Tag: parents

  • ಮಕ್ಕಳಿಬ್ಬರನ್ನು ನೋಡಿಕೊಳ್ತಿರೋ ಸೀಕ್ರೆಟ್ ರಿವೀಲ್ ಮಾಡಿದ ರಾಧಿಕಾ

    ಮಕ್ಕಳಿಬ್ಬರನ್ನು ನೋಡಿಕೊಳ್ತಿರೋ ಸೀಕ್ರೆಟ್ ರಿವೀಲ್ ಮಾಡಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ತಾವು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಮಕ್ಕಳು. ಹೀಗಾಗಿ ತಮ್ಮ ಮಕ್ಕಳ ಜೊತೆ ಮನೆಯಲ್ಲಿ ಖುಷಿಯಿಂದ ಕಾಲಕಳೆಯುತ್ತಿದ್ದಾರೆ. ಕೆಲವರಿಗೆ ಒಂದು ಮಗು ನೋಡಿಕೊಳ್ಳುವುದೇ ಕಷ್ಟ ಎನ್ನಿಸುತ್ತದೆ. ಆದರೆ ರಾಧಿಕಾ ಅವರು ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸ್ವತಃ ರಾಧಿಕಾ ಅವರೇ ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮಿಡಿಯಾದಲ್ಲಿ ತಿಳಿಸಿದ್ದಾರೆ.

    ರಾಧಿಕಾ ತಮ್ಮ ಅಪ್ಪ-ಅಪ್ಪ ಐರಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ “ನಾನು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನು ನೋಡಿ. ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದು ತಿಳಿಸಿದ್ದಾರೆ.

    https://www.facebook.com/RadhikaPandit/photos/a.914160455267178/3419731818043350/?type=3&theater

    ಅಲ್ಲದೇ “ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೇ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಅಪ್ಪಾ, ಆದರೆ ಐರಾ ಮತ್ತು ಜೂನಿಯರ್ ಯಶ್‍ಗೆ ಮಿಮಿ ಮತ್ತು ಅಜ್ಜು ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮಾನನ್ನು ಮಿಮಿ ಎಂದು ಕರೆಯುತ್ತಾಳೆ. ಯಾಕೆಂದರೆ ನಾನು ನನ್ನ ಅಮ್ಮನನ್ನು ಮಮ್ಮಿ ಎಂದು ಕರೆಯುತ್ತೇನೆ. ಅದನ್ನು ಕೇಳಿಸಿಕೊಂಡು ಐರಾ ಮಿಮಿ ಎಂದು ಕರೆಯುತ್ತಾಳೆ” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ರಾಧಿಕಾ ತಮ್ಮ ಮಗಳು ಐಸ್ ಕ್ರೀಮ್ ತಿನ್ನುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು.

  • 21 ವಿದ್ಯಾರ್ಥಿನಿಯರು ಮಧ್ಯಪ್ರದೇಶದಲ್ಲಿ ಲಾಕ್ – ಮಕ್ಕಳನ್ನು ಕರೆತರುವಂತೆ ಪೋಷಕರ ಮನವಿ

    21 ವಿದ್ಯಾರ್ಥಿನಿಯರು ಮಧ್ಯಪ್ರದೇಶದಲ್ಲಿ ಲಾಕ್ – ಮಕ್ಕಳನ್ನು ಕರೆತರುವಂತೆ ಪೋಷಕರ ಮನವಿ

    ಮಡಿಕೇರಿ: ಮೈಗ್ರೇಷನ್ ಕೋರ್ಸ್‍ಗೆಂದು ಮಧ್ಯಪ್ರದೇಶಕ್ಕೆ ಹೋಗಿದ್ದ ಕೊಡಗಿನ 21 ವಿದ್ಯಾರ್ಥಿಗಳು ಲಾಕ್‍ಡೌನ್‍ನಿಂದ ಮಧ್ಯಪ್ರದೇಶದ ಇಂದೋರ್ ನಲ್ಲಿ ಸಿಲುಕಿದ್ದಾರೆ.

