Tag: parents

  • ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    – ಮನನೊಂದ ಯುವಕ ಎರಡು ದಿನದ ನಂತ್ರ ನೇಣಿಗೆ ಶರಣು

    ಚಂಡೀಗಢ್: ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೋಷಕರು ನಿಂದಿಸಿದ್ದು, ಇದರಿಂದ ಬೇಸತ್ತ ಯುವಕ ಎರಡು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಜಗಾದ್ರಿಯಲ್ಲಿ ನಡೆದಿದೆ.

    ಸುರೇಶ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು. ಆದರೆ ಇದು ಆತನ ತಾಯಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸುರೇಶ್‍ಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಎರಡು ದಿನಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಸುರೇಶ್ ಸಹೋದರ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ನನ್ನ ತಮ್ಮ ಸುರೇಶ್ ಯಾವಾಗಲೂ ಬೈಕ್ ಮೆಕ್ಯಾನಿಕ್ ಜೊತೆ ಇರುತ್ತಿದ್ದನು. ಅಲ್ಲದೆ ಆತ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಸುರೇಶ್, ಬಾಲಕಿಯನ್ನು ಹಲವಾರು ಬಾರಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ನಮ್ಮ ಕುಟುಂಬಸ್ಥರಿಗೆ ತಿಳಿದಾಗ ಆತನಿಗೆ ಬೈದು ಬುದ್ಧಿ ಹೇಳಲಾಗಿತ್ತು. ಜ. 1ರಂದು ನನ್ನ ಪತ್ನಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಸುರೇಶ್, ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು ಎಂದು ತಿಳಿಸಿದ್ದಾರೆ.

    ಈ ವಿಷಯವನ್ನು ನನ್ನ ಪತ್ನಿ ನನ್ನ ತಾಯಿಯ ಬಳಿ ಹೇಳಿದ್ದಳು. ಆಗ ನನ್ನ ತಾಯಿ ಆತನಿಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸೋಮವಾರ ರಾತ್ರಿ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸುರೇಶ್ ಪ್ರೀತಿಸುತ್ತಿದ್ದ ಬಾಲಕಿ 16 ವರ್ಷದವಳಾಗಿದ್ದು, ಇಬ್ಬರು ಈಗಲೇ ಮದುವೆಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಆತನಿಗೆ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಅಲ್ಲದೆ ಯುವಕ ಮೃತದೇಹದ ಬಳಿ ಯಾವುದೇ ಡೆತ್‍ನೋಟ್ ಕೂಡ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಪುನೀತ್‌ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ

    ಪುನೀತ್‌ರನ್ನು ನೋಡಲು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದಾನೆ ಬಾಲಕ

    ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೋಡಲು 16 ವರ್ಷದ ಬಾಲಕನೊಬ್ಬ ಅಂಗೈಯಲ್ಲಿ ತನ್ನ ಜೀವ ಹಿಡಿದುಕೊಂಡು ಕಾದು ಕುಳಿತಿದ್ದಾನೆ.

    16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ.

    ಆದರ್ಶ್‍ಗೆ ಈಗ 16 ವರ್ಷ ವಯಸ್ಸು, ಬೇರಯ ಮಕ್ಕಳ ಹಾಗೆ ಈತನಿಗೂ ಆಟ ಆಡಬೇಕು ಶಾಲೆಗೆ ಹೋಗಬೇಕು ಎನ್ನುವ ಆಸೆಯಿದೆ. ಆದರೆ ಆದರ್ಶ್ ದೇಹದ ಎಲ್ಲಾ ಮೂಳೆಗಳ ಬೆಳವನಿಗೆ ಆಗುತ್ತಿದೆ. ಹೊರತು ದೇಹದಲ್ಲಿ ಮಾಂಸ ಖಂಡಗಳ ಬೆಳವಣಿಗೆ ಆಗುತ್ತಿಲ್ಲ. ಹೀಗಾಗಿ ಈ ಪುಟ್ಟ ಬಾಲಕ ಸ್ವತಂತ್ರವಾಗಿ ಏನನ್ನು ಮಾಡಲು ಸಾಧ್ಯವೇ ಇಲ್ಲಾ. ಆದರೆ ಈತನ ಬುದ್ಧಿ ಮಾತ್ರ ಅತೀ ತೀಕ್ಷ್ಣವಾಗಿದೆ.

    ಪುನೀತ್ ರಾಜ್‍ಕುಮಾರ್ ಎಂದರೆ ಆದರ್ಶ್‍ಗೆ ಪಂಚಪ್ರಾಣ. ಪುನೀತ್ ರಾಜಕುಮಾರ್ ಅವರ ಯಾವುದೇ ಹೊಸ ಚಿತ್ರ ಬಿಡುಗಡೆ ಆದರೆ ಸಾಕು ಆದರ್ಶ್ ಮೊದಲ ದಿನ ಮೊದಲ ಶೋ ನೋಡಲೇ ಬೇಕು. ಮನೆಯಲ್ಲಿ ಪ್ರತಿ ಗೋಡೆಯ ತುಂಬಾ ಪುನೀತ್ ಅವರ ಪೋಸ್ಟರ್ ಗಳಿವೆ. ಪುನೀತ್ ನೋಡುತ್ತಲೇ ಊಟ ಮಾಡುತ್ತಾನೆ ಹಾಗೂ ಕಾಲ ಕಳೆಯುತ್ತಾನೆ. ಅವನಂತೇ ತಾನೂ ನಟನೆ ಮಾಡಬೇಕು ಫೈಟ್ ಮಾಡಬೇಕು ಎನ್ನುವ ಕನಸು ಕಾಣುತ್ತಲೇ ಜೀವನ ಸಾಗಿಸುತ್ತಿದ್ದಾನೆ.

    ಆದರ್ಶ್ ಅವರ ತಂದೆ ಕಡು ಬಡವರಾಗಿದ್ದು, ಜೀವನ ನಡೆಸಲು ಆಟೋ ಇದೆ. ಇದರ ಸಂಪಾದನೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದರೆ ಹುಟ್ಟಿದಾಗಿನಿಂದಲೇ ಮಗನ ಕಾಯಿಲೆ ಕಂಡು ರಾಜ್ಯದ ಹೆಸರಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಗನ ಕಾಯಿಲೆ ಮಾತ್ರ ವಾಸಿ ಆಗಿಲ್ಲ. ಹೀಗಾಗಿ ತಂದೆ-ತಾಯಿ ಸಹ ಕೈ ಚೆಲ್ಲಿದ್ದಾರೆ. ಇನ್ನು ಮಗನಿಗೆ ಪುನೀತ್ ಎಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಪುನೀತ್ ಸಿನಿಮಾ ಬಿಡುಗಡೆ ಆದರೆ ಸಾಕು ಈ ಬಾಲಕನನ್ನು ಕರೆದುಕೊಂಡು ಚಿತ್ರ ನೋಡಿಕೊಂಡು ಬರುತ್ತಾರೆ.

    ಪುನೀತ್ ಅವರನ್ನು ಒಮ್ಮೆ ಆದರೂ ಆದರ್ಶ್ ಭೇಟಿ ಮಾಡಬೇಕು ಎಂದು ಆತನ ಪೋಷಕರು ಪ್ರಯತ್ನಿಸಿದ್ದಾರೆ. ಕಳೆದ ಎರಡು ಬಾರಿ ಪುನೀತ್ ಹೊಸಪೇಟೆಗೆ ಬಂದಾಗಲೂ ಪ್ರಯತ್ನಿಸಿದ್ದು, ಆದರೆ ನೂರಾರು ಅಭಿಮಾನಿಗಳ ಅಬ್ಬರದಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಮಗನ ಆಸೆಯನ್ನು ಪುನೀತ್ ಅವರು ಈಡೇರಿಸಿದರೆ ಅವರಿಗೆ ಕೋಟಿ ಕೋಟಿ ನಮನ ಎಂದು ಆದರ್ಶ್ ತಂದೆ- ತಾಯಿ ಹೇಳುತ್ತಾರೆ.

  • ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಪೋಷಕರಿಗೆ ಗೊತ್ತಾಗಿದ್ದು ಕೊಪ್ಪದಲ್ಲಿ – ಸುರಕ್ಷಿತವಾಗಿ ಮಡಿಲು ಸೇರಿತು ಕಂದಮ್ಮ

    ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಪೋಷಕರಿಗೆ ಗೊತ್ತಾಗಿದ್ದು ಕೊಪ್ಪದಲ್ಲಿ – ಸುರಕ್ಷಿತವಾಗಿ ಮಡಿಲು ಸೇರಿತು ಕಂದಮ್ಮ

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೇಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ.

    ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿತ್ತು. ಇದನ್ನು ಗಮನಿಸಿದ ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಕರೆ ತಂದು ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

    ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲದವರಾದ ಬೀನು ಎಂಬವರು ಕುಟುಂಬ  ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿ ಸಮಯವಾಗಿದ್ದರಿಂದ ವಾಹನದಲ್ಲಿ ಪೋಷಕರು ನಿದ್ರೆಗೆ ಜಾರಿದ್ದರು. ಟಿಟಿ ವಾಹನದ ಹಿಂದಿನ ಡೋರ್ ಆಕಸ್ಮಿಕವಾಗಿ ತೆರೆದಿದ್ದರಿಂದ ಮಗು ಆಗುಂಬೆ ತಿರುವಿನ ಏಳನೇಯ ಕ್ರಾಸ್‍ನಲ್ಲಿ ಹೊರಗೆ ಬಿದ್ದಿದೆ. ಆದರೆ ವಾಹನದಲ್ಲಿ 8-10 ಮಂದಿ ಇದ್ದರೂ ಎಲ್ಲರೂ ಸಹ ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯದೇ ಮುಂದೆ ತೆರಳಿದ್ದಾರೆ.

    ಎನ್.ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ತಮ್ಮ ಮಗು ವಾಹನದಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೇ ಮಾರ್ಗವಾಗಿ ಕಾರು ತಿರುಗಿಸಿಕೊಂಡು ಮಗುವನ್ನು ಹುಡುಕುತ್ತಾ ವಾಪಸ್ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್‍ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ತಮ್ಮ ಮಗು ಠಾಣೆಯಲ್ಲಿರುವ ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆ-ತಾಯಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಅದ್ರ ಕಂಟ್ರೋಲ್‍ನಲ್ಲಿರಬಾರದು: ಸಚಿವ ಸುರೇಶ್ ಕುಮಾರ್

    ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಅದ್ರ ಕಂಟ್ರೋಲ್‍ನಲ್ಲಿರಬಾರದು: ಸಚಿವ ಸುರೇಶ್ ಕುಮಾರ್

    ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಅಡಿಕ್ಷನ್‍ಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ನಾನು ಹಲವು ಬಾರಿ ಭಾಷಣದಲ್ಲಿ ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಮೊಬೈಲ್ ಕಂಟ್ರೋಲ್‍ನಲ್ಲಿರಬಾರದು ಎಂದು ಹೇಳಿದ್ದೇನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಮೊಬೈಲ್‍ಗೆ ಮಕ್ಕಳು ಹೆಚ್ಚು ಒತ್ತು ನೀಡುವ ಕಾರಣ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಮನೆಯಲ್ಲಿ ಮೊಬೈಲ್ ಫ್ರೀ ಟೈಂ ಎಂದು ಪೋಷಕರು ಮಾಡಬೇಕು. ಆ ಸಮಯದಲ್ಲಿ ಮನೆಯಲ್ಲಿ ಹಾಗೂ ಮಗುವಿನ ಶಿಕ್ಷಣದ ಬೆಳವಣಿಗೆ ಬಗ್ಗೆ ಹೆಚ್ಚಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

    ರಾಜ್ಯ ಸರ್ಕಾರ ಪ್ರತಿ ಶನಿವಾರದ ಬ್ಯಾಗ್ ಲೆಸ್ ಡೇ ಮಾಡಿದೆ. ಆ ದಿನ ಶಾಲೆಯಲ್ಲಿ ಮಕ್ಕಳ ಜೊತೆ ಕಥೆಗಳನ್ನು ಹೇಳುವದು ಸೇರಿದಂತೆ ಇತರೆ ಚಟುವಟಿಕೆ ಮಾಡಲು ಯೋಚಿಸಲಾಗಿದೆ. ಆದರೆ ಪ್ರತಿ ಶನಿವಾರ ಬೇಡ ತಿಂಗಳಲ್ಲಿ 2 ಶನಿವಾರ ಮಾತ್ರ ಬ್ಯಾಗ್ ಲೇಸ್ ಡೇ ಮಾಡೋಣ ಎಂದರು ಕೆಲವರು ಸಲಹೆ ನೀಡಿದ್ದಾರೆ. ಹೀಗಾಗಿ ಇದರ ಬಗ್ಗೆ ಯೋಚನೆ ನಡೆಯುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

  • ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಮೃತಪಟ್ಟ ನಂತ್ರ ಐದು ಜನರಿಗೆ ಜೀವನ ನೀಡಿದ ಯುವಕ

    ಬೆಂಗಳೂರು: 21 ವರ್ಷದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಐದು ಜನರಿಗೆ ಜೀವನವನ್ನು ನೀಡಿದ್ದಾನೆ. ಯುವಕನ ಪೋಷಕರು ಆತನ ಮೂತ್ರಪಿಂಡ, ಯಕೃತ್ ಮತ್ತು ಕಾರ್ನಿಯಾವನ್ನು ದಾನ ಮಾಡಿದ್ದಾರೆ.

    ಶ್ರೀ ಸುಜನ್ ಅಂಗಾಂಗ ದಾನ ಮಾಡಿದ ವಿದ್ಯಾರ್ಥಿ. 21 ವರ್ಷದ ಶ್ರೀ ಸುಜನ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜನವರಿ 17ರಂದು ದೊಡ್ಡಬಳ್ಳಾಪುರದ ಬಳಿ ಅಪಘಾತಕ್ಕೆ ಒಳಗಾಗಿದ್ದ. ತಕ್ಷಣ ಆತನನ್ನು ಕೊಲಂಬಿಯಾ ಏಷ್ಯಾ ದೊಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಆತನನ್ನು ಅಲ್ಲಿಂದ ನರಚಿಕಿತ್ಸೆಯ ಆರೈಕೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳಕ್ಕೆ ಕರೆತರಲಾಗಿತ್ತು.

    ಅಪಘಾತದಿಂದ ಶ್ರೀ ಸುಜನ್ ಮೆದುಳಿಗೆ ತೀವ್ರ ಆಘಾತಕಾರಿ ಗಾಯವಾಗಿದೆ ಎಂದು ಸಿಟಿ ಸ್ಕ್ಯಾನ್‍ನ ಮೂಲಕ ತಿಳಿದು ಬಂದಿದೆ. ಈ ವಿಷಯ ತಿಳಿದ ನಂತರ ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ಗಾಯದ ಸ್ವರೂಪ ತೀವ್ರವಾಗಿದ್ದರಿಂದ ಯಾವುದೇ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ, ಮೆದುಳಿನ ಚಟುವಟಿಕೆ ಮತ್ತು ರೋಗಿಯ ಜೀವವನ್ನು ಕಾಪಾಡಲು ವೈದ್ಯರ ಗರಿಷ್ಠ ಪ್ರಯತ್ನ ಮುಂದುವರಿಸಿದರು. ಆತನನ್ನು ಸೂಕ್ಷ್ಮ ಘಟಕದಲ್ಲಿ ಇರಿಸಿ ಔಷಧಿ ನೀಡುವಂತೆ ಮಾಡಲಾಯಿತು. ಇದೆಲ್ಲದರ ಹೊರತಾಗಿಯೂ ಆತನ ಮೆದುಳಿನ ಗಾಯದ ಸ್ಥಿತಿ ಹದಗೆಟ್ಟಿತ್ತು ಮತ್ತು ಜನವರಿ 21ರಂದು ಆಳವಾದ ಕೋಮಾಗೆ ಜಾರಿದ್ದ.

    ವಿವರವಾದ ಕ್ಲಿನಿಕಲ್ ಮತ್ತು ವಿಕಿರಣ ಪರೀಕ್ಷೆಯಿಂದ ಮೆದುಳಿಗಾದ ಗಾಯದ ಬಗ್ಗೆ ಯಾವುದೇ ಚೇತರಿಕೆಯ ಅಂಶವನ್ನು ತೋರಿಸಿರಲಿಲ್ಲ. ಇದರ ತರುವಾಯ ಅವರ ಮೆದುಳು 22ರಂದು ನಿಷ್ಕ್ರಿಯಗೊಂಡಿದೆ ಎಂದು ಘೋಷೊಸಲಾಯಿತು. ರೋಗಿಯ ತಂದೆ, ತಾಯಿ, ಸಹೋದರ ಮತ್ತು ಚಿಕ್ಕಪ್ಪ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಂಗಗಳ ದಾನವನ್ನು ಮಾಡಲು ಮುಂದಾದರು. ಅಂಗಾಂಗ ದಾನ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವ ಬಗ್ಗೆ ಇದ್ದ ಅವರ ಮನವಿ ಮತ್ತು ತಿಳುವಳಿಕೆಯನ್ನು ಆಸ್ಪತ್ರೆ ಗೌರವಿಸಿತು.

    ಅಂಗಾಗಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೂ 22ರಂದು ಬೆಳಗ್ಗೆ ಕರ್ನಾಟಕದ ಕಸಿ ಪ್ರಧಿಕಾರ ಜೀವನ ಸಾರ್ಥಕತೆಯ ಮೂಲಕ ಪ್ರಾರಂಭವಾಯಿತು. ಮರುಪಡೆಯಲಾದ ಅಂಗಂಗಾಗಳಲ್ಲಿ ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಹೆಬ್ಬಾಳ ಆಸ್ಪತ್ರೆಯಲ್ಲಿದ್ದ ರೋಗಿಗೆ ನೀಡಲಾಯಿತು. ಇತರ ಮೂತ್ರಪಿಂಡ ಮತ್ತು ಯಕೃತ್ತನ್ನು ಸಕ್ರಾ ವಲ್ರ್ಡ್ ಆಸ್ಪತ್ರೆಯಲ್ಲಿ ಸೂಕ್ತರಿಗೆ ನೀಡಲು ಸ್ಥಳಾಂತರಿಸಲಾಯಿತು. ಎರಡು ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

  • 25 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಿದ್ದ ಪೋಷಕರು ಈಗ ಪೊಲೀಸರ ಅಥಿತಿಗಳು

    25 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಿದ್ದ ಪೋಷಕರು ಈಗ ಪೊಲೀಸರ ಅಥಿತಿಗಳು

    ದಾವಣಗೆರೆ: ಹೆಣ್ಣು ಮಗು ಎಂದು ಪೋಷಕರು ತಾವು ಹೆತ್ತು ಹೊತ್ತ ಮಗುವನ್ನೇ ಮಾರಾಟ ಮಾಡಿ ಈಗ ಪೊಲೀಸರ ಅಥಿತಿಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಅಂಬೇಡ್ಕರ ನಗರದ ಕವಿತಾ ಹಾಗೂ ಮಂಜುನಾಥ್ ಮಗುವನ್ನು ಮಾರಿದ್ದ ದಂಪತಿ. ಮಂಜುನಾಥ್ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಗಂಡು ಸಂತಾನಕ್ಕೆ ಹಂಬಲಿಸುತ್ತಿದ್ದರು. ಆದರೆ ನಾಲ್ಕು ಮಗುವೂ ಹೆಣ್ಣು ಹುಟ್ಟಿತ್ತು. ಹೀಗಾಗಿ ಈ ನಾಲ್ಕು ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಏನು ಮಾಡುವುದು ಎಂದು 13 ತಿಂಗಳ ಕೊನೆಯ ಮಗಳನ್ನು ಮಾರಾಟ ಮಾಡಿದ್ದರು.

    ದಾವಣಗೆರೆ ನಗರದ ಖಾಸಗಿ ಆಸ್ಪತ್ರೆ ನರ್ಸ್ ಚಿತ್ರಮ್ಮ ಎಂಬವರು ಮಗು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿವಾಸಿಗಳಾದ ದ್ರಾಕ್ಷಾಯಣಮ್ಮ ಮತ್ತು ಸಿದ್ದಪ್ಪ ದಂಪತಿಗಳಿಗೆ ಮಕ್ಕಳಿರಲಿಲ್ಲ. ಇದು ನರ್ಸ್ ಚಿತ್ರಮ್ಮಗೆ ಗೊತ್ತಿತ್ತು. ಈ ವಿಚಾರವನ್ನು ಚಿತ್ರಮ್ಮ ಕವಿತಾ ಹಾಗೂ ಮಂಜುನಾಥ ದಂಪತಿಗೆ ಹೇಳಿ ಮಗು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. 2019ರ ಡಿಸೆಂಬರ್ 24ರಂದು ದಾವಣಗೆರೆಗೆ ಬಂದ ದ್ರಾಕ್ಷಾಯಣಮ್ಮ ದಂಪತಿ ಮಗುವಿನ ತಂದೆ ತಾಯಿಗೆ 25 ಸಾವಿರ ರೂ. ಕೊಟ್ಟು ಮಗುವನ್ನ ಖರೀದಿ ಮಾಡಿಕೊಂಡು ಹೋಗಿದ್ದರು. ಇದಕ್ಕೆ ಬರೋಬ್ಬರಿ ಏಳು ಜನ ಶಾಮೀಲಾಗಿ ಮಗು ಮಾರಾಟ ಮಾಡಿದ್ದರು.

    ಮಗುವಿನ ಮಾರಾಟ ಆಗಿ ಕಥೆ ಮುಗಿದು ಹೋಗಿತ್ತು. ಆದರೆ ಡಿಸೆಂಬರ್ 26ರಂದು ವ್ಯಕ್ತಿಯೊಬ್ಬರು ಮಕ್ಕಳ ರಕ್ಷಣಾ ಘಟಕ ಕರೆ ಮಾಡಿ, ನಾಲ್ಕು ಜನ ಹೆಣ್ಣು ಮಕ್ಕಳಾದ ಹಿನ್ನೆಲೆಯಲ್ಲಿ ನಾಲ್ಕನೇ ಮಗುವನ್ನ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದರು. ಜೊತೆಗೆ ನಮ್ಮ ಹೆಸರು ಇಲ್ಲಿಯೂ ಗೊತ್ತಾಗಬಾರದು ಎಂದು ಕರೆ ಮಾಡಿದ ವ್ಯಕ್ತಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ಬಗ್ಗೆ ನಿರ್ಲಕ್ಷ ಮಾಡದೆ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದರು.

    ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಮಗುವಿನ ತಾಯಿ-ತಂದೆ ನಾಪತ್ತೆಯಾಗಿದ್ದರು. ಈ ವೇಳೆ ಮನೆಯಲ್ಲಿದ್ದ ಅಜ್ಜಿಯನ್ನು ಅಧಿಕಾರಿಗಳು ವಿಚಾರಿಸಿದಾಗ, ನಮಗೆ ಇರುವುದು ಮೂರು ಜನ ಮೊಮ್ಮಕ್ಕಳು ಎಂದು ಹೇಳಿದ್ದಳು. ಇಷ್ಟಕ್ಕೆ ಬಿಡದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪಕ್ಕದ ಅಂಗನವಾಡಿ ದಾಖಲೆ ಪರಿಶೀಲನೆ ನಡೆಸಿದಾಗ ಮಗುವಿನ ತಾಯಿಗೆ ನಾಲ್ಕನೇ ಹೆರಿಗೆ ಆಗಿದೆ. ನಾಲ್ಕನೇ ಮಗು ಸಹ ಹೆಣ್ಣು ಎಂದು ದಾಖಲಾಗಿತ್ತು.

    ಈ ನಡುವೆ ಮಗುವಿನ ತಂದೆ ಮಂಜುನಾಥ್ ತನ್ನ ಪತ್ನಿಯನ್ನ ತವರು ಮನೆಗೆ ಕಳುಹಿಸಿ ನಾಪತ್ತೆ ಆಗಿದ್ದಾಳೆ ಎಂದು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಸಂಬಂಧ ತನಿಖೆ ಆರಂಭಿಸಿದ ಮಹಿಳಾ ಠಾಣೆ ಪೊಲೀಸರು, ದಂಪತಿ ಜೊತೆಗೆ ಇರುವುದನ್ನ ಖಚಿತ ಪಡಿಸಿಕೊಂಡಿದ್ದರು. ಬಳಿಕ ಮಂಜುನಾಥ್ ದಂಪತಿ ಹಾಗೂ ಮಾರಾಟಕ್ಕೆ ಸಹಕಾರಿಯಾದ ಚಿತ್ರಮ್ಮ ಅವರನ್ನ ಕರೆದುಕೊಂಡು ರಾಣೆಬೆನ್ನೂರಿಗೆ ಹೋಗಿ ಮಗುವನ್ನು ರಕ್ಷಿಸಿ, ಸರ್ಕಾರಿ ಮಹಿಳಾ ಕೇಂದ್ರದಲ್ಲಿ ಇಡಲಾಗಿದೆ.

    ಮಗುವಿನ ತಂದೆ- ತಾಯಿ, ಮಗು ಖರೀದಿ ಮಾಡಿದ ದಂಪತಿ, ನರ್ಸ್ ಚಿತ್ರಮ್ಮ ಈ ಪ್ರಕರಣದಲ್ಲಿ ಶಾಮೀಲಾದ ರವಿ, ಕಮಲಮ್ಮ ಸೇರಿ ಒಟ್ಟು ಎಳು ಜನರನ್ನ ಬಂಧಿಸಿದ್ದಾರೆ. ನಿಜಕ್ಕೂ ಇದೊಂದು ಸಮಾಜ ತಲೆ ತಗ್ಗಿಸುವ ವಿಚಾರ. ಹಣಕ್ಕಾಗಿ ಹೆತ್ತಕರುಳನ್ನೇ ಮಾರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು, ನಗರದ ಎಲ್ಲಾ ಆಸ್ಪತ್ರೆಯ ನರ್ಸ್ ಗಳನ್ನ ಕರೆಸಿ ಇಂತಹ ಘಟನೆ ಮತ್ತೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಶಿಕ್ಷಕನ ರೊಮ್ಯಾಂಟಿಕ್ ಮಾತಿಗೆ ಬಿತ್ತು ಗೂಸಾ

    ಶಿಕ್ಷಕನ ರೊಮ್ಯಾಂಟಿಕ್ ಮಾತಿಗೆ ಬಿತ್ತು ಗೂಸಾ

    ತುಮಕೂರು: ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಯತೀಶ್ ಕುಮಾರ್ ಎಂಬವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದೆ.

    ವಿದ್ಯಾರ್ಥಿನಿಯರನ್ನು ಕರೆಸಿ ದೇಹದಲ್ಲಿ ಕೂದಲುಗಳು ಎಲ್ಲಿ ಬೆಳೆಯುತ್ತದೆ ಎಂದು ವಿಚಿತ್ರವಾಗಿ ಯತೀಶ್ ಕುಮಾರ್ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ. ಕೂದಲು ಬೆಳೆಯುತ್ತಿದ್ದಾಗ ನಿಮಗೆ ಏನೋ ಬೇಕು ಅನಿಸುತ್ತದೆ. ಆ ಔಷಧಿ ನನ್ನ ಬಳಿ ಇದೆ ಎಂದು ರೊಮ್ಯಾಂಟಿಕ್ಕಾಗಿ ಶಿಕ್ಷಕ ಹೇಳುತ್ತಿದ್ದರು ಎಂದು ಹೇಳಲಾಗುತ್ತಿದೆ.

    ವಿಜ್ಞಾನ ಶಿಕ್ಷಕನ ಪೋಲಿ ಮಾತುಗಳಿಂದ ವಿದ್ಯಾರ್ಥಿನಿಯರು ಪ್ರತಿದಿನ ಮುಜುಗರಕ್ಕೆ ಒಳಗಾಗುತಿದ್ದರು. ಇತ್ತ ಶಿಕ್ಷಕರಿಗೆ ಪ್ರತಿರೋಧ ಒಡ್ಡಲಾಗದೇ, ಅತ್ತ ಮನೆಯವರಿಗೂ ಹೇಳಲಾಗಿದೆ ಇಕ್ಕಟ್ಟಿನಲ್ಲಿ ಬಾಲಕಿಯರು ಸಿಲುಕಿದ್ದರು. ಹಲವು ಬಾರಿ ಸೌಜನ್ಯಯುತವಾಗಿಯೇ ಶಿಕ್ಷಕನ ನಡೆಯನ್ನು ಖಂಡಿಸಿದ್ದರು. ಆದರೂ ಶಿಕ್ಷಕ ಪೋಲಿ ಆಟ ಮುಂದುವರಿಸಿದ್ದರು.

    ಕೊನೆಗೆ ವಿಧಿಯಿಲ್ಲದೆ ವಿದ್ಯಾರ್ಥಿನಿಯರು ಪೋಷಕರಿಗೆ ವಿಚಾರ ಮುಟ್ಟಿಸಿದ್ದಾರೆ. ಹೀಗಾಗಿ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಮಹಿಳೆಯರು ಹಿಗ್ಗಾಮುಗ್ಗ ಬಡಿದರು.

    ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲದೆ ಪೋಷಕರ ಮಾತುಗಳನ್ನು ಆಲಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

  • ಕೆಆರ್‌ಪೇಟೆಯಲ್ಲಿ ಮಕ್ಕಳ, ಪೋಷಕರ ಸುಗ್ಗಿ ಸಂಭ್ರಮ

    ಕೆಆರ್‌ಪೇಟೆಯಲ್ಲಿ ಮಕ್ಕಳ, ಪೋಷಕರ ಸುಗ್ಗಿ ಸಂಭ್ರಮ

    ಮಂಡ್ಯ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲೆಯ ಕೆಆರ್‌ಪೇಟೆ ಪಟ್ಟಣದ ಪ್ರಗತಿ ಪಾಠಶಾಲೆಯಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

    ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಕ್ಕಳು ಹಾಗೂ ಪೋಷಕರು ಸಾಂಪ್ರದಾಯಿಕ ಉಡುಗೆ-ತೊಡುಗೆಯನ್ನು ತೊಟ್ಟು, ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಎಳ್ಳು ಬೆಲ್ಲವನ್ನು ವಿತರಿಸಿ ಭಾವೈಕ್ಯತೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಗೆ ಸಾಕ್ಷಿಯಾದರು.

    ಅಲ್ಲದೇ ಕೆಆರ್‌ಪೇಟೆ ಪಟ್ಟಣದ ಪುರಾಣ ಪ್ರಸಿದ್ಧವಾದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಂಕ್ರಾಂತಿ ಸುಗ್ಗಿ ಸಂಭ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಕೆ.ಕಾಳೇಗೌಡ ಅವರು ಚಾಲನೆ ನೀಡಿದರು. ನಂತರ ಶ್ರವಣಬೆಳಗೊಳ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಂಗಸ್ಥಳದಲ್ಲಿ ಸುಗ್ಗಿ ನೃತ್ಯವನ್ನು ಮಾಡಿ ಸಂಭ್ರಮಿಸಿದರು.

    ಮಕ್ಕಳು ಪಟ್ಟಣದ ಜನತೆಗೆ ಹಾಗೂ ಮಕ್ಕಳಿಗೆ ಎಳ್ಳುಬೆಲ್ಲವನ್ನು ವಿತರಿಸಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳ ಈ ಸಂಭ್ರಮವನ್ನು ವೀಕ್ಷಣೆ ಮಾಡಿದ ಜನರು ಸಹ ಫುಲ್ ಏಂಜಾಯ್ ಮಾಡಿದರು.

  • ಸಾವು-ಬದುಕಿನ ನಡುವೆ ಹೋರಾಡ್ತಿರುವ ಅಭಿಮಾನಿಯ ಆಸೆ ಈಡೇರಿಸಿದ ಡಿ-ಬಾಸ್

    ಸಾವು-ಬದುಕಿನ ನಡುವೆ ಹೋರಾಡ್ತಿರುವ ಅಭಿಮಾನಿಯ ಆಸೆ ಈಡೇರಿಸಿದ ಡಿ-ಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.

    ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್‍ನ ಬಹುದಿನದ ಆಸೆ ಆಗಿತ್ತು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ಹಂಬಲಿಸುತ್ತಿದ್ದನು.

    ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ದರ್ಶನ್ ತಮ್ಮ ನಿವಾಸದಲ್ಲೇ ರತನ್ ಹಾಗೂ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ರತನ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ.

    ರತನ್ ಅವರ ತಂದೆ ಆಟೋ ಚಾಲಕರಾಗಿದ್ದು, ತಮ್ಮ ಆಟೋ ಮೇಲೆ ದರ್ಶನ್ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಸದ್ಯ ದರ್ಶನ್, ರತನ್ ಕುಟುಂಬದ ಜೊತೆ ಕಾಲ ಕಳೆದು ಆತನಿಗೆ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ದರ್ಶನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ದರ್ಶನ್ ತಮ್ಮ ಪುಟ್ಟ ಅಭಿಮಾನಿಯ ಭೇಟಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ದರ್ಶನ್, ರತನ್‍ನನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿ ಕೆಲವರು ದರ್ಶನ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ವಿದ್ಯಾರ್ಥಿಗಳಿಗೆ ಮುಕ್ತ ಅಧ್ಯಯನ ಮಾಡಲು ಬಿಡಿ: ಡಾ.ಆರತಿ

    ವಿದ್ಯಾರ್ಥಿಗಳಿಗೆ ಮುಕ್ತ ಅಧ್ಯಯನ ಮಾಡಲು ಬಿಡಿ: ಡಾ.ಆರತಿ

    ಬೆಳಗಾವಿ: ವಿದ್ಯಾರ್ಥಿಗಳಿಗೆ ಪೋಷಕರು ಮುಕ್ತವಾಗಿ ಅಧ್ಯಯನ ಮಾಡಲು ಬಿಡಬೇಕು ಎಂದು ಡಾ. ಆರತಿ ಪೋಷಕರಿಗೆ ಸಲಹೆ ನೀಡಿದರು.

    ಇಂದು ನಗರದ ಮರಾಠಾ ಮಂದಿರದಲ್ಲಿ ನಡೆದ ಸೊಸೈಟಿ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೇವರ ಸಮನಾರು ಶೈಕ್ಷಣಿಕ ಕ್ಷೇತ್ರದಲ್ಲಿ ಅವರಿಗೆ ಬೇಕಾದ ಕಲೆಯನ್ನು ಆಯ್ಕೆ ಮಾಡುವುದನ್ನು ಬಿಡಬೇಕು. ಪೋಷಕರು ಇದೇ ಕೋರ್ಸ್ ಮಾಡಿ ಎಂದು ಮಕ್ಕಳಲ್ಲಿ ಒತ್ತಡ ಹಾಕಬಾರದು ಎಂದರು.

    ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸೌಲಭ್ಯದ ಜತೆಗೆ ಅವಕಾಶಗಳು ಇವೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಂಡು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

    ಇದೇ ಸಂದರ್ಭದಲ್ಲಿ ಸೊಸೈಟಿಯ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಸಮಿತಿಯ ಅಧ್ಯಕ್ಷ ಆರ್.ಡಿ.ಶಾನಭಾಗ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.