Tag: parents

  • ಮಗ್ಳ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್ – ಯುವಕನ ಪೋಷಕರಿಂದ ಬರೋಬ್ಬರಿ 42 ಲಕ್ಷ ರೂ. ಸುಲಿಗೆ

    ಮಗ್ಳ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್ – ಯುವಕನ ಪೋಷಕರಿಂದ ಬರೋಬ್ಬರಿ 42 ಲಕ್ಷ ರೂ. ಸುಲಿಗೆ

    ಬೆಂಗಳೂರು: ಮಗಳ ಖಾಸಗಿ ವಿಡಿಯೋ ಇಟ್ಟುಕೊಂಡು ದಂಪತಿ ಯುವಕನ ಪೋಷಕರಿಗೆ ಹಣ ನೀಡುವಂತೆ ಬ್ಲಾಕ್‍ಮೇಲ್ ಮಾಡಿ ಅರೆಸ್ಟ್ ಆದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.

    ಕವಿತಾ ಹಾಗೂ ಪ್ರಮೋದ್ ಕುಮಾರ್ ಅರೆಸ್ಟ್ ಆಗಿರುವ ದಂಪತಿ. ಯುವತಿ ಡೇಟಿಂಗ್ ಆಪ್ ಮೂಲಕ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡಿದ್ದಳು. ಬಳಿಕ ಇಬ್ಬರು ಲಾಡ್ಜ್‌ಗೆ ಹೋಗಿದ್ದರು. ಇದನ್ನು ತಿಳಿದ ಯುವತಿಯ ತಂದೆ-ತಾಯಿ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ದಂಪತಿ ನಿಮ್ಮ ಮಗ ನಮ್ಮ ಮಗಳ ಜೊತೆ ಇರುವ ಖಾಸಗಿ ವಿಡಿಯೋಗಳಿವೆ ಎಂದು ಯುವಕನ ಪೋಷಕರಿಗೆ ಕರೆ ಮಾಡಿ 1 ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ನೀಡದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಯುವಕನ ಪೋಷಕರು ಪ್ರಾಧ್ಯಾಪಕರಾಗಿದ್ದು, ದಂಪತಿಯ ಬೆದರಿಕೆಗೆ ಹೆದರಿ ಅವರನ್ನು ಭೇಟಿ ಮಾಡಲು ಹೋಟೆಲ್‍ಗೆ ತೆರಳಿದ್ದರು. ಈ ವೇಳೆ ದಂಪತಿ ನಮ್ಮ ಮಗಳು ಈಗ ಗರ್ಭಿಣಿಯಾಗಿದ್ದಾಳೆ. ಅದಕ್ಕೆ ನಿಮ್ಮ ಪುತ್ರನೇ ಕಾರಣ. ಇದಕ್ಕೆ ಸಾಕ್ಷಿಯಾಗಿ ನಿಮ್ಮ ಮಗ ನಮ್ಮ ಮಗಳ ಜೊತೆ ಲಾಡ್ಜ್ ನಲ್ಲಿ ಇರುವ ವಿಡಿಯೋಗಳಿವೆ. ನಮ್ಮ ಮಗಳಿಗೆ ಆದ ಅನ್ಯಾಯದ ಬಗ್ಗೆ ಮಾಧ್ಯಮಗಳ ಬಳಿಕ ಹೋಗಿ ನ್ಯಾಯ ಕೇಳುತ್ತೇವೆ. ಮಾಧ್ಯಮಗಳ ಬಳಿ ಹೋಗಬಾರದು ಎಂದರೆ ನಮಗೆ 1 ಕೋಟಿ ರೂ. ನೀಡಿ ಸುಮ್ಮನಾಗುತ್ತೆವೆ ಎಂದಿದ್ದಾರೆ.

    ಯುವಕನ ಪೋಷಕರು ಮರ್ಯಾದೆಗೆ ಅಂಜಿ ದಂಪತಿಗೆ ಮೊದಲು 22 ಲಕ್ಷ ರೂ. ಚೆಕ್ ನೀಡಿದ್ದಾರೆ. ನಂತರ ಮರುದಿನ ದಂಪತಿ ಮತ್ತೆ ಕರೆ ಮಾಡಿ ಮಗಳಿಗೆ ಗರ್ಭಪಾತ ಮಾಡಿಸಲು ವೈದ್ಯರು 20 ಲಕ್ಷ ರೂ. ಆಗುತ್ತೆ ಎಂದು ಹೇಳಿದ್ದಾರೆ. ಈಗ ನೀವು 20 ಲಕ್ಷ ರೂ. ಕೊಡಿ ಎಂದು ಯುವಕನ ಪೋಷಕರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಯುವಕನ ಪೋಷಕರು ಕವಿತಾ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಿದ್ದಾರೆ. ದಂಪತಿ ಮತ್ತೆ ಹಣಕ್ಕೆ ಒತ್ತಾಯ ಮಾಡಿದ ವೇಳೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ಯುವಕನ ಪೋಷಕರು ತಮ್ಮ ದೂರಿನಲ್ಲಿ ದಂಪತಿ ಬ್ಲಾಕ್‍ಮೇಲ್ ಮಾಡಿ ಐದು ತಿಂಗಳಲ್ಲಿ ಬರೋಬ್ಬರಿ 42 ಲಕ್ಷ ರೂ. ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಪೋಷಕರನ್ನು ಬಂಧಿಸಿದ್ದಾರೆ.

  • ಅಗ್ನಿ ಅವಘಡ – ಮಕ್ಕಳಿಬ್ಬರ ದುರ್ಮರಣ, ಪೋಷಕರು ಗಂಭೀರ

    ಅಗ್ನಿ ಅವಘಡ – ಮಕ್ಕಳಿಬ್ಬರ ದುರ್ಮರಣ, ಪೋಷಕರು ಗಂಭೀರ

    ಬೆಂಗಳೂರು: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಇದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಭಕ್ಷಿಗಾರ್ಡನ್‍ನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಕ್ಕಳನ್ನು ಕಾವೇರಿ (21) ಶ್ರೀಕಾಂತ್ (13) ಎಂದು ಗುರುತಿಸಲಾಗಿದೆ. ಇವರ ಪೋಷಕರಾದ ಮುರಳಿ ಮತ್ತು ಗೀತಾರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಬಂದು ಪರೀಶಿಲನೆ ನಡೆಸಿರುವ ಪೊಲೀಸರು, ತಂದೆಯೇ ಮನೆಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ವಿಚಾರಣೆ ನಂತರ ಸತ್ಯ ಹೊರಬರಬೇಕಿದೆ.

  • ಎರಡನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

    ಎರಡನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

    ಹಾವೇರಿ: ವಸತಿ ನಿಲಯದ ಎರಡನೇ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಈಶ್ವರನಗರದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದಿದೆ.

    ಕಾವ್ಯಾ ಬೆನ್ನೂರ(18) ಮೃತಪಟ್ಟ ವಿದ್ಯಾರ್ಥಿನಿ. ಮೂಲತಃ ರಾಣೇಬೆನ್ನೂರು ತಾಲೂಕಿನ ಹನುಮಾಪುರ ನಿವಾಸಿಯಾಗಿದ್ದು, ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ.

    ಈ ಘಟನೆ ಬಗ್ಗೆ ಕೆಲವರು ಕಾವ್ಯಾ ರಾತ್ರಿ ಶೌಚಾಲಯಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದ ವೇಳೆ ಕಾಲು ಜಾರಿ ಎರಡನೇ ಮಹಡಿಯಿಂದ ಬಿದ್ದಿದ್ದಾಳೆ ಎಂದು ಹೇಳುತ್ತಿದ್ದಾರೆ. ಆದರೆ ಪೋಷಕರು ತಮ್ಮ ಮಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದಾರೆ.

    ಈ ಬಗ್ಗೆ ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

  • ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತಿರುವನಂತಪುರಂ: ತೃತೀಯ ಲಿಂಗಿ ಎಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಕೇರಳ ಸರ್ಕಾರ ಕಮರ್ಷಿಯಲ್ ಪೈಲಟ್ ಮಾಡಲು ಮುಂದಾಗಿದೆ.

    ಕೇರಳದ 20 ವರ್ಷದ ತೃತೀಯ ಲಿಂಗಿ ಆಡಂ ಹ್ಯಾರಿಯನ್ನು ಆತನ ಪೋಷಕರು ಮನೆಯಿಂದ ಹೊರ ಹಾಕಿದ್ದಾರೆ. ಆಡಂ ಈಗ ದೇಶದ ಮೊದಲ ತೃತೀಯ ಲಿಂಗಿ ಕಮರ್ಷಿಯಲ್ ಪೈಲಟ್ ಆಗಲಿದ್ದಾರೆ. ಅಲ್ಲದೆ ಕೇರಳ ಸರ್ಕಾರ ಆಡಂ ಟ್ರೈನಿಂಗ್ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದೆ.

    ಆಡಂ ಬಳಿ ಈಗಾಗಲೇ ಪ್ರೈವೆಟ್ ಪೈಲಟ್ ಲೈಸೆನ್ಸ್ ಇದೆ. ಆದರೆ ಪ್ರಯಾಣಿಕರ ವಿಮಾನವನ್ನು ಚಲಾಯಿಸಲು ಕಮರ್ಷಿಯಲ್ ಲೈಸೆನ್ಸ್ ಬೇಕಾಗಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ ಕಾರಣ ಆಡಂ ಬಳಿ ತರಬೇತಿಯ ಶುಲ್ಕ ಪಾವತಿಸಲು ಹಣವಿರಲಿಲ್ಲ. ಆಡಂನ 3 ವರ್ಷಗಳ ತರಬೇತಿಗಾಗಿ ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ 23.34 ಲಕ್ಷ ರೂ. ಬಿಡುಗಡೆ ಮಾಡಿದೆ.

    ಆಡಂ ಈಗ ತಿರುವನಂತಪುರಂನ ರಾಜೀವ್ ಗಾಂಧಿ ಏವಿಯೇಷನ್ ಟೆಕ್ನಾಲಜಿ ಅಕಾಡೆಮಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲಿದ್ದಾರೆ. ಇದನ್ನೂ ಓದಿ:  ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಆಡಂ ಹ್ಯಾರಿ, ಈ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಾಲ್ಯದ ಕನಸು ನನಸಾಗುತ್ತಿರುವುದ್ದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಕಮರ್ಷಿಯಲ್ ಲೈಸೆನ್ಸ್ ಬೇಕೆಂದರೆ ಪೈಲಟ್‍ಗೆ 200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿರುವ ಅನುಭವ ಬೇಕಾಗುತ್ತದೆ. ಆಡಂ ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ಪ್ರೈವೇಟ್ ಪೈಲಟ್ ಲೈಸೆನ್ಸ್ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಂ 2017ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ತರಬೇತಿ ಪಡೆದ ನಂತರ ಅವರಿಗೆ ಲೈಸೆನ್ಸ್ ನೀಡಲಾಗಿತ್ತು.

  • ಮದ್ವೆಗೆ ಒಪ್ಪದ ಪೋಷಕರು – ಆತ್ಮಹತ್ಯೆಗೆ ಶರಣಾದ ಜೋಡಿ

    ಮದ್ವೆಗೆ ಒಪ್ಪದ ಪೋಷಕರು – ಆತ್ಮಹತ್ಯೆಗೆ ಶರಣಾದ ಜೋಡಿ

    ಚಿಕ್ಕಮಗಳೂರು: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ನೂತನ್(25) ಹಾಗೂ ಅಪೂರ್ವ(22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಆತ್ಮಹತ್ಯೆಗೆ ಶರಣಾಗುವ ಮುನ್ನ ನೂತನ್ ಹಾಗೂ ಅಪೂರ್ವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ನೂತನ್ ಹಾಗೂ ಅಪೂರ್ವ ಬೇರೆ-ಬೇರೆ ಜಾತಿಯಾಗಿದರಿಂದ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನೂತನ್ ಮನೆ ಕಡೆ ಅನುಕೂಲಸ್ಥವಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿತ್ತು.

    ಆದರೆ ಅಪೂರ್ವಳದ್ದು ಮಧ್ಯಮ ಕುಟುಂಬವಾಗಿದ್ದು, ತಾಯಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಇಬ್ಬರ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದರಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ಈ ವಿಷಯ ತಿಳಿದ ನೂತನ್ ಹಾಗೂ ಅಪೂರ್ವ ಪೋಷಕರು ಕೂಡಲೇ ಇಬ್ಬರನ್ನು ಹೆಚ್ವಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರೂ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.

    ಈ ಬಗ್ಗೆ ಬಣಕಲ್ ಹಾಗೂ ಗೋಣಿಬೀಡು ಎರಡೂ ಠಾಣೆಯಲ್ಲೂ ಯುಡಿಆರ್(ಅಸ್ವಾಭಾವಿಕ ಸಾವಿನ ವರದಿ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

  • ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ವಯಸ್ಸಾದ ಮೇಲೆ ವೃದ್ಧ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟು, ನಿರ್ಲಕ್ಷಿಸಿ ಶೋಷಿಸುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಿದೆ.

    2007ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದರಲ್ಲಿ ಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡಿತ್ತು.

    ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಬಲಪಡಿಸಿ, ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಆದ್ದರಿಂದ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಆದ್ಯತೆಗೆ ಒತ್ತು ನೀಡಲು ನಿರ್ಧರಿಸಿದೆ.

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ, ಅದರ ಕಾರ್ಯಸಾಧುತ್ವ ಮತ್ತು ಪರಿಣಾಮವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಸಹಾಯ ಪಡೆಯಲಿದ್ದು, ಆ ಸಂಸ್ಥೆಗೆ ಈ ಬಗ್ಗೆ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ. ಈ ಮೂಲಕ ಈಗಿರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಿಂದಿನ ಕಾನೂನಿನ ಪರಿಣಾಮ ಹೇಗಿದೆ? ಇದರಿಂದ ವೃದ್ಧ ಪೋಷಕರಿಗೆ ಯಾವ ರೀತಿ ಸಹಾಯವಾಗಿದೆ? ಹೀಗೆ ಹಲವು ವಿಚಾರಗಳ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚಿಸಲಿದೆ.

    ಇಲ್ಲಿಯವರೆಗೆ ಹೆತ್ತವರನ್ನು ನೋಡಿಕೊಳ್ಳುವ ಮಕ್ಕಳ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಆದರೆ ಮುಂದೆ ಅದನ್ನು ಮಕ್ಕಳು/ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.

    ಅಲ್ಲದೆ ಪೋಷಕರ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿಪಡಿಸಲಾದೆ. ಆದರೆ ಈ ಮೊತ್ತ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಯಾಕೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಹೆಚ್ಚು ಸಂಬಳ ಗಳಿಸುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

    ಹಾಗೆಯೇ ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ-ಕೇರ್ ಸೆಂಟರ್ ಗಳು, ವೃದ್ಧಾಶ್ರಮಗಳ ಗುಣಮಟ್ಟವನ್ನು ಹೆಚ್ಚಳವನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಕ್ಯಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ರೀತಿಯ ಸಂಸ್ಥೆಗಳು ವೃದ್ಧಾಶ್ರಮಗಳು, ಡೇ-ಕೇರ್ ಸೆಂಟರ್‍ ಗಳ ಪರಿಶೀಲನೆ ನಡೆಸಿ, ಅವುಗಳಿಗೆ ರೇಟಿಂಗ್ ಕೊಟ್ಟು ಗುಣಮಟ್ಟ ತಿಳಿಯಲು ಮುಂದಾಗಿದೆ.

  • ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ವೈದ್ಯರ ಮನೆ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.

    ಜಗಳೂರು ತಾಲೂಕಿನ ಗುಡ್ಡದಲಿಂಗನಹಳ್ಳಿ ಹನಮಂತಪ್ಪ, ಕರಿಬಸಮ್ಮ ದಂಪತಿಯ ಪುತ್ರಿ ಸಹನಾ (3) ಮೃತ ಬಾಲಕಿ. ವೈದ್ಯ ಕೆ.ವಿ. ಶಿವಪ್ರಕಾಶ್ ನಿರ್ಲಕ್ಷ್ಯವೇ ಸಹನಾ ಸಾವಿಗೆ ಕಾರಣ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಘಟನೆಯು ಶುಕ್ರವಾರ ಸಂಜೆ ನಡೆದಿದ್ದು, ಶಿವಪ್ರಕಾಶ್ ಅವರ ಮನೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಸಹನಾಗೆ ಶುಕ್ರವಾರ ಬೆಳಗ್ಗೆ ಜ್ವರ ಬಂದಿತ್ತು. ಹೀಗಾಗಿ ಹನಮಂತಪ್ಪ ಅವರು ಮಗಳನ್ನು ಕರೆದುಕೊಂಡು ಜಗಳೂರು ಪಟ್ಟಣದಲ್ಲಿರುವ ವೈದ್ಯ ಶಿವಪ್ರಕಾಶ್ ಅವರ ಬಳಿಗೆ ಬಂದಿದ್ದರು. ಶಿವಪ್ರಕಾಶ್ ಸಹನಾಗೆ ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ಬಾಯಿಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ವೈದ್ಯ ಶಿವಪ್ರಸಾದ್, ತಕ್ಷಣವೇ ಮಗುವನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ಹನಮಂತಪ್ಪ ಅವರಿಗೆ ಹೇಳಿದ್ದಾರೆ.

    ವಾಹನ ವ್ಯವಸ್ಥೆ ಮಾಡಿಕೊಂಡು ದಾವಣಗೆರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಸಹನಾ ಸಾವನ್ನಪ್ಪಿದ್ದಾಳೆ. ಇದರಿಂದ ಕೋಪಕೊಂಡ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು, ಸಹನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವೈದ್ಯ ಶಿವಪ್ರಕಾಶ್ ಅವರ ಮನೆ ಮುಂಭಾಗದಲ್ಲಿ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿ, ಮನೆಗೆ ಕಲ್ಲು ಎಸೆದು ಕಿಡಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಬೆಳಗಾವಿ: ಮಕ್ಕಳ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದಕ್ಕೆ ಹೆದರಿ ಶಿಕ್ಷಕರು ಶಾಲೆಗೆ ರಜೆ ಘೋಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಬಿಸಿಯೂಟದಲ್ಲಿ ಹುಳ ಕಾಣಿಸಿಕೊಂಡಿದ್ದಕ್ಕೆ ಶಿಕ್ಷಕರು ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ. ಇದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೆ 400 ಕ್ಕೂ ಹೆಚ್ಚು ಮಕ್ಕಳ ಪರದಾಡಿದ್ದಾರೆ. ಶುಚಿತ್ವವಿಲ್ಲದೆ ಅಡುಗೆ ತಯಾರಿಸಿದ್ದೆ ಊಟದಲ್ಲಿ ಹುಳು ಕಾಣಿಸಿಕೊಳ್ಳಲು ಕಾರಣ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಳು ಬಿದ್ದ ಊಟ ನೀಡಿದರೆ ತೊಂದರೆಯಾಗುತ್ತದೆ. ಮಕ್ಕಳು ಖಾಲಿ ಹೊಟ್ಟೆಯಲ್ಲಿ ಪಾಠ ಕೇಳುವುದಿಲ್ಲ ಎಂದು ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡದೆ ಹಾಗೆ ಬರಿ ಹೊಟ್ಟೆಯಲ್ಲಿ ಮನೆಗೆ ಹೋಗಿದ್ದಾರೆ. ಮನೆಗೆ ಬೇಗ ಬಂದ ಮಕ್ಕಳನ್ನು ವಿಚಾರಿಸಿದ ಪೋಷಕರಿಗೆ ವಿಷಯ ತಿಳಿದು ಬಂದಿದೆ. ಹುಳು ಬಿದ್ದಿದ್ದಕ್ಕೆ ಮಕ್ಕಳಿಗೆ ಬೇರೆ ಅಡುಗೆ ವ್ಯವಸ್ಥೆ ಮಾಡದೆ ಶಾಲೆಗೆ ರಜೆ ಘೋಷಿಸಿ ಹೊರಟು ಹೋದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿರುದ್ಧ ಪಾಲಕರು ಅಸಮಾಧಾನ ಹೊರಹಾಕಿದ್ದಾರೆ.

  • ಕುವೈತ್‍ನಲ್ಲಿ ಅಪಘಾತಕ್ಕೀಡಾದ ಮಗ – ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಟ

    ಕುವೈತ್‍ನಲ್ಲಿ ಅಪಘಾತಕ್ಕೀಡಾದ ಮಗ – ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಟ

    ಕಾರವಾರ: ಕುವೈತ್‍ನಲ್ಲಿ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಡುತ್ತಿರುವ ಘಟನೆ ಕಾರವಾರದಲ್ಲಿ ನಡೆದಿದೆ.

    ರಾಬಿನ್‍ಸನ್ ರೋಸಿಯೋ ಮೃತಪಟ್ಟ ವ್ಯಕ್ತಿ. ರಾಬಿನ್‍ಸನ್ ಕಡವಾಡದ ಕ್ರಿಶ್ಚಿಯನ್ ವಾಡದ ನಿವಾಸಿಯಾಗಿದ್ದು, ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ರಾಬಿನ್‍ಸನ್ ಮೃತದೇಹವನ್ನು ಕಾರವಾರಕ್ಕೆ ತರಲು ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ತಮ್ಮ ಪುತ್ರನ ಶವವನ್ನು ತರಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

    ಭಾನುವಾರ ಕುವೈತ್‍ನ ದಜೀಜ್ ಪ್ರದೇಶದಲ್ಲಿರುವ ಕುವೈತ್ ಫುಡ್ ಕಂಪನಿಗೆ ಕೆಲಸಕ್ಕೆ ತೆರಳುತ್ತಿರುವಾಗ ಕಿಂಗ್ ಅಬ್ದುಲ್ ಅಜೀಜ್ ರಸ್ತೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿತ್ತು. ಈ ವೇಳೆ ರಾಬಿನ್‍ಸನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದವರಿಗೆ ತೊಂದರೆಯಾಗಿದೆ. ಸದ್ಯ ಈ ಬಗ್ಗೆ ಅವರು ಜಿಲ್ಲಾಡಳಿತ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು, ಈಗಾಗಲೇ ರಾಬಿನ್‍ಸನ್ ಅವರ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ. ಕುವೈತ್‍ನಲ್ಲಿ ನಮ್ಮ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರ್ಕಾರದ ವತಿಯಿಂದ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ನಾನು ಈಗಾಗಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮೃತದೇಹ ಭಾರತಕ್ಕೆ ಹಸ್ತಾಂತರಿಸಲು ಏನು ಕ್ರಮ ಬೇಕು ಅದಕ್ಕೆ ಸಹಕರಿಸಿ ಎಂದು ಪತ್ರ ಬರೆದಿದ್ದೇನೆ ಎಂದರು.

  • ಬದುಕಿರುವ ಕಂದಮ್ಮನನ್ನು ಸಾವನ್ನಪ್ಪಿದೆ ಎಂದ ಹಾಸನದ ವೈದ್ಯರು

    ಬದುಕಿರುವ ಕಂದಮ್ಮನನ್ನು ಸಾವನ್ನಪ್ಪಿದೆ ಎಂದ ಹಾಸನದ ವೈದ್ಯರು

    ಚಿಕ್ಕಮಗಳೂರು: ಮೃತಪಟ್ಟಿದೆ ಎಂದು ಉಸಿರಾಡುತ್ತಿದ್ದ ಮಗುವನ್ನು ವೈದ್ಯರು ಪೋಷಕರಿಗೆ ಒಪ್ಪಿಸಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಹಳಿಯೂರಿನ ಲೋಕೇಶ್-ಸರೀತಾ ದಂಪತಿಯ ಮೂರು ತಿಂಗಳ ಮಗು ಆರವ್‍ನನ್ನು ಹುಷಾರಿಲ್ಲದ ಕಾರಣ ಮೂರು ದಿನಗಳ ಹಿಂದೆ ಹಾಸನದ ಮಣಿ ಆಸ್ಪತ್ರೆಗೆ ಕರೆತರಲಾಗಿತ್ತು.

    ಚಿಕಿತ್ಸೆಗೆ ಸರಿಯಾಗಿ ಮಗು ಸ್ಪಂದಿಸುತ್ತಿರಲಿಲ್ಲ. ಮಗು ಸರಿಯಾಗಿ ಸ್ಪಂದಿಸದ ಕಾರಣ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ, ಮಗುವನ್ನು ಅವರ ಕೈಗೆ ನೀಡಿದ್ದಾರೆ. ಆದರೆ, ಹಾಸನದಿಂದ ಮೂಡಿಗೆರೆಗೆ ತರುವ ಮಾರ್ಗಮಧ್ಯೆ ಕಂದಮ್ಮ ಅತ್ತಿದೆ.

    ತಕ್ಷಣವೇ ಪೋಷಕರು ಮಗುವನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಮಗು ಹುಷಾರಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆರವ್‍ನನ್ನು ಪೋಷಕರು ಈಗ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.