Tag: Parimala jaggesh

  • ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್

    ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್

    ಸ್ಯಾಂಡಲ್‌ವುಡ್ ನಟ ನವರಸ ನಾಯಕ ಜಗ್ಗೇಶ್‌ ಉತ್ತಮ ಸಾಧನೆ ಮಾಡಿರುವ ಪತ್ನಿ ಪರಿಮಳ ಅವರಿನ್ನ ಹಾಡಿ ಹೊಗಳಿದ್ದಾರೆ. 54ನೇ ವಯಸ್ಸಿಗೆ ಪತ್ನಿ ಪರಿಮಳಾ ಸಾಧನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕನ್ನಡ ಸಿನಿಮಾಗಳ ಮೂಲಕ ನಟ ಜಗ್ಗೇಶ್ ಖ್ಯಾತಿ ಗಳಿಸಿದ್ರೆ, ಅವರ ಪತ್ನಿ ಪರಿಮಳಾ ಸಾಧನೆಯ ಹಾದಿ ನೋಡಿ ಭೇಷ್ ಎಂದು ಜಗ್ಗೇಶ್ ಪತ್ನಿಗೆ ಹೊಗಳಿದ್ದಾರೆ. ಡಯೆಟ್ ವಿಚಾರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಭಾರತದ ಶೇಷ್ಠ 50 ಸಾಧಕರಲ್ಲಿ ಒಬ್ಬಳಾಗಿ ಸಕ್ಕರೆ ಕಾಯಿಲೆ ನಿಯಂತ್ರಣ ಆಧುನಿಕ ಆವಿಷ್ಕಾರಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದು ಸುದ್ದಿಯಾಗಿದ್ರು. ಈಗ ಅಮೆರಿಕದ 3 ಡಯೆಟ್ ಕೋರ್ಸ್ ಮಾಡಿ ಎಜುಕೇಶನ್ ಕಂಪ್ಲೀಟ್ ಮಾಡಿದ್ದಾರೆ. ಈ ಕುರಿತು ಖುಷಿಯಿಂದ ಮಡದಿಯ ಸಾಧನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

    ಮಡದಿಯ ಸಾಧನೆಯ ಜೊತೆ ಹಳೆಯ ವಿಚಾರವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 1954ರಲ್ಲಿ ಪರಿಮಳನ ತಂದೆ ಕೋರ್ಟ್ನಲ್ಲಿ 15 ವರ್ಷದ ಮಗಳ ಭವಿಷ್ಯ ಹಾಳು ಮಾಡಿದ ಎಂದು ಜಡ್ಜ್ ಮುಂದೆ ಕಣ್ಣೀರು ಹಾಕಿದರು. ಆಗ ನಾನು ಓಹೋ ಜೈಲು ಫಿಕ್ಸ್ ಎಂದು ಅದಿರು ಬಿದ್ದೆ. ನಂತರ ಸುಪ್ರೀಂ ಕೋರ್ಟಿನಲ್ಲಿ ನನ್ನ ಕೇಸು ಖುಲಾಸೆ ಆಗಿ, ಪರಿಮಳಾ ನನ್ನ ಮನೆ ಸೇರಿದಾಗ, ಆಕೆ ನನಗೆ ಕೇಳಿದ ಬಳುವಳಿ ಜಗ್ಗಿ, ಓದು ಬಿಟ್ಟು ನಿನ್ನ ಬಳಿ ಬಂದೆ. ಪ್ಲೀಸ್ ನನ್ನನ್ನು ಓದಿಸ್ತಿಯಾ ಎಂದು ಕೇಳಿದ್ದಳು. ಅದಕ್ಕೆ ನಾನು ಕೊಟ್ಟ ಉತ್ತರ, ಪಾರು ನನಗೆ ತಿನ್ನಲು ಅನ್ನವಿಲ್ಲಾ. ಆದರೂ ಐ ಪ್ರಾಮೀಸ್ ಎಷ್ಟೇ ಕಷ್ಟ ಆದರೂ ನಿನ್ನ ಓದಿಸಲು ಯತ್ನಿಸುವೆ ಎಂದು ಮಾತು ಕೊಟ್ಟೆ ಎಂದು ಜಗ್ಗೇಶ್ ಹೇಳಿದ್ದಾರೆ. ಇದನ್ನೂ ಓದಿ: ಹಾಟ್ ಅವತಾರದಲ್ಲಿ ಸಂಯುಕ್ತಾ ಹೊರನಾಡ್

    ಇಂದಿಗೂ ಆ ಮಾತು ತಪ್ಪಿಲ್ಲಾ. ಕೊಟ್ಟ ಮಾತಿನಂತೆ ನಡೆದುಕೊಂಡೆ.. ಪರಿಮಳನ್ನು ಪಿಯುಸಿಗೆ ಈಸ್ಟ್ ವೇಸ್ಟ್ ಕಾಲೇಜ್‌ಗೆ ಸೇರಿಸಿದೆ. ಪಿಸಿಯುನಲ್ಲಿ ರ‍್ಯಾಂಕ್ ಬಂದಳು. ಬಿಎಂಎಸ್ ಕಾಲೇಜ್‌ಗೆ ಬಿಇ ಸೇರಿಸಿದೆ. ಅಲ್ಲು ತೇರ್ಗಡೆಯಾಗಿ ನಂತರ ಮತ್ತೊಂದು ಸಾಧನೆ ಕಂಪ್ಯೂಟರ್ ಡಿಪ್ಲೋಮಾ ಮಾಡಿದಳು.ಅಲ್ಲಿಗೂ ನಿಲ್ಲದೆ ʻಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್‌ʼ ರಾಮಯ್ಯದಲ್ಲಿ ಮುಗಿಸಿದಳು. ಈಗ ಮುಗಿಯಿತು ಎಂದರೆ ಮತ್ತೆ ಅಮೆರಿಕದ 3 ಡಯೆಟ್ ಕೋರ್ಸ್ ಮಾಡಿದಳು. ಇಂದು ನನಗರಿಯದೆ ಜಗ್ಗಿ, ನೋಡಿದ್ಯಾ ನನ್ನ ಮತ್ತೊಂದು ಡಿಗ್ರಿ ಎಂದು ಇದನ್ನ ಕಳಿಸಿದಳು ಎಂದು ಪತ್ನಿ ಬಗ್ಗೆ ಹೊಗಳಿದ್ದಾರೆ ಜಗ್ಗೇಶ್. ಒಟ್ನಲ್ಲಿ 54ನೇ ವಯಸ್ಸಿನಲ್ಲೂ ಹೆಂಡತಿ ಸಾಧನೆಗೆ ಜಗ್ಗೇಶ್ ತಲೆಬಾಗಿದ್ದಾರೆ. ಓದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನ ಈ ಮೂಲಕ ಜಗ್ಗೇಶ್ ಹೇಳಿಕೊಂಡಿದ್ದಾರೆ.

  • ಅಂದು ಮಗುವಂತೆ ಸಿಕ್ಕಳು, ಇಂದು ಅಮ್ಮನ ಸ್ಥಾನ ತುಂಬಿದಳು: ಮಡದಿಗೆ ಜಗ್ಗೇಶ್ ವಿಶ್

    ಅಂದು ಮಗುವಂತೆ ಸಿಕ್ಕಳು, ಇಂದು ಅಮ್ಮನ ಸ್ಥಾನ ತುಂಬಿದಳು: ಮಡದಿಗೆ ಜಗ್ಗೇಶ್ ವಿಶ್

    – 53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪರಿಮಳಾ ಜಗ್ಗೇಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ತಮ್ಮ ಮುದ್ದು ಮಡದಿ ಪರಿಮಳಾ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ವಿಭಿನ್ನವಾಗಿ ಮಾಡಿದ್ದಾರೆ.

    ಶ್ರೀರಾಮಪುರದ ಮುಖ್ಯ ರಸ್ತೆಯಲ್ಲಿ 1982 ಈಕೆ ನನ್ನ ಕಣ್ಣಿಗೆ ಬಿದ್ದಾಗ 14 ವರ್ಷ, ಇಂದಿಗೆ ಇವಳ ನನ್ನ ಭೇಟಿಗೆ 39ವರ್ಷವಾಗಿದೆ. ಅಂದು ಮಗುವಂತೆ ಸಿಕ್ಕಳು ಇಂದು ಅಮ್ಮನ ಸ್ಥಾನ ತುಂಬಿದಳು. ಇಂದು ಮಡದಿಗೆ 53ನೇ ಹುಟ್ಟುಹಬ್ಬವಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿ ಮಡದಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.


    ಜಗ್ಗೇಶ್ ಭಾವುಕ ಜೀವಿ. ತಮ್ಮ ಜೀವನದಲ್ಲಿ ನಡೆದಿರುವ ಘಟನೆಗಳ ಕುರಿತು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಇನ್ನು ತಮ್ಮ ಬಾಳಸಂಗಾತಿ ಪರಿಮಳಾ ಅವರ ಬಗ್ಗೆಯೂ ಸಾಕಷ್ಟು ಸಲ ಪೋಸ್ಟ್ ಮಾಡಿದ್ದಾರೆ. ಇಂದು ಪರಿಮಳಾ ಅವರ ಹುಟ್ಟುಹಬ್ಬ. ಅದಕ್ಕಾಗಿ ಮಡದಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದಾರೆ. ಜಗ್ಗೇಶ್ ಮತ್ತು ಪರಿಮಳಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಜಗ್ಗೇಶ್ ಸಿನಿಮಾಗಳಲ್ಲಿ ಹೆಸರು ಮಾಡಿದರೆ ಪತ್ನಿ ಪರಿಮಳ ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದು. ಆದರ್ಶ ದಂಪತಿಗಳ ಸಾಲಿಗೆ ಇವರನ್ನೂ ಸೇರಿಸಬಹುದಾಗಿದೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

  • ಜಗ್ಗಿ ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ: ಪರಿಮಳ ಜಗ್ಗೇಶ್

    ಜಗ್ಗಿ ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ: ಪರಿಮಳ ಜಗ್ಗೇಶ್

    ಬೆಂಗಳೂರು: 1984ರಲ್ಲಿ ಜಗ್ಗಿಯನ್ನು ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಅವರು ಪತ್ನಿ ಪರಿಮಳ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

    ಜಗ್ಗೇಶ್ ದಂಪತಿಗೆ ಇಂದು ಸುದಿನ, ಯಾಕೆಂದರೆ ಹಲವಾರು ಅಡೆತಡೆಗಳ ಮಧ್ಯೆ ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾಗಿ ಇಂದಿಗೆ 36 ವರ್ಷಗಳಾಗಿವೆ. ಮನೆಯವರ ವಿರೋಧದ ನಡುವೆಯೂ ಜಗ್ಗೇಶ್ ಅವರು ಪ್ರೀತಿಸಿ ಮದುವೆಯಾಗಿ ಇಂದಿಗೆ 36ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿಯೇ ಪರಿಮಳ ಅವರು, ಈ ರೀತಿ ಟ್ವೀಟ್ ಮಾಡಿದ್ದಾರೆ.

    ಜಗ್ಗೇಶ್ ಅವರ ಮದುವೆ ನಡೆದಿದ್ದೆ ಒಂದು ರೋಚಕ ಘಟನೆ. 1984 ಮಾರ್ಚ್ 22 ರಂದು ಜಗ್ಗೇಶ್ ದಂಪತಿಯ ಮದುವೆ ನಡೆದಿತ್ತು. ಹಾಗೇ ನೋಡುವುದಾದರೆ ಮದುವೆಯಾದ ಜಗ್ಗೇಶ್ ಅವರಿಗೆ 19 ವರ್ಷ ಆಗಿದ್ದರೆ ಪರಿಮಳ ಅವರಿಗೆ 14 ವರ್ಷ. ಜಗ್ಗೇಶ್ ಮೊದಲ ವರ್ಷದ ಡಿಗ್ರಿ ಓದುತ್ತಿದ್ದರೆ, ಪರಿಮಳ ಅವರು ಆಗ ತಾನೇ 9ನೇ ತರಗತಿಯಲ್ಲಿ ಓದುತ್ತಿದ್ದರು.

    ಅಂದು ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಮಟ್ಟಕ್ಕೆ ಪ್ರೀತಿ ಮಾಡುತ್ತಿದ್ದ ಈ ಜೋಡಿ ಮನೆಯವರ ವಿರೋಧದ ನಡುವೆ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗಿತ್ತು. ಮಗಳು ಚಿಕ್ಕವಳು ಎಂಬ ಕಾರಣಕ್ಕೆ ಈ ಮದುವೆಗೆ ಪರಿಮಳ ಅವರ ಕುಟುಂಬದವರು ಒಪ್ಪಿರಲಿಲ್ಲ. ಆದರೆ ಪರಿಮಳ ಅವರನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ ಜಗ್ಗೇಶ್ ಅವರು ಅಂದು ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ವಿರೋಧದ ನಡುವೆ ಮದುವೆಯಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡಿ ಪರಿಮಳ ಅವರನ್ನು ಪಡೆದುಕೊಂಡಿದ್ದರು.

    ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾದಾಗ ಇನ್ನೂ ಮೈನರ್ ಆಗಿದ್ದ ಕಾರಣ, ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಪರಿಮಳ ಕುಟುಂಬದವರು ಜಗ್ಗೇಶ್ ಅವರ ಮೇಲೆ ಅಪಹರಣ ಕೇಸ್ ಬುಕ್ ಮಾಡಿದ್ದರು. ಅಷ್ಟೋತ್ತಿಗೆ ಕೆಲ ಸಿನಿಮಾಗಳಲ್ಲಿ ಜಗ್ಗೇಶ್ ಅಭಿನಿಸಿದ್ದ ಕಾರಣ ಚಿತ್ರನಟನೋರ್ವ ಯುವತಿಯನ್ನು ಅಪಹರಿಸಿದ್ದಾನೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

    ಈ ಇಲ್ಲದರ ನಡುವೆ ಅವರ ಮದುವೆ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅಂದಿನ ನ್ಯಾಯಾಧೀಶರು ಜಗ್ಗೇಶ್ ಮತ್ತು ಪರಿಮಳ ಅವರು ಪ್ರೀತಿಗೆ ಬೆಲೆಕೊಟ್ಟು, ಮಾನವೀಯತೆಯ ಅಧಾರದ ಮೇಲೆ ಪ್ರೇಮಿಗಳ ಪರವಾಗಿ ತೀರ್ಪು ನೀಡಿದ್ದರು. ಅಂದು ಅಲ್ಲೇ ಜೀವನದಲ್ಲಿ ಇಬ್ಬರು ಒಟ್ಟಿಗೆ ಚೆನ್ನಾಗಿ ಬದುಕಬೇಕು ಎಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಮಾದರಿ ಜೋಡಿಯಾಗಿ ಬಾಳುತ್ತಿದ್ದಾರೆ.

  • ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್

    ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್

    ಬೆಂಗಳೂರು: ಇಂದು ನವರಸ ನಾಯಕ ಜಗ್ಗೇಶ್ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತ್ನಿ ಪರಿಮಳಾ ಅವರು ಮದುವೆಯಾದ ಮೊದಲ ವರ್ಷ ಹೇಗೆ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಎನ್ನುವ ಸವಿ ನೆನಪನ್ನು ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ.

