Tag: parents

  • ಹೆತ್ತವರನ್ನು ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಸೈಕೋಪಾತ್ ಅರೆಸ್ಟ್!

    ಹೆತ್ತವರನ್ನು ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಸೈಕೋಪಾತ್ ಅರೆಸ್ಟ್!

    ಬೆಂಗಳೂರು: ಹೆತ್ತವರನ್ನ ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಗರದ ನಟೋರಿಯಸ್ ಸೈಕೋಪಾತ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

    ಆದಿತ್ಯ ಶರತ್(25) ಬಂಧಿತ ಆರೋಪಿ. ಈತ ಬೈಕ್ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರಿಗೆ ಸೆರೆಸಿಕ್ಕಿದ್ದು, ಬಸವೇಶ್ವರನಗರ ಪೊಲೀಸರು ಶರತ್‍ನನ್ನು ಬಂಧಿಸಿದ್ದಾರೆ.

    ಯಾರು ಈ ಶರತ್?
    ಕಾಮಾಕ್ಷಿಪಾಳ್ಯ ಬಳಿಯ ವೃಷಭಾವತಿನಗರ ನಿವಾಸಿ ಆರೋಪಿ ಶರತ್ ಡಿಪ್ಲೋಮಾ ಪದವಿ ಓದಿದ್ದು ಹಲವು ಹುಡುಗಿಯರನ್ನ ತನ್ನ ಗರ್ಲ್ ಫ್ರೆಂಡ್ಸ್ ಅಂತ ಮನೆಯಲ್ಲಿ ಹೇಳುತ್ತಿದ್ದನು. ಅಷ್ಟೇ ಅಲ್ಲದೇ ಶರತ್ ಆಗಾಗ ಗೆಳತಿಯರನ್ನ ಬದಲಿಸುತ್ತಿದ್ದನು. ಮಗನ ವರ್ತನೆಗೆ ಬೇಸತ್ತು ಪೋಷಕರು ಬುದ್ಧಿವಾದ ಹೇಳಿ ಮದುವೆಯಾಗು ಎಂದು ಒತ್ತಡ ಹಾಕಲು ಶುರು ಮಾಡಿದ್ದರು.

    ಪೋಷಕರ ಒತ್ತಡ ತಾಳಲಾರದೇ ಅವರನ್ನೇ ಕೊಲ್ಲಲು ಶರತ್ ನಿರ್ಧರಿಸಿದ್ದ. ಬಳಿಕ ಅವರಿಗೆ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ್ದನು. ಆದರೆ ಈ ಬಗ್ಗೆ ಪೋಷಕರು ತಿಳಿದುಕೊಂಡು ಆತನನ್ನು ಮನೆಯಿಂದಲೇ ಹೊರಹಾಕಿದ್ದಾರೆ. ಅಲ್ಲದೇ ಮಗನ ವಿರುದ್ಧವೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

    ಖಿನ್ನತೆಗೆ ಜಾರಿದ: ಮನೆಯಿಂದ ಹೊರಬಿದ್ದ ನಂತರ ಶರತ್ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದನು. ಪೋಷಕರು ಹೊರಹಾಕಿದ ಕೋಪಕ್ಕೆ ಖಿನ್ನತೆಗೆ ಒಳಗಾಗಿದ್ದ ಆತ ಅವರನ್ನು ಕೊಲ್ಲಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದ. ಅಷ್ಟೇ ಅಲ್ಲದೇ ಕೊಲೆ ಮಾಡುವುವುದು ಹೇಗೆ ಎಂದು ಗೂಗಲ್ ನಲ್ಲಿ ಸರ್ಚ್ ಕೂಡ ಮಾಡಿದ್ದನು. ಸರ್ಚ್ ಮಾಡಿದ ಬಳಿಕ ಮನೆಯ ವಾಟರ್ ಟ್ಯಾಂಕ್ ಗೆ ವಿಷ ಬೆರೆಸಿದ್ದ. ಈ ವಿಷಯ ಕೂಡ ಪೋಷಕರಿಗೆ ತಿಳಿಯುತ್ತದೆ.

    ಪಿಸ್ತೂಲ್ ಖರೀದಿ: ವಿಷದ ಮೂಲಕ ಕೊಲೆ ಮಾಡುವುದು ಸಾಧ್ಯವಾಗದೇ ಇದ್ದಾಗ ಕೊನೆಗೆ ಗುಂಡಿಟ್ಟು ಕೊಲ್ಲುವುದೇ ಸೂಕ್ತ ಎಂದು ನಿರ್ಧರಿಸಿ ಬಿಹಾರ ಮೂಲದ ತನ್ನ ಡಿಪ್ಲೋಮಾ ಸ್ನೇಹಿತನ ಮೂಲಕ ಪಿಸ್ತೂಲ್ ಖರೀದಿಸುತ್ತಾನೆ. ಆದರೆ ಬೈಕ್ ಕಳ್ಳತನ ಮಾಡುವಾಗ ಆರೋಪಿ ಶರತ್ ಸಿಕ್ಕಿಬಿದ್ದಿದ್ದಾನೆ. ಬಂಧನದ ವೇಳೆ ಒಂದು ಪಿಸ್ತೂಲ್ 8 ಜೀವಂತ ಗುಂಡುಗಳು ಪತ್ತೆಯಾಗಿತ್ತು. ಪಿಸ್ತೂಲ್ ಖರೀದಿಸಿದ್ದು ಯಾಕೆ ಎಂದು ವಿಚಾರಣೆ ವೇಳೆ ಪೊಲೀಸರು ಪ್ರಶ್ನಿಸಿದಾಗ ತಂದೆ-ತಾಯಿಯನ್ನ ಕೊಲ್ಲಲ್ಲಿಕ್ಕಾಗಿ ಖರೀದಿಸಿದ್ದಾಗಿ ಹೇಳಿಕೆ ನೀಡಿ ತನ್ನ ಎಲ್ಲ ವೃತ್ತಾಂತವನ್ನು ತಿಳಿಸಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಪೋಲೀಸರು ಸೈಕೋಪಾಥ್ ಶರತ್ ವಿರುದ್ಧ ಕೊಲೆಯತ್ನ, ಕಳ್ಳತನ, ಮೋಟಾರ್ ವಾಹನ ಕಾಯ್ದೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣದ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಕೊಪ್ಪಳ: ಶಾಲೆಯಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಯನ್ನು ಪೋಷಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.

    ತಳಕಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕರ ನಡುವೆ ಗುಂಪುಗಾರಿಕೆಗೆ ರೋಸಿ ಹೋದ ಪೋಷಕರು ಇಂದು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.

    ಶಾಲೆಯ ಇಂಗ್ಲೀಷ್ ಶಿಕ್ಷಕ ಚಕ್ರಪಾಣಿಯವರಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಶಾಲೆಯ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾನಸಿಕವಾಗಿ ನೊಂದ ಶಿಕ್ಷಕ ಚಕ್ರಪಾಣಿ ನೆರವಿಗೆ ಪೋಷಕರು ನಿಂತಿದ್ದು, ಶಾಲೆಯಲ್ಲಿ ಗುಂಪುಗಾರಿಕೆಗೆ ಬೆಂಬಲಿಸುತ್ತಿರುವ ಶಾಲಾ ಪ್ರಿನ್ಸಿಪಾಲರನ್ನು ತೆಗೆದು ಹಾಕುವಂತೆ ಪೋಷಕರು ಆಗ್ರಹಿಸಿದರು. ಗುಂಪುಗಾರಿಕೆ ನಡೆಸುತ್ತಿದ್ದ ಶಾಲಾ ಸಿಬ್ಬಂದಿಗಳ ವಿರುದ್ಧವು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಸಿಬ್ಬಂದಿಗಳ ವರ್ತನೆಯಿಂದ ರೋಸಿಹೋದ ಶಿಕ್ಷಕ ಚಕ್ರಪಾಣಿ ಶಾಲೆಯಲ್ಲೇ ಕಣ್ಣೀರು ಹಾಕಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದರು.

  • ಪ್ರೀತಿಸಿ ಮದ್ವೆಯಾಗಿ ಪತಿಯ ಮನೆಗೆ ಹೋದ್ರೂ ಭದ್ರತೆಗಾಗಿ ಪೊಲೀಸ್ ಮೆಟ್ಟಿಲೇರಿದ ನವಜೋಡಿ

    ಪ್ರೀತಿಸಿ ಮದ್ವೆಯಾಗಿ ಪತಿಯ ಮನೆಗೆ ಹೋದ್ರೂ ಭದ್ರತೆಗಾಗಿ ಪೊಲೀಸ್ ಮೆಟ್ಟಿಲೇರಿದ ನವಜೋಡಿ

    ಬೆಳಗಾವಿ: ಕುಟುಂಬಸ್ಥರ ವಿರೋಧದ ನಡುವೆಯೂ ಬೆಂಗಳೂರಿಗೆ ಹೋಗಿ ಮದುವೆಯಾದ ನವ ಜೋಡಿ ಇದೀಗ ಭದ್ರತೆ ನೀಡುವಂತೆ ಕೋರಿ ಬೆಳಗಾವಿ ಎಸ್‍ಪಿ ಕಚೇರಿ ಮೆಟ್ಟಿಲು ಏರಿದ್ದಾರೆ.

