Tag: paracetamol

  • ಕೋವ್ಯಾಕ್ಸಿನ್‌ ಲಸಿಕೆ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸಿಟಮಲ್‌ ಮಾತ್ರೆ ನೀಡಲ್ಲ: ಭಾರತ್‌ ಬಯೋಟೆಕ್‌

    ಕೋವ್ಯಾಕ್ಸಿನ್‌ ಲಸಿಕೆ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸಿಟಮಲ್‌ ಮಾತ್ರೆ ನೀಡಲ್ಲ: ಭಾರತ್‌ ಬಯೋಟೆಕ್‌

    ನವದೆಹಲಿ: ಕೋವಿಡ್‌-19 ವಿರುದ್ಧದ ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರ ಮಕ್ಕಳಿಗೆ ನೋವು ನಿವಾರಕ ಅಥವಾ ಪ್ಯಾರಸಿಟಮಲ್‌ ಮಾತ್ರೆಯನ್ನು ನೀಡುವುದಿಲ್ಲ ಎಂದು ಲಸಿಕಾ ತಯಾರಿಕೆ ಕಂಪನಿ ಭಾರತ್‌ ಬಯೋಟೆಕ್‌ ಬುಧವಾರ ತಿಳಿಸಿದೆ.

    ಕೆಲವು ರೋಗನಿರೋಧಕ ಕೇಂದ್ರಗಳು, ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಿದ ನಂತರ ಜೊತೆಯಲ್ಲಿ 500 ಮಿ.ಗ್ರಾಂ. ಪ್ಯಾರಸಿಟಮಲ್‌ ಮಾತ್ರೆಯನ್ನು ನೀಡುವಂತೆ ಶಿಫಾರಸು ಮಾಡಿವೆ. ಆದರೆ ಅಂತಹ ಕ್ರಮ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

    ಈ ಕುರಿತು ಟ್ವೀಟ್‌ ಮಾಡಿರುವ ಭಾರತ್‌ ಬಯೋಟೆಕ್‌, ಕೋವಿಡ್‌ ವಿರುದ್ಧದ ಇತರೆ ಲಸಿಕೆಗಳನ್ನು ಪಡೆದರೆ ಪ್ಯಾರಸಿಟಮಲ್‌ ಮಾತ್ರೆ ಅಗತ್ಯವಿರಬಹುದು. ಆದರೆ ಕೋವ್ಯಾಕ್ಸಿನ್‌ ಪಡೆದವರಿಗೆ ಮಾತ್ರೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    30,000 ಮಂದಿಯನ್ನು ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಲಸಿಕೆ ಪಡೆದ ನಂತರ ಶೇ.10-20 ರಷ್ಟು ಮಾತ್ರ ದೇಹದಲ್ಲಿ ಅಡ್ಡಪರಿಣಾಮ ಬೀರಬಹುದು. ಅದು ಕೂಡ ಸೌಮ್ಯವಾಗಿದ್ದು, ಒಂದೆರಡು ದಿನದಲ್ಲಿ ಸರಿಯಾಗುತ್ತದೆ. ಅದಕ್ಕಾಗಿ ಔಷಧದ ಅಗತ್ಯವಿಲ್ಲ. ಒಂದು ವೇಳೆ ವೈದ್ಯರನ್ನು ಸಂಪರ್ಕಿಸುವ ಸಂದರ್ಭ ಬಂದರೆ ಮಾತ್ರ ಅವರು ಔಷಧ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ ಎಂದು ಹೇಳಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 4,246 ಪಾಸಿಟಿವ್, ಇಬ್ಬರು ಬಲಿ

    12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಬಹುದು ಎಂದು ಕಳೆದ ತಿಂಗಳು ಡಿಸಿಜಿಐ ಅನುಮೋದನೆ ನೀಡಿತ್ತು. ಇದಾದ ಬಳಿಕೆ ಪ್ರಧಾನಿ ನರೇಂದ್ರ ಮೋದಿ ಅವರು, ಜ.3ರಿಂದ 15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ವಿರುದ್ಧದ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಈವರೆಗೆ 85 ಲಕ್ಷ ಮಕ್ಕಳು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

  • ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ

    ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ

    ನವದೆಹಲಿ: 40 ಮಂದಿ ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ  ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆಯನ್ನು ಕೊಟ್ಟು  ಸೋಂಕಿಗೆ ಚಿಕಿತ್ಸೆ ನೀಡಲಾಗಿದೆ ಎಂದು ದೆಹಲಿಯ ವೈದ್ಯರೊಬ್ಬರು ಹೇಳಿದ್ದಾರೆ.

    ಲೋಕ್ ನಾಯಕ ಜಯಪ್ರಕಾಶ್ ಆಸ್ಪತ್ರೆ, ದೆಹಲಿಯಲ್ಲಿನ ದೊಡ್ಡ ಆಸ್ಪತ್ರೆಯಾಗಿದ್ದು, ಈವರೆಗೂ 40 ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಈ ಪೈಕಿ 19 ರೋಗಿಗಳು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓಮಿಕ್ರಾನ್ ರೋಗಿಗಳಿಗೆ ಇಲ್ಲಿಯವರೆಗೂ ಮಲ್ಟಿ ವಿಟಮಿನ್ಸ್ ಮತ್ತು ಪ್ಯಾರಾಸಿಟಮಾಲ್ ಔಷಧ ಮಾತ್ರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    OMICRON Karnataka

    ಚಿಕಿತ್ಸೆ ಪಡೆಯುತ್ತಿರುವ ಸುಮಾರು 90 ರೋಗಿಗಳಿಗೆ ಗಂಟಲು ಕೆರೆತ, ಸಣ್ಣ ಪ್ರಮಾಣದ ಜ್ವರ, ಮೈಕೈ ನೋವಿನಂತಹ ಸಣ್ಣ ಲಕ್ಷಣಗಳಿವೆ. ಈ ರೋಗಿಗಳಿಗೆ ಮಲ್ಟಿ ವಿಟಮಿನ್ಸ್, ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಔಷಧವಾಗಿ ನೀಡಲಾಗುತ್ತಿದೆ. ಬೇರೆ ಯಾವುದೇ ಔಷಧಿಯನ್ನು ಅವರಿಗೆ ನೀಡಬೇಕು ಅನಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಬಹುತೇಕ ರೋಗಿಗಳು ವಿದೇಶಗಳಿಂದ ಆಗಮಿಸಿದವರಾಗಿದ್ದು, ಏರ್‌ಪೋರ್ಟ್‌ನಲ್ಲಿ ಪರೀಕ್ಷಿಸಿದಾಗ ಕೋವಿಡ್ -19 ಪಾಸಿಟಿವ್ ಕಂಡುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೆಹಲಿಯಲ್ಲಿ ಇಲ್ಲಿಯವರೆಗೂ 67 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

  • ಲ್ಯಾಂಡಿಂಗ್ ಆಗೋ 1 ಗಂಟೆ ಮೊದಲು ಮಾತ್ರೆ ಸೇವನೆ – ಪರೀಕ್ಷೆಯಿಂದ ಪಾಸ್

    ಲ್ಯಾಂಡಿಂಗ್ ಆಗೋ 1 ಗಂಟೆ ಮೊದಲು ಮಾತ್ರೆ ಸೇವನೆ – ಪರೀಕ್ಷೆಯಿಂದ ಪಾಸ್

    – ಕೆಲ ವಿದ್ಯಾವಂತ ವಿದ್ಯಾರ್ಥಿಗಳಿಂದಲೇ ದೇಶಕ್ಕೆ ಕಂಟಕ
    – ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್

    ಹೈದರಾಬಾದ್: ವಿದೇಶದಿಂದ ಬರುತ್ತಿರುವ ಕೆಲ ಭಾರತೀಯರು ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸಿರುವ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ.

    ವಾರಂಗಲ್ ಮೂಲದ ವಕೀಲ ಕೊರೊನಾ ಶಂಕಿತ ಅಖಿಲ್ ಎಂಬವರು ಮಾರ್ಚ್ 11 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದು, ಈ ಶಾಕಿಂಗ್ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿದ್ದ ಹಲವು ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳ ಪೈಕಿ ಕೆಲವರು ವಿಮಾನ ಲ್ಯಾಂಡಿಂಗ್ ಆಗುವ ಒಂದು ಗಂಟೆಗೂ ಮೊದಲು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸಿದ್ದರು ಎಂಬುದಾಗಿ ಹೇಳಿದ್ದಾರೆ.

    ಇಂಗ್ಲೆಂಡಿನ ಹಲವು ವಿಶ್ವವಿದ್ಯಾಲಯದಲ್ಲಿ ಭಾರತದ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡುತ್ತಿದ್ದಾರೆ. ಪ್ಯಾರಸಿಟಮೋಲ್ ಮಾತ್ರೆ ಸೇವಿಸುವದರ ಪರಿಣಾಮ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹೀಗಾಗಿ ಥರ್ಮಲ್ ಸ್ಕ್ಯಾನರ್ ನಲ್ಲಿ ಫಲಿತಾಂಶ ಸರಿಯಾಗಿ ಲಭ್ಯವಾಗದ ಪರಿಣಾಮ ಇವರೆಲ್ಲ ಪಾಸ್ ಆಗುತ್ತಿದ್ದಾರೆ. 10 ಮಂದಿ ಪ್ಯಾರಸಿಟಮೋಲ್ ಮಾತ್ರೆ ಸೇವಿಸಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಭಾರತಕ್ಕೆ ಮರಳಿ 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ ಇರಬೇಕಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳು ಸ್ವಯಂ ದೃಢೀಕರಣ ನೀಡುವಾಗ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ನಿಮ್ಮ ಮನೆಯ ಪಕ್ಕದಲ್ಲೇ ಸುತ್ತಾಡುತ್ತಿರಬಹುದು. ಈ ವಿದ್ಯಾರ್ಥಿಗಳ ತಪ್ಪಿನಿಂದಾಗಿ ಮುಂದೆ ದೇಶಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಖಿಲ್ ಈಗ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಲ್ಯಾಂಡ್ ಆದ ಬಳಿಕ ನಾನು ಯಾರನ್ನು ಸಂಪರ್ಕಿಸಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದರು.

    ಭಾರತಕ್ಕೆ ಅತಿ ಹೆಚ್ಚು ಕೊರೊನಾ ಪೀಡಿತರು ವಿದೇಶದಿಂದ ಮರಳಿದವರೇ ಆಗಿದ್ದಾರೆ. ಹೀಗಿರುವಾಗ ವಿಮಾನ ನಿಲ್ದಾಣಗಳಲ್ಲಿ ಕ್ರಮಗಳನ್ನು ಕೈಗೊಂಡರೂ ಪರೀಕ್ಷೆಯಿಂದ ಪಾರಾಗಲು ಈ ಅಪಾಯಕಾರಿ ತಂತ್ರ ಅನುಸರಿಸಿದ್ದು ಈಗ ಸರ್ಕಾರಗಳಿಗೆ ತಲೆನೋವು ತಂದಿದೆ.

    ಕೊರನಾ ಈಗ ವ್ಯಕ್ತಿಗೆ ಬಂದು, ಆ ವ್ಯಕ್ತಿಯಿಂದ ಮತ್ತೊಬ್ಬರಿಗೆ ಬರುವ ಎರಡನೇ ಹಂತ ದಾಟಿ ಆಗಿದ್ದು ಮೂರನೇ ಹಂತದಲ್ಲಿದೆ. ಎರಡನೇ ವ್ಯಕ್ತಿಯಿಂದ ಮೂರನೇ ವ್ಯಕ್ತಿಗೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ.

  • ಪ್ಯಾರಾಸಿಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ ಕೊರೊನಾ ಗುಣಪಡಿಸಿಕೊಂಡ ವೈದ್ಯೆ

    ಪ್ಯಾರಾಸಿಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ ಕೊರೊನಾ ಗುಣಪಡಿಸಿಕೊಂಡ ವೈದ್ಯೆ

    ಲಂಡನ್: ಪ್ಯಾರಾಸಿಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸಿ ನನಗೆ ತಗುಲಿದ್ದ ಕೊರೊನಾ ವೈರಸ್ ಸೋಂಕನ್ನು ಗುಣಪಡಿಸಿಕೊಂಡಿದ್ದೇನೆ ಎಂದು ಬ್ರಿಟಿಷ್ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.

    ಲಂಡನ್ ಮೂಲದ ವೈದ್ಯೆ ಕ್ಲೇರಾ ಗೆರಡಾ(60) ಕೊರೊನಾ ಗೆದ್ದುಬಂದಿದ್ದಾರೆ. ಕ್ಲೇರಾ ಅವರು ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿದ್ದು, ಇತ್ತೀಚಿಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ತೆರಳಿದ್ದಾಗ ಅವರಿಗೆ ಕೊರೊನಾ ಸೋಂಕು ತಟ್ಟಿತ್ತು ಎನ್ನಲಾಗಿದೆ. ಮಹಾಮಾರಿ ಕೊರೊನಾದಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ತಾವೇ ತಮಗೆ ಚಿಕಿತ್ಸೆ ಕೊಟ್ಟುಕೊಂಡು ಮಾರಕ ಸೋಂಕನ್ನು ಮೆಟ್ಟಿನಿಂತಿದ್ದಾರೆ. ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ನ್ಯೂಯಾರ್ಕ್ ಸಮ್ಮೇಳನದಿಂದ ವಾಪಸ್ಸಾದ ಬಳಿಕ ವೈದ್ಯೆಯಲ್ಲಿ ಜ್ವರ, ಚಳಿ, ಗಂಟಲು ನೋವು, ತಲೆತಿರುಗುವಿಕೆ, ಕೀಲು ನೋವು, ತಲೆನೋವು, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ತಪಾಸಣೆ ನಡೆಸಿದಾಗ ವೈದ್ಯೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯೆ, ಸೋಂಕು ತಟ್ಟಿದ ಬಳಿಕ ನಾನು ಸಂಪೂರ್ಣ ನಿಶಕ್ತಳಾಗಿದ್ದೆ. ನನಗೆ 50 ಪೌಂಡ್ ಬಾರವನ್ನು ಕೂಡ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಆದರೆ ಇದಕ್ಕೆ ನಾನು ಹೆದರಲಿಲ್ಲ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಏನು ಮಾಡಬೇಕು ಯೋಚಿಸಿದೆ. ಆ ಬಳಿಕ ನಿರಂತರವಾಗಿ ನಾನು ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿದೆ, ಸೋಂಕು ಗುಣವಾಗುತ್ತಾ ಬಂತು. ಈಗ ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜನರು ಯಾಕೆ ಚಿಂತೆ ಮಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತೆ. ಆದರೆ ಬಹುತೇಕ ಮಂದಿ ನನ್ನಂತೆಯೆ ಸೋಂಕಿನಿಂದ ಗುಣವಾಗಿದ್ದಾರೆ. ಇದು ಮಾರಣಾಂತಿಕ ಕಾಯಿಲೆ ಅಲ್ಲ, ಧೈರ್ಯದಿಂದಿರಿ ಎಂದು ವೈದ್ಯೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ ಮಾರ್ಗ ಇಡೀ ಜಗತ್ತಿಗೇ ಕಾಣದಂತಾಗಿದೆ. ಹಾಗಾಗಿಯೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ನಿನ್ನೆ ಮೊನ್ನೆವರೆಗೂ 5 ಸಾವಿರದ ಗಡಿ ದಾಟಿದ್ದ ಸೋಂಕಿತರ ಸಾವಿನ ಸಂಖ್ಯೆ. ಈಗ 8 ಸಾವಿರದತ್ತ ಮುನ್ನುಗ್ಗುತ್ತಿದೆ. ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.