Tag: parents

  • ಟ್ರಕ್‍ಗೆ ಕಾರು ಡಿಕ್ಕಿ – ಅಪಘಾತದಲ್ಲಿ ಹಿಂದಿ ಬಾಲನಟ ಸಾವು

    ಟ್ರಕ್‍ಗೆ ಕಾರು ಡಿಕ್ಕಿ – ಅಪಘಾತದಲ್ಲಿ ಹಿಂದಿ ಬಾಲನಟ ಸಾವು

    ರಾಯ್‍ಪುರ: ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಬಾಲನಟ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢದ ರಾಯ್‍ಪುರನಲ್ಲಿ ನಡೆದಿದೆ.

    ಅಪಘಾತದಲ್ಲಿ ಸಾವನ್ನಪ್ಪಿದ ಬಾಲನಾಟನನ್ನು 14 ವರ್ಷದ ಶಿವಲೇಖ್ ಸಿಂಗ್ ಎಂದು ಗುರುತಿಸಲಾಗಿದ್ದು, ಈ ಅಪಘಾತದಲ್ಲಿ ಬಾಲನಟನ ಪೋಷಕರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

    ಈ ಕುಟುಂಬ ಬಿಲಾಸ್ಪುರ್ ನಿಂದ ರಾಯ್‍ಪುರಕ್ಕೆ ಹೋಗುತ್ತಿರುವಾಗ ಕಾರು ಟ್ರಕ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಶಿವಲೇಖ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಕಾರಿನಲ್ಲಿದ್ದ ಅವನ ತಂದೆ ತಾಯಿಯೂ ಕೂಡ ಗಾಯಗೊಂಡಿದ್ದಾರೆ ಎಂದು ರಾಯ್‍ಪುರದ ಪೊಲೀಸ್ ವರಿಷ್ಠಾಧಿಕಾರಿ ಆರಿಫ್ ಶೇಖ್ ಹೇಳಿದ್ದಾರೆ.

    ಛತ್ತೀಸ್‍ಗಢ ಜಂಜಗೀರ್-ಚಂಪಾ ಜಿಲ್ಲೆಯ ನಿವಾಸಿ ಶಿವಲೇಖ್ ಸಿಂಗ್ ತನ್ನ ಪೋಷಕರೊಂದಿಗೆ ಮುಂಬೈನಲ್ಲಿ ನೆಲೆಸಿದ್ದನು. ಶಿವಲೇಖ್ ಸಿಂಗ್ ರಾಯ್‍ಪುರದಲ್ಲಿ ಒಂದು ಸಂದರ್ಶನಕ್ಕಾಗಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಶಿವಲೇಖ್ “ಸಂಕಟ್ಮೋಚನ್ ಹನುಮಾನ್” ಮತ್ತು “ಸಾಸುರಲ್ ಸಿಮಾರ್ ಕಾ” ಸೇರಿದಂತೆ ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದನು ಮತ್ತು ಟಿವಿ ರಿಯಾಲಿಟಿ ಶೋಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದನು.

    ಅಪಘಾತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದು, ಅವನ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ಮಾಡುತ್ತಿದ್ದರೆ ಈ ಸಂಬಂಧ ರಾಯ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೇಮ ವಿವಾಹ – ಕತ್ತು ಹಿಸುಕಿ ಕೊಲೆಗೈದು, ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ

    ಪ್ರೇಮ ವಿವಾಹ – ಕತ್ತು ಹಿಸುಕಿ ಕೊಲೆಗೈದು, ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ

    ಚಂಡೀಗಢ: ಪೋಷಕರು ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಂಜಾಬ್ ರಾಜ್ಯದ ಪಟಿಯಾಲದ ಗಿವೋರಾ ಗ್ರಾಮದಲ್ಲಿ ನಡೆದಿದೆ.

    ತಂದೆ ಮತ್ತು ಸೋದರನಿಂದಲೇ ಯುವತಿ ಜ್ಯೋತಿ ಕೊಲೆಯಾಗಿದ್ದಾಳೆ. ಮನಜಿತ್ ಸಿಂಗ್ ಪುತ್ರಿಯಾದ ಜ್ಯೋತಿ ಅದೇ ಗ್ರಾಮದ ಗುರಜಂಟ್ ಸಿಂಗ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗುತ್ತಲೇ ಎರಡು ತಿಂಗಳ ಹಿಂದೆ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು.

