Tag: parents

  • ವಿಭಿನ್ನವಾಗಿ ಮದ್ವೆಯಾದ ಪ್ರೇಮಿಗಳು

    ವಿಭಿನ್ನವಾಗಿ ಮದ್ವೆಯಾದ ಪ್ರೇಮಿಗಳು

    ಮೈಸೂರು: ಜಾತಿ ಮೀರಿ ಜಿಲ್ಲೆಯಲ್ಲಿ ಜೋಡಿಯೊಂದು ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.

    ಶಿಲ್ಪಾ ಮತ್ತು ಸಾಗರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿ. ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಈ ಸರಳ ವಿವಾಹ ನಡೆದಿದ್ದು, ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಅಂತರ್ಜಾತಿಯ ಮದುವೆ ನಡೆದಿದೆ. ಒಡನಾಡಿಯಲ್ಲಿ ಸಂಸ್ಥೆಯಲ್ಲಿ ನೆರವೇರಿದ 88ನೇ ಸರಳ ವಿವಾಹ ಇದಾಗಿದೆ.

    ಮೈಸೂರಿನ ಅರವಿಂದನಗರದ ಸಿದ್ದರಾಜು ಮತ್ತು ಭಾಗ್ಯಲಕ್ಷ್ಮೀ ಪುತ್ರಿ ಶಿಲ್ಪಾ ಮತ್ತು ಮೈಸೂರಿನ ವಿಜಯನಗರ ನಿವಾಸಿಗಳಾದ ಕುಮಾರಸ್ವಾಮಿ ಮತ್ತು ಕಲಾವತಿ ಪುತ್ರ ಸಾಗರ್ ಸರಳ ವಿವಾಹವಾಗಿದ್ದಾರೆ. ಶಿಲ್ಪಾ ಮತ್ತು ಸಾಗರ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಬಂಧು ಮಿತ್ರರ ಸಮ್ಮುಖದಲ್ಲಿ ಇಂದು ನಡೆದ ವಿವಾಹದಲ್ಲಿ ನವಜೋಡಿಗಳಿಬ್ಬರು ಬುದ್ಧನ ತತ್ವಗಳನ್ನು ಹೇಳಿದರು. ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದ ಹಲವರು ದಂಪತಿಗೆ ಆಶೀರ್ವದಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಯಸ್ಸಿನ ಅಂತರದ ನೆಪವೊಡ್ಡಿ ಪ್ರೇಮಿಗಳಿಗೆ ವಿಲನ್ ಆದ ಪೋಷಕರು

    ವಯಸ್ಸಿನ ಅಂತರದ ನೆಪವೊಡ್ಡಿ ಪ್ರೇಮಿಗಳಿಗೆ ವಿಲನ್ ಆದ ಪೋಷಕರು

    ಚಿತ್ರದುರ್ಗ: ಪ್ರೇಮಿಗಳಿಬ್ಬರ ಜಾತಿಯೂ ಒಂದೇ ವರಸೆಯಲ್ಲಿ ಸಂಬಂಧಿಕರೇ ಆಗಿದ್ದು, ಅವರ ಪೋಷಕರು ವಯಸ್ಸಿನ ಅಂತರದ ನೆಪವೊಡ್ಡಿ ಆ ಜೋಡಿಗೆ ವಿಲನ್ ಆಗಿದ್ದಾರೆ. ಮದುವೆ ಆಗಿ ಗರ್ಭಿಣಿ ಆಗಿದ್ದರೂ ಸಹ ಪೋಷಕರು ಪ್ರಾಣ ಬೆದರಿಕೆವೊಡ್ಡಿ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಲಲಿತಾ ಹಾಗೂ ದಾವಣಗೆರೆ ನಗರದ ಪ್ರತಾಪ್ ಸಂಬಂಧಿಕರಾಗಿದ್ದು, 3 ವರ್ಷಗಳಿಂದ ಇಬ್ಬರ ನಡುವೆ ಪ್ರೇಮಾಂಕುರ ಆಗಿದೆ. ಆದರೆ ಪ್ರೀತಿಸಿದ ಜೋಡಿಗೆ ಪ್ರತಾಪ್ ಪೋಷಕರೇ ವಿಲನ್ ಆಗಿದ್ದಾರೆ. ಪ್ರತಾಪ್‍ಗಿಂತ ಲಲಿತಾಗೆ ಹೆಚ್ಚು ವಯಸ್ಸಾಗಿದೆ ಎಂಬ ನೆಪವೊಡ್ಡಿ ಪ್ರೇಮವಿವಾಹವನ್ನು ವಿರೋಧಿಸಿದ್ದಾರೆ.

    ಪೋಷಕರ ವಿರೋಧದ ನಡುವೆ ಇಬ್ಬರು ಆರು ತಿಂಗಳ ಹಿಂದೆಯೇ ಚಿತ್ರದುರ್ಗದ ಕಣಿವೆ ಮಾರಮ್ಮ ದೇಗುಲದಲ್ಲಿ ಮದುವೆ ಆಗಿದ್ದು, ನಗರಂಗೆರೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಲಲಿತಾ ಗರ್ಭಿಣಿ ಆಗಿದ್ದರೂ ಸಹ ಪ್ರತಾಪ್‍ನ ಪೋಷಕರು ಲಲಿತಾ ಹಾಗೂ ಕುಟುಂಬಕ್ಕೆ ಕಿರಕುಳ ನೀಡುತ್ತಿದ್ದು, ರಿಜಿಸ್ಟರ್ ಮದುವೆ ಆಗಲು ಸಹ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರತಾಪ್ ಆರೋಪಿಸಿದ್ದಾರೆ.

    ಈಗಾಗಲೇ ಗರ್ಭಿಣಿ ಆಗಿರುವ ಲಲಿತಾ, ಪತಿಯ ಜೊತೆ ನೆಮ್ಮದಿಯ ಬದುಕು ನಡೆಸಲು ಪ್ರತಾಪ್‍ನ ತಂದೆ ಹನುಮಂತಪ್ಪ ಮತ್ತು ಅವರ ಕುಟುಂಬ ಬಿಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಹೀಗಾಗಿ, ನಿತ್ಯ ಭಯ ಭೀತಿಯ ನಡುವೆ ಬದುಕು ನಡೆಸುವಂತಾಗಿದ್ದು ಪೊಲೀಸರು ರಕ್ಷಣೆ ಕೊಡಬೇಕು ಎಂದು ಲಲಿತಾ ಮನವಿ ಮಾಡಿಕೊಂಡಿದ್ದಾರೆ.

    ಈ ನವಜೋಡಿಯೂ ಚಿತ್ರದುರ್ಗದ ಎಸ್‍ಪಿ ಅರುಣ್ ಅವರಿಗೆ ಈ ಸಂಬಂಧ ದೂರು ನೀಡಿದೆ. ದೂರು ಸ್ವೀಕರಿಸಿರುವ ಎಸ್‍ಪಿ ಅರುಣ್ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ – ಮಕ್ಕಳಿಗೆ ವಿತರಿಸಿದ ಕಾಮಿಕ್ ಬುಕ್ ನಲ್ಲಿತ್ತು ಅಶ್ಲೀಲ ಚಿತ್ರ!

    ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ – ಮಕ್ಕಳಿಗೆ ವಿತರಿಸಿದ ಕಾಮಿಕ್ ಬುಕ್ ನಲ್ಲಿತ್ತು ಅಶ್ಲೀಲ ಚಿತ್ರ!

    ಬೆಂಗಳೂರು: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರವಾಗಿರಿ. ನಿಮ್ಮ ಮಕ್ಕಳಿಗೆ ಯಾವುದೇ ಸಂಸ್ಥೆ ವಿತರಿಸುವ ಬುಕ್ ಗಳ ಮೇಲೆ ಗಮನ ಹರಿಸಿ.

    ಖಾಸಗಿ ಸಂಸ್ಥೆಯೊಂದು ಕಾಮಿಕ್ ಬುಕ್‍ನಲ್ಲಿ ಅಶ್ಲೀಲ ಚಿತ್ರವಿರುವ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ವಿವಾದಕ್ಕೀಡಾಗಿದೆ. ನಗರದ ವೈಟ್ ಫೀಲ್ಡ್ ನ ಕೆಟಿಪಿಒ ಸಭಾಂಗಣದಲ್ಲಿ ನ. 17 ಹಾಗೂ 18ರಂದು ಕಾಮಿಕ್ ಕಾನ್ ಇಂಡಿಯಾ (ಸಿಸಿಬಿಐ) ಸಂಸ್ಥೆ 7ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿತ್ತು.

    ಈ ಕಾರ್ಯಕ್ರಮದಲ್ಲಿ 6 ರಿಂದ 18 ವರ್ಷದ ಒಳಗಿನ ನೂರಾರು ಮಕ್ಕಳು ಭಾಗಿಯಾಗಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ಕಾಮಿಕ್ ಬುಕ್, ಟಿ-ಶರ್ಟ್, ಬ್ಯಾಡ್ಜ್ ಹಾಗೂ ಪೋಸ್ಟರ್ ಇರುವ ಕಿಟ್ ನೀಡಿತ್ತು. ಇದರಲ್ಲಿ ಅಮೆರಿಕ ಲೇಖಕ ಬ್ರಿಯಾನ್ ಕೆ. ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಅಶ್ಲೀಲ ಚಿತ್ರಗಳಿದ್ದು, ಈ ಪುಸ್ತಕವನ್ನು ಮಕ್ಕಳಿಗೆ ವಿತರಿಸಲಾಗಿತ್ತು.

    ಬೆಳಕಿಗೆ ಬಂದಿದ್ದು ಹೇಗೆ?
    ಈ ಕಾರ್ಯಕ್ರಮದಲ್ಲಿ ಇಂದಿರಾನಗರ ನಿವಾಸಿಯಾಗಿರುವ 16 ವರ್ಷದ ಬಾಲಕಿಯೊಬ್ಬಳು ಭಾಗವಹಿಸಿದ್ದಳು. ಗುರುವಾರ ಬೆಳಗ್ಗೆ ಬಾಲಕಿಯ ತಾಯಿ ಮನೆಯನ್ನು ಶುಚಿಗೊಳಿಸುವಾಗ ಅಲ್ಲಿಯೇ ಇದ್ದ ಸಂಸ್ಥೆಯ ನೀಡಿದ್ದ ಕಿಟ್ ಅನ್ನು ಕುತೂಹಲದಿಂದ ತೆಗೆದು ನೋಡಿದ್ದಾರೆ.

    ಈ ವೇಳೆ ಪುಸ್ತಕದಲ್ಲಿದ್ದ ಅಶ್ಲೀಲ ಚಿತ್ರಗಳನ್ನು ನೋಡಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಕೂಡಲೇ ವಿದ್ಯಾರ್ಥಿಗಳಿಗೆ ಈ ಚಿತ್ರಗಳಿರುವ ಪುಸ್ತಕಗಳನ್ನು ವಿತರಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಸಂಸ್ಥೆಗೆ ಸಂದೇಶ ಕಳುಹಿಸಿ ಸ್ಪಷ್ಟನೆ ಕೇಳಿದ್ದಾರೆ. ಈ ಕುರಿತು ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಬಾಲಕಿಯ ತಾಯಿ ತಕ್ಷಣ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ಪ್ರತಿಕ್ರಿಯಿಸಿ ಕ್ಷಮೆ ಕೇಳಿದೆ.

    ಕಳೆದ ಏಳು ವರ್ಷದಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲಿಲ್ಲ. ನಮಗೆ ತಿಳಿಯದೇ ಇಂತಹ ಅಶ್ಲೀಲ ಚಿತ್ರಗಳು ಬಂದಿದೆ ಎಂದು ಸಂಸ್ಥೆ ಕ್ಷಮೆಯಾಚಿಸಿದೆ. ಸಂಸ್ಥೆ ಕ್ಷಮೆ ಕೇಳಿದ್ದರೂ ಸುಮ್ಮನಾಗದ ಪೋಷಕರು ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 (ಮಕ್ಕಳಿಗೆ ಅಶ್ಲೀಲ ಪುಸ್ತಕ ಮಾರಾಟ) ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರೇ ನಾಯಿಗಳ ಬಗ್ಗೆ ಎಚ್ಚರ- ಮಾಂಸ, ಸಂಪರ್ಕಕ್ಕೆ ಸಂಗಾತಿ ಸಿಗದಿದ್ದರೆ ಮಕ್ಕಳನ್ನು ಕಚ್ಚುತ್ತೆ

    ಪೋಷಕರೇ ನಾಯಿಗಳ ಬಗ್ಗೆ ಎಚ್ಚರ- ಮಾಂಸ, ಸಂಪರ್ಕಕ್ಕೆ ಸಂಗಾತಿ ಸಿಗದಿದ್ದರೆ ಮಕ್ಕಳನ್ನು ಕಚ್ಚುತ್ತೆ

    ಬೆಂಗಳೂರು: ನಿಮ್ಮ ಮನೆಯ ಆಸುಪಾಸು ನಾಯಿಗಳಿದ್ದರೆ ಪೋಷಕರೇ ಎಚ್ಚರವಾಗಿರಿ. ನಾಯಿಗಳಿಗೆ ಈಗ ಪ್ರಸವ ಕಾಲವಾಗಿದ್ದು, ಎಲ್ಲಂದರಲ್ಲಿ ಮಾಂಸ ಸಿಗದಿದ್ದರೆ ಹಾಗೂ ಸಂಪರ್ಕಕ್ಕೆ ಮತ್ತೊಂದು ಸಂಗಾತಿ ಸಿಗದಿದ್ದರೆ ಸಿಕ್ಕ ಸಿಕ್ಕವರನ್ನು ಕಚ್ಚಲು ಶುರು ಮಾಡಿವೆ.

    ಚಳಿಗಾಲ ಬರುತ್ತಿದ್ದಂತೆಯೇ ಹಾದಿ ಬೀದಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇದಕ್ಕೆ ಕಾರಣ ನಾಯಿಗಳಿಗೆ ಈಗ ಪ್ರಸವ ಕಾಲ. ಸಂಗಾತಿ ಸಿಗದಿದ್ದರೆ ಹೀಗೆ ಮಾಡುತ್ತವೆ. ಅಷ್ಟೇ ಅಲ್ಲದೇ ಅಕ್ಕಪಕ್ಕ ಮಾಂಸದಂಗಡಿಗಳಿದ್ದು ಆಹಾರ ಸಿಗದಿದ್ದರೂ ನಿಮ್ಮ ಮಕ್ಕಳು ತಿಂಡಿ ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿದ್ದರೆ, ಮಕ್ಕಳನ್ನು ಟಾರ್ಗೆಟ್ ಮಾಡುತ್ತವೆ.

    ಬೀದಿ ನಾಯಿಗಳಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗದಿದ್ದರೆ, ಅದರಲ್ಲೂ ಮಾಂಸದಂಗಡಿಗಳು ಆಸುಪಾಸಿನಲ್ಲಿ ಪ್ರಾಣಗಳಿಗೆ ತ್ಯಾಜ್ಯವನ್ನು ಹಾಕಿ ತಿನ್ನುವ ಅಭ್ಯಾಸ ಮಾಡಿಸಿದರೆ ಎಚ್ಚರ ಇರಲಿ. ಒಂದು ದಿನ ಫುಡ್ ಮಿಸ್ ಆದರೂ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ಎರಗಬಹುದು. ಹೀಗಾಗಿ ಪಾಲಿಕೆ ಈ ಸಂಬಂಧ ಹೊಸ ನಿರ್ಧಾರಕ್ಕೆ ಬಂದಿದೆ.

    ಈ ಪ್ರಕಾರ ಪ್ರಾಣಿ ವೆಸ್ಟ್ ಬ್ಲಾಕ್ ಸ್ಟಾರ್ಟ್‍ಗಳಲ್ಲಿ ಬಿಸಾಡೋರನ್ನು ಕಂಡರೆ ತಕ್ಷಣ ಪಾಲಿಕೆಗೆ ಮಾಹಿತಿ ನೀಡಿ. ಕೊಟ್ಟಾಕ್ಷಣ ಅಂಗಡಿಯವರೊಂದಿಗೆ ಗಲಾಟೆ ಬೇಡ. ಬೀದಿ ನಾಯಿ ಕಚ್ಚುತ್ತೆ ಎನ್ನುವ ತಲೆನೋವು ಕೂಡ ಬೇಡ. ತಕ್ಷಣ ಪಾಲಿಕೆ ಮಾಂಸದಂಗಡಿಗೆ ದಂಡ ಹಾಕಿ ಮತ್ತೆ ತ್ಯಾಜ್ಯ ಹಾಕದಂತೆ ಮಾಡುತ್ತದೆ.

    ಪಾಲಿಕೆ ಈಗ ಮಾಂಸದಂಗಡಿ ಮೇಲೆ ಕ್ರಮ ಜರುಗಿಸಲು ಸಿದ್ಧವಾದರೂ ಪೋಷಕರಂತೂ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೊಸ ದಾರಿ ಸಿಕ್ಕಂತೆ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿನಿಮಾ ನಟರ ಮಕ್ಕಳ ಕಷ್ಟ ಬಿಚ್ಚಿಟ್ಟ ಸಾರಥಿ!

    ಸಿನಿಮಾ ನಟರ ಮಕ್ಕಳ ಕಷ್ಟ ಬಿಚ್ಚಿಟ್ಟ ಸಾರಥಿ!

    ಬೆಂಗಳೂರು: ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸುಲಭವಾಗಿ ಗುರುತಿಸಿಕೊಂಡು ಬೆಳೆಯಬಹುದು ಎಂದುಕೊಂಡಿದ್ದಾರೆ. ಆದರೆ ಸ್ಟಾರ್ ನಟರ ಮಕ್ಕಳು ಅನುಭವಿಸುವ ಕಷ್ಟ ನಮಗೆ ಮಾತ್ರ ಗೊತ್ತು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಸ್ಟಾರ್ ಗಳ ಮಕ್ಕಳು ಸಿನಿಮಾಲ್ಯಾಂಡ್‍ಗೆ ಬರಬೇಕು ಅಂದರೆ ಸೈಕಲ್ ಹೊಡೆಯೋದು ಬೇಕಾಗಿಲ್ಲ. ನಟರಾಗಬೇಕು ಎಂಬ ಆಸೆ ಇದ್ದರೆ ಮುಖಕ್ಕೆ ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದರೆ ಅಷ್ಟೇ ಸಾಕು ಅಪ್ಪನ ಹೆಸರಲ್ಲಿ ಬೆಳೆಯಬಹುದು. ಬಣ್ಣದ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಹುದು ಎಂದುಕೊಂಡಿರುತ್ತಾರೆ. ಆದರೆ ನಟ ದರ್ಶನ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

    ನಟನ ಮಗ ನಟ ಆಗುತ್ತಾನೆ ನಿಜ. ಆದರೆ ಸಿನಿಮಾ ಲ್ಯಾಂಡ್‍ನಲ್ಲಿ ಆತ ಪಡುವ ಕಷ್ಟ ಅಷ್ಟಿಷ್ಟಲ್ಲ. ಮೇಲ್ನೋಟಕ್ಕೆ ಅಪ್ಪನ ಹೆಸರೇಳಿಕೊಂಡು ಚಿತ್ರರಂಗಕ್ಕೆ ಲಗ್ಗೆ ಇಟ್ಟಿರಬಹುದು. ಆದರೆ ಮಾಯಾಬಜಾರ್ ನಲ್ಲಿ ಮಿನುಗೋಕೆ, ಸಿನಿರಸಿಕರಿಂದ ಸೈ ಎನಿಸಿಕೊಳ್ಳೋಕೆ ಸ್ಟಾರ್ ನಟರು ಪಡುವ ಕಷ್ಟ ಅವರಿಗಷ್ಟೇ ಗೊತ್ತು. ಅಪ್ಪ, ಅಣ್ತಮ್ಮನ ಹೆಸರೇಳಿಕೊಂಡು ಸಿನಿಮಾಫೀಲ್ಡ್ ಗೆ ಬಂದವರು ಏನೆಲ್ಲಾ ಕಷ್ಟಪಡುತ್ತಾರೆ ಎಂಬುದನ್ನ ಕಿರಿಯ ಗೆಳೆಯ ಧರ್ಮ ಕೀರ್ತಿರಾಜ್ ನಾಯಕನಾಗಿರುವ ಚಾಣಾಕ್ಷ ಸುದ್ದಿಗೊಷ್ಠಿಯಲ್ಲಿ ದರ್ಶನ್ ಹೇಳುವ ಪ್ರಯತ್ನ ಮಾಡಿದ್ದಾರೆ.

    ಸಿನಿಮಾ ನಟರುಗಳ ಮಕ್ಕಳಿಗೆ ತುಂಬಾ ಜವಾಬ್ದಾರಿ ಇರುತ್ತದೆ. ಅಪ್ಪ-ಅಮ್ಮ, ಅಣ್ತಮ್ಮಂದಿರ ಹೆಸರೇಳಿಕೊಂಡು ಚಿತ್ರರಂಗಕ್ಕೆ ಬಂದಿಲ್ಲದವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲೋದಕ್ಕೆ ಸಮಸ್ಯೆ ಆಗಲ್ಲ. ಆದರೆ ಕಲಾವಿದರ ಕುಟುಂಬದಿಂದ ಮತ್ತೊಬ್ಬ ಕಲಾವಿದ ಚಿತ್ರರಂಗಕ್ಕೆ ಬರುತ್ತಿದ್ದಾನೆ ಎಂದಾಗ ನಿರೀಕ್ಷೆಗಳು ಗರಿಗೆದರುತ್ತವೆ. ಆ ನಿರೀಕ್ಷೆಯನ್ನ ಯಶಸ್ವಿಯಾಗಿ ಮಾಡುವಲ್ಲಿ ಸೋತ ಅಂದರೆ ನೀವು ಆತನನ್ನ ಇಷ್ಟಪಡುವುದಿರಲಿ ಆತ ಚಿತ್ರರಂಗದಲ್ಲಿ ಉಳಿಯೋದು ಕಷ್ಟವಾಗುತ್ತದೆ. ಆದ್ದರಿಂದ ಸ್ಟಾರ್ ಮಕ್ಕಳ ಬಗ್ಗೆ ನೀವು ಇಟ್ಟುಕೊಂಡಿರುವ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಿ. ಯಾಕೆಂದರೆ ಕಲಾವಿದರ ಮಕ್ಕಳಾಗಿ ಅವರು ಪಡುವ ಕಷ್ಟ ಅವರಿಗಷ್ಟೇ ಗೊತ್ತು ಎಂದು ದರ್ಶನ್ ಹೇಳಿದ್ದಾರೆ.

    ಖ್ಯಾತ ಖಳನಾಯಕನ ಮಗನಾಗಿದ್ದರೂ, ದಾಸನನ್ನ ಕರೆದು ಯಾರೂ ಅವಕಾಶ ಕೊಟ್ಟಿರಲಿಲ್ಲ. ಲೈಟ್‍ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಸೀರಿಯಲ್‍ ನಲ್ಲಿ ಸಣ್ಣಪುಟ್ಟ ಪಾತ್ರ ಮಾಡಿ ಸೈ ಎನಿಸಿಕೊಂಡಾಗಲೇ ದಾಸನಿಗೆ ಅವಕಾಶಗಳು ಅರಸಿ ಬಂದಿದ್ದು. ಅದೊಂದು ದಿನ ಸಣ್ಣದೊಂದು ಅವಕಾಶಕ್ಕಾಗಿ ಆಸೆಯ ಕಣ್ಣುಗಳಿಂದ ನೋಡುತ್ತಿದ್ದ ದಾಸ ಇವತ್ತು ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ತಾನು ಪಟ್ಟ ಕಷ್ಟ ಇಂಡಸ್ಟ್ರಿಗೆ ಬರುವ ಯಾವೊಬ್ಬ ಕಲಾವಿದನೂ ಪಡಬಾರದು ಅಂತ ಹೊಸಬರ ಚಿತ್ರಗಳಿಗೆ ಜೊತೆಗೆ ಸ್ನೇಹಿತರ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರಿಯತಮನ ಜೊತೆ ರಿಜಿಸ್ಟರ್ ಮದ್ವೆಯಾಗಿ ವರನಿಗೆ ಕೈಕೊಟ್ಟ ಯುವತಿ!

    ಪ್ರಿಯತಮನ ಜೊತೆ ರಿಜಿಸ್ಟರ್ ಮದ್ವೆಯಾಗಿ ವರನಿಗೆ ಕೈಕೊಟ್ಟ ಯುವತಿ!

    ಮೈಸೂರು: ಕಲ್ಯಾಣ ಮಂಟಪಕ್ಕೆ ವಧು ಬಾರದ ಕಾರಣ ಮದುವೆ ಮುರಿದು ಬಿದ್ದಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

    ಈ ಹಿಂದೆ ರಿಜಿಸ್ಟರ್ ಮದುವೆ ಮಾಡಿಕೊಂಡು ಇಂದು ಮತ್ತೊಬ್ಬರ ಜೊತೆ ಮದುವೆಗೆ ವಧು ಮುಂದಾಗಿ ಕೊನೆ ಕ್ಷಣದಲ್ಲಿ ಮದುವೆಯನ್ನು ಮುರಿದುಕೊಂಡಿದ್ದಾಳೆ. ಚಿಕ್ಕಮಗಳೂರು ಮೂಲದ ಕವಿತಾ(ಹೆಸರು ಬದಲಾಯಿಸಲಾಗಿದೆ) ಇಂದು ಮೈಸೂರಿನಲ್ಲಿ ಟಿ. ನರಸೀಪುರ ಮೂಲದ ನಿಖಿಲ್ ಅರಸ್ ಅವರನ್ನು ಕೈ ಹಿಡಿಯಬೇಕಿತ್ತು.

    ಈಗಾಗಲೇ ತನ್ನ ಪ್ರೇಮಿಯೊಂದಿಗೆ ರಿಜಿಸ್ಟರ್ ಮದುವೆ ಆಗಿರುವ ಕವಿತಾ, ಮನೆಯವರ ಒತ್ತಾಯದ ಮೇರೆಗೆ ನಿಖಿಲ್ ಅರಸ್ ಜೊತೆ ನಿಶ್ಚಿತಾರ್ಥವಾಗಿ ಇಂದು ಮದುವೆ ಆಗಬೇಕಿತ್ತು. ಮಂಗಳವಾರ ರಾತ್ರಿ ಆರತಕ್ಷತೆ, ಇಂದು ಬೆಳಗ್ಗೆ 6.45 ರಿಂದ 7.45 ಮೂಹೂರ್ತದಲ್ಲಿ ಮದುವೆ ನಡೆಯಬೇಕಿತ್ತು.

    ಮಂಗಳವಾರ ಕಲ್ಯಾಣ ಮಂಟಪಕ್ಕೆ ಬರೋದಾಗಿ ಚಿಕ್ಕಮಗಳೂರುನಿಂದ ಹೊರಟಿದ್ದ ಕವಿತಾ, ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ತನ್ನ ಪೋಷಕರಿಗೆ ನಾನು ಈಗಾಗಲೇ ರಿಜಿಸ್ಟರ್ ಮದುವೆ ಆಗಿರುವುದಾಗಿ ಹೇಳಿದ್ದಾಳೆ. ಇದರಿಂದ ಕಂಗಾಲಾದ ಕವಿತಾ ಕುಟುಂಬ ಕಲ್ಯಾಣ ಮಂಟಪಕ್ಕೆ ಬಾರದೇ ದೂರ ಉಳಿದಿದೆ.

    ಕವಿತಾಳ ನಡವಳಿಕೆಯಿಂದ ವರ ನಿಖಿಲ್ ಅರಸ್ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ವಧುವಿಗಾಗಿ ಕಲ್ಯಾಣ ಮಂಟಪದಲ್ಲೇ ವರನ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರುವ ಕವಿತಾಳನ್ನು ಮನವೂಲಿಸಲು ನಿಖಿಲ್ ಅರಸ್ ಕುಟುಂಬ ಹಾಗೂ ಕವಿತಾ ಪೋಷಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಸ್ ಪಲ್ಟಿ- ಮಾನವೀಯತೆ ಮೆರೆದ್ರು ಮೃತ ವಿದ್ಯಾರ್ಥಿನಿಯ ಪೋಷಕರು

    ಬಸ್ ಪಲ್ಟಿ- ಮಾನವೀಯತೆ ಮೆರೆದ್ರು ಮೃತ ವಿದ್ಯಾರ್ಥಿನಿಯ ಪೋಷಕರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ಬಸ್ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳ ಅಂಗಾಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ದಿಯಾ(16) ಅಪಘಾತದಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿನಿ. ದಿಯಾ ತಂದೆ ರಾಜೇಂದ್ರ ಸಿಂಗ್ ಶೇರಾವತ್ ನಿವೃತ್ತ ಕರ್ನಲ್ ಆಗಿದ್ದು, ಸದ್ಯ ಅವರು ತಮ್ಮ ಮಗಳ ಕಣ್ಣನ್ನು ಮಗಳ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ.

    ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು. 20ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯವಾಗಿತ್ತು. ಬಸ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೂರ್ಣಪ್ರಜ್ಞಾ ಶಾಲೆಗೆ ಸೇರಿದ್ದು, ಶಾಲಾ ಪ್ರವಾಸ ಹಿನ್ನೆಲೆ ಬೆಳಗಿನ ಜಾವ ಶೃಂಗೇರಿಗೆ ಕಡೆ ಆಗಮಿಸುತ್ತಿತ್ತು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಗಾಯಾಳು ವಿದ್ಯಾರ್ಥಿಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಈ ಬಗ್ಗೆ ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಮುಂಬೈ: ಬೇಗನೆ ಸಿಗಬೇಕು ಅಂತ ಕೆಲವರು ತಮ್ಮ ಕತ್ತಿನಲ್ಲಿರುವ ತಮ್ಮ ಚೈನಿಗೆ ಸೇಫ್ಟಿ ಪಿನ್ ಹಾಕಿಕೊಂಡಿರುತ್ತಾರೆ. ಇದೊಂದು ಒಳ್ಳೆಯ ಉಪಾಯವಾದ್ರೂ ಇದರಿಂದ ಅಪಾಯ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಮುಂಬೈನಲ್ಲಿ ನಡೆದ ಘಟನೆ.

    ಹೌದು. ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರದಲ್ಲಿ ಪಿನ್ ಸಿಕ್ಕಿಸಿಕೊಂಡಿದ್ದರು. ಈ ಪಿನ್ ಮಗುವಿನ ಜೀವಕ್ಕೆ ಅಪಾಯವುಂಟು ಮಾಡಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗ ಅವರು ಕತ್ತಿನಲ್ಲಿರುವ ಚೈನ್ ಅನ್ನು ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ. ಅಂತೆಯೇ ಇಲ್ಲಿ ಕೂಡ ಮಗುವನ್ನು ತಾಯಿ ಎತ್ತಿಕೊಂಡಾಗ, ಮಗು ತನ್ನ ತಾಯಿ ಕತ್ತಿನಲ್ಲಿದ್ದ ಕರಿಮಣಿಯಲ್ಲಿ ಸಿಕ್ಕಿಸಿರುವ ಪಿನ್ ಅನ್ನು ನುಂಗಿದೆ. ಈ ಪಿನ್ ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ.

    ಮಗು ನಿರಂತವಾಗಿ ಅಳುತ್ತಿರೋದನ್ನು ಗಮನಿಸಿದ ಹೆತ್ತವರು ಗಾಬರಿಯಾಗಿದ್ದಾರೆ. ಅಲ್ಲದೇ ಮಗು ನೀರು ಕುಡಿಯಲು ಕೂಡ ನಿರಾಕರಿಸುತ್ತಿತ್ತು. ಹೀಗಾಗಿ ಹೆತ್ತವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಮಗುವಿನ ಎಕ್ಸ್ ರೇ ತೆಗೆದಾಗ ಮಗುವಿನ ಕುತ್ತಿಗೆಯಲ್ಲಿ ಪಿನ್ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ಅಲ್ಲಿಂದ ಕೂಡಲೇ ನಗರದ ಕೆಇಎಂ ಆಸ್ಪತ್ರೆಗೆ ತೆರಳಿರುವುದಾಗಿ ಮಗುವಿನ ತಂದೆ ತಿಳಿಸಿದ್ದಾರೆ.

    ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಗಂಟಲಲ್ಲಿ ಸಿಲುಕಿದ್ದ ಪಿನ್ ಹೊರತೆಗೆಯಲಾಗಿದೆ. ಆದ್ರೆ ಇದನ್ನು ತೆಗಯಲು ತುಂಬಾ ಕಷ್ಟವಾಯಿತು. ಯಾಕಂದ್ರೆ ಇದರಿಂದ ಮಗುವಿನ ಜೀವಕ್ಕೇ ಕುತ್ತು ತರುವಂತಿತ್ತು ಅಂತ ಆಸ್ಪತ್ರೆಯ ವೈದ್ಯರಾದ ಡಾ. ನೀಲಂ ಸತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ಸಾಂದರ್ಭಿಕ ಚಿತ್ರ

    ರಾಯ್ಪುರ: ಜೀವಂತ ನಾಗರಹಾವಿನ ಬಳಿ ಆಶೀರ್ವಾದಕ್ಕೆಂದು ತೆರಳಿ ತಮ್ಮ 5 ತಿಂಗಳ ಕಂದಮ್ಮನನ್ನು ದಂಪತಿ ಕಳೆದುಕೊಂಡ ಘಟನೆ ಛತ್ತೀಸಘಡದ ರಾಜಾನಂದ್‍ಗಾವ್ ಜಿಲ್ಲೆಯಲ್ಲಿ ನಡೆದಿದೆ.

    5 ತಿಂಗಳ ಮಗುವಿನ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಹಾವಾಡಿಗನ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ನಾಗ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದ.

    ಹಾವಾಡಿಗನ ಮಾತಿನಂತೆ ಮಗುವಿನ ಪೋಷರು ನಾಗನಪೂಜೆಯನ್ನು ವಿಧಿವಿಧಾನವಾಗಿ ನೆರವೇರಿಸಿದ್ದಾರೆ. ಪೂಜೆ ವೇಳೆ ಹಾವಾಡಿಗ ತನ್ನ ಬಳಿಯಿದ್ದ ನಾಗರಹಾವಿನ ಬಳಿ ಮಗುವನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳುವಂತೆ ಸೂಚಿಸಿದ್ದಾನೆ. ಈತನ ಮಾತನ್ನು ನಂಬಿ ದಂಪತಿ ತಮ್ಮ 5 ತಿಂಗಳ ಮಗುವನ್ನು ನಾಗರಹಾವಿನ ತಲೆ ಬಳಿ ಇಟ್ಟಿದ್ದಾರೆ. ಮಗುವನ್ನು ನೋಡಿದ ಕೂಡಲೇ ನಾಗರಹಾವು ಕಚ್ಚಿದೆ. ಇದರಿಂದ ಗಾಭರಿಗೊಂಡ ಪೋಷಕರು ಹಾವಾಡಿಗನ ಬಳಿ ವಿಚಾರಿಸಿದಾಗ, ಇದು ಹಲ್ಲುಕಿತ್ತ ಹಾವು. ಮಗುವಿಗೆ ಏನು ತೊಂದರೆಯಾಗುವುದಿಲ್ಲವೆಂದು ಹೇಳಿ ಸಮಾಧಾನ ಮಾಡಿದ್ದಾನೆ.

    ಇದಾದ 2 ಗಂಟೆ ಬಳಿಕ ಮಗುವಿನ ಉಸಿರಾಟದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗು ಕಳೆದುಕೊಂಡ ಸಿಟ್ಟಿನಿಂದ ಪೋಷಕರು ಹಾವಡಿಗ ಬಿಲ್ಲು ರಾಮ್ ಮಾರ್ಕಮ್ ನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂವರಿಗೆ ಮರು ಜನ್ಮ ನೀಡಿದ 19ರ ಯುವಕ!

    ಮೂವರಿಗೆ ಮರು ಜನ್ಮ ನೀಡಿದ 19ರ ಯುವಕ!

    ಪಾಟ್ನಾ: ಅಪಘಾತದಲ್ಲಿ ಸಾವನ್ನಪ್ಪಿದ್ದ 19 ವರ್ಷದ ಯುವಕನ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಪೋಷಕರು ಮೂವರು ವ್ಯಕ್ತಿಗಳಿಗೆ ಮರುಜನ್ಮವನ್ನು ನೀಡಿದ್ದಾರೆ.

    ಬಿಹಾರದ ನಳಂದ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಯುವಕ ಮೃತಪಟ್ಟಿದ್ದ. ಮೃತಪಟ್ಟ ಯುವಕನ ತಂದೆ ಎಸ್ ಭೂಷಣ್ ಪ್ರಸಾದ್ ಅವರು ಪಾಟ್ನಾದಲ್ಲಿರುವ ಇಂದಿರಾ ಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಮಗನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಗನ ಹೃದಯ, ಕಣ್ಣುಗಳು ಮತ್ತು ಲಿವರ್(ಯಕೃತ್ತು) ಬೇರೆ ವ್ಯಕ್ತಿಗಳ ಜೀವನಕ್ಕೆ ಆಸರೆಯಾಗುತ್ತದೆ ಎಂದು ದಾನ ಮಾಡಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

    ಮೃತ ಪಟ್ಟ ಯುವಕನ ತಾಯಿ ಮಗನ ದೇಹವನ್ನು ದಾನ ಮಾಡಲು ಒಪ್ಪಿಕೊಂಡಿದ್ದು, ಆಕೆಯ ತೀರ್ಮಾನ ಇತರರಿಗೆ ಸ್ಫೂರ್ತಿಯಾಗಿದೆ. ದೇಹವನ್ನು ದಾನ ಮಾಡುವುದರಿಂದ ಮೂರು ವ್ಯಕ್ತಿಗಳಿಗೆ ಮರುಜನ್ಮ ನೀಡಿದಂತೆ ಆಗುತ್ತದೆ ಎಂದು ಆಸ್ಪತ್ರೆಯ ಅಧೀಕ್ಷಕ ಮನೀಶ್ ಮಂಡಲ್ ತಿಳಿಸಿದರು.

    ಮೃತಪಟ್ಟ ಯುವಕನ ಕಣ್ಣುಗಳನ್ನು ಇನ್ ಸ್ಟಿಟ್ಯೂಟ್ ನಲ್ಲೇ ಇರಿಸಲಾಗಿದೆ. ಹೃದಯವನ್ನು ಕೋಲ್ಕತ್ತಾಗೆ ಕಳುಹಿಸಲಾಗಿದ್ದು, ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಲಿವರ್ ಅನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಮಂಡಲ್ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv