Tag: parents

  • ಮಕ್ಕಳಾಗಲ್ಲ ಅಂತ ಗೊತ್ತಿದ್ರೂ ಮದ್ವೆಯಾದ – 2 ತಿಂಗಳಲ್ಲೇ ನವವಧು ಆತ್ಮಹತ್ಯೆ

    ಮಕ್ಕಳಾಗಲ್ಲ ಅಂತ ಗೊತ್ತಿದ್ರೂ ಮದ್ವೆಯಾದ – 2 ತಿಂಗಳಲ್ಲೇ ನವವಧು ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮದುವೆಯಾದ ಎರಡು ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

    ಆಯಿಷಾ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಾಗೇಪಲ್ಲಿ ಪಟ್ಟಣದ 17ನೇ ವಾರ್ಡಿನ ತನ್ನ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತಳ ಪೋಷಕರು ಮಗಳ ಪತಿ ಇಮ್ತಿಯಾಜ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ಮೃತ ಆಯಿಷಾ 27 ವರ್ಷ ಕಳೆದರೂ ಋತುಮತಿಯಾಗಿರಲಿಲ್ಲ. ವೈದ್ಯರಿಗೆ ತೋರಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಮಗಳಿಗೆ ಮಕ್ಕಳಾಗೋ ಭಾಗ್ಯ ಇಲ್ಲ ಅಂತ ಪೋಷಕರು ಸಹ ಮದುವೆ ಮಾಡಿರಲಿಲ್ಲ. ಆದರೆ ಎರಡು ತಿಂಗಳ ಹಿಂದೆ ಗುಡಿಬಂಡೆ ಮೂಲದ ಇಮ್ತಿಯಾಜ್ ತನ್ನ ಸಂಬಂಧಿಕರ ಜೊತೆ ಬಂದು ಮದುವೆ ಪ್ರಸ್ತಾಪ ಮಾಡಿದ್ದನು. ಇಮ್ತಿಯಾಜ್‍ಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತನ ಪತ್ನಿ ಮೃತಪಟ್ಟಿದ್ದಳು. ಆದರೂ ನಿಮ್ಮ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಹೇಳಿ ಎರಡನೇ ಮದುವೆಯಾಗಿದ್ದನು.

    ಆಯಿಷಾಳಿಗೆ ಮಕ್ಕಳಾಗಲ್ಲ ಅನ್ನೋ ಸಮಸ್ಯೆಯನ್ನ ವರ ಹಾಗೂ ಅವರ ಸಂಬಂಧಿಕರಿಗೆ ಮೊದಲೇ ಆಯಿಷಾ ತಂದೆ ತಿಳಿಸಿ ಮದುವೆ ಮಾಡಿದ್ದರು. ಆದರೆ ವಿವಾಹವಾದ ಒಂದು ತಿಂಗಳಿಗೆ ಪತಿ ಆಯಿಷಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ನೀನು ನನಗೆ ಬೇಡ ಅಂತ ಹೇಳಿ ತವರು ಮನೆಗೆ ಬಂದು ಬಿಟ್ಟು ಹೋಗಿದ್ದಾನೆ. ಹೀಗಾಗಿ ಕಳೆದ 20 ದಿನಗಳಿಂದ ಆಯಿಷಾ ತವರು ಮನೆಯಲ್ಲಿದ್ದಳು.

    ಪತಿಗೆ ಫೋನ್ ಮಾಡಿದರೆ, ನೀನು ನನಗೆ ಫೋನ್ ಮಾಡಬೇಡ ಅಂತ ಗಲಾಟೆ ಮಾಡುತ್ತಿದ್ದ. ಇತ್ತ ರಾಜೀ ಪಂಚಾಯತಿ ಮಾಡಿ ಸಮಸ್ಯೆ ಬಗೆಹರಿಸೋಣ ಅಂದರೂ ಪತಿ ಬರುತ್ತಿರಲಿಲ್ಲ. ಇದರಿಂದ ಆಯಿಷಾಗೆ ಸೋದರಿಯರು ಸಮಾಧಾನ ಮಾಡುತ್ತಿದ್ದರು. ಕೊನೆಗೆ ಮನನೊಂದು ಆಯಿಷಾ ಇಂದು ತವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಾಹಿತಿ ತಿಳಿದು ಬಾಗೇಪಲ್ಲಿ ಪೊಲೀಸರು ಮನೆಗೆ ಭೇಟಿ ನೀಡಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನ ಆರಂಭ ಮಾಡ್ತಿಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ

    ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನ ಆರಂಭ ಮಾಡ್ತಿಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ

    – ಶೇ.100ಕ್ಕೆ ನೂರಷ್ಟು ಯಡಿಯೂರಪ್ಪ ಸಿಎಂ ಆಗಿರ್ತಾರೆ

    ಮೈಸೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ. ಈಗ ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಅದು ಕಡ್ಡಾಯ ಅಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ. ಈಗ ಅನುಮತಿ ಸಿಕ್ಕಿರುವುದು ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು. ಅದು ಕಡ್ಡಾಯ ಅಲ್ಲ. ಇದಕ್ಕೂ ಪೋಷಕರ ಅನುಮತಿ ಕಡ್ಡಾಯ. ಸೆಪ್ಟೆಂಬರ್ 21 ರಿಂದ ಎಲ್ಲಾ ಶಿಕ್ಷಕರು ಶಾಲೆಗೆ ಬರಬೇಕು. ಸೆಪ್ಟೆಂಬರ್ 21 ರಿಂದ 9, 10, 11, 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಅನುಮಾನ ಇದ್ದರೆ ಸ್ಪಷ್ಟೀಕರಣ ತೆಗೆದುಕೊಳ್ಳಬಹುದು. ಅದು ದೈನಂದಿನ ತಗರತಿ ರೀತಿ ಅಲ್ಲ. ಓದಿದ್ದು ಅರ್ಥವಾಗಿಲ್ಲ ಅಂದರೆ ಶಿಕ್ಷಕರ ಜೊತೆ ಮಾಹಿತಿ ಪಡೆದುಕೊಳ್ಳಬಹುದು ಎಂದರು.

    ಶಾಲೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಬೇಕು. ಅನುಮತಿ ನೀಡಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಶಾಲೆಗೆ ಬರಲು ವಿದ್ಯಾರ್ಥಿಗಳು ಉತ್ಸಾಹಕರಾಗಿದ್ದಾರೆ. ಆದರೆ ಪೋಷಕರಿಗೆ ಇನ್ನೂ ಆತಂಕವಿದೆ. ಹೀಗಾಗಿ ಪೋಷಕರಿಂದ ಕೂಡ ಒಂದು ಅನುಮತಿ ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

    ಕೊರೊನಾದಿಂದ ಈ ವರ್ಷ ಹೆಚ್ಚಿನ ಶುಲ್ಕ ತೆಗೆದುಕೊಳ್ಳುಬಾರದೆಂದು ಆದೇಶ ಹೊರಡಿಸಿದ್ದೇವೆ. ಖಾಸಗಿಯವರು ಇದೇ ನೆಪದಲ್ಲಿ ಸಂಪೂರ್ಣ ಶುಲ್ಕ ತೆಗೆದುಕೊಳ್ಳಬಾರದು. ಒಂದು ಕಂತಿನ ಶುಲ್ಕ ತೆಗೆದುಕೊಳ್ಳಲು ಅನುಮತಿ ಇದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವರ್ಗಾವಣೆಗೆ ಖಾಸಗಿ ಶಾಲೆಯ ವರ್ಗಾವಣೆ ಪತ್ರ ಕಡ್ಡಾಯವಲ್ಲ. ಖಾಸಗಿ ಅವರ ವರ್ಗಾವಣೆ ಪತ್ರ ಕೊಡದಿದ್ದರೆ ಬಿಇಓ ಮೂಲಕವೇ ಪಡೆಯಬಹುದು ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಅಂತಹ ಯಾವುದೇ ಸಾಧ್ಯತೆಗಳು ರಾಜ್ಯದಲ್ಲಿ ಇಲ್ಲ. ಶೇ.100ಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರ ಅದು ಸಿಎಂ ಪರಮಾಧಿಕಾರ. ಹೀಗಾಗಿ ಆ ಬಗ್ಗೆ ಸಿಎಂ ಯಡಿಯೂರಪ್ಪ ಅವರೇ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ಸುರೇಶ್ ಕುಮಾರ್ ಹೇಳಿದರು.

  • ಹಾಸನದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ – ಪೋಷಕರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

    ಹಾಸನದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ – ಪೋಷಕರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

    – ಮದುವೆಯಾಗುವ ಯುವಕರಿಗೂ ಖಡಕ್ ಸೂಚನೆ

    ಹಾಸನ: ಕೊರೊನಾ ಬಂದು ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೇ ಲಾಕ್‍ಡೌನ್ ಅವಧಿಯಲ್ಲಿ ಕೆಲವು ಪೋಷಕರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಲು ತಯಾರಿ ನಡೆಸಿದ ಪ್ರಕರಣಗಳು ಹಾಸನದಲ್ಲಿ ಹೆಚ್ಚಾಗಿ ವರದಿಯಾಗಿದೆ.

    ಅಪ್ರಾಪ್ತ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಲಾಕ್‍ಡೌನ್ ಆರಂಭವಾದ ನಂತರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕಡಿಮೆಯಾಗಿದ್ದು, ಪೋಷಕರು ಮನೆಯ ಸಮೀಪವೇ ಮದುವೆ ಮಾಡಿ ಮುಗಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹಾಸನದಲ್ಲಿ ಕೆಲವು ಪೋಷಕರು ಲಾಕ್‍ಡೌನ್ ಸಮಯದಲ್ಲಿ ತಮ್ಮ ಅಪ್ರಾಪ್ತ ಹೆಣ್ಣುಮಕ್ಕಳನ್ನು ಸದ್ದಿಲ್ಲದೆ ಮದುವೆ ಮಾಡಿ ಮುಗಿಸಲು ಮುಂದಾಗಿದ್ದು ಈಗ ಅಂಕಿ ಅಂಶದಿಂದ ಬಯಲಾಗಿದೆ.

    ಕಳೆದ ಏಪ್ರಿಲ್ ತಿಂಗಳಿಂದ ಜುಲೈ ತಿಂಗಳವರೆಗೆ ಇಂತಹ ಸುಮಾರು 51 ಬಾಲ್ಯವಿವಾಹ ಪ್ರಕರಣಗಳನ್ನು ಅಧಿಕಾರಿಗಳು ತಡೆದಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ. ಲಾಕ್‍ಡೌನ್ ನಂತರ ಹಾಸನದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು, ಅಪ್ರಾಪ್ತ ಬಾಲಕಿಯರ ಮದುವೆಗೆ ಮುಂದಾದ ಪೋಷಕರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಕೂಡ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿ, ಬುದ್ಧಿವಾದ ಹೇಳಿದ್ದಾರೆ.

    ಈ ವರ್ಷ 18 ಬಾಲ್ಯ ವಿವಾಹ ನಡೆದಿದ್ದು ಎಫ್‍ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾಗಿ, ಲೈಂಗಿಕ ದೌರ್ಜನ್ಯ ನೀಡಿರುವ ಮಾಹಿತಿ ಮೇಲೆ, ಈ ವರ್ಷ ಸುಮಾರು 30 ಪೋಕ್ಸೋ ಪ್ರಕರಣ ಕೂಡ ದಾಖಲಿಸಲಾಗಿದೆ.

  • ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    – ಬಾಲಕಿಯ ನಟನಾ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

    ಪುಟ್ಟ ಮಕ್ಕಳು ಏನೇ ಮಾಡಿದ್ರೂ ನೋಡೋಕೆ ಚಂದ. ಅವರು ಆಡುವ ತುಂಟಾಟ, ನಗು, ಅಳು, ಕೋಪ ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಮನೆಯಲ್ಲೊಂದು ಮಗು ಇದ್ದರೆ ನಾವು ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಒಂದು ಬಾರಿ ಮನಸ್ಸು ನಿರಾಳ ಎನಿಸುವುದು ಸಹಜ. ಹೀಗೆ ಇಲ್ಲೊಂದು ಪುಟ್ಟ ಮಗು ತನ್ನ ಮನೆಯವರನ್ನು ಪ್ರ್ಯಾಂಕ್ ಮಾಡಿದ ಘಟನೆ ನಡೆದಿದೆ.

    ಹೌದು. ಪುಟ್ಟ ಬಾಲಕಿಯೊಬ್ಬಳು ನೀರಿನ ಜಗ್ ಒಳಗೆ ಕೈ ಹಾಕಿ ಅಳಲು ಶುರು ಮಾಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಬಂದು ಜಗ್ ಒಳಗಿಂದ ಕೈ ತೆಗೆದಿದ್ದಾರೆ. ಈ ವೇಳೆ ಬಾಲಕಿ ನಗುತ್ತಾ ಮತ್ತೆ ಅದೇ ರೀತಿ ಮಾಡಲು ಮುಂದಾಗುತ್ತಾಳೆ. ಈಕೆಯ ಕುಚೇಷ್ಟೆಯಿಂದ ಸುಸ್ತಾದ ಮನೆಯವರು ನೀರಿನ ಜಗ ಇಡುವ ಜಾಗವನ್ನು ಬದಲಾಯಿಸುತ್ತಾರೆ. ಪುಟ್ಟ ಕಂದಮ್ಮಳ ಈ ಕುಚೇಷ್ಟೆಯನ್ನು ಮನೆಯವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಬ್ಯಾಕ್ ಟು ನೇಚರ್ ಎಂಬ ಟ್ವಿಟ್ಟರ್ ಅಕೌಂಟ್ ಅಪ್ಲೋಡ್ ಮಾಡಿದೆ. 16 ಸೆಕೆಂಡಿನ ಈ ವಿಡಿಯೋ ಇದೂವರೆಗೂ ಸುಮಾರು 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು, ಪುಟ್ಟ ಬಾಲಕಿಯ ಕುಚೇಷ್ಟೆಗೆ ನೆಟ್ಟಿಗೆ ಮಾರು ಹೋಗಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪುಟ್ಟ ಹುಡುಗಿಯ ನಟನಾ ಕೌಶಲ್ಯಕ್ಕೆ ಫಿದಾ ಆಗಿರುವ ಟ್ವಿಟ್ಟರ್ ಬಳಕೆದಾರರು, ತುಂಬಾ ತಮಾಷೆಯಾಗಿದೆ. ಆದರೂ ಉತ್ತಮ ನಟನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬಂದಿವೆ.

    https://twitter.com/backt0nature/status/1306005877602889728

  • ಕ್ಷಮಿಸಿ, ನಾನು ದಣಿದಿದ್ದೇನೆ – ಡೆತ್‍ನೋಟ್ ಬರೆದು 19ರ ಯುವತಿ ಆತ್ಮಹತ್ಯೆ

    ಕ್ಷಮಿಸಿ, ನಾನು ದಣಿದಿದ್ದೇನೆ – ಡೆತ್‍ನೋಟ್ ಬರೆದು 19ರ ಯುವತಿ ಆತ್ಮಹತ್ಯೆ

    – ಪದೇ ಪದೇ ನಿಮ್ಮ ನಿರೀಕ್ಷೆಗಳನ್ನ ನಿರಾಶೆಗೊಳಿಸ್ತೇನೆ
    – ನೀಟ್ ಪರೀಕ್ಷೆಗೆ ಒಂದು ದಿನದ ಮೊದಲೇ ಸೂಸೈಡ್

    ಚೆನ್ನೈ: ನೀಟ್ ಆಕಾಂಕ್ಷಿಯಾಗಿದ್ದ 19 ವರ್ಷದ ಯುವತಿ ಪರೀಕ್ಷೆಗೆ ಒಂದು ದಿನದ ಮೊದಲೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

    ಜ್ಯೋತಿಶ್ರೀ ದುರ್ಗಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಜ್ಯೋತಿ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಮಧುರೈನ ಸಶಸ್ತ್ರ ಪಡೆಗಳ ಮೀಸಲು ವಸತಿಗೃಹದಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ ಮುರುಗಸುಂದರಂ ಸಶಸ್ತ್ರ ಪಡೆಗಳ ಐದನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಜ್ಯೋತಿ ಕಳೆದ ವರ್ಷವೂ ನೀಟ್ ಪರೀಕ್ಷೆ ಬರೆದಿದ್ದು, ತೇರ್ಗಡೆಯಾಗದ ಕಾರಣ ಖಿನ್ನತೆಗೆ ಒಳಗಾಗಿದ್ದಳು. ಆದರೂ ಈ ವರ್ಷದ ಪರೀಕ್ಷೆ ಬರೆಯಲು ಸಾಕಷ್ಟು ತಯಾರಿ ನಡೆಸಿದ್ದಳು. ಆದರೆ ಪರೀಕ್ಷೆಯ ಭಯದಿಂದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ ಪೋಷಕರು ಆಕೆಯ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಜ್ಯೋತಿ ನಮ್ಮೊಂದಿಗೆ ಶುಕ್ರವಾರ ರಾತ್ರಿ ಊಟ ಮಾಡುವಾಗ ಮಾತನಾಡಿಕೊಂಡು ಚೆನ್ನಾಗಿಯೇ ಇದ್ದಳು. ಊಟ ಮುಗಿಸಿ ತಮ್ಮ ರೂಮಿಗೆ ಹೋಗಿ ಮಲಗಿದ್ದಳು. ಇಂದು ಬೆಳಗ್ಗೆ ಎಷ್ಟು ಬಾರಿ ಬಾಗಿಲನ್ನು ತಟ್ಟಿದರೂ ರೂಮಿನಿಂದ ಹೊರಗೆ ಬರಲಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ಕೊನೆಗೆ ಬಾಗಿಲನ್ನು ಮುರಿದು ರೂಮಿಗೆ ಹೋಗಿ ನೋಡಿದಾಗ ಜ್ಯೋತಿ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾಳೆ ಎಂದು ಕುಟುಂಬದರು ತಿಳಿಸಿದರು.

    “ನೀವೆಲ್ಲರೂ ನನ್ನ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ. ನಾನು ವೈದ್ಯಕೀಯ ಕೋರ್ಸಿಗೆ ಆಯ್ಕೆಯಾಗಲು ವಿಫಲವಾದರೆ, ನನಗಾಗಿ ನೀವು ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಆದ್ದರಿಂದ ನಾನು ಪದೇ ಪದೇ ನಿಮ್ಮ ನಿರೀಕ್ಷೆಗಳನ್ನು ನಿರಾಶೆಗೊಳಿಸುತ್ತೇನೆ. ನನ್ನನ್ನು ಕ್ಷಮಿಸಿ, ನಾನು ದಣಿದಿದ್ದೇನೆ” ಎಂದು ಜ್ಯೋತಿ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಅಲ್ಲದೇ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಜೊತೆಗೆ ನಿಮ್ಮ ಪ್ರೀತಿಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.

    ನನ್ನ ಮಗಳು ಚೆನ್ನಾಗಿ ಓದುತ್ತಿದ್ದಳು. ಈ ಬಾರಿ ಪರೀಕ್ಷೆ ಬರೆದಿದ್ದರೆ ಅಧಿಕ ಅಂಕವನ್ನು ಪಡೆಯುತ್ತಿದ್ದಳು. ಆದರೆ ಜ್ಯೋತಿ ಖಿನ್ನತೆಗೆ ಒಳಗಾಗಿದ್ದು, ರಾತ್ರಿ ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ದಳು. ಆದರೆ ಬೆಳಗ್ಗೆ ಅವಳ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ತಿಳಿಯಿತು ಎಂದು ಜ್ಯೋತಿ ತಂದೆ ಹೇಳಿದ್ದಾರೆ.