    ಜ್ಯೋತಿಯ ಅಸ್ಥಿ ತುಂಬಿದ ಚೀಲ

    ಎರಡು ಕುಟುಂಬಗಳ ಸದಸ್ಯರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ಸ್ಥಳದಲ್ಲಿಯೇ ವಿಚ್ಛೇದನ ಕೊಡಿಸಿದ್ದರು. ಜುಲೈ 14ರಂದು ಜ್ಯೋತಿ ಪತಿಯ ಮನೆಗೆ ಹೋಗಿದ್ದಳು. ವಿಷಯ ತಿಳಿದು ಜ್ಯೋತಿ ಪೋಷಕರು ಆಕೆಯನ್ನು ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿ ರಾತ್ರೋ ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿವೆ.

    ಪತಿ ಗುರಜಂಟ್ ಸಿಂಗ್ ದೂರಿನ ಅನ್ವಯ ಯುವತಿಯ ತಂದೆ ಮನಜಿತ್ ಸಿಂಗ್ ಮತ್ತು ಸೋದರ ಜಿಂದರ್ ಸಿಂಗ್ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ರಾತ್ರಿಯ ಜ್ಯೋತಿಯ ಮೃತದೇಹವನ್ನು ದಹಿಸಿದ್ದರಿಂದ ಘಟನಾ ಸ್ಥಳದಲ್ಲಿಯ ಅಸ್ಥಿಯನ್ನು ವಶಕ್ಕೆ ಪಡೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಸ್‍ಪಿ ಜಸ್ವಂತ್ ಸಿಂಗ್ ತಿಳಿಸಿದ್ದಾರೆ.

    ಜುಲೈ 14ರಂದು ಜ್ಯೋತಿ ನಮ್ಮ ಮನೆಗೆ ಬಂದಿದ್ದಾಳೆಂದು ನೆರೆಹೊರೆಯವರು ಫೋನ್ ಮಾಡಿ ತಿಳಿಸಿದ್ದರು. ಭಯಗೊಂಡಿದ್ದ ಜ್ಯೋತಿ ಕೆಲ ಸಮಯದ ಬಳಿಕ ಹಿಂದಿರುಗಿದ್ದಳು. ಭಾನುವಾರ ರಾತ್ರಿ ಜ್ಯೋತಿ ಮನೆಯ ಮಾರ್ಗದಲ್ಲಿ ಹೋಗುತ್ತಿರುವಾಗ ಜೋರಾಗಿ ಕಿರುಚಿದ ಸದ್ದು ಕೇಳಿತು. ಅನುಮಾನಗೊಂಡ ಮನೆಯತ್ತ ಇಣುಕಿದಾಗ, ತಂದೆ ಆಕೆಯ ಕಾಲನ್ನು ಬಿಗಿಯಾಗಿ ಹಿಡಿದಿದ್ದರೆ, ಸೋದರ ಕತ್ತು ಹಿಸುಕುತ್ತಿದ್ದನು. ಕೆಲವೇ ಕ್ಷಣಗಳಲ್ಲಿ ಜ್ಯೋತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ತಂದೆ-ಮಗ ಶವವನ್ನು ಹಾಸಿಗೆಯಲ್ಲಿ ಸುತ್ತಿ ಬೈಕ್ ಮೂಲಕ ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದರು ಎಂದು ಗುರಜಂಟ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.

  • ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಕೋಲ್ಕತ್ತಾ: ಪೋಷಕರೇ ತಮ್ಮ 16 ವರ್ಷದ ಮಗಳನ್ನು ಕೊಂದು ಆಕೆಯ ದೇಹವನ್ನು ಗಂಗಾ ನದಿಯಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಧಿರೇನ್ ಮೊಂಡಾಲ್ ಮತ್ತು ಆತನ ಪತ್ನಿ ಸುಮತಿ ಮೊಂಡಾಲ್ ಎಂದು ಗುರುತಿಸಲಾಗಿದೆ. ಈ ಘಟನೆ ಭೂತ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹೇಂದ್ರತೋಲಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶನಿವಾರ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿ ಪಕ್ಕದ ಹಳ್ಳಿಯ ನಿವಾಸಿ ಅಚಿಂತ್ಯ ಮೊಂಡಾಲ್ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಬಗ್ಗೆ ತಿಳಿದ ಬಾಲಕಿಯ ಪೋಷಕರು ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಾಲಕಿ ಯುವಕನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನು ಕೊಲೆ ಮಾಡಿ ನಂತರ ಮೂಟೆಯಲ್ಲಿ ಮೃತದೇಹವನ್ನು ತುಂಬಿ ಗಂಗಾನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಆರೋಪಿಗಳ ಮನೆಗೆ ಹೋಗಿ ಧಿರೇನ್ ಮತ್ತು ಆತನ ಪತ್ನಿ ಸುಮತಿ ಇಬ್ಬರನ್ನು ಬಂಧಿಸಲಾಗಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಮಗಳಿಗೆ ಆಶೀರ್ವಾದ ಮಾಡಲು ಸಂಸತ್ ಪ್ರವೇಶಿಸಿದ್ದೇವೆ: ಸೀತಾರಾಮನ್ ಪೋಷಕರು

    ಮಗಳಿಗೆ ಆಶೀರ್ವಾದ ಮಾಡಲು ಸಂಸತ್ ಪ್ರವೇಶಿಸಿದ್ದೇವೆ: ಸೀತಾರಾಮನ್ ಪೋಷಕರು

    ನವದೆಹಲಿ: ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಿರ್ಮಲಾ ಬಜೆಟ್ ಮಂಡನೆ ಮಾಡುವುದನ್ನು ನೋಡಲು ಅವರ ಪೋಷಕರು ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ.

    ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮ್ ಅವರು ತಮ್ಮ ಮಗಳಿಗೆ ಆಶೀರ್ವಾದ ಹಾಗೂ ಪ್ರೋತ್ಸಾಹ ನೀಡಲು ತಮಿಳುನಾಡಿನಿಂದ ಆಗಮಿಸಿದ್ದರು. ನಿರ್ಮಲಾ ಸೀತಾರಾಮನ್ ಅವರ ತಂದೆ ನಾರಾಯಣನ್ ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ.

    ನಿರ್ಮಲಾ ಸೀತರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ ಶುರುವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಸೂಟ್‍ಕೇಸ್ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.

  • ‘ಅಪ್ಪ, ಅಮ್ಮ ನನ್ನ ಮೃತದೇಹ ಇಲ್ಲಿರುತ್ತೆ, ತೆಗೆದುಕೊಂಡು ಹೋಗಿ’ ಎಂದು ಯುವಕ ಆತ್ಮಹತ್ಯೆ

    ‘ಅಪ್ಪ, ಅಮ್ಮ ನನ್ನ ಮೃತದೇಹ ಇಲ್ಲಿರುತ್ತೆ, ತೆಗೆದುಕೊಂಡು ಹೋಗಿ’ ಎಂದು ಯುವಕ ಆತ್ಮಹತ್ಯೆ

    ನವದೆಹಲಿ: ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತೆರಳಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಕೊನೆಯ ಬಾರಿಗೆ ಯುವಕ ತನ್ನ ಪೋಷಕರಿಗೆ ಸಂದೇಶ ಕಳುಹಿಸಿದ್ದಾನೆ.

    ಹರ್ಷ (26) ನಾಪತ್ತೆಯಾಗಿರುವ ಯುವಕನಾಗಿದ್ದು, ಜುಲೈ 1 ರ ಬೆಳಗ್ಗೆ ಈತ ತನ್ನ ಪೋಷಕರೊಂದಗೆ ಮಾತನಾಡಿದ್ದ. ಆದರೆ ಕೆಲ ಸಮಯದ ಬಳಿಕ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿದ್ದ ಎಂದು ಪೋಷಕರು ತಿಳಿಸಿದ್ದಾರೆ.

    ವಾಟ್ಸಪ್ ಸಂದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಘಟನೆ ನಡೆದ 3 ದಿನಗಳ ಬಳಿಕ ಪೊಲೀಸರು ಮೃತ ದೇಹವನ್ನು ಯಮುನಾ ನದಿಯಲ್ಲಿ ಪತ್ತೆ ಮಾಡಿದ್ದಾರೆ.

    ಜೂನ್ 30ರ ರಾತ್ರಿ ಹರ್ಷ ತನ್ನ 6 ಜನರೊಂದಿಗೆ ಗೆಳೆಯನ ಪತ್ನಿಯ ಹುಟ್ಟುಹಬ್ಬ ಪಾರ್ಟಿಗೆ ತೆರಳಿದ್ದ. ಜುಲೈ 1 ರಂದು ಆತನ ಮೊಬೈಲ್ ನಿಂದ ಪೋಷಕರಿಗೆ ಹಾಗೂ ಕೆಲ ಆತ್ಮೀಯರಿಗೆ ವಾಟ್ಸಪ್ ಸಂದೇಶ ಬಂದಿತ್ತು. ಇದರಲ್ಲಿ ‘ಅಪ್ಪ ಅಮ್ಮ ಕ್ಷಮಿಸಿ. ನನ್ನ ಸ್ಕೂಟರ್, ಪರ್ಸ್ ಮತ್ತು ವಸ್ತುಗಳು ಐಟಿಒ ಸೇತುವೆ ಬಳಿ ಸಿಗುತ್ತದೆ. ನನ್ನ ಮೃತದೇಹ ಸೇತುವೆಯ ಕೆಳಗಿರುತ್ತದೆ ತೆಗೆದುಕೊಳ್ಳಿ ಎಂದು ಬರೆಯಲಾಗಿದೆ.

    ವಾಟ್ಸಪ್ ಸಂದೇಶದಿಂದ ಆತಂಕಗೊಂಡ ಪೋಷಕರು ಕೂಡಲೇ ದೆಹಲಿಯ ಐಟಿಒ ಸೇತುವೆ ಬಳಿ ಆಗಮಿಸಿದ್ದು, ಸಂದೇಶದಲ್ಲಿ ಇರುವಂತೆ ಆತನ ವಸ್ತುಗಳು ಸೇತುವೆ ಬಳಿ ಪತ್ತೆಯಾಗಿತ್ತು. ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ವೇಳೆ ಪೊಲೀಸರು ತಮ್ಮ ದೂರಿನ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಯುವಕ ಆನ್‍ಲೈನ್ ಶಾಪಿಂಗ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • 10 ದಿನದ ಮಗುವಿನೊಂದಿಗೆ ಬರ್ತಿದ್ದ ಮಗಳನ್ನೇ ಕೊಂದು ಬಾವಿಗೆ ಎಸೆದ್ರು

    10 ದಿನದ ಮಗುವಿನೊಂದಿಗೆ ಬರ್ತಿದ್ದ ಮಗಳನ್ನೇ ಕೊಂದು ಬಾವಿಗೆ ಎಸೆದ್ರು

    ಹೈದರಾಬಾದ್: ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳನ್ನೇ ಪೋಷಕರು ಕೊಲೆ ಮಾಡಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಹೇಮಾವತಿ ಕೊಲೆಯಾದ ಯುವತಿ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರೂ ಹೇಮಾವತಿಯ ಅಂತರ್ಜಾತಿ ವಿವಾಹವನ್ನು ಪೋಷಕರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಮಗಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ಗ್ರಾಮದ ಹೊರಗಿನ ಬಾವಿಯಲ್ಲಿ ಎಸೆದಿದ್ದಾರೆ. ಇದೀಗ ಪೊಲೀಸರು ಆಕೆಯ ಪೋಷಕರು ಮತ್ತು ಸಹೋದರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಹೇಮಾವತಿ ಮತ್ತು ಕೇಶವುಲು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಹುಡುಗ ಬೇರೆ ಜಾತಿಯಾಗಿದ್ದರಿಂದ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮನೆಯವರು ಮದುವೆ ಒಪ್ಪದಿದ್ದಕ್ಕೆ ಓಡಿಹೋಗಿ ಹೇಮಾವತಿ ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿದ್ದಳು. ವಿವಾಹದ ನಂತರ ಹೇಮಾವತಿ ಮತ್ತು ಕೇಶವುಲು ಬೈರೆಡ್ಡಿಪಲ್ಲೆ ವಾಸಿಸುತ್ತಿದ್ದರು. ಕೇಶವುಲು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಹತ್ತು ದಿನಗಳ ಹಿಂದೆ ಹೇಮಾವತಿ ಮಗುವಿಗೆ ಜನ್ಮ ನೀಡಿದ್ದಳು. ಈ ಖುಷಿಯಲ್ಲಿ ಆಕೆ ತನ್ನ ತಂದೆ ಭಾಸ್ಕರ್ ನಾಯ್ಡು ಮತ್ತು ಇತರ ಕುಟುಂಬ ಸದಸ್ಯರು ಮಗುವಾಗಿರುವ ವಿಚಾರ ತಿಳಿದು ತನ್ನನ್ನು ನೋಡಲು ಬರುತ್ತಾರೆ ಎಂದು ಭಾವಿಸಿದ್ದಳು. ಆದರೆ ಶುಕ್ರವಾರ ಹೇಮಾವತಿ ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದಾಗ ಆಕೆಯ ಪೋಷಕರು, ಸಹೋದರಿ ಮತ್ತು ಇತರ ಪುರುಷ ಸದಸ್ಯರು ಕೇಶವುಲುಗೆ ಹೊಡೆದು, ಮಗುವನ್ನು ಅಲ್ಲೆ ಬಿಟ್ಟು ಹೇಮಾವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೇಮಾವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆಮಾಡಿದ್ದಾರೆ. ನಂತರ ಮೃತ ದೇಹವನ್ನು ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಇತ್ತ ಪತಿ ಕೇಶವುಲು ಪೊಲೀಸರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾನೆ. ತಕ್ಷಣ ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಬಾವಿಯಲ್ಲಿ ಹೇಮಾವತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಹೇಮಾವತಿಯ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

    ಈ ಘಟನೆ ತಿಳಿದ ಗ್ರಾಮಸ್ಥರು ಭಾಸ್ಕರ್ ನಾಯ್ಡು ಮನೆಯ ಮೇಲೆ ದಾಳಿ ನಡೆಸಿ, ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಯನ್ನು ಗ್ರಾಮಕ್ಕೆ ಕರೆಸಿಕೊಂಡು ಅಹಿತಕರ ಘಟನೆ ಸಂಭವಿಸದಂತೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

    ಸದ್ಯಕ್ಕೆ ಹೇಮಾವತಿ ಪತಿ ಕೇಶವುಲು ನೀಡಿದ ದೂರಿನ ಆಧಾರದ ಮೇರೆಗೆ ನಾವು ಈ ಕುರಿತು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈಗಾಗಲೇ ಪೋಷಕರು ಸೇರಿದಂತೆ ಕುಟುಂಬದವರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ಬೀಚ್‍ನಲ್ಲಿ ದಂಪತಿ ಎಂಜಾಯ್

    ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ಬೀಚ್‍ನಲ್ಲಿ ದಂಪತಿ ಎಂಜಾಯ್

    – ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಬಾಲಕನ ರಕ್ಷಣೆ

    ಕೋಲ್ಕತ್ತಾ: ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ತಂದೆ-ತಾಯಿ ಸಮುದ್ರಕ್ಕೆ ಹೋಗಿ ಎಂಜಾಯ್ ಮಾಡಿದ್ದು, ಇದೇ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

    ತಂದೆ- ತಾಯಿ ತಮ್ಮ ಮಗನ ಜೊತೆ ರಜೆ ದಿನವನ್ನು ಕಳೆಯಲು ಪೂರ್ವ ಮಿಡ್ನಾಪೋರ್‍ದಲ್ಲಿದ್ದ ದಿಘಾ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಮಗನನ್ನು ಕಾರಿನಲ್ಲಿಯೇ ಲಾಕ್ ಮಾಡಿ ಇಬ್ಬರು ಸಮುದ್ರದಲ್ಲಿ ಕಾಲ ಕಳೆಯಲು ಹೋಗಿದ್ದರು. ಇದೇ ವೇಳೆ ಬಾಲಕ ಇದ್ದ ಕಾರಿನ ಬಳಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ನೋಡಿದ್ದಾರೆ. ಕಿಟಕಿಗಳು ಮುಚ್ಚಿದ್ದ ಕಾರಣ ಬಾಲಕನಿಗೆ ಉಸಿರಾಡಲು ತೊಂದರೆ ಆಗುತಿತ್ತು. ಅಲ್ಲದೆ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದನು.

                                                                                                    ದಿಘಾ ಸಮುದ್ರ

    ಬಾಲಕನನ್ನು ನೋಡಿದ ಪೊಲೀಸ್ ಅಧಿಕಾರಿ ತಕ್ಷಣ ಬೇರೆ ಅಧಿಕಾರಿಗಳನ್ನು ಕರೆದು ಕಾರಿನ ಕಿಟಕಿಯನ್ನು ಒಡೆದು ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಪ್ರಜ್ಞೆ ತಪ್ಪಿದ್ದ ಬಾಲಕನ ಮೇಲೆ ನೀರು ಚಿಮುಕಿಸಿ ಆತನನ್ನು ಎಚ್ಚರಗೊಳಿಸಿದ್ದಾರೆ. ಸಮುದ್ರದಿಂದ ಸ್ಥಳಕ್ಕೆ ಬಂದ ಪೋಷಕರು ಮಗುವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಬಾಲಕನ ತಂದೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಅಲ್ಲದೆ ಮಗನನ್ನು ಇಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಕ್ಕೆ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಈ ರೀತಿ ಮತ್ತೆ ಮಾಡುವುದಿಲ್ಲ ಎಂದು ಬಾಲಕನ ತಂದೆ ಸ್ಥಳೀಯರ ಬಳಿ ಹೇಳಿಕೊಂಡಿದ್ದಾರೆ.

  • ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಸ್ಯಾಕ್ರಮೆಂಟೋ : ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡುತ್ತಾರೆ. ಪಠ್ಯದ ಜೊತೆಗೆ ಆಟಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್ ನಡೆಸಲು ಅಲ್ಲಿಯ ಶಿಕ್ಷಣ ಮಂಡಳಿ ಆದೇಶಿಸಿದೆ. ಶಿಕ್ಷಣ ಮಂಡಳಿ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

    ಏನಿದು ಕಾಂಡೋಮ್ ರೇಸ್?
    ಶಾಲೆಗಳಲ್ಲಿ ಸುಮಾರು 10 ರಿಂದ 12 ವಯಸ್ಸಿನ ವಿದ್ಯಾರ್ಥಿನಿಯರು ತನ್ನ ಎಲ್ಲ ಸಹಪಾಠಿಗಳ (ಹುಡುಗರು ಸೇರಿದಂತೆ) ಮುಂದೆ ಕಾಂಡೋಮ್ ಬಳಕೆಯನ್ನು ತೋರಿಸಬೇಕು. ಆಟಿಕೆಯ ವಸ್ತುವಿಗೆ ಕಾಂಡೋಮ್ ಹಾಕುವ ಮೂಲಕ ಎಲ್ಲರಿಗೆ ಬಳಕೆಯ ವಿಧಾನದ ಬಗ್ಗೆ ತಿಳಿಸುವುದು.

    ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೆಬೆಚಾ ಫ್ರೀಡ್ರಿಚ್, ಇದೊಂದು ಶಾಕಿಂಗ್ ನಿರ್ಧಾರವಾಗಿದ್ದು, 10ರಿಂದ 12 ವರ್ಷದ ವಿದ್ಯಾರ್ಥಿನಿಯರು ಎಲ್ಲರ ಮುಂದೆ ಆಟಕೆಗೆ ಕಾಂಡೋಮ್ ತೊಡಿಸುವ ವಿಧಾನ ಶಾಲೆಗಳಲ್ಲಿ ಜಾರಿಗೆ ತಂದಿರೋದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕವಾಗಿ ಲೈಂಗಿಕ ಶಿಕ್ಷಣದ ಕುರಿತು ತುಂಬಾ ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಮಾತುಗಳಿಂದ ಯಾರು ಮುಜುಗರಕ್ಕೆ ಒಳಗಾಬಾರದೆಂಬವುದು ನನ್ನ ನಿಲುವು. ಶಾಲೆಯ ಕೊಠಡಿಯಲ್ಲಿ ಹುಡುಗರ ಮುಂದೆ ವಿದ್ಯಾರ್ಥಿನಿಯರು ಕಾಂಡೋಮ್ ಬಳಕೆಯ ಬಗ್ಗೆ ಮಾತನಾಡುವುದು ಅಪಾಯಕಾರಿ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಲೈಂಗಿಕ ಶಿಕ್ಷಣ ನೀಡಬೇಕೆಂದು ಪ್ರೀಡ್ರಿಚ್ ಸ್ಥಳೀಯ ಶಿಕ್ಷಣ ಮಂಡಳಿಗೆ ಸಲಹೆ ನೀಡಿದ್ದಾರೆ.

    ಶಿಕ್ಷಣ ಮಂಡಳಿ ಮೇ ನಲ್ಲಿ ಈ ಆದೇಶವನ್ನು ಹೊರಡಿಸಿದೆ. ಶಿಕ್ಷಣ ಮಂಡಳಿ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಕ್ಯಾಲಿಫೋರ್ನಿಯಾದೆಲ್ಲಡೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಹೋರಾಟಗಾರ್ತಿ ಪ್ರೀಡ್ರಿಚ್ ಬೆಂಬಲ ನೀಡಿದ್ದಾರೆ.

  • ಮಾಜಿ ಸಿಎಂ ಸಂಬಂಧಿಕರು, ಕೆಲಸ ಕೊಡಿಸುತ್ತೇವೆ ಎಂದು 60 ಲಕ್ಷ ದೋಚಿದ ಸಹೋದರರು

    ಮಾಜಿ ಸಿಎಂ ಸಂಬಂಧಿಕರು, ಕೆಲಸ ಕೊಡಿಸುತ್ತೇವೆ ಎಂದು 60 ಲಕ್ಷ ದೋಚಿದ ಸಹೋದರರು

    ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಬಂಧಿಕರು, ನಾವು ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಮೂವರು ಸಹೋದರರು 10 ಯುವಕರನ್ನು ನಂಬಿಸಿ ಅವರಿಂದ 60 ಲಕ್ಷ ರೂಗಳನ್ನು ಪಡೆದುಕೊಂಡು ಪಂಗನಾಮ ಹಾಕಿದ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.

    ಈ ಮೂವರು ಸಹೋದರರನ್ನು ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮಸ್ಥರಾದ, ಬಿ.ಎಂ.ಮಹೇಶ್, ಬಿ.ಎಂ.ವಿಜಯಕುಮಾರ್ ಮತ್ತು ಬಿ.ಎಂ ನಟರಾಜ್ ಎಂದು ಗುರುತಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಬಂಧಿಕರು ಎಂದು ಹೇಳಿಕೊಂಡು ಓಡಾಡುತ್ತಿದ್ದರು ಎಂದು ಹೇಳಲಾಗಿದೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸೆಂಟ್ರಲ್ ಸ್ಕಿಲ್ ಬೋರ್ಡ್ ಬೆಂಗಳೂರಿನಲ್ಲಿ 229 ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಈ ಮೂವರು ಸಹೋದರರು ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಕೆ.ವೈ.ಮಾರುತಿ, ಕುಮಾರ್, ನವೀನ್, ಗದ್ದಿಗೇಶ್, ದ್ಯಾಮಪ್ಪ, ಪ್ರವೀಣ್, ಜಿ.ಎಸ್.ಪ್ರವೀಣ್, ಮಂಜು ಗೋಣಿಗೆರೆ, ಶಿವಕುಮಾರ್, ಸಂದೀಪ್ ಕುಮಾರ್ ಎಂಬ 10 ಯುವಕರಿಗೆ ಸರ್ಕಾರಿ ನೌಕರಿ ಆಸೆ ತೋರಿಸಿ ಹಣ ಪಡೆದಿದ್ದಾರೆ.

    ನಾವು ಕುರುಬ ಸಮುದಾಯದವರೇ, ಸಿದ್ದರಾಮಯ್ಯ ನಮ್ಮ ಸಂಬಂಧಿ. ಅವರ ಪುತ್ರ ರಾಕೇಶ್ ಸಿದ್ದರಾಮಯ್ಯನೇ ಎಲ್ಲ ಕೆಲಸವನ್ನು ಮಾಡಿಕೊಡುವುದು, ಅವರ ಮುಖಾಂತರ ಕೆಲಸ ಮಾಡಿಸಿಕೊಡುತ್ತೀವಿ ಎಂದು ನಂಬಿಸಿ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾರೆ. ಹಣ ನೀಡಿದವರೆಲ್ಲರೂ ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ಮೀಸಲಾತಿ ಅಡಿ ಕೆಲಸ ಕೊಡಿಸುತ್ತೇವೆ ಎಂದು ಹಣ ಪಡೆದಿದ್ದಾರೆ. ಆದರೆ ಇದುವರೆಗೂ ಸರ್ಕಾರಿ ಉದ್ಯೋಗವೂ ಇಲ್ಲ. ಕೊಟ್ಟ ಹಣ ವಾಪಸ್ ಕೂಡ ಇಲ್ಲ ಎಂದು ಯುವಕರ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.

    ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಇರೋಬರೋ ಜಮೀನು, ಬಂಗಾರ ಮಾರಾಟ ಮಾಡಿ, ಅವರಿವರ ಬಳಿ ಸಾಲ ಪಡೆದು ಮಹೇಶ್ ಮತ್ತು ಸಹೋದರರಿಗೆ ಹಣ ನೀಡಿದ್ದಾರೆ. ಈ ಹಣ ಕೇಳೋದಕ್ಕೆ ಎಂದು ಬೆನಕನಹಳ್ಳಿಗೆ ಹೋದರೆ ಸಹೋದರರು ಊರಿನವರನ್ನು ಸೇರಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದಾರಂತೆ. ನಮ್ಮ ಮಕ್ಕಳಿಗೆ ಕೆಲಸ ಸಿಗಲಿ ಎಂದು ಹಣ ಕೊಟ್ಟಿದ್ದು ನಮ್ಮ ತಪ್ಪು ಈಗ ತಪ್ಪಿನ ಅರಿವಾಗಿದೆ. ನಮ್ಮಂತೆ ಬೇರೆ ಪಾಲಕರು ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ಬೇಡ. ಈ ಮೂವರನ್ನು ಬಂಧಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

    ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಕಾರವಾರ: ಯಾವುದೇ ಕಾರ್ಯಕ್ರಮವಿರಲಿ ಬಂದ ಅಥಿತಿಗಳಿಗೆ ಸಿಹಿ ನೀಡಿ ಮೃಷ್ಟಾನ್ನ ಭೋಜನ ನೀಡುವ ಮೂಲಕ ಅತಿಥಿ ಸತ್ಕಾರ ಮಾಡುವುದು ಸಂಪ್ರದಾಯ .

    ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ ಬುಧವಾರ ನಡೆದ ಉಪನಯನವೊಂದರಲ್ಲಿ ವಿತರಿಸಿದ ವಿಭಿನ್ನ ಉಂಡೆ ಅತಿಥಿಗಳನ್ನು ಮೆಚ್ಚಿಸುವಂತೆ ಮಾಡಿತ್ತು. ಅಲ್ಲಿ ವಿತರಿಸಿದ್ದು ಯಾವುದೇ ಸಿಹಿಯಾದ ಉಂಡೆಯಾಗಿರದೇ ಪ್ಯಾಕ್ ಮಾಡಿದ ಬೀಜದುಂಡೆಯಾಗಿತ್ತು. ವೀಣಾ ಹಾಗೂ ರಾಮಚಂದ್ರ ವೈದ್ಯ ದಂಪತಿಗಳ ಪುತ್ರನಾದ ಆದಿತ್ಯ (ಜಯಶೀಲ)ನ ಉಪನಯನವನ್ನು ತಾಲೂಕಿನ ಚಂದಗುಳಿ ಗಂಟೆ ಗಣಪತಿ ದೇವಾಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ನಮ್ಮ ಮಗನ ಉಪನಯನ ವಿಭಿನ್ನವಾಗಿರಬೇಕು ಮತ್ತು ಈ ಶುಭಕಾರ್ಯದ ಸವಿನೆನಪು ಚಿರಸ್ಥಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಈ ದಂಪತಿ ಆಯ್ಕೆ ಮಾಡಿಕೊಂಡಿದ್ದು ಪರಿಸರ ಜಾಗೃತಿ. ಮಗನ ಉಪನಯನದ ಹೆಸರಿನಲ್ಲಿ ನೂರಾರು ಗಿಡಗಳು ಅಲ್ಲಲ್ಲಿ ಬೆಳೆದು ನಿಲ್ಲಲಿ, ಈ ಮೂಲಕ ಹಸಿರು ಪರಿಸರ ಹೆಚ್ಚಾಗಲಿ ಎಂಬ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಿ, ಬಂದಂತಹ ಅತಿಥಿಗಳಿಗೆ ಆದಿತ್ಯನ ಆಧ್ಯಾತ್ಮಿಕ ಪಯಣಕ್ಕೆ ಸಾಕ್ಷಿಯಾಗಿ ಹರಸಿ. ಪ್ರೀತಿಯಿಂದ ನಾವು ನೀಡುವ ಜೀವಗಾಳು ಪಸರಿಸಿ ಎಂಬ ಸಂದೇಶದೊಂದಿಗೆ ವಿತರಿಸಿದ್ದಲ್ಲದೇ, ಇದನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಹಾಕುವುದರ ಮೂಲಕ ಹಸಿರು ಪರಿಸರ ಹೆಚ್ಚಾಗಲು ಕೈಜೋಡಿಸಿ ಎಂಬ ಮನವಿಯನ್ನೂ ಮಾಡಿಕೊಳ್ಳಲಾಯಿತು.

    ಈ ವಿಚಾರದ ಬಗ್ಗೆ ಮಾತನಾಡಿರುವ ಈ ಬೀಜದುಂಡೆ ವಿತರಣೆಯ ರೂವಾರಿ ಆದಿತ್ಯನ ಕುಟುಂಬದವರಾದ ವಾನಳ್ಳಿಯ ನಾಗವೇಣಿ ಹೆಗಡೆ, ಅತಿಥಿಗಳಿಗೆ ವಿತರಿಸಲು ಎರಡು ಜಾತಿಯ ಮರಗಳಾದ ನೇರಳೆ, ಹಲಸು ಮುಂತಾದ ಬೀಜಗಳುಳ್ಳ ಸುಮಾರು 1200 ಹೆಚ್ಚು ಬೀಜದುಂಡೆಗಳನ್ನು ತಯಾರಿಸಿ ವಿತರಿಸಿದ್ದೇವೆ. ಅವುಗಳಲ್ಲಿ ನೂರು ಗಿಡಗಳು ಹುಟ್ಟಿ, ಮರವಾಗಿ ಬೆಳೆದು ನಿಂತರೆ ಪರಿಸರಕ್ಕೊಂದು ಕೊಡುಗೆ ನೀಡಬೇಕೆಂದ ನಮ್ಮ ಅಭಿಲಾಶೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಈ ರೀತಿ ಶುಭ ಕಾರ್ಯಗಳಲ್ಲಿ ಸಾಮಾಜಿಕ ಸಂದೇಶವನ್ನು, ಪರಿಸರ ಜಾಗೃತಿಯನ್ನು ಮೂಡಿಸುವಂತಾದರೆ ಶುಭ ಕಾರ್ಯ ಸಾಮಾಜಿಕ ಕಾರ್ಯವಾಗುವುದರಲ್ಲಿ ಸಂಶಯವಿಲ್ಲ.