Tag: parents

  • ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ

    ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ

    – ಪ್ರೀತಿಸಿದ ಹುಡುಗಿಯ ಕೈ ಹಿಡಿದ
    – ಪೋಷಕರು ನೋಡಿದ ಯುವತಿಯನ್ನೂ ವರಿಸಿದ

    ಭೋಪಾಲ್: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಯುವಕನೊಬ್ಬ ಒಂದೇ ಮಂಟಪದಲ್ಲಿ ಒಂದೇ ಸಮಯದಲ್ಲಿ ಇಬ್ಬರನ್ನು ವಿವಾಹವಾಗಿದ್ದಾನೆ.

    ಮಧ್ಯಪ್ರದೇಶದ ಬೈತುಲ್ ಮೂಲದ ಸಂದೀಪ್ ಉಯಿಕೆ ಇಬ್ಬರು ಯುವತಿಯನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ಬೈತುಲ್ ಜಿಲ್ಲಾ ಕೇಂದ್ರ ಕಚೇರಿಯಿಂದ 40 ಕಿ.ಮೀ ದೂರದಲ್ಲಿರುವ ಘೋಡಡೋಂಗ್ರಿ ಬ್ಲಾಕ್‍ನ ಕೆರಿಯಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಅಲ್ಲದೇ ಮೂರು ಕುಟುಂಬಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಎಲ್ಲ ಸಂಪ್ರದಾಯಗಳೊಂದಿಗೆ ವಿವಾಹ ಸಮಾರಂಭ ನಡೆದಿದೆ.

    ಸದ್ಯಕ್ಕೆ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯನ್ನು ವಿವಾಹವಾದ ಬಗ್ಗೆ ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ. ವಧುಗಳಲ್ಲಿ ಒಬ್ಬರು ಹೋಶಂಗಾಬಾದ್ ಜಿಲ್ಲೆಯವರಾಗಿದ್ದು, ಮತ್ತೊಬ್ಬ ವಧು ಘೋಡಡೋಂಗ್ರಿ ಬ್ಲಾಕ್‍ನ ಕೊಯಲಾರಿ ಗ್ರಾಮದವಳಾಗಿದ್ದಾಳೆ ಎಂದು ತಿಳಿದು ಬಂದಿದೆ.

    ವರ ಸಂದೀಪ್ ಭೋಪಾಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಹೋಶಂಗಾಬಾದ್‍ನ ಯುವತಿಯ ಪರಿಯಚವಾಗಿತ್ತು. ಪರಿಯಚ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತ ಸಂದೀಪ್ ಕುಟುಂಬದವರು ಮಗನಿಗಾಗಿ ಹುಡುಗಿಯನ್ನು ಆಯ್ಕೆ ಮಾಡಿದ್ದರು. ಕೊನೆಗೆ ಈ ವಾದ ವಿಕೋಪಕ್ಕೆ ತಿರುಗಿ ಅದನ್ನು ಪರಿಹರಿಸಲು ಮೂರು ಕುಟುಂಬಗಳು ಪಂಚಾಯತಿ ಸೇರಿದವು. ಆಗ ಇಬ್ಬರು ಯುವತಿಯರು ಸಂದೀಪ್ ಜೊತೆ ಒಟ್ಟಿಗೆ ವಾಸಿಸಲು ಸಿದ್ಧರಾಗಿದ್ದರೆ ಮಾತ್ರ ಈ ವಿವಾಹವನ್ನು ನೇರವೇರಿಸಬಹುದು ಎಂದು ಪಂಚಾಯಿತಿ ತೀರ್ಮಾನಿಸಿದೆ.

    ಆಗ ಇಬ್ಬರು ಯುವತಿಯರು ಕೂಡ ಸಂದೀಪ್‍ನನ್ನು ಮದುವೆಯಾಗಲು ಸಮ್ಮತಿ ಸೂಚಿದರು. ಹೀಗಾಗಿ ಸಂದೀಪ್ ಯುವತಿಯರ ಒಪ್ಪಿಗೆ ಮೇರೆಗೆ ಇಬ್ಬರನ್ನೂ ಮದುವೆಯಾಗಿದ್ದಾನೆ. ಕೆರಿಯಾ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಇಬ್ಬರು ವಧುವಿನ ಜೊತೆ ಸಂದೀಪ್ ಸಪ್ತಪದಿ ತುಳಿದಿದ್ದಾನೆ.

    ಮೂರು ಕುಟುಂಬಗಳು ಮದುವೆಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಹೀಗಾಗಿ ಮೂವರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು ಎಂದು ಪಂಚಾಯಿತಿ ಉಪಾಧ್ಯಕ್ಷ ಮಿಶ್ರಿಲಾಲ್ ಪರಾಟೆ ಹೇಳಿದ್ದಾರೆ. ಮದುವೆಯಲ್ಲಿ ವರ, ಇಬ್ಬರು ವಧುವಿನ ಕುಟುಂಬ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.

    ಕೊರೊನಾದಿಂದ ಮದುವೆ, ಸಮಾರಂಭ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಅವಶ್ಯಕ. ಆದರೆ ಈ ಮದುವೆಗೆ ಅನುಮತಿಯನ್ನು ಕೋರಿಲ್ಲ. ನಾವು ಮದುವೆಗೆ ಅನುಮತಿ ನೀಡಿಲ್ಲ. ಹೀಗಾಗಿ ಈ ಬಗ್ಗೆ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದಾರೆ ಎಂದು ಘೋಡಡೋಂಗ್ರಿ ತಹಶೀಲ್ದಾರ್ ಮೋನಿಕಾ ವಿಶ್ವಕರ್ಮ ಹೇಳಿದ್ದಾರೆ.

  • ವಿಷ ಕುಡಿದು ನೇಣು ಬಿಗಿದುಕೊಂಡ ಪ್ರೇಮಿಗಳು- ಪ್ರಿಯಕರ ಸಾವು, ಮರದಿಂದ ಬಿದ್ದ ಪ್ರೇಯಸಿ

    ವಿಷ ಕುಡಿದು ನೇಣು ಬಿಗಿದುಕೊಂಡ ಪ್ರೇಮಿಗಳು- ಪ್ರಿಯಕರ ಸಾವು, ಮರದಿಂದ ಬಿದ್ದ ಪ್ರೇಯಸಿ

    – ಒಟ್ಟಾಗಿ ಬದುಕಲು ಸಾಧ್ಯವಿಲ್ಲವೆಂದು ಒಟ್ಟಿಗೆ ಸಾಯಲು ನಿರ್ಧಾರ
    – ಕೊನೆ ಕ್ಷಣದಲ್ಲಿ ತಂದೆಗೆ ಫೋನ್ ಮಾಡಿದ ಯುವತಿ

    ಹೈದರಾಬಾದ್: ಪೋಷಕರು ಮದುವೆಗೆ ಒಪ್ಪದಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ನಡೆದಿದೆ.

    ಇಬ್ರಾಹಿಂ ಪಟ್ಟಣದ ಗುಂಡೆಟ್ಟಿ ರಮ್ಯಾ (22) ಮತ್ತು ಮಂಡಲೋಜಿ ಪ್ರಣೀತ್‍ಚಾರಿ (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ರಮ್ಯಾ ಮತ್ತು ಪ್ರಣೀತ್‍ಚಾರಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಎರಡು ಕುಟುಂಬದವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

    ಅಲ್ಲದೇ ಇತ್ತೀಚೆಗೆ ರಮ್ಯಾ ಪೋಷಕರು ಆಕೆಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯಿಸಿದ್ದರು. ರಮ್ಯಾ, ತನಗೆ ಈ ಮದುವೆ ಇಷ್ಟವಿಲ್ಲ. ತಾನು ಪ್ರಣೀತ್‍ನನ್ನು ಮದುವೆಯಾಗುತ್ತೇನೆ ಎಂದು ಪೋಷಕರಿಗೆ ಹೇಳಿದ್ದಳು. ಆದರೂ ಪೋಷಕರು ಬಲವಂತವಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಕೊನೆಗೆ ಇಬ್ಬರು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಒಟ್ಟಿಗೆ ಸಾಯಲು ನಿರ್ಧರಿಸಿದರು.

    ಅದರಂತೆಯೇ ಮಂಗಳವಾರ ರಮ್ಯಾ ಮತ್ತು ಪ್ರಣೀತ್‍ಚಾರಿ ಇಬ್ಬರು ಮನೆಯಿಂದ ಓಡಿಹೋಗಿದ್ದಾರೆ. ಗ್ರಾಮದ ಹೊರವಲಯದಲ್ಲಿ ಕೀಟನಾಶಕವನ್ನು ಸೇವಿಸಿದ್ದಾರೆ. ನಂತರ ಇಬ್ಬರು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಈ ವೇಳೆ ರಮ್ಯಾ ಮರದಿಂದ ಕೆಳಗೆ ಬಿದ್ದಿದ್ದಾಳೆ. ಆದರೆ ಪ್ರಣೀತ್‍ಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಯಾದ ರಮ್ಯಾ ತಕ್ಷಣ ತನ್ನ ತಂದೆಗೆ ಫೋನ್ ಮಾಡಿ ವಿಷ ಕುಡಿದಿರುವ ಬಗ್ಗೆ ತಿಳಿಸಿದ್ದಾಳೆ.

    ವಿಷಯ ತಿಳಿದ ತಕ್ಷಣ ತಂದೆ ಸ್ಥಳಕ್ಕೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಮಂಗಳೂರು: ಸರ್ಕಾರ ಆನ್‍ಲೈನ್ ಕ್ಲಾಸ್ ಮಾಡಲು ತಯಾರಿ ನಡೆಸುತ್ತಿದ್ದರೆ ಇತ್ತ ಆನ್‍ಲೈನ್ ಕ್ಲಾಸ್‍ಗೆ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆನ್‍ಲೈನ್ ಕ್ಲಾಸಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಟಿವಿ ಖರೀದಿಗಾಗಿ ಅನ್ನೋ ಮಾಹಿತಿ ಹೊರ ಬಿದ್ದಿದೆ.

    ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ. ಹೀಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಪೋಷಕರು ಮುಂದಾಗಿದ್ದಾರೆ.

    ಈ ವಿಚಾರನ್ನು ಪೋಷಕರು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.

  • ಅವನನ್ನೇ ಮದ್ವೆ ಆಗ್ತೀನಿ- ಚಿಕ್ಕಬಳ್ಳಾಪುರದಲ್ಲಿ ಮರ್ಯಾದಾ ಹತ್ಯೆ

    ಅವನನ್ನೇ ಮದ್ವೆ ಆಗ್ತೀನಿ- ಚಿಕ್ಕಬಳ್ಳಾಪುರದಲ್ಲಿ ಮರ್ಯಾದಾ ಹತ್ಯೆ

    -ಕತ್ತು ಹಿಸುಕಿ ಕೊಂದು ಕಲ್ಲು ಕಟ್ಟಿ ಕೆರೆಗೆ ಎಸೆದ್ರು
    -ಅಂತರ್ಜಾತಿ ಮದ್ವೆಗೆ ಪೋಷಕರ ವಿರೋಧ

    ಚಿಕ್ಕಬಳ್ಳಾಪುರ: ಅಂತರ್ಜಾತಿ ಯುವಕನನ್ನು ಪ್ರೀತಿಸಿದ ಯುವತಿಯನ್ನು ಪೋಷಕರು ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗಡಿ ಗ್ರಾಮದಲ್ಲಿ ನಡೆದಿದೆ.

    ನೆರೆಯ ಆಂಧ್ರಪ್ರದೇಶ ಗೌರಿಬಿದನೂರು ಗಡಿಭಾಗದ ತೂಮಕುಂಟೆ ಗ್ರಾಮದ 18 ವರ್ಷದ ಸಂಧ್ಯಾ ಮೃತ ಯುವತಿ. ಮೃತ ಸಂಧ್ಯಾ ತಾಯಿ ರಾಮಾಂಜಿನಮ್ಮ, ಅಣ್ಣ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಬಾವ ಬಾಲಕೃಷ್ಣ ಸೇರಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಮೃತದೇಹಕ್ಕೆ ದೊಡ್ಡ ಗಾತ್ರದ ಕಲ್ಲು ಕಟ್ಟಿ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಬಿಸಾಡಿದ್ದರು. ಜೂನ್ 23ರಂದು ಮೃತದೇಹ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಂದ್ಯಾಳ ತಾಯಿ, ಸೋದರ, ಅಕ್ಕ ಮತ್ತು ಬಾವ

    ಮೃತ ಸಂಧ್ಯಾ ಎರಡ್ಮೂರು ವರ್ಷಗಳ ಹಿಂದೆ ಅಂತರ್ಜಾತಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದು, ಆತನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಪ್ರಾಪ್ತೆ ಸಂಧ್ಯಾ ಜೊತೆ ಪರಾರಿಯಾಗಿದ್ದ ಪ್ರಕರಣ ಸಂಬಂದ ಆರೋಪಿ ಜೈಲು ಶಿಕ್ಷೆಗೆ ಗುರಿಯಾಗಿದ್ದು ಜೈಲುವಾಸ ಅನುಭಸುತ್ತಿದ್ದಾನೆ.

