Tag: Parameshwar Gundkal

  • ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

    ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

    ನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಡಾಲಿ ಧನಂಜಯ (Dhananjay) ಅವರ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದ ಈ ಸಿನಿಮಾ ಹೆಸರು ಕೋಟಿ (Kotee). ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ.

    ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆಯುತ್ತಿರುವುದಂತೂ ಹೌದು.‌

    ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

    ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ (Parameshwar Gundkal) ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್‌ ಚಾನೆಲ್ಲಿನಿಂದ ಹೊರಗೆ ಬಂದಾಗ ತಾನು ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು  ಅವರು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

     

    ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ. ಸಿನಿಮಾ ಶೀರ್ಷಿಕೆ ಅನಾವರಣ ಮಾಡುತ್ತಲೇ ಇದೇ ಶನಿವಾರ ಟೀಸರ್‌ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.‌

  • ಪರಮೇಶ್ವರ ಗುಂಡ್ಕಲ್ ಮೊದಲ ನಿರ್ದೇಶನದ ಚಿತ್ರಕ್ಕೆ ಮೋಕ್ಷಾ ನಾಯಕಿ

    ಪರಮೇಶ್ವರ ಗುಂಡ್ಕಲ್ ಮೊದಲ ನಿರ್ದೇಶನದ ಚಿತ್ರಕ್ಕೆ ಮೋಕ್ಷಾ ನಾಯಕಿ

    ಲರ್ಸ್ ಕನ್ನಡ ವಾಹಿನಿಯಿಂದ ಹೊರ ಬಂದು, ಇದೀಗ ಜಿಯೋ ಸ್ಟುಡಿಯೋಸ್ ಗೆ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಪರಮೇಶ್ವರ ಗುಂಡ್ಕಲ್ (Parameshwar Gundkal) ಚಿತ್ರ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಸದ್ದಿಲ್ಲದೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಚಿತ್ರೀಕರಣವನ್ನೂ ಅವರು ಆರಂಭಿಸಿದ್ದಾರೆ.

    ಪರಮೇಶ್ವರ ಗುಂಡ್ಕಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಆನಂತರ ಆ ಸಿನಿಮಾದ ಹೀರೋ ಯಾರು ಎಂದು ಎಕ್ಸಕ್ಲೂಸಿವ್ ನ್ಯೂಸ್ ನೀಡಿತ್ತು. ಇದೀಗ ಸದ್ದಿಲ್ಲದೇ ಸಿನಿಮಾದ ನಾಯಕಿಯನ್ನೂ ಪರಮ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಮೊದಲ ವಾರದಿಂದ ಶುರುವಾಗುವ ಚಿತ್ರೀಕರಣದಲ್ಲಿ ನಾಯಕಿ ಟೀಮ್ ಸೇರಿಕೊಳ್ಳಲಿದ್ದಾರೆ.  ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ಹೌದು, ಪರಮ್ ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಶುರು ಮಾಡಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಹಲವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಜೂನ್ ಮೊದಲ ವಾರದಿಂದ ಶುರುವಾಗುವ ಎರಡನೇ ಹಂತದ ಶೂಟಿಂಗ್ ನಲ್ಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿರುವ ಮೋಕ್ಷಾ ಕುಶಾಲ್ (Moksha Kushal) ಸೇರ್ಪಡೆಗೊಳ್ಳಲಿದ್ದಾರೆ.

    ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಮೋಕ್ಷಾ, 2ನೇ ಸಿನಿಮಾಗೆ ಧನಂಜಯ್ (Dhananjay) ಜೊತೆ ನಟಿಸಲು ಅವಕಾಶ ಸಿಕ್ಕಿದೆ. ನಟಿಸಿರುವ ಮೊದಲ ಸಿನಿಮಾ ಇನ್ನೂ ರಿಲೀಸ್ ಆಗದೇ ಇದ್ದರೂ ಎರಡನೇ ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಅದೂ ಆಡಿಷನ್ ಮಾಡಿ ಪರಮ್ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  • Exclusive- ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್

    Exclusive- ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್

    ಹೊಸ ಹೊಸ ಯೋಜನೆಗಳನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪರಮ್ ಗುಂಡ್ಕಲ್ (Parameshwar Gundkal) ಕಲರ್ಸ್ ಕನ್ನಡ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ ಭಾವುಕರಾಗಿ ಪರಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಹಿನಿಯ ಉನ್ನತಸ್ಥಾನದಲ್ಲಿ ಇದ್ದವರು ರಾಜೀನಾಮೆ ನೀಡಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಅದಕ್ಕೂ ಉತ್ತರ ಸಿಕ್ಕಿದೆ.

    ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮ್, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇಂದಿನಿಂದ ಜಿಯೋ ಸ್ಟುಡಿಯೋಸ್ (Jio Studios)ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದು, ಹತ್ತಾರ ಕನಸುಗಳೊಂದಿಗೆ ಈ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಾಹಿನಿಯಲ್ಲಿ ಇರುವಾಗಲೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುವ ಕನಸು ಕಂಡಿದ್ದವರು ಪರಮ್. ಹಾಗಾಗಿ ಈ ನೂತನ ಜವಾಬ್ದಾರಿಯನ್ನು ವಯಾಕಾಮ್ 18 ಮುಖ್ಯಸ್ಥರು ಪರಮ್ ಅವರಿಗೆ ನೀಡಿದ್ದಾರೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಹೊಸ ಹೊಸ ಪ್ರಯೋಗಗಳ ಮೂಲಕ ಗೆಲುವು ಕಂಡಿರುವ ಪರಮ್,  ಸದಾ ಹೊಸತನಕ್ಕೆ ತುಡಿಯುವಂಥವರು. ಬೇರುಮಟ್ಟದಿಂದಲೇ ವಾಹಿನಿ ಕಟ್ಟಿದ ಅನುಭವ ಅವರಿಗಿದೆ. ಅತ್ಯುತ್ತಮ ಬರಹಗಾರ ಮತ್ತು ಕನಸುಗಾರ. ಈ ಕಾರಣದಿಂದಾಗಿಯೇ ಪರಮ್ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಜಿಯೋ ಸ್ಟುಡಿಯೋಸ್ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಹೊಸ ದಿಕ್ಕು ತೋರುವ ಯೋಜನೆಯನ್ನೂ ಅವರು ಸಿದ್ಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೇ ಮೊದಲ ಬಾರಿಗೆ ಜಿಯೋ ಸ್ಟುಡಿಯೋಸ್‍  ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಮನರಂಜನೆಯ ನಾನಾ ಮಜಲುಗಳಲ್ಲಿ ಅದು ಕೆಲಸ ಮಾಡಲಿದೆಯಂತೆ. ಈಗಾಗಲೇ ಕನ್ನಡದ ಅನೇಕ ನಟರ, ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನುವ ಸುದ್ದಿಯಿದೆ. ಈ ವರ್ಷದಿಂದಲೇ ಸಿನಿಮಾ ನಿರ್ಮಾಣಕ್ಕೂ ಅದು ಕೈ ಹಾಕಲಿದೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ಕಲರ್ಸ್ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದರೂ ಪರಮ್ ಹಲವು ಕಾರ್ಯಕ್ರಮಗಳಿಗೆ ನಿರ್ದೇಶನ ಮಾಡುತ್ತಿದ್ದರು. ಕನ್ನಡ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿಂದೆ ಇವರೇ ಕೆಲಸ ಮಾಡಿದ್ದರು. ಅಲ್ಲದೇ, ಚಿತ್ರ ನಿರ್ದೇಶನದ ಬಗ್ಗೆಯೂ ಅವರು ಮಾತನಾಡಿದ್ದರು. ಬಹುಶಃ ಜಿಯೋ ಸ್ಟುಡಿಯೋಸ್ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳಬಹುದು.

     

    ಫೇಸ್ ಬುಕ್ ನಲ್ಲಿ ಪರಮ್ ಬರೆದದ್ದೇನು?

    ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.

    ಈ ಟೀವಿಯಂಥ ಎಂಟರ್‍ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್‍ ಟೀವಿ ಬಿಡಿ, ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್‍ ಕಲರ್‍ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್೧೮. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

    ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ಥರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್‍, ಸೂಪರ್‍ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್‍ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು!

    ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ!ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

    ಇವತ್ತು ಬೆಳಿಗ್ಗೆಯಿಂದ ಟೀವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್೧೮. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!

     

  • ಹೊಗಳಿದರೆ ಮಾತು ಬೇರೆ ಟಾಪಿಕ್‌ಗೆ ಹೋಗುತ್ತಿತ್ತು, ಮೂಡಾಫ್ ಆಗಿದ್ದನ್ನು ನೋಡಿಲ್ಲ

    ಹೊಗಳಿದರೆ ಮಾತು ಬೇರೆ ಟಾಪಿಕ್‌ಗೆ ಹೋಗುತ್ತಿತ್ತು, ಮೂಡಾಫ್ ಆಗಿದ್ದನ್ನು ನೋಡಿಲ್ಲ

    – ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು
    – ಅಪ್ಪು ವ್ಯಕ್ವಿತ್ವ, ಸರಳತೆಯ ಬಗ್ಗೆ ಪರಮೇಶ್ವರ್‌ ಗುಂಡ್ಕಲ್‌ ಪೋಸ್ಟ್‌

    ಬೆಂಗಳೂರು: “ಕೋಟ್ಯಧಿಪತಿ ಎಪಿಸೋಡ್ ಶೂಟ್ ಆಗುವಾಗ ಪ್ರತೀ ಪ್ರಶ್ನೆಗೂ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದು ಸ್ವತಃ ಅಪ್ಪು. ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆ ಮನಸ್ಸು. ಮೂರು ಲಕ್ಷ ಇಪ್ಪತ್ತು ಸಾವಿರದ ನಂತರ ಪ್ರತಿ ಪ್ರಶ್ನೆಯೂ ಅವರನ್ನು ಸಿಕ್ಕಾಪಟ್ಟೆ ನರ್ವಸ್ ಮಾಡುತ್ತಿತ್ತು” – ಇದು ಕಲರ್ಸ್‌ ವಾಹಿನಿಯ ಬಿಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಅವರು ಅಪ್ಪು ಬಗ್ಗೆ ಬರೆದ ಸಾಲುಗಳು.

    ಫೇಸ್‌ಬುಕ್‌ನಲ್ಲಿ ಪರಮೇಶ್ವರ್‌ ಗುಂಡ್ಕಲ್‌ ಅವರು ಪುನೀತ್‌ ಅವರ ಜೊತೆಗಿನ ಶೂಟಿಂಗ್‌ ಸಮಯ, ವ್ಯಕ್ವಿತ್ವ, ಸರಳತೆಯ ಬಗ್ಗೆ ಪೋಸ್ಟ್‌ ಮಾಡಿದ್ದು ಅದನ್ನು ಯಥಾವತ್ತಾಗಿ ನೀಡಲಾಗಿದೆ.


    ಪೋಸ್ಟ್‌ನಲ್ಲಿ ಏನಿದೆ?
    ಕೊನೆಯ ಸಲ ಮಾತಾಡಿದ್ದು ಸದಾಶಿವ ನಗರದ ಕಚೇರಿಯಲ್ಲಿ. ಆಫೀಸಿನ ಹೊರಗೆ, ಕೆಳಗಡೆ, ಮೇಲ್ಗಡೆ ಎಲ್ಲಾ ಕಡೆ ಹುಡುಗರು ಓಡಾಡ್ತಾ ಇದ್ದಿದ್ದು ನೋಡಿ ಆಶ್ಚರ್ಯವಾಗಿತ್ತು. “ಅಪ್ಪು ಸರ್‍, ಆಫೀಸೇನು ಇಷ್ಟು ಬ್ಯುಸಿಯಾಗಿದೆ’ ಎಂದು ಕೇಳಿದರೆ ನಕ್ಕರು. ಇದಕ್ಕಿಂತ ನಿಷ್ಕಲ್ಮಶವಾಗಿ ನಗೋದು ಸಾಧ್ಯವೇ ಇಲ್ಲ ಅನ್ನುವ ಹಾಗೆ ಇತ್ತು ಅವರ ನಗು.

    ಮನೆಗೆ ಹೋದರೂ, ಆಫೀಸಿಗೆ ಹೋದರೂ, ಅವರ ಕಾರಾವಾನಲ್ಲಿ ಭೇಟಿಯಾದರೂ ಬಂದೇ ಬರುವ ಫಿಲ್ಟರ್‍ ಕಾಫೀ ಬಂತು. “ಮೂರು ಪ್ರೊಡಕ್ಷನ್ನುಗಳು ನಡೀತೀವೆ. ಅದಕ್ಕೇ ಆಫೀಸು ಇಷ್ಟು ಬ್ಯುಸಿ’ ಎಂದು ಉತ್ಸಾಹದಿಂದ ಮಾತಾಡಿದರು. ಕರ್ನಾಟಕದ ಬಗ್ಗೆ ಸುಮಾರು ದಿನಗಳಿಂದ ಅವರೊಂದು ಡಾಕ್ಯುಮೆಂಟರಿ ಮಾಡುತ್ತಿರುವುದರ ಬಗ್ಗೆ ಮಾತು ಬಂತು. ಇದನ್ನ ಥಿಯೇಟರಲ್ಲಿ ರಿಲೀಸ್ ಮಾಡಿದ್ರೆ ಹೇಗಿರುತ್ತೆ ಅಂತ ಕೇಳುತ್ತಾ ನಾಲ್ಕೈದು ನಿಮಿಷಗಳ ಕ್ಲಿಪ್ಪಿಂಗ್ ತೋರಿಸಿದರು. ರೋಮಾಂಚನ ಆಗುವಂಥ ವಿಷ್ಯುವಲ್ಲುಗಳು ಅದರಲ್ಲಿದ್ದವು. ’ಇದು ಅದ್ಭುತವಾಗಿದೆ” ಎಂದು ಹೇಳಿದಾಗ ಮತ್ತೆ ಅದೇ ನಿಷ್ಕಲ್ಮಷವಾದ ನಗು. ಹೊಗಳಿದರೆ ಸಂಕೋಚದಿಂದ ಅಪ್ಪು ಯಾವಾಗಲೂ ಮಾತು ಬದಲಾಯಿಸಿಬಿಡುತ್ತಿದ್ದರು.

    ಸಣ್ಣ ಸಣ್ಣ ವಿಷಯಗಳಿಗೇ ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದ ದೊಡ್ಡ ಮನಸ್ಸು. ಸೆಟ್ಟಲ್ಲಿ ಅವರು ಟೆನ್ಶನ್ ಮಾಡಿಕೊಂಡಿದ್ದನ್ನು ಅಷ್ಟು ದಿನಗಳಲ್ಲಿ ಒಂದು ಸಲವೂ ನೋಡಿಲ್ಲ. ಚೆನ್ನಾಗಿ ಊಟ ಮಾಡಿ ಅಂತ ಯಾವಾಗಲೂ ಹೇಳ್ತಿದ್ರು. ಸೀಸನ್ನಲ್ಲಿ ಒಂದು ಸಲವಾದ್ರೂ ಚಿತ್ರೀಕರಣ ತಂಡದಲ್ಲಿರೋ ಎಲ್ಲರಿಗೂ ಅವರ ಕಡೆಯಿಂದ ಒಂದು ಊಟ ಬರಲೇಬೇಕು. ಎಲ್ಲರಿಗೂ ಅವರ ಕಡೆಯಿಂದ ಒಂದು ಗಿಫ್ಟ್ ಕೊಡಲೇಬೇಕು. ಇದನ್ನೆಲ್ಲಾ ಅವರು ತುಂಬಾ ಸಹಜವಾಗಿ, ಇದೊಂದು ವಿಷಯವೇ ಅಲ್ಲ ಅನ್ನುವ ಹಾಗೆ ಸದ್ದಿಲ್ಲದೇ ಮಾಡುತ್ತಿದ್ದರು. ಆಡಂಬರವೇ ಇಲ್ಲದೇ ಒಬ್ಬ ಸ್ಟಾರ್‍ ಹೇಗೆ ಆಗೋದಕ್ಕೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರದ ಥರ ಇದ್ದರು ಅಪ್ಪು.

    ಕೋಟ್ಯಧಿಪತಿ ಎಪಿಸೋಡ್ ಶೂಟ್ ಆಗುವಾಗ ಪ್ರತೀ ಪ್ರಶ್ನೆಗೂ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದು ಸ್ವತಃ ಅಪ್ಪು. ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆ ಮನಸ್ಸು. ಮೂರು ಲಕ್ಷ ಇಪ್ಪತ್ತು ಸಾವಿರದ ನಂತರ ಪ್ರತಿ ಪ್ರಶ್ನೆಯೂ ಅವರನ್ನು ಸಿಕ್ಕಾಪಟ್ಟೆ ನರ್ವಸ್ ಮಾಡುತ್ತಿತ್ತು. ತಪ್ಪು ಉತ್ತರ ಕೊಟ್ಟಾಗ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ನಿರಾಶೆ ಆಗುತ್ತಿದ್ದದ್ದು ಅಪ್ಪುಗೆ. ಸರಿ ಉತ್ತರ ಕೊಟ್ಟಾಗ ಅವರ ದನಿಯಲ್ಲಿ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್. ಯಾರಾದ್ರೂ ಕೋಟಿ ಗೆಲ್ಲಬೇಕು ಎಂದು ಸಾವಿರ ಸಲ ಹೇಳುತ್ತಿದ್ದರು. ತಪ್ಪು ಉತ್ತರ ಕೊಟ್ಟು ಯಾರಾದರೂ ದುಡ್ಡು ಸೋತರೆ ಶೂಟಿಂಗ್ ಮುಗಿದ ಮೇಲೆ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಗೆಲ್ಲದ ಎಷ್ಟೋ ಜನರಿಗೆ ತಾವೇ ದುಡ್ಡು ಕೊಡುತ್ತಿದ್ದರು ಮತ್ತು ಅದು ಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದರು. ಎಲ್ಲರಿಗೂ ಸಿಕ್ಕಾಪಟ್ಟೆ ದುಡ್ಡು ಸಿಗಬೇಕು, ಯಶಸ್ಸು ಸಿಗಬೇಕು, ಎಲ್ಲರೂ ದೇಶ ಸುತ್ತಬೇಕು, ಖುಷಿಯಾಗಿರಬೇಕು ಅಂತ ಬಹಳ ಪ್ರಾಮಾಣಿಕವಾಗಿ ಆಸೆ ಪಡುತ್ತಿದ್ದ ವ್ಯಕ್ತಿ.

    ಅಷ್ಟೊಂದು ದಿನಗಳಲ್ಲಿ ಒಂದು ದಿನವೂ ಅವರ ಮೂಡಾಫ್ ಆಗಿದ್ದನ್ನ ನೋಡಲಿಲ್ಲ. ಟೆನ್ಶನ್ ಮಾಡಿಕೊಂಡಿದ್ದನ್ನ ನೋಡಲಿಲ್ಲ. ಬೇರೆಯವರ ಬಗ್ಗೆ ಮಾತಾಡಿದ್ದು ಕೇಳಿಲ್ಲ. ಬೇಡದ್ದನ್ನು ಮಾತಾಡಿದ್ದು ನೆನಪಿಲ್ಲ. ಅವರನ್ನು ಹೊಗಳಿದರೆ ಮಾತು ಬೇರೆ ಟಾಪಿಕ್ಕಿಗೆ ಹೋಗುತ್ತಿತ್ತು. ಬೇರೆ ಬೇರೆ ವೆಬ್ ಸೀಸನ್ನುಗಳ ಬಗ್ಗೆ ಮಾತಾಡುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತಿದ್ದವು. ಅವರು ನೋಡಿದ ಅದ್ಭುತವಾದ ಟೆಕ್ನಿಷಿಯನ್ನುಗಳ ಬಗ್ಗೆ, ಬೇರೆ ಬೇರೆ ದೇಶಗಳ ಜಾಗಗಳ ಬಗ್ಗೆ, ಅಲ್ಲಿ ಓಡಿಸಿದ ಸೈಕಲ್ಲುಗಳ ಬಗ್ಗೆ, ತಿಂಡಿ ಬಗ್ಗೆ ಖುಷಿಯಿಂದ ಮಾತಾಡುತ್ತಿದ್ದರೆ ಅವರಿಗೆ ಸುಸ್ತಾಗುತ್ತಲೇ ಇರಲಿಲ್ಲ.

    ಇಂದು ಮಧ್ಯಾಹ್ನ ಸುದ್ದಿ ಬಂದು ಮನಸ್ಸಿಗೆ ಸಿಕ್ಕಾಪಟ್ಟೆ ಕಳವಳ ಆಗಿ ವಿಕ್ರಮ್ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಅವರು ಅದೇ ನೆಮ್ಮದಿಯಿಂದ ಮಲಗಿದ್ದಾರೆ ಅನಿಸಿತು. ಅವರು ಮಲಗಿದ್ದನ್ನು ಯಾವತ್ತೂ ನೋಡಿರಲಿಲ್ಲ. ಯಾರಿಗೋ ಒಳ್ಳೆಯದಾಗಿದ್ದರ ಬಗ್ಗೆ ಮಾತಾಡಿದರೆ, ಯಾವುದೋ ತಿಂಡಿ ಬಗ್ಗೆ ಮಾತಾಡಿದರೆ ಎದ್ದು ಕುಳಿತುಕೊಳ್ಳುತ್ತಾರೆ ಅನಿಸಿತು. ಯಾರಾದರೂ ಕೋಟಿ ಗೆಲ್ಲಬೇಕು ಎಂದು ಆಸೆಪಟ್ಟು ಮಾತಾಡುತ್ತಾರೆ ಅನಿಸಿತು. ಇತ್ತೀಚೆಗೆ ನೋಡಿದ ಒಂದು ಒಳ್ಳೆಯ ಸಿನಿಮಾ ಅಥವಾ ಕ್ಯಾರೆಕ್ಟರ್‍ ಬಗ್ಗೆ ಚರ್ಚೆ ಮಾಡುತ್ತಾರೆ ಅಂತ ಅನಿಸಿತು. ಇತ್ತೀಚೆಗೆ ಭೇಟಿಯಾದ ಒಳ್ಳೆಯ ಬರಹಗಾರ ಅಥವಾ ಕೇಳಿದ ಸ್ಕ್ರಿಪ್ಟ್ ಬಗ್ಗೆ ಮಾತಾಡುತ್ತಾರೆ ಎಂದು ಸುಮಾರು ನಿಮಿಷ ಕಾದೆ.