    ಮದುವೆಯಾದ ಮೊದಲ ವರ್ಷ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಕೈಯಾರೆ ಮಾಡಿಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ. ಈ ಪ್ರೀತಿಯ ಓಲೆಗೆ 34 ವರ್ಷ ವಯಸ್ಸು, ನಾವು ಮದುವೆಯಾದ ವರ್ಷ ನನ್ನ ಪತ್ನಿ ಮಾತ್ರ ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಳು. ಆದ್ರೆ ಇಂದು ನನ್ನ ಪತ್ನಿ ಜೊತೆಗೆ ನನ್ನ ಅಭಿಮಾನಿಗಳು ಕೂಡ ನನ್ನ ಜನ್ಮದಿನಕ್ಕೆ ಶುಭಹಾರೈಸಿ ಆಶೀರ್ವದಿಸಿದ್ದಾರೆ ಎಂದು ಜಗ್ಗೇಶ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ, ನಾನು ಮದುವೆಯಾದ ಮೊದಲ ವರ್ಷ ಪರಿಮಳ ಕೈಯಾರೆ ನನ್ನ ಆನಡಗು ಗ್ರಾಮದಲ್ಲಿ ಮಾಡಿ ಹರಸಿದ ಪ್ರಥಮ ಶುಭಹಾರೈಕೆಯ ಪ್ರೀತಿಯ ಓಲೆ. ಈ ಪ್ರೀತಿ ಸಂಕೇತಕ್ಕೆ 34 ವರ್ಷ ವಯಸ್ಸು. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು. ಧನ್ಯೋಸ್ಮಿ ರಾಯರೆ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ ಎಂದು ಬರೆದು, ಪತ್ನಿ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ನೀಡಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿಕೊಂಡಿದ್ದಾರೆ.

    ಜಗ್ಗೇಶ್ ಅವರು ಪ್ರತಿ ವರ್ಷದಂತೆ ಈ ಬಾರಿ ಕೂಡ ಹುಟ್ಟುಹಬ್ಬದ ದಿನ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಜಗ್ಗೇಶ್ ಕೊರೊನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೊರೊನಾ ಇದು ಮಾನವ ನಿರ್ಮಿತ ವೈರಾಣು. ಅಮೆರಿಕ, ರಷ್ಯಾ ಹಾಗೂ ಚೀನಾ ನಂಬರ್ ಒನ್ ಸ್ಥಾನಕ್ಕಾಗಿ ನಡೆದಿರುವ ಬಯೋಲಾಜಿಕಲ್ ವಾರ್ ಇದು. ಪ್ರಕೃತಿ ಆಗಾಗ ಇಂತಹ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತಿದೆ. ಈ ಹಿಂದಿನ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೊನಾ ಬಂದಿದೆ. ಕೊರೊನಾ ಬಗ್ಗೆ ಭಯಬೇಡ ಜಾಗೃತಿಯಿಂದ ಇರಿ ಎಂದು ಹೇಳಿದರು.

    ಇದೇ ವೇಳೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶುಭಾಶಯ ಕೋರಿದರು. ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ, ರಾಯರು ಪುನೀತ್‍ಗೆ ಆಯು, ಆರೋಗ್ಯ, ಭಾಗ್ಯ ನೀಡಲಿ ಎಂದರು.

    ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಹೋರಾಟಗಾರ ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಜಗ್ಗೇಶ್ ಸಂತಾಪ ಸೂಚಿಸಿದರು. 102 ವರ್ಷ ಈ ನಾಡು ನುಡಿಗಾಗಿ ಹೋರಾಟ ಮಾಡಿದ ಜೀವ ಅದು. ಅವರು ವಿಶ್ವೇಶ್ವರಯ್ಯನಂತೆ ಈ ನಾಡಿಗೆ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

  • 35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಅಂಧ ಗಾನ ಕೋಗಿಲೆಗಳ ಚೆಂದದ ಮನೆ

    35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಅಂಧ ಗಾನ ಕೋಗಿಲೆಗಳ ಚೆಂದದ ಮನೆ

    ತುಮಕೂರು: ಸುಮಧುರ ಕಂಠದಿಂದಲೇ ಖ್ಯಾತಿಗಳಿಸಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಅಂಧ ಗಾನ ಕೋಗಿಲೆಗಳಿಗೆ ಚೆಂದದ ಮನೆಯ ಭಾಗ್ಯ ಒದಗಿಬಂದಿದೆ. ಕೇವಲ 35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ಅಂಧ ಸಹೋದರಿಯರಿಗಾಗಿ ಮನೆಯನ್ನು ನಿರ್ಮಿಸಿಕೊಡಲಾಗಿದೆ.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ಬಳಿಕ ಅಂಧ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ನವರಸನಾಯಕ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳ ತಂಡ, ಫ್ರೆಂಡ್ಸ್ ಗ್ರೂಪ್ ಸಂಘದಿಂದ ಮನೆ ನಿರ್ಮಾಣವಾಗಿದೆ. ಇಂದು ಆ ಪುಟ್ಟ ಮನೆಯ ಗೃಹ ಪ್ರವೇಶ ನೇರವೇರಿದ್ದು, ಜಗ್ಗೇಶ್ ದಂಪತಿ ಈ ಶುಭಕಾರ್ಯದಲ್ಲಿ ಭಾಗಿಯಾಗಿ ಮನೆಯ ಉದ್ಘಾಟನೆ ಮಾಡಿದರು.

    ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿ ಗ್ರಾಮದ ಗಾನ ಕೋಗಿಲೆಗಳಾದ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರಿಗೆ ಜಗ್ಗೇಶ್ ಅವರು ನಿರ್ಮಿಸಿಕೊಟ್ಟಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಇರಲು ಮನೆಯಿಲ್ಲದೆ ಈ ಅಂಧ ಸಹೋದರಿಯರ ಕುಟುಂಬಕ್ಕೆ ಜಗ್ಗೇಶ್‍ರವರ ಸೂಚನೆಯಂತೆ ಕೊರಟಗೆರೆಯ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಡಿ.ವಿ ಹಳ್ಳಿ ಗ್ರಾಮದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ.

    ಈ ಮನೆ ನಿರ್ಮಾಣದ ಜವಾಬ್ದಾರಿಯನ್ನ ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವಹಿಸಿಕೊಂಡಿತ್ತು. ಅಂದ ಗಾಯಕಿಯರ ಹಳೆಯ ಮನೆಯನ್ನು ಕೆಡವಿ 9 ಚದರ ವಿಸ್ತೀರ್ಣದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಲಾಗಿದೆ. ಮನೆಯಲ್ಲಿ ಅಡುಗೆ ಮನೆ, ಒಂದು ಕೊಠಡಿ, ಸುಸಜ್ಜಿತವಾದ ಶೌಚಾಲಯ ಒಳಗೊಂಡಿದೆ. ಕೇವಲ 35 ದಿನದಲ್ಲಿ ಮನೆ ನಿರ್ಮಾಣವಾಗಿದೆ.

    ತಮ್ಮ ಕಷ್ಟಕ್ಕೆ ಸ್ಪಂಧಿಸಿ ಮನೆ ನಿರ್ಮಿಸಿ ನೆರವಿಗೆ ಬಂದ ಜಗ್ಗೇಶ್ ದಂಪತಿಗೆ ವಂದಿಸಿದ ಮಂಜಮ್ಮ ಹಾಗೂ ರತ್ನಮ್ಮ, ಪರಿಮಳಾ ಅವರಿಗೆ ಉಡಿತುಂಬಿಸಿ ತಮ್ಮ ಧನ್ಯತಾ ಭಾವ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಅಂಧ ಗಾಯಕಿಯರಿಗೆ ಲೈಫ್ ಟೈಂ ಉಚಿತ ರೈಲು ಪ್ರಯಾಣದ ಪಾಸ್ ವಿತರಿಸಲಾಯಿತು. ಇಂಥಹ ಕಾರ್ಯಕ್ರಮದಲ್ಲಿ ತಮ್ಮ ಹೆತ್ತ ತಾಯಿಯನ್ನು ನೆನೆದು ಪರಿಮಳ ಅವರಿಗೆ ಮಡಿಲು ತುಂಬಿ ಸಹೋದರಿಯರು ಗೌರವ ಸಲ್ಲಿಸಿದರು.

  • ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಪರಿಮಳಾ ಜಗ್ಗೇಶ್ ಸೇರ್ಪಡೆ

    ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಪರಿಮಳಾ ಜಗ್ಗೇಶ್ ಸೇರ್ಪಡೆ

    ಬೆಂಗಳೂರು: ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಚಂದನವನದ ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಾಳ ಜಗ್ಗೇಶ್ ಸೇರ್ಪಡೆಯಾಗಿದ್ದಾರೆ.

    Indias top 50 emerging icon summit 2019ನಲ್ಲಿ ಪರಿಮಳಾ ಜಗ್ಗೇಶ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಮಡದಿ ಪರಿಮಳ ಭಾರತದ ಶ್ರೇಷ್ಠ 50 ಸಾಧಕರಲ್ಲಿ ಒಬ್ಬಳಾಗಿ ಸಕ್ಕರೆ ಕಾಯಿಲೆ ನಿಯಂತ್ರಣದ ಆಧುನಿಕ ಅವಿಷ್ಕಾರಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದು ಡಾ. ಪರಿಮಳ ಆಗಿದ್ದಾರೆ. ಗಂಡನಾಗಿ ಅವಳೊಟ್ಟಿಗೆ ಮಕ್ಕಳು, ಸೊಸೆ ಮತ್ತು ಮೊಮ್ಮಗ ಸಂಭ್ರಮಿಸಿದ ಕ್ಷಣಗಳು. ಎಲ್ಲದಕ್ಕೂ ಕಾರಣರಾದ ರಾಯರಿಗೆ ಧನ್ಯವಾದಗಳು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

    ಜಗ್ಗೇಶ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪರಿಮಳಾ ಅವರು, ವಯಸ್ಸು ಅನ್ನೋದು ಕೇವಲ ನಂಬರ್. ಮೊಮ್ಮಗನಿದ್ದರೂ ನಾನು ಓದುವುದನ್ನು ನಿಲ್ಲಿಸಿಲ್ಲ. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ಮತ್ತು ಬೆಂಬಲದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಛಲ ಬಂದಿದೆ. ಈ ಸಾಧನೆಯ ಎಲ್ಲ ಶ್ರೇಯಸ್ಸು ಜಗ್ಗೇಶ್ ಗೌಡರಿಗೆ ಸಲ್ಲುತ್ತದೆ ಎಂದು ಬರೆದಿದ್ದಾರೆ.

    ಕುಟುಂಬಸ್ಥರ ಸಹಕಾರ, ಹಿತೈಷಿಗಳು, ಒಳ್ಳೆಯ ಸ್ನೇಹಿತ ವಲಯ ನಿಮ್ಮ ಜೊತೆಗಿದ್ದಾಗ ಈ ರೀತಿಯ ಸಾಧನೆಗಳು ಹೊರಬರುತ್ತವೆ. ಶುಭಕೋರಿದ ಎಲ್ಲರಿಗೂ ಧನ್ಯವಾದಗಳು ಬಂಡ ನನ್ನ ಗಂಡ ಜಗ್ಗೇಶ್ ಅವ್ರಿಗೂ ಧನ್ಯವಾದ. ನನ್ನ ಶಿಕ್ಷಣಕ್ಕೆ ಅಡ್ಡಿ ಮಾಡಲ್ಲ ಅಂತ ನನ್ನ ಹುಡುಗ 36 ವರ್ಷಗಳ ಹಿಂದೆ ಮಾತು ಕೊಟ್ಟಿದ್ದ. ಜಗ್ಗೇಶ್ ಬೆಂಬಲದಿಂದ ಓದಲು ಪ್ರಾರಂಭಿಸಿದ ನಾನು ಡಾಕ್ಟರೇಟ್ ಪದವಿ ಪಡೆದಿದ್ದೇನೆ. ನನ್ನ ಸಾಧನೆಗೆ ಪತಿ ಕಾರಣ ಎಂದು ಮತ್ತೊಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ: ಜಗ್ಗೇಶ್

    ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ: ಜಗ್ಗೇಶ್

    ಬೆಂಗಳೂರು: ಇಂದು ಪುತ್ರ ಗುರುರಾಜ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಂದೆ ಜಗ್ಗೇಶ್ ಮತ್ತು ತಾಯಿ ಪರಿಮಳ ಅವರು ಶುಭಾಶಯವನ್ನು ತಿಳಿಸಿದ್ದಾರೆ.

    ಪರಿಮಳ ಜಗ್ಗೇಶ್ ಮತ್ತು ಜಗ್ಗೇಶ್ ಇಬ್ಬರು ಟ್ವೀಟ್ ಮಾಡುವ ಮೂಲಕ ತಮ್ಮ ಮಗನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಮೊದಲಿಗೆ ಪರಿಮಳ ಅವರು, “ಇಂದು ನನ್ನ ಮಗ ಗುರು ಹುಟ್ಟಹಬ್ಬವಾಗಿದೆ. ಕಾಲ ಎಷ್ಟು ಬೇಗ ಉರುಳುತ್ತಿದೆ ಎಂಬುದೆ ತಿಳಿಯುವುದಿಲ್ಲ. ಅಂದು ನಾನು ನನ್ನ ಮಗನಿಗೆ ಮಾತನಾಡುವುದು ಮತ್ತು ನಡೆಯುವುದನ್ನು ಹೇಳಿಕೊಟ್ಟಿದ್ದೆ. ಆದರೆ ಇಂದು ಅವನು ನನಗೆ ಜೀವನದ ಮಾರ್ಗದರ್ಶನ ನೀಡುತ್ತಾನೆ. ನಾನು ಇಂತಹ ಮಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಪತ್ನಿಯ ಟ್ವೀಟ್‍ ಗೆ ನಟ ಜಗ್ಗೇಶ್, “ಮಗ ಗುರುರಾಜ ಅಮ್ಮನ ಮೇಷ್ಟ್ರು ಮತ್ತು ನೆಚ್ಚಿನ ಪುತ್ರನಾಗಿದ್ದಾನೆ. ಇಂದು ಅವನು ಹುಟ್ಟಿದ ದಿನವಾಗಿದೆ. ಅಂದು 1987ರಲ್ಲಿ ರಸ್ತೆ ಬದಿ ನಿಂತು ಅವನ ಹುಟ್ಟು ಸಂಭ್ರಮಿಸಿದೆ. ಆಗ ಅಮ್ಮ ಮತ್ತು ಮಗನನ್ನ ಸಾಕಿ ನಾನು ಹೇಗೆ ದಡಸೇರೋದು ಎಂದು ಕೊರಗುತಿದ್ದೆ. ಆದರೆ ರಾಯರ ಪ್ರಸಾದ ನನಗೆ ಅವನು, ಆತ ಬೆಳೆದಂತೆ ನಾನು ಬೆಳೆದೆ. ಒಳ್ಳೆಸಂಸ್ಕಾರ ಕಲಿಸಿದ ತಂದೆಯಾಗಿ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ದೇವರು ಒಳ್ಳೆಯದು ಮಾಡಲಿ” ಎಂದು ರೀಟ್ವೀಟ್ ಮಾಡಿದ್ದಾರೆ.

    ಪರಿಮಳ ಅವರು ಮೊತ್ತೊಂದು ಟ್ವೀಟ್ ಮಾಡಿದ್ದು, “ಗುರು ಹುಟ್ಟಿದಾಗ ನಮಗೆ ಕುಟುಂಬದ ಯಾರೋಬ್ಬರು ಸಹಾಯ ಮಾಡಲಿಲ್ಲ. ಜಗ್ಗೇಶ್ ಒಬ್ಬರೆ ಮಗು ಮತ್ತು ನನ್ನ ಬಾಣಂತನವನ್ನು ಕಾಳಜಿಯಿಂದ ಮಾಡಿದ್ದರು. ಅಂದಿನ ಕಾಲದಲ್ಲಿ ಯಾವುದೇ ಡೈಪರ್ ಕೂಡ ಇರಲಿಲ್ಲ. ಮಣ್ಣಾದ ಬಟ್ಟೆಯನ್ನು ಅವರೇ ತೊಳೆಯುತ್ತಿದ್ದರು. ಜೊತೆಗೆ ಮೂರು ವರ್ಷದ ಮಗುವಿಗೆ ಸ್ನಾನ ಕೂಡ ಮಾಡಿಸಿದ್ದಾರೆ. ನಿಜಕ್ಕೂ ಹೆಮ್ಮೆಯಾಗುತ್ತದೆ” ಎಂದು ಬರೆದು ಪತಿಗೆ ಟ್ಯಾಗ್ ಮಾಡಿದ್ದಾರೆ.

    ಇದಕ್ಕೆ ಜಗ್ಗೇಶ್, “ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ. ಹಾರಾಡಿ ಹುಡುಕಿ ತಡಕಿ ಕಾಳುತಂದು, ಕಾದ ಮರಿಹಕ್ಕಿಗೆ ತುತ್ತುಣ್ಣಿಸುವ ಪಕ್ಷಿಗೆ ಆ ಕಾಯಕ ಕಲಿಸಿದವರು ಯಾರು? ತಂದೆಯ ಕಾರ್ಯ ತಿನ್ನಿಸುವುದು ಒಂದೇ ಅಲ್ಲಾ, ತಾನು ಮುಂದೆ ತನ್ನವರಿಗೆ ತಿನ್ನಿಸಿ, ಕಲಿಸಿ ತನ್ನ ಕುಲದ ಗೌರವ ನಾಲ್ಮಡಿಗೊಳಿಸುವ ಸಾಧಕನ ಮಾಡುವುದೆ ಶ್ರೇಷ್ಟ ತಂದೆ ಪರಂಪರೆಯಾಗಿದೆ” ಎಂದು ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೂರು ಕಾಲ ಕಲಾಸೇವೆಯ ಯೋಗ ಲಭಿಸಲಿ- ಯಶ್‍ಗೆ ಜಗ್ಗೇಶ್ ವಿಶ್

    ನೂರು ಕಾಲ ಕಲಾಸೇವೆಯ ಯೋಗ ಲಭಿಸಲಿ- ಯಶ್‍ಗೆ ಜಗ್ಗೇಶ್ ವಿಶ್

    ಬೆಂಗಳೂರು: ರಾಜ್ಯ, ದೇಶ ಹಾಗೂ ಹೊರದೇಶದಲ್ಲಿಯೂ ಹವಾ ಕ್ರಿಯೇಟ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ನಟರು ಕೂಡ ವಿಶ್ ಮಾಡುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಸಹೋದರ ಯಶ್ ಹಾಗೂ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಜಗ್ಗೇಶ್, ನೂರು ಕಾಲ ನಿಮಗೆ ಕಲಾಸೇವೆ ಮಾಡುವ ಯೋಗ ಲಭಿಸಲಿ. ಒಳ್ಳೆಯದಾಗಲಿ ಅಂತ ಹೇಳಿದ್ದಾರೆ.

    ಟ್ವೀಟ್ ನಲ್ಲೇನಿದೆ?:
    ನಲ್ಮೆಯ ಸಹೋದರ #ಯಶ್ ನಿಮ್ಮ ಚಿತ್ರ #Kgf ಕನ್ನಡದ ಕಂಪನ್ನು ವಿಶ್ವಮಟ್ಟದ ಕನ್ನಡಿಗರ ಮನಗಳನ್ನು ತಲುಪಲಿ. ಕನ್ನಡ ಚಿತ್ರರಂಗದ ನಗಾರಿ ಸದ್ದು ರಾಷ್ಟ್ರಕ್ಕೆ ಕೇಳಿಸಲಿ. ರಾಯರು ನಿಮ್ಮ ಮನೋವಾಂಛ ಫಲ ಸಿದ್ಧಿಸುವಂತೆ ಹರಸಲಿ.. ನೂರ್ಕಾಲ ಕಲಾಸೇವೆ ಮಾಡುವ ಯೋಗ ನಿಮಗೆ ಲಭಿಸಲಿ.. Best of luck fr #Kgf.. ಅಂತ ಬರೆದುಕೊಂಡಿದ್ದಾರೆ. ಪತಿಯ ಟ್ವೀಟ್ ಗೆ ಪತ್ನಿ ಪರಿಮಳಾ ಜಗ್ಗೇಶ್ ಕೂಡ ರೀಟ್ವೀಟ್ ಮಾಡಿದ್ದು, ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಎಲ್ಲಾ ರೆಕಾರ್ಡ್ ಗಳನ್ನು ಮುರಿದು ಮುನ್ನುಗ್ಗುವಂತೆ ಶುಭ ಹಾರೈಸಿದ್ದಾರೆ. ಅಲ್ಲದೇ ತಮ್ಮ ಟ್ವೀಟ್ ಅನ್ನು ಯಶ್, ರಾಧಿಕಾ ಪಂಡಿತ್‍ಗೆ ಟ್ಯಾಗ್ ಮಾಡಿದ್ದಾರೆ.

    #Kgfನಿರ್ದೇಶಕ #neel #Hombale ಸಂಸ್ಥೆಯ ಮಾಲೀಕರಾದ #Vijay #Kartik ಹಾಗು ಚಿತ್ರತಂಡಕ್ಕೆ ಇಂಥ ಚಿತ್ರ ಕನ್ನಡಕ್ಕೆ ನೀಡಿದ್ದಕ್ಕೆ ಧನ್ಯವಾದಗಳು.. ನಿಮ್ಮ ಕಾರ್ಯ ಜಯಪ್ರದವಾಗಿ ನಿಮ್ಮ ಆಸೆಯ ಕಿರೀಟಕ್ಕೆ ನವಿಲುಗರಿಯಾಗಲಿ.. Best of luck..God bless..

    ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಕೂಡ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

    ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವದಾದ್ಯಂತ ಹೆಸರು ಮಾಡಬೇಕು ಎಂಬ ಕಾರಣದಿಂದ ಸಮಸ್ತ ಕನ್ನಡ ಚಿತ್ರ ರಸಿಕರೂ ಒಗ್ಗಟ್ಟಾಗಿ ಕೆಜಿಎಫ್ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದೇ ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಲೈವ್ ವಿಡಿಯೋ ಮಾಡಿ ಯಶ್ ಹಾಗೂ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರ ಗುರು ಫೋಟೋ ಹಾಕಿ ಅಂಬಿಯನ್ನ ನೆನೆದು ಭಾವುಕರಾದ ಪರಿಮಳಾ ಜಗ್ಗೇಶ್

    ಪುತ್ರ ಗುರು ಫೋಟೋ ಹಾಕಿ ಅಂಬಿಯನ್ನ ನೆನೆದು ಭಾವುಕರಾದ ಪರಿಮಳಾ ಜಗ್ಗೇಶ್

    ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ದಿವಂಗತ ಅಂಬರೀಶ್ ಅವರ ಜೊತೆ ತಮ್ಮ ಮಗ ನಟಿಸಿದ್ದ ಚಿತ್ರವೊಂದರ ನೆನಪನ್ನು ನೆನೆದು ಟ್ವೀಟ್ ಮಾಡಿದ್ದಾರೆ.

    ಪರಿಮಳಾ ಜಗ್ಗೇಶ್ ಅವರು, `1989ರ ಡಿಸೆಂಬರ್ 5 ರಂದು ಅಂಬರೀಶ್ ಅವರ ಜೊತೆ ನನ್ನ ಹಿರಿಯ ಮಗ ಗುರು ನಟಿಸಿದ್ದರು. ‘ಮಲ್ಲಿಗೆ ಹೂವೆ’ ಚಿತ್ರದಲ್ಲಿ ಅಂಬರೀಶ್ ಅವರ ಮಗನ ಪಾತ್ರದಲ್ಲಿ ಗುರು ನಟಿಸಿದ್ದ. ಆ ಚಿತ್ರದ ಎರಡು ದಿನಗಳ ಶೂಟಿಂಗ್ ನೆನಪುಗಳನ್ನು ಎಂದಿಗೂ ಮರೆಯಾಲಾಗುವುದಿಲ್ಲ’ ಎಂದು ತಮ್ಮ ಮಗನ ಸಣ್ಣ ವಯಸ್ಸಿನ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿ, `ಅಂಬಿ ಸಾರ್ ಜೊತೆ ನಟಿಸಿದಾಗ 2 ವರ್ಷದ ಗುರುರಾಜ್ ಜಗ್ಗೇಶ್ ಹೀಗಿದ್ದ. ಇದು ಅಂಬಿ ಸರ್ ತೆಗೆದ ಫೋಟೋ’ ಎಂದು ರೀ- ಟ್ವೀಟ್ ಮಾಡಿಕೊಂಡಿದ್ದಾರೆ.

    ಸೋಮವಾರ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಜಗ್ಗೇಶ್, ಅಂಬರೀಶ್ ಅವರ ಜೊತೆ ಮೊದಲು ನಾನು ನಟಿಸಿಲ್ಲ. ನನ್ನ ದೊಡ್ಡ ಮಗ ಗುರುರಾಜ್ ನಟಿಸಿದ್ದನು. ಮಲ್ಲಿಗೆ ಹೂವೆ ಎಂಬ ಚಿತ್ರಕ್ಕೆ ಒಂದು ಮಗು ಬೇಕು ಅಂತ ಕೇಳಿದಾಗ ನಿರ್ದೇಶಕರು ಜಗ್ಗೇಶ್ ಮಗನೇ ಇದ್ದಾನೆ ಅಂತ ಹೇಳಿ ಕರೆದುಕೊಂಡು ಬರಲು ಹೇಳಿದ್ದರು. ಹೀಗಾಗಿ 2 ವರ್ಷದ ಗುರುರಾಜ್ ಅವರ ಜೊತೆ ಅಭಿನಯಿಸಿದ್ದನು. ಆ ಸಂದರ್ಭದಲ್ಲೇ ನಮ್ಮಿಬ್ಬರ ಗೆಳೆತನ ಆರಂಭವಾಗಿತ್ತು ಎಂದು ತಮ್ಮ ಸ್ನೇಹ ಆರಂಭವಾದ ದಿನಗಳನ್ನು ಮೆಲಕು ಹಾಕಿಕೊಂಡಿದ್ದರು.

    ನನ್ನಂತೆ ಇನ್ನೊಬ್ಬ ಕಲಾವಿದನೂ ಚೆನ್ನಾಗಿರಬೇಕು ಅನ್ನೋದು ದೊಡ್ಡ ಗುಣ ಅವರಲ್ಲಿತ್ತು. ಇತ್ತೀಚೆಗೆ ಕಲಾವಿದರ ಸಂಘದಲ್ಲೇ ಅವರನ್ನು ಭೇಟಿ ಮಾಡಿದ್ದೆ. ಸುಮಾರು 4 ತಾಸು ಮಾತುಕತೆ ನಡೆಸಿದ್ದೆವು. ತುಂಬಾ ಜನರಿಗೆ ಅನ್ನ ಹಾಕಿ, ಆನಂದಪಡುವ ಜೀವ ಅದು. ನಾನು ಹೋಗ್ತೀನಿ ಅಂದ್ರೂ ಬಿಡದೆ ಕೂರಿಸಿ ಊಟ ಹಾಕಿ ತಿನ್ನಿಸಿ, ಭಾವನಾತ್ಮಕವಾಗಿ ಮಾತನಾಡಿಸುವ ಒಳ್ಳೆಯ ಗುಣ ಅವರಲ್ಲಿತ್ತು ಅಂತಾ ಜಗ್ಗೇಶ್ ಹೇಳಿದ್ದರು.

    https://www.youtube.com/watch?v=oQw70XJk8IQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv