Tag: parents

  • ಹೆಂಡ್ತಿಯನ್ನು ನನ್ನ ಜೊತೆ ಸೇರಿಸಿ- ಪ್ರೀತಿಸಿ ಮದ್ವೆಯಾದ ಪತ್ನಿಗಾಗಿ ಪತಿ ಪರದಾಟ

    ಹೆಂಡ್ತಿಯನ್ನು ನನ್ನ ಜೊತೆ ಸೇರಿಸಿ- ಪ್ರೀತಿಸಿ ಮದ್ವೆಯಾದ ಪತ್ನಿಗಾಗಿ ಪತಿ ಪರದಾಟ

    ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ದಂಪತಿಯನ್ನು ಪೋಷಕರೇ ಬೇರೆ ಮಾಡಿದ್ದು, ಇದೀಗ ಪತಿ ತನ್ನ ಪತ್ನಿಗಾಗಿ ಪೊಲೀಸರ ಮೊರೆ ಹೋಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ನಗರದ ಭಾರತಿ ನಗರ ನಿವಾಸಿ ಜಿ.ವಿ.ಶ್ರೀಕಾಂತ್ ಪ್ರೀತಿಸಿದ ಪತ್ನಿಗಾಗಿ ಪರದಾಡುತ್ತಿದ್ದಾರೆ. ಶ್ರೀಕಾಂತ್ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪರಿಚಯವಾದ ದೇವನಹಳ್ಳಿ ಮೂಲದ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ನಂತರ ನವೆಂಬರ್ 2019ರಲ್ಲಿ ಆಂಧ್ರದ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು.

    ಮಗಳನ್ನು ಪತ್ತೆ ಹಚ್ಚಿದ ಆಕೆಯ ಪೋಷಕರು, ಆರತಕ್ಷತೆ ಇಟ್ಟುಕೊಳ್ಳೋಣ ಅಲ್ಲಿಯವರೆಗೂ ನಮ್ಮ ಮನೆಗೆ ಕಳುಹಿಸಿ ಅಂತ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ವಾರದ ನಂತರ ಇಬ್ಬರಿಗೂ ಸಂಪರ್ಕವಿಲ್ಲದ ಹಾಗೆ ಮಾಡಿದ್ದು. ನನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿಹಾಕಿ ಹಿಂಸೆ ಕೊಡುತ್ತಿದ್ದಾರೆ. ನನ್ನ ಪತ್ನಿಯನ್ನು ನನ್ನ ಜೊತೆ ಸೇರಿಸಿ ಎಂದು ಶ್ರೀಕಾಂತ್ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರ ಮೊರೆ ಹೋಗಿದ್ದಾರೆ.

    ಶ್ರೀಕಾಂತ್ ಪತ್ನಿಯ ತಂದೆ-ತಾಯಿ, ಮನೆಯಲ್ಲಿದ್ದ ತಮ್ಮ ಮಗಳು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿ, ತನ್ನ ಸಹಪಾಠಿ ಜೊತೆ ಮದುವೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆಯಿಸಿ ರಾಜಿ ಪಂಚಾಯಿತಿ ಮೂಲಕ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಶ್ರೀಕಾಂತ್ ಬೆಂಬಲಕ್ಕೆ ಸ್ಥಳೀಯ ಕೆಲವು ಸಂಘ ಸಂಸ್ಥೆಗಳು ನಿಂತಿದ್ದು, ಪ್ರೇಮಿಗಳನ್ನು ಜೋಡಿ ಮಾಡಲು ಪೊಲೀಸರ ಮೊರೆ ಹೋಗಿದ್ದಾರೆ ಎಂದು ಸ್ಥಳೀಯ ಮುಖಂಡೆ ಶಶಿಕಲಾ ಹೇಳಿದ್ದಾರೆ.

  • ಕಾಣೆಯಾಗಿದ್ದ ಹೆಣ್ಣು ಮಗು ಶವವಾಗಿ ಪತ್ತೆ- ಪೋಷಕರಿಂದಲೇ ಕೊಲೆ ಶಂಕೆ

    ಕಾಣೆಯಾಗಿದ್ದ ಹೆಣ್ಣು ಮಗು ಶವವಾಗಿ ಪತ್ತೆ- ಪೋಷಕರಿಂದಲೇ ಕೊಲೆ ಶಂಕೆ

    ಕೋಲಾರ: ಬೆಳಗ್ಗೆ ಕಾಣೆಯಾಗಿದ್ದ ಹೆಣ್ಣು ಮಗುವೊಂದು ಮಧ್ಯಾಹ್ನ ಶವವಾಗಿ ಪತ್ತೆಯಾದ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಛತ್ರಕೋಡಿಹಳ್ಳಿ ಗ್ರಾಮದ ರಘುಪತಿ ಹಾಗೂ ಹರ್ಷಿತಾ ದಂಪತಿಯ ಒಂದೂವರೆ ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಪೋಷಕರೇ ಮಗುವನ್ನು ಕೊಲೆ ಮಾಡಿ, ಕಾಣೆಯಾಗಿದೆ ಎಂದು ಕಥೆ ಕಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಮಗು ಕಾಣೆಯಾಗಿದೆ ಎಂದು ರಘುಪತಿ ದಂಪತಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾ ಘಟಕ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮಗುವಿನ ಸುಳಿವೇ ಸಿಗದಿದ್ದಾಗ ನಾಯಿ ಅಥವಾ ಕೋತಿಗಳೇನಾದರು ಹೊತ್ತೊಯ್ದಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಊರು ಕೇರಿ, ಮನೆ ಮಠ ಎಲ್ಲೆಡೆ ಹುಡಕಾಡಿದ್ದರು.

    ಮಧ್ಯಾಹ್ನವಾದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಸ್ಥಳಕ್ಕೆ ಬಂದ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರು ಕೂಡ ಪರಿಶೀಲನೆ ನಡೆಸಿದರು. ನಂತರ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದಾಗ ಮನೆಯಲ್ಲಿನ ನೀರಿನ ಸಂಪ್ ಬಳಿ ನಾಯಿ ಗಿರಿಕಿ ಹೊಡೆಯುತ್ತಿತ್ತು. ಅನುಮಾನ ಬಂದು ಸಂಪ್ ಒಳಗೆ ನೋಡಿದಾಗ ಮಗುವಿನ ಶವ ಪತ್ತೆಯಾಗಿತ್ತು.

    ಹೆಣ್ಣು ಮಗು ಬೇಡವಾಗಿದ್ದರಿಂದ ಪೋಷಕರೇ ಮಗುವನ್ನು ಸಂಪ್‍ನಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ಮಗುವಿನ ದೊಡ್ಡಪ್ಪ, ‘ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಮಗೆ ಹಣ್ಣು ಮಗು ಅಂದ್ರೆ ತುಂಬಾ ಇಷ್ಟ. ನನ್ನ ತಮ್ಮನಿಗಿದ್ದ ಹೆಣ್ಣು ಮಗು ಈಗ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

    ಮಗುವಿನ ಕೊಲೆಗೆ ನಿಖರ ಕಾರಣವಾದರು ಏನು? ಮಗುವನ್ನು ಸಂಪ್‍ಗೆ ಹಾಕಿ ಇಷ್ಟೆಲ್ಲಾ ಹೈಡ್ರಾಮಾ ಸೃಷ್ಟಿಸಿದ್ದಾದರೂ ಯಾಕೆ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ. ಸದ್ಯ ಮಗುವಿನ ಅಜ್ಜಿ ರತ್ನಮ್ಮ, ತಾಯಿ ಹರ್ಷಿತಾ, ತಂದೆ ರಘುಪತಿಯನ್ನ ಕೋಲಾರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

  • ಆರು ತಿಂಗಳು ಹೆಣ್ಣು ಮಗುವನ್ನು ಮೋರಿಗೆ ಎಸೆದ ಹೆತ್ತವರು- ಸ್ಥಳೀಯರಿಂದ ರಕ್ಷಣೆ

    ಆರು ತಿಂಗಳು ಹೆಣ್ಣು ಮಗುವನ್ನು ಮೋರಿಗೆ ಎಸೆದ ಹೆತ್ತವರು- ಸ್ಥಳೀಯರಿಂದ ರಕ್ಷಣೆ

    ಮೈಸೂರು: ಹೆಣ್ಣು ಎಂಬ ಕಾರಣಕ್ಕೆ 6 ತಿಂಗಳ ಮಗುವನ್ನು ತಂದೆ-ತಾಯಿ ಇಬ್ಬರು ಮೋರಿಯಲ್ಲಿ ಬಿಸಾಡಿ ಕರುಣೆ ಇಲ್ಲದಂತೆ ನಡೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ 6 ತಿಂಗಳ ಹಸುಗೂಸನ್ನು ಬಿಸಾಡಿದ್ದ ಹೆತ್ತವರು, ಕಸ ಹಾಕುವ ಜಾಗದಲ್ಲಿ ಮಗುವನ್ನು ಎಸೆದಿದ್ದರು. ಸ್ಥಳೀಯರೊಬ್ಬರು ನಡೆದುಕೊಂಡು ಹೋಗುವಾಗ ಮಗುವಿನ ಅಳುವ ಶಬ್ಧ ಕೇಳಿ ಮಗು ರಕ್ಷಣೆ ಮಾಡಿದ್ದಾರೆ.

    ಮೋರಿಯಲ್ಲಿ ಮಗುವನ್ನ ಕಂಡು ಆತಂಕಗೊಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸ್ಥಳೀಯರ ಸಹಾಯದಿಂದ ಪುಟ್ಟ ಕಂದಮ್ಮ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಪ್ರಾಥಮಿಕ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಮಗು ರವಾನೆ ಮಾಡಿದ್ದು, ಕರುಣೆ ಇಲ್ಲದೆ ಮಗುವನ್ನು ಮೋರಿಯಲ್ಲಿ ಎಸೆದಿದ್ದ ತಂದೆ-ತಾಯಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಚೆಲುವಾಂಬ ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ಮಗುವಿನ ಹಾರೈಕೆ ನಡೆಯುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  • ಸ್ವಲ್ಪ ದಿನ ನಂತ್ರ ಮದ್ವೆ ಮಾಡ್ತೀವಿ ಎಂದಿದ್ದಕ್ಕೆ 22ರ ಯುವಕ ವಿಷ ಕುಡಿದ

    ಸ್ವಲ್ಪ ದಿನ ನಂತ್ರ ಮದ್ವೆ ಮಾಡ್ತೀವಿ ಎಂದಿದ್ದಕ್ಕೆ 22ರ ಯುವಕ ವಿಷ ಕುಡಿದ

    – ಆಸ್ಪತ್ರೆ ವೆಚ್ಚವನ್ನು ಭರಿಸಲಾಗದೆ ಮನೆಗೆ ಕರ್ಕೊಂಡು ಬಂದ ಪೋಷಕರು
    – ಮನೆಯಲ್ಲಿ ಕೊನೆಯುಸಿರೆಳೆದ ಯುವಕ

    ಹೈದರಾಬಾದ್: ಪೋಷಕರು ಸ್ವಲ್ಪ ದಿನದ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಮನನೊಂದು 22ರ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಕಾಮರೆಡ್ಡಿ ಗ್ರಾಮದಲ್ಲಿ ನಡೆದಿದೆ.

    ನರೇಶ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ಬನ್ಸ್ವಾಡಾದ ಪೋಥಂಗಲ್ ಗ್ರಾಮದವನಾಗಿರು ನರೇಶ್ ಬೊರ್ಲಾಂನಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದನು. ಮನೆಯವರು ಮದುವೆ ಮಾಡಿಸದ್ದಕ್ಕೆ ನರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮದುವೆ ಆಗ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆ

    ಕೆಲವು ದಿನಗಳಿಂದ ನರೇಶ್ ತನಗೆ ಮದುವೆ ಮಾಡಿಸಿ ಎಂದು ಪೋಷಕರಿಗೆ ಒತ್ತಾಯ ಮಾಡಿದ್ದಾನೆ. ಆದರೆ ಪೋಷಕರು ಸ್ವಲ್ಪ ದಿನ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ನರೇಶ್ ಆರು ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ನರೇಶ್ ವಿಷ ಸೇವಿಸಿರುವ ವಿಷಯ ತಿಳಿದ ಪೋಷಕರು ಆತನನ್ನು ಬನ್ಸ್ವಾಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ನರೇಶ್‍ಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ನಿಜಾಮಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

    ನರೇಶ್ ಆರೋಗ್ಯದ ಸ್ಥಿತಿ ಹದಗೆಡುತ್ತಿದ್ದಂತೆ ವೈದ್ಯರು ಆತನಿಗೆ ಹೈದರಾಬಾದ್‍ಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು. ಆದರೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ಕಾರಣ ಕುಟುಂಬಸ್ಥರು ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ನರೇಶ್ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

  • ಬೆಂಗ್ಳೂರಿನಲ್ಲಿ ಸಿಕ್ಕಿಬಿದ್ದ ಕಾಮಚೇಷ್ಟೆ ಕಂಡಕ್ಟರ್ – ಯುವತಿ ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

    ಬೆಂಗ್ಳೂರಿನಲ್ಲಿ ಸಿಕ್ಕಿಬಿದ್ದ ಕಾಮಚೇಷ್ಟೆ ಕಂಡಕ್ಟರ್ – ಯುವತಿ ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಚಲಿಸುವ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.

    ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಯುವತಿಗೆ ಜೊತೆಯಲ್ಲೇ ಕುಳಿತ ಕಂಡಕ್ಟರ್ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದನು. ಜೋರಾಗಿ ಕಿರುಚಿಕೊಂಡರೆ ನಿನ್ನ ಮರ್ಯಾದೆನೇ ಹೋಗುವುದು, ನಾನು ನಿನ್ನ ಮೇಲೆನೇ ಹೇಳುತ್ತೇನೆ ಎಂದು ಕಂಡೆಕ್ಟರ್ ಯುವತಿಗೆ ಹೆದರಿಸಿದ್ದನು. ಇದನ್ನೂ ಓದಿ: KSRTC ಬಸ್ಸಿನಲ್ಲಿ ಮಹಿಳೆಯ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ

    ಈ ವೇಳೆ ಪ್ಲಾನ್ ಮಾಡಿದ ಯುವತಿ ಕಂಡಕ್ಟರ್ ಇಸಾಕ್ ಅಲಿಯ ಕಾಮಚೇಷ್ಟೇಯನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು. ನಂತರ ಬೆಂಗಳೂರಿಗೆ ಬಂದ ಯುವತಿ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿಡಿಯೋ ಸಮೇತ ಹೇಳಿಕೊಂಡಿದ್ದಳು. ಇದರಿಂದ ಕೋಪಗೊಂಡ ಯುವತಿಯ ಪೋಷಕರು ಹಾಸನ ಟು ಬೆಂಗಳೂರಿನ ಬಸ್ ನಂಬರ್ ಪಡೆದು ಆ ಬಸ್ ಮತ್ತೆ ಯಾವಾಗ ಬೆಂಗಳೂರಿಗೆ ಬರುತ್ತೆ ಎಂದು ಕಾಯುತ್ತಿದ್ದರು.

    ಭಾನುವಾರ ಸಂಜೆ ವೇಳೆ ಅದೇ ಬಸ್, ಅದೇ ಕಂಡಕ್ಟರ್ ಬೆಂಗಳೂರಿಗೆ ಬರುತ್ತಿದ್ದನ್ನು ತಿಳಿದು ಯಶವಂತಪುರ ಬಸ್ ನಿಲ್ದಾಣದ ಬಳಿ ಕಾದು ಕಾಮುಕ ಕಂಡಕ್ಟರ್‍ಗೆ ಹಿಗ್ಗಾಮುಗ್ಗಾ ಥಳಿಸಿ ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    – ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?

    ನವದೆಹಲಿ: ಸಾಮಾಜಿಕ ಜಾಲತಾಣ ಎಂಬುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ಇದಕ್ಕೆ ನಿದರ್ಶನ ಎಂಬಂತೆ ಈಗ ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬ ಹೊಸ ಸ್ಪರ್ಧೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿ ಇದ್ದು, ಇದು ಪೋಷಕರ ನಿದ್ದೆಗೆಡಿಸಿದೆ.

    ಇತ್ತೀಚೆಗೆ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಫೇಸ್ ಬುಕ್, ವಾಟ್ಸಪ್ ಮತ್ತು ಟಿಕ್ ಟಾಕ್ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಈಗ ಈ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಾಣ ತೆಗೆಯುವ ಹೊಸ ಚಾಲೆಂಜ್ ಬಂದಿದ್ದು, ಈ ಚಾಲೆಂಜ್ ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ. ಪ್ರಾಣಕ್ಕೆ ಕುತ್ತು ತರುವ ಈ ಚಾಲೆಂಜ್ ಮಾಡಿ ಯುವಕ ಯುವತಿಯರು ಪ್ರಾಣ ಕೆಳದುಕೊಳುತ್ತಿದ್ದಾರೆ.

    ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?
    ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬುದು ಒಂದು ಡೆಡ್ಲಿ ಚಾಲೆಂಜ್ ಆಗಿದೆ. ಈ ಚಾಲೆಂಜ್‍ನಲ್ಲಿ ಮೂವರು ನಿಂತಿರುತ್ತಾರೆ ಈ ಮೂವರಲ್ಲಿ ಮಧ್ಯದ ವ್ಯಕ್ತಿ ಮೇಲಕ್ಕೆ ಜಿಗಿದಾಗ ಅಕ್ಕ ಪಕ್ಕ ನಿಂತಿರುವವರು ಜಿಗಿದವನ ಕಾಲುಗಳಿಗೆ ಒದೆಯುತ್ತಾರೆ. ಆಗ ಜಿಗಿದ ವ್ಯಕ್ತಿ ತನ್ನ ಸಮತೋಲನ ಕಳೆದುಕೊಂಡು ನೆಲದ ಮೇಲೆ ಬಿದ್ದಾಗ ಆತನ ತಲೆಗೆ ಬೀಳುವ ಏಟಿನೊಂದಿಗೆ ಈ ಚಾಲೆಂಜ್ ಮುಗಿಯುತ್ತದೆ. ಒಂದು ವೇಳೆ ಜೋರಾಗಿ ಬಿದ್ದರೆ ಆ ವ್ಯಕ್ತಿಯ ತಲೆಬುರುಡೆ ಒಡೆಯುವ ಅಥವಾ ಜೀವಕ್ಕೆ ಕಂಟಕ ಉಂಟಾಗುವ ಸಂಭವವಿರುತ್ತದೆ.

    ಈ ರೀತಿಯ ಭಯಾನಕ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತದೆ. ಇತ್ತೀಚೆಗೆ ಯುವಕ-ಯುವತಿಯ ಜೊತೆಗೆ ಮಕ್ಕಳು ಬಳಸುವ ಟಿಕ್ ಟಾಕ್‍ನಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿ ಇದೆ. ಇದನ್ನು ಕಂಡ ಬೆಚ್ಚು ಬಿದ್ದಿರುವ ಪೋಷಕರು ಈ ಸ್ಕಲ್ ಬ್ರೇಕರ್ ಚಾಲೆಂಜ್‍ನ್ನು ಶಾಲಾ ಆವರಣದಲ್ಲಿ ನಿಷೇಧಿಸಬೇಕು. ಜೊತೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

    https://twitter.com/britishchickAD/status/1228335700132712450

    ಅಮೆರಿಕಾ, ಯೂರೋಪ್ ರಷ್ಯಾನಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊದಲಿಗೆ ಶುರುವಾಗುವ ಈ ರೀತಿಯ ಡೆಡ್ಲಿ ಚಾಲೆಂಜ್‍ಗಳು, ಸೋಶಿಯಲ್ ಮೀಡಿಯಾದ ಮೂಲಕ ಎಲ್ಲಾ ಕಡೆ ಪಸರಿಸುತ್ತವೆ. ಈ ಚಾಲೆಂಜ್‍ಗಳಿಗೆ ಆಕರ್ಷಣೆಯಾಗಿ ಈ ಸವಾಲನ್ನು ಸ್ವೀಕರಿಸಿದ ಮಕ್ಕಳು ತಲೆಗೆ ಬೆನ್ನಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಈ ರೀತಿಯ ಚಾಲೆಂಜ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿಷೇಧ ಮಾಡಬೇಕು ಎಂಬ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿವೆ.

    ಸೋಷಿಯಲ್ ಮೀಡಿಯಾದ ಈ ಹಿಂದೆಯು ಇದೇ ರೀತಿಯ ಕೆಲ ಡೆಡ್ಲಿ ಚಾಲೆಂಜ್‍ಗಳು ಬಂದು ಸಾಕಷ್ಟು ಅವಾತರ ಸೃಷ್ಟಿಸಿದ್ದವು. ಕೆಲವೇ ತಿಂಗಳ ಹಿಂದೆ ಪಬ್ ಜೀ, ಕೀಕೀ ಚಾಲೆಂಜ್ ಮತ್ತು ಬ್ಲೂ ವೇಲ್ ಚಾಲೆಂಜ್ ಮಾಡಿ ಕೆಲ ಮಕ್ಕಳು ಮತ್ತು ಯುವಕರು ಜೀವತೆತ್ತಿದ್ದರು. ಅಲ್ಲದೇ ಟಿಕ್‍ಟಾಕ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದರು.

  • ಗುರುವಿಲ್ಲದೇ ಪುಟಾಣಿ ಸ್ಕೇಟಿಂಗ್ ಪ್ರಚಂಡ

    ಗುರುವಿಲ್ಲದೇ ಪುಟಾಣಿ ಸ್ಕೇಟಿಂಗ್ ಪ್ರಚಂಡ

    – 150 ಪೋಲ್‍ಗಳನ್ನ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್

    ಬೆಂಗಳೂರು: ಇತ್ತೀಚೆಗೆ ಪುಟಾಣಿ ಮಕ್ಕಳು ದಾಖಲೆ ಬರೆಯುವಂತೆ ಗುರಿ ಹೊಂದಿರುತ್ತಾರೆ. ಇದೇ ರೀತಿ ಬೆಂಗಳೂರಿನ ಸುಬ್ರಮಣ್ಯನಗರ ಪುಟಾಣಿ ಪೋರ ದಾಖಲೆ ಮಾಡುವಂತಹ ದೊಡ್ಡ ಕನಸು ಹೊತ್ತಿದ್ದಾನೆ.

    ಮಾರುತಿ ಹಾಗೂ ಸವಿತಾ ದಂಪತಿ ಪುತ್ರ ಆರ್ಯನ್ ಸ್ಕೇಟಿಂಗ್‍ನಲ್ಲಿ ಲಿಂಬೋ ದಾಖಲೆ ಮಾಡಲು ಸಿದ್ಧನಾಗುತ್ತಿದ್ದಾನೆ. ಕಬ್ಬನ್ ಪಾರ್ಕಿನಲ್ಲಿ ಭಾನುವಾರವಾದರೆ ಸಾಕು ಸ್ಕೇಟಿಂಗ್ ಮಾಡುತ್ತಾನೆ. ಈ ಪುಟಾಣಿ ಫೋರ 150 ಮೀ ಉದ್ದವನ್ನ 9 ಅಡಿ ಎತ್ತರ ಪೋಲ್‍ಗಳನ್ನ ಇರಿಸಿ ಬಾಡಿ ಬೆಂಡ್ ಮಾಡಿ ಸ್ಕೇಟಿಂಗ್ ಮಾಡುತ್ತಿದ್ದಾನೆ.

    ಈವರೆಗೂ ಯಾರು ಈ ಸಾಧನೆ ಮಾಡಿಲ್ಲ. ಹೀಗಾಗಿ ಆರ್ಯನ್ ಈ ಸಾಧನೆ ಮಾಡುವ ಆಸೆ ಹೊಂದಿದ್ದಾನೆ ಎಂದು ತಂದೆ ಮಾರುತಿ ಹೇಳಿದ್ದಾರೆ. 6 ವರ್ಷದ ಆರ್ಯನ್ 150 ಪೋಲ್‍ಗಳನ್ನ ಕೇವಲ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್ ಮಾಡುತ್ತಾನೆ. ಈ ಸಂಬಂಧ ಅಗತ್ಯ ದಾಖಲೆಗಳನ್ನ ಕಲೆಹಾಕಲಾಗಿದೆ. ಲಿಂಬೋ ದಾಖಲೆಗಾಗಿ ವಿಡಿಯೋಗಳನ್ನ ಕಳುಹಿಸಲಾಗಿದೆ. ಈ ದಾಖಲೆಗಾಗಿಯೇ ಆರ್ಯನ್ ಕಾತುರದಿಂದ ಕಾಯುತ್ತಿದ್ದಾನೆ ಎಂದು ತಾಯಿ ಸವಿತಾ ತಿಳಿಸಿದ್ದಾರೆ.

    ಆರ್ಯನ್ ಈ ವಿದ್ಯೆಗೆ, ಈ ದಾಖಲೆ ಮಾಡಲು ಯಾರೂ ಗುರುವಿಲ್ಲ. ತಂದೆ-ತಾಯಿ ನಿತ್ಯ ಆರ್ಯನ್ ಸ್ಕೇಟಿಂಗ್ ಮೇಲೆ ಗಮನವಿರಿಸಿ ಈ ಸಾಧನೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.

  • ಕ್ಯೂನಲ್ಲಿ ನಿಂತು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು: ಸುರೇಶ್ ಕುಮಾರ್ ಕನಸು

    ಕ್ಯೂನಲ್ಲಿ ನಿಂತು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು: ಸುರೇಶ್ ಕುಮಾರ್ ಕನಸು

    ಚಾಮರಾಜನಗರ: ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕ್ಯೂನಲ್ಲಿ ನಿಂತು ಸೇರಿಸುವಂತಾಗಬೇಕು. ಆ ಮಟ್ಟಿಗೆ ಸರ್ಕಾರಿ ಶಾಲೆಗಳನ್ನು ಇನ್ನು ಮೂರು ವರ್ಷಗಳಲ್ಲಿ ಸುಧಾರಣೆ ಮಾಡುವ ಕನಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆ ಪಚ್ಚೆದೊಡ್ಡಿಯಲ್ಲಿ ಶಾಲಾ ವಾಸ್ತವ್ಯ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಇದರಿಂದ ಅವರ ಜೀವನವೂ ಸುಧಾರಣೆಯಾಗಲಿದೆ ಎಂದರು.

    ಈ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಪ್ರೌಢಶಿಕ್ಷಣ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಪೂರೈಸುವುದಾಗಿ ತಿಳಿಸಿದರು. ಹಾಗೆಯೇ ಈ ಪ್ರಶ್ನೆ ಪತ್ರಿಕೆಗಳು ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಎದುರಿಸಲು ಸುಲಭವವಾಗಲಿದೆ ಎಂದು ಮಾಹಿತಿ ನೀಡಿದರು.

    ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ. ಮೊದಲನೇಯದಾಗಿ ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನಂತರ ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ವಾಸ್ತವ್ಯ ಮಾಡಿದ್ದರು. ಇದೀಗ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

    6ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ ದೂರದ ಅಜ್ಜಿಪುರಕ್ಕೆ ಕಾಡಿನ ನಡುವೆ ಕಲ್ಲು, ಮುಳ್ಳು ಹಾಗೂ ಕಡಿದಾದ ಹಾದಿಯಲ್ಲಿ ಮಕ್ಕಳು ನಡೆದು ಹೋಗಬೇಕು. ಕಾಡುಪ್ರಾಣಿಗಳ ಹಾವಳಿ ಬೇರೆ ಇದೆ. ನಡೆಯುವುದರಲ್ಲೇ ಸಾಕಷ್ಟು ಕಾಲ ವ್ಯಯವಾಗುವುದರಿಂದ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನಮಗೆ ರಸ್ತೆ ಬೇಕು, ವಾಹನ ವ್ಯವಸ್ಥೆಬೇಕು ಎಂದು ಮನವಿ ಮಾಡಿಕೊಂಡರು.

    ಮಕ್ಕಳ ಸಮಸ್ಯೆಗೆ ಸ್ಪಂಧಿಸಿದ ಸಚಿವ ಸುರೇಶ್ ಕುಮಾರ್ ಅವರು, ಹತ್ತು ದಿನಗಳಲ್ಲಿ ಕಾಡಿನ ರಸ್ತೆಯ ಜಂಗಲ್ ಕಟಿಂಗ್ ಮಾಡಿ, ಅಜ್ಜಿಪುರಕ್ಕೆ ವ್ಯಾನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಇದೇ ವೇಳೆ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ ಸೌಲಭ್ಯ ಕಲ್ಪಿಸಿ, ತಿಂಗಳಲ್ಲಿ ಎರಡು ಬಾರಿ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಕೂತು ಊಟ ಮಾಡಿದರು.

  • ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    – ವಿಚಾರಿಸಲು ಶಾಲೆಗೆ ಹೋದಾಗ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಿಕ್ಕ ಕಾಮುಕ
    – ಶಿಕ್ಷಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.

    ಕಾಮುಕ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಗೂಸಾ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಶಿಕ್ಷಕನಾಗಿರುವ ಭಾಸ್ಕರ್ ನಾಡೀಗೇರ್ ಎಂಬಾತ ಶಾಲೆಯ ಮಕ್ಕಳಿಗೆ ಪ್ರತಿನಿತ್ಯ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಹೆಣ್ಣು ಮಕ್ಕಳ ಅಂಗಾಗ ಸೇರಿದಂತೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬರುತ್ತಿದೆ.

    ಈ ಕುರಿತಾಗಿ ದೌರ್ಜನ್ಯಕೊಳಗಾದ ಹೆಣ್ಣು ಮಕ್ಕಳು ತಮ್ಮ ಪೋಷಕರಿಗೆ ಶಿಕ್ಷಕನ ಕಾಮುಕ ಚೇಷ್ಟೆ ಬಗ್ಗೆ ದೂರಿದ್ದಾರೆ. ಈ ಶಿಕ್ಷಕನ ಲೈಂಗಿಕ ದೌರ್ಜನ್ಯ ಅತಿರೇಕವಾಗುತ್ತಿದ್ದಂತೆ ಮಕ್ಕಳ ಪೋಷಕರು ಇಂದು ವಿಚಾರಿಸಲು ಏಕಾಏಕಿ ಶಾಲೆ ಬಂದಾಗ ಶೌಚಾಲಯದಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈ ಕಾಮುಕ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಅಲ್ಲದೆ ಈ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದು, 10 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬಡವರೇ ವಾಸಿಸುವ ಈ ಗ್ರಾಮದಲ್ಲಿ ಓದಲಿಕ್ಕೆಂದು ಬರುವ ಈ ಹೆಣ್ಣು ಮಕ್ಕಳಿಗೆ ಈ ಶಿಕ್ಷಕ ಹಿಂದೆ ಕೂಡ ಈತ ಇದೇ ರೀತಿ ಮೈಕೈ ಮುಟ್ಟಿ ಮಾತಾನಾಡಿಸ್ತಿದ್ದಾಗ ಮಕ್ಕಳು ಪೋಷಕರ ಬಳಿ ದೂರು ಹೇಳಿದ್ದರು. ಪೋಷಕರು ಶಿಕ್ಷಕರ ಬಗ್ಗೆ ಅನುಮಾನಿಸದೆ ಸುಮ್ಮನಾಗಿದ್ದರು. ಆದರೆ ಅತಿಯಾದಾಗ ಒಮ್ಮೆ ಶಾಲೆ ಬಂದು ಮುಖ್ಯ ಶಿಕ್ಷಕಿ ಬಳಿ ದೂರು ಹೇಳಿ ಹೋಗಿದ್ದಾರೆ. ಈ ಕುರಿತಾಗಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಲು ಇಂದು SDMC ಸಭೆ ಸೇರಿ ಕ್ರಮ ಕೈಗೊಳ್ಳಬೇಕೆನ್ನುಷ್ಟರಲ್ಲಿ ಪೋಷಕರೇ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ದೂರು ದಾಖಲಾಗ್ತಿದ್ದಂತೆ ಶಿಕ್ಷಕ ಎಸ್ಕೇಪ್

    ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ದೂರು ದಾಖಲಾಗ್ತಿದ್ದಂತೆ ಶಿಕ್ಷಕ ಎಸ್ಕೇಪ್

    ಚಿತ್ರದುರ್ಗ: ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ತರಗತಿ ಕೊಠಡಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದೀಗ ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ.

    ಸುಮಾರು 51 ವರ್ಷದ ತಿಪ್ಪೇಸ್ವಾಮಿ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ತಿಪ್ಪೇಸ್ವಾಮಿ ವಿದ್ಯಾರ್ಥಿನಿಯರ ಜೊತೆ ಅಸಹ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 6 ಹಾಗೂ 7ನೇ ತರಗತಿಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಶಾಲೆಯಲ್ಲಿ ಮೊಬೈಲ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಹಾಕಿ ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದನು ಎನ್ನಲಾಗಿದೆ. ಶಿಕ್ಷಕನ ಕಾಮ ಚೇಷ್ಠೆಗೆ ಬೇಸತ್ತಿದ್ದ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಕಷ್ಟವನ್ನೆಲ್ಲ ಪೋಷಕರ ಬಳಿ ಹೇಳಿಕೊಂಡಿದ್ದಾರೆ.

    ಬಾಲಕಿಯರು ಹಾಗೂ ಪೋಷಕರು ಮಹಿಳಾ ಠಾಣೆಗೆ ಆಗಮಿಸುತ್ತಿದ್ದಂತೆ, ನೇರವಾಗಿ ಠಾಣೆಗೆ ಆಗಮಿಸಿದ ಎಸ್‍ಪಿ ಜಿ. ರಾಧಿಕ ಅಪ್ರಾಪ್ತ ಬಾಲಕಿಯರ ಜೊತೆ ಮಾತುಕತೆ ನಡೆಸಿದರು. ಶಾಲೆಯಲ್ಲಿ ಮಕ್ಕಳಿಗೆ ಆದ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಆರೋಪಿ ಶಿಕ್ಷಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿದ್ದು, ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ಕಾಮಿ ಶಿಕ್ಷಕ ತಿಪ್ಪೇಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ 7 ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಪೋಷಕರು ಮಹಿಳಾ ಠಾಣೆಯಲ್ಲಿ ಕಾಮಿ ಶಿಕ್ಷಕ ತಿಪ್ಪೇಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಎಫ್‍ಐಆರ್ ಆದ ಬಳಿಕ ಪ್ರತಿಕ್ರಿಯಿಸಿದ ಪೋಷಕರು, ಈ ಪಾಪಿ ಶಿಕ್ಷಕನನ್ನು ಬಂಧಿಸಿ ಆ್ಯಸಿಡ್ ಹಾಕಿ ವಿಷ ಕೊಟ್ಟು ಸಾಯಿಸಬೇಕು. ನಮಗೆ ನ್ಯಾಯ ಬೇಕು. ನಮ್ಮ ಮಕ್ಕಳಿಗೆ ಆದ ಹಿಂಸೆ ಮತ್ತೆ ಯಾರಿಗೂ ಆಗಬಾರದು ಎಂದು ಆಗ್ರಹಿಸಿದ್ದಾರೆ.