    ಕೊಡಗಿನ ಗಾಳಿಬೀಡು ನವೋದಯ ಶಾಲೆಯ 9ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 10ನೇ ತರಗತಿಯ 10 ವಿದ್ಯಾರ್ಥಿನಿಯರು ಕಳೆದ ಜುಲೈ ತಿಂಗಳಲ್ಲಿ ಕೊಡಗಿನಿಂದ ಮಧ್ಯಪ್ರದೇಶದ ಇಂದೋರ್ ಮಾನ್ಪುರ್ ಶಾಲೆಗೆ ಮೈಗ್ರೇಷನ್ ಕೋರ್ಸ್‍ಗೆಂದು ಹೋಗಿದ್ದರು.

    ಪರೀಕ್ಷೆಗಳು ಮುಗಿದಿದ್ದರಿಂದ ಇದೇ ಮಾರ್ಚ್ 21ಕ್ಕೆ ವಿದ್ಯಾರ್ಥಿಗಳು ಕೊಡಗಿಗೆ ಹಿಂದಿರುಗಬೇಕಿತ್ತು. ಅದಕ್ಕಾಗಿ ಮೈಸೂರಿಗೆ ಟಿಕೆಟ್ ಬುಕಿಂಗ್ ಕೂಡ ಆಗಿತ್ತು. ಆದರೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ವಿದ್ಯಾರ್ಥಿಗಳು ವಾಪಸ್ ಆಗಲು ಸಾಧ್ಯವೇ ಆಗಿಲ್ಲ. ಹೀಗಾಗಿ ಅತ್ತ ವಿದ್ಯಾರ್ಥಿಗಳು, ಏನಾಗುವುದೋ ಎಂಬ ಆತಂಕದಲ್ಲಿದ್ದರೆ, ಇತ್ತ ಪೋಷಕರನ್ನು ತಮ್ಮ ಮಕ್ಕಳನ್ನು ಕರೆತರುವಂತೆ ಗಾಳಿಬೀಡಿನಲ್ಲಿ ನವೋದಯ ಶಾಲೆಯ ಪ್ರಾಶುಂಪಾಲರಿಗೆ ಮನವಿ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್ – ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

    ಕೊರೊನಾ ಎಫೆಕ್ಟ್ – ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

    ಬಳ್ಳಾರಿ: ಕೊರೊನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಬಾಲಕಿಯೊಬ್ಬಳು ಕೊನೆಯುಸಿರೆಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಾಂಡ್ರಿ ಗ್ರಾಮದ ನಿವಾಸಿಗಳಾದ ರವಿಕುಮಾರ್ ಹಾಗೂ ಶಕುಂತಲಾ ದಂಪತಿ ಮಗಳು ಸ್ನೇಹ (13) ಮೃತ ದುರ್ದೈವಿ. ಸ್ನೇಹಾಗೆ ಮಾರ್ಚ್ 28ರಂದು ಮನೆಯಲ್ಲಿ ಇರುವ ವೇಳೆ ಜ್ವರ ಕಾಣಿಸಿಕೊಂಡಿತ್ತು. ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿಗೆ ಮಾರ್ಚ್ 29ರಂದು ಪುನಃ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿತ್ತು.

    ಇದರಿಂದ ಭಯಗೊಂಡ ಪೋಷಕರು ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಹೊಸಪೇಟೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ತಂದೆ ರವಿ, ತನ್ನ ಪುತ್ರಿಯನ್ನು ಕರೆತಂದು ಹೊಸಪೇಟೆಗೆ ಬಂದು ಆಸ್ಪತ್ರೆಗಳನ್ನೆಲ್ಲ ಸುತ್ತಾಡಿದ್ದಾರೆ. ಎರಡು ತಾಸು ಅಲೆದಾಡಿದರೂ ಖಾಸಗಿ ಕ್ಲಿನಿಕ್ ಸಿಬ್ಬಂದಿ, ಜ್ವರವು ಕೊರೊನಾ ಲಕ್ಷಣವಾಗಿರುವ ಹಿನ್ನೆಲೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ.

    ಕೊನೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿನವರು ವಿಮ್ಸ್‍ನ ದಾರಿ ತೋರಿಸಿದ್ದಾರೆ. ಅಂಬ್ಯುಲೆನ್ಸ್‍ನಲ್ಲಿ ಅಲ್ಲಿಂದ ಬಳ್ಳಾರಿಗೆ ಕರೆತಂದು ಚಿಕಿತ್ಸೆಗೆ ದಾಖಲಿಸುತ್ತಿದ್ದಂತೆ ಬಾಲಕಿ ಕೊನೆಯುಸಿರು ಎಳೆದಿದ್ದಾಳೆ. ಒಂದು ವೇಳೆ ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ಮಗಳು ಬದುಕುಳಿಯುವ ಸಾಧ್ಯತೆಗಳಿದ್ದವು ಎಂದು ಮೃತ ಬಾಲಕಿಯ ತಂದೆ ರವಿಕುಮಾರ್ ಆರೋಪಿಸಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಕ್ನೋ: ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಲಾಕ್‍ಡೌನ್ ಅವಧಿಯಲ್ಲಿ ಜನಿಸಿದ ಮಗುವಿಗೆ ಪೋಷಕರು ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯ ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತಮ್ಮ ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಸ್ಯಾನಿಟೈಸರ್ ಗೆ ಇದೆ. ಈ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ನನ್ನ ಮಗ ಹುಟ್ಟಿದ್ದಾನೆ. ಹೀಗಾಗಿ ಮಗನಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.

    ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಕ್ಕಿದ್ದರು. ಈ ಹಿಂದೆ ಗೋರಖ್ ಪುರದಲ್ಲಿಯೂ ಹೀಗೆ ವಿಚಿತ್ರ ನಾಮಕರಣ ಮಾಡಿದ ಘಟನೆ ನಡೆದಿತ್ತು. ಜನತಾ ಕರ್ಫ್ಯೂ ದಿನ ಜನಿಸಿದ ಹೆಣ್ಣು ಮಗುವಿಗೆ ಪೋಷಕರು ‘ಕೊರೊನಾ’ ಎಂದೇ ನಾಮಕರಣ ಮಾಡಿದ್ದರು.

    ಆ ಬಳಿಕ ಲಾಕ್‍ಡೌನ್ ಅವಧಿಯಲ್ಲಿ ಮಗು ಜನಿಸಿದ್ದಕ್ಕೆ ಮಗುವಿಗೆ ‘ಲಾಕ್‍ಡೌನ್’ ಎಂದು ಪೋಷಕರು ನಾಮಕರಣ ಮಾಡಿದ್ದರು. ಆ ಬಳಿಕ ರಾಮ್‍ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ‘ಕೋವಿಡ್’ ಎಂದೇ ಹೆತ್ತವರು ಹೆಸರಿಟ್ಟಿದ್ದ ಸುದ್ದಿ ಹೆಚ್ಚು ಸದ್ದು ಮಾಡಿತ್ತು.

  • ನೀರಿನ ಹೊಂಡದಲ್ಲಿ ಮುಳುಗಿ ನಾಲ್ಕು ಮಕ್ಕಳು ಸಾವು

    ನೀರಿನ ಹೊಂಡದಲ್ಲಿ ಮುಳುಗಿ ನಾಲ್ಕು ಮಕ್ಕಳು ಸಾವು

    ಬೆಳಗಾವಿ: ಜಮೀನಿನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಕಾಕ್ ತಾಲೂಕಿನ ಅಂಜನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಭಾಗವಾ, ಸುಪ್ರೀತಾ, ಮಲ್ಲಪ್ಪ ಹಾಗೂ ರಾಧಿಕಾ ಮೃತಪಟ್ಟ ಮಕ್ಕಳು. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಮಾಡಲಾಗಿದೆ. ಆದರೂ ಪೋಷಕರು ತಮ್ಮ ಉಪ ಜೀವನಕ್ಕಾಗಿ ಮಕ್ಕಳನ್ನು ಕರೆದುಕೊಂಡು ಜಮೀನಿಗೆ ಹೋಗಿದ್ದಾರೆ. ಈ ವೇಳೆ ಈ ಘಟನೆ ಸಂಭವಿಸಿದೆ.

    ಮಕ್ಕಳ ಜೊತೆ ಜಮೀನಿಗೆ ಹೋದ ಪೋಷಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಮಕ್ಕಳು ಜಮೀನಿನಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಿದ್ದ ಮಕ್ಕಳು ತಮಗೆ ತಿಳಿಯದೆ ನೀರಿನ ಹೊಂಡದಲ್ಲಿ ಬಿದ್ದು, ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ಭುತ ಅಭಿನಯ, ತಮ್ಮ ಸೌಂದರ್ಯದ ಮೂಲಕವೇ ಅಭಿಮಾನಿಗಳ ಮನ ಕದ್ದವರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸದ್ಯದಲ್ಲೇ ಮದುವೆ ಆಗಲು ಸಿದ್ಧರಾಗಿದ್ದಾರೆ.

    ಸೂಪರ್ ಹಿಟ್ ಸಿನಿಮಾಗಳ ಯಶಸ್ಸು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಕೀರ್ತಿ ಅವರ ಕೈಯಲ್ಲಿದೆ. ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಇಷ್ಟು ಬೇಗ ಮದುವೆ ಆಗಲು ಕೀರ್ತಿ ನಿರ್ಧರಿಸಿದರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿರೋದು ನಿಜ. ಆದರೆ ಪೋಷಕರು ಮದುವೆ ಮಾಡಿಸಲು ನಿರ್ಧರಿಸಿರುವುದರಿಂದ ಕೀರ್ತಿ ವಿವಾಹ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

    ‘ಮಹಾನಟಿ’ ಸುಂದರಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ಕೀರ್ತಿ ಅವರು ಮದುವೆ ಆಗುತ್ತಿರೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕೀರ್ತಿ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ. ಆದರೆ ಉದ್ಯಮಿ ಯಾರು ಎನ್ನುವುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.

    ಸಿನಿಮಾರಂಗದಲ್ಲಿ ಇರುವ ಮಂದಿ ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಆದರೆ ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದಾರೆ. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಅವರು ಮುದ್ದು ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ.

    ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೀರ್ತಿ ಅವರು ಮದುವೆ ಆಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕೀತಿ ಆಗಲಿ, ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಕೀರ್ತಿ ಮದುವೆ ಖ್ಯಾತ ಉದ್ಯಮಿ ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • 25 ದಿನದ ಮಗುವಿನ ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಿದ ಪೋಷಕರು

    25 ದಿನದ ಮಗುವಿನ ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಿದ ಪೋಷಕರು

    ಯಾದಗಿರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್ ಆಗಿದೆ. ಈ ಮಧ್ಯೆ  ಬಡ ದಂಪತಿ ತಮ್ಮ 24 ದಿನದ ಮಗುವನ್ನು ಕಳೆದುಕೊಂಡು ಶವಸಂಸ್ಕಾರ ಮಾಡಲು ಸಾಧ್ಯವಾಗದೆ ಪರದಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ 25 ದಿನದ ಕಂದನನ್ನು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಪರದಾಡುತ್ತಿರುವಾಗ ಪೌರ ಕಾರ್ಮಿಕರು ನೆರವಿಗೆ ನಿಂತಿದ್ದಾರೆ. ಮಗುವಿನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಉತ್ತರ ಪ್ರದೇಶ ಮೂಲದ ಕಲ್ಯಾಣಸಿಂಗ್ ಎಂಬ ವ್ಯಕ್ತಿಯ ಕೆಲವು ದಿನಗಳಿಂದ ಶಹಾಪೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಕಲ್ಯಾಣ ಸಿಂಗ್ ದಂಪತಿಯ 25 ದಿನದ ಮಗು ತೀರಿಹೊಗಿದ್ದು ಬಡವನಾಗಿದ್ದ ಕಲ್ಯಾಣ ಸಿಂಗ್ ಬಳಿ ಒಂದು ಕಡೆ ಶವ ಸಂಸ್ಕಾರಕ್ಕೆ ಹಣವಿಲ್ಲದೆ, ಮತ್ತೊಂದು ಕಡೆ ತಮ್ಮ ಊರಿಗೆ ಹೋಗಲೂ ಆಗದ ಕಠಿಣ ಪರಿಸ್ಥಿತಿ ಎದುರಾಗಿತ್ತು. ಇದನ್ನು ಕಂಡ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ನಿಂತು ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೌರ ಕಾರ್ಮಿಕರು ಮಾನವೀಯತೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮನೆ ಮುಂದೆ ವಾಸಿಸುತ್ತಿದ್ದ ಯುವಕನನ್ನೇ ಪ್ರೀತಿಸಿ ಮದುವೆಯಾದ ಯುವತಿ

    ಮನೆ ಮುಂದೆ ವಾಸಿಸುತ್ತಿದ್ದ ಯುವಕನನ್ನೇ ಪ್ರೀತಿಸಿ ಮದುವೆಯಾದ ಯುವತಿ

    – ಯುವತಿಯ ಪೋಷಕರು ಪ್ರೀತಿ ಒಪ್ಪದಿದ್ದಕ್ಕೆ ಓಡಿ ಹೋಗಿ ಮದುವೆ
    – ಬಲವಂತವಾಗಿ ವಿಷ ಕುಡಿಸಿ ಮಗ್ಳನ್ನೇ ಕೊಲ್ಲಲು ಯತ್ನ
    – ಕೊಲೆ ಮಾಡಲು ಯತ್ನಿಸಿ ಯುವಕನ ಪೋಷಕರ ವಿರುದ್ಧ ಆರೋಪ

    ಲಕ್ನೋ: ಮನೆ ಮುಂದೆ ವಾಸಿಸುತ್ತಿದ್ದ ಯುವಕನನ್ನೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ಆಕೆಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

    ಕಳೆದ ಎರಡು ವರ್ಷದಿಂದ ಪ್ರೇಮಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಯುವತಿಯ ಪೋಷಕರು ಪ್ರೀತಿಯನ್ನು ನಿರಾಕರಿಸಿದ್ದರು. ಹಾಗಾಗಿ ಇಬ್ಬರು ಓಡಿ ಹೋಗಿದ್ದರು. ಆಗ ಯುವತಿಯ ತಂದೆ, ನನ್ನ ಮಗಳು ಅಪ್ರಾಪ್ತಳಾಗಿದ್ದು, ಯುವಕನೊಬ್ಬ ಆಕೆಯ ತಲೆ ಕೆಡಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ, ಯುವತಿಯನ್ನು ನಾರಿನಿಕೇತನ್‍ಗೆ ಕಳುಹಿಸಿದ್ದರು. ಬಳಿಕ ಇಬ್ಬರು 2019ರಲ್ಲಿ ಮದುವೆಯಾದರು.

    ಯುವತಿ ಗ್ರಾಮದಲ್ಲಿರುವ ಯುವಕನ ಮನೆಯಲ್ಲಿಯೇ ವಾಸಿಸುತ್ತಿದ್ದಳು. ತನ್ನ ಮಗಳಿಂದ ಮರ್ಯಾದೆ ಹಾಳಾಯಿತು ಎಂದು ಪೋಷಕರು ಆಕೆಯನ್ನು ವಿರೋಧಿಸುತ್ತಿದ್ದರು. ಅಲ್ಲದೆ ಗ್ರಾಮವನ್ನು ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಯುವಕ ಹಾಗೂ ಯುವತಿಯ ಪೋಷಕರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವತಿಯ ಪೋಷಕರು ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.

    ವಿಷ ಸೇವಿಸಿದ್ದರಿಂದ ಯುವತಿಯ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಇದನ್ನು ನೋಡಿದ ಯುವಕ ತನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವೈದ್ಯರು ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರು. ಈ ಘಟನೆ ನಡೆದ ನಂತರ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ಹೋಗಿ, ನನ್ನ ಮಗಳನ್ನು ಆಕೆಯ ಪತಿ ಹಾಗೂ ಕುಟುಂಬಸ್ಥರು ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಯುವತಿಯ ಹೇಳಿಕೆ ಪಡೆದು ಆಕೆಯ ಕುಟುಂಬಸ್ಥರನ್ನು ಬಂಧಿಸಿದ್ದಾರೆ.

  • ಸರ್ಕಾರದ ಆದೇಶ ಧಿಕ್ಕರಿಸಿ ಕ್ಲಾಸ್ – ಖಾಸಗಿ ಶಾಲೆ ಬಸ್ ಪಲ್ಟಿಯಾಗಿ 15 ಮಕ್ಕಳಿಗೆ ಗಾಯ

    ಸರ್ಕಾರದ ಆದೇಶ ಧಿಕ್ಕರಿಸಿ ಕ್ಲಾಸ್ – ಖಾಸಗಿ ಶಾಲೆ ಬಸ್ ಪಲ್ಟಿಯಾಗಿ 15 ಮಕ್ಕಳಿಗೆ ಗಾಯ

    ಹಾಸನ: ಸರ್ಕಾರದ ರಜೆ ಘೋಷಣೆ ಧಿಕ್ಕರಿಸಿ ಖಾಸಗಿ ಶಾಲೆ ನಡೆಸಿದ್ದು, ಸಂಜೆ ಮಕ್ಕಳನ್ನು ಮನೆಗೆ ಬಿಡಲು ಹೋಗುವಾಗ ಸ್ಕೂಲ್ ಬಸ್ ಪಲ್ಟಿಯಾಗಿ 15 ಮಕ್ಕಳಿಗೆ ಗಾಯವಾಗಿದೆ.

    ಹಾಸನದ ಚನ್ನಂಗಿಹಳ್ಳಿ ಬಳಿ ಈ ಘಟನೆ ಸಂಭವಿಸಿದೆ. ಹನುಮಂತಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಖಾಸಗಿ ಶಾಲೆಯೊಂದರಲ್ಲಿ ಸರ್ಕಾರ ರಜೆ ಘೋಷಣೆ ಮಾಡಿದರೂ ಕ್ಯಾರೆ ಎನ್ನದೆ ಶಾಲೆ ನಡೆಸಿದ್ದಾರೆ. ಸಂಜೆ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಹೋಗುವಾಗ ಬಸ್ ಪಲ್ಟಿಯಾಗಿದೆ.

    ಘಟನೆಯಿಂದ 15 ಮಕ್ಕಳಿಗೆ ಗಾಯವಾಗಿದ್ದು, ಮಕ್ಕಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ಬಗ್ಗೆ ಆಕ್ರೋಶ ಹೊರಹಾಕುತ್ತಿರುವ ಪೋಷಕರು ಖಾಸಗಿ ಶಾಲೆ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

  • ಶಾಲೆ ಫೀ ಕಟ್ಟದ್ದಕ್ಕೆ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನ ಹೊರಗಿಟ್ಟ ಪ್ರಿನ್ಸಿಪಾಲ್

    ಶಾಲೆ ಫೀ ಕಟ್ಟದ್ದಕ್ಕೆ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನ ಹೊರಗಿಟ್ಟ ಪ್ರಿನ್ಸಿಪಾಲ್

    ಚಿಕ್ಕೋಡಿ(ಬೆಳಗಾವಿ): ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದ ದಾಹಕ್ಕೆ ಕೊನೆಯೆ ಇಲ್ಲದಂತಾಗಿದ್ದು, ಶಾಲೆಯ ಫೀ ಕಟ್ಟಿಲ್ಲ ಎಂಬ ಕಾರಣಕ್ಕೆ ಪರೀಕ್ಷಾ ಕೊಠಡಿಯಿಂದ ಮಕ್ಕಳನ್ನು ಹೊರಗೆ ಕೂರಿಸಿದ ಘಟನೆ ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ಸೇಂಟ್ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಈ ರೀತಿ ಬೇಜವಾಬ್ದಾರಿ ತೋರಿದ್ದಾರೆ. ಅಲ್ಲದೆ ವರದಿ ಮಾಡಲು ತೆರಳಿದ್ದ ಮಾಧ್ಯಮದವರನ್ನೂ ಹಿಯಾಳಿಸಿದ್ದಾರೆ.

    ಫೀ ಕಟ್ಟಿಲ್ಲ ಎಂಬ ಕಾರಣಕ್ಕೆ ಮೂವತ್ತಕ್ಕೂ ಹೆಚ್ಚು ಮಕ್ಕಳನ್ನು ಶಾಲಾ ಕೊಠಡಿಯ ಹೊರಗೆ ಕೂರಿಸಿ ಅವಮಾನ ಮಾಡಲಾಗಿದ್ದು, ವಿಷಯ ತಿಳಿದ ಪೋಷಕರು ಸ್ಥಳಕ್ಕೆ ತೆರಳಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ತಾನು ಮಾಡಿದ್ದೇ ಸರಿ ಎಂಬಂತೆ ಆಡಳಿತ ಮಂಡಳಿ ವರ್ತಿಸಿದ್ದು, ಆಡಳಿತ ಮಂಡಳಿ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

    ಸರ್ಕಾರದ ಹಾಗೂ ಅಧಿಕಾರಿಗಳ ಶಿಸ್ತು ಕ್ರಮದ ಭಯವೂ ಇಲ್ಲದೆ ಬೇಕಾಬಿಟ್ಟಿ ವರ್ತನೆ ತೋರಿದ್ದು, ಶಾಲೆಯ ಆಡಳಿತ ಮಂಡಳಿ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.