    ಅಥಣಿ ತಾಲೂಕಿನ ಕೊಟ್ಟಳಗಿ ಗ್ರಾಮದ ಸಂದೀಪ್ ಕರೆಪ್ಪಗೋಳ ಹಾಗೂ ಗೌರಿ ಪಾಟೀಲ ಮದುವೆಯಾದ ನವಜೋಡಿ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿ ಹಾಗೂ ಮದುವೆಯಾಗುವ ವಿಷಯವನ್ನು ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಹೀಗಾಗಿ ಇದೇ 23 ರಂದು ಈ ಜೋಡಿ ಬೆಂಗಳೂರಿಗೆ ಹೋಗಿ ಮದುವೆಯಾಗಿದ್ದಾರೆ. ಆದರೆ ಹುಡುಗಿಯ ತಂದೆ ಅಣ್ಣಾಸಾಬ್ ಪಾಟೀಲ್ ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಂಗಳೂರಲ್ಲಿ ಮದುವೆ ಮಾಡಿಕೊಂಡಿದ್ದ ಸಂದೀಪ್-ಗೌರಿ ಮಂಗಳವಾರ ಬೆಳಗ್ಗೆ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಮಗ ಮನೆಗೆ ಬರುತ್ತಿದ್ದಂತೆ ಪಾಲಕರು ಇಬ್ಬರನ್ನೂ ಮನೆ ತುಂಬಿಸಿಕೊಂಡಿದ್ದಾರೆ. ಇತ್ತ ಹುಡುಗಿಯ ಪಾಲಕರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂದೀಪ್ ತನ್ನ ಪತ್ನಿ, ತಂದೆ-ತಾಯಿ ಹಾಗೂ ಸಹೋದರನ ಸಮೇತ ಬೆಳಗಾವಿ ಎಸ್‍ಪಿ ಕಚೇರಿಗೆ ಬಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಸಹಾಯ ಕೋರಿದರು.

    ಪತ್ನಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ನನ್ನ ಸಹೋದರ ಪ್ರದೀಪ್ ನನ್ನು ಠಾಣೆಗೆ ಕರೆಸಿ ಥಳಿಸಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ.

  • ಅಣ್ಣನೊಂದಿಗೆ ಲವ್ ಮಾಡಿ ಓಡಿ ಹೋದ್ಳು-ಲವರ್ ಪರ ಸಾಕ್ಷಿ ಹೇಳಲು ಬಂದಾಗ ಚಿಕ್ಕಪ್ಪನಿಂದ ಹಲ್ಲೆ

    ಅಣ್ಣನೊಂದಿಗೆ ಲವ್ ಮಾಡಿ ಓಡಿ ಹೋದ್ಳು-ಲವರ್ ಪರ ಸಾಕ್ಷಿ ಹೇಳಲು ಬಂದಾಗ ಚಿಕ್ಕಪ್ಪನಿಂದ ಹಲ್ಲೆ

    ಬಾಗಲಕೋಟೆ: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಕೋರ್ಟ್ ನಲ್ಲಿ ಸಾಕ್ಷಿ ಹೇಳಲು ಬಂದ ಯುವತಿಗೆ ಮನೆಯವರೇ ಹಲ್ಲೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಯುವತಿ ಆರೋಪಿ ಯಂಕಪ್ಪ ಪರ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದಿದ್ದಳು. ಈ ವೇಳೆ ನ್ಯಾಯಾಲಯದ ಆವರಣದ ಮುಂದೆ ಯುವತಿಯ ಚಿಕ್ಕಪ್ಪ ಹಲ್ಲೆ ಮಾಡಿದ್ದಾರೆ.

    ಘಟನೆಯ ವಿವರ:
    ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ನಿವಾಸಿಯಾದ ಆರೋಪಿ ಯಂಕಪ್ಪ ಸಂಬಂಧದಲ್ಲಿ ಯುವತಿಗೆ ಸಹೋದರನಾಗುತ್ತಾನೆ. ಆದರೆ ಈ ಸಂಬಂಧವನ್ನೂ ಲೆಕ್ಕಿಸದೇ ಯಂಕಪ್ಪ ಹಾಗೂ ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

    ಗ್ರಾಮದ ಹಿರಿಯರು ಹಾಗೂ ಯುವತಿ ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಯಂಕಪ್ಪ ಹುಡುಗಿಯ ಮನೆಯವರಿಗೆ ಗೊತ್ತಾಗದಂತೆ ಆಕೆಯನ್ನು ಕರೆದುಕೊಂಡು ಹೋಗಿದ್ದನು. ಈ ವಿಷಯ ತಿಳಿದ ಮನೆಯವರು ಯುವತಿ ಅಪ್ರಾಪ್ತ ವಯಸ್ಕಳಾಗಿದ್ದ ಕಾರಣ ಇಬ್ಬರನ್ನು ಪತ್ತೆ ಹಚ್ಚಿ ಯಂಕಪ್ಪನ ಮೇಲೆ ಬನಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯಂಕಪ್ಪನ ಮೇಲೆ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.

    ಸದ್ಯ ಯಂಕಪ್ಪ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದನು. ಆದ್ದರಿಂದ ಕೋರ್ಟ್ ನಲ್ಲಿದ್ದ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ಯುವತಿಯನ್ನು ಬಾಗಲಕೋಟೆ ಕೋರ್ಟ್ ಗೆ ಕರೆದೊಯ್ದಿದ್ದನು. ಇದೇ ವೇಳೆ ವಿಚಾರಣೆ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ನ್ಯಾಯಾಲಯಕ್ಕೆ ಬಂದಿದ್ದರು.

    ಈ ವೇಳೆ ಯಂಕಪ್ಪ ಪರ ಸಾಕ್ಷಿ ಹೇಳಲು ಮುಂದಾದ ಯುವತಿ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಸ್ಥಳದಲ್ಲಿದ್ದ ಪೊಲೀಸರು ಜಗಳ ಬಿಡಿಸಿ ಯುವತಿಯನ್ನು ರಕ್ಷಿಸಿ ಬೇರೆ ಕಡೆ ಕಳುಹಿಸಿದ್ದಾರೆ.

  • ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ವಿಜಯಪುರ: ನನ್ನ ಮಗ ಯಾವುದೇ ತಪ್ಪು ಮಾಡಲಿಲ್ಲ. ವಿನಾಕಾರಣ ನನ್ನ ಮಗನನ್ನು ಬಂಧಿಸಿದ್ದಾರೆ. ಶ್ರೀರಾಮ ಸೇನೆ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದಕ್ಕೆ ಈ ರೀತಿ ಮಾಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಅರೋಪಿ ಪರಶುರಾಮ ವಾಗ್ಮೋರೆ ಪೋಷಕರು ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಯೊಂದಿಗೆ ಮಾತನಾಡಿದ ಅವರು, ನಾವು ಕೂಲಿ ನಾಲಿ ಮಾಡಿ ಬದುಕು ಜನ. ನನ್ನ ಮಗ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಸ್ ಐಟಿ ತಂಡ ಹಾಗೂ ಕೆಲ ಸ್ಥಳೀಯ ಪೊಲೀಸ್ ಮನೆಗೆ ಬಂದು ಪಾಕಿಸ್ತಾನ ಧ್ವಜ ಹಾರಿಸಿದ ಬಗ್ಗೆ ವಿಚಾರಣೆಗೆ ಕರೆದೊಯ್ಯುವುದಾಗಿ ತಮ್ಮ ಮಗನನ್ನು ಕರೆಕೊಡು ಹೋದರು ಎಂದು ತಿಳಿಸಿದರು.

    ಎಸ್ ಐಟಿ ತಂಡ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ಈ ಕುರಿತು ಇಂದು ಮಧ್ಯಾಹ್ನ ಎಸ್ ಐಟಿ ಡಿವೈಎಸ್ ಪಿ, ಪರಶುರಾಮ ಜೊತೆ ನಮ್ಮ ಸಂಬಂಧಿ ಅಶೋಕ ಕಾಂಬ್ಳೆ ಅವರೊಂದಿಗೆ ಮಾತನಾಡಿಸಿದ್ದಾರೆ. ಆಗ ನನ್ನನ್ನ ವಿಚಾರಣೆಗಾಗಿ ಕರೆತಂದಿದ್ದಾರೆ ನೀವು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದು, ಆದರೆ ಈ ಪ್ರಕರಣದಲ್ಲಿ ಅರೋಪಿ ಮಾಡಿದ್ದಾರೆ ಎಂಬುವುದು ಮಾಧ್ಯಮದಿಂದಲೇ ಗೊತ್ತಾಗಿದ್ದು ಎಂದು ತಿಳಿಸಿದರು.

    ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಪ್ರಕರಣದಲ್ಲಿ ತಮ್ಮ ಮಗ ಖುಲಾಸೆ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

  • ಪ್ರೀತ್ಸಿ ಮದ್ವೆಯಾಗಿ ಪ್ರೇಮಿಗಳ ಪರದಾಟ- ಇದು ಕರ್ನಾಟಕದ ಹುಡ್ಗ ಕೇರಳದ ಹುಡ್ಗಿಯ ಪ್ರೇಮ್‍ಕಹಾನಿ!

    ಪ್ರೀತ್ಸಿ ಮದ್ವೆಯಾಗಿ ಪ್ರೇಮಿಗಳ ಪರದಾಟ- ಇದು ಕರ್ನಾಟಕದ ಹುಡ್ಗ ಕೇರಳದ ಹುಡ್ಗಿಯ ಪ್ರೇಮ್‍ಕಹಾನಿ!

    ಗದಗ: ಪ್ರೀತಿಸಿದ ತಪ್ಪಿಗೆ ಯುವ ಪ್ರೇಮಿಗಳಿಗೆ ಮನೆಯವರ ಭಯ ಕಾಡುತ್ತಿದ್ದು, ಹೇಗಾದರು ಮಾಡಿ ತಮ್ಮ ಪ್ರೇಮ ಉಳಿಸಿಕೊಳ್ಳಲು ಯುವ ಜೋಡಿ ಈಗ ಪೊಲೀಸ್ ಠಾಣೆ ಅಲೆದಾಡುತ್ತಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

    ಕೃಷ್ಣ ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿಯಾಗದ್ದು, ಭಾಗೀರಥಿ ಕೇರಳದ ಕಾಸರಗೋಡು ನಿವಾಸಿಯಾಗಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಕೃಷ್ಣ ಕೆಲಸ ಮಾಡಿ ಬದುಕಿಗೊಂದು ನೆಲೆ ಕಂಡುಕೊಳ್ಳುವ ಹಂಬಲದಿಂದ ಕೇರಳಕ್ಕೆ ಹೋಗಿದ್ದನು.

    ಅಲ್ಲಿ ಪ್ರೀತಿ ಎಂಬ ಮಾಯೆಗೆ ಸಿಲುಕಿ ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲಿ ಇರುವ ಭಾಗೀರಥಿ ಎಂಬ ಕೇರಳದ ಯುವತಿಯನ್ನು ಪ್ರೀತಿಸಿದನು. ಆದರೆ ಇದೀಗ ಇವರಿಬ್ಬರು ವಯಸ್ಕರಾಗಿದ್ದು, ಕುಟುಂಬದವರೇ ಇವರ ಪ್ರೀತಿಗೆ ವಿಲನ್ ಆಗಿದ್ದಾರೆ. ಇದರಿಂದಾಗಿ ಇವರ ಪ್ರೀತಿ ಎಲ್ಲಿ ಕೈ ತಪ್ಪುತ್ತೋ ಎನ್ನುವ ಆತಂಕ ಈ ಯುವ ಜೋಡಿಗೆ ಎದುರಾಗಿದೆ. ಹೇಗಾದರು ಮಾಡಿ ತಮ್ಮ ಪ್ರೀತಿ ಉಳಿಸಿಕೊಳ್ಳಲು ಸದ್ಯ ಈ ಜೋಡಿ ಪರದಾಡುತ್ತಿದೆ. ಅನಿವಾರ್ಯವಾಗಿ ತಮ್ಮ ರಕ್ಷಣೆಗೆ ಗದಗ ಎಸ್.ಪಿ ಕಚೇರಿ ಮೆಟ್ಟಿಲೇರಿದ್ದಾರೆ. ನಮಗೆ ರಕ್ಷಣೆಕೊಡಿ ಜೊತೆಗೆ ಬಾಳಿಬದುಕಲು ಬಿಡಿ ಎಂದು ಪ್ರಿಯಕರ ಕೃಷ್ಣ ಕೇಳಿಕೊಂಡಿದ್ದಾನೆ.

    ಈ ಪ್ರೇಮಿಗಳ ಪ್ರೇಮಾಂಕುರವಾಗೋ ವೇಳೆ ಭಾಗೀರಥಿಗೆ 16 ವರ್ಷ ವಯಸ್ಸಾಗಿತ್ತು. ಆದರೆ ಇತ್ತೀಚಿಗೆ ಮನೆಯಲ್ಲಿ ಇವರಿಬ್ಬರ ಪ್ರೀತಿ ವಿಷಯ ಗೊತ್ತಾಗಿ ಬೇರೆ ಮಾಡಲು ಮುಂದಾದರು. ಆಗ ಅವಳಿಗೆ ವಯಸ್ಸು 17 ವರ್ಷ 6 ತಿಂಗಳು. ಅನಿವಾರ್ಯವಾಗಿ ಇಬ್ಬರು ಪರಾರಿಯಾಗಿ ತನಗೊಂದು ಕೆಲಸ, ತನ್ನ ಪ್ರಿಯತಮೆಗೊಂದು ಕೆಲಸ ಹುಡುಕಿಕೊಂಡು 5 ತಿಂಗಳು ಬೇರೆಯಾಗಿದ್ದಾರೆ. ಇಷ್ಟೆಲ್ಲಾ ಆಗುವುದರೊಳಗೆ ಭಾಗೀರಥಿ ಮನೆಯವರು ಕೇರಳದ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಕೃಷ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಕೃಷ್ಣನನ್ನು ಹುಡುಕಿಕೊಂಡು ಕೇರಳ ಪೊಲೀಸರು ಗದಗ ಜಿಲ್ಲೆಯ ನರಗುಂದದ ಕೃಷ್ಣ ಮನೆಗೂ ಬಂದಿದ್ದಾರೆ.

    ಇದನ್ನೆಲ್ಲ ತಿಳಿದ ಕೃಷ್ಣ ಹಾಗೂ ಭಾಗೀರಥಿ ದೇವಸ್ಥಾನದಲ್ಲಿ ಮದುವೆಯಾಗಿ ಮರಳಿ ನರಗುಂದ ಪಟ್ಟಣಕ್ಕೆ ಬಂದು ವಾಪಸ್ಸಾಗಿದ್ದಾರೆ. ನಮ್ಮ ಇಬ್ಬರನ್ನೂ ಕೇರಳಕ್ಕೆ ಕಳುಹಿಸಬೇಡಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಜೋಡಿಗಳು ಪರದಾಡುತ್ತಿವೆ. ಸಾಲದಕ್ಕೆ ಬಾಗೀರಥಿ ಕುಟುಂಬದಿಂದ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆಕೊಡಿ. ನಾನು ಬದುಕಿದರೂ ಅವನೊಂದಿಗೆ ಸತ್ತರೂ ಅವನೊಂದಿಗೆ ಸಾಯಲು ಸಿದ್ಧ ಎಂದು ಇದೀಗ ಹೇಳುತ್ತಿದ್ದಾಳೆ.

    ಒಟ್ಟಿನಲ್ಲಿ ಕೇರಳ ರಾಜ್ಯದಲ್ಲಿ ಕೆಲಸಕ್ಕೆ ಹೋದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಇಬ್ಬರು ಮನಸಾರೆ ಒಪ್ಪಿದ್ರೂ ಇವರ ಪ್ರೇಮಕ್ಕೀಗ ಆತಂಕ ಎದುರಾಗಿದೆ.

  • ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದಲೇ ಕೊಲೆ ಬೆದರಿಕೆ!

    ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದಲೇ ಕೊಲೆ ಬೆದರಿಕೆ!

    ತುಮಕೂರು: ಪ್ರೀತಿಸಿ ಮದುವೆಯಾದ ಪ್ರೇಮಿಗಳ ಜೀವನಕ್ಕೆ ಜಾತಿ ಅಡ್ಡಿಯಾಗಿದೆ. ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕೆ ಪೋಷಕರೇ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಬಳಿ ನಡೆದಿದೆ.

    ಹುಲಿಯೂರುದುರ್ಗದ ನಿವಾಸಿ ಸಿಂಧು ಮತ್ತು ಹಂಗಾರಹಳ್ಳಿ ನಿವಾಸಿ ಜಗದೀಶ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಂಧು ಮತ್ತು ಜಗದೀಶ್ ನಡುವೆ ಪ್ರೇಮಾಂಕುರವಾಗಿದೆ. ಇತ್ತ ಸಿಂಧು ಪೋಷಕರು ಮಗಳಿಗೆ ಮದುವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕಿ ನಿಶ್ಚಿತಾರ್ಥ ತಯಾರಿ ನಡೆಸಿದ್ದಾರೆ.

    ವಿಷಯ ತಿಳಿದ ಸಿಂಧು ಪ್ರಿಯಕರ ಜಗದೀಶ್ ಗೆ ಎಂಗೇಜ್ಮೆಂಟ್ ವಿಚಾರ ತಿಳಿಸಿದ್ದಾಳೆ. ಇಬ್ಬರೂ ಮೇಜರ್ ಆಗಿರೋ ಕಾರಣದಿಂದಾಗಿ ಒಂದು ನಿರ್ಧಾರಕ್ಕೆ ಬಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಬಳಿಕ ಮದುವೆಯನ್ನು ಯಲಹಂಕದಲ್ಲಿ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಪೋಷಕರು ಇದೀಗ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ.

    ನಾವಿಬ್ಬರೂ ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಜೊತೆಗೆ ನಮ್ಮ ಜಾತಿ ಬೇರೆಯಾದ್ದರಿಂದ ನಮ್ಮ ಪೋಷಕರು ಮದುವೆಗೆ ಒಪೋದಿಲ್ಲ ಎಂದು ಮೊದಲೇ ನಾನು ಸಿಂಧುಗೆ ಹೇಳಿದ್ದೆ. ಆದರೆ ನಾನು ಮದುವೆಯಾಗದಿದ್ದರೆ ಆಕೆ ಬದುಕೋದಿಲ್ಲ ಎಂದಳು. ಹಾಗಾಗಿ ನಾವಿಬ್ಬರು ಮದುವೆಯಾಗಿದ್ದೀವಿ. ಈಗ ಆಕೆಯ ಪೋಷಕರು ನನ್ನ ಮನೆಯವರಿಗೆ ತೊಂದರೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿ, ಪೊಲೀಸರನ್ನ ಬಳಸಿಕೊಂಡು ಎದುರಿಸುತ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

    ಒಟ್ಟಿನಲ್ಲಿ ಜಾತಿ ಭೇದದ ಎಲ್ಲೆ ಮೀರಿದ ಪ್ರೀತಿಗೆ, ಪೋಷಕರ ಕಾರಣದಿಂದಾಗಿ ಜಾತಿ ತಾರತಮ್ಯ ಉಂಟಾಗಿದೆ. ಅಂತರ್ಜಾತಿಯವರನ್ನು ಪ್ರೀತಿಸಿದರು ಎಂಬ ಕಾರಣಕ್ಕೆ ಪೋಷಕರೇ ಪ್ರೇಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ರಕ್ಷಣೆ ಕೋರಿ ಬಂದಿರುವ ಪ್ರೇಮಿಗಳಿಗೆ ಪೊಲೀಸರು ಸಾಂತ್ವನ ಹೇಳಿದ್ದು, ಪ್ರೇಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕುಣಿಗಲ್ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ನಡೆದಿರುವುದಾಗಿ ವಿದ್ಯಾರ್ಥಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿದ್ದಾರೆ. ಹೊಡೆಯುವ ವೇಳೆ ವಿದ್ಯಾರ್ಥಿಯ ಎಡಗಣ್ಣಿಗೆ ತಾಗಿ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಕಳೆದ ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ.

    ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಹೀಗಾಗಿ ಇತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ.

    ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಲಾಗಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ಳು!

    8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ಳು!

    ಹಾಸನ: ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಭಯ ಹುಟ್ಟಿಸಿರುವುದು ಒಂದೆಡೆಯಾದ್ರೆ, 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯೊಬ್ಬಳು, ಮರಳಿ ಪೋಷಕರ ಮಡಿಲಿಗೆ ಸೇರಿರುವ ಅಪರೂಪದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

    15 ವರ್ಷದ ರೇಣುಕಾ ಅಲಿಯಾಸ್ ರೇಖಾ ಎಲ್ಲೋ ಇದ್ದು ಈಗ ಹೆತ್ತವರ ಜೊತೆ ಸೇರಿಕೊಂಡ ಅದೃಷ್ಟವಂತೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕಾಣೆಯಾದ ಮಕ್ಕಳ ಬ್ಯೂರೋದ ಪರಿಶ್ರಮದಿಂದಾಗಿ ತಮ್ಮ ಮಗಳ ಪುನರಾಗಮನದಿಂದ ಚಿಂತೆಯಲ್ಲಿ ಮುಳುಗಿದ್ದ ಬಡ ಕುಟುಂಬದಲ್ಲಿ ಸಂತಸ ಮೂಡಿದೆ.

    ಘಟನೆ ವಿವರ: ಬೇಲೂರು ತಾಲೂಕು ದೇವೀಹಳ್ಳಿ ಗ್ರಾಮದ ಹನುಮಂತಬೋವಿ ಪುತ್ರಿ ರೇಖಾ 4 ನೇ ತರಗತಿ ಓದುತ್ತಿದ್ದಾಗ ಶಾಲೆಗೆ ಹೋದವಳು ಮನೆಗೆ ಬಾರದೇ ದಿಢೀರ್ ನಾಪತ್ತೆಯಾಗಿದ್ದಳು. ಮೊದಲೇ ಕೂಲಿ ಮಾಡಿ ಬದುಕುತ್ತಿರುವ ಪೋಷಕರು ಕರುಳ ಕುಡಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಬೇಲೂರು, ಹಳೇಬೀಡು, ಹಾಸನ ಹಾಗೂ ಸಂಬಂಧಿಕರ ಮನೆಯಲ್ಲೂ ಶೋಧಕಾರ್ಯ ನಡೆಸಿದ್ದರು. ಆದರೂ ಮಗಳು ಪತ್ತೆಯಾಗದೇ ಇದ್ದಾಗ ಹಳೇಬೀಡು ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿ ಮಗಳು ಎಂದು ಬರುವಳೋ ಎಂದು ಕಾದು ಕುಳಿತಿದ್ದರು.

    ದೂರು ಸ್ವೀಕರಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಸ್ಥಾಪಿಸಲಾಗಿರುವ ಕಾಣೆಯಾದ ಮಕ್ಕಳ ಬ್ಯೂರೋಗೆ ಬಾಲಕಿಯ ಫೋಟೋ ಹಾಗೂ ಸ್ವವಿವರ ರವಾನೆ ಮಾಡಿದೇವು. ಫೋಟೋ ಪರಿಶೀಲನೆ ಹಾಗೂ ತಪಾಸಣೆ ವೇಳೆ, ರೇಖಾ ಮಂಡ್ಯ ಜಿಲ್ಲೆಯ ಬಾಲಕಿಯರ ಬಾಲಮಂದಿರದಲ್ಲಿ ಇದ್ದಾಳೆ ಎಂಬುದು ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಂಡ್ಯ ಬಾಲಕಿಯರ ಬಾಲಮಂದಿರ ಸಂಪರ್ಕ ಮಾಡಿದಾಗ ರೇಖಾಗೆ 14 ವರ್ಷ ತುಂಬಿರುವುದರಿಂದ ಆಕೆಯನ್ನು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ಬಳಿಕ ರೇಖಾಳನ್ನು ಮೈಸೂರಿನಿಂದ ಕರೆತಂದು ಇದೀಗ ಎಲ್ಲರ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೋಮಲಾ ತಿಳಿಸಿದ್ದಾರೆ.

    ನಾಲ್ಕನೇ ತರಗತಿ ಓದುವಾಗ ಕಾಣೆಯಾಗಿದ್ದ ರೇಖಾ, ಇದೀಗ ಫಸ್ಟ್ ಕ್ಲಾಸ್ ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸು ಮಾಡಿದ್ದಾಳೆ. ಪ್ರತಿಭಾವಂತ ಮಗಳು 8 ವರ್ಷಗಳ ನಂತರ ಮರಳಿ ಮನೆಗೆ ಬಂದಿರುವುದು ಬಡ ಪೋಷಕರು ಹಾಗೂ ಇಡೀ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇಷ್ಟು ದಿನ ಕುಟುಂಬದವರ ಪ್ರೀತಿ ವಾತ್ಸಲ್ಯದಿಂದ ವಂಚಿತಳಾಗಿದ್ದ ಬಾಲಕಿ, ಕಾಣೆಯಾದ ಮಕ್ಕಳ ಬ್ಯೂರೋ ಹಾಸನ ಜಿಲ್ಲಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಪೋಷಕರ ಮಡಿಲು ಸೇರಿರುವುದು ನಿಜಕ್ಕೂ ಅದೃಷ್ಟದ ಸಮಾಗಮ. ಮಗಳು ಮತ್ತೆ ಮನೆಗೆ ಬಂದಿರುವುದು ಖುಷಿಯಾಗಿದೆ. ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತ ತಂದೆ ಭರವಸೆ ನೀಡಿದ್ದಾರೆ.

  • 9 ವಿಷಯಗಳಲ್ಲಿ ಫೇಲ್ ಆದ್ರೂ ಪೋಷಕರು ಬೈಯದ್ದಕ್ಕೆ ವಿಷ ಕುಡಿದ್ಳು!

    9 ವಿಷಯಗಳಲ್ಲಿ ಫೇಲ್ ಆದ್ರೂ ಪೋಷಕರು ಬೈಯದ್ದಕ್ಕೆ ವಿಷ ಕುಡಿದ್ಳು!

    ಹೈದರಾಬಾದ್: ಬಿ.ಟೆಕ್ ಪರೀಕ್ಷೆಯ 9 ವಿಷಯಗಳಲ್ಲಿ ಫೇಲ್ ಆಗಿದ್ದರೂ ಪೋಷಕರು ಬೈಯದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಗುರುಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಬಿ.ಟೆಕ್ ವಿದ್ಯಾರ್ಥಿನಿ. ಗುರುಲಕ್ಷ್ಮಿ ಸ್ಥಳೀಯ ರಾಜಕೀಯ ಮುಖಂಡರದ ವೆಂಕಟರೆಡ್ಡಿ ಅವರ ಪುತ್ರಿಯಾಗಿದ್ದಾಳೆ.

    ಗುರು ಲಕ್ಷ್ಮಿ ಪ್ರಕಾಶಂ ಜಿಲ್ಲೆಯ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಟೆಕ್ ಪದವಿ ಓದುತ್ತಿದ್ದಳು. ಆದ್ರೆ ಪರೀಕ್ಷೆಯಲ್ಲಿ ಈಕೆ 9 ವಿಷಯಗಳಲ್ಲಿ ಫೇಲ್ ಆಗಿದ್ದ ಕಾರಣ ಹೆಚ್ಚು ಮಾನಸಿಕ ಒತ್ತಡಕ್ಕೆ ಗುರಿಯಾದ್ದಳು. ಪುತ್ರಿ ಪರೀಕ್ಷೆಯಲ್ಲಿ ಫೇಲ್ ಆದ ವಿಷಯ ತಿಳಿದ ಪೋಷಕರು ಆಕೆಯನ್ನು ಬೈದಿರಲಿಲ್ಲ ಎನ್ನಲಾಗಿದೆ. ಆದರೆ ಇದರಿಂದ ಮತ್ತಷ್ಟು ಮಾನಸಿಕವಾಗಿ ನೊಂದ ಗುರುಲಕ್ಷ್ಮಿ ಮನೆಯ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಳು.

    ಕೊಠಡಿಯಲ್ಲಿ ಒದ್ದಾಡುತ್ತಿದ್ದನ್ನು ಕಂಡ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುಲಕ್ಷ್ಮಿ ಮೃತಪಟ್ಟಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೂ ಮುನ್ನ ಗುರುಲಕ್ಷ್ಮಿ ಬರೆದಿರುವ ಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಫೇಲ್ ಆಗಿದ್ದರೂ ಪೋಷಕರು ಬೈಯದ್ದಕ್ಕೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಗುರು ಲಕ್ಷ್ಮಿ ಪತ್ರದಲ್ಲಿ ಬರೆದಿದ್ದಾಳೆ. ಈ ಪತ್ರದ ಬಗ್ಗೆ ಅನುಮಾನ ಮೂಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.