Tag: parents

  • ಮದ್ಯದ ವಾಸನೆ ಮೂಗಿಗೆ ಬಡಿದದ್ದೇ ತಡ, ಮಂಟಪದಲ್ಲೇ ವರ ಬೇಡ ಎಂದ ವಧು!

    ಮದ್ಯದ ವಾಸನೆ ಮೂಗಿಗೆ ಬಡಿದದ್ದೇ ತಡ, ಮಂಟಪದಲ್ಲೇ ವರ ಬೇಡ ಎಂದ ವಧು!

    ಭುವನೇಶ್ವರ: ವರ ಮದ್ಯಪಾನ ಮಾಡಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆ ಒಡಿಶಾದ ಜಾಜ್‍ಪುರದಲ್ಲಿ ನಡೆದಿದೆ.

    ಒಡಿಶಾದ ಸ್ವ-ಸಹಾಯ ಗುಂಪಿನ ಕಾರ್ಯಕರ್ತೆ ಸಂಗಮಿತ್ರ ಸೇಥಿ ಈ ದಿಟ್ಟ ನಿರ್ಧಾರ ಕೈಗೊಂಡ ವಧು. ಇವರು ಮದ್ಯಪಾನ ವಿರೋಧಿ ಹೋರಾಟಗಾರ್ತಿಯಾಗಿದ್ದು, ಸುತ್ತಮುತ್ತ ಇರುವ ಹಲವಾರು ಹಳ್ಳಿಗಳಲ್ಲಿ ಮದ್ಯಪಾನ ಅಗಂಡಿ ಮುಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಸಂಗಮಿತ್ರ ಸೇಥಿ ಮತ್ತು ಆದಿಬಂದು ಸೇಥಿ ಎಂಬುವವರ ಜೊತೆ ಮದುವೆ ನಿಶ್ಚಯವಾಗಿತ್ತು. ಭರ್ಜರಿಯಾಗಿ ಮದುವೆ ಕಾರ್ಯಕ್ರಮ ನಡೆಯುತಿತ್ತು. ಮಂಟಪದಲ್ಲಿ ಸಂಗಮಿತ್ರ ಕುಳಿತ್ತಿದ್ದಾಗ ವರ ಮದ್ಯಪಾನ ಮಾಡಿ ಬಂದಿದ್ದ. ಮದ್ಯಪಾನದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಸಂಗಮಿತ್ರ ಕೂಡಲೇ ಎದ್ದು ನಿಂತು ಮದುವೆ ಬೇಡ ಎಂದು ಹೇಳಿ ಮದುವೆ ಮನೆಯಿಂದಲೇ ಹೊರಟು ಹೋಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ವಧು ಸಂಗಮಿತ್ರ ಸೇಥಿ ಅವರು, ಕಳೆದ ಎರಡು ವರ್ಷಗಳಲ್ಲಿ ನಾನು ಹೋರಾಟ ಮಾಡಿ ಹಲವಾರು ಮದ್ಯಪಾನದ ಅಂಗಡಿಯನ್ನು ಮುಚ್ಚಿಸಿದ್ದೇನೆ. ಈಗ ನಾನು ಮದ್ಯಪಾನ ಮಾಡುವ ವ್ಯಕ್ತಿಯನ್ನು ಮದುವೆ ಆಗುವುದು ಎಷ್ಟು ಸರಿ? ಈ ವ್ಯಕ್ತಿಗೆ ನನ್ನನ್ನು ಮದುವೆ ಆಗುವ ಅರ್ಹತೆ ಇಲ್ಲ ಎಂದು ಖಡಕ್ ಮಾತನ್ನು ಆಡಿದ್ದಾಳೆ.

    ಎರಡು ಮನೆಯ ಪೋಷಕರು ವಧು ಸಂಗಮಿತ್ರ ಸೇಥಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಸಂಗಮಿತ್ರ ಅವರು ಒಪ್ಪಿಗೆ ನೀಡಲಿಲ್ಲ. ಈ ಕಾರಣಕ್ಕೆ ಕೋಪಗೊಂಡ ವರನ ತಂದೆ ಮದುವೆಗೆಂದು ನೀಡಿದ್ದ 71 ಸಾವಿರ ಬೆಲೆ ಬಾಳುವ ಚಿನ್ನದ ಸರ ಮತ್ತು ಉಂಗುರವನ್ನು ವಾಪಸ್ ನೀಡುವಂತೆ ಹೇಳಿದ್ದಾರೆ.

  • ಹುಡ್ಗಿಗಾಗಿ ಮೂವರು ಯುವಕರು ದುಂಬಾಲು – ಪ್ರೀತಿಗಾಗಿ ಆಕೆಯ ಪೋಷಕರ ಕೊಲೆಗೆ ಸ್ಕೆಚ್

    ಹುಡ್ಗಿಗಾಗಿ ಮೂವರು ಯುವಕರು ದುಂಬಾಲು – ಪ್ರೀತಿಗಾಗಿ ಆಕೆಯ ಪೋಷಕರ ಕೊಲೆಗೆ ಸ್ಕೆಚ್

    ಬೆಂಗಳೂರು: ಪ್ರೀತಿಸಿದ ಯುವತಿಗಾಗಿ ಮೂವರು ಯುವಕರು ಆಕೆಯ ಪೋಷಕರನ್ನು ಕೊಲ್ಲಲು ಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನೆಲಮಂಗಲ ಸಮೀಪದ ಕಾಚನಹಳ್ಳಿಯಲ್ಲಿ ನಡೆದಿದೆ.

    ಗಂಗನರಸಮ್ಮ ಮತ್ತು ಮಂಜುನಾಥ್ ಗಾಯಗೊಂಡ ಯುವತಿಯ ಪೋಷಕರು. ಇವರ ಕೊಲೆಗೆ ಕಾಚನಹಳ್ಳಿ ಗ್ರಾಮದ ನಿವಾಸಿಗಳಾದ ನಾಗೇಶ, ನರಸಿಂಹಮೂರ್ತಿ ಮತ್ತು ನಾಗೇಂದ್ರ ಈ ಮೂವರು ಯುವಕರು ಯತ್ನಿಸಿದ್ದಾರೆ.

    ಮೂವರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೆ ಯುವತಿಯನ್ನು ಓಲೈಸಿಕೊಳ್ಳಲು ಅಡ್ಡಿಯಾದ ಆಕೆಯ ಪೋಷಕರ ಕೊಲೆಗೆ ಸಂಚು ರೂಪಿಸಿದ್ದರು. ಯುವತಿ ಹಾಗೂ ಆಕೆಯ ಪೋಷಕರಾದ ಗಂಗನರಸಮ್ಮ ಮತ್ತು ಮಂಜುನಾಥ್ ಮೇಲೆ ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಮೂವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಯ ಬಳಿಕ ಪುಂಡ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹುಡುಗಿಗಾಗಿ ಕೊಲೆ ಮಾಡಲು ಮುಂದಾದ ಯುವಕರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕೆಂದು ನೊಂದ ಪೋಷಕರು ಒತ್ತಾಯಿಸಿದ್ದಾರೆ.

    ಯುವಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಂದಿನಿಂದ ಆರಂಭವಾಗಲಿದೆ ಪಬ್ಲಿಕ್ ಟಿವಿಯ ವಿದ್ಯಾಪೀಠ ಶಿಕ್ಷಣ ಮೇಳ

    ಇಂದಿನಿಂದ ಆರಂಭವಾಗಲಿದೆ ಪಬ್ಲಿಕ್ ಟಿವಿಯ ವಿದ್ಯಾಪೀಠ ಶಿಕ್ಷಣ ಮೇಳ

    – ಅರಮನೆ ಮೈದಾನದಲ್ಲಿ 3 ದಿನ ಎಜುಕೇಷನ್ ಫೆಸ್ಟ್ 
    – ಪೋಷಕರೇ, ಮಕ್ಕಳೇ ಬನ್ನಿ ಪಾಲ್ಗೊಳ್ಳಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕಾಲೇಜಿನಲ್ಲಿ ಶುಲ್ಕ ಎಷ್ಟಿರುತ್ತದೆ? ಇತ್ಯಾದಿ ಗೊಂದಲ ಪೋಷಕರಿಗೆ ಇದ್ದೆ ಇರುತ್ತದೆ. ಈ ಗೊಂದಲ ನಿವಾರಣೆಗಾಗಿ ನಿಮ್ಮ ಪಬ್ಲಿಕ್ ಟಿವಿ ಬೃಹತ್ ಶೈಕ್ಷಣಿಕ ಮೇಳವನ್ನು ಆಯೋಜನೆ ಮಾಡಿದೆ.

    ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷ ವಾಕ್ಯವನ್ನು ಹೊಂದಿರುವ ವಿದ್ಯಾಪೀಠ ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂದಿನಿಂದ  ಆರಂಭವಾಗಲಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿದೆ.

    ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿ ಪರ ಕೋರ್ಸ್ ಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ ಸಿಗಲಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಲ್ಲದೇ, ಕಾಮರ್ಸ್, ಮ್ಯಾನೇಜ್‍ಮೆಂಟ್, ಅನಿಮೇಷನ್, ಮಾಧ್ಯಮ ಲೋಕಕ್ಕೆ ಬರುವ ವಿದ್ಯಾರ್ಥಿಗಳಿಗೂ ಮಾಹಿತಿ ಸಿಗುತ್ತೆ.

    ಸಿಇಟಿ, ನೀಟ್ ಮತ್ತು ಔದ್ಯೋಗಿಕ ಕೋರ್ಸ್ ಗಳ ಬಗ್ಗೆ ಮಾಹಿತಿ ಸಿಗಲಿದ್ದು, 60ಕ್ಕೂ ಹೆಚ್ಚು ಪ್ರಖ್ಯಾತಿ ಪಡೆದಿರುವ ಕಾಲೇಜ್‍ಗಳು ಭಾಗವಹಿಸಲಿವೆ. ನುರಿತ ಶಿಕ್ಷಣ ತಜ್ಞರು, ಆರ್ಥಿಕ ಸಲಹೆಗಾರರು ಮಾಹಿತಿ ನೀಡಲಿದ್ದಾರೆ.

    ಯಾರೆಲ್ಲ ಭಾಗವಹಿಸುತ್ತಾರೆ?
    ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್
    ಆರ್ಕಿಟೆಕ್ಚರ್
    ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು
    ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು
    ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್
    ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
    ಸಮೂಹ ಸಂವಹನ
    ಎಂಬಿಎ ಇನ್‍ಸ್ಟಿಟ್ಯೂಷನ್
    ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು

    ಯಾರೆಲ್ಲ ಆಗಮಿಸಬಹುದು?
    ಕೌನ್ಸೆಲರ್ ಗಳು
    ಶಿಕ್ಷಣ ತಜ್ಞರು
    ಹಣಕಾಸು ಸಲಹೆಗಾರರು
    ಪೋಷಕರು
    ಪಿಯುಸಿ ವಿದ್ಯಾರ್ಥಿಗಳು
    ಪದವಿ ಓದುತ್ತಿರುವ ವಿದ್ಯರ್ಥಿಗಳು
    ಉದ್ಯೋಗದಲ್ಲಿರುವ ಉದ್ಯೋಗಿಗಳು

    ಸ್ಪರ್ಧೆಯ ಸಮಯ:
    ಇಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಚರ್ಚಾ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ. ಶನಿವಾರ ಮಧ್ಯಾಹ್ನ 2 ರಿಂದ 3:30ರವರೆಗೆ ಪೇಟಿಂಗ್ ಸ್ಪರ್ಧೆ ನಡೆಯಲಿದೆ. ಈ ಅವಧಿಯಲ್ಲೇ ಕ್ವಿಜ್ ಲಿಖಿತ ಪರೀಕ್ಷೆ ಸಹ ನಡೆಯಲಿದೆ. ಶನಿವಾರವೇ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಮಧ್ಯಾಹ್ನ 3:30 ರಿಂದ 5 ಗಂಟೆಯವರೆಗೆ ನಡೆಯಲಿದೆ. ಭಾನುವಾರ ಮಧ್ಯಾಹ್ನ 2:30 ರಿಂದ 3:30ರವರೆಗೆ ಕ್ವಿಜ್ ಫೈನಲ್ ನಡೆಯಲಿದ್ದು, 3:30 ರಿಂದ 4:30ರವರೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ನೇಳೆ ಮತ್ತು ನಾಡಿದ್ದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಲಿದ್ದಾರೆ.

    ದಿನಾಂಕ : ಮೇ 10, 11, 12
    ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
    ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ

  • ಉತ್ತರ ಪ್ರದೇಶದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಪಾಕ್ ಜೈಲಿನಲ್ಲಿ ಪತ್ತೆ!

    ಉತ್ತರ ಪ್ರದೇಶದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಪಾಕ್ ಜೈಲಿನಲ್ಲಿ ಪತ್ತೆ!

    ಶ್ರೀನಗರ: ಕಳೆದ 5 ತಿಂಗಳ ಹಿಂದೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾಣೆಯಾಗಿದ್ದ ಕಾಶ್ಮೀರ ಮೂಲದ ಯುವಕ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಉತ್ತರಪ್ರದೇಶದ ನೋಯ್ಡಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸೈಯದ್ ವಾಹಿದ್(23) ಡಿ. 12ರಂದು ವಿವಿಯಿಂದಲೇ ಕಾಣೆಯಾಗಿದ್ದನು. ಆದರೆ ಕಾಣೆಯಾಗಿದ್ದ ವಿದ್ಯಾರ್ಥಿ ಎಲ್ಲಿದ್ದಾನೆ? ಕಾಣೆಯಾಗಲು ಕಾರಣವೇನು? ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ ಇತ್ತ ಮಗನನ್ನು ಕಾಣದೆ ಹೆತ್ತವರು ಕಂಗಾಲಾಗಿದ್ದರು. ಇದೀಗ ವಿದ್ಯಾರ್ಥಿ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ದೊರಕಿದೆ ಎಂದು ಸ್ವತಃ ಪೋಷಕರೇ ಸೋಮವಾರದಂದು ಪೊಲೀಸರಿಗೆ ತಿಳಿಸಿದ್ದಾರೆ.

    ವಿದ್ಯಾರ್ಥಿಯ ಪೋಷಕರಿಗೆ ಪಾಕಿಸ್ತಾನದಿಂದ ಫೋನ್ ಕರೆಯೊಂದು ಬಂದಿದ್ದು, ಅವರ ಮಗ ಪಾಕ್ ಜೈಲಿನಲ್ಲಿದ್ದಾನೆ ಎಂದು ಮಾಹಿತಿ ನೀಡಲಾಗಿದೆ. ಈಗಾಗಲೇ ವಿದ್ಯಾರ್ಥಿ ಕಣ್ಮರೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಈಗ ವಿದ್ಯಾರ್ಥಿ ಪಾಕ್ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ದೊರಕಿರುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ತುಮಕೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳು ಕನ್ನಡ ಭಾಷೆಯಲ್ಲೇ ಅನುತ್ತೀರ್ಣವಾದ ಪ್ರಕರಣ ಬೆಳಕಿಗೆ ಬಂದಿದೆ.

    ಜಿಲ್ಲೆಯ ಪಾವಗಡ ಪಟ್ಟಣದ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ವೀಣಾಬಾಯಿ ಕಲಾ ವಿಭಾಗದ ಉಳಿದ ಎಲ್ಲಾ ವಿಷಯಗಳಲ್ಲಿ 90 ಅಂಕ ಪಡೆದಿದ್ದಾಳೆ. ಆದರೆ ಕನ್ನಡದಲ್ಲಿ ಮಾತ್ರ ಕೇವಲ 10 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಕಂಗಾಲಾದ ವೀಣಾಬಾಯಿ, ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡಿದ್ದಾಳೆ. ಆಗ ಮೌಲ್ಯಮಾಪಕರ ಎಡವಟ್ಟು ಬಹಿರಂಗವಾಗಿದೆ.

    ಅಸಲಿಗೆ ವೀಣಾಬಾಯಿಗೆ 79 ಅಂಕ ಬಂದಿದೆ. ಉತ್ತರ ಪತ್ರಿಕೆಯಲ್ಲಿ ಅದು ಸರಿಯಾಗಿಯೇ ನಮೂದಾಗಿದೆ. ಆದರೆ ಮೌಲ್ಯ ಮಾಪಕ ಮಹಾಶಯ ರಿಸಲ್ಟ್ ಶೀಟಲ್ಲಿ ಮಾತ್ರ ಕೇವಲ 10 ಅಂಕವನಷ್ಟೇ ನಮೂದಿಸಿದ್ದಾನೆ.

    ಇದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಆರ್.ರವಿ, ಕನ್ನಡ ವಿಷಯದಲ್ಲಿ ಇದೇ ರೀತಿ ಎಡವಟ್ಟಾಗಿ 15 ಅಂಕ ಕಡಿಮೆ ಬಂದಿದೆ. ಒಂದು ಫೋಟೋ ಪ್ರತಿ ತರಿಸಲು 530 ಕಟ್ಟಬೇಕಾಗುತ್ತದೆ. ಬಡ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವುದೇ ಕಷ್ಟ ಅಂತಹ ಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯವರು ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ಮತ್ತೆ ಬೆಲೆ ತೆರಬೇಕೇ ಅನ್ನೋದು ಪೋಷಕರ ಪ್ರಶ್ನೆಯಾಗಿದೆ.

  • ಪ್ರೀತಿಸಿ ಮದ್ವೆಯಾಗಿ ಪೊಲೀಸರ ಮೊರೆ ಹೋದ ಪ್ರೇಮಿಗಳು!

    ಪ್ರೀತಿಸಿ ಮದ್ವೆಯಾಗಿ ಪೊಲೀಸರ ಮೊರೆ ಹೋದ ಪ್ರೇಮಿಗಳು!

    ಬಳ್ಳಾರಿ: ಪೋಷಕರ ವಿರೋಧದ ನಡೆವೆಯೂ ಮದುವೆಯಾದ ಪ್ರೇಮಿಗಳು ಈಗ ರಕ್ಷಣೆ ಕೋರಿ ಬಳ್ಳಾರಿ ಪೊಲೀಸರ ಮೊರೆ ಹೋಗಿದ್ದಾರೆ.

    ಉಮೇಶ್ ಹಾಗೂ ದಿವ್ಯಶ್ರೀ (ಹೆಸರು ಬದಲಾಯಿಸಲಾಗಿದೆ) ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಬಳ್ಳಾರಿಯ ಮಿಲ್ಲರಪೇಟೆ ನಿವಾಸಿಯಾಗಿರುವ ಉಮೇಶ್, ಚಳ್ಳಕೆರೆ ಮೂಲದ ದಿವ್ಯಶ್ರೀಯನ್ನ ಮದುವೆಯಾಗಿದ್ದು, ಇದೀಗ ಪೋಷಕರ ವಿರೋಧ ಎದುರಿಸುತ್ತಿದ್ದಾರೆ. 9 ತಿಂಗಳ ಹಿಂದೆ ಬ್ಯಾಂಕಿಂಗ್ ಕೋಚಿಂಗ್‍ಗೆ ಆಗಮಿಸಿದ್ದ ದಿವ್ಯಶ್ರೀ ನೋಡಿ ಮನಸೋತಿದ್ದ ಉಮೇಶ್, ಆಕೆಯನ್ನು ಮನಸಾರೆ ಒಪ್ಪಿ ಪ್ರೀತಿ ಮಾಡಿದ್ದನು.

    ಇವರಿಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೂ ಕಳೆದ ಏಪ್ರಿಲ್ 27ರಂದು ಇಬ್ಬರೂ ಒಪ್ಪಿ ಬಳ್ಳಾರಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ನಂತರವೂ ಸಹ ದಿವ್ಯಶ್ರೀಯವರ ಪೋಷಕರು ಕೆಲ ರಾಜಕೀಯ ಮುಖಂಡರ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ದಂಪತಿ ಆರೋಪಿಸುತ್ತಿದ್ದಾರೆ.

    ದಿವ್ಯಶ್ರೀ ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಬಲಿಜ ಸಮಾಜಕ್ಕೆ ಸೇರಿರುವ ಉಮೇಶ್ ಜಾತಿ ನೋಡದೇ ಆಕೆಯನ್ನು ಮದುವೆಯಾಗಿದ್ದಾರೆ. ಆದರೆ ದಿವ್ಯಶ್ರೀ ಪೋಷಕರು ಕೆಲ ರಾಜಕೀಯ ಮುಖಂಡರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಇದೀಗ ರಕ್ಷಣೆ ಕೋರಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಪ್ರೇಮಿಗಳಿಬ್ಬರಿಂದ ಮಾಹಿತಿ ಪಡೆದಿರುವ ಎಸ್‍ಪಿ ನಿಂಬರಗಿ ಸಹ ಪ್ರೇಮಿಗಳಿಗೆ ಮಹಿಳಾ ಪೊಲೀಸ್ ಠಾಣೆಯ ಮೂಲಕ ರಕ್ಷಣೆ ಕೊಡಿಸುವ ಭರವಸೆ ನೀಡಿದ್ದಾರೆ.

  • ಹುಟ್ಟಿದ ಮರುಕ್ಷಣವೇ ಅನಾಥವಾಯ್ತು ಹೆಣ್ಣು ಮಗು – ಸಿಲಿಕಾನ್ ಸಿಟಿಯಲ್ಲೊಂದು ಮನಮಿಡಿಯುವ ಕಥೆ

    ಹುಟ್ಟಿದ ಮರುಕ್ಷಣವೇ ಅನಾಥವಾಯ್ತು ಹೆಣ್ಣು ಮಗು – ಸಿಲಿಕಾನ್ ಸಿಟಿಯಲ್ಲೊಂದು ಮನಮಿಡಿಯುವ ಕಥೆ

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮರಳು ರಾಶಿಯ ಮೇಲೆ ಹೆಣ್ಣು ಶಿಶುವೊಂದನ್ನು ಪಾಪಿ ತಾಯಿ ಅನಾಥವಾಗಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರದ 25ನೇ ಕ್ರಾಸ್‍ನಲ್ಲಿ ನಡೆದಿದೆ.

    ಇಂದು ಬೆಳ್ಳಂಬೆಳಗ್ಗೆ ಮಗು ಆಳುವ ಧ್ವನಿ ಕೇಳಿದ ಸ್ಥಳೀಯರು, ನಿರ್ಮಾಣ ಹಂತದ ಕಟ್ಟದ ಬಳಿ ಬಂದಿದ್ದಾರೆ. ಈ ವೇಳೆ ಮರಳಿನ ರಾಶಿ ಮೇಲೆ ಮಗು ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ಕೆಲವೇ ಗಂಟೆಗಳ ಹಿಂದೆಯಷ್ಟೇ ಜನಿಸಿದ್ದ ಮಗುವನ್ನು ಬಿಟ್ಟು ಹೋದ ಆ ಪಾಪಿ ತಾಯಿಯನ್ನು ನೆನೆದು ಶಾಪ ಹಾಕಿದ್ದಾರೆ.

    ಬಳಿಕ ಮಗು ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಯನ್ನು ಸ್ಥಳಿಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಡರಾತ್ರಿ 12 ಗಂಟೆಯ ವೇಳೆಗೆ ಬೈಕ್ ಒಂದರಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಮಗುವನ್ನು ಎತ್ತಿಕೊಂಡು ಬಂದು ಕಟ್ಟಡದ ಬಳಿ  ಮರಳಿನ ರಾಶಿ ಮೇಲೆ ಮಲಗಿಸಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಹಶಃ ಹೆಣ್ಣು ಮಗು ಎನ್ನುವ ಕಾರಣಕ್ಕೆ ಈ ರೀತಿ ಬಿಟ್ಟು ಹೋಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಕೆಪಿ ಅಗ್ರಹಾರ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆ ಪಾಪಿ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ನಡುವೆ ಇನ್ನೊಂದು ಸಂತಸದ ವಿಚಾರ ಅಂದರೆ, ಹೆಣ್ಣು ಮಗು ಎನ್ನುವ ಕಾರಣಕ್ಕೆ ಬಿಟ್ಟು ಹೋಗಿರುವ ಈ ಮಗುವನ್ನು ಸಾಕಲು ನಾ ಮುಂದು ತಾ ಮುಂದು ಅಂತ ಜನರು ಮುಗಿಬೀಳುತ್ತಿದ್ದಾರೆ.

  • ಪರಪುರುಷನ ಜೊತೆ ಇದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ

    ಪರಪುರುಷನ ಜೊತೆ ಇದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ

    ಹಾಸನ: ಪತಿಯನ್ನು ದೂರ ಮಾಡಿರುವ ವಿವಾಹಿತ ಮಹಿಳೆಯೊಬ್ಬಳು ಪರಪುರುಷನ ಜೊತೆ ಸಿಕ್ಕಿಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಹೊರವಲಯದ ಬಡಾವಣೆಯ ಬಿಟಿ ಕೊಪ್ಪಲುನಲ್ಲಿ ಈ ವಿಲಕ್ಷಣ ಕೃತ್ಯ ನಡೆದಿದೆ. ಉದಯಗಿರಿ ನಿವಾಸಿ ಆಗಿರುವ ರಾಘವೇಂದ್ರ ಮತ್ತು ಕಾಟಿಕೊಪ್ಪಲು ನಿವಾಸಿ ಗಜಲಕ್ಷ್ಮಿ ನಡುವೆ ಹಿರಿಯರೇ ನಿಂತು 8 ವರ್ಷದ ಹಿಂದೆ ಮದುವೆ ಮಾಡಿಸಿದ್ದರು. ಇವರಿಬ್ಬರ ದಾಂಪತ್ಯ ಸಾಕ್ಷಿಯಾಗಿ ಆರು ವರ್ಷ ವಯಸ್ಸಿನ ಮಗುವೊಂದು ಇದೆ.

    ಕಳೆದ ಐದಾರು ವರ್ಷದಿಂದ ಗಂಡನೊಂದಿಗೆ ವಾಸವಿಲ್ಲದ ಗಜಲಕ್ಷ್ಮಿ ಪ್ರತ್ಯೇಕವಾಗಿ ವಾಸವಿದ್ದಾಳೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಈಕೆಗೆ ಪರಪುರುಷನೊಬ್ಬನ ಜೊತೆ ಸಲುಗೆ ಬೆಳೆದಿದೆ. ನೊಂದ ಪತಿ ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಆಗ ಆಕೆ ಪೋಷಕರು ಹಲವು ಬಾರಿ ರಾಜಿ ಪಂಚಾಯ್ತಿ ನಡೆಸಿದರೂ ಸಹ ಪ್ರಯೋಜನ ಆಗದೇ ಪತಿಯ ವಿರುದ್ಧ ಪರಿಹಾರಕ್ಕಾಗಿ ಆಗ್ರಹಿಸಿ ಗಜಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

    ಕಳೆದ ಮೂರು ದಿನಗಳ ಹಿಂದೆ ತಮ್ಮ ಮಗಳನ್ನು ನೋಡಲು ಗಜಲಕ್ಷ್ಮಿ ಸಹೋದರ ಮತ್ತು ಆಕೆಯ ತಾಯಿ ಮುಂಜಾನೆಯೇ ಮನೆಯ ಬಳಿ ಬಂದಿದ್ದಾರೆ. ಈ ವೇಳೆ ಮಗಳ ಮನೆಯಲ್ಲಿ ಪರಪುರುಷನೊಬ್ಬ ಇರುವುದನ್ನು ನೋಡಿದ ಆಕೆಯ ತಾಯಿ ಕೂಡ ತಬ್ಬಿಬ್ಬಾಗಿದ್ದಾರೆ. ಆಕೆಯೊಂದಿಗೆ ಇದ್ದ ವ್ಯಕ್ತಿಯನ್ನು ನಗರದ ದಾಸರ ಕೊಪ್ಪಲು ನಿವಾಸಿ ರಾಜೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಇದನ್ನು ಪ್ರಶ್ನಿಸಲು ಹೋದ ಗಜಲಕ್ಷ್ಮಿಯ ಪತಿ ರಾಘವೇಂದ್ರ ಮೇಲೆ ಹಲ್ಲೆ ಮಾಡಲಾಗಿದೆ.

    ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ರಾಜೇಂದ್ರ ರೆಡ್ಡಿ ಸಹೋದರ ಮತ್ತು ಆತನ ಸ್ನೇಹಿತನ ಮೇಲೆ ಪ್ರಕರಣ ದಾಖಲಾಗಿದೆ. ಜೊತೆಗೆ ಕೌಟುಂಬಿಕ ವ್ಯಾಜ್ಯಗಳ ನ್ಯಾಯಾಲಯದಲ್ಲಿ ದಂಪತಿ ಕಲಹ ಕುರಿತು ದೂರು ಮತ್ತು ಪ್ರತಿ ದೂರು ದಾಖಲಾಗಿದೆ.

  • ಹುಟ್ಟುಹಬ್ಬದ ದಿನವೇ ಬಾಲಕ ನೇಣಿಗೆ ಶರಣು!

    ಹುಟ್ಟುಹಬ್ಬದ ದಿನವೇ ಬಾಲಕ ನೇಣಿಗೆ ಶರಣು!

    ಮೈಸೂರು: ಹುಟ್ಟುಹಬ್ಬದ ದಿನವೇ ಬಾಲಕ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ.

    ಗಣೇಶ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಗಣೇಶ್ ಟ್ರಿನಿಟಿ ಶಾಲೆಯ 7ನೇ ತರಗತಿ ಓದುತ್ತಿದ್ದನು. ಶನಿವಾರ ಗಣೇಶ್ ಹುಟ್ಟಿದ ದಿನ ಆಗಿತ್ತು. ಇದೇ ದಿನ ಬಾಲಕನ ತಂದೆ- ತಾಯಿ ಸಂಬಂಧಿಕರ ಮನೆಗೆ ಹೊರಟ್ಟಿದ್ದರು. ಈ ವೇಳೆ ಗಣೇಶ್ ತಾನೂ ಅವರ ಜೊತೆ ಬರುವುದಾಗಿ ಮನವಿ ಮಾಡಿಕೊಂಡಿದ್ದನು. ಆದರೆ ಪೋಷಕರು ಆತನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಲು ಒಪ್ಪಲಿಲ್ಲ. ಪೋಷಕರು ತಮ್ಮ ಮಗ ಗಣೇಶ್‍ನನ್ನು ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದರು.

    ಪೋಷಕರು ತನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಬೇಸತ್ತ ಗಣೇಶ್ ತನ್ನ ತಂದೆ – ತಾಯಿ ಸಂಬಂಧಿಕರ ಮನೆಯಿಂದ ಹಿಂತಿರುಗುವ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಸಂಬಂಧಿಕರ ಮನೆಯಿಂದ ಸಂಜೆ ವಾಪಸ್ ಬರುವಷ್ಟರಲ್ಲಿ ಗಣೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಚಿಕ್ಕಮಗಳೂರು: ಪ್ರೇಮ ವಿವಾಹವಾಗಿ ಆರೇ ತಿಂಗಳಿಗೆ ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಶಿವನಿ ಸಮೀಪದ ದಂದೂರು ಗ್ರಾಮದಲ್ಲಿ ನಡೆದಿದೆ.

    ಮೃತ ಯುವತಿಯನ್ನ ಲತಾ(19) ಎಂದು ಗುರುತಿಸಲಾಗಿದೆ. ದಂದೂರಿನ ನಿವಾಸಿಯಾಗಿದ್ದ ಲತಾ ಅದೇ ಊರಿನ ಧರ್ಮರಾಜ್‍ನನ್ನು ಪ್ರೀತಿಸುತ್ತಿದ್ದಳು. ಲತಾಳ ಪ್ರೀತಿ ಆಕೆಯ ಅಪ್ಪ-ಅಮ್ಮನಿಗೆ ಇಷ್ಟರವಿರಲಿಲ್ಲ. ಆದ್ರೆ, ಧರ್ಮರಾಜ್ ಪೋಷಕರು ಮುಂದೆ ನಿಂತು ತರೀಕೆರೆಯ ಕಲ್ಲತ್ತಿಗಿರಿ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಿದ್ದರು.

    ಮದುವೆಯಾದ ಆರೇ ತಿಂಗಳಿಗೆ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ, ಮೃತ ಲತಾಳ ಪೋಷಕರು ಲತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ನೇಣು ಬಿಗಿದುಕೊಂಡಿರುವ ಆಕೆಯ ಕಾಲುಗಳು ನೆಲದ ಮೇಲೆಯೇ ಇವೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಗೆ ಲತಾ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.