Tag: Paris Olympics 2024

  • ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತ್ರ ಮೋದಿ ಮಾತನಾಡಲು ಮುಂದಾಗಿದ್ದರು, ನಾನೇ ನಿರಾಕರಿಸಿದ್ದೆ: ವಿನೇಶ್‌

    ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತ್ರ ಮೋದಿ ಮಾತನಾಡಲು ಮುಂದಾಗಿದ್ದರು, ನಾನೇ ನಿರಾಕರಿಸಿದ್ದೆ: ವಿನೇಶ್‌

    – ಕಾಳಜಿ ಇದ್ದಿದ್ದರೆ ವೀಡಿಯೋ ಮಾಡದೇ ಕ್ರೀಡಾಪಟುಗಳನ್ನ ಅಭಿನಂದಿಸಬಹುದಿತ್ತು ಎಂದ ವಿನೇಶ್‌

    ಚಂಡೀಗಢ: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ (Paris Olympics 2024) ನಾನು ಅನರ್ಹಗೊಂಡ ನಂತರ ಮೋದಿ (PM Modi) ಮಾತನಾಡಲು ಮುಂದಾಗಿದ್ದರು. ಆದರೆ ನಾನೇ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನು ಮಾತನಾಡಿದ್ದರೇ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎಂದು ವಿನೇಶ್‌ ಫೋಗಟ್‌ (Vinesh Phogat) ಹೇಳಿಕೊಂಡಿದ್ದಾರೆ.

    ಹರಿಯಾಣ ವಿಧಾನಸಭಾ ಚುನಾವಣೆಗೆ (Haryana assembly Poll) ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿನೇಶ್‌ ಒಲಿಂಪಿಕ್ಸ್‌ ದಿನಗಳನ್ನು ಮತ್ತೊಮ್ಮೆ ನೆನೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಪ್ರಧಾನಿ ಮೋದಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಮುಂದಾಗಿದ್ದರು. ಆದ್ರೆ ನಾನೇ ಮಾತನಾಡಲು ನಿರಾಕರಿಸಿದ್ದೆ ಎಂದಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

    ಪ್ರಧಾನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನೂ ಮಾತನಾಡಿದ್ದರೆ, ಆ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಈ ಬಗ್ಗೆ ಮುಂಚೆಯೇ ನನಗೆ ಹೇಳಿದ್ದರು. ಮೋದಿ ಅವರೊಂದಿಗಿನ ಸಂವಾದವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಲು ರೆಕಾರ್ಡ್‌ ಮಾಡಲಾಗುತ್ತದೆ ಎಂದು ಹೇಳಿದ್ದರು. ನನ್ನ ಭಾವನೆಗಳು, ನನ್ನ ಕಠಿಣ ಪರಿಶ್ರಮ, ಸೋಷಿಯಲ್‌ ಮೀಡಿಯಾದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಪ್ರಧಾನಿ ಜೊತೆ ಮಾತನಾಡಲು ನಿರಾಕರಿಸಿದೆ. ಪ್ರಚಾರಕ್ಕಾಗಿ ಯಾವುದೇ ಷರತ್ತುಗಳಿಲ್ಲದೇ ಪ್ರಧಾನಿಯೊಂದಿಗಿನ ಸಂಭಾಷಣೆಯನ್ನು ನಾನು ಪ್ರಸಂಶಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಪ್ಯಾರಿಸ್‌ನಲ್ಲಿ ಪದಕ ಗೆದ್ದ ಎಲ್ಲಾ ಅಥ್ಲಿಟ್‌ಗಳಿಗೆ ಪ್ರಧಾನಿ ಮೋದಿ ಕರೆ ಮಾಡಿ ಸಂವಾದ ನಡೆಸಿ ಅವರ ಪ್ರಯತ್ನಗಳಿಗಾಗಿ ಅಭಿನಂದಿಸಿದರು. ಅವರಿಗೆ ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಅದನ್ನ ರೆಕಾರ್ಡ್ ಮಾಡದೆಯೇ ಕರೆ ಮಾಡಿ ಅಭಿನಂದನೆ ಸಲ್ಲಿಸಬಹುದಿತ್ತು, ಅದಕ್ಕೆ ನಾನೂ ಕೃತಜ್ಞಳಾಗಿರುತ್ತಿದ್ದೆ. ಅಲ್ಲದೇ ನನ್ನೊಂದಿಗೆ ಮಾತನಾಡಿದ್ರೆ, ಕಳೆದ 2 ವರ್ಷಗಳ ಹಿಂದಿನ ಘಟನೆಯನ್ನು ಕೆದಕುತ್ತಾಳೆ ಅನ್ನೋದು ಅರಿವಿಗೆ ಬಂದಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹಗೊಂಡಿದ್ದೇಕೆ?
    ಮಹಿಳಾ ಕುಸ್ತಿಪಟು ವಿಭಾಗದಲ್ಲಿ ಇದೇ ಮೊದಲಬಾರಿಗೆ ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ವಿನೇಶ್‌ ಫೋಗಟ್‌ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಆದ್ರೆ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ವಿನೇಶ್‌ 150 ಗ್ರಾಂ ತೂಕ ಅಧಿಕವಿದ್ದದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು.