    ಕಳೆದ ವಾರ ಅರಿಯಲೂರು ಜಿಲ್ಲೆಯ ವಿಘ್ನೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿಘ್ನೇಶ್ ಈಗಾಗಲೇ ಎರಡು ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಉತ್ತೀರ್ಣವಾದರೂ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಭಯದಿಂದ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಅದೇ ರೀತಿ ಕೊಯಮತ್ತೂರಿನಲ್ಲಿ 19 ವರ್ಷದ ಯುವತಿ ಕೂಡ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು.

  • ಪತಿಗೆ ತನಗಿಂತ ಪೋಷಕರ ಮೇಲೆ ಹೆಚ್ಚು ಪ್ರೀತಿ – ಮಗುವನ್ನ ಕೊಂದು ತಾಯಿ ಆತ್ಮಹತ್ಯೆ

    ಪತಿಗೆ ತನಗಿಂತ ಪೋಷಕರ ಮೇಲೆ ಹೆಚ್ಚು ಪ್ರೀತಿ – ಮಗುವನ್ನ ಕೊಂದು ತಾಯಿ ಆತ್ಮಹತ್ಯೆ

    – ಪ್ರೀತಿಸಿ ಮದ್ವೆಯಾಗಿದ್ದ ಗಂಡನ ಮೇಲೆ ಮುನಿಸು

    ಕೋಲಾರ: ಪತಿಗೆ ತಂದೆ ತಾಯಿಯ ಮೇಲೆಯೇ ಪ್ರೀತಿ, ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಮಹಿಳೆಯೊಬ್ಬಳು ತನ್ನ ಮಗುವನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಾಲಮುರಗನ್ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಸಾಯಿ ಸಿಂಧು (27) ತನ್ನ 4 ವರ್ಷದ ಮಗಳು ಕಿರಣ್ಯ ಶ್ರೀಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮೃತ ಸಾಯಿ ಸಿಂಧು ಕಳೆದ 6 ವರ್ಷದ ಹಿಂದೆ ಬಾಲಮುರಗನ್ ದೇವಸ್ಥಾನದ ಅರ್ಚಕ ಸರವಣನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸಾಯಿ ಸಿಂಧು ಬಿ.ಇ ಪದವೀಧರೆಯಾಗಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಮುಂಗೋಪಿಯಾಗಿರುವ ಸಿಂಧು ತನ್ನ ಪತಿಯೊಂದಿಗೆ ಅತ್ತೆ ಮಾವನ ವಿಚಾರದಲ್ಲಿ, ಗಂಡ ನನ್ನ ಮತ್ತು ಮಗಳನ್ನ ನಿರ್ಲಕ್ಷ್ಯ ಮಾಡುತ್ತಿದ್ದಾನೆಂದುಕೊಂಡು ಪದೇ ಪದೇ ಜಗಳವಾಡುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

    ಸರವಣ ತಂದೆ ತಾಯಿ ಕೂಡ ಇಬ್ಬರ ಪ್ರೀತಿಯನ್ನ ಒಪ್ಪಿಕೊಂಡು ಜೊತೆಯಾಗಿದ್ದರು. ಆದರೆ ಇತ್ತೀಚೆಗೆ ಸರವಣ ತಾಯಿಗೆ ಕಿಡ್ನಿ ವೈಫಲ್ಯವಾಗಿದ್ದು, ವೈದ್ಯರು 20 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ತಿಳಿಸಿದ್ದರು. ಆದ್ದರಿಂದ ಸರವಣ ತನ್ನ ಅಮರಾವತಿ ಬಡವಾಣೆಯಲ್ಲಿರುವ ನಿವೇಶನವನ್ನ 40 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ನಂತರ ತನ್ನ ಅನಾರೋಗ್ಯಪೀಡಿತ ತಂದೆ ತಾಯಿಯನ್ನ ಚಿಕಿತ್ಸೆಗಾಗಿ ತಮಿಳುನಾಡಿನ ಪಳನಿಗೆ ಬಿಟ್ಟು ಬರಲು ಹೋಗಿದ್ದನು.

    ಇದಕ್ಕೂ ಮೊದಲು ಸಾಯಿ ಸಿಂಧು ಪತಿಯೊಂದಿಗೆ ತವರು ಮನೆಗೆ ಹೋಗಿದ್ದು, ತನ್ನ ಬಳಿ ಇರುವ ಆಭರಣಗಳನ್ನ ಕೊಟ್ಟು ಬಂದಿದ್ದಳು. ಜೊತೆಗೆ ಫೇಸ್‍ಬುಕ್ ಅಕೌಂಟ್ ಕೂಡ ಬ್ಲಾಕ್ ಮಾಡಿದ್ದಾಳೆ. ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳನ್ನ ಕೊಲೆ ಮಾಡಿದ ಬಳಿಕ ಹಾಲ್‍ನಲ್ಲಿ ನೇಣಿಗೆ ಶರಣಾಗಿದ್ದಾಳೆ.

    ಮಾಹಿತಿ ತಿಳಿದು ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

  • ಬ್ಯಾನ್ ಆಗಿರುವ ಪಬ್‍ಜಿ ಆಡಬೇಡೆಂದ ತಂದೆ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಬ್ಯಾನ್ ಆಗಿರುವ ಪಬ್‍ಜಿ ಆಡಬೇಡೆಂದ ತಂದೆ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    – ತಂದೆ ಫೋನ್ ಕಸಿದುಕೊಂಡಿದ್ಕೆ ಖಿನ್ನತೆಗೊಳಗಾಗಿದ್ದ ಯುವಕ

    ಚೆನ್ನೈ: ಚೀನಾ ಆ್ಯಪ್ ಹಿನ್ನೆಲೆ ಭದ್ರತೆಯ ದೃಷ್ಟಿಯಿಂದ ಭಾರತ ಪಬ್ ಜಿ ಗೇಮ್‍ನ್ನು ದೇಶದಲ್ಲಿ ನಿಷೇಧಿಸಲಾಗಿದೆ. ನಿಷೇಧಿತ ಗೇಮ್ ಆಡಬೇಡ ಎಂದು ತಂದೆ ಹೇಳಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ವನಿಯಂಬಾಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, 12ನೇ ತರಗತಿ ವಿದ್ಯಾರ್ಥಿ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಬಳಿಕ ವಿದ್ಯಾರ್ಥಿ ಮನೆಯಲ್ಲೇ ಇರುತ್ತಿದ್ದರಿಂದ ಪಬ್ ಜಿ ಗೇಮ್‍ನಲ್ಲಿಯೇ ಆಡುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ. ಹೀಗಾಗಿ ಪಬ್ ಜಿ ಹುಚ್ಚು ಹಿಡಿದಿತ್ತು. ಇದನ್ನೂ ಓದಿ: ಪಬ್ ಜಿ ಹುಚ್ಚು- ಅಜ್ಜನ 2.34 ಲಕ್ಷ ಪೆನ್ಶನ್ ಹಣ ಲಪಟಾಯಿಸಿದ ಮೊಮ್ಮಗ

    ವಿದ್ಯಾರ್ಥಿಯ ತಂದೆ ಪೆರುಮಲ್ ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಚೀನಾ ಮೂಲದ ಆ್ಯಪ್ ಎನ್ನುವ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ ಇತ್ತೀಚೆಗೆ ಭಾರತದಲ್ಲಿ ಪಬ್ ಜಿಯನ್ನು ನಿಷೇಧಿಸಲಾಗಿದೆ. ಹೀಗಾಗಿ ವಿದ್ಯಾರ್ಥಿ ತಂದೆ ಪಬ್ ಜಿ ಆಡಬೇಡ ಎಂದು ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೇ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪಬ್ ಜಿ ಆಡುತ್ತಲೇ ಹೆಚ್ಚು ಕಾಲ ಕಳೆಯುತ್ತಿದ್ದ ಮಗನಿಗೆ ಪೆರುಮಲ್ ಬುದ್ಧಿ ಮಾತು ಹೇಳಿ, ಗೇಮ್ ಆಡಬೇಡ ಎಂದಿದ್ದರು. ಅಲ್ಲದೆ ಅವನ ಕೈಯ್ಯಲ್ಲಿದ್ದ ಫೋನ್‍ನ್ನು ಸಹ ಕಸಿದುಕೊಂಡು, ಬೈದಿದ್ದರು. ಇದರಿಂದ ಖಿನ್ನತೆಗೊಳಗಾದ ವಿದ್ಯಾರ್ಥಿ ಶ್ರೀನಿವಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದ್ದು, ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಸದ್ಯ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
    – ಪೋಷಕರಂತೆ ಉಡುಗೆ ಧರಿಸಿದ್ದ ಅಕ್ಕ-ತಂಗಿ

    ಚೆನ್ನೈ: ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಸಹೋದರಿಯರಿಬ್ಬರು ತಮ್ಮ ತಂದೆ-ತಾಯಿ ಮದುವೆ ವಿಡಿಯೋವನ್ನು ಮರುಸೃಷ್ಟಿ ಮಾಡುವ ಮೂಲಕ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಗೋಪಿಕಾ ಮತ್ತು ದೇವಿಕಾ ಸಹೋದರಿಯರು ತಮ್ಮ ಪೋಷಕರ 24ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಲು ಬಯಸಿದ್ದರು. ಆದರೆ ಕೊರೊನಾದಿಂದ ಅದು ಸಾಧ್ಯವಾಗಿಲ್ಲ. ಆಗ ತಮ್ಮ ತಂದೆ-ತಾಯಿ ಮದುವೆಯ ದಿನದ ವೀಡಿಯೊವನ್ನು ಮರುಸೃಷ್ಟಿಸಲು ನಿರ್ಧರಿಸಿದ್ದರು. ಅದರಂತೆಯೇ ಗೋಪಿಕಾ ಮತ್ತು ದೇವಿಕಾ ಈ ವಿಡಿಯೋವನ್ನು ಸೀಕ್ರೆಟ್ ಆಗಿ ರೆಕಾರ್ಡ್ ಮಾಡಿದ್ದು, ಆಗಸ್ಟ್ 28 ರಂದು ವಿವಾಹ ವಾರ್ಷಿಕೋತ್ಸವದಂದು ಅದನ್ನು ಪೋಷಕರಿಗೆ ತೋರಿಸಿದ್ದಾರೆ.

    ದೇವಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋಪಿಕಾ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಷಕರಾದ ಗೋಪಾಲಕೃಷ್ಣನ್ ನಾಯರ್ ಮತ್ತು ರಾಧಿಕಾ ಅವರ ವಿವಾಹ ಸಂದರ್ಭದಲ್ಲಿ ಹೇಗಿದ್ದರು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಧು-ವರ ನಗುವುದು, ನಾಚಿಕೆ ಪಡುವುದು, ಪರಸ್ಪರ ಸಿಹಿ ತಿನಿಸುವುದು. ಅಲ್ಲದೇ ವರ (ತಂದೆ) ಕನ್ನಡಿಯಲ್ಲಿ ಮುಂದೆ ನಿಂತುಕೊಂಡು ನೋಡಿಕೊಳ್ಳುವುದು, ವಧು (ತಾಯಿ) ತನ್ನ ಸೀರೆಯನ್ನು ಸರಿ ಮಾಡಿಕೊಳ್ಳುವುದು. ಹೀಗೆ ಎಲ್ಲವನ್ನು ಸಹೋದರಿಯರು ವಿಡಿಯೋದಲ್ಲಿ ಮರುಸೃಷ್ಟಿ ಮಾಡಿರುವುದನ್ನು ಕಾಣಬಹುದಾಗಿದೆ.

    ಗೋಪಿಕಾ ಮತ್ತು ದೇವಿಕಾ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ತಂದೆ ಎಲೆಕ್ಟ್ರಿಕಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಮದುವೆಯಲ್ಲಿ ತಮ್ಮ ಪೋಷಕರು ಧರಿಸಿದ್ದ ರೇಷ್ಮೆ ಸೀರೆ ಮತ್ತು ಬಿಳಿ ಪಂಜೆ, ಶರ್ಟ್ ಅನ್ನು ಹಾಗೆಯೇ ಧರಿಸಿದ್ದಾರೆ. ಮೇಕಪ್ ಸಹ ಹಾಗೇ ಮಾಡಿಕೊಂಡಿದ್ದಾರೆ. ವಿಡಿಯೋ ಕೇವಲ 1.5 ನಿಮಿಷವಿದ್ದು, ಸಹೋದರಿಯ ಅದ್ಭುತವಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಹೋದರಿಯರು ಹಂಚಿಕೊಂಡಿದ್ದಾರೆ.

  • ಮರ್ಯಾದಾ ಹತ್ಯೆ ಶಂಕೆ – ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

    ಮರ್ಯಾದಾ ಹತ್ಯೆ ಶಂಕೆ – ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

    – ಜಾತಿಯಿಂದ ನನ್ನ ಜೀವನವನ್ನ ಹಾಳು ಮಾಡ್ತಿದ್ದಾರೆ
    – ನನ್ನ ಕಾಪಾಡಿ, ಕರ್ಕೊಂಡು ಹೋಗ್ತೀರಾ ಎಂಬ ನಂಬಿಕೆ ಇದೆ

    ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದ್ದು, ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ.

    ಮೀನಾಕ್ಷಿ (22) ಮೃತ ಯುವತಿ. ಈ ಘಟನೆ ಮೈಸೂರು ತಾಲೂಕಿನ ದೊಡ್ಡ ಕಾನ್ಯ ಗ್ರಾಮದಲ್ಲಿ ನಡೆದಿದೆ. ಮೃತ ಮೀನಾಕ್ಷಿ ಮೈಸೂರಿನ ಕೃಷಿ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಳು. ಆದರೆ ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಪೋಷಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಮನೆಯವರು ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಯುವತಿ ಬದುಕಿದ್ದಾಗ ದೂರು ನೀಡಿದ್ದಳು. ಮೈಸೂರು ಎಸ್‍ಪಿ ಹಾಗೂ ಒಡನಾಡಿ ಸಂಸ್ಥೆಗೆ ಇ-ಮೇಲ್ ಮೂಲಕ ದೂರು ನೀಡಿದ್ದಳು. ಆದರೆ ಬುಧವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದೆ. ಮೀನಾಕ್ಷಿ ಜೂನ್ 16 ಹಾಗೂ ಆಗಸ್ಟ್ 6 ರಂದು ಎರಡು ಬಾರಿ ಎಸ್‍ಪಿಗೆ ದೂರು ನೀಡಿದ್ದಳು.

    ದೂರಿನಲ್ಲಿ ಏನಿದೆ?
    ನಾನು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಅಂದಿನಿಂದಲೂ ಪ್ರತಿದಿನ ನನ್ನನ್ನು ಬೈದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇವರಿಗೆ ಜಾತಿ ಮುಖ್ಯವಾಗಿದ್ದು, ನನ್ನ ಜೀವನವನ್ನು ಹಾಳು ಮಾಡುತ್ತಿದ್ದಾರೆ. ನಾನು ಇವರಿಗೆ ತಿಳಿಸದೆ ಮದುವೆ ಆಗಬಹುದಿತ್ತು. ಆದರೆ ಪೋಷಕರ ಒಪ್ಪಿಗೆ ಪಡೆದುಕೊಂಡು ವಿವಾಹವಾಗಬೇಕು ಅಂದುಕೊಂಡಿದ್ದೆ. ಆದರೆ ನನ್ನ ಸಹೋದರರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಪೋಷಕರು ಇದನ್ನು ನೋಡಿಕೊಂಡು ಸುಮ್ಮನಿದ್ದರು ಎಂದು ದೂರಿನಲ್ಲಿ ಮೀನಾಕ್ಷಿ ಹೇಳಿಕೊಂಡಿದ್ದಾಳೆ.

    ಅಲ್ಲದೇ ನನ್ನ ಸಹೋದರರು ಹೊಡೆದು ಕೊಲೆ ಮಾಡುತ್ತಾರೆ ಎಂಬ ಭಯವಾಗುತ್ತಿದೆ. ನಾನು ಕೆಎಎಸ್, ಎಫ್‍ಡಿಎ ಪರೀಕ್ಷೆಗಳಿಗೆ ಓದಿಕೊಳ್ಳುತ್ತಿದ್ದೆ. ಆದರೆ ಮನಸಿಗೆ ನೆಮ್ಮದಿ ಇಲ್ಲದಿದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ. ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ನನಗೆ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಕಾಪಾಡಿ, ಇಲ್ಲಿಂದ ಕರೆದುಕೊಂಡು ಹೋಗುತ್ತೀರಿ ಎಂಬ ನಂಬಿಕೆಯಲ್ಲಿ ನಾನಿದ್ದೇನೆ. ದಯವಿಟ್ಟು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಬೇಡಿ ಎಂದು ಯುವತಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾಳೆ.

    ಮೀನಾಕ್ಷಿ ಬೇರೆ ಜಾತಿಯ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದರಿಂದ ಪೋಷಕರು ಮೀನಾಕ್ಷಿಯನ್ನ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ರಾಗಿಣಿ ಭೇಟಿಗೆ ಮಧ್ಯರಾತ್ರಿ ದೌಡಾಯಿಸಿದ ಪೋಷಕರು – ಗೇಟ್‍ನಲ್ಲೇ ಕಾದು ವಾಪಸ್

    ರಾಗಿಣಿ ಭೇಟಿಗೆ ಮಧ್ಯರಾತ್ರಿ ದೌಡಾಯಿಸಿದ ಪೋಷಕರು – ಗೇಟ್‍ನಲ್ಲೇ ಕಾದು ವಾಪಸ್

    ಬೆಂಗಳೂರು: ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿದ್ದಾರೆ. ಹೀಗಾಗಿ ಮಧ್ಯರಾತ್ರಿ ಮಗಳನ್ನು ನೋಡಲು ನಟಿ ರಾಗಿಣಿ ಪೋಷಕರು ಹೋಗಿದ್ದರು. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ರಾಗಿಣಿಯ ಮೊದಲ ರಾತ್ರಿ ವಾಸ- ಸೊಳ್ಳೆ ಕಾಟ, ನಿದ್ದೆ ಇಲ್ಲ

    ಮಧ್ಯರಾತ್ರಿಯಲ್ಲಿ ರಾಗಿಣಿ ಭೇಟಿ ಮಾಡಲು ಪೋಷಕರು ದೌಡಾಯಿಸಿದ್ದು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ಗೇಟ್‍ನಲ್ಲಿ ಕಾದು ನಿಂತಿದ್ದರು. ನಟಿ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಮತ್ತು ತಂದೆ ರಾಕೇಶ್ ದ್ವಿವೇದಿ ಸಾಂತ್ವನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೇ ಮಗಳು ರಾಗಿಣಿಗಾಗಿ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರು. ಇದನ್ನೂ ಓದಿ: ಗಾಂಜಾ ತುಂಬಿದ್ದ 8 ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

    ಮಗಳಿಗೆ ಊಟ ಕೊಡಲು ಪೊಲೀಸರು ಅವಕಾಶ ನೀಡಲಿಲ್ಲ. ಕೊನೆಗೆ ಊಟ, ಬಟ್ಟೆ ಎಲ್ಲವನ್ನು ವಾಪಸ್ ತೆಗೆದುಕೊಂಡು ಪೋಷಕರು ಮನೆಗೆ ಹೋಗಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲೇ ನಟಿ ರಾಗಿಣಿ ಇರಲಿದ್ದಾರೆ. ಹೀಗಾಗಿ ಇಂದು ಕೂಡ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

    ವಿಚಾರಣೆ ಮುಗಿದ ನಂತರ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬಿಗಿ ಭದ್ರತೆಯೊಂದಿಗೆ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಯನ್ನು ಕರೆದುಕೊಂಡು ಹೋಗಿದ್ದಾರೆ. ರಾಗಿಣಿ ಜೊತೆ ಸಾಂತ್ವನ ಕೇಂದ್ರದಲ್ಲಿಯೇ ಇಬ್ಬರು ಮಹಿಳಾ ಪೊಲೀಸರು ಉಳಿದುಕೊಂಡಿದ್ದಾರೆ.