಕಾರ ಭರ್ಜರಿ ಕತ್ತರಿ ಹಾಕಿದ್ದು ಈ ಯೋಜನೆಯಿಂದ ಕೊಂಚ ಆದಾಯನೂ ಬರುತ್ತದೆ ಎನ್ನುವ ಪ್ಲಾನ್ ಕೂಡ ಇದೆ.

    ಆಯಾಯ ಏರಿಯಾದ ಕೆಲ ರಸ್ತೆಗಳಲ್ಲಿ ವಾಹನ ಪಾರ್ಕ್ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಅದು ಈಗ ಇರುವಂತೆ ಉಚಿತವಲ್ಲ ಅಲ್ಲಿ ದುಡ್ಡು ಕಟ್ಟಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆಯಾಗಲಿದ್ದು, ಪಿಡಬ್ಲ್ಯೂಡಿ, ಬಿಬಿಎಂಪಿ, ಟ್ರಾಫಿಕ್ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಅಧಿಕಾರಿಗಳು ಕೂಡ ಕಮಿಟಿಯಲ್ಲಿ ಇರುತ್ತಾರೆ.

    ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಬಂದಿದ್ದು ಈ ಯೋಜನೆಗೆ ಸಂಚಾರಿ ತಜ್ಞರು ವಿರೋಧ ವ್ಯಕ್ತಪಡಿಸುತ್ತಾರೆ. ರಸ್ತೆ ಬದಿ ಪಾರ್ಕಿಂಗ್‍ನಿಂದ ಟ್ರಾಫಿಕ್ ಸಮಸ್ಯೆ ಉದ್ಭವಾಗುತ್ತಿದೆ. ಈಗ ಪೇ ಮಾಡಿ ಪಾರ್ಕಿಂಗ್ ಮಾಡಿ ಅಂದರೆ ಇನ್ನಷ್ಟು ಸಮಸ್ಯೆ ಉಲ್ಬಣವಾಗುತ್ತೆ ಎಂದು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷಿ ಮಾತು ಕೇಳಿ ಪಕ್ಷಿಗಳ ಮಾರಣಹೋಮ

    ಜ್ಯೋತಿಷಿ ಮಾತು ಕೇಳಿ ಪಕ್ಷಿಗಳ ಮಾರಣಹೋಮ

    ಬೆಂಗಳೂರು: ಪಾರ್ಕ್ ಗಳಲ್ಲಿ ಕಾಳು ತಿನ್ನುತ್ತಿದ್ದ ಹಕ್ಕಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಮಕ್ಕಳು ಹಾಗೂ ಕೆಲಸ ಇಲ್ಲದವರು ಜ್ಯೋತಿಷಿ ಮಾತು ಕೇಳಿ ಖಾರ ಬೂಂದಿ, ಹುರಿಗಡಲೆ ತಂದು ಪಕ್ಷಿಗಳಿಗೆ ಹಾಕುತ್ತಿದ್ದಾರೆ.

    ಜ್ಯೋತಿಷಿಗಳು ಮೂಕ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಹೂಡಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗುವುದಕ್ಕೆ, ಮಕ್ಕಳು ಆಗುವುದಕ್ಕೆ ಹೀಗೆ ಹಲವು ಹರಕೆಗಳು ಈಡೇರಬೇಕಂದರೆ ಹಕ್ಕಿಗಳಿಗೆ ಕಾಳು, ಖಾರ ಬೂಂದಿ ಹಾಕುವುದಕ್ಕೆ ಜ್ಯೋತಿಷಿಯೊಬ್ಬನು ಹೇಳಿದ್ದಾನೆ. ಹೀಗಾಗಿ ಪಾರ್ಕ್ ಗೆ ಬರುವ ವಾಕರ್ಸ್ ಪಕ್ಷಿಗಳಿಗೆ ಕಾಳುಗಳನ್ನು ಹಾಕುವ ಮೂಲಕ ಅವುಗಳ ಸಾವಿಗೆ ಕಾರಣರಾಗುತ್ತಿದ್ದಾರೆ.

    ಪ್ರಮುಖವಾಗಿ ಹುರಿಗಡಲೆ ಹಾಗೂ ಬೇಕರಿಯಲ್ಲಿ ಸಿಗುವ ಮಿಕ್ಚರ್, ಖಾರ ಬೂಂದಿ ಹಾಗೂ ಮನೆಯಲ್ಲಿ ಉಳಿದ ಎಣ್ಣೆ ಪದಾರ್ಥಗಳನ್ನು ಹಾಕುತ್ತಿದ್ದಾರೆ. ಇದನ್ನು ತಿಂದರೆ ಪಕ್ಷಿಗಳಿಗೆ ಜೀರ್ಣವಾಗುವುದಿಲ್ಲ. ಸರಿಯಾಗಿ ನೀರು ಕೂಡ ಸಿಗುವುದಿಲ್ಲ. ಇದರಿಂದ ಪಕ್ಷಿಗಳಿಗೆ ದಾಹ ಇನ್ನು ಹೆಚ್ಚಾಗುತ್ತೆ. ನೀರಿಲ್ಲದೆ ಪಕ್ಷಿಗಳು ಸಾವನ್ನಪ್ಪುತ್ತೆ ಎಂದು ಪಕ್ಷಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿರುವ ಕೆರೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮೂಕ ಪ್ರಾಣಿಗಳು ಸಾವಿನ ಅಂಚಿಗೆ ಸೇರುತ್ತಿವೆ. ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಪಕ್ಷಿಗಳಿಗೆ ಸನ್ ಸ್ಟ್ರೋಕ್ ಹಾಗೂ ಚಿಕನ್ ಪಾಕ್ಸ್ ಆಗುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ ಪರಿವಾಳಗಳಿಗೆ ಪ್ಯಾರಲಿಸಿಸ್ ಬರುವ ಸಾಧ್ಯತೆಗಳಿರುತ್ತವೆ.

    ಅಂತಹದರಲ್ಲಿ ಸಿಲಿಕಾನ್ ಸಿಟಿಯ ಜನ ಪಾರ್ಕಿನಲ್ಲಿ ವಾಕ್ ಮಾಡುವುದಕ್ಕೆಂದು ಪಕ್ಷಿಗಳ ಮಾರಣಹೋಮಕ್ಕೆ ಕಾರಣರಾಗುತ್ತಿದ್ದಾರೆ. ಜನ ಯಾವುದೋ ಸ್ವಾಮೀಜಿ ಹೇಳಿದ್ರು, ಜ್ಯೋತಿಷ್ಯದವರು ಹೇಳಿದ್ದಾರೆ ಎಂದು ಈ ಮೂಕ ಪಕ್ಷಿಗಳಿಗೆ ಏನ್ ಏನೋ ತಂದು ಹಾಕಿ ಅವುಗಳು ಪ್ರಾಣ ತೆಗೆಯುತ್ತಿದ್ದಾರೆ. ಸ್ವಾಮೀಜಿ, ಜ್ಯೋತಿಷಿಗಳ ಮಾತು ನಂಬದೇ ನಿಮ್ಮ ಮನೆ ಮೇಲೆ ಒಂದ್ ಬೌಲ್ ನೀರಿಡಿ. ಅವುಗಳ ನೀರಿನ ದಾಹವನ್ನು ನೀಗಿಸಿ ಎಂದು ಪಕ್ಷಿ ಪ್ರಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ನಲ್ಲಿ ಬಾಲಕನಿಗೆ ಕರೆಂಟ್ ಶಾಕ್ – ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

    ಪಾರ್ಕ್‌ನಲ್ಲಿ ಬಾಲಕನಿಗೆ ಕರೆಂಟ್ ಶಾಕ್ – ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

    – 10 ಲಕ್ಷ ಅಲ್ಲ 1 ಕೋಟಿ ಕೊಟ್ಟರೂ ಮಗ ವಾಪಸ್ ಬರಲ್ಲ

    ಬೆಂಗಳೂರು: ನಗರದ ಬಾಣಸವಾಡಿ ಪಾರ್ಕ್ ನಲ್ಲಿ ಕರೆಂಟ್ ಶಾಕ್ ಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಬಿಬಿಎಂಪಿ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

    ಘಟನಾ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

    ಬಾಲಕನನ್ನು ಕಳೆದುಕೊಂಡಿರುವ ದುಃಖ ನಮಗೂ ಇದೆ. ಹೀಗಾಗಿ ಕುಟುಂಬದವರಿಗೆ ಈಗಾಗಲೇ ಸಾಂತ್ವನವನ್ನು ಹೇಳಿದ್ದೇವೆ. ಸ್ಥಳಕ್ಕೆ ತೆರಳಿ ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಹೀಗಾಗಿ ಎಲ್ಲಾ ವಿಚಾರಗಳಲ್ಲಿಯೂ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು.

    ಬಿಬಿಎಂಪಿ ವತಿಯಿಂದ ಈಗಾಗಲೇ ಮೇಯರ್ ಅವರು 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಆದ್ರೆ ಇಲ್ಲಿ ಪರಿಹಾರ ಮುಖ್ಯವಲ್ಲ. ಇಂತಹ ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಪಾರ್ಕ್ ಒಳಗಡೆ ಯಾರಿಗೂ ಪ್ರವೇಶ ನೀಡದಂತೆ ಸೂಚನೆ ನೀಡಲಾಗಿದೆ. ಪಾರ್ಕ್ ಗಳ ಅಭಿವೃದ್ಧಿಗೆ ಈಗಾಗಲೇ ಬಜೆಟ್ ನಲ್ಲಿ ಇಂತಿಷ್ಟು ಹಣವೆಂದು ಕಾಯ್ದಿರಿಸಿದ್ದೇವೆ ಎಂದು ಮೇಯರ್ ಹೇಳಿದ್ದಾರೆ.

    ಮೃತನ ತಾಯಿ ಕಣ್ಣೀರು:
    ಭಾನುವಾರ ರಜಾ ದಿನವಾದ್ದರಿಂದ ಮಗ ಪಾರ್ಕ್‍ಗೆ ಆಟವಾಡಲು ಹೋಗಿದ್ದನು. ಆದ್ರೆ ಮತ್ತೆ ಮರಳಿ ಮನೆಗೆ ಬರಲೇ ಇಲ್ಲ. ಕರೆಂಟ್ ಶಾಕ್ ಗೆ ಬಲಿಯಾಗಿದ್ದಾನೆ. ಕಾಲಿಗೆ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅವನು ಬದುಕುಳಿಯಲಿಲ್ಲ ಎಂದು ಮೃತ ಉದಯ್ ಕುಮಾರ್ ತಾಯಿ ಕಣ್ಣೀರು ಹಾಕಿದ್ದಾರೆ.

    ಬಿಬಿಎಂಪಿಯವರು 10 ಲಕ್ಷ ಕೊಡುತ್ತೇವೆ ಅಂದಿದ್ದಾರೆ. ಆದ್ರೆ 10 ಲಕ್ಷ ಅಲ್ಲ 1 ಕೋಟಿ ರೂ. ಕೊಟ್ಟರೂ ನನ್ನ ಮಗುವನ್ನು ವಾಪಸ್ ತಂದು ಕೊಡಲ್ವಲ್ಲ. ಎಷ್ಟು ಅಜಾಗರೂಕತೆ ಇದೆ. ಆ ಪಾರ್ಕ್ ನಲ್ಲಿ ಮಕ್ಕಳು, ದೊಡ್ಡವರು ಎಲ್ಲರೂ ಓಡಾಡುತ್ತಾರೆ. ಎಷ್ಟು ಜನರ ಪ್ರಾಣಕ್ಕೆ ಅಪಾಯವಿದೆ. ಈವಾಗ ಹಲವರ ಪ್ರಾಣ ಉಳಿಸಿ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ ನನ್ನ ಮಗನಂತೆ ಇನ್ಯಾರಿಗೂ ಆಗದಂತೆ ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಕ್ಕೆ ಯುವಕನೊಬ್ಬನನ್ನು ಅಪ್ರಾಪ್ತ ಬಾಲಕನೊಬ್ಬ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯ ಜಸೋಲಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಲೆಯಾದ ವ್ಯಕ್ತಿಯನ್ನು ಅಮಿತ್ (28) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಮಿತ್ ಪಾರ್ಕ್ ಒಂದರಲ್ಲಿ ತನ್ನ ಫೋನ್‍ನಲ್ಲಿ ಜೋರಾಗಿ ಮಾತನಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಬಾಲಕ ನಿಧಾನವಾಗಿ ಮಾತನಾಡಿ ತೊಂದರೆಯಾಗುತ್ತಿದೆ ಎಂದಿದ್ದಾನೆ. ಆದರೂ ಯುವಕ ಬಾಲಕನ ಮಾತು ಕೇಳದೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಲೇ ಇದ್ದ. ಆಗ ಮತ್ತೆ ಬಾಲಕ ಯುವಕನಿಗೆ ನಿಧಾನವಾಗಿ ಮಾತನಾಡಿ ಎಂದಿದಕ್ಕೆ ಕೋಪಗೊಂಡ ಯುವಕ ರೇಗಿದ್ದಾನೆ. ಬಳಿಕ ಅವರಿಬ್ಬರ ನಡುವೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಬಾಲಕ ಕೈಗೆ ಸಿಕ್ಕ ಕಲ್ಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

    ಈ ಹಲ್ಲೆಯಿಂದ ಯುವಕನ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸಾರ್ವಜನಿಕರು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದ್ದಿದ್ದಾರೆ. ಆದರೇ ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಯುವಕನ ಜೊತೆ ಜಗಳವಾದಾಗ ಕೋಪದಿಂದ ಕಲ್ಲಿನಿಂದ ಆತನನ್ನು ಜಜ್ಜಿ ಸಾಯಿಸಿದೆ. ಬಳಿಕ ಭಯವಾಗಿ ಸ್ಥಳದಿಂದ ಓಡಿಹೋದೆ ಎಂದು ಬಾಲಕ ಹೇಳಿದ್ದಾನೆ.

    ಇಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.

    ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.

    ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಯನಗರದಲ್ಲೊಂದು ಅವಳಿ ಪಾರ್ಕ್

    ಜಯನಗರದಲ್ಲೊಂದು ಅವಳಿ ಪಾರ್ಕ್

    -ಇಲ್ಲಿಯ ಗಿಡಗಳ ಪರಿಮಳದಿಂದ ಚರ್ಮವ್ಯಾಧಿ, ಅಸ್ತಮಾ ನಿವಾರಣೆಯಂತೆ!

    ಬೆಂಗಳೂರು: ನಗರದಲ್ಲಿ ವಾಕಿಂಗ್, ಜಾಗಿಂಗ್ ಅಂದರೆ ನೆನಪಾಗೋದು ಪಾರ್ಕ್ ಗಳು. ನಗರದಲ್ಲಿ ಸಿಕ್ಕಾಪಟ್ಟೆ ಪಾರ್ಕ್ ಗಳಿವೆ. ಆದರೆ ಜಯನಗರದಲ್ಲಿರುವ ಪಾರ್ಕ್‌ಗೆ ಕಾಲಿಟ್ಟರೇ ಸಾಕು ನಿಮಗೆ ಅಂಟಿದ ರೋಗಗಳೆಲ್ಲ ಮಾಯವಾಗತ್ತವೆ.

    ಹೌದು..ಜಯನಗರದ ಯಡಿಯೂರು ವಾರ್ಡ್ ನ ಲಕ್ಷಣರಾವ್ ಉದ್ಯಾನವನದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಚ್ಚ ಹಸಿರು, ಕಾಲಿಡುತ್ತಿದ್ದಂತೆ ಮನ ತಣಿಸುವ ಆಹ್ಲಾದಕರ ವಾತಾವರಣ, ಹಸಿರ ಹುಲ್ಲಿಗೂ ಹೊಸ ಹುರುಪು, ಈಗ ತಾನೇ ಕಣ್ ಬಿಟ್ಟು ಚಿಗುರಿಗೂ ಚೇತನ. ಒಟ್ಟಿನಲ್ಲಿ ಕಾಂಕ್ರೀಟ್ ಕಾಡಿನಲ್ಲಿ ಅರಳಿನಿಂತಿರುವ ಪ್ರಕೃತಿ ವನಗಳು ಎಂಬಂತೆ ಭಾಸವಾಗುತ್ತದೆ.

    ಈ ಜೋಡಿ ಪಾರ್ಕ್ ಗಳ ಹೆಸರು ಧನ್ವಂತರಿ ಹಾಗೂ ಸಂಜೀವಿನಿ. ಸಿಲಿಕಾನ್ ಸಿಟಿ ಜನ ಒತ್ತಡದ ಬದುಕು ಹಾಗೂ ಮಾಲಿನ್ಯದಿಂದಾಗಿ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದೆಲ್ಲದಕ್ಕೆ ಸಲ್ಯೂಶನ್ ಎಂಬಂತೆ ತಲೆಯೆತ್ತಿದೆ ಈ ಉದ್ಯಾನವನ. ಇದು ಸಾಮಾನ್ಯವಾದ ಪಾರ್ಕ್ ಅಲ್ಲ, ಬದಲಾಗಿ ವಿಶೇಷ ಔಷಧಿಯುಕ್ತ ಸಸ್ಯರಾಶಿಗಳ ವನ. ಈ ಪ್ರಕೃತಿ ವನಗಳು, ಡಿಸೆಂಬರ್ ನಲ್ಲಿ ಉದ್ಘಾಟನೆಗೊಂಡಿದ್ದು, 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವಿದ್ಯಾರ್ಥಿನಿ ನಿಸರ್ಗ ಹೇಳಿದ್ದಾರೆ.

    300ಕ್ಕೂ ಹೆಚ್ಚು ಆರ್ಯುವೇದದ ಔಷಧಿ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಇದರ ಮತ್ತೊಂದು ವಿಶೇಷ ವೆಂದರೆ ಈ ಗಿಡಗಳ ಪರಿಮಳದಿಂದಲೇ ಚರ್ಮವ್ಯಾಧಿ, ಅಸ್ತಮಾದಂತಹ ಅದೆಷ್ಟೋ ಕಾಯಿಲೆಗಳು ವಾಸಿಯಾಗುತ್ತವೆಯಂತೆ. ಹೀಗಾಗಿ ಪ್ರತಿನಿತ್ಯ ಬೆಳ್ಳಿಗ್ಗೆ ಹಾಗೂ ಸಂಜೆ ನೂರಾರು ವಾಯು ವಿಹಾರಿಗಳು ಇಲ್ಲಿಗೆ ಬಂದು 1.5 ಕಿ.ಮೀ ನಡೆದು ಸ್ವಚ್ಛ ಆರೋಗ್ಯಕರ ಗಾಳಿ ಸೇವಿಸುತ್ತಾರೆ ಎಂದು ಸ್ಥಳೀಯ ಸುಧಾಕರ್ ಪೈ ತಿಳಿಸಿದ್ದಾರೆ.

    ಆರ್ಯುವೇದದಿಂದಲೇ ಆರೋಗ್ಯವೆಂದು ಜನರು ಮತ್ತೆ ಪ್ರಕೃತಿ ಚಿಕಿತ್ಸೆಯತ್ತಾ ಹೊರಳುತ್ತಿದ್ದಾರೆ. ಶುದ್ಧ ಗಾಳಿ ನೀಡುತ್ತಿರುವ ಇಂತಹ ಸಸ್ಯರಾಶಿಯನ್ನು ಉಳಿಸಿ-ಬೆಳೆಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾರ್ಕ್‌ಗಳಲ್ಲಿ ನಮಾಜ್ ಮಾಡುವಂತಿಲ್ಲ: ಪೊಲೀಸರಿಂದ ಖಡಕ್ ನೋಟಿಸ್

    ಪಾರ್ಕ್‌ಗಳಲ್ಲಿ ನಮಾಜ್ ಮಾಡುವಂತಿಲ್ಲ: ಪೊಲೀಸರಿಂದ ಖಡಕ್ ನೋಟಿಸ್

    ಸಾಂದರ್ಭಿಕ ಚಿತ್ರ

    ಲಕ್ನೋ: ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ದಿನ ನಮಾಜ್ ಮಾಡುವುದನ್ನು ತಡೆಯಬೇಕೆಂದು ಉತ್ತರಪ್ರದೇಶ ಪೊಲೀಸರು ನೊಯ್ಡಾದಲ್ಲಿರುವ ಎಲ್ಲಾ ಕಚೇರಿ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಿದ್ದಾರೆ.

    ಶುಕ್ರವಾರ ನಡೆಯುವ ನಮಾಜ್ ಅನ್ನು ಪಾರ್ಕ್ ಸೇರಿದಂತೆ ಇತರೆ ಯಾವುದೇ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸದೇ, ಕೇವಲ ಮಸೀದಿಗಳಲ್ಲೇ ಮಾತ್ರ ನಡೆಸಬೇಕೆಂದು ಮುಸ್ಲಿಂ ನೌಕರರಿಗೆ ಸೂಚನೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ಆದೇಶ ನೀಡಿದ್ದಾರೆ.

    ಒಂದು ವೇಳೆ ಕಂಪನಿಗಳ ಉದ್ಯೋಗಿಗಳು ಪಾರ್ಕ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಕಂಡುಬಂದರೆ, ಅದಕ್ಕೆ ನೇರವಾಗಿ ಕಂಪನಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

    ಇತ್ತೀಚೆಗೆ ನೋಯ್ಡಾ ಸೇರಿದಂತೆ ಇತರೆ ನಗರಗಳಲ್ಲಿ ಪಾರ್ಕ್ ಗಳಲ್ಲೆ ನಮಾಜ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಪ್ರಮುಖವಾಗಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳಿಗೆ ನೋಟಿಸ್ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ರಾಜ್ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ರೀತಿಯ ಕ್ರಮವನ್ನು ಕೈಗೊಂಡಿದ್ದೇವೆ. ನಮಾಜ್ ಮಾಡುವವರು ಮಸೀದಿಗಳಿಗೆ ತೆರಳಿ ನಮಾಜ್ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

    ನೋಯ್ಡಾದ ಹಲವು ಕಂಪನಿಗಳ ನೌಕರರು ಪಾರ್ಕ್ ಗಳಲ್ಲೇ ನಮಾಜ್ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಹೀಗಾಗಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ನೋಟಿಸ್ ನೀಡಿದ್ದೇವೆ. ಅಲ್ಲದೇ ಉದ್ಯೋಗಿಗಳು ಮಸೀದಿ, ಈದ್ಗಾ ಮೈದಾನಗಳಲ್ಲಿ ನಮಾಜ್ ಸಲ್ಲಿಸುವಂತೆ ಸೂಚನೆ ನೀಡಲು ಕಂಪನಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರೋಗ್ಯ ಕೇಂದ್ರದ ಆವರಣವನ್ನೇ ಉದ್ಯಾನವನ್ನಾಗಿ ಮಾಡಿರುವ ಪಿಡಿಒ ಯತೀಶ್ ಪಬ್ಲಿಕ್ ಹೀರೋ

    ಆರೋಗ್ಯ ಕೇಂದ್ರದ ಆವರಣವನ್ನೇ ಉದ್ಯಾನವನ್ನಾಗಿ ಮಾಡಿರುವ ಪಿಡಿಒ ಯತೀಶ್ ಪಬ್ಲಿಕ್ ಹೀರೋ

    ರಾಮನಗರ: ಪಿಡಿಒಗಳು ಸರಿಯಾಗಿ ಕೆಲಸ ಮಾಡಲ್ಲ, ಅನುದಾನವನ್ನ ಸರಿಯಾಗಿ ಬಳಸಲ್ಲ ಅನ್ನೋ ಆರೋಪ ಇದೆ. ಆದರೆ ಇದಕ್ಕೆ ವಿರೋಧವಾಗಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯೊಬ್ಬ ನರೇಗಾ ಅನುದಾನವನ್ನ ಬಳಸಿಕೊಂಡು ಪ್ರಾಥಾಮಿಕ ಆರೋಗ್ಯ ಕೇಂದ್ರದ ಆವರಣವನ್ನೇ ಉದ್ಯಾನವನ್ನಾಗಿ ಮಾಡಿದ್ದಾರೆ. ಇವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ.

    ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯ್ತಿ ಪಿಡಿಒ ಯತೀಶ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರು ಅನುದಾನವನ್ನು ಬಳಸಿಕೊಂಡು ಕಂಗೊಳಿಸುವ, ಸುಂದರವಾದ ಉದ್ಯಾನವನವನ್ನ ನಿರ್ಮಾಣ ಮಾಡಿದ್ದಾರೆ. ನರೇಗಾ ಅನುದಾನದಲ್ಲಿ 12 ಲಕ್ಷ ರೂ. ಹಾಗೂ ಆಸ್ಪತ್ರೆಯ ಅನುದಾನದಲ್ಲಿ 50 ಸಾವಿರ ರೂಪಾಯಿಗಳನ್ನು ಬಳಸಿಕೊಂಡು ಈ ಉದ್ಯಾನವನವನ್ನ ನಿರ್ಮಾಣ ಮಾಡಲಾಗಿದೆ.

    ಉದ್ಯಾನವನದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಓಡಾಡಲು ವಾಕಿಂಗ್ ಪಾಥ್ ಹಾಗೂ ಬಾಣಂತಿಯರು ಖಾಸಗಿಯಾಗಿ ಕುಳಿತು ಮಕ್ಕಳಿಗೆ ಹಾಲುಣಿಸಲು ಮಂಟಪವೊಂದನ್ನು ಸಹ ಮಾಡಲಾಗಿದೆ. ಈ ಉದ್ಯಾನವನದಲ್ಲಿ ದುರಂತ, ವಿಷಮ್‍ಧಾರಿ, ಪೈಕಾಸ್ ಪಾಂಡಾ, ಅಕಿಲಿಫಾ, ಮೊಜಾಂಡಾದಂತಹದ ಸುಮಾರು 12 ಸಾವಿರ ವಿವಿಧ ಜಾತಿಯ ಸಸ್ಯಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇದು ಜಿಲ್ಲೆಯಲ್ಲಿಯೇ ವಿನೂತನವಾದ ಮಾದರಿಯಾದಂತಹ ಉದ್ಯಾನವನವಾಗಿದೆ ಎಂದು ಯತೀಶ್ ಹೇಳಿದ್ದಾರೆ.

    ಪಿಡಿಒ ಯತೀಶ್ ಹೊಂಗನೂರು ಗ್ರಾಮ ಪಂಚಾಯತ್‍ಗೆ ಬರುವ ಮುನ್ನ ಚಕ್ಕೆರೆ ಹಾಗೂ ನೀಲಸಂದ್ರ ಗ್ರಾಮ ಪಂಚಾಯತ್‍ನಲ್ಲಿಯೂ ಪಿಡಿಒ ಆಗಿ ಕೆಲಸ ನಿರ್ವಹಿಸಿದ್ದಾರೆ. ನೀಲಸಂದ್ರ ಗ್ರಾಮದಲ್ಲಿ ಮೊದಲಿಗೆ ಹಳೆಯ ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿಯೇ ನರೇಗಾ ಅನುದಾನದಲ್ಲಿಯೇ ನೂತನವಾದ ಪಂಚಾಯತ್ ಕಟ್ಟಡವನ್ನ ಕಟ್ಟಿಸಿದ್ದಾರೆ. ಅಲ್ಲದೇ ಪಂಚಾಯತ್ ಆವರಣದಲ್ಲಿಯೂ 4 ಲಕ್ಷ ಅನುದಾನದಲ್ಲಿ ನೂರಾರು ಜಾತಿಯ ಸಸ್ಯಗಳನ್ನು ನೆಟ್ಟು ಉದ್ಯಾನವನವನ್ನ ನಿರ್ಮಾಣ ಮಾಡಿದ್ದಾರೆ.

    ನೀಲಸಂದ್ರ ಗ್ರಾಮದಲ್ಲಿ ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದ್ದ ಕಲ್ಯಾಣಿಯನ್ನ ಮುಚ್ಚುವ ಬದಲು ದುರಸ್ಥಿ ಮಾಡಿಸಿದ್ದಾರೆ. 17 ಲಕ್ಷ ವೆಚ್ಚದಲ್ಲಿ ಕಲ್ಯಾಣಿಯನ್ನ ನವೀಕರಣಗೊಳಿಸಿದ್ದು, ಸುತ್ತಲು ತಡೆಗೋಡೆಯನ್ನ ನಿರ್ಮಿಸಲಾಗಿದೆ. ಪಾರ್ಕ್, ವಾಕಿಂಗ್ ಪಾಥ್ ಕೂಡಾ ಮಾಡಲಾಗಿದೆ. ಇದು ಇಡೀ ಜಿಲ್ಲೆಗೆ ಮಾದರಿಯಾಗಿದ್ದು, ಬೇರೆಡೆ ಇರುವ ಕಲ್ಯಾಣಿಗಳನ್ನು ಸಹ ಇದೇ ರೀತಿಯಲ್ಲಿ ದುರಸ್ಥಿ ಕಾರ್ಯಗೊಳಿಸುವಂತೆ ಜಿಲ್ಲಾ ಪಂಚಾಯತ್ ಸೂಚನೆ ನೀಡಿದೆ. ಪಿಡಿಒ ಯತೀಶ್‍ರವರ ಕಾರ್ಯಕ್ಕೆ ಇದೀಗ ಸಾರ್ವಜನಿಕರು ಸಹ ಮೆಚ್ಚುಗೆ ಸೂಚಿಸುತ್ತಿದ್ದು, ಬೇರೆ ಗ್ರಾಮ ಪಂಚಾಯತ್‍ನ ಪಿಡಿಒಗಳು ಸಹ ಇದೇ ರೀತಿ ಯತೀಶ್‍ರನ್ನೇ ಮಾದರಿಯಾಗಿ ಅನುಸರಿಸುವಂತೆ ಸಾರ್ವಜನಿಕರ ಅನಂತ ಕೃಷ್ಣರಾಜೇ ಅರಸ್ ಮನವಿ ಮಾಡಿದ್ದಾರೆ.

    ಜನಪ್ರತಿನಿಧಿಗಳು ಮಾಡದಂತಹ ಕೆಲಸವನ್ನ ಪಿಡಿಒವೊಬ್ಬ ತನ್ನ ಇಚ್ಛಾಶಕ್ತಿಯಿಂದ ಇಷ್ಟೆಲ್ಲ ಕೆಲಸಗಳನ್ನು ಮಾಡುವ ಮೂಲಕ ಇತರೆ ಪಿಡಿಒಗಳಿಗೂ ಮಾದರಿಯಾಗಿದ್ದಾರೆ. ಗ್ರಾಮ ಪಂಚಾಯತ್‍ನಲ್ಲಿ ಹಣವನ್ನೇ ಪೀಕುತ್ತಾ ಕೆಲಸ ಮಾಡದೇ ಕೂರುವ ಪಿಡಿಒಗಳ ನಡುವೆ ಯತೀಶ್ ಮಾದರಿಯಾಗಿದ್ದಾರೆ. ಇನ್ನಾದರೂ ಜಿಲ್ಲೆ ಅಲ್ಲದೇ ರಾಜ್ಯದ ಬೇರೆ ಬೇರೆ ಪಂಚಾಯತ್‍ನ ಪಿಡಿಒಗಳು ಯತೀಶ್‍ರನ್ನ ಮಾದರಿಯಾಗಿ ಅನುಸರಿಸಿ ಉತ್ತಮ ಕೆಲಸ ಮಾಡಬೇಕಿದೆ.

    https://www.youtube.com/watch?v=fixsM9gArIg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv