Tag: parents

  • 10 ತಿಂಗಳ ಗಂಡು ಮಗುವನ್ನು ಡಾಬಾ ಬಳಿ ಬಿಟ್ಟು ಹೋದ ಪೋಷಕರು

    10 ತಿಂಗಳ ಗಂಡು ಮಗುವನ್ನು ಡಾಬಾ ಬಳಿ ಬಿಟ್ಟು ಹೋದ ಪೋಷಕರು

    – ದತ್ತು ಕೇಂದ್ರ ಸೇರಿದ ಮಗು

    ಹಾವೇರಿ: ಹತ್ತು ತಿಂಗಳ ಮುದ್ದಾದ ಗಂಡು ಮಗುವನ್ನ ಪೋಷಕರು ಡಾಬಾ ಬಳಿ ಬಿಟ್ಟು ಹೋಗಿರೋ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ನಡೆದಿದೆ.

    ಮುದ್ದಾಗಿರೋ ಗಂಡು ಮಗುವನ್ನ ಪೋಷಕರು ಬಿಟ್ಟು ಹೋಗಿದ್ದಾರೆ. ನಾಲ್ಕರ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದು, ಪೋಷಕರು ಬಂದು ಮಗುವನ್ನು ಕೊಂಡೊಯ್ಯಬಹುದೆಂದು ಸ್ಥಳೀಯರು 5-6 ಗಂಟೆ ಮಗುವಿನ ಹಿಡಿದು ಕಾಯ್ದಿದ್ದಾರೆ. ಆದರೆ ಯಾರೂ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಡಾಬಾ ಬಳಿಯ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಪಿಎಸ್‍ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಕೇಂದ್ರಕ್ಕೆ ಅಧಿಕಾರಿಗಳು ದಾಖಲಿಸಿದ್ದಾರೆ.

    ಪೋಷಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗಂಡು ಮಗು ಬಿಟ್ಟು ಹೋಗಿದ್ದ  ಪೋಷಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೆತ್ತವರಿಂದ ಕೊಲೆಯಾದ ಮಗಳು – ಹೊಲದಲ್ಲಿ ಶವ ಪತ್ತೆ

    ಹೆತ್ತವರಿಂದ ಕೊಲೆಯಾದ ಮಗಳು – ಹೊಲದಲ್ಲಿ ಶವ ಪತ್ತೆ

    – ದುಪ್ಪಟ್ಟಾದಿಂದ ಕತ್ತು ಬಿಗಿದು ಕೊಲೆ
    – ಮಗಳ ಪ್ರೀತಿಗೆ ಮನನೊಂದು ಈ ಕೃತ್ಯ ಎಸಗಿದ ಪೋಷಕರು

    ಲಕ್ನೋ: ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಂದು ಶವವನ್ನ ಹೊಲದಲ್ಲಿ ಎಸೆದಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಮೃತ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ತಿಳಿದ ತಂದೆ ತಾಯಿ ಮಗಳನ್ನು ಕೊಂದು ಹೊಲದ ಬಳಿ ಎಸದಿದ್ದಾರೆ.

    ಅಪ್ರಾಪ್ತ ವಯಸ್ಸಿನ ಮಗಳ ಪ್ರೀತಿಯ ವಿಚಾರವಾಗಿ ಹೆತ್ತರವರ ವಿರೋಧವಿತ್ತು. ಅವಳ ಪ್ರೀತಿಯನ್ನು ಮರೆತು ಬಿಡುವಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಆಕೆ ಹೆತ್ತವರ ಮಾತನ್ನು ಧಿಕ್ಕರಿಸಿ ಆತನೊಂದಿಗೆ ಸುತ್ತಾಟ ಮಾಡುತ್ತಿದ್ದಳು. ಕೆಲವೊಮ್ಮೆ ಪ್ರಿಯತಮನೊಂದಿಗೆ ಇದ್ದ ವೇಳೆ ತಂದೆ ತಾಯಿಗೆ ಸಿಕ್ಕಿಬಿದ್ದಿದ್ದಾಳೆ. ಒಂದು ದಿನ ಪ್ರಿಯತಮನೊಂದಿಗೆ ರಾತ್ರಿ ವೇಳೆ ಮನೆಗೆ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಅವಳ ದುಪ್ಪಟ್ಟದಿಂದಾ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿದ್ದಾರೆ. ಈ ವೇಳೆ ಮಗಳ ಪ್ರಾಣ ಹೋಗಿದೆ. ದೇಹವನ್ನು ಮಿರ್ಜಾಪುರ ಜಮಾಲ್‍ಪುರ ಪ್ರದೇಶದ ಜಮೀನಿನಲ್ಲಿ ಎಸೆದು ಹೆತ್ತವರು ಪರಾರಿಯಾಗಿದ್ದಾರೆ.

    ಕೊಲೆ ವಿಚಾರವನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತಾಗಿ ತನಿಖೆ ಮಾಡುವ ವೇಳೆ ಆಕೆಯ ಹೆತ್ತವರೆ ಕೊಲೆಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪೋಷಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಕಲಬುರಗಿ: ಸಹೋದರರಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.

    ಸುನೀಲ್ (17) ಹಾಗೂ ಶೇಖರ್ (12) ಆತ್ಮಹತ್ಯೆಗೆ ಶರಣಾದ ಸಹೋದರರು. ಇವರಿಬ್ಬರು ಮನೆಯಲ್ಲಿ ತಂದೆ-ತಾಯಿಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಹೊಲಕ್ಕೆ ಬಂದು ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೊಬೈಲ್ ವಿಷಯವಾಗಿ ಹೆತ್ತವರ ಜೊತೆ ಜಗಳವಾಡಿಕೊಂಡಿದ್ದಾರೆ. ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರಿಗೂ ಈಜು ಬರುವ ಹಿನ್ನೆಲೆ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

    ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲಿ ಬೈದಿದ್ದಕ್ಕೆ 1.5 ಲಕ್ಷದೊಂದಿಗೆ ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

    ಮನೆಯಲ್ಲಿ ಬೈದಿದ್ದಕ್ಕೆ 1.5 ಲಕ್ಷದೊಂದಿಗೆ ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

    – ಓದು ಅಂತ ಬುದ್ಧಿ ಹೇಳಿದ್ದಕ್ಕೆ ಹಣದೊಂದಿಗೆ ಪರಾರಿ

    ಗಾಂಧಿನಗರ: ಮಕ್ಕಳನ್ನು ಓದುವಂತೆ ಪೋಷಕರು ಬೈಯುವುದು ಸಾಮಾನ್ಯ. ಈ ಬೈಗುಳ ಕೆಲವೊಮ್ಮೆ ನೋವುಂಟು ಮಾಡುತ್ತದೆ. ಆದರೆ ಪೋಷಕರು ನಮಗೆ ಬುದ್ಧಿ ಹೇಳುವುದು ನಮ್ಮ ಒಳಿತಿಗಾಗಿಯೇ ಆಗಿರುತ್ತದೆ. ಅದೇ ರೀತಿ ಗುಜರಾತ್ ನ ವಡೋದರಾದ ಹುಡುಗನೊಬ್ಬ ಹೆತ್ತವರು ಬೈದರೆಂದು ಸಿಟ್ಟಿನಿಂದ ಮನೆಯಿಂದ ಎಸ್ಕೇಪ್ ಆಗಿ ಗೋವಾದಲ್ಲಿ ಪಾರ್ಟಿ ಮಾಡಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಈ ಘಟನೆ ನಡೆದು ಕೆಲ ದಿನಗಳಾದರೂ ಇದೀಗ ಭಾರೀ ಸುದ್ದಿಯಲ್ಲಿದೆ. ಕಳೆದ ವಾರ ಪೋಷಕರು ಹಾಗೂ ಅಜ್ಜ-ಅಜ್ಜಿ 14 ವರ್ಷದ ಬಾಲಕನಿಗೆ ಓದುವಂತೆ ಬುದ್ಧಿ ಹೇಳಿದ್ದಾರೆ. ಆದರೆ ಇದರಿಂದ ನೊಂದ 10ನೇ ತರಗತಿ ಬಾಲಕ ರೈಲು ಹತ್ತಿ ಗೋವಾಗೆ ತೆರಳಲಲು ಪ್ಲಾನ್ ಮಾಡಿದ್ದಾನೆ. ಅಂತೆಯೇ ವಡೋದರಾ ರೈಲ್ವೇ ನಿಲ್ದಾಣಕ್ಕೂ ಬಂದಿದ್ದಾನೆ. ಆದರೆ ಬಾಲಕನಲ್ಲಿ ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಆತನಿಗೆ ಟಿಕೆಟ್ ಸಿಕ್ಕಿರಲಿಲ್ಲ. ನಂತರ ಆತ ಪುಣೆಗೆ ಬಸ್ಸಿನಲ್ಲಿ ತೆರಳಲು ನಿರ್ಧರಿಸಿದ್ದಾನೆ. ಅಲ್ಲಿಂದ ಗೋವಾಕ್ಕೆ ಮತ್ತೊಂದು ಬಸ್ ಹತ್ತಿದ್ದಾನೆ.

