Tag: parents

  • ಕಾಲುವೆ ಬಳಿ ಆಟವಾಡಲು ಹೋಗಿ 3 ಮಕ್ಕಳು ಜಲ ಸಮಾಧಿ

    ಕಾಲುವೆ ಬಳಿ ಆಟವಾಡಲು ಹೋಗಿ 3 ಮಕ್ಕಳು ಜಲ ಸಮಾಧಿ

    ಕೋಲಾರ: ಕಾಲವೆ ಬಳಿ ಆಟವಾಡಲು ಹೋಗಿ 1 ಹೆಣ್ಣು ಮಗು, ಇಬ್ಬರು ಗಂಡು ಮಕ್ಕಳು ಜಲ ಸಮಾಧಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದ್ದು, ಕಾಲುವೆ ಬಳಿ ಆಟವಾಡುವ ವೇಳೆ ನೀರಿನಲ್ಲಿ ಮುಳುಗಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಬಾಲಕಿ ಮೋಹಿಕ್(8), ಸಾದಿಕ್(12), ಫಯಾಜ್ (07) ಮೃತ ದುರ್ದೈವಿ ಮಕ್ಕಳು. ನೀರಿನ ಪ್ರಮಾಣ ತಿಳಿಯದೆ ಮಕ್ಕಳು ಆಟವಾಡಲು ತೆರಳಿದ್ದು, ಈ ವೇಳೆ ನಿರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ರೈಲ್ವೆ ಅಂಡರ್ ಪಾಸ್ ಬಳಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಇದೇ ಜಾಗಕ್ಕೆ ಮಕ್ಕಳು ಆಟವಾಡಲು ತೆರಳಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೋಷಕರು ಸಹ ಮಕ್ಕಳು ಆಟವಾಡಲು ತೆರಳಿದ್ದಾರೆ ಎಂದು ನಿರ್ಲಕ್ಷ್ಯ ವಹಿಸಿದ್ದು, ಮೂರು ಮಕ್ಕಳು ನೀರು ಪಾಲಾಗಿವೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ – ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ

    ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ – ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ

    ಬೆಂಗಳೂರು: ಪಬ್ಲಿಕ್ ಟಿವಿಯ ನಿರಂತರ ವರದಿಯ ಬೆನ್ನಲ್ಲೇ ವಿವಾದಾತ್ಮಕ ಯೋಜನೆಯನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದ್ದು, ವಿದ್ಯಾಗಮ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.

    ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲಾವಾರು ಅಂಕಿ-ಅಂಶ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅಂಕಿ-ಅಂಶಗಳ ವಿಶ್ಲೇಷಣೆ ಆಗೋವರೆಗೂ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

    ವಿದ್ಯಾಗಮ ಸ್ಥಗಿತಕ್ಕೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಗೆ ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು. ಜನರಿಂದ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ನಂತರ ಸಿಎಂ ವಿದ್ಯಾಗಮ ತಾತ್ಕಾಲಿಕ ಸ್ಥಗಿತಕ್ಕೆ ಸೂಚಿಸಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕ ಸ್ಥಗಿತಕ್ಕೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದೆ. ಹೀಗಾಗಿ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

    ಆರೋಪ:
    ನೂರಾರು ಶಿಕ್ಷಕರು, 30ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಗಮದಿಂದ ಕೊರೊನಾ ಸೋಂಕು ತಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ ವಿದ್ಯಾಗಮ ಯೋಜನೆಯಲ್ಲಿದ್ದ 160ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿದ್ಯಾಗಮದಿಂದ ಸೋಂಕು ಬಂದಿದ್ದು, ಅನೇಕ ಸಂದರ್ಭದಲ್ಲಿ ಸಾವಿಗೀಡಾಗಿರುವ ಶಿಕ್ಷಕರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ವಿದ್ಯಾಗಮ ಯೋಜನೆಯ ನಂತರ ಶಿಕ್ಷಕರು, ಪೋಷಕರು, ಮಕ್ಕಳಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ ಎಂದು ವಿದ್ಯಾಗಮ ಯೋಜನೆ ರದ್ದಿಗೆ ಶಿಕ್ಷಕರು ಹಾಗೂ ಪೋಷಕರಿಂದ ಒತ್ತಾಯಿಸುತ್ತಿದ್ದರು.

    ಏನಿದು ವಿದ್ಯಾಗಮ ಯೋಜನೆ ಏಕೆ?
    ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರ ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಯೋಜನೆ ಜಾರಿಗೆ ತಂದಿತ್ತು.

    ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಬೇಕು. ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವಂತಿರಲಿಲ್ಲ.

    ವಿದ್ಯಾರ್ಥಿಗಳ ಬಳಿ ಇರುವ ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಬೇಕಿತ್ತು. ಮೊದಲ ಗುಂಪಿನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳ ಸೇರ್ಪಡೆ, ಇವರ ಬಳಿ ಶಿಕ್ಷಕರೇ ಹೋಗಿ ಪಾಠ ಮಾಡಬೇಕಿತ್ತು. ಬೇಸಿಕ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಇವರಿಗೆ ದೂರವಾಣಿ ಮೂಲಕ ಶಿಕ್ಷಕರು ಪಾಠ ಮಾಡಬಹುದಿತ್ತು. ಮೂರನೇ ಗುಂಪಿನಲ್ಲಿ ಸ್ಮಾರ್ಟ್ ಪೋನ್ ಹೊಂದಿರುವ ವಿದ್ಯಾರ್ಥಿಗಳು, ಇವರಿಗೆ ಅನ್‍ಲೈನ್ ಕ್ಲಾಸ್ ಮಾಡಬಹುದಿತ್ತು.

    ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದ್ದವರು ಮನೆಗೆ ಬರುವ ಶಿಕ್ಷಕರು ಬಗೆಹರಿಸಬಹುದಿತ್ತು

    ವಿದ್ಯಾಗಮ ಜಾರಿಗೆ ಮೊದಲು ಸರ್ಕಾರ ಏನು ಮಾಡಬೇಕಿತ್ತು?
    * ಆಯಾ ಗ್ರಾಮಗಳಲ್ಲಿ ಸೂಕ್ತವಾದ ವಿಶಾಲ ಸ್ಥಳಗಳನ್ನು ಗುರುತಿಸಬೇಕಿತ್ತು
    * ಶಾಲೆಗಳಲ್ಲಿ ಪಾಠ ಮಾಡಬಾರದು ಅಂತ ನಿಯಮವಿದ್ದರೂ ಶಾಲೆಯ ಹೊರಗೆ ಕೂರಿಸಿ ಕೆಲವೆಡೆ ಪಾಠ
    * ಎಲ್ಲ ಗ್ರಾಮಗಳಲ್ಲೂ ಖಾಲಿ ಮನೆ, ಸಮುದಾಯ ಭವನ, ಸೂಕ್ತ ಸ್ಥಳ ಇದೆಯಾ ಎಂಬ ಸರ್ವೇ ಮಾಡಿಸಬೇಕಿತ್ತು
    * ಎಸ್ ಡಿಎಂಸಿ ಅಧ್ಯಕ್ಷರು, ಪೋಷಕರ ನೇತೃತ್ವದಲ್ಲಿ ಸರ್ವೇ ನಡೆಸಿ ಬಳಿಕ ಸಲಹೆಯ ಆಧಾರದ ಮೇಲೆ ವಿದ್ಯಾಗಮ ಜಾರಿ ಮಾಡಬೇಕಿತ್ತು
    * ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಉಚಿತ ಕೊರೊನಾ ತಪಾಸಣೆ ಸೌಲಭ್ಯ ನೀಡಬೇಕಿತ್ತು


    * ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ಸಾಮಾಜಿಕ ಅಂತರದಡಿ ಸಾರಿಗೆ ವ್ಯವಸ್ಥೆ ಮಾಡಬೇಕಿತ್ತು

    * ಸೇತುಬಂಧ ಕಾರ್ಯಕ್ರಮ ವೀಕ್ಷಣೆಗೆ ಹಲವು ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ನೀಡಬೇಕಿತ್ತು
    * ಆನ್‍ಲೈನ್ ವಂಚಿತ ಮಕ್ಕಳು ಎನ್ನುವ ಸರ್ಕಾರಕ್ಕೆ ಉಚಿತ ಲ್ಯಾಪ್‍ಟಾಪ್ ಮಾದರಿಯಲ್ಲಿ ಉಚಿತ ಸ್ಮಾರ್ಟ್ ಫೋನ್ ಕೊಡಿಸಬೇಕಿತ್ತು
    * ಯಾವುದೇ ಸಿದ್ಧತೆ, ಮುಂದಾಲೋಚನೆ ಇಲ್ಲದೆ ವಿದ್ಯಾಗಮ ಆರಂಭಿಸಬಾರದಿತ್ತು
    * ಜೀವ ಮೊದಲು, ಶಿಕ್ಷಣ ನಂತರ ಎಂಬ ಪರಿಜ್ಞಾನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಬೇಕಿತ್ತು

  • ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು

    ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು

    ಮಂಡ್ಯ: ತಾಯಿ ಮಗುವಿಗೆ ಊಟ ಮಾಡಿಸಿ ಕೈ ತೊಳೆಯಲು ಹೋದ ವೇಳೆ ಮೂರು ವರ್ಷದ ಕಂದಮ್ಮ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿ. ರಾಜಕುಮಾರ್ ಬಡಾವಣೆಯಲ್ಲಿ ಸತೀಶ್ ಅವರದ್ದು ಮಹಡಿಯ ಮನೆಯಾಗಿದೆ. ಎಂದಿನಂತೆ ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸಿದ್ದಾರೆ. ನಂತರ ಮಗುವನ್ನು ಬಿಟ್ಟು ಒಳಗೆ ಕೈ ತೊಳೆಯಲು ಹೋಗಿದ್ದಾರೆ.

    ಈ ವೇಳೆ ಮಹಡಿಯ ಮೇಲಿನ ಸಂದಿಯಲ್ಲಿ ಮಗು ಇಣುಕಿ ನೋಡಲು ಹೋಗಿದೆ. ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.

    ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 19ರ ಯುವತಿ ಜೊತೆ 35 ವರ್ಷದ ಶಾಸಕ ಮದುವೆ – ವಿವಾದ ಎಬ್ಬಿಸಿದ ವಿವಾಹ

    19ರ ಯುವತಿ ಜೊತೆ 35 ವರ್ಷದ ಶಾಸಕ ಮದುವೆ – ವಿವಾದ ಎಬ್ಬಿಸಿದ ವಿವಾಹ

    – ಮಂಟಪಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆ ಬೆದರಿಕೆ
    – ನನಗೆ ಜಾತಿ ಸಮಸ್ಯೆ ಇಲ್ಲವೆಂದ ಹುಡುಗಿಯ ತಂದೆ

    ಚೆನ್ನೈ: ತಮಿಳುನಾಡಿದ ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ಶಾಸಕ ಪ್ರಭು 19 ವರ್ಷದ ಸೌಂದರ್ಯ ಎಂಬಾಕೆ ಜೊತೆ ಮದುವೆಯಾಗಿದ್ದಾನೆ. ಇದೀಗ ಈ ವಿವಾಹ ಸುದ್ದಿಯೂ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ.

    ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ವಧುವಿನ ತಂದೆ ಎಸ್.ಸ್ವಾಮಿನಾಥನ್ ಮದುವೆ ದಿನವೇ ವಧು-ವರರ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಈ ವಿವಾಹ ಭಾರೀ ವಿವಾದ ಸೃಷ್ಟಿಸಿದೆ. ಇವರ ಮದುವೆ ಅಕ್ಟೋಬರ್ 5 ಅಂದರೆ ಸೋಮವಾರ ನಡೆದಿದೆ.

    ಏನಿದು ಪ್ರಕರಣ?
    ಪ್ರಭು ಮತ್ತು ಸೌಂದರ್ಯ ಇಬ್ಬರೂ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ತ್ಯಾಗದುರುಗಂ ನಿವಾಸಿಗಳು. ವಧು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪ್ರಭು ಬಿ.ಟೆಕ್ ಪದವೀಧರ. ಸೋಮವಾರ ಬೆಳಗ್ಗೆ ಪ್ರಭು ಮನೆಯಲ್ಲಿ ಮದುವೆ ನಡೆಯುತ್ತಿತ್ತು. ಮದುವೆಗೆ ಸೌಂದರ್ಯ ತಂದೆ ಸ್ವಾಮಿನಾಥನ್ ಆಗಮಿಸಿದ್ದಾರೆ. ನಂತರ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಮ್ಮ ಮಗಳನ್ನು ಪ್ರಭು ಅಪಹರಿಸಿ ಮದುವೆಗೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ಕಲ್ಲಕುರಿಚಿ ಶಾಸಕ ಪ್ರಭು ನನ್ನ ಮಗಳನ್ನು ಮೋಸದಿಂದ ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ಸೌಂದರ್ಯಳನ್ನು ಅಪಹರಿಸಿದ್ದಾನೆ. ಪ್ರಭು ಕಳೆದ 15 ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಸ್ನೇಹ ಸಂಬಂಧ ಹೊಂದಿದ್ದನು. ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದನು. ಆಗ ನನ್ನ ಮಗಳು ಅಪ್ರಾಪ್ತೆಯಾಗಿದ್ದಳು. ನನಗೆ ಜಾತಿ ಸಮಸ್ಯೆಯಲ್ಲ. ಆದರೆ ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚರಿರುವುದೇ ಸಮಸ್ಯೆ ಎಂದು ಸೌಂದರ್ಯ ತಂದೆ ಮಾಧ್ಯಮದವರಿಗೆ ಹೇಳಿದ್ದಾರೆ.

    ಸೌಂದರ್ಯರ ತಂದೆ ಮಾಡಿದ ಆರೋಪದ ಬೆನ್ನಲ್ಲೇ ಪ್ರಭು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, “ನಾವಿಬ್ಬರು ವರ್ಷಗಳಿಂದ ಅಲ್ಲ, ಕೇವಲ ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದೇವೆ. ನಾನು ಅವಳನ್ನು ಅಪಹರಿಸಿ, ಬೆದರಿಕೆ ಹಾಕಿ ಮದುವೆಯಾಗುವಂತೆ ಒತ್ತಾಯಿಸಿದ್ದೇನೆ ಎಂಬ ಕೆಲವು ವದಂತಿಗಳಿವೆ. ಅದೆಲ್ಲವೂ ಸುಳ್ಳು, ಕಳೆದ ನಾಲ್ಕು ತಿಂಗಳಿನಿಂದ ನಾವಿಬ್ಬರು ಪ್ರೀತಿಸುತ್ತಿದ್ದೆವು. ನಮ್ಮ ಮದುವೆಗಾಗಿ ಆಕೆಯ ಪೋಷಕರ ಅನುಮತಿಯನ್ನು ಕೇಳಿದ್ದೆವು. ಆದರೆ ಅವರು ನಿರಾಕರಿಸಿದ್ದರು” ಎಂದು ತಿಳಿಸಿದ್ದಾರೆ.

    ನನ್ನ ಪೋಷಕರ ಅನುಮತಿಯೊಂದಿಗೆ ಪರಸ್ಪರ ಮದುವೆಯಾಗಲು ನಿರ್ಧರಿಸಿದೆವು. ನಾನು ಅವಳ ಅಥವಾ ಅವಳ ಕುಟುಂಬಕ್ಕೆ ಬೆದರಿಕೆ ಹಾಕಲಿಲ್ಲ. ಸೌಂದರ್ಯಳನ್ನು ಮದುವೆಯಾಗುವಂತೆ ಯಾವುದೇ ಆಮಿಷವೊಡ್ಡಲಿಲ್ಲ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು ಹೀಗಾಗಿ ಮದುವೆಯಾಗಿದ್ದೇವೆ ಎಂದು ಪ್ರಭು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಪ್ರಭು ಪಕ್ಕದಲ್ಲಿ ಸೌಂದರ್ಯ ಕುಳಿತಿರುವುದನ್ನು ಕಾಣಹುದಾಗಿದೆ. ಆದರೆ ಆಕೆ ಏನು ಮಾತನಾಡುವುದಿಲ್ಲ.

    ಸೌಂದರ್ಯ ತಂದೆ ಸ್ವಾಮಿನಾಥನ್ ವಿವಾಹ ಸ್ಥಳಕ್ಕೆ ಬಂದಾಗ ಸುತ್ತಮುತ್ತಲಿನವರು ಆತನ ಬೆದರಿಕೆಯನ್ನು ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಸ್ವಾಮಿನಾಥನ್ ಮೇಲೆ ಎಫ್‍ಐಆರ್ ದಾಖಲಾಗಿದೆ.

  • ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    – ಜಮೀನಿನಲ್ಲಿ ಮೃತದೇಹದ ಭಾಗಗಳು ಪತ್ತೆ

    ಲಕ್ನೋ: ಹತ್ರಾಸ್ ಗ್ರಾಮದ ಸಂತ್ರಸ್ತೆ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ನಾಪತ್ತೆಯಾಗಿದ್ದ ಅಪ್ರಾಪ್ತೆಯ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣ ಸಿಬಿಐಗೆ ವರ್ಗಾವಣೆ

    ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಹಳ್ಳಿಯಲ್ಲಿ ಸೆಪ್ಟೆಂಬರ್ 26 ರಂದು 15 ವರ್ಷದ ಹುಡುಗಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಆಕೆಯ ಶವ ಜಮೀನೊಂದರಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಕುಟುಂಬದ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತೆಯ ಪೋಷಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಹೋಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಅಪ್ರಾಪ್ತೆಯ ಮೃತದೇಹದ ಭಾಗಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

    ನಮ್ಮ ಕುಟುಂಬದಲ್ಲಿ ಭೂ ವಿವಾದವಿದೆ. ನಮ್ಮ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಪ್ರಾಪ್ತೆಯ ತಂದೆ ಹೇಳಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಚೌಧಾರಿ ಹೇಳಿದ್ದಾರೆ.

    ಹತ್ರಾಸ್ ಪ್ರದೇಶದ ದಲಿತ ಯುವತಿ ಮೇಲಿನ ಗ್ಯಾಂಗ್‍ರೇಪ್ ಪ್ರಕರಣವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿಬಿಐಗೆ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತ ಪಡಿಸಿದೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಯಬೇಕೆಂದು ಆಗ್ರಹಿಸಿದ್ದವು. ಆದರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ ಎಂದು ವರದಿಯಾಗಿದೆ.

  • ಕೇಂದ್ರ ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕೆ ಶಾಲೆ ಪ್ರಾರಂಭ ಮಾಡಲ್ಲ: ಸುರೇಶ್ ಕುಮಾರ್

    ಕೇಂದ್ರ ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕೆ ಶಾಲೆ ಪ್ರಾರಂಭ ಮಾಡಲ್ಲ: ಸುರೇಶ್ ಕುಮಾರ್

    ಬೆಂಗಳೂರು: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ ಕೂಡ ಸದ್ಯಕ್ಕೆ ನಾವು ಶಾಲೆಯನ್ನು ಪ್ರಾರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶಾಲೆಯ ವಿಚಾರವಾಗಿ ಪೋಷಕರಿಗೆ ಇರುವ ಭಯ ಮತ್ತು ಆತಂಕವನ್ನು ನಿವಾರಣೆ ಮಾಡುವ ಜವಾಬ್ದಾರಿ ನನ್ನದು. ನಾನು ರಾಜ್ಯದ ಮಕ್ಕಳ ಪೋಷಕ ನನಗೂ ಆ ಜವಾಬ್ದಾರಿ ಇದೆ. ಪೋಷಕರ ಕಾಳಜಿ ಮತ್ತು ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈಗಾಗಲೇ ಚಂದನವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಗೆ ಪಾಠ ಮಾಡುತ್ತಿದ್ದೇವೆ. ಕೆಲ ಶಾಲೆಗಳು ಆನ್‍ಲೈನ್ ಕ್ಲಾಸ್ ಮಾಡುತ್ತಿವೆ. ನಾವು ಇನ್ನು ಉಳಿದ 1 ರಿಂದ 7ನೇ ತರಗತಿ ಮಕ್ಕಳಿಗಾಗಿ ಖಾಸಗಿ ವಾಹಿನಿಗಳಲ್ಲಿ ಪಾಠ ಶುರು ಮಾಡಲು ತೀರ್ಮಾನಿಸಿದ್ದೇವೆ. ಇದರ ಪ್ರಕ್ರಿಯೆ ನಡೆಯುತ್ತಿದೆ. ಅರ್ಧ ವರ್ಷ ಈಗಾಗಲೇ ಕಳೆದಿದೆ. ಶಾಲೆ ಪ್ರಾರಂಭ ಮಾಡಿದರೆ ಸಿಗುವ ಶೈಕ್ಷಣಿಕ ಅವಧಿಯಲ್ಲಿ ಪಠ್ಯ ಕಡಿತ, ಶನಿವಾರ ತರಗತಿ ಬಗ್ಗೆ ಚಿಂತನೆ ಮಾಡುತ್ತೇವೆ.

    ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವುದಿಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ನಾವು ಸದ್ಯಕ್ಕೆ ಶಾಲಾ-ಕಾಲೇಜು ಪ್ರಾರಂಭ ಮಾಡುವುದಿಲ್ಲ. ತಕ್ಷಣವೇ ಶಾಲೆ ಪ್ರಾರಂಭ ಮಾಡುವ ಧಾವಂತ ನಮಗೆ ಇಲ್ಲ. ಪೋಷಕರು, ತಜ್ಞರು, ಶಿಕ್ಷಕರು ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ. ಪೋಷಕರು ಆತಂಕವಾಗೋದು ಬೇಡ. ಯಾವುದೇ ಆತುರದಲ್ಲಿ ಶಾಲೆ ಪ್ರಾರಂಭ ಮಾಡುವುದಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.

  • ಟಿಕ್‍ಟಾಕ್‍ನಲ್ಲಿ ಮಿಂಚುತ್ತಿದ್ದ ಯುವತಿ ಸಾವು – ಅನುಮಾನ ಮೂಡಿಸಿದ ಕೊನೆ ವಿಡಿಯೋಗಳು

    ಟಿಕ್‍ಟಾಕ್‍ನಲ್ಲಿ ಮಿಂಚುತ್ತಿದ್ದ ಯುವತಿ ಸಾವು – ಅನುಮಾನ ಮೂಡಿಸಿದ ಕೊನೆ ವಿಡಿಯೋಗಳು

    – ನಾನು ಸಂಕಷ್ಟದಲ್ಲಿದ್ದೀನಿ
    – ಸಾಯುವ ಮುನ್ನ ಸ್ನೇಹಿತರಿಗೆ ರಕ್ತದ ಫೋಟೋ ಶೇರ್

    ಚಿಕ್ಕಮಗಳೂರು: ಫೇಸ್‍ಬುಕ್, ವಾಟ್ಸಪ್ ಮತ್ತು ಇನ್ಟಾಗ್ರಾಂ ಅಂತ ಸೋಶಿಯಲ್ ಮೀಡಿಯಾದಲ್ಲಿ ಸದಾ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡು ಸಕ್ರಿಯವಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸಿಂಧು (19) ಮೃತ ಯುವತಿ. ಕಲ್ಯಾಣ ನಗರ ನಿವಾಸಿ ಸಿಂಧು ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನೆಯಲ್ಲೇ ಇದ್ದಳು. ಸಿಂಧು ಮನೆಯಲ್ಲಿ ಸುಮ್ನೆ ಇರುತ್ತಿರಲಿಲ್ಲ. ಸದಾ ಲವಲವಿಕೆಯಿಂದ ಇರುತ್ತಿದ್ದಳು. ತನ್ನ ತುಂಟಾಟದ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಮಿಂಚುತ್ತಿದ್ದಳು. ಹಾಗಾಗಿ ಟಿಕ್‍ಟಾಕ್ ಸೇರಿದಂತೆ ಅನೇಕ ಆ್ಯಪ್‍ಗಳನ್ನ ಬಳಸಿಕೊಂಡು ವಿಡಿಯೋ ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

    ಸಿಂಧುವಿನ ವಿಡಿಯೋಗಳೇ ಆಕೆ ಸಾವಿನ ಹಿಂದೆ ಯಾರೋ ಇದ್ದಾರೆ ಅನ್ನೋ ಬಲವಾದ ಅನುಮಾನಗಳನ್ನ ಹುಟ್ಟಾಕಿವೆ. ತನಗಾಗಿರುವ ನೋವುಗಳ ವಿಡಿಯೋಗಳನ್ನೂ ಕೂಡ ಯುವತಿ ತನ್ನ ಸ್ನೇಹಿತರಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಯುವತಿಯ ಮೃತದೇಹವನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ತಂದಿದ್ದ ಆಕೆಯ ಪೋಷಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಮಗಳು ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ ಅಂತ ಮೃತ ಸಿಂಧು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಘಟನೆಗೂ ಮುನ್ನ ತನ್ನ ತಲೆಗೆ ಪೆಟ್ಟು ಬಿದ್ದಿದ್ದು, ನಾನು ಸಂಕಷ್ಟದಲ್ಲಿದ್ದೀನಿ ಎಂದು ಸ್ನೇಹಿತರಿಗೆ ತನ್ನ ತಲೆ ಹಾಗೂ ಕಿವಿಯಿಂದ ರಕ್ತ ಸೋರುತ್ತಿರುವ ಫೋಟೋಗಳನ್ನ ಶೇರ್ ಮಾಡಿದ್ದಾಳೆ. ಈ ಫೋಟೋಗಳೇ ಈಗ ತೀವ್ರ ಅನುಮಾನಕ್ಕೆ ಕಾರಣವಾಗಿವೆ. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿಯ ತಲೆಯಲ್ಲಿ ರಕ್ತ ಹೇಗೆ ಬಂತು ಎಂಬ ಅನುಮಾನ ಮೂಡಿದೆ. ಹೀಗಾಗಿ ಈ ಕುರಿತು ತನಿಖೆ ಮಾಡಲಾಗುತ್ತದೆ ಎಂದು ಎಸ್‍ಪಿ ಅಕ್ಷಯ್ ಹೇಳಿದ್ದಾರೆ.

