ಅಮರಾವತಿ: ದಂಪತಿ ತಮ್ಮ 16 ವರ್ಷದ ಹಿರಿಯ ಮಗಳ ಚಿಕಿತ್ಸೆಗಾಗಿ 12 ವರ್ಷದ ಕಿರಿಯ ಮಗಳನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ವರದಿಯಾಗಿದೆ.
16 ವರ್ಷದ ಬಾಲಕಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಆಕೆಯ ಚಿಕಿತ್ಸೆಗಾಗಿ ಪೋಷಕರು 12 ವರ್ಷದ ಕಿರಿಯ ಮಗಳನ್ನು ಚಿನ್ನ ಸುಬ್ಬಯ್ಯ(46) ಎಂಬವರಿಗೆ 10,000 ರೂಪಯಿಗೆ ಮಾರಾಟ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿ ಜಿಲ್ಲೆಯ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿದ್ದಾರೆ.
ಮಗಳ ಚಿಕಿತ್ಸೆಗಾಗಿ ಸುಬ್ಬಯ್ಯ ಅವರೊಂದಿಗೆ ಮಾತನಾಡಿ ಹಣಕ್ಕಾಗಿ ಕಿರಿಮಗಳನ್ನು ಮಾರಾಟ ಮಾಡಲು ದಂಪತಿ ಒಪ್ಪಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇತ್ತ ಸುಬ್ಬಯ್ಯ ಮಗುವನ್ನು ಖರೀದಿಸಿದ ನಂತರ ಮನೆಯಲ್ಲಿ ಮಗು ಅಳುತ್ತಿದ್ದನ್ನು ಗಮನಿಸಿ ನೆರೆಯ ಮನೆಯವರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ಸುಬ್ಬಯ್ಯ ಅವರ ವಿರುದ್ಧ ಕೇಸ್ ದಾಖಲಿಸಿ ಘಟನೆ ಕುರಿತು ವಿಚಾರಣೆಗೆ ಒಳಪಡಿಸಿದ್ದಾರೆ.
ಬಾಗಲಕೋಟೆ: ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಸಿಂಧುರೇಖಾ ಸಿ.ಎಸ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಈಕೆ ನೇಣು ಬೀಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಿಂಧು ಕುಮಾರೇಶ್ವರ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಎಂಬಿಬಿಎಸ್ ಓದುತ್ತಿದ್ದಳು. ಈಕೆ ನವನಗರದ ಕುಮಾರೇಶ್ವರ ಮೆಡಿಕಲ್ ಕಾಲೇಜ್ ಆವರಣದಲ್ಲಿರುವ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದಳು. ಪೋಷಕರು ಬೆಂಗಳೂರಿಗೆ ತೆರಳಿದ ನಂತರ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಲಕ್ನೋ: 15 ವರ್ಷದ ಬಾಲಕಿ ಮೇಲೆ ಚಿಕ್ಕಪ್ಪನೇ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ದಾನ್ ಪಟ್ಟಣದ ಗ್ರಾಮವೊಂದರಲ್ಲಿ ಗುರುವಾರ ನಡೆದಿದೆ.
ಈ ಘಟನೆಯು ಬಾಲಕಿಯೊಬ್ಬಳೇ ಮನೆಯಲ್ಲಿರುವುದನ್ನು ತಿಳಿದು ಆಕೆಯ ಚಿಕ್ಕಪ್ಪ ಮನೆಗೆ ಬಂದಿದ್ದಾನೆ. ಅಲ್ಲದೆ ಆಕೆಯನ್ನು ನಿರ್ಮಾಣವಾಗುತ್ತಿದ್ದ ಕಟ್ಟಡದ ಬಳಿ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರವನ್ನು ನಿರಾಕರಿಸಿದ್ದರಿಂದ ಬಾಲಕಿಗೆ ಗನ್‍ನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಜೊತೆಗೆ ಈ ವಿಚಾರವನ್ನು ಎಲ್ಲಾದರೂ ಹೇಳಿಕೊಂಡರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಆದರೂ ಘಟನೆ ವೇಳೆ ಬಾಲಕಿ ತನ್ನನ್ನು ರಕ್ಷಿಸುವಂತೆ ಜೋರಾಗಿ ಕಿರುಚಿದ್ದಾಳೆ. ಹಾಗಾಗಿ ಬಾಲಕಿಯ ದನಿ ಕೇಳಿಸಿಕೊಂಡ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಬಾಲಕಿಯ ಪೋಷಕರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆರೋಪಿ ಹೆಸರಿನಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಪೊಲೀಸರು ಅತ್ಯಾಚಾರ, ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ ಮತ್ತು ಪೋಕ್ಸೋ ಕಾಯಿದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್: ಶಾಲಾ ಶುಲ್ಕ ಪಾವತಿಸದೇ ಕಾರಣ ತರಗತಿಗೆ ಹಾಜರಾಗಲು ಅನುಮತಿ ನೀಡಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೂಲಿ ಕಾರ್ಮಿಕ ದಂಪತಿಯ ಮಗಳಾಗಿದ್ದಾಳೆ.
