Tag: Parambir Singh

  • ಗೃಹ ಸಚಿವರನ್ನು ಸಮರ್ಥಿಸಲು ಹೋಗಿ ಶರದ್‌ ಪವಾರ್‌ ಎಡವಟ್ಟು – ವಿಡಿಯೋ ವೈರಲ್‌

    ಗೃಹ ಸಚಿವರನ್ನು ಸಮರ್ಥಿಸಲು ಹೋಗಿ ಶರದ್‌ ಪವಾರ್‌ ಎಡವಟ್ಟು – ವಿಡಿಯೋ ವೈರಲ್‌

    ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಎನ್ ಸಿಪಿ ನಾಯಕ ಶರದ್ ಪವಾರ್ ಸಮರ್ಥಿಸಿಕೊಳ್ಳುವ ಭರದಲ್ಲಿ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ತೀವ್ರ ಸಂಚಲನ ಮೂಡಿಸಿರುವ ಮುಂಬೈ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಪತ್ರದ ವಿಚಾರಕ್ಕೆ ಇಂದು ಮಾಧ್ಯಮಗಳ ಜೊತೆ ಶರದ್‌ ಪವಾರ್‌ ಮಾತನಾಡಿದರು.

    ಈ ವೇಳೆ ಪತ್ರದಲ್ಲಿರುವ ವಿಷಯ ಸತ್ಯಕ್ಕೆ ದೂರವಾಗಿದೆ. ಪರಮ್‌ ಬಿರ್‌ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯವೇ ಪ್ರಶ್ನಾರ್ಥಕವಾಗಿದೆ. ಮುಂದೆ ಈ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಲಿದೆ ಎಂದು ಹೇಳಿದರು.

    ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‌ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬಿರ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಅನಿಲ್ ದೇಶ್ ಮುಖ್ ಅವರು ಕೊರೊನಾ ಬಂದಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದಿದ್ದಾರೆ.

    ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಅದಕ್ಕೆಲ್ಲಾ ಪ್ರಾಮುಖ್ಯತೆ ನೀಡಬೇಕಾಗಿಲ್ಲ, ಅದು ಪ್ರಮುಖವಾಗುವುದೂ ಇಲ್ಲ, ಪತ್ರದಲ್ಲಿ ಮಾಡಿರುವ ಆರೋಪ ಸಮಯದಲ್ಲಿ ಅನಿಲ್ ದೇಶ್ ಮುಖ್ ಆಸ್ಪತ್ರೆಯಲ್ಲಿದ್ದರು ಎಂದರು.

    ಶರದ್‌ ಪವಾರ್‌ ಈ ಹೇಳಿಕೆ ನೀಡುತ್ತಿದ್ದಂತೆ ವಿಡಿಯೋ ವೈರಲ್‌ ಆಗಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಶರದ್ ಪವಾರ್ ಅವರು ಹೇಳಿದಂತೆ ಅನಿಲ್ ದೇಶ್‌ಮುಖ್ ಫೆಬ್ರವರಿ 15ರಿಂದ 27ರವರೆಗೆ ಆಸ್ಪತ್ರೆಯಲ್ಲಿರಲಿಲ್ಲ. ಹೋಂ ಕ್ವಾರಂಟೈನ್ ನಲ್ಲಿದ್ದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಅನಿಲ್‌ ದೇಶ್‌ಮುಖ್‌ ಮಾಡಿದ್ದ ವಿಡಿಯೋ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

    ಏನಿದು ವಿವಾದ?
    ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್‌ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ದೂರು ನೀಡಿದ್ದರು. ಮುಕೇಶ್‌ ಅಂಬಾನಿ ಮನೆ ಮುಂದೆ ಬಾಂಬ್‌ ಇಟ್ಟ ಅಧಿಕಾರಿಯನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.