Tag: parents

  • ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    – ಮಗನಿಗಾಗಿ ಕಣ್ಣೀರಿಡುತ್ತಿದ್ದ ದಂಪತಿಗೆ ವರವಾದ ಕೊರೊನಾ
    – ಗ್ರಾಮದ ಸ್ವಾಸ್ಥ್ಯಕ್ಕಾಗಿ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್

    ತುಮಕೂರು: ಹತ್ತು ವರ್ಷಗಳ ಹಿಂದೆ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದಾನೆ. ಹಲವು ವರ್ಷಗಳ ಬಳಿಕ ಮಗ ಮನೆ ಸೇರಿದರೂ ಪೋಷಕರು ಅವನ ಜೊತೆ ಸೇರದಂತ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ.

    ಹೌದು. ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ದಂಪತಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಮಗ ಕೊರೊನಾ ಭೀತಿಯಿಂದ ಹಿಂತಿರುಗಿ ಬಂದಿದ್ದಾರೆ.

    ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011ರಲ್ಲಿ ಶಾಲೆಗೆಂದು ಹೋಗಿ ಕಾಣೆಯಾಗಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಶುಕ್ರವಾರ ರಾತ್ರಿ ರಂಗಸ್ವಾಮಿ ತನ್ನ ಅಜ್ಜಿಯ ಮನೆ (ಶೆಟ್ಟಿಗೆರೆ)ಗೆ ಬಂದು ತನ್ನ ಪರಿಚಯವನ್ನು ಹೇಳಿಕೊಂಡಾಗ ಆಶ್ಚರ್ಯವಾಗಿ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಮಗ ಬಂದಿರುವ ಸುದ್ದಿ ತಿಳಿದು ಶೆಟ್ಟಿಗೆರೆಗೆ ಬಂದ ಕೃಷ್ಣಪ್ಪ ದಂಪತಿ ಮಗನನ್ನು ನೋಡಿ ಆನಂದಬಾಷ್ಪ ಸುರಿಸಿದ್ದಾರೆ.

    ರಂಗಸ್ವಾಮಿ ಕಳೆದ ಹತ್ತು ವರ್ಷಗಳಿಂದ ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಬೇಸತ್ತು ತವರಿಗೆ ಬರುವ ಮನಸ್ಸು ಮಾಡಿದ್ದಾರೆ ಎಂದು ಚಿಕ್ಕಪ್ಪ ಕುಮಾರ್ ತಿಳಿಸಿದ್ದಾರೆ.

    ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೇ ಎಚ್ಚೆತ್ತು, 10 ವರ್ಷದ ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಆರೋಗ್ಯ ತಪಾಸಣೆಗೆಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಅವರನ್ನು ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.

    ಗ್ರಾಮಸ್ಥರ ಆರೋಗ್ಯ ಮುಖ್ಯ:
    ಮಗ ಬಂದಿರುವುದು ಸಂತೋಷ. ಆದರೆ ಅವನು ಗಡಿಭಾಗದಿಂದ ಬಂದಿರುವ ಕಾರಣ ಆರೋಗ್ಯದ ಜತೆ ಗ್ರಾಮಸ್ಥರ ಆರೋಗ್ಯವೂ ಮುಖ್ಯ. 10 ವರ್ಷ ಕಾದ ನಮಗೆ ಹದಿನೈದು ದಿನ ಕಾಯುವುದು ದೊಡ್ಡದಲ್ಲ. ಹಾಗಾಗಿ ವರದಿ ಬಂದ ನಂತರ ಆರೋಗ್ಯವಂತ ಮಗನನ್ನು ಮನೆಗೆ ಸೇರಿಸಿಕೊಳ್ಳುವುದಾಗಿ ಪೋಷಕರು ಹೇಳುತ್ತಿದ್ದಾರೆ.

  • ವಿಮಾನದಲ್ಲಿ ಹೈದರಾಬಾದ್‍ನಿಂದ ಒಬ್ಬಳೇ ಬಂದ 7ರ ಬಾಲೆ

    ವಿಮಾನದಲ್ಲಿ ಹೈದರಾಬಾದ್‍ನಿಂದ ಒಬ್ಬಳೇ ಬಂದ 7ರ ಬಾಲೆ

    ಬೆಂಗಳೂರು: ಲಾಕ್‍ಡೌನ್‍ನಿಂದ ಹೈದರಾಬಾದ್‍ನಲ್ಲಿ ಸಿಲುಕಿದ್ದ 7 ವರ್ಷದ ಬಾಲಕಿಯೊಬ್ಬಳು ಒಬ್ಬಳೇ ವಿಮಾನದಲ್ಲಿ ಹೈದರಾಬಾದ್‍ನಿಂದ ಬೆಂಗಳೂರಿಗೆ ಬಂದು ಪೋಷಕರ ಮಡಿಲು ಸೇರಿದ್ದಾಳೆ.

    ಲಾಕ್‍ಡೌನ್‍ನಿಂದ ನಿಂತು ಹೋಗಿದ್ದ ವಿಮಾನಯಾನ ಈಗ ಮತ್ತೆ ಆರಂಭವಾಗಿದ್ದು, ದೇಶೀಯ ವಿಮಾನಗಳು ಹಾರಾಟ ಆರಂಭಿಸಿವೆ. ಹೀಗಾಗಿ ಹೈದರಾಬಾದಿನಿಂದ ಬಬ್ಬಳೇ ಪ್ರಯಾಣ ಬೆಳಸಿದ ಜೈನಾ ಜೈನ್ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ತನ್ನ ಪೋಷಕರನ್ನು ಸೇರಿದ್ದಾಳೆ. ಮಗಳು ಬರವುದನ್ನೇ ಕಾಯುತ್ತಾ ವಿಮಾನ ನಿಲ್ದಾಣದಲ್ಲಿ ಕುಳಿತ್ತಿದ್ದ ಅಪ್ಪ-ಅಮ್ಮ ಮಗಳನ್ನು ಕಂಡು ಖುಷಿಯಾಗಿ ಅಪ್ಪಿ ಮುದ್ದಾಡಿದ್ದಾರೆ.

    ಲಾಕ್‍ಡೌನ್ ಆಗುವುದಕ್ಕೂ ಮುನ್ನವೇ ಜೈನಾ ಹೈದರಾಬಾದಿನಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದಳು. ಆದರೆ ತಕ್ಷಣ ಲಾಕ್‍ಡೌನ್ ಆದ ಕಾರಣ ವಾಪಸ್ ಬರಲು ಆಗಿರಲಿಲ್ಲ. ಹೀಗಾಗಿ ಸುಮಾರು ಮೂರು ತಿಂಗಳು ಪೋಷಕರಿಂದ ದೂರವಿದ್ದಳು. ಈಗ ಲಾಕ್‍ಡೌನ್ ಸಡಿಲಿಕೆ ಆದ ಹಿನ್ನೆಲೆಯಲ್ಲಿ ಇಂದು ಬಂದ ವಿಮಾನದಲ್ಲಿ ಜೈನಾ ಬಂದಿದ್ದಾಳೆ. ಮಗುವನ್ನು ಸುರಕ್ಷಿತವಾಗಿ ಕರೆತಂದ ಏರ್ ಪೋರ್ಟ್ ಸಿಬ್ಬಂದಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಗಳನ್ನು ಜೋಪಾನವಾಗಿ ಕರೆತಂದ ಏರ್ ಪೋರ್ಟ್ ಸಿಬ್ಬಂದಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ದಂಪತಿ ಧನ್ಯವಾದ ಹೇಳಿದ್ದಾರೆ.

    60 ವರ್ಷ ಹಿರಿಯ ವ್ಯಕ್ತಿಗಳಿಗೆ ವಿಮಾನ ಪ್ರಯಾಣ ನಿಷೇಧಿಸಲಾಗಿದೆ. ಹೀಗಾಗಿ ಜೈನಾ ಜೈನ್ ಒಬ್ಬಳೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.

  • ‘ಟೆಸ್ಟ್ ಮಾಡಿಸದೇ ಮನೆಗೆ ಬರ್ಬೇಡ’- ಮಗನನ್ನೇ ಹೊರಗಿಟ್ಟ ಪೋಷಕರು

    ‘ಟೆಸ್ಟ್ ಮಾಡಿಸದೇ ಮನೆಗೆ ಬರ್ಬೇಡ’- ಮಗನನ್ನೇ ಹೊರಗಿಟ್ಟ ಪೋಷಕರು

    ಮಂಗಳೂರು: ಹೊಸದಾಗಿ ಮಂಗಳೂರಿನಲ್ಲಿ ದೃಢಪಟ್ಟಿರುವ ರೋಗಿ-1094ನ ಕೊರೊನಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಹಾಗೂ ಈತನ ಟ್ರಾವಲ್ ಹಿಸ್ಟರಿ ಭಯಾನಕವಾಗಿದೆ.

