Tag: parents

  • ಮದ್ವೆಯಾದ ಒಂದು ವಾರದಲ್ಲೇ ಪ್ರಿಯಕರನ ಜೊತೆ ಯುವತಿ ಆತ್ಮಹತ್ಯೆ

    ಮದ್ವೆಯಾದ ಒಂದು ವಾರದಲ್ಲೇ ಪ್ರಿಯಕರನ ಜೊತೆ ಯುವತಿ ಆತ್ಮಹತ್ಯೆ

    – ಸಾಯುವ ಮುನ್ನ ಪ್ರೇಮಿಗಳು ವಿವಾಹ
    – ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತು

    ಹೈದರಾಬಾದ್: ಅತ್ತೆ ಮನೆಯಿಂದ ಕಾಣೆಯಾಗಿದ್ದ ಯುವತಿಯೊಬ್ಬಳು ಪ್ರಿಯಕರನ ಜೊತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ನವಾಬ ಪೇಟೆಯಲ್ಲಿ ನಡೆದಿದೆ.

    ಸಂಗರೆಡ್ಡಿಯ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಮೀನಾ ಮತ್ತು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಕಾರ್ತಿಕ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಮೀನಾ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಅಕ್ಕಪಕ್ಕದಲ್ಲಿ ಇರುವುದರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಆದರೆ ಪೋಷಕರು ಬೇರೆ ಜಾತಿ ಎಂದು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪ್ರೇಮಿಗಳು ಫೋನ್ ಮೂಲಕ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಮೀನಾ ಪೋಷಕರು ಕಳೆದ ವಾರ ಬಲವಂತವಾಗಿ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು.

    ಮಂಗಳವಾರ ಮಧ್ಯಾಹ್ನ ಮೀನಾ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಮೀನಾಳನ್ನು ಕಾರ್ತಿಕ್ ತನ್ನ ಬೈಕಿನಲ್ಲಿ ನವಾಬ ಪೇಟೆ ಮಂಡಲದ ಪೂಲಪಲ್ಲಿಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಇಬ್ಬರು ಒಟ್ಟಿಗೆ ಸಾಯಲು ನಿರ್ಧರಿಸಿದ್ದರು. ಸಾಯುವ ಮುನ್ನ ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಇದರಿಂದ ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಾಗಿದೆ. ಹೀಗಾಗಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್‍ನೋಟ್ ಬರೆದಿದ್ದಾರೆ.

    ಪೂಲಪಲ್ಲಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರುದಿನ ಗ್ರಾಮದ ಜನರು ಜಮೀನಿಗೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಎಸ್‍ಐ ಕೃಷ್ಣ ತಮ್ಮ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

    ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಕಾರ್ತಿಕ್ ಮತ್ತು ಮೀನಾ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮದುವೆಯಾಗಿದ್ದಾರೆ. ಮೀನಾಗೆ ಈಗಾಗಲೇ ಮದುವೆಯಾಗಿದ್ದು, ತಾಳಿಯನ್ನು ಬಿಚ್ಚಿಟ್ಟಿದ್ದಳು. ಆದರೆ ಮೀನಾಳ ಕುತ್ತಿಗೆಯಲ್ಲಿ ಅರಿಶಿಣದ ಕೊಂಬಿನ ತಾಳಿ ಇತ್ತು. ಹೀಗಾಗಿ ಅವರು ಸಾಯುವ ಮುನ್ನ ಮದುವೆ ಆಗಬೇಕೆಂದು ಇಷ್ಟಪಟ್ಟಿದ್ದರು ಎಂದು ಎಸ್‍ಐ ಕೃಷ್ಣ ತಿಳಿಸಿದ್ದಾರೆ.

  • ಅಪ್ರಾಪ್ತೆ ಸಂಶಯಾಸ್ಪದ ಸಾವು- ಅತ್ತೆ, ಆಕೆಯ ಮಗನ ಮೇಲೆ ಕೊಲೆ ಆರೋಪ

    ಅಪ್ರಾಪ್ತೆ ಸಂಶಯಾಸ್ಪದ ಸಾವು- ಅತ್ತೆ, ಆಕೆಯ ಮಗನ ಮೇಲೆ ಕೊಲೆ ಆರೋಪ

    ಧಾರವಾಡ: ಅಪ್ರಾಪ್ತೆಯೊಬ್ಬಳ ಶವ ಆಕೆಯ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ 16 ವರ್ಷದ ಬಾಲಕಿ ಲಕ್ಷ್ಮೀ ಭಜಂತ್ರಿ ಮೃತ ಹುಡುಗಿ. ಅಪ್ರಾಪ್ತೆಯನ್ನು ಆಕೆಯ ಅತ್ತೆ ಮತ್ತು ಅತ್ತೆಯ ಮಗ ಕೊಲೆ ಮಾಡಿದ್ದಾರೆ ಅಂತ ಬಾಲಕಿಯ ಮನೆಯವರು ಆರೋಪ ಮಾಡಿದ್ದಾರೆ.


    ಮಗಳನ್ನು ಮದುವೆ ಮಾಡಿಕೊಡುವಂತೆ ಅತ್ತೆಯ ಮಗ ಭೀಮಶಿ ತುಂಬಾಲು ಬಿದ್ದಿದ್ದ. ಆದರೆ ಭೀಮಶಿ ಸರಿ ಇಲ್ಲ. ಹೀಗಾಗಿ ನಾವು ಮದುವೆ ಮಾಡಿ ಕೊಡುವುದಿಲ್ಲ ಎಂದು ಹೇಳಿದ್ದೆವು ಅಂತ ಪೋಷಕರು ಹೇಳಿದರು.

    ಆದರೆ ಇದರಿಂದ ರೋಸಿ ಹೋದ ಭೀಮಶಿ ಮೃತ ಲಕ್ಷ್ಮೀ ತಮ್ಮ ಗ್ರಾಮದ ಬಳಿ ಆಡು ಮೇಯಿಸಲು ಹೋದಾಗ ಅಲ್ಲಿಂದಲೇ ಅವಳನ್ನು ಕರೆದುಕೊಂಡು ನರೇಂದ್ರ ಗ್ರಾಮಕ್ಕೆ ಬಂದಿದ್ದನು. ಈ ಬಗ್ಗೆ ತಿಳಿದ ಪೋಷಕರು ಮುಂದೆ ಆಕೆಗೆ ಮದುವೆ ವಯಸ್ಸು ಆದ ಬಳಿಕ ನಿನಗೆ ಮದುವೆ ಮಾಡಿಕೊಡುತ್ತೀವಿ ಎಂದು ಲಕ್ಷ್ಮಿ ಮನೆಯವರು ಭೀಮಶಿಗೆ ಹೇಳಿದ್ದರು.

    ಇಂದು ಏಕಾಏಕಿಯಾಗಿ ನರೇಂದ್ರ ಗ್ರಾಮದ ಅತ್ತೆ ಮನೆಯಲ್ಲೇ ಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀಯ ಅತ್ತೆ ಶಾಂತಾ ಮತ್ತು ಭೀಮಶಿಯೇ ಕೊಲೆ ಮಾಡಿದ್ದಾರೆ ಅಂತ ಹುಡುಗಿಯ ಮನೆಯವರು ಮಹಿಳಾ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

  • ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ದೇಶಾದ್ಯಂತ ಕೊರೊನಾ ಆವರಿಸಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.

    ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡ್ತೇವೆ. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಅವರು, ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.

    ಸಮಾಜದ ಕಟ್ಟ ಕಡೆಯ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತೇವೆ. ಕೆಲ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಶಿಕ್ಷಣ ಗುಣಮಟ್ಟ ವಿಚಾರದಲ್ಲಿ ರಾಜಿ ಇಲ್ಲ. ಒತ್ತಡ ಹೇರಿ, ಬಲವಂತವಾಗಿ ಫೀಸ್ ಕಿತ್ತುಕೊಳ್ಳುವ ಪರಿಪಾಠ ಹಿಂದಿನಿಂದಲೇ ಇಲ್ಲ. ಮುಂದೆಯೂ ಮಾಡದಂತೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಾಸಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಈ ಬಾರಿ ಕೊರೊನಾ ಎಲ್ಲರನ್ನು ಜರ್ಜರಿತ ಮಾಡಿದೆ. ಪೋಷಕರ ಕೈಯಲ್ಲಿ ಕಾಸಿಲ್ಲ, ಹಾಗಂತ ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಾವಶ್ಯಕ ಎಂದು ಸುಕುಮಾರ್ ತಿಳಿಸಿದ್ದಾರೆ.

    ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಇದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.

  • ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದು ವರ್ಷದ ಹೆಣ್ಣು ಮಗು ಕೊರೊನಾದಿಂದ ಗುಣಮುಖವಾಗಿದೆ.

    ಮಹಾರಾಷ್ಟ್ರದಿಂದ ಒಂದು ವರ್ಷದ ಮಗು ಸಮೇತ ದಂಪತಿ ಚಿಕ್ಕಬಳ್ಳಾಪುರ ಜಿಲ್ಲೆಗ ಆಗಮಿಸಿದ್ದರು. ಮೇ 25ರಂದು ಒಂದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ದೃಢವಾಗಿತ್ತು. ಅಂದೇ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದಲ್ಲದೇ ಈ ಮಗುವಿನ ತಂದೆ ತಾಯಿ ಸಹ ಕೊರೊನಾಗೆ ತುತ್ತಾಗಿದ್ದರು. ಅವರು ಸಹ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಒಂದಡೆ ಕೊರೊನಾ ಪಾಸಿಟಿವ್ ಮತ್ತು ಅದರ ಜೊತೆಗೆ (ಎಸ್‍ಎಎಮ್) ತೀವ್ರ ತರವಾದ ಅಪೌಷ್ಟಿಕತೆಯಿಂದ ಸಹ ಮಗು ಬಳಲುತ್ತಿತ್ತು. ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ಮಗು ದಾಖಲಾಗುವ 7.4 ಕೆಜಿ ಇದ್ದ ಮಗು ಡಿಸ್ಚಾರ್ಜ್ ವೇಳೆ 8.7 ಕೆಜಿ ತೂಕವಿದ್ದು, ತೂಕದಲ್ಲಿ ಸಹ ಏರಿಕೆ ಆಗಿದೆ. ಅಪೌಷ್ಟಿಕತೆ ನಡುವೆಯೂ ಕೊರೊನಾ ಗೆದ್ದು ಮಗು ಗುಣಮುಖವಾಗಿದೆ. ತಂದೆ ತಾಯಿ ಜೊತೆ ಮಗು ಸಹ ಗುಣಮುಖವಾಗಿ ಸದ್ಯ ಕ್ಷೇಮವಾಗಿ ಮನೆ ಸೇರುವಂತಾಗಿದೆ.

  • ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಎದುರಿಸುತ್ತಿದೆ. ಈ ನಡುವೆ ಹೊಸ ಶೈಕ್ಷಣಿಕ ವರ್ಷದ ಆರಂಭಿಸುವ ಬಗ್ಗೆ ಚರ್ಚೆ ಶುರುವಾಗಿದ್ದು, ಈ ಬಾರಿ ಶಾಲೆಗಳನ್ನೇ ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನಿಷ್ ಸಿಸೊಡಿಯಾ ಪ್ರತಿಕ್ರಿಯಿಸಿದ್ದು, ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಆರೋಗ್ಯ ಸಚಿವ ಸತ್ಯಂದ್ರ ಜೈನ್ ಹೇಳಿದ್ದಾರೆ. ಈ ಹಂತದಲ್ಲಿ ಶಾಲೆಗಳನ್ನು ಪುನಾರಂಭಿಸುವುದು ಸರಿಯಲ್ಲ ಎಂದು ಪೋಷಕರ ಅಭಿಪ್ರಾಯಪಟ್ಟಿದ್ದಾರೆ.

    ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯವಾಗಿದ್ದು ಈ ವರ್ಷ ಪೂರ್ತಿ ಶಾಲೆಗಳನ್ನು ತೆರೆಯುವುದು ಬೇಡ. ಈ ವರ್ಷವನ್ನು ‘ಝೀರೋ ಅಕಾಡೆಮಿಕ್ ಇಯರ್’ ಎಂದು ಘೋಷಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಇಸ್ರೇಲ್‍ನಲ್ಲಿ ಶಾಲೆಗಳನ್ನು ಆರಂಭಿಸಿದ ಕಾರಣಕ್ಕೆ ಕೊರೊನಾ ಸೋಂಕು ಮತ್ತಷ್ಟು ಹರಡಿ ಇಡೀ ದೇಶವನ್ನೇ ಕಷ್ಟಕ್ಕೆ ಸಿಲುಕಿಸಿತ್ತು. ಇಸ್ರೇಲ್ ನಲ್ಲಿ ಶಾಲೆ ತೆರೆದು ಆಗಿರುವ ಅನಾಹುತಗಳನ್ನು ಮರೆಯಬಾರದು. ಭಾರತದಲ್ಲಿ ಶಾಲೆಗಳನ್ನು ತೆರೆದರೆ ಏನಾಗಲಿದೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಆತಂಕ ವ್ಯಕ್ತಪಡಿಸಿವೆ.

    ದೆಹಲಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದಿದೆ. ಆ ಪೈಕಿ ನಾಲ್ವರು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಆದರಿಂದ ಸದ್ಯ ಶಾಲೆ ತೆರೆಯುವುದು ಒಳ್ಳೆಯದಲ್ಲ ಎನ್ನುವುದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಅಭಿಪ್ರಾಯಪಟ್ಟಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶುಲ್ಕ ಹೆಚ್ಚಳ ನಿರ್ಧಾರ ವಾಪಸ್ ಪಡೆಯದಿದ್ರೆ ಕಾನೂನು ಕ್ರಮ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶುಲ್ಕ ಹೆಚ್ಚಳ ನಿರ್ಧಾರ ವಾಪಸ್ ಪಡೆಯದಿದ್ರೆ ಕಾನೂನು ಕ್ರಮ

    – ಖಾಸಗಿ ಶಾಲೆಗಳಿಗೆ ಸುರೇಶ್ ಕುಮಾರ್ ಕೊನೆಯ ಅವಕಾಶ

    ಬೆಂಗಳೂರು: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಕೂಲ್ ಫೀಸ್ ಹೆಸರಲ್ಲಿ ವಸೂಲಿಗಿಳಿದಿದ್ದವು. ಇದರಿಂದ ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಲಾಗಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಖಾಸಗಿ ಶಾಲೆ ಶುಲ್ಕ ಅಭಿಯಾನವನ್ನು ಪ್ರಸಾರ ಮಾಡಿತ್ತು. ಇದೀಗ ಖಾಸಗಿ ಶಾಲೆ ಶುಲ್ಕ ಅಭಿಯಾನಕ್ಕೆ ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ನಾವು ಸೂಚನೆ ಕೊಡುವ ಮೊದಲೇ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಳ ಮಾಡಿದ್ದವು. ನಮ್ಮ ಸೂಚನೆ ಹೋದ ಬಳಿಕ ಮತ್ತೆ ಶಾಲೆಗಳು ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿವೆ. ಕೆಲವು ಶಾಲೆಗಳು ಶುಲ್ಕವನ್ನು ಹೆಚ್ಚಳ ಮಾಡಿದೆ. ಹೀಗಾಗಿ ನಾವು ಅದಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ. ಸಾವಿರಾರು ಪೋಷಕರು ಸಹಾಯವಾಣಿಗೆ ಫೋನ್ ಮಾಡಿದ್ದಾರೆ. ನಮಗೆ ಎಲ್ಲಿಂದ ದೂರ ಬಂದಿದೆ ಎಂಬುದರ ಬಗ್ಗೆ ವಿಚಾರಿಸಿದ್ದೇವೆ ಎಂದರು.

    ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತೆ ಇಲ್ಲ. ಶುಲ್ಕ ಹೆಚ್ಚಳ ಬಗ್ಗೆ ನಮಗೆ ಮಾಹಿತಿ ಬಂದಿದೆ. ಖಾಸಗಿ ಶಾಲೆಗಳಿಗೆ ಕೊನೆ ಅವಕಾಶ ಕೊಡಲಾಗಿದೆ. ಮಹಾಮಾರಿ ಕೊರೊನಾದಿಂದ ಜನರು ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಮಾನವೀಯತೆ ತೋರಿಸಬೇಕು. ಅವರಾಗಿಯೇ ಶುಲ್ಕವನ್ನು ಕಡಿಮೆ ಮಾಡಬೇಕು. ಒಂದು ವೇಳೆ ಶಾಲೆಗಳು ಶುಲ್ಕ ಹೆಚ್ಚಳ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ಶಿಕ್ಷಣ ಕಾಯ್ದೆ ಪ್ರಕಾರ ಕಾನೂನು ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಕುಮಾರ್ ಖಾಸಗಿ ಶಾಲೆಗಳಿಗ ಎಚ್ಚರಿಕೆ ನೀಡಿದರು.

    ಸುರೇಶ್ ಕುಮಾರ್ ಸಾಫ್ಟ್ ಅಲ್ಲ. ನಾನು ಯಾರ ಲಾಬಿಗೂ ಮಣಿಯುದಿಲ್ಲ. ಖಾಸಗಿ ಶಾಲೆಗಳು ಭಂಡತನ ಮುಂದುವರಿಸಿದರೆ ನಮ್ಮ ಕೈಯಲ್ಲಿ ಅಸ್ತ್ರ ಇದೆ ಅದನ್ನ ಬಳಸುತ್ತೇವೆ. ಸರ್ಕಾರ ಶಾಲೆಯಲ್ಲಿ ಶುಲ್ಕವನ್ನು ಹೆಚ್ಚಿಸಬಾರದು ಎಂದು ಆದೇಶ ಹೊರಡಿಸಿದೆ. ಪೋಷಕರು ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಡಿ. ಪೋಷಕರು ಖಾಸಗಿ ಶಾಲೆಗಳಿಗೆ ಮಣಿಯಬೇಡಿ. ಸರ್ಕಾರದ ಆದೇಶ ನೂರಕ್ಕೆ ನೂರು ಅನುಷ್ಠಾನಕ್ಕೆ ತರುತ್ತೇನೆ. ಅದು ನನ್ನ ಕರ್ತವ್ಯ ಎಂದು ಸುರೇಶ್ ಕುಮಾರ್ ಹೇಳಿದರು.

  • ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

    ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

    – ಫೀಸ್ ಟಾರ್ಚರ್ ವಿರುದ್ಧ ಸಮರ

    ಬೆಂಗಳೂರು: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಕೂಲ್ ಫೀಸ್ ಹೆಸರಲ್ಲಿ ವಸೂಲಿಗಿಳಿದಿವೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ದುಪ್ಪಟ್ಟು ಫೀಸನ್ನು ಕಟ್ಟಿಸಿಕೊಳ್ಳುತ್ತಿದ್ದು, ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಲಾಗಿದ್ದಾರೆ.

    ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದೆ, ಹಿಂದಿನ ವರ್ಷದ ಶುಲ್ಕ ಪಡೆಯಲು ಏಪ್ರಿಲ್ 28 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಖಾಸಗಿ ಶಾಲೆಗಳು ಈ ಆದೇಶವನ್ನ ಲೆಕ್ಕಿಸದೆ ಮನಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಶೇ.20, 30, 40, 50ವರೆಗೂ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ಕೊಡುತ್ತಿವೆ.

    ಶಾಲೆಗಳು ಇದೀಗ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಕಟ್ಟಬೇಕು ಅಂತ ಮೆಸೇಜ್ ಕಳುಹಿಸುತ್ತಿವೆ. ರಾಜ್ಯದ ಸುಮಾರು ಶೇ.80 ಖಾಸಗಿ ಶಾಲೆಗಳಿಂದ ಸರ್ಕಾರದ ಆದೇಶ ಮೀರಿ ಶುಲ್ಕ ಹೆಚ್ಚಳ ಮಾಡಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ನೀಡಲಾಗುತ್ತಿದೆ.

    ರಾಜ್ಯದಲ್ಲಿ ಸುಮಾರು 23 ಸಾವಿರ ಖಾಸಗಿ ಶಾಲೆಗಳು ಇವೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 23, 502 ಖಾಸಗಿ ಶಾಲೆಗಳು ಇವೆ. ಬೆಂಗಳೂರಿನಲ್ಲಿ ಸುಮಾರು 6-7 ಸಾವಿರ ಖಾಸಗಿ ಶಾಲೆಗಳಿಗೆವೆ. ಬಹುತೇಕ ಶಾಲೆಗಳು ವಿವಿಧ ರೂಪದಲ್ಲಿ ಮಕ್ಕಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಟ್ಯೂಷನ್ ಫೀಸ್, ಆನ್‍ಲೈನ್ ಕಂಪ್ಯೂಟರ್ ಫೀಸ್, ಬುಕ್ಸ್, ಸಮವಸ್ತ್ರ, ಲೈಬ್ರರಿ, ಗೇಮ್ ಫೀಸ್ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಹೆಚ್ಚಳ ಮಾಡಿದೆ. ಈ ಕೊರೊನಾ ವರ್ಷದಲ್ಲೂ ಶಾಲೆಗಳ ಮಾತ್ರ ಶುಲ್ಕ ಕಡಿತ ಮಾಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೋಷಕರ ಪರದಾಟ:
    ಫೀಸ್ ಕಟ್ಟಿಲ್ಲ ಅಂದರೆ ಆನ್‍ಲೈನ್ ಲಾಗೀನ್ ಐಡಿ ಕೊಡಲ್ಲ ಅಂತಾರೆ, ಎಲ್ಲರಿಗೂ ವರ್ಕ್ ಫ್ರಂ ಇರಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಲಸೋಲ ಮಾಡಿ ಹಣ ಕಟ್ಟುತ್ತಿದ್ದೀವಿ. ಮನೆ ಕಡೆಗೂ ಕಷ್ಟ ಆಗುತ್ತೆ. ಖಾಸಗಿ ಶಾಲೆಗಳು ಮಾಡೋದು ತಪ್ಪು ಎಂದು ಕೆಂಗೇರಿ ನಿವಾಸಿ ಪ್ರಿಯ ಹೇಳಿದ್ದಾರೆ.

    ನಾಲ್ಕನೇ ತರಗತಿಗೆ ಒಟ್ಟು 1 ಲಕ್ಷ ಶುಲ್ಕ. ಈಗಾಗಲೇ 60 ಸಾವಿರ ಕಟ್ಟುವಂತೆ ಮಸೇಜ್ ಬಂದಿತ್ತು. ನಾವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೀವಿ. ತಿಂಗಳಲ್ಲಿ ಐದು ದಿನದ ಸಂಬಳ ಕಟ್ ಮಾಡಿದ್ದಾರೆ. ಫೀಸ್‍ಗೆ ಅಂತಾನೇ ವರ್ಷದಿಂದ ಸೇವ್ ಮಾಡಿಕೊಂಡು ಬಂದಿದ್ದೀವಿ. ಹಾಗಾಗಿ ಅರ್ಧ ಹಣ ವನ್ನು ಕಟ್ಟಿದ್ದೀವಿ. ಆನ್ ಲೈನ್ ಕ್ಲಾಸಸ್ ಅಂತ ಫೀಸ್ ತಗೊಂಡ್ರು. ಅದರಲ್ಲಿ ವಿಷ್ಯೂಯಲ್ಸ್ ಕ್ಲಾರಿಟಿ ಇರಲ್ಲ, ನೆಟ್ವರ್ಕ್ ಇರಲ್ಲ, ಹಳ್ಳಿ ಭಾಗದ ಜನರು ಏನು ಮಾಡಬೇಕು. ಆಗಷ್ಟ್ ಗೆ ಶಾಲೆ ಆರಂಭ ಅಂದರೆ ಅರ್ಧ ವರ್ಷ ಮುಗೀತು. ಆದರೆ ಸ್ಕೂಲ್‍ನವರು ಪೂರ್ತಿ ಹಣ ತಗೋತಿದ್ದಾರೆ ಎಂದು ಪೋಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

     

    ನನ್ನ ಮಗು ಫ್ರೀ ನರ್ಸರಿಗೆ ಹೋಗುತ್ತಿದೆ. ಮೂರು ತಿಂಗಳನಿಂದ ಮೂರು ದಿನಕ್ಕೆ, ವಾರಕ್ಕೆ ಫೀಸ್ ಕಟ್ಟಿ ಅಂತ ಮಸೇಜ್‍ಗಳು ಬರುತ್ತಿವೆ. ವ್ಯಾನ್ ಫೀಸ್, ಡ್ರೆಸ್‍ಗೆ ಅಂತ ಮತ್ತೆ ಹಣ ಕೇಳುತ್ತಿದ್ದಾರೆ. ಖಾಸಗಿ ಶಾಲೆಗಳು ಒಂದು ರೂಪಾಯಿ ಕೂಡ ಕಮ್ಮಿ ಮಾಡುತ್ತಿಲ್ಲ. ಸರ್ಕಾರದಿಂದ ವಿನಾಯಿತಿ ಯಾಕೆ ಕೊಡಬೇಕು ಇವರಿಗೆ. ನಮ್ಮ ಕೆಲಸಗಳಿಗೆ ಭದ್ರತೆ ಇಲ್ಲ, ನಮ್ಮ ಬದುಕು ಕೂಡ ಕಷ್ಟ ಆಗಿದೆ ಎಂದು ಯಶವಂತ್ ಹೇಳಿದರು.

    ಜನ ಹೊಟ್ಟೆಗೆ ಬಟ್ಟೆಗೆ ಹೊಂದಿಸಿ ಕೊಂಡರೆ ಸಾಕಾಗಿದೆ. ಬಾಡಿಗೆ ಕಟ್ಟುವುದಕ್ಕೆ ಹಣವಿಲ್ಲ. ಇವರಿಗೆ ಎಲ್ಲಿಂದ ಫೀಸ್ ಕಟ್ಟುವುದು. ಕೆಲಸ ಕಾರ್ಯ ಇಲ್ಲದ ವೇಳೆಯಲ್ಲಿ ಇವರು ಹಣ ಕಟ್ಟಿ ಅಂದರೆ ಎಲ್ಲಿ ಕಟ್ಟುವುದು? ಖಾಸಗಿ ಶಾಲೆಗಳು ವಸೂಲಿಗೆ ಇಳಿದಿರೋದು ಸರಿಯಿಲ್ಲ. ಸರ್ಕಾರ ಗಮನ ಹರಿಸಬೇಕು ಎಂದು ಸವಿತಾ ಹೇಳಿದ್ದಾರೆ.

  • ಫೋನ್ ಮಾಡಿ ಮೇಘನಾಳನ್ನು ಇಷ್ಟಪಟ್ಟಿದ್ದೇನೆ ಎಂದಿದ್ದ, ನಂತ್ರ ನಾನೇ ಪೋಷಕರನ್ನು ಒಪ್ಪಿಸಿದ್ದೆ: ಜಗ್ಗೇಶ್

    ಫೋನ್ ಮಾಡಿ ಮೇಘನಾಳನ್ನು ಇಷ್ಟಪಟ್ಟಿದ್ದೇನೆ ಎಂದಿದ್ದ, ನಂತ್ರ ನಾನೇ ಪೋಷಕರನ್ನು ಒಪ್ಪಿಸಿದ್ದೆ: ಜಗ್ಗೇಶ್

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಅವರು ಕಂಬನಿ ಮಿಡಿದಿದ್ದಾರೆ.

    ಇಂದು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರು, ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿರು ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ಬಂದಿದ್ದ ಜಗ್ಗೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಚಿರು-ಮೇಘನಾ ಮದುವೆಗೆ ನಾನೇ ಅವರ ಪೋಷಕರನ್ನು ಒಪ್ಪಿಸಿದ್ದೆ ಎಂದು ಹೇಳಿದ್ದಾರೆ.

    ಈ ಸಾವು ಅನಿರೀಕ್ಷಿತ, ನನ್ನ ಡ್ರೈವರ್ ಕಡೆಯಿಂದ ಸಾವಿನ ವಿಚಾರ ಗೊತ್ತಾಯ್ತು. ಬಹಳ ನೋವಾಯ್ತು. ಚಿರು ಮೇಘನಾಳನ್ನು ತುಂಬಾ ಇಷ್ಟ ಪಡುತ್ತಿದ್ದ. ಒಂದು ದಿನ ಫೋನ್ ಮಾಡಿ ನಾನು ಮೇಘನಾಳನ್ನು ಬಹಳ ಇಷ್ಟ ಪಡುತ್ತಿದ್ದೇನೆ. ಆದರೆ ಅವರ ಪೋಷಕರು ಒಪ್ಪುತ್ತಿಲ್ಲ ಎಂದು ಹೇಳಿದ್ದ. ಆಗ ನಾನೇ ಸುಂದರ್ ಬಳಿ ಮಾತನಾಡಿ ಒಪ್ಪಿಸಿದ್ದೆ. ಆಗ ನನಗೆ ಹೀಗಾಗುತ್ತೆ ಎಂದು ನೆನಸಿರಲಿಲ್ಲ ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಅರ್ಜುನ್ ಸರ್ಜಾ ಅವರು ನನಗೆ ಕರೆ ಮಾಡಿದ್ದರು. ಆಗ ನಾವು ಇವರ ಬಗ್ಗೆ ಮಾತನಾಡಿದ್ದೇವು. ಅರ್ಜುನ್ ನಾವು ದಡ ಸೇರಿದ್ದೇವೆ. ಈಗ ಧ್ರುವ ಮತ್ತು ಚಿರು ಕೂಡ ಚೆನ್ನಾಗಿದ್ದಾರೆ ಎಂದು ಹೇಳಿದ್ದರು. ನೋಡಿದರೆ ಈಗ ಈ ರೀತಿಯ ವಿಚಾರ ಕೇಳಿ ಬಹಳ ಬೇಸರವಾಯ್ತು. ಈಗ ನನಗೆ ಚಿರು ಆತ್ಮಕ್ಕೆ ಶಾಂತಿಕೋರುವುದಕ್ಕೂ ಹಿಂಜರಿಕೆ ಆಗುತ್ತಿದೆ ಎಂದು ಜಗ್ಗೇಶ್ ದು:ಖ ವ್ಯಕ್ತಪಡಿಸಿದರು.

    ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 2:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.

  • 2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    – ಹಾಲುಣಿಸಲು ಪರದಾಡ್ತಿದ್ದ ತಂದೆ-ತಾಯಿ
    – ಮೂರು ತಿಂಗಳಿಂದ ಮಾಡಲು ಕೆಲಸ ಇಲ್ಲ

    ಕೋಲ್ಕತಾ: ಪೋಷಕರೇ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

    ಮಗುವಿನ ತಂದೆ ಬಾಪನ್ ಧಾರಾ ಮತ್ತು ತಾಯಿ ತಾಪ್ಸಿ ಎಂದು ಗುರುತಿಸಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ತಂದೆ ದೈನಂದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿಂದ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.

    ಹೌರಾದಲ್ಲಿರುವ ಮಗುವಿನ ಪೋಷಕರ ದೂರದ ಸಂಬಂಧಿಕರ ಮನೆಯಿಂದ ಪೊಲೀಸ್ ಅಧಿಕಾರಿಗಳ ತಂಡ ಮಗುವನ್ನು ವಶಪಡಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವಿಚಾರ ಬೆಳಕಿಗೆ ಬಂದ ನಂತರ ಮಗುವಿನ ಪೋಷಕರು ಪರಾರಿಯಾಗಿದ್ದಾರೆ. ತನಿಖೆಯ ವೇಳೆ ದಂಪತಿ ತಮ್ಮ ಮಗುವನ್ನು 3,000 ರೂಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಗ್ನಿಶ್ವರ್ ಚೌಧರಿ ತಿಳಿಸಿದರು.

    ತಾಪ್ಸಿ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಕೊರೊನಾ ಸೋಂಕು ಹರಡುವ ಭಯದಿಂದ ಆಕೆಯನ್ನ ಮನೆ ಕೆಲಸಕ್ಕೆ ಬರಬಾರದೆಂದು ಹೇಳಲಾಗಿತ್ತು. ಪತಿ ಬಾಪನ್ ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ಹೀಗಾಗಿ ಊಟ ಮಾಡಲು ಆಹಾರವಿಲ್ಲದೆ, ಮಗುವಿಗೆ ಹಾಲುಣಿಸಲು ಕೂಡ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

    ತಾಪ್ಸಿ ಮನೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳುತ್ತಿರಲಿಲ್ಲ. ಅಲ್ಲದೇ ಮಗು ಕೂಡ ಕಾಣುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತನಿಖೆ ಮಾಡಿದಾಗ ದಂಪತಿಯ ದೂರದ ಸಂಬಂಧಿಕರ ಮನೆಯಲ್ಲಿ ಮಗುವಿರುವುದು ಪತ್ತೆಯಾಗಿದೆ. ಅವರಿಂದ ಮಗುವನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಂದೀಪ್ ಕುಮಾರ್ ಬೋಸ್ ತಿಳಿಸಿದ್ದಾರೆ.

  • ‘ನಾನು ನನ್ನ ಮಕ್ಕಳನ್ನು ಶಾಲೆಗೆ ಕಳಿಸಲ್ಲ’- ಪೋಷಕರಿಂದ ಅಭಿಯಾನ

    ‘ನಾನು ನನ್ನ ಮಕ್ಕಳನ್ನು ಶಾಲೆಗೆ ಕಳಿಸಲ್ಲ’- ಪೋಷಕರಿಂದ ಅಭಿಯಾನ

    ಬೆಂಗಳೂರು: ಕೊರೊನಾ ಸ್ಫೋಟದ ನಡುವೆ ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಇದೀಗ ಮಕ್ಕಳ ಪೋಷಕರು ಆಭಿಯಾನ ಆರಂಭಿಸಿದ್ದಾರೆ.

    ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ. ನನ್ನ ಮಕ್ಕಳನ್ನು ನಾನು ಶಾಲೆಗೆ ಕಳುಹಿಸಲ್ಲ. ಈ ಶೈಕ್ಷಣಿಕ ವರ್ಷ 2020 -21 ರಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಅಭಿಯಾನದ ಮೂಲಕ ಪೋಷಕರು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ.

    ವಾಟ್ಸಾಪ್ ಸ್ಟೇಟಸ್ ಮತ್ತು ಫೇಸ್ ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಷಕರು ಈ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ.

    ಶಾಲೆಯಲ್ಲಿ ಕೊರೊನಾದಿಂದ ಮಕ್ಕಳ ಜಾಗೃತೆ ಮಾಡೋದು ಹೇಗೆ?, ಆರೋಗ್ಯಕ್ಕಿಂತ ಶಾಲೆ ಮುಖ್ಯವಲ್ಲ ಅನ್ನೋ ನಿರ್ಧಾರಕ್ಕೆ ಪೋಷಕರು ಬಂದಿದ್ದಾರೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಯಾವ ತರಗತಿಗೆ ಯಾವಾಗಿಂದ ಶಾಲೆ ಆರಂಭ ಎಂಬುದರ ಕಂಪ್ಲೀಟ್ ಡೀಟೈಲ್ಸ್

    ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ ಪ್ರಾರಂಭ ಮಾಡಲು ಅವಕಾಶ ನೀಡಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜೂನ್ 8 ರಿಂದ ದಾಖಲಾತಿ ಪ್ರಕ್ರಿಯೆಗೆ ಸಿದ್ಧತೆ ಆರಂಭವಾಗಲಿದ್ದು, ಜೂನ್ 8ರಿಂದ ಖಾಸಗಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಅಲ್ಲದೇ ಜೂನ್ 15 ಒಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ಮಾಹಿತಿ ಕೊಡಲು ಶಿಕ್ಷಣ ಇಲಾಖೆ ಸೂಚಿಸಿದೆ.