    ಇತ್ತ ಸಂಧ್ಯಾ ಮನೆಯವರು ಈಕೆಗೆ ಬೇರೊಂದು ಮದುವೆ ಮಾಡಲು ವರನನ್ನ ಹುಡುಕುತ್ತಿದ್ದು ಇದು ಈಕೆಗೆ ಇಷ್ಟವಿರಲಿಲ್ಲ. ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ್ದಳಂತೆ. ಇದರಿಂದ ರೋಸಿ ಹೋದ ಮೃತ ಸಂಧ್ಯಾಳ ಪೋಷಕರು ಕತ್ತು ಹಿಸುಕಿ ಆಕೆಯನ್ನ ಕೊಲೆ ಮಾಡಿ ತದನಂತರ ಮೃತದೇಹವನ್ನ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಆಕೆಯ ಮೃತದೇಹಕ್ಕೆ ದೊಡ್ಡ ಸೈಜುಗಲ್ಲು ಕಟ್ಟಿ ಹಾಕಿ ಬಿಸಾಡಿದ್ದರು.

    ಜೂನ್ 23 ರಂದು ಮೃತದೇಹ ಪತ್ತೆಯಾಗಿ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಸಿಪಿಐ ರವಿಕುಮಾರ್, ಪ್ರಕರಣದಲ್ಲಿನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಾಯಿ, ಅಣ್ಣ, ಅಕ್ಕ, ಭಾವನನ್ನ ಬಂಧಿಸಿರುವ ಪೊಲೀಸರು ಪ್ರಕರಣದಲ್ಲಿ ತಂದೆಯ ಪಾತ್ರದ ಬಗ್ಗೆ ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

  • ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯಲ್ಲಿ ಗೊಂದಲ: ಹಳೆ ಪಠ್ಯದ ಪಶ್ನೆ ಪತ್ರಿಕೆ ನೀಡಿದ ಸಿಬ್ಬಂದಿ

    ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯಲ್ಲಿ ಗೊಂದಲ: ಹಳೆ ಪಠ್ಯದ ಪಶ್ನೆ ಪತ್ರಿಕೆ ನೀಡಿದ ಸಿಬ್ಬಂದಿ

    – ಮರುಪರೀಕ್ಷೆ ನಡೆಸುವಂತೆ ಪೋಷಕರ ಒತ್ತಾಯ

    ರಾಯಚೂರು: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದ್ದು, ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯ ಮಾಡಿದ್ದಾರೆ.

    ಸಿಂಧನೂರಿನ ಶ್ರೀಕೃಷ್ಣದೇವರಾಯ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯಿಂದಾಗಿ ಈ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದ 1,2,3ನೇ ಕೊಠಡಿಯ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದ್ದು, ಹಳೆಯ ಪಠ್ಯ ಕ್ರಮದ ಪ್ರಶ್ನೆ ಪತ್ರಿಕೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಬಿದ್ದಿದ್ದರು. ಪರೀಕ್ಷೆ ಆರಂಭವಾಗಿ ಅರ್ಧಗಂಟೆ ಬಳಿಕ ಪ್ರಶ್ನೆ ಪತ್ರಿಕೆ ಬದಲಿಸುವಂತೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. ಆದರೂ ಪ್ರಶ್ನೆ ಪತ್ರಿಕೆ ಬದಲಿಸಿಲ್ಲ. ಹೀಗಾಗಿ ಅದೇ ಪ್ರಶ್ನೆ ಪತ್ರಿಕೆಗೆ ವಿದ್ಯಾರ್ಥಿಗಳು ಉತ್ತರ ಬರೆದಿದ್ದಾರೆ.

    ಪರೀಕ್ಷೆ ಬರೆದ 25 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಿಬ್ಬಂದಿ ಆಟವಾಡಿದ್ದಾರೆ. ಗಣಿತ ವಿಷಯದ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ ಪಠ್ಯ ಕ್ರಮದಲ್ಲಿ ಬದಲಾವಣೆಯಾಗಿಲ್ಲ ಮರುಪರೀಕ್ಷೆ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

  • ವಿದ್ಯಾರ್ಥಿಗಳಿಗಿಂತ ಪೋಷಕರಿಗೆ ಟೆನ್ಶನ್- 3 ಗಂಟೆ ಮೊದಲೇ ಉಡುಪಿಯಲ್ಲಿ ಪರೀಕ್ಷಾ ಪ್ರಕ್ರಿಯೆ

    ವಿದ್ಯಾರ್ಥಿಗಳಿಗಿಂತ ಪೋಷಕರಿಗೆ ಟೆನ್ಶನ್- 3 ಗಂಟೆ ಮೊದಲೇ ಉಡುಪಿಯಲ್ಲಿ ಪರೀಕ್ಷಾ ಪ್ರಕ್ರಿಯೆ

    ಉಡುಪಿ: ಕೊರೊನಾ ಟಾಪ್ ತ್ರೀ ಜಿಲ್ಲೆ ಉಡುಪಿಯಲ್ಲಿ ಆತಂಕದ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಶಿಕ್ಷಕರು ಪೊಲೀಸರು ಆರೋಗ್ಯ ಇಲಾಖೆಯ ಕಾರ್ಯಕರ್ತರ ಸರ್ಪಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಬರೆಯುವ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚಿನ ಆತಂಕ ಕಂಡುಬಂತು.

    ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಷ್ಟೇ ಸಂಖ್ಯೆಯಲ್ಲಿ ಪೋಷಕರು ಕೂಡ ಕಾಣಿಸಿಕೊಂಡರು. ತಮ್ಮ ಮಕ್ಕಳಿಗೆ ಧೈರ್ಯ ಹೇಳಿ ಶುಭ ಕೋರುವ ಪೋಷಕರನ್ನು ಪರೀಕ್ಷಾ ಕೇಂದ್ರದಿಂದ ಕಳುಹಿಸಲು ಪೊಲೀಸರು ಹರಸಾಹಸ ಪಟ್ಟರು. ತಮ್ಮ ವಾಹನಗಳಲ್ಲಿ ಕರೆದುಕೊಂಡು ಬಂದ ಪೋಷಕರು ಪರೀಕ್ಷಾ ಕೇಂದ್ರದ ಸುತ್ತಮುತ್ತ ಕೆಲ ಕಾಲ ಟ್ರಾಫಿಕ್ ಜಾಮ್ ಮಾಡಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆ 10:30ಕ್ಕೆ ನಿಗದಿಯಾಗಿದ್ದರೂ 8 ಗಂಟೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಆಗಮಿಸಿದ್ದರು. ಪೋಷಕರು ಹೆಚ್ಚು ಮುತುವರ್ಜಿ ವಹಿಸಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಟ್ಟು ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

    ಪ್ರತಿ ಶಾಲೆಗಳಿಗೆ ಒಂದೊಂದು ಕೋಡ್ ಕೊಡಲಾಗಿದ್ದು ಅದರಂತೆಯೇ ಅಧಿಕಾರಿಗಳು ಮಕ್ಕಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟುಕೊಂಡರು. ಹೆಸರು ನಮೂದು ಮಾಡಿ ಆಯಾಯ ಪರೀಕ್ಷಾ ಕೊಠಡಿಗಳತ್ತ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಮಕ್ಕಳನ್ನು ಕಳುಹಿಸಿಕೊಟ್ಟರು. ಸಾಮಾಜಿಕ ಅಂತರ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ಬಳಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು.

    ಎರಡು ಗಂಟೆ ಮುಂಚಿತವಾಗಿಯೇ ವಿದ್ಯಾರ್ಥಿಗಳು ಬಂದಿರುವುದರಿಂದ ಪರೀಕ್ಷೆ ನಡೆಯುವ ಕೊಠಡಿಯಲ್ಲೇ ವಿದ್ಯಾರ್ಥಿಗಳಿಗೆ ಕೊನೆಯ ಹಂತದ ತಯಾರಿ ಮಾಡಲು ಅಧಿಕಾರಿಗಳು ಶಿಕ್ಷಕರು ಅವಕಾಶ ಮಾಡಿಕೊಟ್ಟರು. ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳ ಬ್ಯಾಗ್ ಮತ್ತು ಪುಸ್ತಕಗಳನ್ನು ಸಿಬ್ಬಂದಿ ಹೊರಗೆ ಇಡುವ ವ್ಯವಸ್ಥೆ ಮಾಡಿದರು.

    ವಿದ್ಯಾರ್ಥಿನಿ ರಕ್ಷಾ ಪಬ್ಲಿಕ್ ಟಿವಿ ಜೊತೆ ಮಾತಾಡಿ, ಎರಡು ತಿಂಗಳಿಂದ ಪರೀಕ್ಷೆಯ ದಿನಾಂಕದ ಬಗ್ಗೆ ಬಹಳಷ್ಟು ಗೊಂದಲ ಇತ್ತು. ಒಂದು ಬಾರಿ ಪರೀಕ್ಷೆ ಮುಗಿದರೆ ಸಾಕು ಅನ್ನುವ ಭಾವನೆ ನಮಗೂ ತಂದೆ ತಾಯಿಗೂ ಬಂದಿತ್ತು. ಮನೆಯವರಲ್ಲಿ ಕೊಂಚ ಆತಂಕ ಇದೆ. ಆದರೆ ನಾವು ಫ್ರೀ ಮೈಂಡ್‍ನಿಂದ ಪರೀಕ್ಷೆ ಬರೆಯುತ್ತಿದ್ದೇವೆ ಎಂದಳು.

    ವಿದ್ಯಾರ್ಥಿನಿ ಪೋಷಕಿ ಲತಾ ಮಾತನಾಡಿ, ಕೊರೊನಾ ನಡುವೆ ಪರೀಕ್ಷೆ ಗೊಂದಲ ಇವತ್ತಿಗೆ ನಿವಾರಣೆಯಾಗಿದೆ. ಶಿಕ್ಷಣ ಇಲಾಖೆ ಸರಕಾರ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಇಷ್ಟು ವಿಳಂಬ ಪರೀಕ್ಷೆ ಮಕ್ಕಳ ಮೇಲೆ ಅವರ ಫಲಿತಾಂಶದ ಮೇಲೆ ಪರಿಣಾಮ ಬೀರದಿರಲಿ ಎಂಬುದು ನಮ್ಮ ಹಾರೈಕೆ ಎಂದರು.

  • ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    – ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ದಂಪತಿ
    – ಮಗನಿಗೆ ಸೋಂಕು ಬಂದರೆ ನಮ್ಮ ತಪ್ಪು ಏನು?

    ಕೋಲ್ಕತ್ತಾ: ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸೋಂಕಿತನ ತಂದೆ-ತಾಯಿಯನ್ನು ಮನೆ ಮಾಲೀಕನೋರ್ವ ಬಾಡಿಗೆ ಮನೆ ನೀಡದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

    ಹೌರದ ಡೆಮ್ಜೂರ್ ಪ್ರದೇಶದಲ್ಲಿ ವಾಸವಿದ್ದ ಕುಟುಂಬದಲ್ಲಿ ಆತನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೇಳೆ ಆತನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಅಂಬುಲೆನ್ಸ್ ಬಂದಿದೆ. ಈ ವೇಳೆ ಈ ದಂಪತಿಯೂ ಕೂಡ ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆತನ ಮಗನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದ ದಂಪತಿಯನ್ನು ಮನೆಯ ಮಾಲೀಕ ತಡೆದಿದ್ದಾನೆ. ಜೊತೆಗೆ ನೀವು ನಮ್ಮ ಮನೆಯಲ್ಲಿ ಇರಬೇಡಿ, ನಿಮ್ಮನ್ನು ಇರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ದಂಪತಿಯ ಪರ ನಿಲ್ಲಬೇಕಾದ ಸ್ಥಳೀಯರು ಮತ್ತು ನೆರೆಹೊರೆಯವರು ವೈರಸ್ ನಮಗೂ ಹರಡುತ್ತೆ ಎಂಬ ಭಯದಿಂದ ಮಾಲೀಕನ ಮಾತಿಗೆ ಧನಿಗೂಡಿಸಿದ್ದಾರೆ. ಇದರಿಂದ ದಂಪತಿ ಇನ್ನೂ ಭಯಭೀತರಾಗಿದ್ದಾರೆ.

    ಇದಾದ ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಅವರಿಗೇ ಕೊರೊನಾ ಲಕ್ಷಣ ಇಲ್ಲದೇ ಇದ್ದರೂ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸಲಾಪ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡು ಬಂದರೂ ಮಾಲೀಕ ಮನೆಯಲ್ಲಿ ಉಳಿಯಲು ಅನುಮತಿ ಕೊಟ್ಟಿಲ್ಲ. ಇದರಿಂದ ನೊಂದು ದಂಪತಿ ಮುಖ್ಯ ರಸ್ತೆಯಲ್ಲಿ ಕುಳಿತು ವಾಹನ ತಡೆದು ಪ್ರತಿಭಟನೆ ಮಾಡಿದ್ದಾರೆ.

    ನಮ್ಮ ಮಗನಿಗೆ ಕೊರೊನಾ ಸೋಂಕು ಬಂದರೆ ಅದರಲ್ಲಿ ನಮ್ಮ ತಪ್ಪು ಏನಿದೆ? ನಮ್ಮ ಮಗನಿಗೆ ಸೋಂಕು ತಗುಲಿದರೆ ಅದೂ ನಮ್ಮ ತಪ್ಪಾ? ಮನೆಯ ಮಾಲೀಕ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ನೀವು ಇಲ್ಲಯೇ ಇದ್ದರೆ ಸೋಂಕು ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ನಡು ರಸ್ತೆಯಲ್ಲಿ ಕುಳಿತಿದ್ದೇವೆ. ನಮಗೆ ಬೇರೆ ಕಡೆ ಹೋಗಲು ಎಲ್ಲೂ ಜಾಗವಿಲ್ಲ ಎಂದು ಸೋಂಕಿತ ತಂದೆ ಬಸುಡೆಬ್ ಚಟರ್ಜಿ ನೋವನ್ನು ಹೊರಹಾಕಿದ್ದಾರೆ.

    ಇದಾದ ನಂತರ ಸ್ಥಳಕ್ಕೆ ಪೊಲೀಸ್ ಮತ್ತು ಬಿಡಿಒ ಅಧಿಕಾರಿಗಳು ಬಂದು ದಂಪತಿಯನ್ನು ಮನವೊಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗಳು ಚೆನ್ನಾಗಿದ್ದಾರೆ. ನಾವು ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದೇವೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಡಿಒ ರಾಜಾ ಭೂಮಿಕ್ ತಿಳಿಸಿದ್ದಾರೆ.

  • ‘ಚೆಲುವಿನ ಚಿತ್ತಾರ’ ಸಿನಿಮಾ ರೀತಿಯಲ್ಲಿ ಲವ್ – ಕೊನೆಗೂ ಒಂದಾದ ಪ್ರೇಮಿಗಳು

    ‘ಚೆಲುವಿನ ಚಿತ್ತಾರ’ ಸಿನಿಮಾ ರೀತಿಯಲ್ಲಿ ಲವ್ – ಕೊನೆಗೂ ಒಂದಾದ ಪ್ರೇಮಿಗಳು

    ಕಾರವಾರ: ‘ಚೆಲುವಿನ ಚಿತ್ತಾರ’ ಸಿನಿಮಾ ಲವ್ ಸ್ಟೋರಿಯಂತೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ವರ್ಷದ ಪ್ರೀತಿಗೆ ಜಾತಿ ಅಡ್ಡವಾಗಿದ್ದರೂ ಪ್ರೇಮಿಗಳು ಮದುವೆಯಾಗಿದ್ದಾರೆ.

    ಕುಮಟಾದ ಧನುಷ್ (24) ಮತ್ತು ಸೀತಾ (23) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು. ಧನುಷ್ ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದನು. ಗ್ಯಾರೇಜಿನ ಸಮೀಪದಲ್ಲಿದ್ದ ಮನೆಯಲ್ಲಿ ಸೀತಾ ವಾಸಿಸುತ್ತಿದ್ದು, ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ.

    ವಿದ್ಯಾಭ್ಯಾಸ ಮುಗಿಸಿದ ಸೀತಾ ಕುಮಟಾದ ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರುತ್ತಾಳೆ. ಅಷ್ಟರಲ್ಲಾಗಲೇ ಯುವತಿ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿರುವುದು ಕುಟುಂಬಕ್ಕೆ ತಿಳಿದಿದೆ. ಆಗ ಹುಡುಗ ಬೇರೆ ಜಾತಿಯಾಗಿದ್ದರಿಂದ ಮದುವೆಗೆ ನಿರಾಕರಿಸಿ ಕೆಲಸ ಬಿಡಿಸಿ ಮನೆಯಲ್ಲಿ ಕೂಡಿಹಾಕಿದ್ದರು. ಆದರೂ ಆತನನ್ನೇ ಮದುವೆಯಾಗಬೇಕು ಎಂದು ಹಠ ಹಿಡಿದು ಸೀತಾ ಮನೆಯಿಂದ ತಪ್ಪಿಸಿಕೊಂಡು ಯುವಕನೊಂದಿಗೆ ಊರು ಬಿಟ್ಟು ಓಡಿಹೋಗಿದ್ದಳು.

    ಸೀತಾ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಇಬ್ಬರನ್ನೂ ಕರೆಯಿಸಿ ಯುವಕನಿಗೆ ಧಮ್ಕಿ ಹಾಕಿದ್ದಾರೆ. ಆಗ ಸೀತಾಳನ್ನು ಸ್ವೀಕಾರ ಕೇಂದ್ರಕ್ಕೆ ಸೇರಿಸಿದ್ದಾರೆ. ಅಲ್ಲದೇ ತಮ್ಮ ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗುವುದನ್ನು ಸಹಿಸದ ಪೋಷಕರು ಈ ವೇಳೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಅದಕ್ಕಾಗಿ ಸ್ವೀಕಾರ ಕೇಂದ್ರದಿಂದ ಮಗಳನ್ನು ಕರೆತಂದು ಮನೆಯಲ್ಲಿ ಬಂಧಿಸಿ, ಬಲವಂತದ ಮದುವೆ ಮಾಡಿಸಲು ಪ್ರಯತ್ನ ಮಾಡಿದ್ದಾರೆ.

    ಸೀತಾ ಮತ್ತೆ ಮನೆಯಿಂದ ತಪ್ಪಿಸಿಕೊಂಡು ಬಂದು ಇಂದು ಕಾರವಾರದ ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಸಹಾಯ ಪಡೆದು ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾದವನಾಯ್ಕ ಯುವತಿಯ ತಂದೆಯ ಸ್ಥಾನದಲ್ಲಿ ನಿಂತು ವಧುವನ್ನು ಧಾರೆ ಎರೆದಿದ್ದಾರೆ.

  • ಕೊರೊನಾ ಅಟ್ಟಹಾಸಕ್ಕೆ ಬೆದರಿದ ಪೋಷಕರು- ಶಾಲೆ ಆರಂಭಕ್ಕೆ ರೆಡ್ ಸಿಗ್ನಲ್!

    ಕೊರೊನಾ ಅಟ್ಟಹಾಸಕ್ಕೆ ಬೆದರಿದ ಪೋಷಕರು- ಶಾಲೆ ಆರಂಭಕ್ಕೆ ರೆಡ್ ಸಿಗ್ನಲ್!

    – ಪಬ್ಲಿಕ್ ಟಿವಿಯಲ್ಲಿ ಸರ್ಕಾರಿ ಸಮೀಕ್ಷೆಯ ಇನ್‍ಸೈಡ್ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ನಿಯಂತ್ರಣಕ್ಕೆ ಬರೋ ಯಾವ ಮುನ್ಸೂಚನೆಯೂ ಕಾಣಿಸುತ್ತಿಲ್ಲ. ಆದ್ರೆ ಸರ್ಕಾರವೇನೋ ಸೆಪ್ಟೆಂಬರ್‍ನಲ್ಲಿ ಶಾಲೆ ಆರಂಭಿಸೋ ಸುಳಿವು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜೂನ್ 10ರಿಂದ 20ರ ತನಕ ಪೋಷಕರ ಸಭೆ ನಡೆಸಿ, ಶಾಲೆ ಓಪನ್ ಕುರಿತಂತೆ ಅಭಿಪ್ರಾಯ ಸಂಗ್ರಹಿಸಿತ್ತು. ಸರ್ಕಾರ ನಡೆಸಿದ ಈ ಸಮೀಕ್ಷೆಯ ಇನ್‍ಸೈಡ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯ ಆಗಿದೆ.

    ಇದು ಸರ್ಕಾರದ ವರದಿಯೂ ಅಲ್ಲ. ಎಲ್ಲಾ ಜಿಲ್ಲೆಗಳ ನಮ್ಮ ಪ್ರತಿನಿಧಿಗಳು ಬಹುತೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು, ಎಸ್‍ಡಿಎಂಸಿಗಳನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ. ಪಬ್ಲಿಕ್ ಟಿವಿಗೆ ಲಭ್ಯವಾದ ಈ ಮಾಹಿತಿಯನ್ನು ಅವಲೋಕಿಸಿದಲ್ಲಿ ಬಹುತೇಕ ಪೋಷಕರು ಕೊರೊನಾ ವೇಳೆ ತಮ್ಮ ಮಕ್ಕಳ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಇದನ್ನೆಲ್ಲಾ ನೋಡ್ತಾ ಇದ್ರೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವಾಗಿ ಮಾರ್ಪಡುತ್ತಾ ಎಂಬ ಪ್ರಶ್ನೆ ಏಳುತ್ತದೆ. ಕನಿಷ್ಠ ಒಂದರಿಂದ ಐದನೇ ತರಗತಿವರೆಗೆ ಈ ಬಾರಿ ಶೂನ್ಯ ಶೈಕ್ಷಣಿಕ ವರ್ಷ ಆಗಬಹುದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.

    ಪೋಷಕರಿಗೆ ಸರ್ಕಾರ ಕೇಳಿದ 3 ಪ್ರಶ್ನೆ
    ಪ್ರಶ್ನೆ 1 – ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹಿಂದಿನಂತೆ ತರಗತಿ ಪ್ರಾರಂಭಿಸಬಹುದೇ?
    ಪ್ರಶ್ನೆ 2 – ಶಿಫ್ಟ್ ಲೆಕ್ಕದಲ್ಲಿ ತರಗತಿಗಳನ್ನು ಪ್ರಾರಂಭಿಸಬಹುದೇ?
    ಪ್ರಶ್ನೆ 3 – ದಿನ ಬಿಟ್ಟು ದಿನ ತರಗತಿಗಳನ್ನು ಪ್ರಾರಂಭಿಸಬಹುದೇ?

    ಸರ್ಕಾರ ಕೇಳಿದ ಈ ಪ್ರಶ್ನೆಗಳಿಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಪ್ರಮುಖವಾಗಿ 4 ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಖಾಸಗಿ ಶಾಲೆಗಳ ಮಕ್ಕಳ ಪೋಷಕರ 4 ಅಭಿಪ್ರಾಯ
    ಅಭಿಪ್ರಾಯ 1- ಸ್ಕೂಲಿಗೆ ಕಳುಹಿಸೋದಿಲ್ಲ (ಶೇ.82ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ)
    ಅಭಿಪ್ರಾಯ 2- ಪೋಷಕರಿಗೆ ದ್ವಂದ್ವ (ಶೇ.82ರಷ್ಟು ಪೋಷಕರು ಬೇಡ ಅಂದರೂ, ಇನ್ನುಳಿದವರಿಗೆ ಗೊಂದಲ)
    ಅಭಿಪ್ರಾಯ 3- 5ನೇ ಕ್ಲಾಸ್‍ವರೆಗೆ ಮಕ್ಕಳನ್ನು ಕಳಿಸಲ್ಲ. (ಕೊರೊನಾ ಕಡಿಮೆ ಆಗಬೇಕು ಅಥವಾ ಲಸಿಕೆ ಕಂಡುಹಿಡಿಯಬೇಕು)
    ಅಭಿಪ್ರಾಯ 4- 6ನೇ ಕ್ಲಾಸ್‍ನವರಿಗೆ ಮಾಡಲಿ. (6-10 ನೇ ತರಗತಿ ಆಗಸ್ಟ್ ನಂತರ ಬೇಕಾದ್ರೆ ಪರಿಸ್ಥಿತಿ ನೋಡಿಕೊಂಡು ತರಗತಿ ಪ್ರಾರಂಭ ಮಾಡಲಿ.)

    ಖಾಸಗಿ ಶಾಲೆಗಳು: ಕೊರೊನಾ ಸಮಯದಲ್ಲಿ ಶಾಲೆ ಪ್ರಾರಂಭಿಸಲು ಮುಂದಾದ್ರೆ ನಮ್ಮ ಬೇಡಿಕೆಗಳನ್ನು ಆಲಿಸಬೇಕು. ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಮೂರು ಬೇಡಿಕೆಗಳನ್ನು ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿ ಮುಂದಿಟ್ಟಿದ್ದಾರೆ.
    ಬೇಡಿಕೆ 1: ಶಾಲೆಗಳ ಆರಂಭಕ್ಕೆ ಮೊದಲು ಮಾರ್ಗಸೂಚಿಗಳನ್ನು ನೀಡಿ
    ಬೇಡಿಕೆ 2: ಮಾರ್ಗಸೂಚಿಗಳ ಪಾಲನೆ ಬಗ್ಗೆ ನಿಗಾ ವಹಿಸಬೇಕು
    ಬೇಡಿಕೆ 3: ಶಾಲೆಗೆ ಕಳುಹಿಸಿದ ಮೇಲೆ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತೆಗೆದುಕೊಳ್ಳಬೇಕು.

    ಸರ್ಕಾರಿ ಶಾಲೆಗಳು: ಖಾಸಗಿ ಶಾಲೆ ಮಕ್ಕಳ ಅಭಿಪ್ರಾಯ ಒಂದಾದ್ರೆ, ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಕೆಲವೊಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
    1. ಕೊರೋನಾ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಶೇ.80ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಕೇವಲ 20ರಷ್ಟು ಪೋಷಕರು ಗೊಂದಲದಲ್ಲಿದ್ದಾರೆ.
    2. ಪಾಳಿ ಪದ್ಧತಿ (ಶಿಫ್ಟ್), ದಿನ ಬಿಟ್ಟು ದಿನ ತರಗತಿ ನಡೆಸಿದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ.
    3. ಕೊರೊನಾ ಕಡಿಮೆಯಾದ ಮೇಲೆ ಅಥವಾ ಲಸಿಕೆ ಕಂಡು ಹಿಡಿದ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.

    ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಮಕ್ಕಳ ಪೋಷಕರು, ಶಾಲೆ ಆರಂಭಕ್ಕೆ ಸರ್ಕಾರದ ಮುಂದೆ ಐದು ಷರತ್ತುಗಳನ್ನು ಹಾಕಿದ್ದಾರೆ.

    1. ಶಾಲೆ ಪ್ರಾರಂಭಿಸಿದ್ರೆ ಮಕ್ಕಳಿಗೆ ಸರ್ಕಾರವೇ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.
    2. ಮಕ್ಕಳಿಗೆ ಏನೇ ತೊಂದರೆಯಾದರೂ ಸರ್ಕಾರವೇ ಜವಾಬ್ದಾರಿ ಹೊತ್ತುಕೊಳ್ಳಬೇಕು.
    3. ನಿತ್ಯ ಶಾಲಾ ಕೊಠಡಿಗಳನ್ನ, ಶೌಚಾಲಯಗಳನ್ನ ಶುಚಿಯಾಗಿ ಇಟ್ಟುಕೊಳ್ಳಬೇಕು.
    4. ಮಕ್ಕಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು.
    5. ನಿತ್ಯವೂ ಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು.

    ಸರ್ಕಾರಿ, ಖಾಸಗಿ ಮಕ್ಕಳ ಪೇರೆಂಟ್ಸ್ ಶಾಲೆ ಆರಂಭಕ್ಕೆ ‘ರೆಡ್’ ಸಿಗ್ನಲ್ ತೋರಿದ್ದಾರೆ. ಆದ್ರೆ ಇವರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿರೋದು ನಿತ್ಯ ಕೆಲಸಕ್ಕೆ ಹೋಗೋ ಪೋಷಕರು. ಅವರು ಸಹ ಕೆಲ ಸಲಹೆಗಳನ್ನು ನೀಡಿದ್ದಾರೆ.
    1. ಆಗಸ್ಟ್ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ ಪ್ರಾರಂಭಿಸಲು ಬಹುತೇಕ ಪೋಷಕರ ಸಲಹೆ.
    2. ಶಿಫ್ಟ್ ವ್ಯವಸ್ಥೆಗಿಂತ ದಿನ ಬಿಟ್ಟು ದಿನ ಶಾಲೆ ನಡೆಸಿದ್ರೆ ಒಳ್ಳೆಯದು ಎಂದು ಸಲಹೆ.
    3. ಮಕ್ಕಳ ಜವಾಬ್ದಾರಿ ಸರ್ಕಾರ ಹೊರಬೇಕು. ಮಾಸ್ಕ್, ಗ್ಲೌಸ್ ನೀಡಬೇಕು.

    ಫೈನಲ್ ರಿಪೋರ್ಟ್
    1. ಶಾಲೆ ಪ್ರಾರಂಭಕ್ಕೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಬಹುತೇಕ ಪೋಷಕರ ವಿರೋಧ.
    2. ಕೊರೊನಾ ಲಸಿಕೆ ಬರುವವರೆಗೂ, ಶಾಲೆಗಳನ್ನು ಆರಂಭಿಸುವುದು ಬೇಡ.
    3. ಕೊರೊನಾ ಕಡಿಮೆಯಾದ ನಂತರವಷ್ಟೇ ಶಾಲೆಗಳನ್ನು ಆರಂಭಿಸಿ.

  • ಶಾಲಾ ದಿನಗಳಿಂದ ಪ್ರೀತಿ, ಒಪ್ಪದ ಯುವತಿಯ ಪೋಷಕರ ಮುಂದೆಯೇ ಇರಿದು ಕೊಂದ

    ಶಾಲಾ ದಿನಗಳಿಂದ ಪ್ರೀತಿ, ಒಪ್ಪದ ಯುವತಿಯ ಪೋಷಕರ ಮುಂದೆಯೇ ಇರಿದು ಕೊಂದ

    – ಪ್ರಜ್ಞೆ ತಪ್ಪಿದ ತಾಯಿ, ತಂದೆಯ ಮುಂದೆಯೇ ಮಗಳ ಬರ್ಬರ ಹತ್ಯೆ
    – ಮದುವೆ ಫಿಕ್ಸ್ ಆಗಿದ್ದ ಪ್ರಿಯತಮೆಯ ಕುತ್ತಿಗೆ ಚಾಕು ಇರಿದ ಪ್ರೇಮಿ

    ಲಕ್ನೋ: ಯುವಕನೋರ್ವ ಶಾಲಾ ದಿನಗಳಿಂದ ಓರ್ವ ಯುವತಿಯನ್ನು ಪ್ರೀತಿಸಿ ಅವಳು ಒಪ್ಪದೇ ಇದ್ದಿದ್ದಕ್ಕೆ ಆಕೆಯ ಪೋಷಕರ ಮುಂದೆಯೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಪೊಲೀಸರ ಪ್ರಕಾರ ಸಂತ್ರಸ್ತೆಯನ್ನು ವಿವೇಕ್ ವಿಹಾರ್ ಕಾಲೋನಿ ನಿವಾಸಿ ನೈನಾ ಕೌರ್ (19) ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಂದು ಪಾಗಲ್ ಪ್ರೇಮಿಯನ್ನು ಶೆರು ಖಾನ್ (22) ಎಂದು ಗುರುತಿಸಲಾಗಿದೆ. ನೈನಾ ತನ್ನ ಪೋಷಕರಾದ ಬಲದೇವ್ ಸಿಂಗ್ ಮತ್ತು ನೀಲಂ ಕೌರ್ ಜೊತೆ ವಾಸವಾಗಿದ್ದಳು. ಆಕೆ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ನಾಗ್ಪುರ ಮೂಲದ ಯುವಕನ ಜೊತೆ ಜೂನ್ 22ಕ್ಕೆ ಮದುವೆ ಫಿಕ್ಸ್ ಆಗಿತ್ತು.

    ಈ ಬಗ್ಗೆ ಮಾಹಿತಿ ನೀಡಿರುವ ಮೃತಳ ತಂದೆ, ನಾನು ನನ್ನ ಮಗಳು ಮತ್ತು ಪತ್ನಿ ಸಿಮ್ ಕಾರ್ಡ್ ಖರೀದಿಸಲು ಮಾರ್ಕೆಟ್‍ಗೆ ಹೋಗಿದ್ದವು. ಅಲ್ಲಿ ನೈನಾ ಮತ್ತು ಅವರ ತಾಯಿ ಚಿಲ್ಲಿ ತರಲು ಹೋಗಿದ್ದು, ನಾನು ಅಲ್ಲೆ ಅಂಗಡಿ ಬಳಿ ನಿಂತಿದ್ದೆ. ಅವರು ನನ್ನಿಂದ 50 ಮೀಟರ್ ದೂರ ಹೋದಾಗ ಮೂವರು ಒಂದು ಬೈಕಿನಲ್ಲಿ ಬಂದರು. ಅದರಲ್ಲಿ ಓರ್ವ ಮಾಸ್ಕ್ ಹಾಕಿಕೊಂಡಿದ್ದವನು ನೈನಾ ಕೈಹಿಡಿದು ಎಳೆದುಕೊಂಡು ಹಲ್ಲೆ ಮಾಡಲು ಆರಂಭ ಮಾಡಿದನು ಎಂದು ಹೇಳಿದ್ದಾರೆ.

    ಈ ವೇಳೆ ನೈನಾ ತಾಯಿ ನೀಲಂ ಕೂಡ ಆಕೆಯನ್ನು ರಕ್ಷಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಆತ ಆಕೆಗೂ ಜೋರಾಗಿ ಹೊಡೆದ ಕಾರಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಜೊತೆಯಲ್ಲಿ ಬಂದಿದ್ದ ಮತ್ತೋರ್ವ ನನ್ನನು ತಡೆದ. ತಾಯಿ ಬಿದ್ದ ತಕ್ಷಣ ನೈನಾ ಆತನಿಗೆ ಹೊಡೆದಳು. ಆಗ ಆತ ಚಾಕು ತೆಗೆದು ನೈನಾ ಕುತ್ತಿಗೆಗೆ, ಹೊಟ್ಟೆಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಇರಿದು ಪರಾರಿಯಾದ. ಮಾರುಕಟ್ಟೆಯಲ್ಲಿ ಅಷ್ಟೊಂದು ಜನ ಇದ್ದರೂ ಯಾರು ನನ್ನ ಮಗಳನ್ನು ಉಳಿಸಲಿಲ್ಲ ಎಂದು ತಂದೆ ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನೈನಾ ತಾಯಿ ಆರೋಪಿ ಹಾಕಿದ್ದ ಮಾಸ್ಕ್ ಅನ್ನು ಜಗಳದಲ್ಲಿ ಕಿತ್ತು ಹಾಕಿದ ಕಾರಣ ಆರೋಪಿಯನ್ನು ಗುರುತಿಸಲು ಸಾಧ್ಯವಾಯ್ತು. ಶೆರು ಖಾನ್ ಶಾಲಾದಿನದಿಂದ ನೈನಾಳನ್ನು ಪ್ರೀತಿಸುತ್ತಿದ್ದ. ಆದರೆ ನೈನಾ ನಿರಾಕರಿಸಿದ್ದಳು. ಈಗ ಆಕೆಯ ಮದುವೆ ಫಿಕ್ಸ್ ಆದ ಕಾರಣ ಹೀಗೆ ಮಾಡಿದ್ದಾನೆ. ಶೆರು ಪರಾರಿಯಾಗಿದ್ದು, ಆತನನ್ನು ಹುಡುಕುತ್ತಿದ್ದೇವೆ. ಉಳಿದ ಇಬ್ಬರು ಆರೋಪಿಗಳಾದ ಅಮೀರ್ ಚೌಧರಿ (20) ಮತ್ತು ಆಸಿಫ್ (22) ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.