    ಮಂಗಳೂರಿನ ಹೊರವಲಯದ ಜೆಪ್ಪುಪಟ್ನದ 31 ವರ್ಷದ ಸೋಂಕಿತ ಕಳೆದು 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾನೆ. ಲಾಕ್‍ಡೌನ್ ಇದ್ದರೂ ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ-ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು, ಚೆಕ್‍ಪೋಸ್ಟ್ ಗಳಲ್ಲಿ ವಂಚಿಸಿ ಮನೆ ತಲುಪಿದ್ದಾನೆ.

    ದೆಹಲಿಯಿಂದ ಮನೆಗೆ ಬಂದ ಮಗನನ್ನು ತಂದೆ-ತಾಯಿ ಮನೆಗೆ ಸೇರಿಸಿಲ್ಲ. ಮೊದಲು ಹೋಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಾ ಅಂತ ಮನೆಯಿಂದ ಹೊರಗಿಟ್ಟಿದ್ದರು. ಹೀಗಾಗಿ ಕಳೆದ 10 ದಿನಗಳಿಂದ ಏಕಾಂಗಿಯಾಗಿ ಅಜ್ಜಿ ಮನೆಯಲ್ಲಿದ್ದ ಸೋಂಕಿತ, ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದಾನೆ. ಆದರೆ ನಿನ್ನೆ ಬಂದ ವರದಿಯಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಬಂಟ್ವಾಳ ಸೇರಿ ಜಿಲ್ಲೆಯ ಹಲವು ಕಡೆ ಓಡಾಡಿರುವ ಸೋಂಕಿತ, 10 ದಿನ ಎಲ್ಲೆಲ್ಲಿ ಓಡಾಡಿದ್ದಾನೆ ಎಂದು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ಜೊತೆಗೆ ಸೋಂಕಿತನ ಈ ಕೃತ್ಯದಿಂದ ಜಿಲ್ಲೆಯ ವಿವಿಧ ಕಡೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

  • ಕೊರೊನಾ ಭೀತಿ – ಮಗನ ಮದ್ವೆಗೆ ಹೋಗಲಾಗದೇ ಆನ್‍ಲೈನ್‍ನಲ್ಲೇ ಹರಸಿದ ಹೆತ್ತವರು

    ಕೊರೊನಾ ಭೀತಿ – ಮಗನ ಮದ್ವೆಗೆ ಹೋಗಲಾಗದೇ ಆನ್‍ಲೈನ್‍ನಲ್ಲೇ ಹರಸಿದ ಹೆತ್ತವರು

    ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಾಗೂ ಲಾಕ್‍ಡೌನ್ ಪರಿಣಾಮ ಶುಭ ಸಮಾರಂಭಗಳಿಗೆ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಅಲ್ಲದೇ ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿಯೇ ಹೆತ್ತ ಮಗನ ಮದುವೆಗೂ ಪೋಷಕರು ಹೋಗದಂತಹ ಸ್ಥಿತಿ ನಿರ್ಮಾಣವಾಗಿ, ಆನ್‍ಲೈನ್‍ನಲ್ಲಿಯೇ ಮಗನ ಮದುವೆಯನ್ನು ವೀಕ್ಷಿಸಿ, ಹೆತ್ತವರು ಆಶೀರ್ವಾದ ಮಾಡಿದ್ದಾರೆ.

    ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಜಯಲಕ್ಷ್ಮಿ ಹಾಗೂ ಲಕ್ಷ್ಮಿನಾರಾಯಣ ದಂಪತಿಯ ಪುತ್ರ ಶಿವಶ್ಚಂದ್ರ ಹಾಗೂ ಬೆಂಗಳೂರಿನ ಶೈಲಜಾ ಹಾಗೂ ಚಂದ್ರಶೇಖರ್ ದಂಪತಿ ಪುತ್ರಿ ಕಾವ್ಯ ಅವರ ಮದುವೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಆದರೆ ಕೊರೊನಾ ಭೀತಿ ಹಿನ್ನೆಲೆ ಮದುವೆಗೆ ಹೋಗಲಾದೇ ಪೋಷಕರು ತಮ್ಮ ಮಗನ ಮದುವೆಯನ್ನು ಆನ್‍ಲೈನ್‍ನಲ್ಲಿ ವೀಕ್ಷಣೆ ಮಾಡಿ, ಮನೆಯಿಂದಲೇ ಆಶೀರ್ವಾದ ಮಾಡಿದ್ದಾರೆ.

    ಕೊರೊನಾ ಭೀತಿಗೆ ಶಿವಶ್ವಂದ್ರ ಪೋಷಕರು ಬೆಂಗಳೂರಿಗೆ ಹೋಗಲು ಆಗಲಿಲ್ಲ. ಇದರಿಂದ ಶಿವಶ್ಚಂದ್ರ ಪೋಷಕರು ಕೋಡೂರಿನ ಮನೆಯಲ್ಲೇ ಕುಳಿತು ವಾಟ್ಸಪ್ ವಿಡಿಯೋವನ್ನು ಟಿವಿಗೆ ಕನೆಕ್ಟ್ ಮಾಡಿಕೊಂಡು ಮಗನ ಮದುವೆ ನೋಡಿ ಒಂದೆಡೆ ಖುಷಿಪಟ್ಟರೇ, ಮತ್ತೊಂದೆಡೆ ಹೆತ್ತ ಮಗನ ಮದುವೆಯಲ್ಲಿ ಭಾಗವಹಿಸಿ ಮಗ ಸೊಸೆಗೆ ಆಶೀರ್ವದಿಸಲು ಆಗಲಿಲ್ಲವಲ್ಲ ಎಂಬ ನೋವು ಪಟ್ಟಿದ್ದಾರೆ.

  • ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿ: ಜಿಲ್ಲೆಯಲ್ಲಿ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನ ಪತ್ತೆಹಚ್ಚಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಅವುಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಳ್ಳಾರಿ ತಾಲೂಕಿನ ಕುಂಟನಾಳು ಗ್ರಾಮದಲ್ಲಿ ಮೇ 10-13ರಂದು ಪ್ರತ್ಯೇಕವಾಗಿ 7 ಬಾಲ್ಯವಿವಾಹಗಳನ್ನ ಗುರು-ಹಿರಿಯರು ನಿಶ್ಚಯಿಸಿದ್ದರು. ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ತೆರಳಿ, ಬಾಲ್ಯ ವಿವಾಹಗಳನ್ನ ತಡೆದಿದ್ದಾರೆ.

    17 ವರ್ಷದ ಇಬ್ಬರು, 16 ವರ್ಷದ ನಾಲ್ವರು ಹಾಗೂ 14 ವರ್ಷದ ಓರ್ವ ಬಾಲಕಿಯನ್ನ ಅಧಿಕಾರಿಗಳ ತಂಡ ರಕ್ಷಣೆ ಮಾಡಿ ಬಳ್ಳಾರಿಯ ಶಾಂತಿ ಧಾಮದಲ್ಲಿರಿಸಿದ್ದಾರೆ. ಈ ಎಲ್ಲ ಬಾಲ್ಯ ವಿವಾಹಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಜಿಲ್ಲೆಯ ಕುರುಗೋಡು ತಾಲೂಕಿನ ಲಕ್ಷ್ಮಿಪುರದಲ್ಲಿ ಮೇ 11ರಂದು ನಡೆಯಬೇಕಿದ್ದ ಈ ಬಾಲ್ಯ ವಿವಾಹಗಳನ್ನ ತಡೆಯಲಾಗಿದೆ. ವಧು- ವರರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಹುಬ್ಬಳ್ಳಿ: ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಮಾಡಬೇಕೆಂದು ಪೋಷಕರ ಮನವಿ ಮಾಡಿಕೊಂಡಿದ್ದರಿಂದ 59 ದಿನಗಳ ಹಿಂದೆ ಲಂಡನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿಯ ಲಿಂಗರಾಜ ನಗರದ ಎಂಜಿನಿಯರ್ ಶವ ಇಂದು ಬೆಂಗಳೂರಿಗೆ ಬರಲಿದೆ.

    ಶಿವರಾಜ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಈ ವಿಷಯವನ್ನು ಕೇಂದ್ರ ಸಂಸದೀಯ ಸಚಿವ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಶನಿವಾರ ಖಚಿತಪಡಿಸಿದ್ದಾರೆ.

    ಮಾರ್ಚ್ 13 ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಅಂತ್ಯ ಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರು. ಹೀಗಾಗಿ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು.

    ಈ ಕುರಿತು ಶಿವರಾಜ ತಂದೆ, ತಾಯಿ 15 ದಿನಗಳ ಹಿಂದೆಯಷ್ಟೇ ತಮ್ಮ ಮಗನ ಶವವನ್ನು ದೇಶಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ನಿಟ್ಟಿನಲ್ಲಿ ನೆರವು ನೀಡಿದ್ದರು. ಭಾರತ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿ ಶವದ ಜೊತೆ ಪತ್ನಿ, ಮಗು ಬರಲು ಒಪ್ಪಿಗೆ ನೀಡಿದೆ.

    ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ಮಟ್ಟಿನ ಲಾಕ್‍ಡೌನ್ ತೆರವುಗೊಂಡು ವಿಮಾನಯಾನ ಆರಂಭಗೊಂಡಿದೆ. ಇಂದು ಲಂಡನ್‍ನಿಂದ ಬೆಂಗಳೂರಿಗೆ ವಿಮಾನವೊಂದು ಬರುತ್ತಿದೆ. ಅದೇ ವಿಮಾನದಲ್ಲಿ ಟೆಕ್ಕಿ ಶಿವರಾಜ ಪಾಟೀಲ ಶವ ಹಾಗೂ ಪತ್ನಿ, ಮಗು ಬರುವ ಸಾಧ್ಯತೆ ಇದೆ ಎಂದು ಸಚಿವ ಜೋಶಿ ತಿಳಿಸಿದರು.

  • ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಮಕ್ಕಳು

    ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಮಕ್ಕಳು

    ಧಾರವಾಡ: ಇಬ್ಬರು ಬಾಲಕಿಯರು ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ್ದಾರೆ.

    ಲಾಕ್‍ಡೌನ್‍ನಿಂದಾಗಿ 10 ವರ್ಷದ ರೋಮುಕುಮಾರಿ, 08 ವರ್ಷದ ಪೋಸುಕುಮಾರಿ ಇಬ್ಬರು ಬಾಲಕಿಯರು ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪೋಷಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿಯರು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ತಂದೆ-ತಾಯಿಗಳ ಮಡಿಲು ಸೇರಿದ್ದಾರೆ.

    ಕಳೆದ ಎರಡು ತಿಂಗಳ ಹಿಂದೆ ಈ ಮಕ್ಕಳ ಪೋಷಕರು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ಹೋಗಿದ್ದರು. ನಂತರ ಪೋಷಕರು ಮರಳಲು ಆಗದೇ ಮಕ್ಕಳನ್ನೂ ಕರೆತರದೇ ಪರದಾಟ ನಡೆದಿತ್ತು. 50 ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮೇ 07ರಂದು ಶುಭ ಹಾರೈಸಿ ಮಕ್ಕಳನ್ನು ಧಾರವಾಡದಿಂದ ಬೀಳ್ಕೊಟ್ಟಿದ್ದರು. ರಮೇಶ್ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಅವರ ಪೋಷಕ ಬಳಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಅವರು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಲಿಖಿತ ಪತ್ರವನ್ನು ಬರೆದು ಧನ್ಯವಾದ ತಿಳಿಸಿದ್ದಾರೆ.

  • ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದ್ರೆ ಇದೀಗ ತಮ್ಮ ಅಪ್ಪ-ಅಮ್ಮ ಮದುವೆ ವಾರ್ಷಿಕೋತ್ಸವದ ವಿಶೇಷ ದಿನವನ್ನು ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಯನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಗಿಣಿ ತಮ್ಮ ತಂಡದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ಹಂಚಿದ್ದಾರೆ. ಈ ಮೂಲಕ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಆಚರಿಸಿ, ಹೆತ್ತವರಿಗೆ ಒಂದೊಳ್ಳೆ ಉಡುಗೊರೆ ನೀಡಿದ್ದಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ರಾಗಿಣಿ, ಆರ್‌ಡಿ ವೆಲ್‍ಫೇರ್ ವತಿಯಿಂದ 300ಕ್ಕೂ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್‍ಗೆ ಊಟ, ಸಿಹಿ ಹಂಚಿದ್ದೇವೆ. ನಮಗೆ ಹೀಗೆ ಬೆಂಬಲ ನೀಡುತ್ತಿರಿ ಎಂದು ಬರೆದು ಊಟ ನೀಡುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    https://twitter.com/raginidwivedi24/status/1258067253234298880

    ಕಳೆದ ಕೆಲವು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ 150 ವೈದ್ಯಕೀಯ ಸಿಬ್ಬಂಧಿಗಳಿಗೆ ಮನೆಯಲ್ಲಿ ಅಡುಗೆ ತಯಾರಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಆರ್‌ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ಅವರು ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡಿದ್ದರು. ಹಾಗೆಯೇ ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆ ಮಾಡಿದ್ದರು.

    ರಾಗಿಣಿ ಅವರು ಲಾಕ್‍ಡೌನ್ ಸಂಕಷ್ಟದಲ್ಲಿ ಬಡವರು, ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಗಿಣಿ ಅವರು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವುದು ಎಲ್ಲರ ಮನಗೆದ್ದಿದೆ.

  • ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಎಲ್ಲ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಕುಟುಂಬದೊಂದಿಗೆ ಸಂತಸ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಕಿಚ್ಚ ಸುದೀಪ್ ತಮ್ಮ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ತಂದೆ ತಾಯಿಯ ವಿವಾಹ ವಾರ್ಷಿಕೋತ್ಸಕ್ಕೆ ಶುಭ ಕೋರಿದ್ದು, ಭಾವನಾತ್ಮಕ ಸಾಲುಗಳ ಮೂಲಕ ಟ್ವೀಟ್ ಮಾಡಿದ್ದಾರೆ.

    ಅವರು ನನ್ನನ್ನು ರೂಪಿಸಿದವರು, ಬೆಳೆಸಿದವರು, ಬಿಗಿಗೊಳಿಸಿದವರು, ಅಂದವಾಗಿಸಿದವರು. ಇಷ್ಟು ಮಾತ್ರವಲ್ಲ ನನ್ನನ್ನು ಆಶೀರ್ವದಿಸಿ, ನನಗಾಗಿ ಪ್ರಾರ್ಥಿಸುವವರು. ಅಮ್ಮ-ಅಪ್ಪ 54 ವರ್ಷಗಳ ನಿಮ್ಮ ಒಗ್ಗಟ್ಟಿನ ಜೀವನಕ್ಕೆ ಶುಭಾಶಯ. ನೀವು ಇನ್ನೂ ಹಲವು ವರ್ಷಗಳ ಕಾಲ ನಮ್ಮೊಂದಿಗೆ ಇರಬೇಕಿದೆ. ಲವ್ ಯು ಬೋತ್ ಫಾರ್‍ಎವರ್ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ತಂದೆ, ತಾಯಿಯನ್ನು ನೆನೆದಿದ್ದಾರೆ.

    ಮನೆಯಲ್ಲೇ ಕಾಲ ಕಳೆಯುತ್ತಿರುವ ಕಿಚ್ಚ ಸುದೀಪ್, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮಾಡುವ ಸಹಾಯದ ಕುರಿತು ಪ್ರತಿಕ್ರಿಯಿಸುತ್ತಿರುತ್ತಾರೆ. ಅಲ್ಲದೆ ಹಲವು ಅಭಿಮಾನಿಗಳ ಪ್ರಶ್ನೆಗೆಗಳಿಗೆ ಉತ್ತರಿಸುತ್ತಿದ್ದಾರೆ. ಹೀಗೆ ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

    ಕೋಟಿಗೊಬ್ಬ-3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದು, ಸಿನಿಮಾ ಅಂತಿಮ ಹಂತ ತಲುಪಿದೆ. ಇನ್ನೇನು ಬಿಡುಗಡೆಯಾಗಲಿದೆ ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಕಿಚ್ಚನಿಗೆ ಜೋಡಿಯಾಗಿ ಮೆಡೋನ್ನ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ. ಶ್ರದ್ಧಾ ದಾಸ್ ಇಂಟರ್‍ಪೋಲ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಹಾಗೂ ಎಂ.ಬಿ ಬಾಬು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬೆಂಗಳೂರು: ಆರ್ಥಿಕವಾಗಿ ಸಮರ್ಥರಿರುವ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿಲು ಮುಂದಾದರೆ, ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು.

    ಈ ಹಿನ್ನೆಲೆಯಲ್ಲಿ ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸುವಂತೆ ಸಚಿವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

    ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ. ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು. ಅಲ್ಲದೇ ಈ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸುರೇಶ್ ಕುಮಾರ್ ನೀಡಿದ್ದಾರೆ.