Tag: parents

  • ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಆತ್ಮಹತ್ಯೆ

    ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಆತ್ಮಹತ್ಯೆ

    ಚೆನ್ನೈ: ಪೋಷಕರು ತನ್ನ ಪ್ರೀತಿಯನ್ನು ನಿರಾಕರಿಸಿದ್ದರೆಂದು ಮನನೊಂದು ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಗ್ರಾಮದ ಬಳಿ ನಡೆದಿದೆ.

    27 ವರ್ಷದ ವಿ ಸತೀಶ್ ಆತ್ಮಹತ್ಯೆಗೆ ಶರಣಾದ ಪೇದೆಯಾಗಿದ್ದು, ಈತ ನಕ್ಕಲಪಟ್ಟಿ ಗ್ರಾಮದ ನಿವಾಸಿಯಾಗಿದ್ದು ಊಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.

    ಎರಡು ವಾರಗಳ ಹಿಂದೆ ಸತೀಶ್ ರಜೆಯ ಮೇಲೆ ಊರಿಗೆ ಬಂದಿದ್ದನು. ಸತೀಶ್ ತನ್ನದೇ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಚಾರವನ್ನು ಇತ್ತೀಚೆಗಷ್ಟೇ ಸತೀಶ್ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದನು. ಅಲ್ಲದೇ ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಆದ್ರೆ ಹೆತ್ತವರು ಮಗನ ಪ್ರೀತಿಗೆ ಒಪ್ಪಿಗೆ ಸೂಚಿಸದೆ ಮದುವೆಯನ್ನು ನಿರಾಕರಿಸಿದ್ರು.

    ಇತ್ತ ಯುವತಿ ಮನೆಯವರು ಬೇಗ ಮದುವೆಯಾಗು ಇಲ್ಲವೆಂದಲ್ಲಿ ಮಗಳಿಗೆ ಬೇರೆ ವರ ಹುಡುಕುವುದಾಗಿ ಒತ್ತಾಯಿಸುತ್ತಿದ್ದರು. ಇದರಿಂದ ಗೊಂದಲಕ್ಕೀಡಾದ ಯುವಕ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಈತ ಏನೇ ಮಾಡಿದ್ರೂ ಪ್ರೀತಿಸುತ್ತಿರುವ ಯುವತಿ ಜೊತೆ ಮದುವೆ ಮಾಡಲು ಸತೀಶ್ ಪೋಷಕರು ಸುತಾರಾಂ ಒಪ್ಪಲಿಲ್ಲ. ಇದರಿಂದ ನೊಂದ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.

    ಮಂಗಳವಾರ ರಾತ್ರಿ ತನ್ನ ಕೋಣೆಯೊಳಗೆ ತೆರಳಿ ಸತೀಶ್ ಬಾಗಿಲು ಹಾಕಿಕೊಂಡಿದ್ದಾನೆ. ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡ ಮಗ ಹೊರಗೆ ಬಾರದೇ ಇದ್ದರಿಂದ ಆತಂಕಗೊಂಡ ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಸತೀಶ್ ಕರೆ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಪೋಷಕರು ಕೋಣೆಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಸತೀಶ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಉಸಿಲಂಪಟ್ಟಿ ಜಿಲ್ಲಾಸ್ಪತ್ರೆಗೆ ಸತೀಶ್ ಮೃತದೇಹವನ್ನು ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಗಾಂಧಿನಗರ: ಪ್ರೇಮಿಗಳ ದಿನದಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ.

    ಯುವಕ, ಯುವತಿಯರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಲಾಫ್ಟರ್ ಥೆರಪಿಸ್ಟ್ ಕಮಲೇಶ್ ಮಸಾಲಾವಾಲಾ ನಡೆಸುತ್ತಿರುವ ಹಾಸ್ಯಮೇವ ಜಯತೆ ಎಂಬ ಸ್ವಯಂಪ್ರೇರಿತ ಸಂಘಟನೆ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸೂರತ್‍ನ ಸುಮಾರು 15 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲಿ ತಾವು ಪ್ರೇಮ ವಿವಾಹವಾಗಲ್ಲ ಎಂದು ಪ್ರಮಾಣ ಮಾಡಲು ಮುಂದಾಗಿದ್ದು, ಸಂಸ್ಕಾರ ಭಾರತಿ, ಪ್ರೆಸಿಡೆನ್ಸಿ ಹೈಸ್ಕೂಲ್ ಸೇರಿ 15 ಶಾಲೆಗಳಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಮಾಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಾರ್ಯಕ್ರಮ ಆಯೋಜಕರು, “ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುತ್ತಾರೆ ಅಲ್ಲದೆ ತಾವು ಪ್ರೀತಿಸಿದವರನ್ನೇ ಮದುವೆಯಾಗುವ ದೃಢ ನಿರ್ಧಾರ ಮಾಡುತ್ತಾರೆ. ಆದರಲ್ಲಿ ಮನೆಬಿಟ್ಟು ಓಡಿ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮದುವೆಯಾದವರ ಸಂಬಂಧ ಬೇಗನೇ ಮುರಿದುಬೀಳುತ್ತವೆ. ಇಂತಹ ನಿರ್ಧಾರ ಮಾಡುವಾಗ ಪೋಷಕರ ಸಲಹೆ ಅವಶ್ಯಕ ಎಂಬ ಸಂದೇಶ ನೀಡಲು ಈ ಹೊಸ ಕಾರ್ಯಕ್ರಮವನ್ನು ನಡೆಸಲು ಹೊರಟಿದ್ದೇವೆ” ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಹ ಆಯೋಜಕರಾಗಿರುವ ಕವಿ ಮುಕುಲ್ ಛೋಕ್ಸಿ ಮಾತನಾಡಿ, “ಹಲವು ಯುವಕರು ಪೋಷಕರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗುತ್ತಾರೆ. ಯಾಕೆ ಪೋಷಕರು ತಮ್ಮ ಮಕ್ಕಳ ಪ್ರೀತಿಯನ್ನು ವಿರೋಧಿಸುತ್ತಾರೆ ಎಂದು ಯುವಕರಿಗೆ ತಿಳಿದಿರೋದಿಲ್ಲ. ಹೀಗಾಗಿ ಈ ರೀತಿ ಪ್ರಮಾಣ ಮಾಡಿದಾಗ ತಮ್ಮ ಪೋಷಕರ ಭಾವನೆಗಳಿಗೆ ಗೌರವ ಕೊಡಲು ಯುವಕರು ನಿರ್ಧಾರ ಮಾಡುತ್ತಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ನಮ್ಮ ಪೋಷಕರಿಗೋಸ್ಕರ ನಾವು ಈ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮಾಡಿರುವಷ್ಟು ತ್ಯಾಗ ಈ ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಹೀಗಾಗಿ ಅವರ ನಿರ್ಧಾರಗಳಿಗೆ ನಾವು ಗೌರವ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಠ ಮಾಡು ಅಂದ್ರೆ ಲವ್ ಮಾಡು ಅಂತಾನೆ – ಕೊಪ್ಪಳದಲ್ಲಿದ್ದಾನೆ ಕಾಮುಕ ಶಿಕ್ಷಕ

    ಪಾಠ ಮಾಡು ಅಂದ್ರೆ ಲವ್ ಮಾಡು ಅಂತಾನೆ – ಕೊಪ್ಪಳದಲ್ಲಿದ್ದಾನೆ ಕಾಮುಕ ಶಿಕ್ಷಕ

    ಕೊಪ್ಪಳ: ಇತ್ತೀಚೆಗೆ ವಿದ್ಯಾದೇಗುಲಗಳಲ್ಲಿ ಲೈಂಗಿಕ ಪ್ರಕರಣಗಳು ಹೆಚ್ಚಾಗ್ತಿವೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿನಿಗೆ ಪೀಡಿಸಿರುವ ಆರೋಪವೊಂದು ಕೇಳಿಬಂದಿದೆ.

    ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕ ಇಬ್ರಾಹಿಂಗೆ ಗ್ರಾಮಸ್ಥರೇ ಪಾಠ ಮಾಡಿದ್ದಾರೆ.

    ಶಿಕ್ಷಕನ ವಿರುದ್ಧ ಆರೋಪವೇನು?
    ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ಟಾಫ್ ರೂಮಿಗೆ ಕರೆದು ಪಪ್ಪಿ ಕೊಡು ನನ್ನ ಲವ್ ಮಾಡು ಎಂದು ಪೀಡಿಸಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಕಿರುಕುಳದಿಂದ ಬೇಸತ್ತು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ಈ ಬಗ್ಗೆ ಮನೆಯಲ್ಲಿ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕ ತನ್ನ ಜೊತೆ ತೋರಿದ ಅನುಚಿತ ವರ್ತನೆಯ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಆಗಮಿಸಿ ಇಂತಹ ಶಿಕ್ಷಕ ನಮ್ಮ ಶಾಲೆಗೆ ಬೇಡ ಕೂಡಲೇ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಈ ಬಗ್ಗೆ ಶಿಕ್ಷಕನನ್ನು ಕೇಳಿದ್ರೆ ನಾನೇನೂ ತಪ್ಪು ಮಾಡಿಲ್ಲ ಸಾರ್. ಬೇಕಿದ್ರೆ ಮಕ್ಕಳನ್ನೇ ಕೇಳಿ ಎಂದು ಹೇಳಿಕೊಳ್ಳುತ್ತಾನೆ. ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಿಕ್ಷಕ ಇಬ್ರಾಹಿಂ ಕಣ್ಣೀರು ಹಾಕಿದ್ದಾನೆ.

    ಗ್ರಾಮಸ್ಥರ ಒತ್ತಾಯದ ಮೆರೆಗೆ ಶಾಲೆಗೆ ಆಗಮಿಸಿದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಗ್ರಾಮಸ್ಥರ ದೂರನ್ನು ಕೇಳಿ, ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಮತ್ತು ವಿದ್ಯಾರ್ಥಿನಿಯ ಹೇಳಿಕೆಯನ್ನ ಸ್ವೀಕರಿಸಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಶಿಕ್ಷಕ ಇಬ್ರಾಹಿಂ ಇಂತಹ ಕೃತ್ಯವೆಸಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಕೂಡ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    ಕೊಪ್ಪಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ.

    ಶಾಲೆಯಲ್ಲಿ ಶಿಕ್ಷಕನಾಗಿರುವ ಇಬ್ರಾಹಿಂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಶಿಕ್ಷಕನ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ವಿಷಯ ತಿಳಿದ ಬಳಿಕ ಕೋಪಗೊಂಡ ಬಾಲಕಿಯ ಪೋಷಕರು ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಈ ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿದ್ದಾರೆ. ಹಾಗೆಯೇ ಮೊದಲು ಪ್ರಕರಣದ ತನಿಖೆ ನಡೆಸಲಾಗುತ್ತದೆ. ಬಳಿಕ ಶಿಕ್ಷಕನ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 204 ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ

    204 ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ

    ಕೊಪ್ಪಳ: ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವುದು ಸಾಮಾನ್ಯವಾಗಿದೆ. ಆದರೆ ಕೊಪ್ಪಳದ ಶಾಲೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳಿಗೆ ಪಾದಪೂಜೆ ಮಾಡುವ ಕಾರ್ಯಕ್ರಮ ಮಾಡಲಾಗುತ್ತದೆ.

    ಗಂಗಾವತಿ ತಾಲೂಕಿನ ಶ್ರಿರಾಮನಗರದ ವಿದ್ಯಾನಿಕೇತನ ಸಂಸ್ಥೆಯಲ್ಲಿ ಇಂತಹದೊಂದು ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯ ಒಟ್ಟು 204 ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ-ತಾಯಿಗಳಿಗೆ ಪಾದಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದುಕೊಂಡಿದ್ದಾರೆ. ಮೊದಲಿಗೆ ಪೋಷಕರ ಪಾದವನ್ನು ತೊಳೆದು ಅರಿಶಿಣ-ಕುಂಕುಮ, ಹೂ ಇಟ್ಟು, ಪೂಜೆ ಮಾಡಿದ್ದಾರೆ.

    ಇನ್ನೂ ತಂದೆ-ತಾಯಿಯಂದಿರು ಸಹ ತಮ್ಮ ಮಕ್ಕಳು ಮುಂದೆ ಉನ್ನತ ಮಟ್ಟದಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತರಲಿ ಎಂದು ಆಶೀರ್ವಾದಿಸಿದ್ದಾರೆ. ಸಂಸ್ಕೃತಿ ಹೆಸರು ಬಳಸಿಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ಅನೇಕ ಕಾರ್ಯಕ್ರಮಗಳಿಗೆ ಒತ್ತುಕೊಡುವ ಶಾಲೆಗಳ ನಡುವೆ ಈ ಶಾಲೆ ವಿಭಿನ್ನವಾಗಿ ಮಕ್ಕಳಲ್ಲಿ ತಂದೆ ತಾಯಿಯ ಬಗ್ಗೆ ಗೌರವ ಮೂಡಿಸುವಂತ ಕಾರ್ಯಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆನ್ನಿನ ಕ್ಯಾಪ್ ನುಂಗಿದ್ದ ಬಾಲಕ ಸಾವು- ವೈದ್ಯರ ನಿರ್ಲಕ್ಷ್ಯ ಎಂದು ಹೇಳಿ ಪೋಷಕರಿಂದ ಪ್ರತಿಭಟನೆ

    ಪೆನ್ನಿನ ಕ್ಯಾಪ್ ನುಂಗಿದ್ದ ಬಾಲಕ ಸಾವು- ವೈದ್ಯರ ನಿರ್ಲಕ್ಷ್ಯ ಎಂದು ಹೇಳಿ ಪೋಷಕರಿಂದ ಪ್ರತಿಭಟನೆ

    ಬಾಗಲಕೋಟೆ: ಪೆನ್ನಿನ ಕ್ಯಾಪ್ ನುಂಗಿದ್ದ ಬಾಲಕ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಶವವನ್ನು ಸಾಗಿಸದೇ ರಾತ್ರಿಯಿಡೀ ಪ್ರತಿಭಟನೆ ಮಾಡಿದ ಘಟನೆ ಬಾಗಲಕೋಟೆ ನಗರದ ಕುಮಾರೇಶ್ವರದಲ್ಲಿ ನಡೆದಿದೆ.

    ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ 9 ವರ್ಷದ ಬಾಲಕ ಮುತ್ತಪ್ಪ ಬಿರೋಜಿ ನಾಲ್ಕು ದಿನದ ಹಿಂದೆ ಪೆನ್ನಿನ ಕ್ಯಾಪ್ ನುಂಗಿದ್ದ. ಬಾಲಕನನ್ನು ವಿವಿಧ ಆಸ್ಪತ್ರೆಗೆ ತೋರಿಸಿ ಮಂಗಳವಾರ ಸಂಜೆ 5 ಗಂಟೆಗೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಪರೇಷನ್ ಮಾಡುವ ವೇಳೆ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಯವೇ ಕಾರಣ ಎಂದು ಆರೋಪಿಸುತ್ತಿರುವ ಕುಟುಂಬಸ್ಥರು, ಬಾಲಕನ ಮೃತದೇಹವನ್ನು ಮುಂದಿಟ್ಟು ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ವೈದ್ಯ ಸಿಎಸ್ ಹಿರೆಮಠ್ ಆಪರೇಷನ್ ಮಾಡುವ ವೇಳೆ ಬಾಲಕ ಸಾವನ್ನಪ್ಪಿದ್ದು ತಪ್ಪಿತಸ್ಥ ವೈದ್ಯನನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಬೇಕು, ಆತನಿಗೆ ಶಿಕ್ಷೆಯಾಗಬೇಕೆಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಬಾಗಲಕೋಟೆ ನಗರ ಠಾಣೆ ಪೊಲೀಸರು ಬಂದು ಸಮಾಧಾನ ಪಡಿಸಲು ಮುಂದಾದರೂ ಫಲ ನೀಡಲಿಲ್ಲ. ಇತ್ತ ಇದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡ ತಾಯಿ ಆಕ್ರಂದನ ಮುಗಿಲುಮುಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದುವೆಗಾಗಿ ಅಪ್ರಾಪ್ತೆಯ ಜನ್ಮ ದಿನಾಂಕ ತಿದ್ದಲು ಹೊರಟ ಪೋಷಕರು

    ಮದುವೆಗಾಗಿ ಅಪ್ರಾಪ್ತೆಯ ಜನ್ಮ ದಿನಾಂಕ ತಿದ್ದಲು ಹೊರಟ ಪೋಷಕರು

    – ನಿರಾಕರಿಸಿದ ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ

    ವಿಜಯಪುರ: ಅಪ್ರಾಪ್ತ ಬಾಲಕಿಯ ಜನ್ಮ ದಿನಾಂಕ ತಿದ್ದುಪಡಿಗೆ ನಿರಾಕರಿಸಿದ್ದಕ್ಕೆ ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಬಾಲಕಿ ಪೋಷಕರು ಹಲ್ಲೆ ಮಾಡಿರುವ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ.

    ರಾಜು ಮೇಲಿನಮನೆ ಎಂಬವರು ತಮ್ಮ ಮಗಳ ವಿವಾಹವನ್ನ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾಡಲು ಮುಂದಾಗಿದ್ದರು. ಆದ್ರೆ ಬಾಲಕಿ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಹಚ್ಯಾಳ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹುಸೇನಸಾಬ್‍ಗೆ ಆಕೆಯ ಜನ್ಮದಿನಾಂಕ ತಿದ್ದುಪಡಿ ಮಾಡಿಕೊಡಲು ಒತ್ತಾಯಿಸಿದ್ದಾರೆ. ಆಗ ಮುಖ್ಯೋಪಾಧ್ಯಾಯರು ಈ ಕೆಲಸ ಮಾಡಿಕೊಡಲು ನಿರಾಕರಿದ್ದರು.

    ಎಷ್ಟೇ ಒತ್ತಾಯಿಸಿದರು ಮುಖ್ಯೋಪಾಧ್ಯಾಯರು ಮಾತ್ರ ಜನ್ಮ ದಿನಾಂಕ ತಿದ್ದುಪಡಿ ಮಾಡಿಕೊಡಲ್ಲ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಾಲಕಿ ಪೋಷಕರು ಮುಖ್ಯೋಪಾಧ್ಯಾಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಸದ್ಯ ಮುಖ್ಯೋಪಾಧ್ಯಾಯ ಹುಸೇನಸಾಬ್ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರೀಕ್ಷೆ ಜೀವನದಲ್ಲಿ ಮಹತ್ವ, ಆದರೆ ಇದು ಜೀವನದ ಪರೀಕ್ಷೆಯಲ್ಲ – ಬೇರೆ ಮಕ್ಕಳ ಜೊತೆ ಹೋಲಿಸಬೇಡಿ: ಪೋಷಕರಿಗೆ ಮೋದಿ ಸಲಹೆ

    ಪರೀಕ್ಷೆ ಜೀವನದಲ್ಲಿ ಮಹತ್ವ, ಆದರೆ ಇದು ಜೀವನದ ಪರೀಕ್ಷೆಯಲ್ಲ – ಬೇರೆ ಮಕ್ಕಳ ಜೊತೆ ಹೋಲಿಸಬೇಡಿ: ಪೋಷಕರಿಗೆ ಮೋದಿ ಸಲಹೆ

    ನವದೆಹಲಿ: ಪರೀಕ್ಷೆ ಜೀವನದಲ್ಲಿ ಮಹತ್ವದಾಗಿದೆ. ಆದರೆ ಇದು ಜೀವನದ ಪರೀಕ್ಷೆಯಲ್ಲ. ಇದು ಕೇವಲ ಪಠ್ಯದ ಪರೀಕ್ಷೆ. ಹಾಗಾಗಿ ಮಕ್ಕಳು ಹೆಚ್ಚು ಒತ್ತಡಕ್ಕೆ ಸಿಲುಕಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಪೋಷಕರು ಮಕ್ಕಳನ್ನು ಸದಾ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೆಹಲಿಯ ತಾಲ್ ಕಠೋರಾ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ `ಪರೀಕ್ಷೆ ಪೇ ಚರ್ಚಾ 2.0′ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಮಾತನಾಡಿದರು. ಈ ವೇಳೆ ಪರೀಕ್ಷೆ ದೊಡ್ಡ ಸವಾಲು ಅಲ್ಲ. ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲು ಈ ಪರೀಕ್ಷೆಗಳು ನಮಗೆ ಸಹಾಯ ಮಾಡಲಿವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪರೀಕ್ಷಾ ಸಮಯದಲ್ಲಿ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರದೆ ಅವರಿಗೆ ಸಹಕರಿಸುವಂತೆ ಪೋಷಕರಿಗೆ ಪ್ರಧಾನಿ ಸಲಹೆ ನೀಡಿದರು.

    ಈ ವೇಳೆ ಪೋಷಕರು ಮಕ್ಕಳು ಈಗ ಜಾಸ್ತಿ ಮೊಬೈಲಿನಲ್ಲಿ ತಲ್ಲೀನರಾಗುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಮೋದಿ, ಇದು ಸಮಸ್ಯೆಯೂ ಹೌದು, ಪರಿಹಾರವೂ ಹೌದು. ತಂತ್ರಜ್ಞಾನವನ್ನು ಬಳಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಆದರೆ ಆ ತಂತ್ರಜ್ಞಾನದಿಂದ ಏನು ಉಪಯೋಗವಾಗುತ್ತದೆ ಎನ್ನುವುದನ್ನು ಅವರಿಗೆ ತಿಳಿಹೇಳಬೇಕು ಎಂದರು.

    ನಾವು ನಮ್ಮ ಮಕ್ಕಳು ತಂತ್ರಜ್ಞಾನದಿಂದ ದೂರವಿರಲು ಬಯಸುತ್ತೇವೆ. ಹಾಗೇನಾದರೂ ಆದಲ್ಲಿ ಒಂದರ್ಥದಲ್ಲಿ ಅವರು ಪ್ರಪಂಚದಿಂದಲೇ ಹಿಂದೆ ಸರಿದಂತೆ ಆಗುತ್ತದೆ. ಹಾಗಾಗಿ ತಂತ್ರಜ್ಞಾನವನ್ನು ಬಳಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಆದರೆ ಆ ತಂತ್ರಜ್ಞಾನದಿಂದ ಏನು ಉಪಯೋಗವಾಗುತ್ತದೆ ಎನ್ನುವುದನ್ನು ಅವರಿಗೆ ಅರ್ಥೈಸಬೇಕು ಎಂದು ಉತ್ತರಿಸಿದರು.

    ಪಾಲಕರು ಮಹತ್ವಾಕಾಂಕ್ಷಿಗಳಾಗಿದ್ದು ಅವರು ಹಾಕುವ ಒತ್ತಡದಿಂದ ಪರಿಸ್ಥಿತಿ ಬದಲಾಗುತ್ತದೆ. ಹೀಗಾಗಿ ಒತ್ತಡ ಹಾಕದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನುಪೋಷಕರು ಮಾಡಬೇಕು ಎಂದರು. ಮಕ್ಕಳನ್ನು ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ. ಅಂಕಪಟ್ಟಿಯನ್ನು ವಿಸಿಟಿಂಗ್ ಕಾರ್ಡ್ ನಂತೆ ನೋಡಬೇಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

    ನಾನು ದೇಶವನ್ನು ಕುಟುಂಬ ಎಂದು ಪರಿಗಣಿಸಿದ್ದು, ಕೆಲಸದ ವೇಳೆ ನಾನು ಸುಸ್ತಾಗುವುದಿಲ್ಲ. ಸರಿಯಾದ ಸಮಯ ನಿರ್ವಹಣೆಯ ಜೊತೆ ಪ್ರತಿದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತೇನೆ. ಸಮಯವಿಲ್ಲ ಎಂದು ಹೇಳುವವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ ಎಂದು ತಿಳಿಸಿದರು.

    ಕಳೆದ ವರ್ಷವೂ ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ನಡೆಸಿದ್ದರು. ಈ ವರ್ಷದ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ರಾಜ್ಯದ 30 ವಿದ್ಯಾರ್ಥಿಗಳ ಸೇರಿದಂತೆ ಒಟ್ಟು 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಷ್ಯಾ, ನೇಪಾಳ, ನೈಜೀರಿಯಾ ಹಾಗೂ ಸಿಂಗಾಪೂರದಲ್ಲಿ ಓದುತ್ತಿರುವವರೂ ಭಾಗಿಯಾಗಿದ್ದರು. ದೇಶಾದ್ಯಂತ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪೋಷಕರ ಜೊತೆಯಿದ್ದಾಗಲೇ ಹೆಣ್ಣು ಮಗು ನಾಪತ್ತೆ

    ಪೋಷಕರ ಜೊತೆಯಿದ್ದಾಗಲೇ ಹೆಣ್ಣು ಮಗು ನಾಪತ್ತೆ

    ಮೈಸೂರು: ಪೋಷಕರ ಜೊತೆ ಇದ್ದ ಮಗು ನಾಪತ್ತೆ ಆಗಿರುವ ಪ್ರಕರಣ ಮೈಸೂರಿನ ಹುಣಸೂರು ಬಸ್ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶ್ರೇಯಾ(3) ನಾಪತ್ತೆಯಾದ ಮಗು. ಈಕೆ ಸುರೇಶ್ ಹಾಗೂ ನೀಲಕಲಾ ದಂಪತಿಯ ಮಗಳು. ಸುರೇಶ್ ಹಾಗೂ ನೀಲಕಲಾ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದು, ಸೋಮವಾರ ಮಧ್ಯಾಹ್ನ ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದಲ್ಲಿ ಹೆಣ್ಣು ಮಗು ನಾಪತ್ತೆ ಆಗಿದೆ.

    ಕೊಪ್ಪದಿಂದ ಮೈಸೂರಿನ ಹೂಟಗಳ್ಳಿಗೆ ಹೋಗುವ ವೇಳೆ ಈ ಘಟನೆ ನಡೆದಿದೆ. ಸುರೇಶ್ ಹಾಗೂ ನೀಲಕಲಾ ಮೂವರು ಮಕ್ಕಳ ಜೊತೆ ಹೋಗುತ್ತಿದ್ದರು. ಹುಣಸೂರು ಬಸ್ ನಿಲ್ದಾಣದಿಂದ ಪೋಷಕರಿಗೆ ಗೊತ್ತಾಗದಂತೆ ಯಾರೋ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗುತ್ತಿದೆ.

    ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ಅಪ್ಪ-ಅಮ್ಮನಿಗೆ ಚಿತ್ರಹಿಂಸೆ

    ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ಅಪ್ಪ-ಅಮ್ಮನಿಗೆ ಚಿತ್ರಹಿಂಸೆ

    ಮಂಡ್ಯ: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ಆತನ ತಂದೆ-ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದು, ರಕ್ಷಣೆಗಾಗಿ ಯುವಕನ ತಂದೆ-ತಾಯಿ ಮನವಿ ಮಾಡುತ್ತಿರುವ ಘಟನೆ ಮಂಡ್ಯದ ಹಾಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.

    ಕೃಷ್ಣೇಗೌಡ ಹಾಗೂ ವಸಂತ ದಂಪತಿಯ ಪುತ್ರ ನಿರಂಜನ್ ಗೌಡ ಹಾಲಹಳ್ಳಿ ಬಡಾವಣೆಯಲ್ಲೇ ವಾಸವಿದ್ದ ಚಾಂದುಶ್ರೀ ಎಂಬ ಯುವತಿಯನ್ನು ಪ್ರೀತಿಸಿದ್ದನು. ನಿರಂಜನ್‍ಗೌಡ ಎಂಬಿಎ ಮುಗಿಸಿದ್ದು, ಚಾಂದುಶ್ರೀ ಎಂಟೆಕ್ ವ್ಯಾಸಂಗ ಮಾಡಿದ್ದಾರೆ. ನಿರಂಜನ್ ಹಾಗೂ ಚಾಂದುಶ್ರೀ ಕಳೆದ 9 ವರ್ಷದಿಂದ ಪ್ರೀತಿಸುತ್ತಿದ್ದರು. ಚಾಂದುಶ್ರೀ ಸರ್ಕಾರಿ ವಕೀಲರೊಬ್ಬರ ಮಗಳಾಗಿದ್ದು, ಯುವ ಜೋಡಿಗಳಿಬ್ಬರು ಒಂದೇ ಜಾತಿಯವರಾಗಿದ್ದರೂ ಯುವತಿಯ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

    ನಿರಂಜನ್ ಹಾಗೂ ಚಾಂದುಶ್ರೀ 9 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬಳಿಕ ಜನವರಿ 21ರಂದು ಯುವಜೋಡಿಗಳಿಬ್ಬರು ನಾಪತ್ತೆಯಾಗಿದ್ದರು. ಜನವರಿ 24ರಂದು ಇಬ್ಬರು ಅಜ್ಞಾತ ಸ್ಥಳದಲ್ಲಿ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟಿದ್ದರು. ಆಗ ಚಾಂದುಶ್ರೀ ಕುಟುಂಬಸ್ಥರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಿರಂಜನ್ ಪೋಷಕರಿಗೆ ಮಾನಸಿಕ ಕಿರುಕುಳ ನೀಡಿದಲ್ಲದೇ ಮೊಬೈಲ್ ಒಡೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ರೌಡಿಗಳಿಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂದು ನಿರಂಜನ್ ಪೋಷಕರು ಆರೋಪಿಸುತ್ತಿದ್ದಾರೆ. ಇದರಿಂದ ಮನನೊಂದ ದಂಪತಿ ಪೊಲೀಸರು ಮಾಡಿದ ಅವಮಾನಕ್ಕೆ ಒಂದು ವಾರ ಮನೆಗೆ ಹೋಗಿಲ್ಲ. ನಮ್ಮ ಕಷ್ಟ ಹೇಳಿಕೊಳ್ಳಲು ಎಸ್‍ಪಿ ಅವರ ಬಳಿ ಬಂದಿದ್ದೇವೆ. ಎಸ್‍ಪಿ ಆಫೀಸಲ್ಲೇ ಸತ್ತರೂ ಚಿಂತೆಯಿಲ್ಲ. ನಮಗೆ ಕಿರುಕುಳ ಮಾತ್ರ ಕೊಡಬೇಡಿ. ಜೀವ ಭಯ ಇದೆ, ರಕ್ಷಣೆ ಕೊಡಿ ಎಂದು ನಿರಂಜನ್ ಪೋಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪ್ರೀತಿಸಿ ಮದುವೆಯಾದವರು ಇಬ್ಬರು ವಯಸ್ಕರು. ನನ್ನ ಮಗನಿಗೂ ಓಡಿ ಹೋಗಿ ಮದುವೆ ಆಗಬೇಡ ಎಂದು ಹೇಳಿದ್ದೆ. ಆದರೆ ಅವರು ಓಡಿ ಹೋಗಿ ಮದುವೆಯಾದರೆ ನಾವೇನು ಮಾಡಲು ಸಾಧ್ಯ. ದಯವಿಟ್ಟು ನಮಗೆ ರಕ್ಷಣೆ ಕೊಡಿ ಎಂದು ನಿರಂಜನ್ ಪೋಷಕರು ಅಂಗಲಾಚುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv