Tag: paragliding

  • ಹಿಮಾಚಲ | ಪ್ಯಾರಾಗ್ಲೈಡಿಂಗ್ ವೇಳೆ ಅವಘಡ – ಗುಜರಾತ್‌ನ ಪ್ರವಾಸಿಗ ಸಾವು

    ಹಿಮಾಚಲ | ಪ್ಯಾರಾಗ್ಲೈಡಿಂಗ್ ವೇಳೆ ಅವಘಡ – ಗುಜರಾತ್‌ನ ಪ್ರವಾಸಿಗ ಸಾವು

    ಶಿಮ್ಲಾ: ಪ್ಯಾರಾಗ್ಲೈಡಿಂಗ್ (Paragliding) ವೇಳೆ ನಿಯಂತ್ರಣ ತಪ್ಪಿ 25 ವರ್ಷದ ಪ್ರವಾಸಿಗ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಇಂದ್ರುನಾಗ್‌ನಲ್ಲಿ ನಡೆದಿದೆ.

    ಮೃತ ಯುವಕನನ್ನು ಗುಜರಾತ್ ಮೂಲದ ಸತೀಶ್ ರಾಜೇಶ್ ಭಾಯ್ (25) ಎಂದು ಗುರುತಿಸಲಾಗಿದೆ. ಸತೀಶ್ ಅವರು ಧರ್ಮಶಾಲಾದಲ್ಲಿರುವ ಇಂದ್ರುನಾಗ್ ಪ್ಯಾರಾಗ್ಲೈಡಿಂಗ್ ತಾಣಕ್ಕೆ ಬಂದಿದ್ದರು. ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಪ್ಯಾರಾಚೂಟ್ ಗಾಳಿಯಲ್ಲಿ ಹಾರಲು ವಿಫಲವಾಯಿತು. ಈ ವೇಳೆ ಪ್ಯಾರಾಚೂಟ್ ಕೆಳಕ್ಕೆ ಬಿದ್ದಿದೆ. ಪ್ಯಾರಾಚೂಟ್‌ನಲ್ಲಿದ್ದ ಸತೀಶ್ ಹಾಗೂ ಪೈಲಟ್ ಸೂರಜ್ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್

    ಇಬ್ಬರನ್ನೂ ಧರ್ಮಶಾಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತೀಶ್ ಅವರ ತಲೆ, ಬಾಯಿ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ತಾಂಡಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಭಾರತದಲ್ಲಿ ಹೆಚ್ಚುತ್ತಿರುವ ಪ್ಯಾರಾಗ್ಲೈಡಿಂಗ್ ದುರಂತ – ಸೇಫ್ ಆಗೋದು ಹೇಗೆ?

    ಭಾರತದಲ್ಲಿ ಹೆಚ್ಚುತ್ತಿರುವ ಪ್ಯಾರಾಗ್ಲೈಡಿಂಗ್ ದುರಂತ – ಸೇಫ್ ಆಗೋದು ಹೇಗೆ?

    – ಭಾರತದ ಪ್ರಮುಖ ಪ್ಯಾರಾಗ್ಲೈಡಿಂಗ್‌ ತಾಣಗಳು

    ಭಾರತದಲ್ಲಿ ಪ್ರವಾಸೋದ್ಯಮ (Tourism) ಬೆಳದಂತೆ ದೇಶದ ವಿವಿಧೆಡೆ ಪ್ಯಾರಾಗ್ಲೈಡಿಂಗ್‌ನಂತಹ (Paragliding) ಸಾಹಸಗಳು ಸಹ ಹೆಚ್ಚಾಗುತ್ತಿದೆ. ಇನ್ನೂ ಹಕ್ಕಿಯಂತೆ ಗಾಳಿಯಲ್ಲಿ ಹಾರಬೇಕು ಎಂದು ಬಯಸುವವರಿಗೆ ಪ್ಯಾರಾಗ್ಲೈಡಿಂಗ್ ಉತ್ತಮ. ಸಾಹಸ ಚಟುವಟಿಕೆಯಲ್ಲಿ ಅತಿಯಾದ ಆಸಕ್ತಿ ಹೊಂದಿರುವವರು ಜೀವನದಲ್ಲಿ ಒಮ್ಮೆಯಾದರೂ ಪ್ಯಾರಾಗ್ಲೈಡಿಂಗ್ ಅನುಭವವನ್ನು ಪಡೆಯಬೇಕು ಎಂಬ ಆಸೆಯನ್ನು ಹೊಂದಿಯೇ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಯಾರಾಗ್ಲೈಡಿಂಗ್‌ ದುರಂತಗಳು ಹೆಚ್ಚುತ್ತಿದ್ದು ಇದೆಷ್ಟು ಸೇಫ್‌ ಎಂಬ ಪ್ರಶ್ನೆಯೂ ಎದ್ದಿದೆ.

    ದೇಶದಲ್ಲಿ 2023 ರಲ್ಲಿ 20 ಮಂದಿ ಪ್ಯಾರಾಗ್ಲೈಡಿಂಗ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು 2024ರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನೂ 2025ರ ಆರಂಭದಲ್ಲೇ ಗೋವಾದಲ್ಲಿ (Goa) ಇಬ್ಬರು ಹಾಗೂ ಶಿಮ್ಲಾದಲ್ಲಿ ಒಬ್ಬರು ಸೇರಿದಂತೆ ಮೂರು ಜನರ ಸಾವಾಗಿದೆ. ಇಂತಹ ದುರಂತಗಳಿಗೆ ಕಾರಣ ಹಾಗೂ ದುರಂತಗಳು ಆಗದಂತೆ ತಡೆಯಲು ಕ್ರಮ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಭಾರತದ ಪ್ರಮುಖ ಸುರಕ್ಷಿತ ಪ್ಯಾರಾಗ್ಲೈಡಿಂಗ್‌ ತಾಣಗಳು
    – ಹಿಮಾಚಲ ಪ್ರದೇಶದ ​ಬಿರ್‌ ಬಿಲ್ಲಿಂಗ್‌
    ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್‌ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದೇ ಕರೆಯಲಾಗುತ್ತದೆ. ‌ ಇಲ್ಲಿ ಪ್ಯಾರಾಗ್ಲೈಡಿಂಗ್ ಕೈಗೊಳ್ಳಲು ಬಿರ್ ಲ್ಯಾಂಡಿಂಗ್ ಪಾಯಿಂಟ್‌ಗೆ ಹೋಗಬೇಕಾಗುತ್ತದೆ. ಇದು ಏಷ್ಯಾದ ಅತಿ ಎತ್ತರದ ಪ್ಯಾರಾಗ್ಲೈಡಿಂಗ್ ಪಾಯಿಂಟ್‌ ಆಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಜೂನ್ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
    – ತಮಿಳುನಾಡಿನ ಯಳಗಿರಿ
    ತಮಿಳುನಾಡಿನ ಯಳಗಿರಿಗೆ ವೆಲ್ಲೂರು ಜಿಲ್ಲೆಯ ಅದ್ಭುತವಾದ ಗಿರಿಧಾಮವಾಗಿದೆ. ಇದು ದಕ್ಷಿಣ ಭಾಗದಲ್ಲಿರುವ ಜನಪ್ರಿಯ ಪ್ಯಾರಾಗ್ಲೈಡಿಂಗ್ ತಾಣವಾಗಿದೆ. ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

    – ಹಿಮಾಚಲ ಪ್ರದೇಶದ ​ಮನಾಲಿ
    ಹಿಮಾಚಲ ಪ್ರದೇಶದ (Himachal Pradesh) ಅತ್ಯಂತ ರಮಣೀಯವಾದ ತಾಣವಾದ ಮನಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವುದು ಉತ್ತಮ ಅನುಭವ ನೀಡುತ್ತದೆ ಎಂದು ಭೇಟಿಕೊಟ್ಟವರ ಮಾತು. ಪರ್ವತಗಳ ಮಡಿಲಲ್ಲಿ ಹಿಮಾಲಯ ಶ್ರೇಣಿಗಳ ನಡುವೆ ಮತ್ತು 5000 ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಮಹಾರಾಷ್ಟ್ರದ ​ಕಾಮ್ಶೆತ್
    ಮಹಾರಾಷ್ಟ್ರದ ಕಾಮ್ಶೆತ್ ನಲ್ಲಿ ಪ್ಯಾರಾಗ್ಲೈಡಿಂಗ್ ಪುಣೆಯಿಂದ ಕೇವಲ 45 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ ನಿಂದ ಜುಲೈ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಜಮ್ಮುವಿನ ​ಸನಾಸರ್
    ಈ ತಾಣ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ಹಿಮಾಲಯದ ನಡುವೆ ಪ್ಯಾರಾಗ್ಲೈಡಿಂಗ್ ಮಾಡುವ ರೋಮಾಂಚಕ ಅನುಭವವನ್ನು ಈ ತಾಣ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಲು ಮೇ ಮತ್ತು ಜೂನ್ ತಿಂಗಳ ನಡುವೆ ಹಾಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    – ಕರ್ನಾಟಕದ ನಂದಿಗಿರಿಧಾಮ
    ಇಲ್ಲಿನ (Nandhi Giridhama) ಪ್ರಕೃತಿ ಸೊಬಗು, ಸೌಂದರ್ಯ ನೊಡುವುದೇ ಚೆಂದ. ಅಂತಹದ್ದರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ, ಇಡೀ ನಂದಿಬೆಟ್ಟದ ವಿಹಂಗಮ ನೋಟ ನೋಡುವ ಅವಕಾಶ ಇಲ್ಲಿ ನಮಗೆ ಸಿಗುತ್ತದೆ. ಅ.2024ರಲ್ಲಿ ಇಲ್ಲಿ ಪ್ಯಾರಾಗ್ಲೈಡಿಂಗ್ ಆರಂಭಿಸಲಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.

    ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಕಾರಣಗಳೇನು?
    ಅಗ್ಗದ ಪ್ಯಾರಾಗ್ಲೈಡಿಂಗ್ ಬಳಕೆ ಮಾಡುವುದು. ಹೆಚ್ಚಿನ ಲಾಭವನ್ನು ಮಾಡಲು ಕಂಪನಿಗಳು ಕಡಿಮೆ ಅನುಭವ ಇರುವ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದು ಹಾಗೂ ಹೆಚ್ಚಿನ ಹಣ ಸಂಪಾದನೆಗೆ ಅಸುರಕ್ಷಿತ ವಾತಾವರಣದಲ್ಲಿ ಹಾರಾಟ ಮಾಡುವುದು ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಪ್ರಮುಖ ಕಾರಣವಾಗಿದೆ.

    ಹಾರಾಟದ ಸಮಯದಲ್ಲಿ ತುರ್ತು ಸಂದರ್ಭದಲ್ಲಿ ಬಳಸುವ ಪ್ಯಾರಾಚೂಟ್ ಇಲ್ಲದಿರುವುದು. ಹಣಕ್ಕಾಗಿ ಉತ್ತಮ ತರಬೇತಿ ಮತ್ತು ಜ್ಞಾನವಿಲ್ಲದ ಪೈಲಟ್‌ಗಳು ಪ್ರಯಾಣಿಕರೊಂದಿಗೆ ಚಮತ್ಕಾರಿಕ ತಂತ್ರಗಳನ್ನು ಪ್ರದರ್ಶನಮಾಡುವುದು. ಅಲ್ಲದೇ ಹಾರುವ ಮೊದಲು ಪೈಲಟ್‌ಗಳು, ಪ್ರವಾಸಿಗರು ಆಲ್ಕೋಹಾಲ್ ಅಥವಾ ಡ್ರಗ್ಸ್ ಬಳಸುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ಜವಾಬ್ಧಾರಿ ಇಲ್ಲದ ನಡೆಗಳು ಸಹ ದುರಂತಕ್ಕೆ ಕಾರಣವಾಗಿವೆ.

    ಇತ್ತೀಚೆಗೆ ತಮಿಳುನಾಡಿನ ಪ್ರವಾಸಿಗರೊಬ್ಬರು ಶಿಮ್ಲಾದ ಗಡ್ಸಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಮತ್ತೊಂದು ಪ್ಯಾರಾಗ್ಲೈಡಿಂಗ್‌ಗೆ ಡಿಕ್ಕಿಯಾಗಿ, ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಮತ್ತೊಂದು ಪ್ಯಾರಾಗ್ಲೈಡಿಂಗ್‌ನ ಪೈಲಟ್‌ ಅದನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ್ದರು. ಇದಾದ ಬಳಿಕ ಈ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್‌ನ್ನು ಸ್ಥಗಿತಗೊಳಿಸಲಾಗಿದೆ.

    ಪ್ಯಾರಾಗ್ಲೈಡಿಂಗ್ ಸುರಕ್ಷಿತವಾಗಿರೋದು ಹೇಗೆ?
    ಹವಾಮಾನ ಮುನ್ಸೂಚನೆಗಳನ್ನು ಪರಿಶೀಲಿಸಿ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗಬೇಕು. ಪ್ರಾರಾಗ್ಲೈಂಡಿಂಗ್ ಮಾಡುವವರು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಮೊದಲ ವಿಷಯ ಇದು. ಆಗ ಮಾತ್ರ ಇಂತಹ ದುರಂತದಿಂದ ಪಾರಾಗಲು ಸಾಧ್ಯವಿದೆ.

    ಪೈಲಟ್‌ನ ಅರ್ಹತೆಗಳನ್ನು ಪರಿಶೀಲಿಸಬೇಕು. ಪೈಲಟ್‌ಗಳನ್ನು P1 ರಿಂದ P5ವರೆಗೆ ವರ್ಗೀಕರಿಸಲಾಗಿದೆ. P1 ರಿಂದ P4 ಪ್ರಮಾಣೀಕರಣಗಳು ವೈಯಕ್ತಿಕ, ವಾಣಿಜ್ಯೇತರ ಹಾರಾಟಕ್ಕಾಗಿ, P4-P5-ಮಟ್ಟದ ಪೈಲಟ್‌ಗಳು ವಾಣಿಜ್ಯ ಹಾರಾಟ ನಡೆಸಬಹುದಾಗಿದೆ. P5 ಶ್ರೇಣಿ ಪಡೆಯಲು 100-150 ಗಂಟೆಗಳ ಹಾರಾಟದ ಅನುಭವ ಇದರಬೇಕು. ಅಲ್ಲದೇ ನೀರಿನ ಮೇಲೆ ಲ್ಯಾಂಡ್ ಸೇರಿದಂತೆ ತುರ್ತು ಕಾರ್ಯವಿಧಾನಗಳನ್ನು ಒಳಗೊಂಡಿರುವ ಸಿಮ್ಯುಲೇಶನ್ ಆಫ್ ಇನ್ಸಿಡೆಂಟ್ ಇನ್ ಫ್ಲೈಟ್ (SIV) ಕೋರ್ಸ್ ಪೂರ್ಣಗೊಳಿಸುವ ಅಗತ್ಯವಿದೆ.

    ಉಪಕರಣಗಳ ಗುಣಮಟ್ಟ, ಸ್ಥಿತಿಯನ್ನು ಪರಿಶೀಲಿಸಬೇಕು. ಕ್ಯಾನೋಪಿ, ಹಾರ್ನೆಸ್‌ಗಳು ಮತ್ತು ಮೀಸಲು ಪ್ಯಾರಾಚೂಟ್‌ಗಳು ಸೇರಿದಂತೆ ಎಲ್ಲಾ ಪ್ಯಾರಾಗ್ಲೈಡಿಂಗ್ ಉಪಕರಣಗಳ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಏಕೆಂದರೆ ಸಣ್ಣ ತಾಂತ್ರಿಕ ದೋಷ ಸಹ ದುರಂತಕ್ಕೆ ಕಾರಣವಾಗಬಹುದು.

    ಮೊದಲು ನೆಲದ ಮೇಲೆ ಸ್ವಲ್ಪ ಅಭ್ಯಾಸ ಮಾಡಬೇಕು. ಬಳಿಕ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗ ಬೇಕು. ಮೊದಲ ಪ್ರಯತ್ನದಲ್ಲಿದ್ದವರು ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗೆ ಸಾಕಷ್ಟು ಜಾಗವನ್ನು ಆರಿಸಿಕೊಳ್ಳಬೇಕು ಎಂದು ಪ್ಯಾರಾಗ್ಲೈಡಿಂಗ್‌ನಲ್ಲಿ ಸಾಕಷ್ಟು ಅನುಭವ ಇರುವವರು ಅಭಿಪ್ರಾಯಪಡುತ್ತಾರೆ.

  • ಗೋವಾದಲ್ಲಿ ಪ್ಯಾರಾಗ್ಲೈಡಿಂಗ್‌ ವೇಳೆ ದುರಂತ – ಇಬ್ಬರು ಸಾವು

    ಗೋವಾದಲ್ಲಿ ಪ್ಯಾರಾಗ್ಲೈಡಿಂಗ್‌ ವೇಳೆ ದುರಂತ – ಇಬ್ಬರು ಸಾವು

    ಪಣಜಿ: ಪ್ಯಾರಾಗ್ಲೈಡಿಂಗ್ (Paragliding) ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಪ್ರತಿಯೊಬ್ಬರ ಕನಸು, ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಇಂತಹ ಘಟನೆಯೊಂದು ಉತ್ತರ ಗೋವಾದಲ್ಲಿ (North Goa) ನಡೆದಿದೆ.

    ಪ್ಯಾರಾಗ್ಲೈಡಿಂಗ್ ವೇಳೆ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ, ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್‌ಸ್ಟ್ರಕ್ಟರ್ ಸಾವಗೀಡಾಗಿದ್ದಾರೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಅಪಘಾತದಲ್ಲಿ ಪುಣೆ ನಿವಾಸಿ ಶಿವಾನಿ ಮತ್ತು ಆಕೆಯ ಇನ್‌ಸ್ಟ್ರಕ್ಟರ್ ಸುಮಲ್ ನೇಪಾಲಿ ಸಾವನ್ನಪ್ಪಿದ್ದಾರೆ. ಇನ್ನು, ಪ್ಯಾರಾಗ್ಲೈಡಿಂಗ್‌ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    ದೂರಿನನ್ವಯ ‘ಪ್ಯಾರಾಗ್ಲೈಡರ್’ ಟೇಕಾಫ್ ಆದ ತಕ್ಷಣ ಕಂದಕಕ್ಕೆ ಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಂಪನಿ ಮಾಲೀಕ ಶೇಖರ್ ವಿರುದ್ಧ ಮಾಂಡ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ (Nandi Hills) ಪ್ರಕೃತಿ ಸೊಬಗು, ಸೌಂದರ್ಯ ನೊಡುವುದೇ ಚೆಂದ. ಅಂತಹದ್ದರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ, ಇಡೀ ನಂದಿಬೆಟ್ಟದ ವಿಹಂಗಮ ನೋಟ ನೋಡುವ ಅವಕಾಶ ಸಿಕ್ಕರೆ ಹೇಗಿರಬೇಡ ಹೇಳಿ… ಇಂತಹದೊಂದು ಅವಕಾಶ ಈಗ ಪ್ರವಾಸಿಗರ ಪಾಲಿಗೆ ಸಿಗುತ್ತಿದೆ. ಇದಕ್ಕಾಗಿ ನಂದಿಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್ (Paragliding) ಆರಂಭವಾಗಿದೆ.

    ಹೌದು. ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮದ ಮೇಲೆ ಖಾಸಗಿ ಸಂಸ್ಥೆಯೊಂದು ಪ್ರವಾಸಿಗರಿಗೆ (Tourists) ಪ್ಯಾರಾಗ್ಲೈಂಡಿಂಗ್ ಮಾಡಲು ಅವಕಾಶ ಕಲ್ಪಿಸಿದೆ. ಇದ್ರಿಂದ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಹಕ್ಕಿಯಂತೆ ಆಗಸದಲ್ಲಿ ಹಾರಾಡುವ ಮೂಲಕ ಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್‌

    ಪ್ಯಾರಾಗ್ಲೈಂಡಿಗ್ ಮಾಡುವ ಆಸಕ್ತ ಪ್ರವಾಸಿಗರಿಗೆ ಒಮ್ಮೆಗೆ 15 ನಿಮಿಷಕ್ಕೆ 4,600 ರೂ. ಶುಲ್ಕ ವಿಧಿಸಲಾಗುತ್ತಿದೆ. ಸದ್ಯ ಬೆಂಗಳೂರಿನಿಂದ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಗ್ಲೈಡಿಂಗ್‌ ಮೂಲಕ ಪ್ರಕೃತಿ ಸೊಬಗು ಸವಿಯಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ:  Secunderabad| ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಧ್ವಂಸ – ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

  • ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿಯ ದರ್ಶನಕ್ಕೆ ಪ್ರಾಯೋಗಿಕ ಹಾರಾಟ

    ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿಯ ದರ್ಶನಕ್ಕೆ ಪ್ರಾಯೋಗಿಕ ಹಾರಾಟ

    ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್‌ನಿಂದ ಚಿಕ್ಕಬಳ್ಳಾಪುರದಲ್ಲಿ (Chikkaballapura) ಆದಿಯೋಗಿ (Adiyogi) ಪ್ರತಿಮೆ ಸ್ಥಾಪನೆಯಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರಿನ ಸ್ಕೈಬರ್ಡ್ ಅಡ್ವೆಂಚರಸ್ ಸಂಸ್ಥೆ ಇಶಾ ಫೌಂಡೇಶನ್ ಸಮೀಪ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲು ಸಿದ್ಧತೆ ನಡೆಸಿದೆ.

    ಬುಧವಾರ ಪ್ರಾಯೋಗಿಕವಾಗಿ ಪ್ಯಾರಾಗ್ಲೈಡಿಂಗ್ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದು, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಕಾಣುತ್ತಿದ್ದ ಪ್ಯಾರಾಗ್ಲೈಡಿಂಗ್ (Paragliding) ಸಾಹಸ ಕ್ರೀಡೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿಯೂ ಹಾರಾಟ ಮಾಡಬಹುದಾಗಿದೆ. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನ ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಿ: ಪ್ರತಾಪ್‌ ಸಿಂಹ

    ಪ್ಯಾರಾಗ್ಲೈಡಿಂಗ್ ಮಾಡುವಾಗ ಆದಿಯೋಗಿ ಪ್ರತಿಮೆಯನ್ನು ಮೇಲಿನಿಂದ ಪಕ್ಷಿಯಂತೆ ಹಾರಿ ವೀಕ್ಷಿಸಬಹುದಾಗಿದೆ. ಈಗ ಮೊದಲ ಹಂತದ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.

    ಚಿಕ್ಕಬಳ್ಳಾಪುರ ಸಮೀಪದ ಅವಲಗುರ್ಕಿ ಗ್ರಾಮದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಸ್ಥಾಪಿಸಲಾಗಿದೆ. 2023 ರ ಜನವರಿ ತಿಂಗಳಲ್ಲಿ ಪ್ರತಿಮೆಯನ್ನು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

  • ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಚಿಕ್ಕಬಳ್ಳಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನ ಅಂಗವಾಗಿ ಎಲ್ಲೆಲ್ಲೂ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗಗನಸಖಿ ಗಗನದಿಂದಲೇ ಬೀಜ ಬಿತ್ತನೆ ಮಾಡಿ ಗಮನಸೆಳೆದಿದ್ದಾರೆ.

    ಸಿಲಿಕಾನ್ ಸಿಟಿಯ ಬೆಡಗಿ, ಮಾಜಿ ಗಗನ ಸಖಿ, ಗಗನದಿಂದಲೇ ಪ್ಯಾರಾಗ್ಲೈಡಿಂಗ್ ಮೂಲಕ ಪಂಚಗಿರಿಗಳ ಸಾಲಲ್ಲಿ ಬೀಜದುಂಡೆ ಬಿತ್ತನೆ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿ ಪರಿಸರ ದಿನಾಚರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡಿದ್ದ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಅನಿತಾ ರಾವ್ ಭಾನುವಾರ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳಲ್ಲಿ ಪ್ಯಾರಾಮೋಟರಿಂಗ್ ಮೂಲಕ ಬೀಜದುಂಡನೆ ಬಿತ್ತನೆ ಮಾಡಿದರು. ಇದನ್ನೂ ಓದಿ: ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಹೌದು, ಗಗನಸಖಿಯಾಗಿ ಕೆಲಸ ಮಾಡಿ, ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂದರ್ಭ ಗಗನಸಖಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಬಳಿಕ ಅನಿತಾ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದ ಕಡೆ ಮುಖ ಮಾಡಿದ್ದಾರೆ. ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ನಂದಿಗಿರಿಧಾಮಗಳಲ್ಲಿ ಸುಮಾರು 70,000 ಬೀಜದ ಉಂಡೆಗಳನ್ನು ಹಾಕುವ ಮೂಲಕ ಬರದ ನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಡು ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಮಾತನಾಡಿದ ಅನಿತಾ ರಾವ್, ನಾವು ಪರಿಸರ ಬಳಸಿಕೊಳ್ಳುವುದರ ಜೊತೆಗೆ ಪರಿಸರಕ್ಕೆ ಕೊಡುಗೆಯನ್ನೂ ನೀಡಬೇಕು. ಅತಿ ಕಷ್ಟಕರ ಜಾಗಗಳಲ್ಲಿ ಅಂದರೆ, ಬೆಟ್ಟ ಗುಡ್ಡಗಳಲ್ಲಿ ಯಾರೂ ಹೋಗಿ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಹೀಗಾಗಿ ಪ್ಯಾರಾಮೋಟರ್, ಹೆಲಿಕಾಪ್ಟರ್, ಮೂಲಕ ಸೀಡ್ ಬಾಲ್‌ಗಳನ್ನು ಹಾಕಿ, ಗಿಡ ನೆಡಲು ಸಾಧ್ಯವಿದೆ. ಇಂದು ಪುಣೆಯಿಂದ ಪ್ಯಾರಾಮೋಟರ್ ತರಿಸಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ಅರಣ್ಯ ಇಲಾಖೆ ಸಹಯೋಗದೊಂದಿಗೆ 7 ಬಗೆಯ ಸುಮಾರು 100 ಕೆಜಿ ಬೀಜಗಳನ್ನು ಇಂದು ಬಿತ್ತನೆ ಮಾಡಲಾಗಿದೆ. 10 ವರ್ಷ ಗಗನಸಖಿಯಾಗಿ ಕೆಲಸ ಮಾಡಿರುವ ನಾನು ಈಗ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದರು.

  • ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ವೈದ್ಯ

    ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ವೈದ್ಯ

    ಶಿಮ್ಲಾ: ಹೈದರಾಬಾದ್ ಮೂಲದ ವೈದ್ಯರೊಬ್ಬರು ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಶೇಖರ್ ಮೃತಪಟ್ಟ ವೈದ್ಯ. ಚಂದ್ರಶೇಖರ್ ಹೈದರಾಬಾದ್‍ನ ಇಸಿಐಎಲ್ ಏರಿಯಾದ ಆಸ್ಪತ್ರೆವೊಂದರಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಚಂದ್ರಶೇಖರ್ ಅವರು ಪ್ಯಾರಗ್ಲೈಡಿಂಗ್‍ಗೆ ಹೋಗಿದ್ದರು. ಈ ವೇಳೆ ಪ್ಯಾರಗ್ಲೈಡಿಂಗ್ ಅವಘಡದಿಂದ ಮೃತಪಟ್ಟಿದ್ದಾರೆ.

    ಗುರುವಾರದಿಂದ ನನ್ನ ಸಹೋದರ ಚಂದ್ರಶೇಖರ್ ಕುಲ್ಲು ಮನಾಲಿಯಲ್ಲಿ ರಜೆ ದಿನಗಳನ್ನು ಕಳೆಯಲು ಹೋಗಿದ್ದನು. ಶನಿವಾರ ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ನನ್ನ ಸಹೋದರ ಮೃತಪಟ್ಟಿದ್ದಾನೆ ಎಂಬ ಮಾಹಿತಿ ನಮಗೆ ದೊರೆಯಿತು ಎಂದು ಚಂದ್ರಶೇಖರ್ ಸಹೋದರಿ ಉಮಾ ಮಹೇಶ್ವರಿ ಪ್ರತಿಕ್ರಿಯಿಸಿದ್ದಾರೆ.

    ಈ ಅಪಘಾತದಿಂದ ಕೆಳಗೆ ಬಿದ್ದಾಗ ಚಂದ್ರಶೇಖರ್ ಗೆ ಗಂಭೀರ ಗಾಯಗಾಳಾಗಿದೆ. ಅಲ್ಲದೆ ಚಂದ್ರಶೇಖರ್ ಜೊತೆಯಲ್ಲಿದ್ದ ಪ್ಯಾರಚ್ಯೂಟ್ ಅಪರೇಟರ್ ಗೆ ಫ್ರ್ಯಾಕ್ಚರ್ ಆಗಿದೆ. ಕುಲ್ಲು ಮನಾಲಿಯಲ್ಲಿ ಚಂದ್ರಶೇಖರ್ ಮತ್ತು ಪ್ಯಾರಚ್ಯೂಟ್ ಅಪರೇಟರ್ ಫ್ಲೈಟ್ ಹತ್ತಿದ್ದರು.

    ನನ್ನ ಸಹೋದರ ಚಂದ್ರಶೇಖರ್ ಕೆಳಗೆ ಬಿದ್ದ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದೇವು. ಆದರೆ ಅಷ್ಟರಲ್ಲಿ ವೈದ್ಯರು ಆತನು ಮೃತಪಟ್ಟಿದ್ದಾರೆ ಎಂದು ಹೇಳಿದರು ಎಂದು ಉಮಾ ಮಹೇಶ್ವರಿ ತಿಳಿಸಿದ್ದಾರೆ.

    ಚಂದ್ರಶೇಖರ್ ಮೃತದೇಹವನ್ನು ಹೈದರಾಬಾದ್‍ಗೆ ತರಲು ಸರ್ಕಾರದ ಸಹಾಯ ಕೇಳಿದ್ದೇವೆ. ಅಲ್ಲದೆ ನಮ್ಮ ಇಡೀ ಕುಟುಂಬ ಅವನನ್ನು ಅವಲಂಬಿತವಾಗಿತ್ತು ಎಂದು ಉಮಾ ಮಹೇಶ್ವರಿ ಹೇಳಿದ್ದಾರೆ.

  • ಯಾದಗಿರಿಯಲ್ಲಿ ನಡೀತು ವಿಭಿನ್ನ ರೀತಿಯ ಮತದಾನ ಜಾಗೃತಿ

    ಯಾದಗಿರಿಯಲ್ಲಿ ನಡೀತು ವಿಭಿನ್ನ ರೀತಿಯ ಮತದಾನ ಜಾಗೃತಿ

    ಯಾದಗಿರಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರಿಗೆ ಅರಿವು ಮೂಡಿಸಲು ಇಂದು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲಾಯಿತು.

    ಯಾದಗಿರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ಯಾರಾಗ್ಲೈಡಿಂಗ್ ಮೂಲಕ ಸಂಚರಿಸಿ ಪ್ರಚಾರ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಪ್ಯಾರಾಗ್ಲೈಡಿಂಗ್ ಗೆ ಚಾಲನೆ ನೀಡಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಏಪ್ರಿಲ್ 23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತಾದನದಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರನೂ ಕೂಡ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಇಂದು ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು. ವಿಶೇಷವಾಗಿ ಈ ಬಾರಿ ವಿಕಲಚೇತನರೆಲ್ಲರೂ ಕೂಡ ಮತದಾನದಲ್ಲಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಸರಿಸುಮಾರು 8 ಸಾವಿರದ 900 ಮಂದಿ ವಿಕಲಚೇತನರನ್ನು ಈಗಾಗಲೇ ಗುರುತಿಸಿದ್ದೇವೆ. ಅವರೆಲ್ಲರಿಗೂ ವಿಶೇಷ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ಯಾರಾಗ್ಲೈಡಿಂಗ್ ನಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಓ ಕವಿತಾ ಮನ್ನಿಕೇರಿ ಹಾಗೂ ಎಸ್ ಪಿ ಋಷಿಕೇಸ್ ಭಗವಾನ್ ಸಂಚಾರ ಮಾಡಿದ್ರು. ಇದು ನಗರದೆಲ್ಲೆಡೆ ಸುಮಾರು 200 ಮೀಟರ್ ಎತ್ತರದಲ್ಲಿ ಸಂಚಾರ ಮಾಡಿತು. ಒಟ್ಟಿನಲ್ಲಿ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ `ನಿಮ್ಮ ಮತ ನಿಮ್ಮ ಹಕ್ಕು. ತಪ್ಪದೆ ನೈತಿಕವಾಗಿ ಹಕ್ಕು ಚಲಾಯಿಸಿ’ ಎನ್ನುವ ಜಾಗೃತಿ ಬರಹದೊಂದಿಗೆ ಪ್ರಚಾರ ಕೈಗೊಳ್ಳಲಾಯಿತು.