    ಮಲಗಿದ್ದ ಅವರು ಏಳಲಿಲ್ಲ
    ಹೊರಗೆ ಅವರ ಸ್ಟಾಫ್ ಬಿಕ್ಕಿಬಿಕ್ಕಿ ಅಳುತ್ತಿರುವುದು ನೋಡಿದಾಗ ಸಂಕಟವಾಯಿತು. ಕರುಳು ಕಿವುಚುವಂತೆ ಸದ್ದು ಮಾಡುತ್ತಾ ಮಿಲ್ಲರ್ಸ್ ರಸ್ತೆಯಲ್ಲಿ ಇವತ್ತು ಹೊರಟ ಆಂಬುಲೆನ್ಸ್ ನೋಡಿದಾಗ ಅದೇ ರಸ್ತೆಯಲ್ಲಿ ಸ್ವತಃ ಅವರೇ ಡ್ರೈವ್ ಮಾಡಿಕೊಂಡು ಬಂದು ನಮ್ಮ ಆಫೀಸಿನ ಮುಂದೆ ಕಾರು ನಿಲ್ಲಿಸಿದ್ದು, ಕೇಳಿದವರಿಗೆಲ್ಲಾ ಸಿಟ್ಟು ಮಾಡಿಕೊಳ್ಳದೇ ಫೋಟೋ ಕೊಟ್ಟಿದ್ದು, ಲಿಫ್ಟಲ್ಲಿ ಸಿಕ್ಕವರ ಕಷ್ಟ ಸುಖ ಕೇಳಿದ್ದು, ಆಫೀಸಿನಲ್ಲಿ ಸಣ್ಣ ಹುಡುಗನ ಬೇಡಿಕೆಗೂ ಸ್ಪಂದಿಸಿದ್ದೆಲ್ಲಾ ನೆನಪಾಗಿ ದೇವರ ಮೇಲೆ ಸಿಟ್ಟು ಬಂತು.

    ತಿರುಪತಿ ಬೆಟ್ಟವನ್ನು ಕೇವಲ 98 ನಿಮಿಷದಲ್ಲಿ ಹತ್ತಿದ್ದರ ಬಗ್ಗೆ ಸಂಭ್ರಮದಿಂದ ಮಾತಾಡುತ್ತಾ ಮುಂದಿನ ಸಲ ಹೋಗುವಾಗ ಖಂಡಿತಾ ಕಾಲ್ ಮಾಡುತ್ತೇನೆ ಎಂದಿದ್ದು ನೆನಪಾಯಿತು. ಪ್ರತಿಕ್ಷಣವನ್ನೂ ಇವರು ಹೇಗೆ ಇಷ್ಟು ಪ್ರೀತಿಯಿಂದ ಬದುಕುತ್ತಾರೆ ಎನ್ನುವುದು ಅಪ್ಪುವನ್ನು ನೋಡಿದ ಎಲ್ಲರಿಗೂ ಕಾಡಿರಬಹುದಾದ ಪ್ರಶ್ನೆ. ಬೇಗ ಹೋಗಬೇಕು ಎಂದು ಗೊತ್ತಿದ್ದರಿಂದಲೇ ಅವರು ಇದ್ದಷ್ಟು ದಿನವನ್ನು ಇಷ್ಟು ಜೀವನಪ್ರೀತಿಯ ಜೊತೆ ಬದುಕಿದರಾ? ಇನ್ನೊಂದಿಷ್ಟು ನಿಮಿಷಗಳು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ. ಮೇಲೆ ಹೋಗಲು ಅಷ್ಟೊಂದು ಅವಸರ ಬೇಕಾಗಿರಲಿಲ್ಲ. ಮತ್ತೆ ಬನ್ನಿ!