ಈ ಕುರಿತಂತೆ ಬಾಲಕಿಯ ತಂದೆ ಹರಿಪ್ರಸಾದ್ ಶಾಲೆಯ ಒಟ್ಟು ಶುಲ್ಕ 37000 ರೂ ಆಗಿದ್ದು, ಅದರ ಒಂದು ಕಂತನ್ನು ಈಗಾಗಲೇ ಪಾವತಿಸಿದ್ದೆವು. ಆದರೆ ಲಾಕ್‍ಡೌನ್‍ನಿಂದಾಗಿ ಉಳಿದ 15,000 ರೂ.ಗಳನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಆದರೂ ಉಳಿದ ಹಣವನ್ನು ಫೆಬ್ರವರಿ 20ರ ಒಳಗೆ ಪಾವತಿಸುವುದಾಗಿ ಶಾಲಾ ಆಡಳಿತ ಮಂಡಳಿಗೆ ಮೊದಲೇ ತಿಳಿಸಿದ್ದೆವು. ಹೀಗಿದ್ದರೂ ತಮ್ಮ ಮಗಳಿಗೆ ಶುಲ್ಕ ಪಾವತಿಸುವಂತೆ ಅವರು ಒತ್ತಡ ಹೇರಿದ್ದಾರೆ ಎಂದು ಪೊಲೀಸರ ಬಳಿ ಶಾಲಾ ಆಡಳಿತ ಮಂಡಳಿ ವಿರುದ್ಧ ಆರೋಪಿಸಿದ್ದಾರೆ.
ನಿನ್ನೆ ನನ್ನ ಮಗಳಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಶಿಕ್ಷಕರು ಶಾಲೆಯ ಶುಲ್ಕ ಪಾವತಿಸುವಂತೆ ನನಗೆ ಮತ್ತು ನನ್ನ ಮಗಳಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದರು. ಶಿಕ್ಷಕರು ಕರೆ ಮಾಡುತ್ತಿದ್ದ ಕಾರಣ ತಾನು ಆಸ್ಪತ್ರೆಗೆ ಹೋಗಿರುವುದಾಗಿ ಸುಳ್ಳು ಹೇಳುವಂತೆ ಮಗಳು ನನಗೆ ತಿಳಿಸಿದಳು. ಅಲ್ಲದೆ ಶಾಲಾ ಶುಲ್ಕ ಪಾವತಿಸುವವರೆಗೂ ತರಗತಿಗೆ ಹಾಜರಾಗದಂತೆ ಬಾಲಕಿಗೆ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ.
ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ನನ್ನ ಮಗಳು ಶಾಲಾ ಆಡಳಿತ ಮಂಡಳಿಯಿಂದ ಅವಮಾನಗೊಂಡು ನೇಣುಬಿಗಿದುಕೊಂಡು ಪ್ರಾಣಬಿಟ್ಟಿದ್ದಾಳೆ ಎಂದು ಬಾಲಕಿಯ ತಾಯಿ ಸಂಕಟ ವ್ಯಕ್ತಪಡಿಸಿದ್ದಾರೆ.
ಇದೀಗ ಶಾಲಾ ಆಡಳಿತ ಮಂಡಳಿ ವಿರುದ್ದ ಪೊಲೀಸರು ದೂರು ದಾಖಲಿಸಿದ್ದು, ಘಟನೆ ವಿಚಾರವಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಬೆಂಗಳೂರು: ಸರ್ಕಾರ, ಖಾಸಗಿ ಶಾಲೆಗಳ ನಡುವೆ ಫೀಸ್ ಫೈಟ್ ಮತ್ತೆ ಮುಂದುವರಿದಿದೆ. 30% ಶುಲ್ಕ ಕಡಿತದ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದು, ಆದೇಶ ವಾಪಸ್ ಪಡೆಯಲು ಡೆಡ್ ಲೈನ್ ಕೊಟ್ಟು ಪ್ರತಿಭಟನೆ ಎಚ್ಚರಿಕೆ ಕೊಟ್ಟಿವೆ. ಆದ್ರೆ ಇದಕ್ಕೆ ಡೋಂಟ್ ಕೇರ್ ಎಂದಿರೋ ಸರ್ಕಾರ ಮಾತುಕತೆ ಬನ್ನಿ ಅಂತ ಆಹ್ವಾನ ನೀಡಿದೆ.
ಶಾಲೆಯ ಶುಲ್ಕ ಗೊಂದಲ ಎಲ್ಲಾ ಮುಗೀತು ಅಂದುಕೊಳ್ಳುವಾಗಲೇ ಮತ್ತೆ ಖಾಸಗಿ ಶಾಲೆಗಳು ತಮ್ಮ ವರಸೆ ಪ್ರಾರಂಭ ಮಾಡಿವೆ. ಸರ್ಕಾರ ಹೊರಡಿಸಿರೋ ಶೇ.30 ಶುಲ್ಕ ಕಡಿತ ಆದೇಶ ವಾಪಸ್ ಪಡಯಬೇಕು ಅಂತ ಖಾಸಗಿ ಶಾಲೆಗಳು ಆಗ್ರಹ ಮಾಡಿವೆ. ಸರ್ಕಾರದ ಆದೇಶದ ಮರು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಿವೆ. ಸರ್ಕಾರ ಆದೇಶ ವಾಪಸ್ ಪಡಯದೇ ಹೋದ್ರೆ ಫೆಬ್ರವರಿ 23 ರಂದು ಹೋರಾಟ ಮಾಡೋ ಎಚ್ಚರಿಕೆ ಕೊಟ್ಟಿವೆ. ಕ್ಯಾಮ್ಸ್, ಕುಸ್ಮಾ, ಮಿಕ್ಸಾ, ಮಾಸ್, ಕುಮ್ಸಾ, ಎಬಿಇ ಸೇರಿ ಹಲವು ಸಂಘಟನೆಗಳು ಸರ್ಕಾರದ ಆದೇಶ ಶೇ.30 ಆಗಲ್ಲ. ಶೇ.50-60 ಕಡಿತ ಆಗುತ್ತೆ ಅಂತ ಹೊಸ ಲೆಕ್ಕ ಹೇಳ್ತಿವೆ. ಆದೇಶ ವಾಪಸ್ ಪಡೆಯದೇ ಹೋದ್ರೆ ಪ್ರತಿಭಟನೆ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿವೆ.
ಆದೇಶ ವಾಪಸ್ ಇಲ್ಲ: ಖಾಸಗಿ ಶಾಲೆಗಳ ಡೆಡ್‍ಲೈನ್‍ಗೆ ಸರ್ಕಾರ ಕೂಡಾ ತಿರುಗೇಟು ಕೊಟ್ಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯೋದಿಲ್ಲ. ಸರ್ಕಾರ ಮಾತುಕತೆಗೆ ಸಿದ್ದ. ಚರ್ಚಿಸಿ ನಿರ್ಧಾರ ಮಾಡೋಣ ಬನ್ನಿ ಅಂತ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಖಾಸಗಿ ಶಾಲೆಗಳ ಪ್ರತಿಭಟನೆ ತಂತ್ರಕ್ಕೆ ಸರ್ಕಾರದಿಂದಲೂ ಪ್ರತಿತಂತ್ರ ರೂಪಿಸ್ತಿದೆ. ಶುಲ್ಕ ಕಡಿತ ನಿರ್ಧಾರವನ್ನ ಕಾನೂನು ಅಡಿಯಲ್ಲೇ ಶಿಕ್ಷಣ ಇಲಾಖೆ ಮಾಡಿದೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ ಅಂತ ಹೇಳಿದೆ.
ಖಾಸಗಿ ತಂತ್ರಕ್ಕೆ ಸರ್ಕಾರದ ಪ್ರತಿತಂತ್ರ: ಸಾಂಕ್ರಾಮಿಕ ರೋಗಗಳ ಕಾಯ್ದೆ ನಿಯಮದಡಿ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿ ಶುಲ್ಕ ಕಡಿತ ಮಾಡಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಸರ್ಕಾರ ತನ್ನ ಅಧಿಕಾರ ಬಳಸಿ ಈ ಆದೇಶ ನೀಡಿದೆ. ವಿಶೇಷ ಸಂದರ್ಭಗಳಲ್ಲಿ ಶುಲ್ಕ ನಿರ್ಧಾರ ಅಧಿಕಾರ ಸರ್ಕಾರಕ್ಕಿದೆ, ಇದರ ಅನ್ವಯ ಶುಲ್ಕ ಕಡಿತವಾಗಿದ್ದು, ಈ ಆದೇಶವನ್ನ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಸರ್ಕಾರದ ಆದೇಶ ಪಾಲಿಸದಿದ್ರೆ, ಅಂತಹ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಸರ್ಕಾರದ ಆದೇಶ ಪಾಲನೆ ಮಾಡದಿದ್ರೆ, ಆ ಶಾಲೆಗಳ ಮಾನ್ಯತೆ ರದ್ದು ಮಾಡೋದು. ಶಾಲೆಗೆ ನೀಡಿರುವ ವಿವಿಧ ಸೌಲಭ್ಯ ಕಡಿತ ಮಾಡಲು ಸರ್ಕಾರ ನಿರ್ಧಾರ ಮಾಡಬಹುದು. ಈ ವರ್ಷ ತರಗತಿಯೇ ನಡೆಸಿಲ್ಲ. ಹೀಗಿರುವಾಗ ಹೆಚ್ಚು ಶುಲ್ಕ ಕೇಳುವ ಅಧಿಕಾರ ಖಾಸಗಿ ಶಾಲೆಗಳಿಗಿಲ್ಲ. ಆನ್‍ಲೈನ್ ತರಗತಿ ಇಡೀ ದಿನ ನಡೆದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಶುಲ್ಕ ಡಿಮ್ಯಾಂಡ್ ತಪ್ಪು ಎಂದು ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಬಹುದು.
ರೂಪ್ಸಾ ಬೆಂಬಲ ಇಲ್ಲ: ಇತ್ತ ಹಲವು ಖಾಸಗಿ ಶಾಲೆಗಳ ಸಂಘಟನೆಗಳು ನೀಡಿರೋ ಪ್ರತಿಭಟನೆಗೆ ನಾವು ಬೆಂಬಲ ಕೊಡಲ್ಲ ಅಂತ ರೂಪ್ಸಾ ಸಂಘಟನೆ ಹೇಳಿದೆ. ಸರ್ಕಾರದ ಆದೇಶ ನಾವು ಸ್ವಾಗತ ಮಾಡ್ತೀವಿ. ಫೆಬ್ರವರಿ 23 ರ ಹೋರಾಟಕ್ಕೆ ನಾವು ಬೆಂಬಲ ಕೊಡೊಲ್ಲ ಅಂತ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಸರ್ಕಾರ ಹಾಗೂ ಖಾಸಗಿ ಶಾಲೆಗಳ ಶುಲ್ಕ ಜಟಾಪಟಿಗೆ ಪೋಷಕರು, ವಿದ್ಯಾರ್ಥಿಗಳು ಬಲಿ ಆಗ್ತಿದ್ದಾರೆ. ಸಚಿವ ಸುರೇಶ್ ಕುಮಾರ್ ಮುಕ್ತವಾಗಿ ಚರ್ಚೆಗೆ ಬನ್ನಿ ಅಂತಿದ್ದಾರೆ. ಖಾಸಗಿ ಶಾಲೆಗಳು ಸಚಿವರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ತಾರಾ? ಅಥವಾ ಹೋರಾಟ ಮಾಡ್ತಾರಾ ಕಾದು ನೋಡಬೇಕು.
– ಕೆಲಸ ಕೊಡಿಸುವುದಾಗಿ ನಂಬಿಸಿ ಮಾರಾಟ
– ಕೊನೆಗೆ ಬುದ್ಧಿಮಾಂದ್ಯನೊಂದಿಗೆ ವಿವಾಹ
ಭೋಪಾಲ್: 18 ವರ್ಷದ ಯುವತಿಯನ್ನು 7 ತಿಂಗಳಲ್ಲಿ 7 ಬಾರಿ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಛತ್ತಿಸ್‍ಗಡದ 18 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ 7 ತಿಂಗಳಲ್ಲಿ ಬರೋಬ್ಬರಿ 7 ಬಾರಿ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಘಟನೆ ನಡೆದಿದ್ದು, ಮನನೊಂದ ಯುವತಿ 2019ರ ಸೆಪ್ಟೆಂಬರ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತಿಸ್‍ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯದ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒತ್ತಾಯ ಪೂರ್ವಕವಾಗಿ ಯುವತಿಯನ್ನು ವಿವಾಹವಾಗಿದ್ದ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲೂ ಕುಶ್ವಾಹ್‍ನನ್ನು ಇನ್ನೂ ಪತ್ತೆಹಚ್ಚಬೇಕಿದೆ. ಛತ್ತಿಸ್‍ಗಡದ ಜಶ್ಪುರ ಜಿಲ್ಲೆಯಿಂದ ಯುವತಿಯನ್ನು ಅಪಹರಿಸಿದ ಆರೋಪಿಗಳು, ಆಕೆಯ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಬಳಿಕ ಈ ಭೀಕರ ಮಾನವ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.
ಯುವತಿ ಛತ್ತಿಸ್‍ಗಡದ ಜಶ್ಪುರ ನಿವಾಸಿಯಾಗಿದ್ದು, ತಂದೆಗೆ ಕೃಷಿಯಲ್ಲಿ ಸಹಾಯ ಮಾಡಿಕೊಂಡು ಇದ್ದಳು. ಬಳಿಕ ಸಂಬಂಧಿಕರೊಬ್ಬರು ಕೆಲಸ ಕೊಡಿಸುವುದಾಗಿ ಆಕೆಯನ್ನು ಮಧ್ಯ ಪ್ರದೇಶದ ಛತರ್‍ಪುರಕ್ಕೆ ಕರೆದೊಯ್ದು, ಅಪಹರಿಸಿದ್ದರು. ಅಪಹರಣಕಾರರು ಯುವತಿಯ ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಪೋಷಕರು ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ಹಾಗೂ ಈತನ ಪತ್ನಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೆಲಸ ಕೊಡಿಸುವುದಾಗಿ ಯುವತಿಯನ್ನು ಜಶ್ಪುರದಿಂದ ಛತ್ತರ್‍ಪುರಕ್ಕೆ ಕರೆ ತಂದಿದ್ದೆವು ಎಂದು ಒಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
ಈ ದಂಪತಿ ಯುವತಿಯನ್ನು 20 ಸಾವಿರ ರೂ.ಗೆ ಛತ್ತರ್‍ಪುರದ ಕಲ್ಲು ರೈಕ್ವಾರ್ ಗೆ 7 ತಿಂಗಳ ಹಿಂದೆ ಮಾರಾಟ ಮಾಡಿದ್ದು, ಕೊನೇಯ ವ್ಯಕ್ತಿಯಾಗಿ ಉತ್ತರ ಪ್ರದೇಶದ ಲಲಿತ್‍ಪುರದ ಸಂತೋಷ್ ಕುಶ್ವಾಹ್ 70 ಸಾವಿರ ರೂ.ಗೆ ಯುವತಿಯನ್ನು ಕೊಂಡುಕೊಂಡಿದ್ದ. ಬಳಿಕ ಯುವತಿಯನ್ನು ಸಂತೋಷ್ ಕುಶ್ವಾಹ್ ಮಗ ಬುದ್ಧಿಮಾಂದ್ಯ ಬಬ್ಲೂ ಕುಶ್ವಾಹ್ ಜೊತೆ ವಿವಾಹ ಮಾಡಲಾಗಿದೆ. ಇದರಿಂದ ಬೇಸತ್ತ ಯುವತಿ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಲಲಿತ್‍ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣದ ಕುರಿತು ಛತ್ತರ್‍ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಛತ್ತಿಸ್‍ಗಡ, ಮಧ್ಯ ಪ್ರದೇಶಗಳಲ್ಲಿನ ಬುಡಕಟ್ಟು ಪ್ರದೇಶಗಳಿಂದ ಹೆಚ್ಚಿನ ಹುಡುಗಿಯರನ್ನು ಇತರ ರಾಜ್ಯಗಳಿಗೆ ಆರೋಪಿಗಳು ಕಳ್ಳ ಸಾಗಣೆ ಮಾಡಿರುವ ಕುರಿತು ಪರಿಶೀಲಿಸುತ್ತಿದ್ದಾರೆ.
ತಿರುಪತಿ: ಆಂಧ್ರದ ಮದನಪಲ್ಲಿಯಲ್ಲಿ ಜನವರಿ 24ರಂದು ಹೆತ್ತವರೇ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಬೆಚ್ಚಿಬೀಳುವ ವಿಚಾರಗಳು ಬೆಳಕಿಗೆ ಬರುತ್ತಿವೆ. ತನ್ನನ್ನು ತಾಯಿ ಕಾಳಿಯ ಅಪರಾವತಾರ ಎಂದು ಭಾವಿಸಿಕೊಂಡ ನನ್ನ ಪತ್ನಿ ಪದ್ಮಜ, ದೊಡ್ಡ ಮಗಳು ಅಲೇಖ್ಯಾಳನ್ನು ಕೊಂದ ನಂತರ, ನಾಲಗೆಯನ್ನು ಕಟ್ ಮಾಡಿಕೊಂಡು ತಿಂದುಬಿಟ್ಟಳು’ ಎಂದು ಪುರುಷೋತ್ತಮ ನಾಯ್ಡು ಕಣ್ಣೀರಿಡುತ್ತಾ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ಪೂರ್ವಜನ್ಮದಲ್ಲಿ ನಂಬಿಕೆ ಇರಿಸಿದ್ದ ಅಲೇಖ್ಯಾ, ಅಪ್ಪ ನೀನು ಮಹಾಭಾರತ ನಡೆದಾಗ ಅರ್ಜುನನಾಗಿ ಜನಿಸಿದ್ದೆ. ಕಾಲೇಜಿಗೆ ಹೋಗಿ ಪಾಠ ಮಾಡುವುದು ನಿನ್ನ ವೃತ್ತಿ ಅಲ್ಲ. ಪಾಂಡವರ ಪರವಾಗಿ ಮುಂದೆ ನಿಂತು ನಡೆಸಿದ ಹೋರಾಟ ಸ್ಫೂರ್ತಿಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.
ಕಲಿಯುಗ ಅಂತ್ಯವಾಗಿ ಸತ್ಯ ಯುಗ ಆರಂಭವಾಗಲಿದೆ. ಕೊರೊನಾ ಕೂಡ ಇದರ ಸೂಚಕ ಎಂದು ಮಗಳು ಅಲೇಖ್ಯಾ ಹೇಳುತ್ತಿದ್ದಳು. “ನನ್ನ ಮಗಳ ಮಾತುಗಳೆಲ್ಲಾ ಸತ್ಯ ನಾನು ಓದಿದ ಆಧ್ಯಾತ್ಮಿಕ ಪುಸ್ತಗಳಲ್ಲಿಯೂ ಈ ವಿಷಯಗಳೇ ಇವೆ” ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿದ್ದಾರೆ.
ವೈದ್ಯರ ಮುಂದೆಯೂ ಮಂತ್ರಪಠಣ ಮಾಡುತ್ತಿದ್ದ ಪದ್ಮಜ, “ನನ್ನ ಮಕ್ಕಳು ಮತ್ತೆ ಬದುಕಿ ಬರುತ್ತಾರೆ.. ಮನೆಗೆ ವಾಪಸ್ ಹೋಗಬೇಕು.. ಜೈಲಲ್ಲಿ ನನ್ನ ಜೊತೆ ಇದ್ದ ಶಿವ, ಕೃಷ್ಣ ಇಲ್ಲಿ ಕಾಣುತ್ತಿಲ್ಲ” ಎಂದು ಬಡಬಡಿಸುತ್ತಿದ್ದರು ಎನ್ನಲಾಗಿದೆ.
ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜ ಇಬ್ಬರಿಗೂ ಮಾನಸಿಕ ಸಮಸ್ಯೆಯ ಲಕ್ಷಣಗಳು ಹೆಚ್ಚಿವೆ. ಸದ್ಯದ ಸಂದರ್ಭದಲ್ಲಿ ಜೈಲಿನಂತಹ ವಾತಾವರಣದಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು ಹೀಗಾಗಿ, ವಿಶಾಖಪಟ್ಟಣದ ಸರ್ಕಾರಿ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿರುಪತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇಬ್ಬರನ್ನು ಶುಕ್ರವಾರ ಮದನಪಲ್ಲಿಯ ಸಬ್ ಜೈಲಿನಿಂದ ತಿರುಪತಿಯ ಮೆಂಟಲ್ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು.
ಬೆಂಗಳೂರು: ಫೆಬ್ರವರಿ 1 ರಿಂದ 9 ಮತ್ತು 11 ನೇ ತರಗತಿಗಳನ್ನು ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಅಲ್ಲದೆ 9 ಮತ್ತು 10 ನೇ ತರಗತಿಗೆ ಇಡೀ ದಿನ ತರಗತಿ ನಡೆಸಲು ಅಧಿಕೃತ ಮುದ್ರೆ ಹಾಕಿದೆ. ಜೊತೆಗೆ 6-8 ನೇ ತರಗತಿಗೆ ಈಗ ನಡೆಯುತ್ತಿರುವಂತೆ ವಿದ್ಯಾಗಮ ಮುಂದುವರೆಸಲು ಆದೇಶಿಸಿದೆ.
ತಜ್ಞರು ಮತ್ತು ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಶಾಲೆ ಪ್ರಾರಂಭಕ್ಕೆ ಮಾರ್ಗಸೂಚಿ ಮತ್ತು ಸಲಹಾತ್ಮಕ ವೇಳಾಪಟ್ಟಿಯನ್ನೂ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪ್ರಮುಖ ಮಾರ್ಗಸೂಚಿಗಳು ಹೀಗಿವೆ.
ಮಾರ್ಗಸೂಚಿಗಳು
9 ರಿಂದ 12ನೇ ತರಗತಿಗಳನ್ನು ಇಡೀ ದಿನ ನಡೆಸುವುದು. ತಜ್ಞರು ಮತ್ತು ಆರೋಗ್ಯ ಇಲಾಖೆ ನೀಡಿರುವ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡುವುದು. ಮಕ್ಕಳು ಶಾಲೆಗೆ, ವಿದ್ಯಾಗಮಕ್ಕೆ ಬರಲು ಕಡ್ಡಾಯವಾಗಿ ಪೋಷಕರ ಅನುಮತಿ ಪತ್ರ ತರುವುದು. ಮಗುವಿಗೆ ಯಾವುದೇ ಕೊರೊನಾ ರೋಗ ಲಕ್ಷಣ ಇಲ್ಲದಿರುವ ಕುರಿತು ಪೋಷಕರು ದೃಢೀಕರಣ ಪತ್ರ ನೀಡುವುದು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಅಲ್ಲ. ಶಾಲೆಗೆ ಹಾಜರಾಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ಈಗಿರುವಂತೆ ಆನ್‍ಲೈನ್ ಅಥವಾ ಇತರೇ ಪರ್ಯಾಯ ವ್ಯವಸ್ಥೆಯಲ್ಲಿ ಪಾಠ ಕಲಿಯಬಹುದು. ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರುವುದು.
8, 9, 10 ನೇ ತರಗತಿ ಸಲಹಾತ್ಮಕ ವೇಳಾಪಟ್ಟಿ
ಸೋಮವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30 ಕ್ಕೆ. 8 ನೇ ತರಗತಿ ವಿದ್ಯಾಗಮ- 10 ರಿಂದ 12.30ರವರೆಗೆ.
ಮಂಗಳವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30.
ಬುಧವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30 ಕ್ಕೆ. 8 ನೇ ತರಗತಿ ವಿದ್ಯಾಗಮ- 10 ರಿಂದ 12.30ರವರೆಗೆ.
ಗುರುವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30.
ಶುಕ್ರವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30 ಕ್ಕೆ. 8 ನೇ ತರಗತಿ ವಿದ್ಯಾಗಮ- 10 ರಿಂದ 12.30ರವರೆಗೆ.
ಶನಿವಾರ
9 ಮತ್ತು 10 ನೇ ತರಗತಿ ಬೆಳಗ್ಗೆ 10 ರಿಂದ ಸಂಜೆ 4.30.
ಕೋಲಾರ: ವಿದ್ಯಾವಂತ ಪೋಷಕರು ಮೂಢನಂಬಿಕೆಗೆ ಬಲಿಯಾಗಿ ತಮ್ಮ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಅಲೈಕ್ಯ(27) ಮತ್ತು ಬಿಬಿಎ ಕಲಿಯುತ್ತಿದ್ದ ಸಾಯಿದಿವ್ಯ (22) ಹೆತ್ತವರಿಂದಲೇ ಹತ್ಯೆಯಾದವರು. ಸಾಯಿದಿವ್ಯ ಎ.ಆರ್‍ರೆಹಮಾನ್ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿ ಕೂಡಾ ಆಗಿದ್ದಾರೆ.
ತಂದೆ ಪುರುಷೋತ್ತಮ್ ನಾಯ್ಡು ಸರ್ಕಾರಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ತಾಯಿ ಪದ್ಮಜಾ ಅವರು ಖಾಸಗಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ವಿದ್ಯೆ ಇದ್ದರೂ ಮನೆಯಲ್ಲಿ ನಿತ್ಯ ಮಾಟ-ಮಂತ್ರದಂತಹ ಪೂಜೆಗಳು ನಡೆಯುತ್ತಿದ್ದವಂತೆ. ಇದೀಗ ಎಂದಿನಂತೆ ಪೂಜೆ ಮಾಡುತ್ತಿದ್ದ ಪೋಷಕರು, ಶಿವ ತಮ್ಮ ಮಕ್ಕಳು ಕರೆಯುತ್ತಿದ್ದಾನೆ. ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ.
ಪೋಷಕರಿಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ ಮದನಪಲ್ಲಿ ಡಿವೈಎಸ್ಪಿ ರವಿ ಮನೋಹರಾಚಾರಿ, ಚಿತ್ತೂರು ಎಸ್ಪಿ ಸುನಿಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಪುರುಷೋತ್ತಮ್ ಹಾಗೂ ಪದ್ಮಜಾ ಅವರನ್ನು ಬಂಧಿಸಿಲ್ಲ. ಮಾನಸಿಕ ತಜ್ಞರ ಕೌನ್ಸಿಲಿಂಗ್ ನಂತರ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಯಾದಗಿರಿ: ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಶರಣಬಸವ (23), ಶೇಖಮ್ಮ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಬೆಂಗಳೂರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶರಣಬಸವ ಸಂಕ್ರಾಂತಿ ಹಬ್ಬಕ್ಕೆ ಯಾದಗಿರಿಗೆ ಬಂದಿದ್ದ. ಶೇಖಮ್ಮ ಊರಲ್ಲೇ ಕಾಲೇಜಿಗೆ ಹೋಗುತ್ತಿದ್ದಳು. ಇಬ್ಬರ ಮಧ್ಯೆ ಸುಮಾರು ಎರಡು ವರ್ಷದಿಂದ ಪ್ರೀತಿ ಇತ್ತು. ಆದರೆ ಶರಣಬಸವನ ತಂದೆ ಮೈಲಾರಪ್ಪ ಪ್ರೀತಿ ಪ್ರೇಮ ಸರಿಯಲ್ಲ, ಜೀವನದ ಕಡೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದಾರೆ. ಹೀಗಾಗಿ ಶರಣಬಸವ ಸುಮ್ಮನಾಗಿದ್ದ.
ಇದೀಗ ಬೆಂಗಳೂರಿಂದ ಊರಿಗೆ ಬಂದಿದ್ದ ಶರಣಬಸವ ಶೇಖಮ್ಮಳನ್ನು ಭೇಟಿಯಾಗಲು ಮುಂದಾಗಿದ್ದ. ನಿನ್ನೆ ರಾತ್ರಿ ಗುಂಡಗುರ್ತಿ ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಭೇಟಿಯಾಗುವುದಾಗಿ ಪ್ಲಾನ್ ಮಾಡಿದ್ದ. ಅದರಂತೆ ರಾತ್ರಿ ಅಲ್ಲೇ ಭೇಟಿಯಾಗಿ, ಮದುವೆ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಬಳಿಕ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶಹಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮಟ್ಟಿದೆ.