    ಸದ್ಯಕ್ಕೆ ಕಾಫಿನಾಡ ನಗರ ಪೊಲೀಸರು ಇದು ಆತ್ಮಹತ್ಯೆ ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಯುವತಿ ತಲೆಗೆ ಆಗಿರುವ ಗಾಯ ಹೇಗಾಯಿತು ಅನ್ನೋದು ನಿಗೂಢವಾಗಿದೆ.

  • ದೆವ್ವ ಬಿಡಿಸೋ ನೆಪದಲ್ಲಿ 2 ವರ್ಷದ ಕಂದಮ್ಮನನ್ನೇ ಕೊಲೆಗೈದ!

    ದೆವ್ವ ಬಿಡಿಸೋ ನೆಪದಲ್ಲಿ 2 ವರ್ಷದ ಕಂದಮ್ಮನನ್ನೇ ಕೊಲೆಗೈದ!

    ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಜ್ಕಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಮಗುವನ್ನು ಪೂರ್ಣಿಕಾ ಎಂದು ಗುರುತಿಸಲಾಗಿದ್ದು, ಈಕೆ ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ. ಸದ್ಯ ಪೋಷಕರ ಮೌಢ್ಯತೆಗೆ ಪುಟ್ಟ ಕಂದಮ್ಮ ಬಲಿಯಾಗಿದೆ.

    ಪೂರ್ಣಿಕಾ ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಅಜ್ಜಿಕ್ಯಾತನಹಳ್ಳಿಯ ರಾಕೇಶ್ ಯಲ್ಲಮ್ಮನ ಆರಾಧಕನಾಗಿದ್ದು, ಮಂತ್ರವಾದಿಯಾಗಿ ಗುರುತಿಸಿಕೊಂಡಿದ್ದ. ಹೀಗಾಗಿ ಪೋಷಕರನ್ನು ಈಕೆಯನ್ನು ಮಾಂತ್ರಿಕ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ರಾಕೇಶ್, ಮಗು ಪದೇ ಪದೇ ಬೆಚ್ಚಿ ಬೀಳೋದಕ್ಕೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಬೇಕು ಎಂದು ಹೇಳಿದ್ದ.

    ದೆವ್ವ ಬಿಡಿಸಬೇಕು ಎಂದಾಗ ಮಗುವಿನ ಪೋಷಕರು ಒಪ್ಪಿಕೊಂಡರು. ಅಂತೆಯೇ ರಾಕೇಶ್ ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡ ಬೆತ್ತದಿಂದ ಬಾರಿಸಿದ್ದಾನೆ. ರಾಕೇಶ್ ಹೊಡೆತಕ್ಕೆ ಪೂರ್ಣಿಕಾ ದೇಹದ ತುಂಬ ಬೆತ್ತದ ಗಾಯ, ಬಾಸುಂಡೆ ಎದ್ದಿದೆ. ಅಲ್ಲದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಇತ್ತ ಮಗು ಕುಸಿದು ಬಿದ್ದಿದ್ದರಿಂದ ರಾಕೇಶ್, ಪೂರ್ಣಿಕಾ ಪೋಷಕರನ್ನು ಕರೆದು ಮಗುವಿಗೆ ಪ್ರಜ್ಞೆ ತಪ್ಪಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಮಗುವಿನ ಸ್ಥಿತಿ ಕಂಡು ಕಂಗಾಲಾದ ಪೋಷಕರು ಕೂಡಲೇ ಆಕೆಯನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೂರ್ಣಿಕಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಪರಾರಿಯಾಗಿದ್ದ ರಾಕೇಶ್ ನನ್ನು ಮಗುವಿನ ಪೋಷಕರ ದೂರು ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

  • ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

    ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

    – ಹುಡುಗನ ಮನೆಯಿಂದ್ಲೇ ದಂಪತಿಯ ಅಪಹರಣ

    ಹೈದರಾಬಾದ್: ನಗರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವವಿವಾಹಿತನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಕೊಲೆ ಮಾಡಲಾಗಿದೆ.

    ಮೃತನನ್ನು ಹೇಮಂತ್ ಕುಮಾರ್ ಎಂದು ಗುರುತಿಸಲಾಗಿದೆ. ಚಂದನಗರದಲ್ಲಿರುವ ತನ್ನ ಮನೆಯಿಂದ ಹೇಮಂತ್ ಕುಮಾರ್‌ನನ್ನು ಅಪಹರಿಸಲಾಗಿತ್ತು. ಆದರೆ ಗುರುವಾರ ತಡರಾತ್ರಿ ಸಂಗರೆಡ್ಡಿ ಜಿಲ್ಲೆಯಲ್ಲಿ ಆತನ ಶವವನ್ನು ಪತ್ತೆ ಮಾಡಲಾಗಿದೆ. ಹೇಮಂತ್ ಮತ್ತು ಅವಂತಿ ಇಬ್ಬರು ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಹೀಗಾಗಿ ಹತ್ಯೆಯ ಹಿಂದೆ ಅವಂತಿಯ ಕುಟುಂಬವಿದೆ ಅಂತ ತಿಳಿದುಬಂದಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.

    ಅವಂತಿಯ ಸೋದರ ಮಾವ ಯುಗಂದರ್ ರೆಡ್ಡಿ ಮತ್ತು ಇತರ ಇಬ್ಬರು ಹೇಮಂತ್‍ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಕೊಲೆಯ ಹಿಂದೆ ಆಕೆಯ ಮಾವ ಯುಗಂದರ್ ರೆಡ್ಡಿ ಪ್ರಮುಖ ಆರೋಪಿಯಾಗಿದ್ದು, ಈ ಹತ್ಯೆಯಲ್ಲಿ ಪೋಷಕರು ಭಾಗಿಯಾಗಿದ್ದಾರೆ ಅಂತ ಅವಂತಿ ಆರೋಪಿಸಿದ್ದಾಳೆ ಎಂದು ಡಿಸಿಪಿ ಎಂ.ವೆಂಕಟೇಶ್ವರಲು ಹೇಳಿದರು.

    ಏನಿದು ಪ್ರಕರಣ?
    ಹೇಮಂತ್ ಮತ್ತು ಅವಂತಿ ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿ 2020ರ ಜೂನ್‍ನಲ್ಲಿ ಕುತ್ಬುಲ್ಲಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಹೇಮಂತ್ ಪದವಿ ಮುಗಿಸಿದ್ದರೆ, ಅವಂತಿ ಎಂಜಿನಿಯರಿಂಗ್ ಮುಗಿಸಿದ್ದಳು. ಮದುವೆಯಾದ ನಂತರ ಹೇಮಂತ್ ಮತ್ತು ಅವಂತಿ ನಗರದ ಚಂದನಗರದಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ ಹೇಮಂತ್ ತನ್ನ ತಂದೆ ಮುರಳಿ ಕೃಷ್ಣಗೆ ಫೋನ್ ಮಾಡಿ ಅವಂತಿಯ ಕುಟುಂಬದವರು ನಮ್ಮ ಮನೆಗೆ ಬಂದಿದ್ದಾರೆ ಎಂದು ತಿಳಿಸಿದ್ದನು.

    ರಾಜಿ ಮಾಡಿಕೊಳ್ಳಲು ಬಂದಿರಬಹುದೆಂದು ಭಾವಿಸಿ ಎಂದು ಮನೆಯ ಬಳಿ ಹೋದೆ. ಆದರೆ ನಾನು ಮನೆಗೆ ತಲುಪಿದಾಗ ಕುಟುಂಬದವರು ಹೇಮಂತ್ ಮತ್ತು ಅವಂತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗುವುದನ್ನು ನೋಡಿದೆ. ಸಹಾಯಕ್ಕಾಗಿ ಹೇಮಂತ್ ಕೂಗುತ್ತಿರುವುದನ್ನು ಕೇಳಿ ತಕ್ಷಣ ತನ್ನ ಸ್ಕೂಟರ್‌ನಲ್ಲಿ ಕಾರನ್ನು ಹಿಂಬಾಲಿಸಿದೆ ಎಂದು ಹೇಮಂತ್ ತಂದೆ ಮುರಳಿ ಕೃಷ್ಣ ಹೇಳಿದ್ದಾರೆ.

    ಕಾರು ಗೋಪನ್ಪಲ್ಲಿ ತಾಂಡಾ ತಲುಪಿದಾಗ ಇಬ್ಬರು ವಾಹನದಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವಂತಿ ತಪ್ಪಿಸಿಕೊಂಡಿದ್ದಾಳೆ. ಆದರೆ ಹೇಮಂತ್‍ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಮುರಳಿ ಕೃಷ್ಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಡಿದ್ದಾರೆ. ಆದರೆ ಅವಂತಿ ಪೊಲೀಸರು ಸ್ಪಂದಿಸುವಲ್ಲಿ ವಿಳಂಬವಾಗಿದೆ ಎಂದಿದ್ದಾಳೆ. ನಾವು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ತಕ್ಷಣ ಪ್ರತಿಕ್ರಿಯಿಸಿದ್ದರೆ ಇಂದು ನಾನು ನನ್ನ ಪತಿಯನ್ನು ಕಳೆದುಕೊಳ್ಳುತ್ತಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾಳೆ.

    ನನ್ನ ತಂದೆ ಲಕ್ಷ್ಮ ರೆಡ್ಡಿ ನಮ್ಮ ಕುಟುಂಬದವರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಕುಟುಂಬದ ದಾಖಲೆಗಳಿಗೆ ಸಹಿ ಕೂಡ ಮಾಡಿಸಿಕೊಂಡಿದ್ದರು. ನೀನು ನಮ್ಮ ಕುಟುಂಬದ ಯಾವುದೇ ಆಸ್ತಿಯ ಮೇಲೆ ಹಕ್ಕನ್ನು ಹೊಂದಿಲ್ಲ ಎಂದು ಹೇಳಿರುವುದಾಗಿ ಅವಂತಿ ತಿಳಿಸಿದ್ದಾಳೆ.

    ಆಸ್ತಿಗಳಿಗಾಗಿ ನಾವು ಕೂನೂನಿನ ಮೂಲಕ ಹೋರಾಡುತ್ತೇವೆ ಎಂದು ಅವರು ಭಾವಿಸಿರಬೇಕು. ಯಾಕೆಂದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಪೋಷಕರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕಿದೆ ಎಂದು ಆದೇಶ ಹೊರಡಿಸಿದೆ. ಆದರೆ ಅವರು ನನ್ನ ಮಗನನ್ನು ಕೊಂದಿದ್ದಾರೆ. ಅದು ಆಸ್ತಿಗೆ ಸಮವಾಗುವುದಿಲ್ಲ ಎಂದು ಹೇಮಂತ್ ತಂದೆ ಕಣ್ಣೀರು ಹಾಕಿದರು.

    ನಾವು ಅವರ ಸ್ಪಂದನೆಗೆ ಪ್ರತಿಕ್ರಿಯೆ ನೀಡಲು ಯಾವುದೇ ವಿಳಂಬ ಮಾಡಿಲ್ಲ. ಶಂಕಿತರನ್ನು ತಕ್ಷಣವೇ ಬಂಧಿಸಲಾಯಿತು. ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ಹೇಮಂತ್ ಶವವನ್ನು ಸಂಗರೆಡ್ಡಿ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಇನ್ಸ್‌ಪೆಕ್ಟರ್ ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ ಕಡೆ ಪೋಷಕರ ಒಲವು

    ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ ಕಡೆ ಪೋಷಕರ ಒಲವು

    ಮಂಡ್ಯ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದ ಪೋಷಕರು, ಈಗ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

    ನಾನು ಕೂಲಿ ಮಾಡಿ ಹೊಟ್ಟೆ ಬಟ್ಟೆಯನ್ನು ಕಟ್ಟಿಯಾದರೂ ನನ್ನ ಮಗುವನ್ನು ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸ ಬೇಕೆಂದು ಹಲವು ಪೋಷಕರು ಆಸೆ ಇಟ್ಟುಕೊಂಡು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಆದರೆ ಇದೀಗ ಕೊರೊನಾ ವೈರಸ್‍ನಿಂದ ಇಡೀ ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.

    ಇಂದರಿಂದ ಒಂದು ಉಪಯೋಗವಾಗಿದೆ. ಅದೇನೆಂದರೆ ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ತಮ್ಮ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು ಲಾಕ್‍ಡೌನ್‍ನಿಂದ ಹಣವಿಲ್ಲದೇ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಶುಲ್ಕವಿಲ್ಲದೇ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ ಎಂದು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಇದೀಗ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ದಾಖಲಾತಿಯಾಗಲು ತಾಮುಂದು ನಾಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಶಾಲೆಯಲ್ಲಿ ಶೇಕಡ 20ಕ್ಕೂ ಹೆಚ್ಚು ಮಕ್ಕಳು ದಾಖಲಾತಿಯಾಗಿದ್ದಾರೆ. ಈ ಶಾಲೆಯಲ್ಲಿ 8 ರಿಂದ 10 ನೇ ತರಗತಿಯ ವರೆಗೆ ಕ್ಲಾಸ್‍ಗಳು ಇವೆ. ಈ ಮೂರು ತರಗತಿಯಲ್ಲಿ ಸದ್ಯ 500ಕ್ಕೂ ಅಧಿಕ ಮಕ್ಕಳು ದಾಖಲಾತಿಯಾಗಿವೆ ಎಂದು ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.

    ಈ ವರ್ಷ 150ಕ್ಕೂ ಹೆಚ್ಚು ಮಕ್ಕಳು ದಾಖಲಾತಿಯಾಗಿದ್ದು, ಈ ಪೈಕಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಇಲ್ಲಿಗೆ ಸೇರ್ಪಡೆಯಾಗಿರುವುದೇ ಹೆಚ್ಚಿನ ಸಂಖ್ಯೆಯಾಗಿದೆ. ಈ ಶಾಲೆಯಲ್ಲಿ ನೀಡುತ್ತಿರುವ ವಿದ್ಯಾಭ್ಯಾಸ ಮತ್ತು ಲಾಕ್‍ಡೌನ್ ಹೊಡೆತವೆ ಈ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ.