Tag: parents

  • ನಾಪತ್ತೆಯಾಗಿದ್ದ ಕೈ ಶಾಸಕನ ಅತ್ತೆಯ ಮಗ ಶವವಾಗಿ ಕಾಲುವೆಯಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಕೈ ಶಾಸಕನ ಅತ್ತೆಯ ಮಗ ಶವವಾಗಿ ಕಾಲುವೆಯಲ್ಲಿ ಪತ್ತೆ

    – ಕ್ಷುಲ್ಲಕ ಕಾರಣಕ್ಕೆ ಹೊಡೆದು ಕಾಲುವೆಗೆ ಎಸೆದ್ರಾ?

    ಬಳ್ಳಾರಿ: ಕಾಂಗ್ರೆಸ್ ಶಾಸಕ ಭೀಮನಾಯ್ಕ್ ಅವರ ಸೋದರ ಅತ್ತೆಯ ಮಗನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ.

    ಹೊಸಪೇಟೆಯ ಮೃತ್ಯುಂಜಯ ನಗರದ ನಿವಾಸಿ ಹಲಗಾ ನಾಯ್ಕ್ ಹಿರಿಯ ಪುತ್ರ 10ನೇ ತರಗತಿಯ ಓದುತ್ತಿದ್ದ ಸುನೀಲ್ (10) ಮೂರು ದಿನದ ಹಿಂದೆ ನಾಪತ್ತೆಯಾಗಿದ್ದು, ಇಂದು ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಹೊಡೆದು ಬಳ್ಳಾರಿಯ ಇಬ್ರಾಹಿಂಪುರ ಕಾಲುವೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕಳೆದ ಮೂರು ದಿನಗಳ ಹಿಂದೆ ಟ್ಯೂಷನ್‍ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಸುನೀಲ್ ಮನೆಗೆ ವಾಪಸ್ ಬಂದಿರಲಿಲ್ಲ. ಸಂಜೆ ತನಕ ಹುಡುಕಿ ಮಗ ಸಿಗದೆ ಇದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇದೇ ತಿಂಗಳು 23 ರಂದು ಸಹಪಾಠಿಗಳ ಜೊತೆಯಲ್ಲಿ ಜಗಳವಾಡಿಕೊಂಡಿದ್ದ ಸುನೀಲ್ ಅನ್ನು ಅವರ ಪಾಲಕರು ಥಳಿಸಿದ್ದರು ಎಂದು ಹೇಳಲಾಗಿದೆ.

    ಈ ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಕಾಲುವೆಗೆ ಹಾಕಿದ್ದಾರೆ ಎಂದು ಸುನೀಲ್ ಕುಮಾರ್ ನಾಯ್ಕ್ ಪೋಷಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯೊಳಗೆ ಮಕ್ಕಳು, ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪೋಷಕರು ಪತ್ತೆ

    ಮನೆಯೊಳಗೆ ಮಕ್ಕಳು, ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪೋಷಕರು ಪತ್ತೆ

    ಅಗರ್ತಲಾ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ರಿಪುರದ ಸಿಮ್ನಾ ನಗರದ ಸೊನಾಯಿ ಬೈರಾಗಿ ಸಾದು ಪರಾ ಪ್ರದೇಶದಲ್ಲಿ ನಡೆದಿದೆ.

    ಪರೇಶ್ ತಂತಿ, ಪತ್ನಿ ಸಂಧಾ ತಂತಿ ಹಾಗೂ ಮಕ್ಕಳಾದ ಬಿಶಾಲ್ ಮತ್ತು ರೂಪಾಲಿ ಮೃತರು. ಮನೆಯೊಳಗೆ ಮಕ್ಕಳಿಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಪೋಷಕರ ಮೃತದೇಹಗಳು ಮನೆಯ ಪಕ್ಕದಲ್ಲಿದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ದಂಪತಿ ಜಮೀನಿನ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ಹೀಗಾಗಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಧೈ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಮಿತಾಭ ಪಾಲ್ ತಿಳಿಸಿದ್ದಾರೆ.

  • ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ

    ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ

    ಹೈದರಾಬಾದ್: ಮದುವೆಯಾದ ಒಂದೇ ವಾರಕ್ಕೆ ಪತ್ನಿಯೊಬ್ಬಳು ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.

    ನಾಗಮಣಿ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ. ಒಂದು ವಾರದ ಹಿಂದೆ ಮದನಂತಪುರಂ ಗ್ರಾಮದ ನಾಗಮಣಿ ಜೋನ್ನಗಿರಿ ನಿವಾಸಿ ಲಿಂಗಯ್ಯ ಅವರ ಜೊತೆ ಮದುವೆ ಆಗಿದ್ದಳು. ಮದುವೆ ಆದ ಒಂದೇ ವಾರಕ್ಕೆ ವೈವಾಹಿಕ ಜೀವನದಿಂದ ಮುಕ್ತಿ ದೊರೆಯಲು ನಾಗಮಣಿ ತನ್ನ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

    ನಾಗಮಣಿಗೆ ಲಿಂಗಯ್ಯನ ಜೊತೆ ಮದುವೆ ಆಗಲು ಇಷ್ಟವಿರಲಿಲ್ಲ. ಆದರೂ ಆಕೆಯ ಪೋಷಕರು ಬಲವಂತವಾಗಿ ಈ ಮದುವೆ ಮಾಡಿಸಿದ್ದಾರೆ. ಹಾಗಾಗಿ ನಾಗಮಣಿ ಪತಿಯ ಮನೆಗೆ ಹೋದ ಒಂದು ವಾರದಲ್ಲೇ ಹಾಲಿನಲ್ಲಿ ವಿಷ ಹಾಕಿ ಲಿಂಗಯ್ಯನನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

    ಹಾಲು ಕುಡಿಯುತ್ತಿದ್ದಂತೆ ಲಿಂಗಯ್ಯ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬದ ಸದಸ್ಯರು ಆತನನ್ನು ಗುತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಲಿಂಗಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಗುತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೋನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

  • ಮತ್ತೊಬ್ಬನ ಜೊತೆ ನಿಶ್ಚಿತಾರ್ಥ – ಪ್ರೇಮಿಗಳು ಆತ್ಮಹತ್ಯೆ

    ಮತ್ತೊಬ್ಬನ ಜೊತೆ ನಿಶ್ಚಿತಾರ್ಥ – ಪ್ರೇಮಿಗಳು ಆತ್ಮಹತ್ಯೆ

    ಹೈದರಾಬಾದ್: ಪೋಷಕರು ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತೆಲಂಗಾಣದ ಜಗ್ತಿಯಲ್‍ನಲ್ಲಿ ನಡೆದಿದೆ.

    ಬುಕ್ಯ ಶಿರಿಶಾ ಮತ್ತು ಲಗಾವತ್ ಮಹಿಪಾಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶಿರಿಶಾ ಹಾಗೂ ಮಹಿಪಾಲ್ ಒಂದೇ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

    ತಮ್ಮ ಪ್ರೀತಿಯ ವಿಷಯವನ್ನು ಶಿರಿಶಾ ಹಾಗೂ ಮಹಿಪಾಲ್ ಪೋಷಕರ ಬಳಿ ಹೇಳಿದ್ದರು. ಆದರೆ ಅವರು ಇಬ್ಬರ ಪ್ರೀತಿಯನ್ನು ನಿರಕಾರಿಸಿದ್ದರು. ಅಲ್ಲದೆ ಶಿರಿಶಾ ಪೋಷಕರು ಆಕೆಗೆ ಬೇರೊಬ್ಬ ವ್ಯಕ್ತಿ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು.

    ಪೋಷಕರು ತಮ್ಮ ಪ್ರೀತಿಯನ್ನು ನಿರಾಕರಿಸಿದ್ದರಿಂದ ಬೇಸತ್ತ ಶಿರಿಶಾ ಹಾಗೂ ಮಹಿಪಾಲ್ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಇಬ್ಬರ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಪ್ರೀತ್ಸಿ ಮದ್ವೆಯಾದ ಮಗ್ಳು- ಎಸ್‍ಪಿ ಕಚೇರಿಯಲ್ಲಿ ಬಿಕ್ಕಿಬಿಕ್ಕಿ ಅತ್ತ ಪೋಷಕರು

    ಪ್ರೀತ್ಸಿ ಮದ್ವೆಯಾದ ಮಗ್ಳು- ಎಸ್‍ಪಿ ಕಚೇರಿಯಲ್ಲಿ ಬಿಕ್ಕಿಬಿಕ್ಕಿ ಅತ್ತ ಪೋಷಕರು

    ಕೊಪ್ಪಳ: ಮಗಳು ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಪೋಷಕರು ಎಸ್.ಪಿ ಕಚೇರಿಗೆ ಹೋಗಿ ಕಣ್ಣೀರು ಹಾಕುತ್ತಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ನಿರ್ಮಲಾ ಡ್ಯಾನ್ಸ್ ಮಾಸ್ಟರ್ ಮಂಜು ಎಂಬಾತನನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯ ವಿಷಯ  ಗೊತ್ತಾಗಿ ನಿರ್ಮಲಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಪ್ರೇಮಿಗಳು ಮದುವೆಯಾಗಿ ಬಂದಿದ್ದು, ಪೋಷಕರ ಕಣ‍್ಣೀರಿಗೆ ಕಾರಣವಾಗಿದೆ.

    ಮಂಜು ಗಂಗಾವತಿ ನಗರದಲ್ಲಿ ಡ್ಯಾನ್ಸ್ ಮಾಸ್ಟರ್, ನಿರ್ಮಲಾ ಕಾಲೇಜಿಗೆ ಹೋಗುತ್ತಿದ್ದಳು. ಡ್ಯಾನ್ಸ್ ಕಲಿಸಲು ಬಂದ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿದೆ. ಪ್ರೇಮಾಂಕುರವಾದ ಬಳಿಕ ಒಂದು ವರ್ಷ ಸುತ್ತಾಡಿದ್ದಾರೆ. ಕೊನೆಗೆ ಮದುವೆಯಾಗಲು ನಿರ್ಧಾರ ಮಾಡಿದಾಗ ನಿರ್ಮಲಾ ಪೋಷಕರು, ಮಂಜು ಕೀಳು ಜಾತಿಯವನು ಎಂಬ ಕಾರಣಕ್ಕೆ ವಿರೋಧ ಮಾಡಿದ್ದಾರೆ. ಹೀಗಾಗಿ ಒಂದು ವಾರದ ಹಿಂದೆ ಆನೇಕಲ್ ನಲ್ಲಿ ಮದುವೆಯಾಗಿ ಬಂದಿದ್ದಾರೆ.

    ನಿರ್ಮಲಾ ಪೋಷಕರಿಗೆ ಮಗಳು ಮದುವೆ ಆಗಿರುವ ವಿಚಾರ ತಿಳಿಸಿದು, ಮತ್ತೆ ಹೆದರಿಕೆ ಹಾಕಿದ್ದಾರೆ. ಈ  ಹಿನ್ನೆಲೆಯಲ್ಲಿ ನವ ಜೋಡಿ ಇಂದು ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ತಂದೆ 20 ವರ್ಷ ಸಾಕಿ ಸಲುಹಿದ ಮಗಳು ಮತ್ತೊಬ್ಬರ ಜೊತೆ ಹೋಗುವುದನ್ನ ಕಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಮ್ಮೊಂದಿಗೆ ಬಾ ಎಂದು ಗೋಗರೆದರೂ ಮಗಳು ಮಾತ್ರ ತಂದೆಯನ್ನು ತಿರುಗಿ ನೋಡಲಿಲ್ಲ. ಕಚೇರಿಯಲ್ಲಿ ಹೈಡ್ರಾಮಾ ನಡೆಯುತ್ತಿದ್ದಂತೆ  ಪೊಲೀಸರು ನವ ಜೋಡಿಯನ್ನು ಕರೆದುಕೊಂಡು ಹೋಗಿದ್ದಾರೆ.

    ನಿರ್ಮಾಲಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಆಕೆಯ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳುವ ಭರವಸೆ ನೀಡಿದ್ದೇನೆ. ಹೀಗಾಗಿ ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ಮಂಜು ತಿಳಿಸಿದ್ದಾರೆ.

  • ಜ್ಯೂಸ್ ಎಂದು ಕಳೆನಾಶಕ ಕುಡಿದು 3ರ ಬಾಲಕ ಸಾವು

    ಜ್ಯೂಸ್ ಎಂದು ಕಳೆನಾಶಕ ಕುಡಿದು 3ರ ಬಾಲಕ ಸಾವು

    ಚಿಕ್ಕಮಗಳೂರು: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಕುಡಿದು 3 ವರ್ಷದ ಬಾಲಕ ಕಳೆದ 18 ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದನು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

    ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದುರ್ಗದಹಳ್ಳಿಯ ನಿವಾಸಿ ಪ್ರವೀಣ್ ಹಾಗೂ ಪೂಜಿತ ದಂಪತಿಯ ಏಕೈಕ ಪುತ್ರ ಅಗಸ್ತ್ಯ(3) ಸಾವನ್ನಪ್ಪಿದ್ದ ನತದೃಷ್ಟ ಬಾಲಕ.

    ಅಕ್ಟೋಬರ್ 24ರಂದು ಅಗಸ್ತ್ಯ ಜೂಸ್ ಎಂದು ತಿಳಿದು ಮನೆಯಲಿದ್ದ ಕಳೆನಾಶಕವನ್ನು ಕುಡಿದಿದ್ದನು. ಈ ಬಗ್ಗೆ ತಿಳಿದ ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಸ್ಥಳೀಯ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ಅಗಸ್ತ್ಯನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.

    ಕಳೆದ 18 ದಿನಗಳಿಂದ ಅಗಸ್ತ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಬಾಲಕ ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

  • ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    -ಚಳಿಯನ್ನೂ ಲೆಕ್ಕಿಸದೆ ಆಹೋರಾತ್ರಿ ಧರಣಿ

    ತುಮಕೂರು: ಸರ್ಕಾರಿ ಶಾಲೆಯನ್ನು ಉಳಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ತುಮಕೂರಿನ ಬಡ್ಡಿಹಳ್ಳಿ ಶಾಲೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹದ ಜೊತೆಗೆ ಆಹೋರಾತ್ರಿ ಧರಣಿ ಮಾಡಿದ್ದಾರೆ.

    ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರೆಡಲ್ಲ. ಈ ಶಾಲೆ ಸುಮಾರು 50 ವರ್ಷಗಳ ಹಳೆಯದಾಗಿದ್ದು, ಸದ್ಯ ಇಲ್ಲಿ 150ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಮಳೆಗಾಲ ಬಂತೆಂದರೆ ಈ ಶಾಲೆಗೆ ನೀರು ನುಗ್ಗುತ್ತದೆ. ನೀರಿನಿಂದ ಏನಾದರೂ ಕಟ್ಟಡ ಕುಸಿದರೆ ಏನು ಗತಿಯೆಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಶಿಕ್ಷಕರು ವಿಧಿಯಿಲ್ಲದೆ ಇಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಅದೇ ಕಟ್ಟಡದಲ್ಲೇ ಭಯದಿಂದ ಮಕ್ಕಳು ಪಾಠ ಕಲಿಯಬೇಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ಹೀಗಾಗಿ ಶಾಲೆಯ ದುಸ್ಥಿತಿ ನೋಡಿ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಶಾಲೆ ರಿಪೇರಿ ಮಾಡುವವರೆಗೂ ಹೋರಾಟ ಮುಂದುವರೆಸೋದಾಗಿ ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ. ಇಡೀ ರಾತ್ರಿ ಚಳಿಯನ್ನೂ ಲೆಕ್ಕಿಸದೇ ಧರಣಿ ನಡೆಸಿದ್ದಾರೆ. ಪೋಷಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಕೂಡ ಸಾಥ್ ಕೊಟ್ಟಿವೆ.

    ಮಕ್ಕಳು ಇಲ್ಲ ಎಂದು ಹಲವು ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಶಾಲೆಗಳ ಅಭಿವೃದ್ಧಿ ಮಾಡದೆ, ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ. ಹೀಗಾದರೆ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ? ತಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸ್ಸು ಬರುತ್ತಾರೆ ಎಂದು ಹೇಗೆ ನಂಬಿ ಮಕ್ಕಳನ್ನು ಶಾಲೆಗೆ ಕಳಿಸೋದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

  • ಪ್ರೀತಿಸಿ ಮದುವೆಯಾದ ಜೋಡಿಗೆ ವಿಲನ್ ಆದ ಪೋಷಕರು

    ಪ್ರೀತಿಸಿ ಮದುವೆಯಾದ ಜೋಡಿಗೆ ವಿಲನ್ ಆದ ಪೋಷಕರು

    ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿಯ ಪೋಷಕರೇ ವಿಲನ್ ಆಗಿ ಕಿರುಕುಳ ನೀಡಲು ಶುರು ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿ ಪಟ್ಟಣದ ರಮೇಶ್ ಮತ್ತು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗೋನಾಳ ಗ್ರಾಮದ ಸಂಗೀತಾ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರು ಜುಲೈ ತಿಂಗಳಿನಲ್ಲಿ ಮದುವೆ ಕೂಡ ಆಗಿದ್ದರು. ಇಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಯುವತಿಯ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಯುವತಿಯ ಪೋಷಕರು ಈಗಾಗಲೇ ಇಬ್ಬರನ್ನು ದೂರ ಮಾಡಿ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಗೆ ಕರೆದುಕೊಂಡು ಹೋದ ನಂತರ ಹಲ್ಲೆ ಮಾಡಿದ್ದಲ್ಲದೇ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಪೋಷಕರ ಕಿರುಕುಳದಿಂದ ಬೇಸತ್ತ ಸಂಗೀತಾ ಮತ್ತೆ ಮನೆ ಬಿಟ್ಟು ಓಡಿ ಬಂದಿದ್ದು, ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ರಕ್ಷಣೆಗಾಗಿ ಬೇಡಿಕೊಂಡಿದ್ದಾರೆ.

    ಕುಷ್ಟಗಿ ಪಟ್ಟಣದಲ್ಲಿ ಗ್ಯಾರೇಜ್ ಇಟ್ಟುಕೊಂಡಿರುವ ರಮೇಶ್ ಕಳೆದ ಎರಡು ವರ್ಷಗಳಿಂದ ಸಂಗೀತಾಳನ್ನು ಪ್ರೀತಿಸುತ್ತಿದ್ದನು. ನಾಲ್ಕು ತಿಂಗಳ ಹಿಂದೆಯೇ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯುವತಿ ಪೋಷಕರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ನಾವು ವಯಸ್ಕರಾಗಿದ್ದು, ಜೊತೆಗೆ ಬಾಳಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

  • ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಡವಟ್ಟು- ಜನಿಸಿದ್ದು ಗಂಡು, ಕೊಟ್ಟಿದ್ದು ಹೆಣ್ಣುಮಗು

    ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಡವಟ್ಟು- ಜನಿಸಿದ್ದು ಗಂಡು, ಕೊಟ್ಟಿದ್ದು ಹೆಣ್ಣುಮಗು

    ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯ ಎಡವಟ್ಟು ಒಂದಲ್ಲ ಎರಡಲ್ಲ, ಆದರೆ ಈ ಬಾರಿ ಮಾತ್ರ ಸಿಬ್ಬಂದಿ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಪೋಷಕರಿಗೆ ಅದಲು ಬದಲು ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಅವರಿಗೆ ಇದೇ ತಿಂಗಳು 8ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಧ್ಯರಾತ್ರಿ 12:30ರ ಸುಮಾರಿಗೆ ಹೆಣ್ಣು ಮಗು ಜನಿಸಿತ್ತು. ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಮನೆಗೆ ಭೇಟಿ ನೀಡಿ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ.

    ಈ ವೇಳೆ ಮಗುವಿನ ತಾಯಿ ಮಲ್ಲೇಶ್ವರಿ ಅವರು ನಮ್ಮದು ಹೆಣ್ಣು ಮಗು ಎಂದು ಹೇಳಿದಾಗ, ದಾದಿ ತಮ್ಮಲ್ಲಿದ್ದ ದಾಖಲೆ ತೋರಿಸಿ ನೋಡಿ ಇದರಲ್ಲಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿದೆ ಎಂದು ದಾಖಲಾಗಿದೆ ಎಂದಿದ್ದಾರೆ.

    ಮಗುವಿನೊಂದಿಗೆ ಆಟವಾಡಿಕೊಂಡಿದ್ದ ತಾಯಿಯ ಮನಸ್ಸು ಕದಡಿದ್ದು, ಗಂಡು ಮಗುವಾಗಿದ್ದರು ಕೂಡ ಹೆಣ್ಣು ಮಗುವನ್ನು ನೀಡಿದ್ದಾರಾ? ಆಸ್ಪತ್ರೆಯಲ್ಲೆನಾದರು ಬದಲಾಯಿಸಿದರಾ? ಎಂಬ ಅನುಮಾನ ಕಾಡ ತೊಡಗಿತು. ಇದರಿಂದ ಮಗುವಿನ ತಂದೆ, ಅಜ್ಜ ಹಾಗೂ ಸೋದರ ಮಾವ ಸೇರಿದಂತೆ ಸಂಬಂಧಿಗಳು ಜಿಲ್ಲಾಸ್ಪತ್ರೆಗೆ ಆಗಮಿಸಿ, ಮಗುವನ್ನು ಅದಲುಬದಲು ಮಾಡಿದ್ದೀರಾ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಆಸ್ಪತ್ರೆಯ ದಾಖಲೆಗಳಲ್ಲಿ ಮಾತ್ರ ಗಂಡು ಮಗು ಎಂದಿದ್ದು, ಪೋಷಕರಿಗೆ ಕೊಟ್ಟಿದ್ದು ಮಾತ್ರ ಹೆಣ್ಣು ಮಗುವಾಗಿದೆ. ಇದರಿಂದ ಪೋಷಕರು ಮಗುವಿನ ಡಿಎನ್‍ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯರು ಮಾತ್ರ ಯಾವ ತನಿಖೆಗಾದರೂ ಸಿದ್ಧವಿದ್ದೇವೆ. ಡಿಎನ್‍ಎ ಪರೀಕ್ಷೆಗೆ ಪೋಷಕರು ಒಪ್ಪಿಕೊಂಡರೆ ಮಾಡಿಸಲು ಸಿದ್ಧ ಎಂದಿದ್ದಾರೆ.

  • ಟಿವಿ ನೋಡುವುದರಲ್ಲಿ ದಂಪತಿ ಬ್ಯುಸಿ- ಟಬ್‍ನಲ್ಲಿ ಬಿದ್ದು ಪುತ್ರಿ ಸಾವು

    ಟಿವಿ ನೋಡುವುದರಲ್ಲಿ ದಂಪತಿ ಬ್ಯುಸಿ- ಟಬ್‍ನಲ್ಲಿ ಬಿದ್ದು ಪುತ್ರಿ ಸಾವು

    ತಿರುವನಂತಪುರಂ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕ ಸುಜೀತ್ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ದಂಪತಿಯ ಪುತ್ರಿ ಮನೆಯ ಟಬ್‍ನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಎರಡು ವರ್ಷದ ಬಾಲಕಿ ರೇವತಿ ಸಂಜನಾ ಮೃತ ದುರ್ದೈವಿ. ತೂತ್ತುಕುಡಿ ಸಮೀಪದ ಥ್ರೇಸ್‍ಪುರಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ರೇವತಿ ಪೋಷಕರು ಸುಜೀತ್ ರಕ್ಷಣಾ ಕಾರ್ಯಾಚರಣೆಯನ್ನು ಟಿವಿಯಲ್ಲಿ ನೋಡುತ್ತಿದ್ದರು. ಈ ವೇಳೆ ರೇವತಿ ಆಟವಾಡುತ್ತಾ ಟಬ್‍ನಲ್ಲಿ ಬಿದ್ದಿದ್ದಾಳೆ. ಮಗಳು ಕಾಣಿಸದೆ ಇರುವುದರಿಂದ ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದಿದ್ದಾಗ ಟಬ್‍ನಲ್ಲಿ ನೋಡಿದ್ದು, ಬಾಲಕಿ ಪತ್ತೆಯಾಗಿದ್ದಾಳೆ. ತಕ್ಷಣವೇ ರೇವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು, ಬಾಲಕಿ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್‍ವೆಲ್‍ಗೆ ಶುಕ್ರವಾರ ಸಂಜೆ ಸುಜಿತ್(2) ಆಯಾತಪ್ಪಿ ಬಿದ್ದಿದ್ದನು. ಸುಮಾರು 600 ಅಡಿ ಆಳದ ಬೋರ್‍ವೆಲ್‍ನಲ್ಲಿ ಬಿದ್ದ ಸುಜಿತ್ 100 ಅಡಿ ಆಳದಲ್ಲಿ ಸಿಲುಕಿದ್ದನು. ಕಳೆದ ನಾಲ್ಕು ದಿನಗಳಿಂದ ಸುಜಿತ್ ನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ ಹರಸಾಹಸ ಪಟ್ಟರೂ ಬಾಲಕನ ಜೀವ ಉಳಿಸಲು ಆಗಲಿಲ್ಲ. ಜಿಲ್ಲಾಡಳಿತ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ.

    ವಿಪರೀತ ದುರ್ವಾಸನೆ ಬರುತ್ತಿರುವ ಕಾರಣ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ನಾವು ಬಾಲಕನನ್ನು ರಕ್ಷಣೆ ಮಾಡಲು ಸಾಕಷ್ಟು ಕಷ್ಟಪಟ್ಟೆವು ಆದರೆ ನಮ್ಮಿಂದ ಆತನನ್ನು ಜೀವಂತವಾಗಿ ಕೊಳವೆಬಾವಿಯಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊಳವೆಬಾವಿಯಿಂದ ಮೃತದೇಹದ ಕೊಳೆತ ದುರ್ವಾಸನೆ ಬರುತ್ತಿದ್ದ ಕಾರಣ ಆತ ಮೃತಪಟ್ಟಿರುವುದು ಖಚಿತವಾಗಿದೆ. ಬಾಲಕನ ಮೃತದೇಹ ಹೆರತೆಗೆಯಲಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.