Tag: Parishad

  • ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಬೆಳಗಾವಿ: ಸಚಿವ ಜಮೀರ್ ಅಹಮದ್ (Zameer Ahmed Khan) ಸದನಕ್ಕೆ ಬಾರದ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಇಂದು ವಿಪಕ್ಷ, ಆಡಳಿತ ಪಕ್ಷಗಳ ನಡುವೆ ದೊಡ್ಡ ಗಲಾಟೆ ನಡೆದಿದೆ.

    ಪ್ರಶ್ನೋತ್ತರ ಅವಧಿ ವೇಳೆ ಜಮೀರ್ ಅಹಮದ್ ಇಲಾಖೆ ಪ್ರಶ್ನೆಗೆ ಬೇರೊಬ್ಬರು ಉತ್ತರ ಕೊಡುತ್ತಿದ್ದರು. ಇದಕ್ಕೆ ಸಭಾಪತಿ ಹೊರಟ್ಟಿ, ಜಮೀರ್‌ಗೆ ಸದನಕ್ಕೆ ಬಂದು ಮುಖ ತೋರಿಸೋಕೆ ಹೇಳಿ ಅಂತ ಸಭಾ ನಾಯಕರಿಗೆ ಸೂಚನೆ ಕೊಟ್ಟರು.

    ಈ ವೇಳೆ ಎದ್ದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಮೀರ್‌ಗೆ ಪೀಠದ ಮೇಲೆ ನಂಬಿಕೆ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿ ಸದನಕ್ಕೆ ಗೈರಾಗಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ಸಚಿವರು ಪತ್ರ ಬರೆದು ಅನುಮತಿ ಪಡೆದಿದ್ದಾರೆ ಎಂದು ಸಭಾಪತಿ ಹೇಳಿದರು.

    ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು. ಪೂಜಾರಿ ಮಾತು ಮುಂದುವರಿಸಿ, ಜಮೀರ್ ಪೀಠಕ್ಕೆ ಧರ್ಮದ ಲೇಪ ಹಚ್ಚಿದ್ದಾರೆ. ಏನ್ ಬೇಕಾದ್ರು ಮಾತಾಡಬಹುದು ಅಂತ ಅವರು ಮಾತಾಡೋದು ಸರಿಯಲ್ಲ. ಪೀಠಕ್ಕೆ ಧರ್ಮದ ಲೇಪನ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮಲ್ಕಾಪುರೆ ಮಾತಾಡಿ, ಸದನಕ್ಕೆ ತನ್ನದೇ ಆದ ನಿಯಮ ಇದೆ. ಸಚಿವರು ಯಾಕೆ ಗೈರಾಗಿದ್ದಾರೆ ಹೇಳಬೇಕು, ಸೂಕ್ತ ಕಾರಣ ಬೇಕು. ಜಮೀರ್ ಉದ್ದೇಶ ಪೂರ್ವಕವಾಗಿ ಗೈರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜಮೀರ್ ಪತ್ರ ಓದುವಂತೆ ವಿಪಕ್ಷ ಹಠ ಹಿಡಿಯಿತು. ಈ ವೇಳೆ ಎದ್ದ ಸಚಿವ ಕೃಷ್ಣ ಭೈರೇಗೌಡ ರೂಲ್ ಬುಕ್ ಓದಿ, ಸಾಮಾನ್ಯವಾಗಿ ಸಚಿವರು ಗೈರು ಹಾಜರಾಗಲು ಅನುಮತಿ ಬೇಕಿಲ್ಲ. It is not required. ನಿಯಮಗಳ ಪ್ರಕಾರ ಹೇಳುವ ಅವಶ್ಯಕತೆ ನನಗೂ ಇರಲಿಲ್ಲ. ವಿಷಯ ತಿಳಿದುಕೊಂಡು ಮಾತಾಡಲಿ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.

    ಸಭಾಪತಿ ಮಾತನಾಡಿ, ಸಭಾಪತಿ ಅನುಮತಿ ಪಡೆದುಕೊಳ್ಳಬೇಕು, ಜಮೀರ್ ಪಡೆದುಕೊಂಡಿದ್ದಾರೆ. ಅವರ ಕಾರಣಗಳು ನನಗೆ ಸಂಬಂಧ ಇಲ್ಲ ಎಂದರು. ಇದಕ್ಕೆ ಪೂಜಾರಿ, ಪೀಠ ಯಾವತ್ತೂ ನಮ್ಮ ರಕ್ಷಣೆಗೆ ಬರಬೇಕು. ಕ್ಯಾಬಿನೆಟ್ ದರ್ಜೆಯ ಮಂತ್ರಿ ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದರು. ಇದಕ್ಕೆ ಸಭಾಪತಿ ಒಪ್ಪಿದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ

    ಬಿಜೆಪಿ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಸಚಿವರು ಗೈರು ಹಾಜರಾಗಬಹುದು. ಆದರೆ ಅನುಮಾನದ ಪ್ರಶ್ನೆ ಅಂದರೆ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ ಅಬ್ಸೆಂಟ್ ಆದರೆ ನಾವು ಪ್ರಶ್ನೆಯೇ ಕೇಳಲ್ಲ. ಜಮೀರ್ ಆಗಿರೋದಕ್ಕೆ ಅನುಮಾನ ಅಂದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಣ್ಣ ವಿಚಾರಕ್ಕೆ ಚಂಡಿ ಹಿಡಿಯೋದು ಬೇಡ. ಸ್ವಾತಂತ್ರ‍್ಯ ಬಂದಾಗಿನಿಂದ ಅನೇಕ ಜನ ಸಚಿವರು ಸದನಕ್ಕೆ ಬಂದಿರಲಿಲ್ಲ. ಸಣ್ಣ ವಿಚಾರ ಯಾಕೆ ದೊಡ್ಡು ಮಾಡ್ತೀರಾ. ಪ್ರಧಾನಿ ಅವರೇ ಸದನಕ್ಕೆ ಬರಲ್ಲ ಅಂತ ಬಿಜೆಪಿ ಸದಸ್ಯರ ಕಾಲೆಳೆದರು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪ್ರಶ್ನೋತ್ತರ ಕಲಾಪ ಶುರು ಮಾಡಿದರು.

  • ದಲಿತರ ಹೆಸರಿನಲ್ಲಿ ಹಣ ಲೂಟಿ ಆಗಿದೆ : ಎಚ್. ವಿಶ್ವನಾಥ್

    ದಲಿತರ ಹೆಸರಿನಲ್ಲಿ ಹಣ ಲೂಟಿ ಆಗಿದೆ : ಎಚ್. ವಿಶ್ವನಾಥ್

    ಬೆಂಗಳೂರು: ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ಪರಿಷತ್‍ನಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ. ದಲಿತರ ಅಭಿವೃದ್ದಿಗೆ ಒಂದು ಲಕ್ಷ ಕೋಟಿ ಹಣ ನೀಡಲಾಗಿದೆ. ಆದರೆ ದಲಿತರಿಗೆ ಕೆಲಸಗಳು ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ಸರ್ಕಾರ ಜನಪ್ರತಿನಿಧಿಗಳನ್ನ ಕರೆದು ಸಭೆ ಮಾಡಿ. ಯೋಜನೆಗಳನ್ನ ರೂಪಿಸಬೇಕು ಎಂದು ಆಗ್ರಹಿಸಿದರು.

    ಈ ವಿಚಾರವಾಗಿ ಉತ್ತರ ನೀಡಿದ ಸಚಿವ ಕಾರಜೋಳ, 4 ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸೈನಿಕ ಶಾಲೆ ಪ್ರಾರಂಭಕ್ಕೆ ಮಾತುಕತೆ ನಡೆಯುತ್ತಿದೆ. ಹಣ, ಭೂಮಿ ನಮ್ಮದು, ಮ್ಯಾನೇಜ್‍ಮೆಂಟ್ ಅವರದ್ದು 50% ದಲಿತ ಮಕ್ಕಳಿಗೆ ಸೀಟು ಕೊಡಬೇಕು ಎಂದು ನಿಯಮ ಮಾಡಲಾಗುತ್ತಿದೆ. ಶೀಘ್ರವೇ ಈ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

    ಬೀದರ್ ಜಿಲ್ಲೆಯ ಪರಿಶಿಷ್ಟ ಜಾತಿ ಉಪಯೋಜನೆ, ಹಾಗೂ ಗಿರಿಜನ ಯೋಜನೆ ಅಡಿ 2019-20 – 2689 ಲಕ್ಷ ಮತ್ತು 1741 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2020-21 ರಲ್ಲಿ 1195.50 ಲಕ್ಷ ಮತ್ತು 876 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ವಾಸಿಸುವ ಕಾಲೋನಿಗಳನ್ನ ಮಾತ್ರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಕಾಲೋನಿಗಳ ಕಾಮಗಾರಿ ಕೈಗೆತ್ತುಕೊಂಡಿಲ್ಲ. ಎಸ್‍ಸಿ-ಎಸ್‍ಟಿ ಹಣ ಸರಿಯಾಗಿ ಉಪಯೋಗ ಆಗಬೇಕು ಎಂದು ಸದಸ್ಯ ಅರವಿಂದ್ ಕುಮಾರ್ ಹೇಳಿದರು.

    ಈ ವೇಳೆ ಕೂಡಲೇ ಎದ್ದು ನಿಂತು ಮಾತನಾಡಿದ ಸಿಎಂ ಎಸ್‍ಸಿಪಿ-ಟಿಎಸ್‍ಪಿ ಹಣ 100% ಹಣ ಖರ್ಚಾದರೆ ಪ್ರತಿ ದಲಿತರಿಗೆ ಮನೆ ಕಟ್ಟಿಕೊಡಬಹುದು. ಯಾರು ನಿರುದ್ಯೋಗ ಇರದಂತೆ ನೋಡಿಕೊಳ್ಳಬಹುದು ಈಗ ಕೇವಲ 70% ಮಾತ್ರ ಖರ್ಚಾಗುತ್ತಿದೆ. ಸಂಪೂರ್ಣ ಖರ್ಚು ಮಾಡಿ ಎಂದು ಸಚಿವ ಕಾರಜೋಳರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿವ ಕಾರಜೋಳ ಯಾವುದೇ ಹಣ ದುರುಪಯೋಗ ಆಗಿಲ್ಲ. ಅಂತಹ ಯಾವುದೇ ಪ್ರಕರಣ ಕಂಡು ಬಂದರೆ ಕೂಡಲೇ ತನಿಖೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

  • ಯಡಿಯೂರಪ್ಪ ನೆರೆ ಪ್ರವಾಸವನ್ನ ಕುಟ್ಟಿ ಕುಂದಾಪುರಕ್ಕೆ ಹೋಲಿಸಿದ ಭೋಜೇಗೌಡ

    ಯಡಿಯೂರಪ್ಪ ನೆರೆ ಪ್ರವಾಸವನ್ನ ಕುಟ್ಟಿ ಕುಂದಾಪುರಕ್ಕೆ ಹೋಲಿಸಿದ ಭೋಜೇಗೌಡ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಹಾನಿ ವೇಳೆ ಏಕಾಂಗಿಯಾಗಿ ಪ್ರವಾಸ ಮಾಡಿದ್ದೆ ಇವತ್ತು ದೊಡ್ಡ ಚರ್ಚೆ ಆಯ್ತು. ಸಿಎಂ ಏಕಾಂಗಿಯಾಗಿ ಪ್ರವಾಸ ಮಾಡಿದ್ರು. ಆದ್ರೆ ಯಾವುದೇ ಉಪಯೋಗವಾಗಲಿಲ್ಲ. ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ ಅಂತ ಜೆಡಿಎಸ್ ಸದಸ್ಯ ಬೋಜೇಗೌಡ ಟೀಕಿಸಿದರು.

    ಇಷ್ಟಕ್ಕೆ ಸುಮ್ಮನಾಗದ ಭೋಜೇಗೌಡ, ನೆರೆಹಾನಿ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಂಪುಟದಲ್ಲಿದ್ದರೂ ಪರಿಹಾರ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಬಿಜೆಪಿ ನಾರಾಯಣಸ್ವಾಮಿ ಪರಿಷತ್ ಕಲಾಪದಲ್ಲಿ ಸಮರ್ಥಿಸಿಕೊಂಡರು. ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಇದ್ದರೂ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ರು. ವಯಸ್ಸನ್ನೂ ಲೆಕ್ಕಿಸದೇ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದರು.

    ತಕ್ಷಣ ನಾರಾಯಣಸ್ವಾಮಿ ಮಾತಿಗೆ ಅಡ್ಡಿಪಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರಲ್ಲಿ ಎರಡು ಮಾತಿಲ್ಲ ಆದರೆ ಅವರ ಕಥೆ ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ. ಮನೆಯಲ್ಲಿ ಅಪ್ಪ ಅಮ್ಮ ನಾಳೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ರಾತ್ರಿ ಮಾತಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಕುಟ್ಟಿ ಬೆಳಗ್ಗೆ ಎದ್ದ ಕೂಡಲೇ ಕುಂದಾಪುರಕ್ಕೆ ಹೋಗುತ್ತಾನೆ, ಸಂಜೆ ವಾಪಸ್ ಬರುತ್ತಾನೆ ಅಪ್ಪ ಅಮ್ಮ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ಮಾತಾಡಿಕೊಳ್ತಾ ಇದ್ರಲ್ಲ ಅದನ್ನ ಕೇಳಿಸಿಕೊಂಡು ಕುಂದಾಪುರಕ್ಕೆ ಹೋಗಿಬಂದೆ ಎನ್ನುತ್ತಾನೆ, ಯಾಕೆ ಹೋಗಬೇಕಿತ್ತು, ಏನು ಮಾತನಾಡಬೇಕಿತ್ತು ಎನ್ನುವುದು ಗೊತ್ತಿಲ್ಲದೇ ಸುಮ್ಮನೆ ಹೋಗಿಬಂದಿದ್ದ ಅದೇ ರೀತಿ ಸಿಎಂ ನೆರೆ ಪ್ರವಾಸ ಮಾಡಿದ್ದಾರೆ .ಯಾಕೆ ಹೋದರು? ಏನು ಮಾಡಬೇಕಿತ್ತು? ಅದನ್ನು ಮಾತ್ರ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

    ಬೋಜೇಗೌಡ ಮಾತಿಗೆ ಕೆರಳಿದ ಡಿಸಿಎಂ ಲಕ್ಷ್ಮಣ ಸವದಿ ಹಿಂದಿನ ಸಿಎಂ ಗಳು ಯಾವ ತರಹ ಗ್ರಾಮ ವಾಸ್ತವ್ಯ ಮಾಡಿದ್ರು ಏನ್ ಮಾಡಿದ್ರು ನಮಗೂ ಗೊತ್ತಿದೆ ಎಂದರು. ಹಿಂದೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು. ಕುಮಾರಸ್ವಾಮಿ ಸಿಎಂ ಅವರನ್ನು ನಾನೇ ಪ್ರವಾಹ ಪೀಡಿತ ಸ್ಥಳಕ್ಕೆ ಕರೆದೊಯ್ದಿದ್ದೆ ನಾನೇ ಟ್ರ್ಯಾಕ್ಟರ್ ನಲ್ಲಿ ಕೂರಿಸಿದ್ದೆ, ಅವರು ಎಲ್ಲಿ ಊಟ ಮಾಡಿದ್ರು, ಎಲ್ಲಿ ಮಲಗಿದ್ರು, ಎಲ್ಲಿ ಏನ್ ಮಾಡಿದ್ರು ನನಗೂ ಗೊತ್ತಿದೆ ಎಂದರು.

    ಡಿಸಿಎಂ ಸವದಿ ಮಾತಿಗೆ ಕೆರಳಿ ಕೆಂಡವಾದ ಜೆಡಿಎಸ್ ಪರಿಷತ್ ಸದಸ್ಯರು, ಹೆಚ್ಡಿಕೆ ಎಲ್ಲಿ ಮಲಗಿದ್ರು ಅನ್ನೋದು ಒಳ್ಳೆ ಮಾತಲ್ಲ, ಏನ್ ಮಾಡಿದ್ರು ಹೇಳಿ ನೋಡೋಣ ಎಂದು ಪಟ್ಟುಹಿಡಿದರು. ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಎಂದರೆ ಸ್ಟಾರ್ ಹೋಟೆಲ್ ಬಿಟ್ಟು ಹೊರಗಡೆನೇ ಬಂದಿರಲಿಲ್ಲ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಯಾವ ಸಿಎಂ ಏನು ಭರವಸೆ ನೀಡಿದ್ದರು ನಂತರ ಏನು ಮಾಡಿದರು ಎಂದು ಚರ್ಚೆಗೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ ಎನ್ನುವ ಮನವಿಯನ್ನು ಸಭಾಪತಿಗಳಿಗೆ ಸಲ್ಲಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.