  • ಚೀನಾದ ರೆಸ್ಟೋರೆಂಟ್‌ನಲ್ಲಿ ವೇಯ್ಟರ್ ಆದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ

    ಚೀನಾದ ರೆಸ್ಟೋರೆಂಟ್‌ನಲ್ಲಿ ವೇಯ್ಟರ್ ಆದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ

    ಬೀಜಿಂಗ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಬೆಳ್ಳಿ ಪದಕ ಗೆದ್ದಿದ್ದ ಚೀನಾದ ಜಿಮ್ನಾಸ್ಟ್ ಇದೀಗ ರೆಸ್ಟೋರೆಂಟ್ ಒಂದರಲ್ಲಿ ವೇಯ್ಟರ್ ಕೆಲಸ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

    18 ವರ್ಷದ ಜಿಮ್ನಾಸ್ಟ್ ಜೌ ಯಾಕಿನ್ (Zhou Yaqin) ಬೆಳ್ಳಿ ಪದಕ ಗೆದ್ದು ಪೋಡಿಯಂ ಮೇಲೆ ಅಮಾಯಕಳಂತೆ ಪೋಸ್ ನೀಡಿದ್ದರು. ಹೀಗೆ ಪದಕ ಗೆದ್ದು ಸ್ವದೇಶಕ್ಕೆ ಮರಳಿದ ಮರುದಿನವೇ ಜೌ ಯಾಕಿನ್, ತಮ್ಮ ತಂದೆಯ ರೆಸ್ಟೋರೆಂಟ್‌ನಲ್ಲಿ ಊಟ ಬಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಗಡ್ಡ ಬೆಳೆಸಲಿಲ್ಲ ಅಂತಾ 280 ಭದ್ರತಾ ಸಿಬ್ಬಂದಿ ವಜಾಗೊಳಿಸಿದ ತಾಲಿಬಾನ್‌

    ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ನಗರದಲ್ಲಿ ರೆಸ್ಟೋರೆಂಟ್ ಇದೆ. ತನ್ನ ತಂದೆಯದ್ದೇ ಆದ ರೆಸ್ಟೋರೆಂಟ್‌ನಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಕೆಲಸ ಮಾಡಿಕೊಂಡಿದ್ದಾರೆ.

    ಆ ಮುದ್ದಾದ ಚೈನೀಸ್ ಜಿಮ್ನಾಸ್ಟ್ ಜೌ ಯಾಕಿನ್ ನೆನಪಿದೆಯೇ? ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ನಂತರ, ಅವರು ರಜೆಗಾಗಿ ತನ್ನ ಪೋಷಕರ ಮನೆಗೆ ಮರಳಿದ್ದಾರೆ. ಸಹಜವಾಗಿ, ನೀವು ಅದನ್ನು ರಜೆ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಆಕೆಯ ಪೋಷಕರು ನಡೆಸುತ್ತಿರುವ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಅವಳು ಸಹಾಯ ಮಾಡಬೇಕಾಗಿದೆ ಎಂದು ಎಕ್ಸ್ನಲ್ಲಿ ವೀಡಿಯೋ ಹಂಚಿಕೊಂಡು ಪೋಸ್ಟ್ ಹಾಕಲಾಗಿದೆ. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು

    ಕಷ್ಟಪಟ್ಟು ದುಡಿದು ಜೀವನ ನಡೆಸುವುದು ಉದಾತ್ತ ಕೆಲಸ. ಆಕೆ ಬಗ್ಗೆ ಹೆಮ್ಮೆ ಪಡಬೇಕು. ಆಕೆಯ ಪದಕದ ಕ್ಷಣವು ಇಂಟರ್ನೆಟ್ ಜಗತ್ತಿನಲ್ಲಿ ಅಮರವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್‌ ಫೋಗಟ್‌ಗೆ ಕೊಟ್ಟ ಅಣ್ಣ

    ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್‌ ಫೋಗಟ್‌ಗೆ ಕೊಟ್ಟ ಅಣ್ಣ

    – 500 ರೂ. ನೋಟುಗಳ ಕಂತೆ ತೋರಿಸಿ ಭಾವುಕರಾದ ಕುಸ್ತಿಪಟು

    ನವದೆಹಲಿ: ರಕ್ಷಾ ಬಂಧನ (Raksha Bandhan) ದಿನದಂದು ಕುಸ್ತಿಪಟು ವಿನೇಶ್‌ ಫೋಗಟ್‌ಗೆ (Vinesh Phogat) ಸಹೋದರ ವಿಶೇಷ ಉಡುಗೊರೆ ನೀಡಿದ್ದಾರೆ. ಅಣ್ಣನ ಗಿಫ್ಟ್‌ ಕುರಿತು ವಿನೇಶ್‌ ಭಾವುಕ ಕ್ಷಣದ ಪೋಸ್ಟ್‌ ಹಾಕಿದ್ದಾರೆ.

    ವಿನೇಶ್, 500 ರೂ. ಮುಖಬೆಲೆ ನೋಟುಗಳ ಕಂತೆ ಹಿಡಿದಿರುವ ವಿಶೇಷ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಭಾರತದ ಸ್ಟಾರ್‌ ರೆಸ್ಲರ್ ವಿನೇಶ್ ಫೋಗಟ್‌ಗೆ ಚಿನ್ನದ ಪದಕ!

    ‘ನನಗೆ ಹತ್ತಿರತ್ತಿರ 30 ವರ್ಷ. ಕಳೆದ ವರ್ಷ ಅಣ್ಣ ನನಗೆ 500 ರೂ. ನೀಡಿದ್ದ. ಈಗ, ಇಲ್ಲಿವರೆಗೆ ತಾನು ದುಡಿದು ಕೂಡಿಟ್ಟಿದ್ದ ಹಣವನ್ನು ಅಣ್ಣ ನನಗೆ ನೀಡಿದ್ದಾನೆ ಎಂದು ನೋಟಿನ ಕಂತೆಯನ್ನು ತೋರಿಸುತ್ತಾ ಕುಸ್ತಿಪಟು ಹೇಳಿಕೊಂಡಿದ್ದಾರೆ. ಈ ವೇಳೆ ಸಹೋದರ ಕೂಡ ಜೊತೆಗಿದ್ದಾರೆ. ಆ ವೀಡಿಯೋ ವೈರಲ್‌ ಆಗಿದೆ.

    2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮರಳಿದ ವಿನೇಶ್ ಫೋಗಟ್‌ಗೆ ದೇಶಾದ್ಯಂತ ಪ್ರೀತಿಯ ಸ್ವಾಗತ ಸಿಕ್ಕಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡು ಪದಕ ವಂಚಿತರಾಗಿ ವಾಪಸ್‌ ಆದರು. ಆದರೆ ಕ್ರೀಡಾಕೂಟದಲ್ಲಿನ ಉತ್ತಮ ಪ್ರದರ್ಶನದಿಂದ ದೇಶದ ಜನರ ಮನಗೆದ್ದಿದ್ದಾರೆ. ಹೀಗಾಗಿ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಫೋಗಟ್‌ಗೆ ಅದ್ದೂರಿ ಸ್ವಾಗತ ದೊರೆಯಿತು. ಇದನ್ನೂ ಓದಿ: ಭಾರತಕ್ಕೆ ಮರಳಿದ ವಿನೇಶ್‌ ಫೋಗಟ್‌ಗೆ ಅದ್ಧೂರಿ ಸ್ವಾಗತ

    ವಿನೇಶ್ ಕುಟುಂಬ ವಾಸಿಸುವ ಬಬಾಲಿಗೆ ಹೋಗುವ ಹಾದಿಯುದ್ದಕ್ಕೂ ಕುಸ್ತಿಪಟುವನ್ನು ಜನರ ಸನ್ಮಾನಿಸಿದರು. ಸೋಮವಾರ ವಿನೇಶ್ ಫೋಗಟ್ ರಕ್ಷಾ ಬಂಧನ ಆಚರಿಸಿದ್ದಾರೆ.

  • ಭಾರತದ ಸ್ಟಾರ್‌ ರೆಸ್ಲರ್ ವಿನೇಶ್ ಫೋಗಟ್‌ಗೆ ಚಿನ್ನದ ಪದಕ!

    ಭಾರತದ ಸ್ಟಾರ್‌ ರೆಸ್ಲರ್ ವಿನೇಶ್ ಫೋಗಟ್‌ಗೆ ಚಿನ್ನದ ಪದಕ!

    ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದ ಸ್ಟಾರ್ ರೆಸ್ಲರ್‌ ವಿನೇಶ್ ಫೋಗಟ್ (Vinesh Phogat) ಭಾರತಕ್ಕೆ ಮರಳಿದ ಬಳಿಕ ಚಿನ್ನದ ಪದಕ (Gold Medal) ಪಡೆದಿದ್ದಾರೆ.

    ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ವಿನೇಶ್‌ ಅವರು ಒಲಿಂಪಿಕ್ಸ್‌ನಿಂದಲೇ ಅನರ್ಹಗೊಂಡರು, ಅಲ್ಲದೇ ವಿನೇಶ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿತ್ತು. ಹಾಗಿದ್ದರೂ ಚಿನ್ನದ ಪದಕ ಸಿಕ್ಕಿದ್ದು ಹೇಗೆ ಅನ್ನೋದು ಅಚ್ಚರಿಯಾಗಿದೆ. ಈ ಬಗ್ಗೆ ತಿಳಿಯಬೇಕಿದ್ದರೆ ಮುಂದೆ ಓದಿ… ಇದನ್ನೂ ಓದಿ: ಸರ್ಕಾರಿ ಕೆಲಸ ತಿರಸ್ಕರಿಸಿದ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದ ಸರಬ್ಜೋತ್‌ ಸಿಂಗ್‌

    ಶನಿವಾರ ಭಾರತಕ್ಕೆ ಮರಳಿದ ಫೋಗಟ್‌ಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು. ರೋಡ್‌ಶೋನಲ್ಲಿ ದೊಡ್ಡ ಗುಂಪು ಅವಳನ್ನು ಹಿಂಬಾಲಿಸಿತು.

    ದೆಹಲಿಯಿಂದ ಬಾಳಲಿಗೆ ಹೋಗುವ ಮಾರ್ಗದಲ್ಲಿ, ಹಲವಾರು ಗ್ರಾಮಗಳಲ್ಲಿ ವಿನೇಶ್ ಬೆಂಬಲಿಗರು ಅವರನ್ನ ಸನ್ಮಾನಿಸಿದರು, 135 ಕಿಮೀ ದೂರದ ಪ್ರಯಾಣವು ಸುಮಾರು 13 ಗಂಟೆಗಳ ಕಾಲ ತೆಗೆದುಕೊಂಡಿತು. ಬಳಿಕ ಅವರ ಹುಟ್ಟೂರು ಬಾಳಲಿಯಲ್ಲಿ ಸಮುದಾಯದ ಹಿರಿಯರು ಚಿನ್ನದ ಪದಕ ನೀಡಿ ಗೌರವಿಸಿದರು. ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಭಾರತ ಮತ್ತೆ ನಂ.1 – 2ನೇ ಸ್ಥಾನಕ್ಕೆ ಕುಸಿದ ಆಸೀಸ್‌

    ನಿಗದಿಗಿಂತ ತೂಕಕ್ಕಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್‌ ಅವರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು. ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್‌ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಭವಿಷ್ಯದ ಬಗ್ಗೆ ಖಚಿತವಿಲ್ಲ – 2032ರವರೆಗೆ ಆಡುವ ಸುಳಿವು ನೀಡಿದ ವಿನೇಶ್‌ ಫೋಗಟ್‌

    ಫೈನಲ್‌ ಪಂದ್ಯದ ಮುನ್ನಾದಿನ ನಾನು ‌ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್‌ ಫೋಗಟ್‌ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಆದಾಗ್ಯೂ ವಿನೇಶ್‌ ಅವರ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿಸಿತ್ತು.

    ವಿನೇಶ್ ಎರಡು ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ, ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು 8 ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

  • ಕ್ಷಮಿಸಿ.. ಆದರೆ ನಾವು ನಿಯಮ ಪಾಲಿಸಲೇಬೇಕು: ಫೋಗಟ್‌ ಅನರ್ಹತೆ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಪ್ರತಿಕ್ರಿಯೆ

    ಕ್ಷಮಿಸಿ.. ಆದರೆ ನಾವು ನಿಯಮ ಪಾಲಿಸಲೇಬೇಕು: ಫೋಗಟ್‌ ಅನರ್ಹತೆ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಪ್ರತಿಕ್ರಿಯೆ

    ಪ್ಯಾರಿಸ್‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅನರ್ಹತೆಗೆ ಸ್ವತಃ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರು ಕ್ಷಮೆಯಾಚಿಸಿದ್ದಾರೆ. ಆದರೆ, ನಾವು ನಿಯಮ ಪಾಲಿಸಲೇಬೇಕು ಎಂದು ತಮ್ಮ ನಿಲುವಿಗೆ ಸ್ಪಷ್ಟನೆ ನೀಡಿದ್ದಾರೆ.

    ಕೋರ್ಟ್ ಆಫ್ ಆರ್ಬಿಟ್ರೇಷನ್ ಆಫ್ ಸ್ಪೋರ್ಟ್ (CAS) ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರ ವಿಚಾರಣೆಯ ಫಲಿತಾಂಶಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಅಧ್ಯಕ್ಷ ನೆನಾದ್ ಲಾಲೋವಿಕ್ (Nenad Lalovic), ಕುಸ್ತಿಪಟು ತೂಕದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್‌

    ಏನಾಯಿತು ಎಂಬುದರ ಬಗ್ಗೆ ನನಗೆ ತುಂಬಾ ವಿಷಾದವಿದೆ. ಆದರೆ ಕ್ರೀಡಾಪಟುಗಳು ಕ್ರೀಡಾಪಟುಗಳೇ. ತೂಕದ ವಿಚಾರಕ್ಕೆ ಏನೆಲ್ಲಾ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ನಿಯಮಗಳನ್ನು ಅನುಸರಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಲಾಲೋವಿಕ್‌ ಸ್ಪಷ್ಟಪಡಿಸಿದ್ದಾರೆ.

    ಕ್ರೀಡಾಪಟುಗಳ ಆರೋಗ್ಯದ ಕಾಳಜಿಯಿಂದಾಗಿ ನಾವು ಆ ನಿಯಮವನ್ನು ಪರಿಚಯಿಸಿದ್ದೇವೆ. ಕ್ರೀಡಾಪಟುಗಳು ಸ್ಪರ್ಧಿಸಲು ತೂಕದ ನಿಯಮಗಳಿಗೆ ಬದ್ಧರಾಗಿದ್ದಾರೆ. ಬಹುಶಃ ನಿಯಮಗಳಲ್ಲಿ ಸ್ವಲ್ಪ ಹೊಂದಾಣಿಕೆಗಳನ್ನು ಮಾಡಬಹುದು. ಆದರೆ ನಾವು ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ತೂಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗಾಗಲೇ ಫೈನಲ್‌ಗೆ ಬಂದಿದ್ದರಿಂದ ಜಂಟಿ-ಬೆಳ್ಳಿಯನ್ನು ನೀಡುವಂತೆ ವಿನೇಶ್ ಮನವಿ ಮಾಡಿದ್ದಾರೆ. ಅದನ್ನು ಸಿಎಎಸ್‌ ವಿಚಾರಣೆ ಮಾಡುತ್ತಿದೆ. ತೀರ್ಪು ಇನ್ನಷ್ಟೇ ಬರಬೇಕಿದೆ.

  • ಪ್ಯಾರಿಸ್‌ ಒಲಿಂಪಿಕ್ಸ್‌ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್‌

    ಪ್ಯಾರಿಸ್‌ ಒಲಿಂಪಿಕ್ಸ್‌ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್‌

    ಪ್ಯಾರಿಸ್‌: ಜುಲೈ 26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಕ್ರೀಡಾ ಹಬ್ಬ ಭಾನುವಾರ (ಇಂದು) ಮುಕ್ತಾಯಗೊಳ್ಳಲಿದೆ. ಈ ಮೂಲಕ 17 ದಿನಗಳ ಕ್ರೀಡಾ ಮಹಾ ಸಂಗಮಕ್ಕೆ ತೆರೆ ಬೀಳಲಿದೆ.

    ಕಳೆದ ಜುಲೈ 26ರಂದು ಪ್ಯಾರಿಸ್‌ನ (Paris) ಸೆನ್‌ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗುತ್ತದೆ. ಸಮಾರೋಪದಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

    ಸಮಾರೋಪದಲ್ಲಿ ಕಲಾವಿದರು ಸಂಗೀತ ಪ್ರದರ್ಶನ ನೀಡಲಿದ್ದಾರೆ, ಅಲ್ಲದೇ ಲೇಸರ್‌ ಲೈಟ್‌ ಶೋ, ವೈಮಾನಿಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದಾಗಿ ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಹೇಳಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್

    ಸಮಾರೋಪದಲ್ಲಿ ಏನಿದೆ ವಿಶೇಷತೆ? 
    ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ಸಮಾರೋಪ ಆರಂಭಗೊಳ್ಳಲಿದ್ದು, ಸಂಜೆ 5:15 ರವರೆಗೆ ಇರಲಿದೆ. ಸಮಾರೋಪ ಸಮಾರಂಭ ಆಗಸ್ಟ್​​​ 11ರಂದು ಭಾನುವಾರ ನಡೆಯಲಿದೆ. ʻದಿ ಟುನೈಟ್ ಶೋʼ ನಿರೂಪಕ ಜಿಮ್ಮಿ ಫಾಲನ್ ಮತ್ತು ದೀರ್ಘಕಾಲದ ಕ್ರೀಡಾ ನಿರೂಪಕ ಮೈಕ್ ಟಿರಿಕೊ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    ಸಮಾರೋಪ ಸಮಾರಂಭವು ಆಯಾ ದೇಶಗಳ ಧ್ವಜಗಳ ಪರೇಡ್​ನೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಪ್ರತಿ ರಾಷ್ಟ್ರದ ಕ್ರೀಡಾಪಟುಗಳು ತಮ್ಮ ಧ್ವಜದೊಂದಿಗೆ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಒಲಿಂಪಿಕ್ಸ್‌ ಹುಟ್ಟಿಕೊಂಡ ಗ್ರೀಸ್‌ ದೇಶದ ಹೆಗ್ಗುರುತಿಗಾಗಿ ಗ್ರೀಕ್ ಧ್ವಜವು ಮೆರವಣಿಗೆಯನ್ನು ಮುನ್ನಡೆಸಲಿದೆ. ಆತಿಥೇಯ ದೇಶವು ಕೊನೆಯಲ್ಲಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ತಿಳಿಸಿದೆ.

    ಭಾರತದ ಧ್ವಜಧಾರಿಗಳು ಯಾರು?
    ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದಲ್ಲಿ ಪಿ.ಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಅವರು ಭಾರತದ ಧ್ವಜ ಹೊತ್ತೊಯ್ಯಲಿದ್ದಾರೆ. ಉದ್ಘಾಟನೆ ಸಮಾರಂಭದಲ್ಲಿ ಅಥ್ಲಿಟ್‌ ಪಿ.ವಿ ಸಿಂಧು ಧ್ವಜಧಾರಿಯಾಗಿದ್ದರು. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಮಧ್ಯಸ್ಥ ಮಂಡಳಿ ರಿಲೀಫ್ ನೀಡುತ್ತಾ? – ಒಲಿಂಪಿಕ್ಸ್ ಮುಗಿಯೋ ಮುನ್ನ ಸಿಎಎಸ್‌ನಿಂದ ತೀರ್ಪು

    ಒಲಿಂಪಿಕ್ಸ್‌ ಧ್ವಜ ಹಸ್ತಾಂತರ:
    ಬೇಸಿಗೆ ಕ್ರೀಡಾಕೂಟದ ಪ್ರಸ್ತುತ ಆತಿಥೇಯ ನಗರದ ಮೇಯರ್ ಒಲಿಂಪಿಕ್ ಧ್ವಜವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಿದ್ದಾರೆ. ನಂತರ 2028ರ ಕ್ರೀಡಾಕೂಟ ನಡೆಯಲಿರುವ ಹಿನ್ನೆಲೆ ಧ್ವಜವನ್ನು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರಿಗೆ ಹಸ್ತಾಂತರಿಸಲಾಗುತ್ತದೆ. ಪ್ರತಿ ವರ್ಷ ಒಲಿಂಪಿಕ್ಸ್‌ ಕೂಟ ಮುಗಿಯುತ್ತಿದ್ದಂತೆ ಮುಂದಿನ ಆಯೋಜಕ ರಾಷ್ಟ್ರಕ್ಕೆ ಧ್ವಜ ಹಸ್ತಾಂತರಿಸುವುದು ಸಂಪ್ರದಾಯ.

  • ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    ಪ್ಯಾರಿಸ್‌: ಒಲಿಂಪಿಕ್ಸ್‌ (Paris Olympics 2024) ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ (Vinesh Phogat) ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ ಸ್ಪರ್ಧೆಯಿಂದಲೇ ಅನರ್ಹಗೊಂಡರು. ಇದರಿಂದ ಒಂದೆಡೆ ಅನರ್ಹತೆಯ ನಿಯಮ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ವಿನೇಶ್‌ ತೂಕ ಇಳಿಸಲು ಆ ದಿನ ಇಡೀ ರಾತ್ರಿ ನಡೆಸಿದ್ದ ಕಸರತ್ತಿನ ಬಗ್ಗೆ ಚರ್ಚೆಯಾಗುತ್ತಿವೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದೆ.

    ಶುಕ್ರವಾರ ನಡೆದ 57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್‌ ಕುಸ್ತಿಯಲ್ಲಿ (Wrestling)  ಕಂಚಿನ ಪದಕ ಗೆದ್ದ ಭಾರತದ ಅಮನ್‌ ಸೆಹ್ರಾವತ್‌ (Aman Sehrawat) ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿದೆ.

    ಹೌದು. ಸೆಮಿಫೈನಲ್‌ ಸೋಲಿನ ಬಳಿಕ 61 ಕೆಜಿ ತೂಕ ಹೊಂದಿದ್ದ ಅಮನ್‌ ಕಂಚಿನ ಪದಕಕ್ಕೆ ಹೋರಾಡಬೇಕಿತ್ತು. ನಿಗದಿತ ಮಿತಿಗಿಂತ ಅಮನ್‌ 4.5 ಕೆಜಿ ಹೆಚ್ಚುವರಿ ತೂಕವಿದ್ದ ಕಾರಣ ಭಾರೀ ಕಸರತ್ತು ನಡೆಸಿ ತೂಕ ಇಳಿಸಿದ್ದಾರೆ. ಭಾರತೀಯ ತರಬೇತುದಾರರೊಂದಿಗೆ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    21 ವರ್ಷ ವಯಸ್ಸಿನ ಅಮನ್ ಅವರು ಜಪಾನ್‌ನ ರೇ ಹಿಗುಚಿ ವಿರುದ್ಧ ಗುರುವಾರ ಸಂಜೆ 6:30ರ ವೇಳೆಗೆ ಸೆಮಿಸ್‌ನಲ್ಲಿ ಸೋಲು ಕಂಡಿದ್ದರು. ಬಳಿಕ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್‌ ವಿರುದ್ಧ ಕಂಚಿನ ಪದಕಕ್ಕೆ ಅವರು ಸೆಣಸಬೇಕಿತ್ತು. ಕೊಂಚವೂ ಸಮಯ ವ್ಯರ್ಥ ಮಾಡದ ಅಮನ್‌ ನಿರಂತರವಾಗಿ ದೇಹ ದಂಡಿಸುವ ಮೂಲಕ ಹಿಡಿದ ಕಾರ್ಯವನ್ನು ಸಾಧಿಸಿದ್ದಾರೆ.

    ರೋಚಕ ಕಸರತ್ತು:
    ಸೆಮಿಫೈನಲ್‌ ಪಂದ್ಯ ಮುಗಿದ ಬಳಿಕ ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಅಮನ್‌ ಜಿಮ್‌ಗೆ ಬಂದು ಟ್ರೆಡ್‌ಮಿಲ್‌ನಲ್ಲಿ 1 ಗಂಟೆ ನಾನ್‌ಸ್ಟಾಪ್‌ ಓಟ ಅಭ್ಯಾಸ ಮಾಡಿದ್ರು. ಇದಕ್ಕೂ ಮುನ್ನ ಅವರು ಹಿರಿಯ ಕೋಚ್‌ಗಳೊಂದಿಗೆ ಸತತ ಒಂದೂವರೆ ಗಂಟೆ ಮ್ಯಾಚ್‌ ಸೆಷನ್‌ ಅಭ್ಯಾಸ ಮಾಡಿದ್ದರು. ನಂತರ 30 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, 5 ನಿಮಿಷಗಳ ಕಾಲ ಸೌನಾ ಸ್ನಾನ ಮಾಡಿದರು. ಆದ್ರೆ ಸೆಷನ್‌ ಮುಕ್ತಾಯದ ಹೊತ್ತಿಗೆ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದ ಅವರಿಗೆ ಇನ್ನಷ್ಟು ಮಸಾಜ್‌ ಮಾಡಿಸಿ, ಲಘು ಜಾಗಿಂಗ್ ಮಾಡಿಸಲಾಯಿತು. ಹೀಗೆ ಬಿಡುವಿಲ್ಲದೇ ಮಾಡಿದ ಕಸರತ್ತಿನ ಪರಿಣಾಮ ಶುಕ್ರವಾರ ಮುಂಜಾನೆ 4:30ರ ವೇಳೆಗೆ ಅಮನ್‌ ದೇಹದ ತೂಕವನ್ನು 56.9 ಕೆಜಿಗೆ ಇಳಿಸಿದರು. ಆ ಬಳಿಕವೇ ಕೋಚ್‌ ನಿಟ್ಟುಸಿರು ಬಿಟ್ಟರು.

    ಊಟವಿಲ್ಲ ಬರೀ ನೀರು ಸೇವನೆ:
    ವಿನೇಶ್‌ ಫೋಗಟ್‌ ಅನರ್ಹತೆಯ ಬಳಿಕ ಎಚ್ಚೆತ್ತುಕೊಂಡಿದ್ದ ಕೋಚ್‌ಗಳು ಅಮನ್‌ ಅವರ ತೂಕ ಇಳಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಮನ್‌ಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿಯಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್‌ ನಿದ್ರೆಗೆ ಜಾರಲೇ ಇಲ್ಲ ಎಂದು ಕೋಚ್‌ಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

    ಪದಕ ತಂದೆ-ತಾಯಿಗೆ ಅರ್ಪಣೆ:
    ಚೊಚ್ಚಲ ಪ್ರಯತ್ನದಲ್ಲೇ ಪದಕ ಗೆದ್ದ ಅಮನ್​ ಸೆಹ್ರಾವತ್​ ಈ ಪದಕವನ್ನು ಅಗಲಿದ ತಂದೆ-ತಾಯಿಗೆ ಅರ್ಪಿಸಿದ್ದಾರೆ. ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸವನ್ನೂ ಅಮನ್​ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಪಿ.ವಿ ಸಿಂಧು ಅವರ ಹೆಸರಿನಲ್ಲಿತ್ತು. ಸಿಂಧು ರಿಯೋ ಒಲಿಂಪಿಕ್ಸ್​ನಲ್ಲಿ 21 ವರ್ಷ 1 ತಿಂಗಳು, 14 ದಿನ ವಯಸ್ಸಿನಲ್ಲಿದ್ದಾಗ ಕಂಚಿನ ಪದಕ ಗೆದ್ದಿದ್ದರು.

    ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಕುಸ್ತಿಪಟು:
    ಅಮನ್​ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಎನಿಸಿಕೊಂಡಿದ್ದರು. 57 ಕೆಜಿ ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದಾಗಲೇ ಅಮನ್​ ಪದಕ ಗೆಲ್ಲುವುದು ನಿಶ್ಚಿತ ಎನ್ನಲಾಗಿತ್ತು. ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡ ಕಾರಣ ಕಂಚಿನ ಪದಕ್ಕೆ ಹೋರಾಟ ನಡೆಸಿ ಇಲ್ಲಿ ಮೇಲುಗೈ ಸಾಧಿಸಿದರು.

  • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್

    ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್

    ಪ್ಯಾರಿಸ್: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics) ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸಿಕ್ಕಿದೆ. ಪುರುಷರ ಕುಸ್ತಿ 57 ಕೆಜಿ ಪ್ರೀಸ್ಟೈಲ್‌ ವಿಭಾಗದಲ್ಲಿ ಭಾರತದ ಅಮನ್‌  ಸೆಹ್ರಾವತ್‌ (Aman Sehrawat) ಕಂಚು ಗೆದ್ದು ಬೀಗಿದ್ದಾರೆ.

    ಶುಕ್ರವಾರ ಚಾಂಪ್‌ ಡಿ ಅರೆನಾದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್‌ ವಿರುದ್ಧ ಅಮನ್‌ ಗೆಲುವು ಸಾಧಿಸಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಲ್ಲಿವರೆಗೆ 5 ಕಂಚು, ಒಂದು ಬೆಳ್ಳಿ ಪದಕ ದಕ್ಕಿದೆ. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಮಧ್ಯಸ್ಥ ಮಂಡಳಿ ರಿಲೀಫ್ ನೀಡುತ್ತಾ? – ಒಲಿಂಪಿಕ್ಸ್ ಮುಗಿಯೋ ಮುನ್ನ ಸಿಎಎಸ್‌ನಿಂದ ತೀರ್ಪು

    ಶುಕ್ರವಾರ ಚಾಂಪ್ ಡಿ ಅರೆನಾದಲ್ಲಿ ನಡೆದ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕವನ್ನು ಪಡೆದರು.

    ಪ್ಯಾರಿಸ್ ಸಮ್ಮರ್ ಗೇಮ್ಸ್‌ನ ಅತ್ಯಂತ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕುಸ್ತಿಪಟು ಜಪಾನ್‌ನ ರೇ ಹಿಗುಚಿ ವಿರುದ್ಧ ಸೋತಿದ್ದರು. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್‌ ಸಿಸೋಡಿಯಾ

  • ನೀರಜ್‌ ಚೋಪ್ರಾ ನನ್ನ ಮಗನಿದ್ದಂತೆ: ಒಲಿಂಪಿಕ್ಸ್‌ ಚಿನ್ನ ಗೆದ್ದ ಪಾಕ್‌ನ ನದೀಮ್‌ ತಾಯಿ ಪ್ರತಿಕ್ರಿಯೆ

    ನೀರಜ್‌ ಚೋಪ್ರಾ ನನ್ನ ಮಗನಿದ್ದಂತೆ: ಒಲಿಂಪಿಕ್ಸ್‌ ಚಿನ್ನ ಗೆದ್ದ ಪಾಕ್‌ನ ನದೀಮ್‌ ತಾಯಿ ಪ್ರತಿಕ್ರಿಯೆ

    ಇಸ್ಲಾಮಾಬಾದ್:‌ ನೀರಜ್‌ ಚೋಪ್ರಾ (Neeraj Chopra) ನನ್ನ ಮಗನಿದ್ದಂತೆ. ಅವನಿಗಾಗಿಯೂ ನಾನು ಪ್ರಾರ್ಥಿಸುತ್ತೇನೆ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್‌ ನದೀಮ್‌ (Arshad Nadeem) ತಾಯಿ ಹೇಳಿದ್ದಾರೆ.

    ಒಲಿಂಪಿಕ್ಸ್‌ (Paris Olympics 2024) ಜಾವೆಲಿನ್‌ ಥ್ರೋ ಕುರಿತು ನದೀಮ್‌ ತಾಯಿ ಮಾತನಾಡುವಾಗ, ನೀರಜ್‌ ಚೋಪ್ರಾ ಕೂಡ ನನ್ನ ಮಗನಿದ್ದಂತೆ. ಅವನು ನದೀಮ್‌ನ ಸ್ನೇಹಿತ, ಸಹೋದರನೂ ಹೌದು. ಗೆಲುವು ಮತ್ತು ಸೋಲುಗಳು ಕ್ರೀಡೆಯ ಭಾಗವಾಗಿದೆ. ದೇವರು ಅವರನ್ನು ಆಶೀರ್ವದಿಸಲಿ. ಪದಕಗಳನ್ನು ಗೆಲ್ಲಲಿ. ಅವರಿಬ್ಬರು ಸಹೋದರರಂತೆ. ನಾನು ನೀರಜ್‌ಗಾಗಿಯೂ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics | ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್‌

    ನದೀಮ್‌ಗೆ ನೀಡಿದ ಬೆಂಬಲಕ್ಕಾಗಿ, ನನ್ನ ಮಗನಿಗಾಗಿ ಅವರು ಸಲ್ಲಿಸಿದ ಪ್ರಾರ್ಥನೆಗಳಿಗಾಗಿ ನಾನು ಇಡೀ ಪಾಕಿಸ್ತಾನಕ್ಕೆ ಕೃತಜ್ಞಳಾಗಿದ್ದೇನೆ ಎಂದು ಭಾವುಕವಾಗಿ ನದೀಮ್‌ ತಾಯಿ ಮಾತನಾಡಿದ್ದಾರೆ.

    ನೀರಜ್ ತಾಯಿ ಸರೋಜ ಕೂಡ, ಅರ್ಷದ್ ನನ್ನ ಮಗನಂತೆ ಎಂದು ಹೇಳಿದ್ದಾರೆ. ಈಗ ಅರ್ಷದ್ ತಾಯಿ ಕೂಡ ಅದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ನನ್ನ ಸ್ವಂತ ಮಗನನ್ನು ನೋಡುವ ರೀತಿಯಲ್ಲಿಯೇ ನೀರಜ್‌ನನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಭಾರತ ಪುರುಷರ ಹಾಕಿ ತಂಡಕ್ಕೆ ಕಂಚು

    ಪಾಕಿಸ್ತಾನದ ಇತಿಹಾಸದಲ್ಲೇ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್‌ ಅರ್ಷದ್‌ ಆಗಿದ್ದಾರೆ. ಇತ್ತ ಬ್ಯಾಕ್‌-ಟು-ಬ್ಯಾಕ್‌ ವೈಯಕ್ತಿಕ ಒಲಿಂಪಿಕ್ಸ್‌ ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್‌ ಆಗಿ ನೀರಜ್‌ ಹೊರಹೊಮ್ಮಿದ್ದಾರೆ.

    ನಾವು ಬೆಳ್ಳಿ ಪದಕದಿಂದ ತುಂಬಾ ಸಂತೋಷವಾಗಿದ್ದೇವೆ. ಚಿನ್ನ ಗೆದ್ದವರು ಕೂಡ ನಮ್ಮ ಮಗನಿದ್ದಂತೆ. ಬೆಳ್ಳಿ ಗೆದ್ದವರು ಕೂಡ ನಮ್ಮ ಮಗ. ಎಲ್ಲರೂ ಕ್ರೀಡಾಪಟುಗಳು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ನೀರಜ್‌ ತಾಯಿ ಸರೋಜ್ ಪ್ರತಿಕ್ರಿಯಿಸಿದ್ದಾರೆ.

    ನದೀಮ್ ಕೂಡ ಒಳ್ಳೆಯವನು. ಅವನು ಚೆನ್ನಾಗಿ ಆಡುತ್ತಾನೆ. ನೀರಜ್ ಮತ್ತು ನದೀಮ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾವು ಚಿನ್ನ ಮತ್ತು ಬೆಳ್ಳಿಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಚೋಪ್ರಾ ಮತ್ತು ನದೀಮ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದರೂ ಮೈದಾನದ ಹೊರಗೆ ಉತ್ತಮ ಸ್ನೇಹಿತರು. ನೀರಜ್ ವಾಸ್ತವವಾಗಿ ನದೀಮ್‌ಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಇದನ್ನೂ ಓದಿ: ವಿನೇಶ್‌ ಫೋಗಟ್‌ಗೆ 4 ಕೋಟಿ ರೂ. ಬಹುಮಾನ – ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಕಲ ಸಿದ್ಧತೆ

  • Paris Olympics | ವಿನೇಶ್‌ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ – ಅಂತಿಮ್‌ ಪಂಘಲ್‌ ಗಡಿಪಾರು

    Paris Olympics | ವಿನೇಶ್‌ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ – ಅಂತಿಮ್‌ ಪಂಘಲ್‌ ಗಡಿಪಾರು

    ಪ್ಯಾರಿಸ್‌: 2024ರ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ಒಲಿಂಪಿಕ್ಸ್‌ನಿಂದ ಅನರ್ಹಗೊಂಡು ವಿನೇಶ್‌ ಫೋಗಟ್‌ (Vinesh Phogat) ಕುಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

    ಭಾರತೀಯ ಕುಸ್ತಿಪಟು ಅಂತಿಮ್‌ ಪಂಘಲ್‌ (Antim Panghal) ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ಪ್ಯಾರಿಸ್‌ ಒಲಿಂಪಿಕ್ಸ್‌ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಬುಧವಾರ ನಡೆದ 53 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್​​ನಲ್ಲಿ ಅಂತಿಮ್‌ ಪಂಘಲ್‌ ಟರ್ಕಿಯ ಯೆಟ್‌ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.

    ಹೌದು. ಒಲಿಂಪಿಕ್‌ ಕ್ರೀಡಾ ಗ್ರಾಮಕ್ಕೆ (Olympic Games Village) ಪ್ರವೇಶಿಸಲು ಅಂತಿಮ್‌ಗೆ ನೀಡಲಾಗಿದ್ದ ಆಧಿಕೃತ ಐಡಿ ಕಾರ್ಡ್‌ ಅನ್ನು ತನ್ನ ಸಹೋದರಿ ನಿಶಾ ಅವರಿಗೆ ನೀಡಿದ್ದಾರೆ. ನಿಯಮದ ಪ್ರಕಾರ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಅಂತಿಮ್‌ ಅವರನ್ನು ಒಲಿಂಪಿಕ್ಸ್‌ ಗ್ರಾಮದಿಂದ ಗಡಿಪಾರು ಮಾಡಲು ಒಲಿಂಪಿಕ್ಸ್‌ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

    ನಡೆದಿದ್ದೇನು?
    ಅಂತಿಮ್‌ ಫ್ರೀ ಕ್ವಾರ್ಟರ್ ಫೈನಲ್​​ನಲ್ಲಿ ಸೋತ ನಂತರ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್‌ (Olympics ID Card) ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್‌ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್‌ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪಂಘಲ್‌ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

    ವಿನೇಶ ಫೋಗಟ್‌ ನಿವೃತ್ತಿ ಘೋಷಣೆ:
    ಒಲಿಂಪಿಕ್ಸ್‌ನಲ್ಲಿ (Paris Olympics) ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ. ಎಕ್ಸ್‌ ಖಾತೆಯಲ್ಲಿ ಭಾವುಕ ಸಾಲು ಬರೆದುಕೊಂಡು ನಿವೃತ್ತಿ ಘೋಷಿಸಿದರು. ಅಮ್ಮಾ, ನನ್ನ ವಿರುದ್ಧ ಕುಸ್ತಿ (Wrestling) ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ.

    ಫೋಗಟ್‌ ಅನರ್ಹಗೊಂಡಿದ್ದು ಏಕೆ?
    50 ಕೆಜಿ ಫ್ರಿಸ್ಟೈಲ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್ ಫೋಗಟ್ ಈ ಬಾರಿ ಬಂಗಾರ ಗೆಲ್ಲಬಹುದು ಎಂದು ನಿರೀಕ್ಷೆ ಭಾರತೀಯರಿಗಿತ್ತು. ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ ತೂಕದಲ್ಲಿ ಕೇವಲ 100 ಗ್ರಾಂ ಅಧಿಕವಿದ್ದ ಕಾರಣದಿಂದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಇದಾದ ಒಂದು ದಿನದಲ್ಲೇ ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ.