Tag: parents

  • ಮಕ್ಕಳು, ಪೋಷಕರು, ಶಿಕ್ಷಕರಿಗಾಗಿ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ

    ಮಕ್ಕಳು, ಪೋಷಕರು, ಶಿಕ್ಷಕರಿಗಾಗಿ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ

    ಬೆಂಗಳೂರು: ಶಾಲೆಗಳ ಪರಿಸ್ಥಿತಿ ಸುಧಾರಣೆಗೆ ಶಿಕ್ಷಣ ಇಲಾಖೆ ಹೊಸ ಚಿಂತನೆ ಮಾಡಿದೆ. ಶಾಲೆಗಳ ಬಗ್ಗೆ ತಿಳಿಯಲು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆ ತಿಳಿಯಲು ಸಹಾಯವಾಣಿ ಪ್ರಾರಂಭಿಸಲು ನಿರ್ಧಾರ ಮಾಡಿದೆ.

    ಸಹಾಯವಾಣಿಗೆ ವಿದ್ಯಾರ್ಥಿಗಳು, ಪೋಷಕರು ಏನೇ ಸಮಸ್ಯೆ ಇದ್ದರೂ ದೂರಿನ ಮೂಲಕ ನೀಡಬಹುದು. ದೂರು ಪಡೆದ ಅಧಿಕಾರಿಗಳು ಸಂಬಂಧಿಸಿದವರಿಗೆ ದೂರಿನ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ.

    ಮಾರ್ಚ್ 31ರ ಒಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದೆ. ಶಿಕ್ಷಣ ಇಲಾಖೆಯ ಅಧಿಕೃತ ಸಹಾಯವಾಣಿ ಇದಾಗಲಿದೆ. ಕೇವಲ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲ. ತಮ್ಮ ಶಿಕ್ಷಕರು ಕೂಡಾ ತಮ್ಮ ಸಮಸ್ಯೆಗಳ ಹೇಳಿಕೊಳ್ಳಬಹುದು.

    ಶೈಕ್ಷಣಿಕ ಸಮಸ್ಯೆ, ಶಾಲೆಗಳ ಪರಿಸ್ಥಿತಿಗಳು ಹೀಗೆ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಶಿಕ್ಷಕರು ಇಲಾಖೆ ಗಮನಕ್ಕೆ ತರಬಹುದು. ಇಲಾಖೆಗೆ ಅಗತ್ಯ ಸಲಹೆ ಸೂಚನೆಗಳನ್ನು ಶಿಕ್ಷಕರು ಕೊಡಬಹುದಾಗಿದೆ. ಶಿಕ್ಷಕರ ಸಲಹೆಗಳ ಮೇಲೆ ಅಗತ್ಯ ಕ್ರಮವನ್ನು ಇಲಾಖೆ ತೆಗೆದುಕೊಳ್ಳಲಿದೆ.

  • ಶೇಕ್‍ಹ್ಯಾಂಡ್ ಮಾಡೋದ್ರಿಂದ ಅವರ ದರಿದ್ರತನಗಳು ನಮ್ಗೆ ಬರುತ್ತೆ: ಜಗ್ಗೇಶ್

    ಶೇಕ್‍ಹ್ಯಾಂಡ್ ಮಾಡೋದ್ರಿಂದ ಅವರ ದರಿದ್ರತನಗಳು ನಮ್ಗೆ ಬರುತ್ತೆ: ಜಗ್ಗೇಶ್

    – ಮಕ್ಕಳು ಸುಸಂಸ್ಕೃತರಾಗಲು ಪೋಷಕರು ಮಾದರಿಯಾಗ್ಬೇಕು

    ಚಿತ್ರದುರ್ಗ: ಮಕ್ಕಳಿಗೆ ಸಂಸ್ಕಾರ ಕಲಿಸುವುದು ಪೋಷಕರ ಆದ್ಯ ಕರ್ತವ್ಯ. ಹೀಗಾಗಿ ಪೋಷಕರು ನ್ಯಾಯ, ಧರ್ಮ ಹಾಗೂ ಸತ್ಯದ ಪ್ರತೀಕವಾಗಿ ಬದುಕು ಸಾಗಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬೇಕು ಎಂದು ನಟ ಜಗ್ಗೇಶ್ ಹೇಳಿದರು.

    ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಪೋಷಕರು ನಡೆದ ದಾರಿಯಲ್ಲಿ ಮಕ್ಕಳು ನಡೆಯುತ್ತಾರೆ. ಹೀಗಾಗಿ ಮಕ್ಕಳ ಮನಸ್ಸಲ್ಲಿ ಏನಿದೆ ಎಂಬುದನ್ನು ಅರಿತುಕೊಂಡು ಅವರ ಮನಸ್ಸಿಗೆ ಒಪ್ಪುವ ಗುರಿಯನ್ನು ರೂಪಿಸುವ ಅದ್ಭುತವಾದ ಪೋಷಕರು ನೀವು ಆಗಬೇಕು ಎಂದರು.

    ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ ನಮ್ಮಲ್ಲಿ ನಿಮ್ಮಲ್ಲಿ ಆ ಸಂಸ್ಕೃತಿ ಇದಿಯಾ ಎಂದು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಬೇಕು. ಇವತ್ತು ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿಯರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೀವಿ. ನಾವು ಎಲ್ಲದರೂ ಹೋದರೆ ಶೇಕ್ ಹ್ಯಾಂಡ್ ಮಾಡುತ್ತೇವೆ. ನಾವು ಎರಡು ಕೈಗಳನ್ನು ಮುಗಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿ ನಮ್ಮಲ್ಲೇ ಇರುತ್ತದೆ. ನಾವು ಶೇಕ್ ಹ್ಯಾಂಡ್ ಮಾಡುವುದರಿಂದ ಅವರ ದರಿದ್ರತನಗಳು ನಮಗೆ ಬರುತ್ತವೆ ಎಂದರು.

    ಯಾವ ತಂದೆ-ತಾಯಿಗಳು ಮನೆಯಲ್ಲಿ ನೇರವಾಗಿ ಇರ್ತಾರೆ, ಅವರ ಮಕ್ಕಳು ಬದುಕಿನಲ್ಲಿ ಯಾವ ತಪ್ಪು ಮಾಡುವುದಿಲ್ಲ, ಅವರು ಸರಿಯಾದ ಹಾದಿಯಲ್ಲಿ ನಡೆಯುತ್ತಾರೆ. ಅಲ್ಲದೆ ನಾನು ಬಾಲ್ಯ ವ್ಯವಸ್ಥೆಯಲ್ಲಿದ್ದಾಗ ನನ್ನ ಅಜ್ಜಿ, ಚಿಕ್ಕಮ್ಮಂದಿರು ಬೆಳಿಗ್ಗೆ ಎದ್ದು ರಾಗಿ ಬೀಸುವರು. ತಾತಂದಿರು ಬೆಳಿಗ್ಗೆ ಎದ್ದ ತಕ್ಷಣ ಕೈಕಾಲು ತೋಳೆದು ಹೊಲದಲ್ಲಿ ಕೆಲಸ ಮಾಡುವರು. ಜೊತೆಗೆ ಮಕ್ಕಳಿಗೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ಯಾವ ರೀತಿ ಮಾತನಾಡಬೇಕು, ದೊಡ್ಡವರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಯಾರಾದರೂ ಮನೆಗೆ ದೊಡ್ಡವರು ಬಂದರೆ ಕಾಲಿಗೆ ನಮಸ್ಕಾರ ಮಾಡು ಅಂತಾ ಹೇಳಿಕೊಡುವರು. ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡು ಎನ್ನುವರು. ಈಗ ಎಲ್ಲಿ ಹೋಯ್ತು ಆ ಸಂಪ್ರದಾಯ? ಎಂದು ಪ್ರಶ್ನಿಸಿದರು.

    ಸನಾತನ ಧರ್ಮದಲ್ಲಿ ಪರಸ್ಪರ ಭೇಟಿ ಮಾಡಿದಾಗ ಎರಡು ಕೈಗಳನ್ನು ನಮಸ್ಕಾರ ಮಾಡುವುದು. ನಮ್ಮಲ್ಲಿ ಹಳೇ ಸಂಪ್ರದಾಯ ಹೋಗಿ ಶೇಕ್ ಹ್ಯಾಂಡ್ ಹಂತಕ್ಕೆ ತಲುಪಿದ್ದೀವಿ. ಎರಡು ಕೈಗಳನ್ನು ಜೋಡಿ ನಮಸ್ಕಾರ ಮಾಡಿದಾಗ ನಮ್ಮಲ್ಲಿರುವ  ಶಕ್ತಿ, ನಮ್ಮಲ್ಲೇ ಇರುತ್ತದೆ ಎಂದು ನಾವು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು. ಶಿಸ್ತು, ಗುರಿಯನ್ನು ಕಲಿಸಬೇಕು ಇದನ್ನು ಯಾರು ಮಾಡುತ್ತಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಐಪಿಎಸ್ ಪೋಲಿಸ್ ಅಧಿಕಾರಿ ಸಂದೀಪ್ ಪಾಟೀಲ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ್ ಹೀರೆಮಠ್, ಡಿ.ಟಿ. ಶ್ರೀನಿವಾಸ್, ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

  • 2 ಬಾರಿ ದೂರ ಮಾಡಿದ್ರೂ ಒಂದಾದ ಪ್ರೇಮಿಗಳು

    2 ಬಾರಿ ದೂರ ಮಾಡಿದ್ರೂ ಒಂದಾದ ಪ್ರೇಮಿಗಳು

    – ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದು ಮನವಿ

    ದಾವಣಗೆರೆ: ಎರಡು ಬಾರಿ ಮನೆಯವರು ದೂರ ಮಾಡಿದ್ದರೂ ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ. ಇದೀಗ ಈ ಜೋಡಿ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.

    ಹರಿಹರ ಪಟ್ಟಣದ ನಿವಾಸಿಯಾದ ಪವಿತ್ರಾ ಹಾಗೂ ಹರಪ್ಪನಹಳ್ಳಿ ತಾಲೂಕಿನ ಖಂಡೇಕೆರೆ ಗ್ರಾಮದ ಯುವಕ ಕೊಟ್ರೇಶ್ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪವಿತ್ರಾ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗಳಾಗಿದ್ದು, ಈಕೆಯ ಮನೆ ಎದುರು ಜೆಸಿಬಿ ಚಾಲಕನಾಗಿದ್ದ ಕೊಟ್ರೇಶ್ ರೂಂ ಬಾಡಿಗೆ ಮಾಡಿಕೊಂಡಿದ್ದನು.

    ಇವರಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ ಇಬ್ಬರೂ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬೆಂಗಳೂರಿನಲ್ಲಿರುವ ಮಾಹಿತಿ ಗೊತ್ತಾದ ಪವಿತ್ರಾ ಪೋಷಕರು, ಇಬ್ಬರು ಪ್ರೇಮಿಗಳನ್ನು ದೂರ ಮಾಡಿದ್ದಾರೆ. ಆದರೆ ಇಬ್ಬರು ಮತ್ತೆ ಮನೆ ಬಿಟ್ಟು ಬಂದಿದ್ದು, ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪವಿತ್ರಾ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಿಮ್ಮನ್ನು ಜೀವಂತವಾಗಿ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವಕ ಹೇಳಿದ್ದಾನೆ. ನನ್ನ ಸ್ವ-ಇಚ್ಛೆಯಿಂದ ನಾನು ಬಂದಿದ್ದೇನೆ. ಅಲ್ಲದೆ ನಾವು ಮದುವೆಯಾಗಿದ್ದೇವೆ. ನಮ್ಮ ಜೀವನದಲ್ಲಿ ನಾವು ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಯುವತಿ ಪೋಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾಳೆ.

    ಅಲ್ಲದೆ ಯುವಕ ಕೊಟ್ರೇಶ್ ತಾಯಿ ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ತಂದೆ ಇಲ್ಲದ ಮಗನನ್ನು ಕಷ್ಟ ಪಟ್ಟು ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದೇನೆ. ಈಗ ನನ್ನ ಮಗನ ಜೊತೆ ಪವಿತ್ರಾಳನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಜನ್ಮದಾತರ ಪಾದಪೂಜೆ ಮಾಡಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಹೊಸ ವರ್ಷಾಚರಣೆ

    ಜನ್ಮದಾತರ ಪಾದಪೂಜೆ ಮಾಡಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಹೊಸ ವರ್ಷಾಚರಣೆ

    ಶಿವಮೊಗ್ಗ: ಕುಡಿದು, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಆಚರಿಸುವುದು ಸಾಮಾನ್ಯ. ಆದರೆ ಶಿವಮೊಗ್ಗದ ಶಾಲೆಯೊಂದರಲ್ಲಿ ಹೊಸವರ್ಷದ ದಿನದಂದು ಪೋಷಕರ ಪಾದಪೂಜೆ ಮಾಡುವ ಮೂಲಕ ಮಕ್ಕಳು ಹೊಸ ವರ್ಷಾಚರಣೆ ಮಾಡಿದ್ದಾರೆ.

    ಶಿವಮೊಗ್ಗ ತಾಲೂಕು ಅನುಪಿನಕಟ್ಟೆಯಲ್ಲಿನ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಹೊಸವರ್ಷದ ದಿನದಂದು ರೀತಿ ಕೇಕ್ ಕಟ್ ಮಾಡಿ, ಡ್ಯಾನ್ಸ್ ಮಾಡಿ ಆಚರಣೆ ಮಾಡುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸತ್ಯನಾರಾಯಣ ಪೂಜೆ ಹಾಗೂ ತಮ್ಮ ಜನ್ಮದಾತರ ಪಾದಪೂಜೆ ಮಾಡುವ ಮೂಲಕ ಹೊಸ ವರ್ಷಾಚರಣೆ ಮಾಡುತ್ತಾರೆ.

    ಹೊಸ ವರ್ಷದ ದಿನದಂದು ಪೋಷಕರು ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿ ಶಾಲೆಗೆ ಬರುತ್ತಾರೆ. ಪುರುಷರು ಪಂಚೆ, ಅಂಗಿ ಧರಿಸಿದರೆ, ಮಹಿಳೆಯರು ಸೀರೆಯಲ್ಲಿ ಬರುತ್ತಾರೆ. ಈ ವೇಳೆ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಯರ ಪಾದ ತೊಳೆದು, ಸಂಪ್ರದಾಯ ಬದ್ಧ, ಶಾಸ್ತ್ರೋತ್ರವಾಗಿ ಪಾದ ಪೂಜೆ ಮಾಡುತ್ತಾರೆ. ಪೋಷಕರ ಪಾದ ತೊಳೆದು, ಒರೆಯಿಸಿ, ವಿಭೂತಿ, ಅರಿಶಿನ, ಕುಂಕುಮ ಹಚ್ಚಿ, ಹೂವು ಇಟ್ಟು ಗಂಧದ ಕಡ್ಡಿ ಬೆಳಗಿ ಮಂಗಳಾರತಿ ಮಾಡಿ ಪಾದಪೂಜೆ ಮಾಡುತ್ತಾರೆ.

    ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯರೊಬ್ಬರು ಪೂಜೆಯನ್ನು ಹೇಗೆ ಮಾಡುವುದು ಎಂದು ಮಾರ್ಗದರ್ಶನ ನೀಡುತ್ತಾರೆ. ಅದರಂತೆ ವಿದ್ಯಾರ್ಥಿಗಳು ಪೂಜೆ ಮಾಡುತ್ತಾರೆ. ವಿದ್ಯಾರ್ಥಿಗಳು ಈ ರೀತಿ ಪಾದಪೂಜೆ ಮಾಡುವುದರಿಂದ ಪೋಷಕರ ಬಗ್ಗೆ ಪ್ರೀತಿ, ಗೌರವ ಹೆಚ್ಚಾಗುತ್ತದೆ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ. ಇದು ವಸತಿ ಶಾಲೆಯಾದ ಕಾರಣ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಬಿಟ್ಟು ದೂರ ಇರುತ್ತಾರೆ. ಈ ರೀತಿಯ ಕಾರ್ಯಕ್ರಮದಿಂದ ಅವರು ಹತ್ತಿರವಾಗುತ್ತಾರೆ. ಅಲ್ಲದೆ ವಿದ್ಯಾರ್ಥಿ ಹಾಗೂ ತಂದೆ- ತಾಯಿಗಳಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸಲಾಗುತ್ತದೆ.

    ರಾಮಕೃಷ್ಣ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಇರುವಷ್ಟು ವರ್ಷ ತಪ್ಪದೆ ಬರುತ್ತಾರೆ.

    ಈ ಬಾರಿಯ ಕಾರ್ಯಕ್ರಮದ ಸಾನಿಧ್ಯವನ್ನು ಕೊಡಲಿ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಹಿಸಿದ್ದರು. ಮಕ್ಕಳು ತಮ್ಮ ತಂದೆ-ತಾಯಿಗಳಿಂದ ದೂರವಿದ್ದು ಅವರಿಬ್ಬರ ನಡುವೆ ಆತ್ಮೀಯತೆ ಕಡಿಮೆಯಾಗಿ, ಮುಂದೆ ವಯಸ್ಸಾದ ತಂದೆ ತಾಯಿಯರನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಹೀಗಾಗಿ ಮಕ್ಕಳು ಹಾಗೂ ಪೋಷಕರ ನಡುವೆ ಕೊಂಡಿಯಾಗಿ ಶಾಲೆಯು ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಟಕರಮಣ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಸಹ ಪಾದಪೂಜೆಯಿಂದ ನಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರಿ ಅವಾಂತರದ ಪ್ರತಿಭಾ ಪುರಸ್ಕಾರ

    ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರಿ ಅವಾಂತರದ ಪ್ರತಿಭಾ ಪುರಸ್ಕಾರ

    ರಾಮನಗರ: ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಕಾರ್ಯಕ್ರಮವನ್ನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆಸುವ ಮೂಲಕ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಟೂರ್ ರೀತಿ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಇದನ್ನೂ ಓದಿ: SSLC, PUC ಪ್ರತಿಭಾ ಪುರಸ್ಕಾರ- ವಿದ್ಯಾರ್ಥಿಗಳಿಗೆ ಡಿಕೆಶಿ ಭಾವಚಿತ್ರದ ವಾಚ್ ವಿತರಣೆ

    ಅಂದಹಾಗೇ ಕನಕಪುರ ತಾಲೂಕಿನ ರಸ್ತೆಜಕ್ಕಸಂದ್ರದ ಖಾಸಗಿ ಶಿಕ್ಷಣ ಸಂಸ್ಥೆಯಾದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಾಮನಗರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರಸಭೆ ಪುರಸಭೆ ಸಹಯೋಗದೊಂದಿಗೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶೇ 100% ರಷ್ಟು ಫಲಿತಾಂಶ ಪಡೆದ ಶಾಲೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.

    ಆದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಒಂದು ಸಾವಿರ ಆಸನ ವ್ಯವಸ್ಥೆಯ ಸಭಾಂಗಣದಲ್ಲಿ ನಾಲ್ಕು ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಹ್ವಾನ ನೀಡಲಾಗಿತ್ತು. ಸಭಾಂಗಣದ ಒಳಗೆ ಕೇವಲ ಸಾವಿರ ಮಂದಿ ಆಸೀನರಾಗಿದ್ದರೆ ಉಳಿದ ಮೂರು ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಸಭಾಂಗಣದ ಹೊರಗೆ ಅಲೆಯುವಂತಾಗಿತ್ತು.

    ಸಭಾಂಗಣದ ಒಳಗೆ ಚೇರ್‌ಗಳು ಸಿಗದೇ ಸರಿಯಾಗಿ ಉಸಿರಾಡಲು ಸ್ಥಳಾವಕಾಶವೂ ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಇನ್ನೂ ಚೇರ್‌ಗಳು ಸಿಗದ ಕಾರಣ ವಿದ್ಯಾರ್ಥಿಗಳು ಕ್ಯಾಂಪಸ್ ರೌಂಡ್ಸ್ ಹೊಡೆಯುವಂತಾಗಿದ್ರೆ, ಮೆಟ್ಟಿಲು, ಹೊರಗಡೆಯ ಜಾಗದಲ್ಲಿ ತಮ್ಮ ಸರತಿಗಾಗಿ ವಿದ್ಯಾರ್ಥಿಗಳು ಕಾಯ್ದು ಕೂರುವಂತಾಗಿತ್ತು. ಇದೇ ವೇಳೆ ಬಯಲಿನಲ್ಲಿ ಉರಿ ಬಿಸಿಲಿನಲ್ಲಿ ಊಟದ ಆಯೋಜನೆ ಮಾಡಿದ್ರೆ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದರು.

    ಜಿಲ್ಲಾ ಕ್ರೀಡಾಂಗಣವೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ನೀಡುವ ಸ್ಥಳವಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಟಾಚಾರಕ್ಕೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದ್ದು, ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

  • ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪೋಷಕರು ಅರೆಸ್ಟ್ – ಮನೆಯಲ್ಲಿ ಅನಾಥವಾಯ್ತು ಮಗು

    ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪೋಷಕರು ಅರೆಸ್ಟ್ – ಮನೆಯಲ್ಲಿ ಅನಾಥವಾಯ್ತು ಮಗು

    ಲಕ್ನೋ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ತಂದೆ-ತಾಯಿ ಅರೆಸ್ಟ್ ಆಗಿ ಅವರು 14 ತಿಂಗಳ ಹೆಣ್ಣು ಮಗು ಅನಾಥವಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಪೌರತ್ವ ವಿಧೇಯಕ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ವಾರಣಾಸಿಯ 60 ಜನರನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಕಳೆದ ಗುರುವಾರ ಬಂಧಿಸಿದೆ. ಇವರಲ್ಲಿ ಏಕ್ತಾ ಮತ್ತು ರವಿಶೇಖರ್ ದಂಪತಿಯನ್ನು ಬಂಧಿಸಿದ್ದು, ಅವರಿಗೆ 14 ತಿಂಗಳ ಹಿಂದೆ ಜನಿಸಿದ್ದ ಹೆಣ್ಣು ಮಗು ತಂದೆ ತಾಯಿ ಇಲ್ಲದೇ ಕಷ್ಟಪಡುವಂತೆ ಆಗಿದೆ.

    ಪ್ರತಿಭಟನೆ ನಿಷೇಧಿಸಿ 144 ಸೆಕ್ಷನ್ ಹಾಕಿದ್ದರೂ ವಾರಣಾಸಿಯಲ್ಲಿ ಪ್ರತಿಭಟನೆಯನ್ನು ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ವಾರಣಾಸಿಯ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ದಂಪತಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗಳು ಹವಾಮಾನ ಅಜೆಂಡಾ ಎಂಬ ಎನ್‍ಜಿಒ ನಡೆಸುತ್ತಿದ್ದು, ಪರಿಸರ ಮಾಲಿನ್ಯದ ಬಗ್ಗೆ ಅರಿವು ಮಾಡಿಸುವ ಕೆಲಸ ಮಾಡುತ್ತಿದ್ದರು.

    ಈ ದಂಪತಿ ಡಿಸೆಂಬರ್ 19 ರಂದು ಎಡ ಗುಂಪಿನವರು ಆಯೋಜನೆ ಮಾಡಿದ್ದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೋಷಕರ ಬಂಧನದ ನಂತರ ಅವರ 14 ತಿಂಗಳ ಮಗಳು ಐರಾ ಅನಾಥವಾಗಿ ಅವರ ಸಬಂಧಿಕರ ಮನೆಯಲ್ಲಿ ಇದ್ದಾಳೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ರವಿಶೇಖರ್ ಅವರ ತಾಯಿ ಶೀಲಾ ತಿವಾರಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆದರೆ ಪೊಲೀಸರು ಯಾಕೆ ಅವನನ್ನು ಬಂಧಿಸಿದ್ದಾರೆ? ಅವನು ಶಾಂತಿಯೂತವಾಗಿ ಪ್ರತಿಭಟನೆ ಮಾಡುತ್ತಿದ್ದ. 14 ತಿಂಗಳ ಮಗು ತಾಯಿಯನ್ನು ಬಿಟ್ಟು ಹೇಗೆ ಬದುಕುತ್ತದೆ. ಈ ರೀತಿಯಲ್ಲಿ ನೀವು ಅಪರಾಧವನ್ನು ನಿಯಂತ್ರಿಸುತ್ತೀರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

    ಮಗು ಏನನ್ನು ತಿನ್ನುತ್ತಿಲ್ಲ. ಅಪ್ಪ ಅಮ್ಮ ಬೇಕು ಎಂದು ಯಾವಾಗಲೂ ಅಳುತ್ತದೆ. ನಾವು ಅಪ್ಪ ಅಮ್ಮ ಬರುತ್ತಾರೆ ಎಂದು ಸುಳ್ಳು ಹೇಳಿ ಮಗುವಿಗೆ ಊಟ ಮಾಡಿಸುತ್ತಿದ್ದೇವೆ. ನಮಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಈ ಮಗುವಿನ ಮುಖ ನೋಡಿಯಾದರೂ ಏಕ್ತಾ ಮತ್ತು ರವಿಶೇಖರ್ ಕೋರ್ಟ್ ಜಾಮೀನು ಮಂಜೂರು ಮಾಡಬೇಕೆಂದು ದಂಪತಿಯ ಸಂಬಂಧಿಕರು ಮನವಿ ಮಾಡಿದ್ದಾರೆ.

  • ಸೂರ್ಯಗ್ರಹಣ- ಮಣ್ಣಲ್ಲಿ ಮಕ್ಕಳನ್ನು ಕುತ್ತಿಗೆಯವರೆಗೆ ಹೂತಿಟ್ಟ ಪೋಷಕರು

    ಸೂರ್ಯಗ್ರಹಣ- ಮಣ್ಣಲ್ಲಿ ಮಕ್ಕಳನ್ನು ಕುತ್ತಿಗೆಯವರೆಗೆ ಹೂತಿಟ್ಟ ಪೋಷಕರು

    -ಕಂದಮ್ಮಗಳ ಆಕ್ರಂದನ

    ಕಲಬುರಗಿ: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ತಾಜಾಸುಲ್ತಾನಪುರದಲ್ಲಿ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದಾರೆ. ಗ್ರಹಣದ ವೇಳೆ ಮಕ್ಕಳನ್ನು ಹೂತಿಟ್ಟರೆ ಅಂಗವೈಕಲ್ಯ ನಿವಾರಿಸುತ್ತೆ ಎಂಬ ಮೂಢನಂಬಿಕೆ ಈ ಆಚರಣೆಗೆ ಪೋಷಕರು ಮುಂದಾಗಿದ್ದಾರೆ.

    ಇತ್ತ ಕಲಬುರಗಿ ಜಿಲ್ಲೆಯ ಅಫಜಲ್‍ಪುರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಹ ಮಕ್ಕಳನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಒಂದೇ ಕಡೆ ಮೂರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆ ಭಾಗದವರೆಗೆ ಹೂತಿಡಲಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೋಷಕರು, ಮಗನ ಬಲಗೈನಲ್ಲಿ ಯಾವುದೇ ಶಕ್ತಿ ಇಲ್ಲ. ಗ್ರಹಣದ ದಿನ ಹೀಗೆ ಹೂತಿಟ್ಟರೆ ನಿವಾರಣೆ ಆಗುತ್ತೆ ಅಂತಾ ಹೇಳಿದ್ರು. ಆದ್ದರಿಂದ ಮಕ್ಕಳನ್ನು ಹೂತಿಡಲಾಗಿದೆ ಎಂದು ಹೇಳಿದ್ದಾರೆ.

    ಮತ್ತೊಂದು ಮಗುವಿನ ತಾಯಿ ಮಾತನಾಡಿ, ಈಕೆಗೆ ಕುಳಿತುಕೊಳ್ಳಲು ಬರಲ್ಲ. ನಮ್ಮ ಮನೆಯ ಹಿರಿಯರು ಗ್ರಹಣದ ವೇಳೆ ಮಕ್ಕಳನ್ನು ಹೂತಿಡಬೇಕೆಂದು ಹೇಳಿದ್ರು. ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದ ಮಣ್ಣಿನಲ್ಲಿ ಹೂತಿಡಲಾಗಿದೆ. ಮಗಳು ಆರೋಗ್ಯವಾಗಲಿ ಎಂಬ ಒಂದೇ ಒಂದು ಉದ್ದೇಶದಿಂದ ಹೂತಿಟ್ಟಿದ್ದೇನೆ. ಆಕೆ ಅಳೋದನ್ನು ನೋಡಿದ್ರೆ ನನಗೂ ನೋವಾಗುತ್ತಿದೆ. ಹೀಗೆ ಹಲವು ಜನ ಹೇಳಿದ್ದರಿಂದ ಒಮ್ಮೆ ಪ್ರಯತ್ನಿಸಿದ್ರೆ ತಪ್ಪಿಲ್ಲ ಎಂದು ಈ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.

  • ಫೀ ತುಂಬದ್ದಕ್ಕೆ ಮಕ್ಕಳನ್ನು ಹೊರ ಹಾಕಿದ ಶಿಕ್ಷಣ ಸಂಸ್ಥೆ

    ಫೀ ತುಂಬದ್ದಕ್ಕೆ ಮಕ್ಕಳನ್ನು ಹೊರ ಹಾಕಿದ ಶಿಕ್ಷಣ ಸಂಸ್ಥೆ

    ಗದಗ: ಫೀ ಕಟ್ಟಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಮಕ್ಕಳನ್ನೇ ಶಾಲಾ ತರಗತಿಯಿಂದ ಹೊರ ಹಾಕಿದೆ.

    ಜಿಲ್ಲೆಯ ಗಜೇಂದ್ರಗಢದ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆ(ಸಿಬಿಎಸ್‍ಸಿ) ಶಾಲೆಯ ಆಡಳಿತ ಮಂಡಳಿ ಮಕ್ಕಳನ್ನು ತರಗತಿಯಿಂದ ಹೊರಗೆ ಹಾಕುವ ಮೂಲಕ ಅಮಾನವೀಯವಾಗಿ ವರ್ತಿಸಿದೆ.

    ಇದರಿಂದ ಮನನೊಂದ ನೂರಾರು ಮಕ್ಕಳು ಕಣ್ಣೀರಿಡುತ್ತಿದ್ದಾರೆ. ತ್ರೈಮಾಸಿಕ ಪರೀಕ್ಷೆ ನಡೆಯುತ್ತಿದ್ದರೂ ಪೋಷಕರು ಫೀ ತುಂಬಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನ ಹೊರಹಾಕಲಾಗಿದೆ. 2ನೇ ಹಂತದ ಹಣ ಬಾಕಿ ಇರುವ ನೂರಾರು ಮಕ್ಕಳನ್ನು ತರಗತಿ ಕೊಠಡಿಯಿಂದ ಹೊರಹಾಕಿದ್ದಾರೆ.

    ಫೀ ತುಂಬುವಂತೆ ನಮಗೆ ನೋಟೀಸ್ ಅಥವಾ ಯಾವುದೇ ಮಾಹಿತಿ ನೀಡದೆ ಏಕಾಏಕಿ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ್ದಾರೆ ಎಂದು ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್.ಕೆ.ಜಿ ಯಿಂದ 10ನೇ ತರಗತಿ ವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಸಮವಸ್ತ್ರ, ಸ್ಕೂಲ್ ಬಸ್, ಪುಸ್ತಕಗಳನ್ನು ಹೊರತು ಪಡಿಸಿ, ಎಲ್.ಕೆ.ಜಿ ಮಕ್ಕಳಿಗೆ 10 ಸಾವಿರ ರೂ., 1 ರಿಂದ 3ನೇ ತರಗತಿ 13 ಸಾವಿರ ರೂ., 4 ರಿಂದ 7ನೇ ತರಗತಿ 15 ಸಾವಿರ ರೂ. ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 20 ಸಾವಿರ ರೂ.ಗಳ ವರೆಗೆ ಶುಲ್ಕ ಪಡೆಯುತ್ತಾರೆ. ಇದೀಗ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕುವ ಮೂಲಕ ಮಕ್ಕಳ ಹಕ್ಕುಗಳನ್ನು ಶಾಲೆ ಉಲ್ಲಂಘನೆ ಮಾಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

  • ಪ್ರೀತ್ಸಿ ಮದ್ವೆಯಾದ ಪ್ರೇಮಿಗಳಿಗೆ ಜೀವ ಬೆದರಿಕೆ

    ಪ್ರೀತ್ಸಿ ಮದ್ವೆಯಾದ ಪ್ರೇಮಿಗಳಿಗೆ ಜೀವ ಬೆದರಿಕೆ

    ಮಂಡ್ಯ: ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಎದುರಾಗಿದ್ದು, ಇದೀಗ ತಮ್ಮ ಜೀವ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗಾ ಗ್ರಾಮದ ಹರೀಶ್ ಮತ್ತು ಶಶಿಕಲಾ ಎಂಬವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆಗೆ ಶಶಿಕಲಾ ತಂದೆ ಹಾಗೂ ಚಿಕ್ಕಪ್ಪ ವಿರೋಧ ಇದೆ.

    ಹರೀಶ್ ಮನೆಯವರು ಬಡಕುಟುಂಬದವರು ಎಂಬ ಕಾರಣಕ್ಕೆ ಶಶಿಕಲಾ ಮನೆಯವರು ವಿರೋಧ ಮಾಡುತ್ತಿದ್ದಾರೆ. ಇವರಿಬ್ಬರೂ ಕೂಡ ಚಿಕ್ಕ ವಯಸ್ಸಿನಿಂದಲೂ ಒಂದೇ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಂತಹಂತವಾಗಿ ಇವರಿಬ್ಬರ ನಡುವೆ ಪ್ರೀತಿ ಬೆಳದ ಕಾರಣ ಇಬ್ಬರೂ ಮನೆಯಲ್ಲಿ ಮದುವೆಯ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆದರೆ ಶಶಿಕಲಾ ಕುಟಂಬದರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಈ ಇಬ್ಬರು ಪ್ರೇಮಿಗಳು ಡಿಸಂಬರ್ 1ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

    ಇಬ್ಬರೂ ಪದವಿಧರರಾಗಿದ್ದು, ಬೆಂಗಳೂರಿನ ಖಾಸಗಿ ಬ್ಯಾಂಕ್‍ನಲ್ಲಿ ಉದ್ಯೋಗ ಮಾಡುತ್ತಾ ತಮ್ಮ ಸಂಸಾರ ಸಾಗಿಸುತ್ತಿದ್ದಾರೆ. ಇದೀಗ ಹುಡುಗಿಯ ಚಿಕ್ಕಪ್ಪ ಈ ಇಬ್ಬರಿಗೂ ಹಾಗೂ ಹುಡುಗನ ಪೋಷಕರಿಗೆ ಜೀವ ಬೇದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಮಗೆ ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

    ಪೊಲೀಸರು ಭಾನುವಾರ ಎರಡು ಕುಟುಂಬದವರನ್ನು ಕರೆದು ರಾಜಿ ಸಂಧಾನ ಮಾಡಿದ್ದಾರೆ. ಹೀಗಿದ್ದರೂ ಸಹ ಶಶಿಕಲಾ ತಂದೆ ಮತ್ತು ಚಿಕ್ಕಪ್ಪ ಹರೀಶ್ ಕುಟುಂಬದವರ ಮೇಲೆ ಹಲ್ಲೆ ಮಾಡಿ ನವದಂಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಈ ಇಬ್ಬರು ತಮ್ಮ ಹಾಗೂ ಕುಟುಂಬದ ರಕ್ಷಣೆಗಾಗಿ ಮಂಡ್ಯ ಎಸ್‍ಪಿ ಅವರ ಮೊರೆ ಹೋಗಿದ್ದಾರೆ.

  • ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳಿಂದ ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್

    ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳಿಂದ ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್

    ಯಾದಗಿರಿ: ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳು ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇದು ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

    ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ವಿದ್ಯಾಲಕ್ಷ್ಮಿ ಖಾಸಗಿ ಶಾಲೆ ಮಕ್ಕಳನ್ನು ಆಡಳಿತ ಮಂಡಳಿ ಶೈಕ್ಷಣಿಕ ಪ್ರವಾಸಕ್ಕೆ ಎಂದು ಬಳ್ಳಾರಿಯ ಖಾಸಗಿ ಪಾರ್ಕಿಗೆ ಕರೆದುಕೊಂಡು ಹೋಗಿತ್ತು.

    ಶೈಕ್ಷಣಿಕ ಪ್ರವಾಸಕ್ಕೆ ಹೋದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಉತ್ತರ ಕರ್ನಾಟಕದ ಶೈಲಿಯ ಡಬಲ್ ಮಿನಿಂಗ್ ಹಾಡಿಗೆ ರೈನ್ ಡ್ಯಾನ್ಸ್ ಮಾಡಿಸಿದೆ. ‘ನಿನೆಗು ಬಂಗಾರ ಹತ್ತಾದ ಏನ್’ ಎಂಬ ಅಸಭ್ಯ ಹಾಡಿಗೆ ವಿದ್ಯಾರ್ಥಿಗಳು ರೈನ್ ಡ್ಯಾನ್ಸ್ ಮಾಡಿದ್ದಾರೆ.

    ವಿದ್ಯಾರ್ಥಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದ ವೈರಲ್ ಆಗಿದೆ. ಸಂಸ್ಕೃತಿ- ಸಂಸ್ಕಾರ ಕಲಿಸಬೇಕಾಗಿದ್ದ ಶಾಲೆ ಈ ರೀತಿಯ ಅಸಭ್ಯ ನೃತ್ಯಕ್ಕೆ ಮಕ್ಕಳಿಗೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.