    ಗೋವಾಕ್ಕೆ ತಲುಪಿದ ಬಾಲಕ ಅಲ್ಲಿ ಕ್ಲಬ್, ರೆಸ್ಟೋರೆಂಟ್ ನಲ್ಲಿ ಸುತ್ತಾಡಿಕೊಂಡು ಎಂಜಾಯ್ ಮಾಡಿದ್ದಾನೆ. ತನ್ನ ಕೈಯಲ್ಲಿದ್ದ ಹಣವೆಲ್ಲ ಮುಗಿಯುತ್ತಿದ್ದಂತೆಯೇ ಆತ ಮತ್ತೆ ಪುಣೆಯತ್ತ ಬರಲು ತಿರ್ಮಾನಿಸಿದ್ದಾನೆ. ಅಲ್ಲದೆ ಹೊಸ ಸಿಮ್ ಕಾರ್ಡ್ ತೆಗೆದುಕೊಂಡಿದ್ದಾನೆ.

    ಇತ್ತ ಮಗನನ್ನು ಹುಡುಕಾಡಿ ಬೇಸತ್ತ ಪೋಷಕರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪೋಷಕರಿಗೆ ಮತ್ತೊಂದು ಶಾಕ್ ಕಾದಿದ್ದು, ಮನೆಯಲ್ಲಿದ್ದ 1.5 ಲಕ್ಷ ರೂ. ನಗದು ಕೂಡ ಕಾಣೆಯಾಗಿತ್ತು. ಪೋಷಕರ ದೂರು ದಾಖಲಿಸಿಕೊಂಡ ಪೊಲೀಸರು ಬಾಲಕನ ಪತ್ತೆಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಬಾಲಕನ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಎಂದು ಬರುತ್ತಿದ್ದರಿಂದ ಪೊಲೀಸರಿಗೆ ಆತನ ಪತ್ತೆ ಮಾಡಲು ಅಸಾಧ್ಯವಾಗಿತ್ತು.

    ಇನ್ನು ಬಾಲಕ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡು ಹೊಸ ಸಿಮ್ ತೆಗೆದುಕೊಳ್ಳುತ್ತಿದ್ದಂತೆಯೇ ಟ್ರೇಸ್ ಮಾಡಿದ್ದ ಪೊಲೀಸರು, ಪುಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಹೀಗಾಗಿ ಕೂಡಲೇ ಪೊಲೀಸರು ಬಾಲಕನ ಪತ್ತೆ ಮಾಡಿದ್ದಾರೆ. ಅಲ್ಲದೆ ವಡೋದರ ಪೊಲೀಸರಿಗೆ ಬಾಲಕನನ್ನು ಒಪ್ಪಿಸಿದ್ದಾರೆ.

  • ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿ ಬದಿ ಎಸೆದು ಹೋದ್ರು!

    ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿ ಬದಿ ಎಸೆದು ಹೋದ್ರು!

    ಹಾಸನ: ಸುಮಾರು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಪೋಷಕರು ಬೇಲಿಗೆ ಎಸೆದು ಹೋಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ವಿದ್ಯಾನಗರ ಸಮೀಪ ನಡೆದಿದೆ.

    ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿಗೆ ಎಸೆದು ಹೋಗಿದ್ದಾರೆ. ಚಳಿ ಮತ್ತು ಹಸಿವು ತಾಳಲಾರದೆ ಮಗುವಿನ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದ ಸ್ಥಳೀಯ ನಿವಾಸಿ ತಮನ್ನಾ ಮಗುವನ್ನು ಮನೆಗೆ ಕರೆತಂದು ಹಾಲು ಕುಡಿಸಿ ಪೋಷಣೆ ಮಾಡಿದ್ದಾರೆ.

    ಮಾಹಿತಿ ತಿಳಿದ ಪತ್ರಕರ್ತರೊಬ್ಬರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿದ್ದು, ಯಾರಿಗಾದರೂ ಮಗುವಿನ ಪೋಷಕರ ಬಗ್ಗೆ ತಿಳಿದಿದ್ದರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

  • ಅಪ್ರಾಪ್ತೆಗೆ ಕಿರುಕುಳ ನೀಡಿದ ಪೊಲೀಸ್ ಪೇದೆ ಅರೆಸ್ಟ್

    ಅಪ್ರಾಪ್ತೆಗೆ ಕಿರುಕುಳ ನೀಡಿದ ಪೊಲೀಸ್ ಪೇದೆ ಅರೆಸ್ಟ್

    – ಮನೆಗೆ ಕರೆಸಿ ಕಿರುಕುಳ ನೀಡಿದ್ದ
    – ಯಾರಿಗೂ ಹೇಳದಂತೆ ಬೆದರಿಕೆ

    ಮುಂಬೈ: 13 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಕಾನ್‍ಸ್ಟೇಬಲ್‍ನನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಕಾನ್‍ಸ್ಟೇಬಲ್‍ನನ್ನು ಮುಂಬೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿ ಕಾನ್‍ಸ್ಟೇಬಲ್ ವಿಲೇ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು.

    ಆರೋಪಿ ಪೇದೆ ಮೊದಲು ಬಾಲಕಿಯ ಕುಟುಂಬದವರನ್ನು ಪರಿಚಯವನ್ನು ಮಾಡಿಕೊಂಡಿದ್ದಾನೆ. ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿಯನ್ನು ಕರೆಸಿಕೊಂಡು ಆಕೆಗೆ ಕಿರುಕುಳ ನೀಡಿದ್ದಾನೆ. ಘಟನೆಯ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಎಚ್ಚರಿಕೆ ನೀಡಿ, ಬಾಲಕಿಯನ್ನು ಬಿಟ್ಟು ಕಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ತನ್ನ ಹೆತ್ತವರಿಗೆ ಈ ಕುರಿತಾಗಿ ಹೇಳಿಲ್ಲ. ಬದಲಾಗಿ ನೆರೆಹೊರೆಯವರು ಬಾಲಕಿ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಬಾಲಕಿಯಿಂದ ಇಡೀ ಘಟನೆಯನ್ನು ತಿಳಿದುಕೊಂಡಿದ್ದಾರೆ. ನಂತರ ಆರೋಪಿ ಕಾನ್‍ಸ್ಟೆಬಲ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಖ್ರೋಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಕ್ರಮಣಕಾರಿ ಅಥವಾ ಅಪರಾಧ ಬಲವನ್ನು ಬಳಸುವುದು, ತಪ್ಪಾಗಿ ನಡೆದುಕೊಳ್ಳುವುದು, ಕ್ರಿಮಿನಲ್ ಬೆದರಿಕೆ ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಆರೋಪಿ ಪೇದೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಮತ್ತು ಆರೋಪಿ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವಲಯ ಉಪ ಆಯುಕ್ತರು ತಿಳಿಸಿದ್ದಾರೆ.

  • ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    – ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು

    ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈ ವೇಳೆ ಸುಮಾ-ಅಂಜನಪ್ಪನವರ ಗಂಡು ಮಗು ಮೃತವಾಗಿದೆ. ಸುಮಾ, ಗೋಪಾಲಪ್ಪ ದಂಪತಿಯ ಹೆಣ್ಣು ಮಗು ಚಿಕಿತ್ಸೆಯಲ್ಲಿದೆ. ಗಂಡು ಮಗು ಮೃತವಾಗುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಮೃತ ಮಗುವನ್ನು ಸೊರಬದ ಸುಮಾ ಅವರಿಗೆ ನೀಡಿ ಕಳುಹಿಸಿದ್ದಾರೆ.

    ಮೃತ ಮಗುವನ್ನು ಪಡೆದ ಸೊರಬದ ಸುಮಾ, ಗೋಪಾಲಪ್ಪ ದಂಪತಿ ಕಣ್ಣೀರು ಹಾಕುತ್ತಾ ಮಗುವನ್ನು ಪಡೆದುಕೊಂಡು ಆಸ್ಪತ್ರೆಯಿಂದ ತಮ್ಮ ಊರಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಇತ್ತ ಮಗು ನೋಡಲೆಂದು ತೀವ್ರ ನಿಗಾ ಘಟಕಕ್ಕೆ ಹೋದ ಸುಮಾ ಅಂಜನಪ್ಪನವರ ಪೋಷಕರಿಗೆ ವೈದ್ಯರು ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಸುಮಾ ಅಂಜನಪ್ಪ ಅವರ ಮಗು ಜನಿಸಿದಾಗ ಮಗು ಒಂದೂವರೆ ಕೆ.ಜಿ ತೂಕ ಇದ್ದ ಕಾರಣ ಚಿಕಿತ್ಸೆಯಲ್ಲಿಡಲಾಗಿತ್ತು. ಸರಿ ಮೃತ ಮಗುವನ್ನು ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಎಡವಟ್ಟು ಹೊರಬಿದ್ದಿದೆ.

    ಈ ವೇಳೆಗಾಗಲೇ ಸೊರಬದ ಸುಮಗೋಪಾಲಪ್ಪನವರು ಮಗುವನ್ನು ತಮ್ಮೂರಿಗೆ ತೆಗೆದು ಕೊಂಡು ಹೋಗಿ ಅಂತ್ಯಕ್ರಿಯೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಆದರೆ ಅವರ ಮಗು ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದೆ. ಇದರಿಂದ ಕೋಪಗೊಂಡ ಸುಮಾ ಅಂಜನಪ್ಪ ಪೋಷಕರು ತಮಗೆ ಮಗು ಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನಿರಾಕರಿಸಿದ್ದಾರೆ.

    ಇತ್ತ ಮೃತಪಟ್ಟ ಮಗುವಿನ ದೇಹವು ಸಿಗದೆ ಸುಮಾ ಅಂಜನಪ್ಪ ಕುಟುಂಬ ಪರದಾಡುವಂತಾಗಿದೆ. ಇಬ್ಬರು ಮಗುವಿನ ತಾಯಂದಿರ ಹೆಸರು ಒಂದೇ ಆಗಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಮಗುವನ್ನು ಬದಲಾವಣೆ ಮಾಡಿ ನೋವಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಮೃತ ಮಗುವಿನ ಪೋಷಕರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆ

    ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆ

    – ಲಾಕ್‍ಡೌನ್ ವೇಳೆ ಗೇಮ್ ವ್ಯಸನಿಯಾಗಿದ್ದ ಬಾಲಕ

    ಚೆನ್ನೈ: ಮೊಬೈಲ್‍ನಲ್ಲಿ ಹೆಚ್ಚು ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಯಾವಾಗಲೂ ಗೇಮ್ ಆಡುವುದಕ್ಕೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಾಕುಲಂನ ಗಾಂಡಿ 2ನೇ ರಸ್ತೆಯ ನಿವಾಸಿಯಾಗಿದ್ದ ಬಾಲಕ ಮೊಬೈಲ್ ಗೇಮಿಂಗ್ ವ್ಯಸನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಬಾಲಕ ಗೇಮ್ ಆಡುವುದರಲ್ಲೇ ಸಮಯ ಕಳೆದಿದ್ದು, ಇದರಿಂದಾಗಿ ಗೇಮ್ ವ್ಯಸನಿಯಾಗಿದ್ದಾನೆ. ಪೋಷಕರು ಎಷ್ಟೇ ಹೇಳಿದರು ಕೇಳದೆ ಯಾವಾಗಲೂ ಗೇಮ್ ಆಡುತ್ತಿದ್ದ. ಹೀಗಾಗಿ ಇತ್ತೀಚೆಗೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದರು. ಇದರಿಂದಾಗಿ ಬಾಲಕ ತೀರಾ ಅಸಮಾಧಾನಗೊಂಡಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಿವರಿಸಿದ್ದಾರೆ.

    ಪೋಷಕರು ಮರಳಿ ಮನೆಗೆ ಬಂದಾಗ ಬಾಲಕನ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದಾರೆ. ಬಳಿಕ ಪುದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇತ್ತೀಚೆಗೆ ತಮಿಳುನಾಡಿನಲ್ಲಿ ಇಂತಹದ್ದೇ ಪ್ರಕರಣ ನಡೆದಿತ್ತು. ಆನ್‍ಲೈನ್ ತರಗತಿಗೆ ಹಾಜರಾಗುವ ಬದಲು 13 ವರ್ಷದ ಬಾಲಕಿ ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಇದನ್ನು ಕಂಡ ಪೋಷಕರು ಬಾಲಕಿಯಿಂದ ಮೊಬೈಲ್ ಕಸಿದುಕೊಂಡಿದ್ದರು. ಇದರಿಂದ ಕೋಪಿತಳಾದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿ 8ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಯಾಗಿದ್ದಳು.

  • ಆನ್‍ಲೈನ್ ತರಗತಿಗೆ ಸರ್ಕಾರದಿಂದ ಮಾರ್ಗಸೂಚಿ- ಯಾವ ಮಕ್ಕಳಿಗೆ ಎಷ್ಟು ಗಂಟೆ, ಎಷ್ಟು ದಿನ ಕ್ಲಾಸ್?

    ಆನ್‍ಲೈನ್ ತರಗತಿಗೆ ಸರ್ಕಾರದಿಂದ ಮಾರ್ಗಸೂಚಿ- ಯಾವ ಮಕ್ಕಳಿಗೆ ಎಷ್ಟು ಗಂಟೆ, ಎಷ್ಟು ದಿನ ಕ್ಲಾಸ್?

    ಬೆಂಗಳೂರು: ಮಕ್ಕಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆನ್‍ಲೈನ್ ತರಗತಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾವ ತರಗತಿಯ ಮಕ್ಕಳು, ಎಷ್ಟು ದಿನ, ಎಷ್ಟು ಗಂಟೆ ಆನ್‍ಲೈನ್ ತರಗತಿಯಲ್ಲಿ ಕೂರಬೇಕು ಎಂಬ ಕುರಿತು ತಿಳಿಸಿದೆ.

    ಆನ್‍ಲೈನ್ ತರಗತಿ ಕುರಿತು ಈಗಾಗಲೇ ದೂರುಗಳು ಬರುತ್ತಿದ್ದು, ಮಕ್ಕಳಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪೋಷಕರು ದೂರುತ್ತಿದ್ದಾರೆ. ಶೇ.20 ಮಕ್ಕಳಿಗೆ ಕತ್ತು, ಬೆನ್ನು ನೋವು ಸಮಸ್ಯೆ ಕಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿರಂತರ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ತೊಂದರೆಯ ಜೊತೆಗೆ ಈಗ ಕತ್ತು ಹಾಗೂ ಬೆನ್ನು ನೋವಿನಿಂದ ಮಕ್ಕಳು ನರಳುತ್ತಿದ್ದಾರೆ. ಇದರಿಂದಾಗಿ ಪೋಷಕರು ಹೈರಾಣಾಗಿದ್ದಾರೆ. ಹೀಗಾಗಿ ತಜ್ಞರ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

    ವಯೋಮಾನಕ್ಕನುಗುಣವಾಗಿ ಆನ್‍ಲೈನ್ ಕ್ಲಾಸ್ ನಡೆಸುವಂತೆ ತಿಳಿಸಲಾಗಿದ್ದು, 2ನೇ ತರಗತಿಯವರೆಗೆ ದಿನ ಬಿಟ್ಟು ದಿನ ಹಾಗೂ 3ನೇ ತರಗತಿಯ ನಂತರದ ಮಕ್ಕಳಿಗೆ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಬಹದು. ಎರಡು ದಿನ ಕಡ್ಡಾಯವಾಗಿ ರಜೆ ನೀಡಬೇಕು. 2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ ಇರಬೇಕು.

    ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ 1983(1995) ರ ಸೆಕ್ಷನ್ 124(5) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

    ಯಾವ ಮಕ್ಕಳಿಗೆ ಎಷ್ಟು ದಿನ ತರಗತಿ?
    3ರಿಂದ 6 ವರ್ಷದ ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನದಂತೆ ವಾರಕ್ಕೆ 3 ದಿನ ತರಗತಿ ನಡೆಸಬೇಕು. ಇದಕ್ಕೆ ಪೋಷಕರ ಹಾಜರಾತಿ ಕಡ್ಡಾಯವಾಗಿದೆ. ಪ್ರತಿ ದಿನ ಕೇವಲ ಗರಿಷ್ಠ 30 ನಿಮಿಷ ಮಾತ್ರ ನಡೆಸಬೇಕು. 1 ರಿಂದ 2ನೇ ತರಗತಿ ಮಕ್ಕಳಿಗೂ ಇದೇ ನಿಯಮ ಅನ್ವಯವಾಗಲಿದೆ. ಆದರೆ ದಿನಕ್ಕೆ 2 ಸೆಷನ್ ಮಾಡಬಹುದಾಗಿದೆ. ಇವರಿಗೂ ತರಗತಿ ಅವಧಿ ಗರಿಷ್ಠ 30 ನಿಮಿಷ ಮಾತ್ರ.

    3ರಿಂದ 5ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಸೆಷನ್ ನಂತೆ ವಾರಕ್ಕೆ 5 ದಿನ ಕ್ಲಾಸ್ ನಡೆಸಬಹುದು. ಇದಕ್ಕೆ ಪೋಷಕರ ಹಾಜರಿ ಕಡ್ಡಾಯವಲ್ಲ. ಇವರಿಗೆ ತರಗತಿ ಅವಧಿ ಗರಿಷ್ಠ 30 ನಿಮಿಷ. 6ರಿಂದ 10ನೇ ತರಗತಿಯವರಿಗೆ ದಿನಕ್ಕೆ 3 ಸೆಷನ್‍ನಂತೆ ವಾರಕ್ಕೆ 5 ದಿನ ತರಗತಿ ನಡೆಸಬಹುದು. ಇವರಿಗೂ ಪೋಷಕರ ಹಾಜರಿ ಕಡ್ಡಾಯವಲ್ಲ. ಒಂದು ಸೆಷನ್ ಅವಧಿ ಗರಿಷ್ಠ 30-45 ನಿಮಿಷವಾಗಿದೆ.

  • ಅವನಿಗೆ ಶಿಕ್ಷೆ ಆಗ್ಲೇಬೇಕು- ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

    ಅವನಿಗೆ ಶಿಕ್ಷೆ ಆಗ್ಲೇಬೇಕು- ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

    – ನನ್ನಿಂದ ಅಪ್ಪ, ಅಮ್ಮನ ಗೌರವಕ್ಕೆ ಧಕ್ಕೆ ಆಯ್ತು

    ನವದೆಹಲಿ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನವದೆಹಲಿಯ ಭಜನಾಪುರದಲ್ಲಿ ನಡೆದಿದೆ. ಯುವತಿ ಪತ್ರದಲ್ಲಿ ತನ್ನ ಸಾವಿಗೆ ಕಾರಣನಾದ ಯುವಕನ ಹೆಸರು ಬರೆದಿದ್ದಾಳೆ.

    23 ವರ್ಷದ ನಾಜಿಶಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಐಪಿ ಯುನಿವರ್ಸಿಟಿಯಲ್ಲಿ ಬಿ.ಎಡ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಕ್ಟೋಬರ್ 12ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಪೋಷಕರು ಮಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಾಜಿಶಾ ಸಾವನ್ನಪ್ಪಿದ್ದಾಳೆ. ಆರಂಭದಲ್ಲಿ ನಾಜಿಶಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದರಿಲ್ಲ. ಪೊಲೀಸರು ನಾಜಿಶಾಳ ಕೋಣೆ ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ತನ್ನ ಆತ್ಮಹತ್ಯೆಗೆ ಲೋನಿ ನಿವಾಸಿ ಹಾಜಿ ಸಲ್ಮಾನ್ ಕಾರಣ ಎಂದು ನಾಜಿಶಾ ಪತ್ರದಲ್ಲಿ ಬರೆದಿದ್ದಾಳೆ. ಬಿ.ಎಸ್ ವ್ಯಾಸಂಗ ಮಾಡುತ್ತಿದ್ದ ನಾಜಿಶಾಳನ್ನ ಸಲ್ಮಾನ್ ಹಿಂಬಾಲಿಸುತ್ತಿದ್ದನು. ಸಲ್ಮಾನ್ ವರ್ತನೆಯಿಂದ ಮಾನಸಿಕವಾಗಿ ನಾಜಿಶಾ ನೊಂದಿದ್ದಳು. ಆಗಸ್ಟ್ 9ರಂದು ವಿದ್ಯಾರ್ಥಿನಿ ಮನೆಗೆ ಬಂದಿದ್ದ ಸಲ್ಮಾನ್ ಆಕೆಯ ಪೋಷಕರಿಗೆ ಬೆದರಿಕೆ ಹಾಕಿದ್ದನು. ಈ ವೇಳೆ ಪೋಷಕರು ಮತ್ತು ಸ್ಥಳೀಯರು ಸಲ್ಮಾನ್ ನನ್ನು ಹಿಡಿದು ಥಳಿಸಿ ಕಳುಹಿಸಿದ್ದರು.

    ಈ ಮೊದಲೇ ಮಾನಸಿಕವಾಗಿ ಕುಗ್ಗಿದ ನಾಜಿಶಾಳ ಮೇಲೆ ಸಲ್ಮಾನ್ ಮನೆಗೆ ಬಂದು ಹೋದ ಘಟನೆ ಮತ್ತಷ್ಟು ಅಘಾತವನ್ನುಂಟು ಮಾಡಿತ್ತು. ಅಂದಿನಿಂದ ನಾಜಿಶಾ ಒಂಟಿಯಾಗಿ ಇರಲಾರಂಭಿಸಿದಳು. ಹೊರಗೆ ಹೋದ್ರೆ ಸಲ್ಮಾನ್ ಎದುರಾಗಬಹುದು ಎಂಬ ಭಯದಿಂದ ಮನೆಯಿಂದ ಸಹ ನಾಜಿಶಾ ಹೊರ ಬಂದಿರಲಿಲ್ಲ. ಇತ್ತ ಸಲ್ಮಾನ್ ಘಟನೆಯಿಂದಾಗಿ ಸ್ಥಳೀಯವಾಗಿ ತನ್ನಿಂದಾಗಿ ತಂದೆ-ತಾಯಿಯ ಗೌರವಕ್ಕೂ ಧಕ್ಕೆ ಆಯ್ತು ಎಂದು ನಾಜಿಶಾ ಚಿಂತಿಸತೊಡಗಿದಳು.

    ಇಂತಹ ಸಾಲು ಸಾಲು ಯೋಚನೆಯಿಂದ ಸಂಪೂರ್ಣವಾಗಿ ಕುಗ್ಗಿದ ಆತ್ಮಹತ್ಯೆಯ ನಿರ್ಧಾರ ಮಾಡಿ ಡೆತ್ ನೋಟ್ ಬರೆದಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಜಿಶಾಳ ಮರಣೋತ್ತರ ಶವ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ. ಘಟನೆ ಸಂಬಂಧ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ನಾಜಿಶಾ ಮತ್ತು ಸಲ್ಮಾನ್ ಫೇಸ್‍ಬುಕ್ ನಲ್ಲಿ ಗೆಳೆಯರಾಗಿದ್ದರು ಎಂದು ತಿಳಿದು ಬಂದಿದೆ.