Tag: Papua New Guinea

  • ರಿಕ್ಕಿಕೇಜ್ ಸಂಗೀತ ನಿರ್ದೇಶನದ ಚಿತ್ರ ಆಸ್ಕರ್‌ಗೆ ಎಂಟ್ರಿ

    ರಿಕ್ಕಿಕೇಜ್ ಸಂಗೀತ ನಿರ್ದೇಶನದ ಚಿತ್ರ ಆಸ್ಕರ್‌ಗೆ ಎಂಟ್ರಿ

    ಮೂರು ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ (Ricky Kej) ಅವರ ಸಂಗೀತ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಈ ಖುಷಿಯನ್ನ ಖುದ್ದು ರಿಕ್ಕಿ ಕೇಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    “ಪಾಪಾ ಬುಕಾ” ಇದು ಪಪುವಾ ನ್ಯೂಗಿನಿಯಾದ ಮೊದಲ ಅಧಿಕೃತ ಆಸ್ಕರ್ ಪ್ರವೇಶ ಪಡೆದ ಚಿತ್ರವಾಗಿದೆ. ಈ ಚಿತ್ರಕ್ಕೆ ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಡಾ.ಬಿಜು ನಿರ್ದೇಶಿಸಿದ `ಪಾಪಾ ಬುಕಾ’ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ಆಯ್ಕೆಯಾಗಿದೆ.ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್

    ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತ ಹಾಗೂ ಪಪುವಾ ನ್ಯೂಗಿನಿಯಾ ಮಧ್ಯದ ತ್ಯಾಗ ಮತ್ತು ಮಾನವೀಯತೆಯನ್ನು ವೃದ್ಧ ಯೋಧ ಪಾಪಾ ಬುಕಾ ಎಂಬ ಹೆಸರಿನ ವ್ಯಕ್ತಿ ಹೇಳುವ ಕಥೆ ಇದಾಗಿದೆ. ಇಬ್ಬರು ಭಾರತೀಯ ಇತಿಹಾಸಕಾರರಿಗೆ ಪಾಪಾ ಬುಕಾ ಮಾರ್ಗದರ್ಶನ ನೀಡುವ ಕಥೆಯನ್ನು ಹೊಂದಿದೆ. ಹೀಗಾಗಿ ಇದು ಭಾರತಕ್ಕೂ ಕನೆಕ್ಟ್ ಆಗುತ್ತದೆ. ಹಿಂದಿ, ಇಂಗ್ಲೀಷ್‌ನಲ್ಲಿ ಚಿತ್ರ ತಯಾರಾಗಿದೆ.

    ಕರ್ನಾಟಕದ ಮೂಲದ ರಿಕ್ಕಿ ಕೇಜ್ ತಮ್ಮ ಚಿತ್ರ ಅಧಿಕೃತವಾಗಿ ಆಸ್ಕರ್ ಪ್ರವೇಶ ಪಡೆದಿರುವ ವಿಚಾರ ಹಂಚಿಕೊಂಡು ಹೆಮ್ಮೆಪಟ್ಟಿದ್ದಾರೆ. “ಇದು ಆಸ್ಕರ್ ಸ್ಪರ್ಧೆಯಲ್ಲಿ ಮೊದಲ ಹೆಜ್ಜೆ, ಆದರೆ ನನಗೆ 3000 ವರ್ಷಗಳ ಹಿಂದಿನ ಇತಿಹಾಸದಲ್ಲಿ ಬೇರೂರಿರುವ ಸಂಗೀತವನ್ನು ರಚಿಸುವುದರಲ್ಲಿ ಸಂತೋಷವಿದೆ” ಎಂದು ತಮಗಾದ ಸಂತಸ ಹಂಚಿಕೊಂಡಿದ್ದಾರೆ ಪದ್ಮಶ್ರೀ ಪುರಸ್ಕೃತ ಸಂಗೀತ ನಿರ್ದೇಶಕ.ಇದನ್ನೂ ಓದಿ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್

  • 4 ಓವರ್‌, 4 ಮೇಡನ್‌, 3 ವಿಕೆಟ್‌ – ವಿಶ್ವದಾಖಲೆ ಬರೆದ ಲಾಕಿ ಫರ್ಗ್ಯೂಸನ್

    4 ಓವರ್‌, 4 ಮೇಡನ್‌, 3 ವಿಕೆಟ್‌ – ವಿಶ್ವದಾಖಲೆ ಬರೆದ ಲಾಕಿ ಫರ್ಗ್ಯೂಸನ್

    ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ (T20) ಒಂದು ಓವರ್‌ ಮೇಡನ್‌ ಮಾಡುವುದು ಅಪರೂಪ. ಹೀಗಿರುವಾಗ ಎಲ್ಲಾ 4 ಓವರ್‌ ಮೇಡನ್‌ ಮಾಡಿ 3 ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ನ (New Zealand) ವೇಗದ ಬೌಲರ್ ಲಾಕಿ ಫರ್ಗ್ಯೂಸನ್ (Lockie Ferguson) ನೂತನ ದಾಖಲೆ ಬರೆದಿದ್ದಾರೆ.

    ಸಿ’ ಗುಂಪಿನ ಲೀಗ್‌ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ (Papua New Guinea) ವಿರುದ್ಧ ಫರ್ಗ್ಯೂಸನ್ ಈ ವಿಶಿಷ್ಟ ದಾಖಲೆ ಬರೆದಿದ್ದಾರೆ. 4 ಓವರ್‌ ಎಸೆದು ಯಾವುದೇ ರನ್‌ ಬಿಟ್ಟು ಕೊಡದೇ 3 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ಎಲ್ಲಾ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.

     

    ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ ಅವರು ಪನಮಾ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿ 2 ವಿಕೆಟ್‌ ಪಡೆದಿದ್ದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಪುವಾ ನ್ಯೂಗಿನಿ 78 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 12.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 79 ರನ್‌ ಹೊಡೆದು ಜಯ ಸಾಧಿಸಿತು. ಏಳು ವಿಕೆಟ್ ಅಂತದ ಜಯ ಗಳಿಸಿದರೂ ನ್ಯೂಜಿಲೆಂಡ್ ತನ್ನ ಟಿ20 ಕ್ರಿಕೆಟ್‌ ಅಭಿಯಾನ ಕೊನೆಗೊಳಿಸಿತು. ಇದನ್ನೂ ಓದಿ: ಸೂಪರ್-8ಗೆ ಲಗ್ಗೆಯಿಟ್ಟ ತಂಡಗಳು ಯಾವುವು?

    ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ತಲಾ 6 ಅಂಕ ಪಡೆದು ಸೂಪರ್‌ 8 ಪ್ರವೇಶಿಸಿದೆ. ನ್ಯೂಜಿಲೆಂಡ್‌ 2 ಪಂದ್ಯ ಗೆದ್ದು 4 ಅಂಕ ಪಡೆದ ಕಾರಣ ಟೂರ್ನಿಯಿಂದ ನಿರ್ಗಮಿಸಿದೆ.

    ಈ ಪಂದ್ಯದ ಮೂಲಕ ಟ್ರೆಂಟ್‌ ಬೌಲ್ಟ್‌ (Trent Boult) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ತನ್ನ ಕೊನೆಯ ಟ್ವೆಂಟಿ2- ವಿಶ್ವಕಪ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 4 ಓವರ್‌ ಎಸೆದು 14 ರನ್ ತೆತ್ತು ಎರಡು ವಿಕೆಟ್ ಗಳಿಸಿದರು.

     

  • ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

    ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

    – ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಸ್ಫೋಟಕ ಮಾಹಿತಿ

    ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಸಂಭವಿಸಿದ ಭಾರೀ ಭೂಕುಸಿತದಿಂದ 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿರಬಹುದು ಎಂದು ಇಲ್ಲಿನ ಸರ್ಕಾರ ವಿಶ್ವಸಂಸ್ಥೆಗೆ (UN) ತಿಳಿಸಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವು (National Disaster Centre) ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಸುಮಾರು 670 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಆದ್ರೆ ಸೋಮವಾರ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿರಬಹುದು ಎಂಬ ಅಂಶವನ್ನು ಉಲ್ಲೇಖಿಸಿದೆ.

    ಅಲ್ಲದೇ ಕಟ್ಟಡಗಳು ನಾಶವಾಗಿವೆ, ಆಹಾರ ಬೆಳೆಗಳು ನಾಶವಾಗಿದ್ದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಭೂಕುಸಿತ ಉಂಟಾದ ಪ್ರದೇಶದಲ್ಲಿ ಸುಮಾರು 4,000 ಜನ ವಾಸಿಸುತ್ತಿದ್ದರು. ಈ ಪೈಕಿ 1,250 ಮಂದಿ ಆಶ್ರಯ ಕಳೆದುಕೊಂಡಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ದೇಶದ ಕೇರ್‌ ಇಂಟರ್‌ನ್ಯಾಷನಲ್‌ ಸಂಸ್ಥೆ‌ ನಿರ್ದೇಶಕ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಭೂಕುಸಿತಕ್ಕೆ ಮನೆಗಳು ಸುಮಾರು 26.3 ಅಡಿಗಳಷ್ಟು ಆಳಕ್ಕೆ ಹೂತುಹೋಗಿವೆ. ಭೂಕುಸಿತ ಮುಂದುವರಿದ ಕಾರಣ ಪರಿಸ್ಥಿತಿ ಅಸ್ಥಿರವಾಗಿಯೇ ಇದೆ. ಇದು ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೂ ಅಪಾಯ ಉಂಟು ಮಾಡುವ ಸಾಧ್ಯತೆಗಳಿವೆ. ಪಪುವಾ ನ್ಯೂಗಿನಿಯಾದ ಅಭಿವೃದ್ಧಿ ಪಾಲುದಾರರಿಗೆ ಇತರ ಅಂತಾರಾಷ್ಟ್ರೀಯ ಸ್ನೇಹಿತರಿಗೆ ದೇಶದ ಪರಿಸ್ಥಿತಿಯ ಬಗ್ಗೆ ತಿಳಿಸಿ ಸಹಾಯ ಹಸ್ತ ಚಾಚುವಂತೆ ವಿಶ್ವಸಂಸ್ಥೆಯನ್ನು ಕೋರಿದೆ ಎಂದು ಸರ್ಕಾರ ತಿಳಿಸಿದೆ.

    ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ ಸಿಲುಕಿರುವ ನೂರಾರು ಜನರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಜನರೂ ಕೈಜೋಡಿಸಿದ್ದಾರೆ. ಇದನ್ನೂ ಓದಿ: ನೀರಜ್‌ ಚೋಪ್ರಾಗೆ ಗಾಯದ ಸಮಸ್ಯೆ; ಒಸ್ಟ್ರಾವಾ ಗೋಲ್ಡನ್ ಸ್ಪೈಕ್-2024ನಿಂದ ಹೊರಕ್ಕೆ

  • ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ; ಸಾವಿನ ಸಂಖ್ಯೆ 670 ಕ್ಕೆ ಏರಿಕೆ

    ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ; ಸಾವಿನ ಸಂಖ್ಯೆ 670 ಕ್ಕೆ ಏರಿಕೆ

    ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಸಂಭವಿಸಿದ ಭಾರೀ ಭೂಕುಸಿತಕ್ಕೆ (Landslide) ಬಲಿಯಾದವರ ಸಂಖ್ಯೆ ದಿನೇ ದಿನೆ ಏರುತ್ತಿದೆ. ಇದುವರೆಗೂ 670 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಶುಕ್ರವಾರದ ಭೂಕುಸಿತದಿಂದ 150 ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದವು. ಯಂಬಲಿ ಗ್ರಾಮ ಮತ್ತು ಎಂಗಾ ಪ್ರಾಂತೀಯ ಅಧಿಕಾರಿಗಳ ಲೆಕ್ಕಾಚಾರದ ಆಧಾರದ ಮೇಲೆ ಸಾವಿನ ಸಂಖ್ಯೆಯನ್ನು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದಲ್ಲಿ ಯುಎನ್ ವಲಸೆ ಸಂಸ್ಥೆಯ ಮುಖ್ಯಸ್ಥ ಸೆರ್ಹಾನ್ ಅಕ್ಟೋಪ್ರಾಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ

    ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ ಸಿಲುಕಿರುವ ನೂರಾರು ಜನರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಜನರೂ ಕೈಜೋಡಿಸಿದ್ದಾರೆ.

    ಗ್ರಾಮಸ್ಥರು ಮನೆಯಲ್ಲಿ ಮಲಗಿದ್ದಾಗ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಎಂಗಾ ಪ್ರಾಂತ್ಯದ ಪ್ರತ್ಯೇಕ ಭಾಗದಲ್ಲಿ ಈ ದುರಂತ ಸಂಭವಿಸಿತ್ತು. ಬೃಹತ್ ಭೂಕುಸಿತದಿಂದ ಸಮಾಧಿಯಾದ ದೇಹಗಳನ್ನು ನಾವು ಇನ್ನೂ ಹುಡುಕುತ್ತಿದ್ದೇವೆ ಎಂದು ಸಮುದಾಯದ ನಾಯಕ ಮಾರ್ಕ್ ಇಪುಯಾ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಲೆ ಯುದ್ಧ: ರಷ್ಯಾದಲ್ಲಿ ಶಾಲಾ ಮಕ್ಕಳಿಗೂ ಸೇನಾ ತರಬೇತಿ

    ಭೂಕುಸಿತದಿಂದ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ-ಜಾನುವಾರುಗಳ ಸಾವಾಗಿದೆ. ಫಲವತ್ತಾದ ಭೂಮಿ ಮತ್ತು ಶುದ್ಧ ನೀರಿನ ಮೂಲಗಳು ಕೂಡ ಪರಿಣಾಮಕಾರಿಯಾಗಿ ನಾಶವಾಗಿವೆ ಎಂದು ಸಹಾಯಕ ಸಂಸ್ಥೆಗಳು ತಿಳಿಸಿವೆ.

  • ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ

    ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ

    ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದ (Papua New Guinea) ಎಂಗಾ ಪ್ರಾಂತ್ಯದಲ್ಲಿ ಭಾರೀ ಭೂಕುಸಿತ (Landslide) ಸಂಭವಿಸಿದ್ದು, ಸುಮಾರು ನೂರು ಜನರು ಸಾವನ್ನಪ್ಪಿದ್ದಾರೆ.

    ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಭೂಕುಸಿತ ಸಂಬಂಧ ವರದಿ ಮಾಡಿದೆ. ಪಪುವಾ ನ್ಯೂಗಿನಿಯಾದ ಕಾಕಲಂ ಎಂಬ ದೂರದ ಹಳ್ಳಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ವಿಯೆಟ್ನಾಂನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – 14 ಮಂದಿ ಬಲಿ

    ಮುಂಜಾನೆ ಜನರು ಇನ್ನೂ ನಿದ್ರೆಯಲ್ಲಿದ್ದಾಗ ಇದು ಸಂಭವಿಸಿದೆ. ಪರ್ವತದ ಬದಿಯು ಜಾರಿ ಮನೆಗಳು ನೆಲಸಮವಾಗಿವೆ. ಸುಮಾರು 100 ಕ್ಕೂ ಹೆಚ್ಚು ಜನರು ನೆಲದಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಪೋರ್ಗೆರಾ ವುಮೆನ್ ಇನ್ ಬ್ಯುಸಿನೆಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಎಲಿಜಬೆತ್ ಲಾರುಮಾ ತಿಳಿಸಿದ್ದಾರೆ.

    ಶವಗಳನ್ನು ಗ್ರಾಮಸ್ಥರು ಹೊರತೆಗೆಯುತ್ತಿದ್ದಾರೆ. ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ನಿವಾಸಿಗಳು ಮಣ್ಣಿನ ಅವಶೇಷ ಮತ್ತು ಮರಗಳ ಕೆಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುತ್ತಿರುವ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದನ್ನೂ ಓದಿ: ತೀವ್ರ ಪ್ರಕ್ಷುಬ್ಧತೆಯಿಂದ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ 22 ಮಂದಿಯ ಬೆನ್ನುಮೂಳೆಗೆ ಗಾಯ!

    ದೊಡ್ಡ ದೊಡ್ಡ ಬಂಡೆಗಳು, ಮರಗಳು, ಕಟ್ಟಡಗಳ ಅವಶೇಷಗಳಡಿ ಮೃತದೇಹಗಳು ಸಿಲುಕಿಕೊಂಡಿವೆ. ಹೀಗಾಗಿ ದೇಹಗಳನ್ನು ಹೊರತೆಗೆಯುವುದು ಕಷ್ಟವಾಗಿದೆ. ಭೂಕುಸಿತದಿಂದಾಗಿ ಚಿನ್ನದ ಗಣಿ ಇರುವ ಪೋರ್ಗೆರಾ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯನ್ನು ಸಹ ನಿರ್ಬಂಧಿಸಿದೆ.

  • ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

    ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

    ಪೋರ್ಟ್ ಮೊರೆಸ್‌ಬೈ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪಪುವಾ ನ್ಯೂ ಗಿನಿಯಾ (Papua New Guinea) ಸರ್ಕಾರ ಶಿಷ್ಟಾಚಾರಕ್ಕೆ ಗುಡ್‌ಬೈ ಹೇಳಿ ಅಪರೂಪದ ಗೌರವ ಸಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಮೋದಿ ವಿಮಾನದಿಂದ ಇಳಿದು ಬರುತ್ತಿದ್ದಂತೆ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಪೇ (James Marape) ಸ್ವಾಗತಿಸಿದರು. ಸಂಪ್ರದಾಯ ಮುರಿದು ಸೂರ್ಯಾಸ್ತದ ವೇಳೆ ಸ್ವಾಗತಿಸಿದ ಬಳಿಕ ಅವರು ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಮೋದಿ ಅವರನ್ನು ಮೇಲೆತ್ತಿ ಬೆನ್ನು ತಟ್ಟಿದರು.

    ಭಾನುವಾರ ರಾಜಧಾನಿ ಫೋರ್ಟ್ ಮೊರೆಸ್‌ಬೈಗೆ ಮೋದಿ ಬಂದಿಳಿದಾಗ ಸೂರ್ಯಾಸ್ತವಾಗಿತ್ತು. ಪಪುವಾ ನ್ಯೂ ಗಿನಿಯಾ ಸರ್ಕಾರ ಸಾಮಾನ್ಯವಾಗಿ ಯಾವುದೇ ವಿದೇಶಿ ಗಣ್ಯರಿಗೆ ಸೂರ್ಯಾಸ್ತದ ಬಳಿಕ ಸಾಂಪ್ರದಾಯಿಕ ಸ್ವಾಗತ ನೀಡುವುದಿಲ್ಲ. ಇದನ್ನೂ ಓದಿ: 2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ – ಸಭೆಯ ಮಾಹಿತಿ ರಿವೀಲ್‌ ಮಾಡಿದ ನೃಪೇಂದ್ರ ಮಿಶ್ರಾ

    ಮೋದಿ ಆಗಮಿಸಿದಾಗ ಶಿಷ್ಟಾಚಾರವನ್ನೇ ಬದಲಿಸಿಕೊಂಡ ಸರ್ಕಾರ ಅವರಿಗೆ ಸಾಂಪ್ರದಾಯಿಕ ಗೌರವದೊಂದಿಗೆ ಸ್ವಾಗತ ಕೋರಿತು. ಅಲ್ಲಿನ ಪ್ರಧಾನಿ ಜೇಮ್ಸ್ ಮರಪೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಖುದ್ದಾಗಿ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು.

    ಯಾಕೆ ಈ ಸ್ವಾಗತ?
    ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಮೋದಿಯಾಗಿದ್ದಾರೆ. ಕೋವಿಡ್‌ ಸಮಯದಲ್ಲಿ ಪಪುವಾ ನ್ಯೂ ಗಿನಿಯಾ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಲಸಿಕೆ ಅಭಿವೃದ್ಧಿ ಪಡಿಸಿದ ದೇಶಗಳು ಪಪುವಾ ನ್ಯೂ ಗಿನಿಯಾಗೆ ಲಸಿಕೆಯನ್ನು ಕಳುಹಿಸಿರಲಿಲ್ಲ. ಯಾರೂ ಸಹಾಯ ಮಾಡದ ಸಂದರ್ಭದಲ್ಲಿ ಭಾರತ 1.32 ಲಕ್ಷ ಕೊರೊನಾ ಲಸಿಕೆಯನ್ನು ತುರ್ತಾಗಿ ಕಳುಹಿಸಿಕೊಟ್ಟಿತ್ತು. ಸಂಕಷ್ಟದಲ್ಲಿದ್ದಾಗ ಸ್ಪಂದಿಸಿದ್ದಕ್ಕೆ ಪಪುವಾ ನ್ಯೂ ಗಿನಿಯಾ ಸರ್ಕಾರ ಮೋದಿ ಅವರಿಗೆ ವಿಶೇಷ ಸ್ವಾಗತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತದೆ.

  • ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಮಸ್ಕತ್: ಯುಎಸ್‍ಎ ಕ್ರಿಕೆಟ್ ಆಟಗಾರ ಜಸ್ಕರನ್ ಮಲ್ಹೋತ್ರ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ್ದಾರೆ.

    ವಿಕೆಟ್ ಕೀಪರ್ ಹಾಗೂ ಬಲಗೈ ದಾಂಡಿಗ ಜಸ್ಕರನ್, ಪಪುವಾ ನ್ಯೂಗಿನಿ ವಿರುದ್ಧ ಒಮನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟಿನಲ್ಲಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್, ಹಾಗೂ ಪೊರ್ಲಾಡ್ ರ ವಿಶ್ವದಾಖಲೆ ಸಾಲಿಗೆ ಸೇರಿದ್ದಾರೆ.  ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    16 ಸಿಕ್ಸರ್ ಹಾಗೂ 4 ಫೋರ್‍ಗಳನ್ನು ಸಿಡಿಸಿದ ಜಸ್ಕರನ್ 124 ಬಾಲ್‍ಗಳಲ್ಲಿ ಒಟ್ಟು 173 ರನ್ ಗಳಿಸಿ ನಾಟೌಟ್ ಆಗಿ ಉಳಿದರು ಭಾರತದ ಚಂಡೀಗಡದ ಮೂಲದವರಾದ ಜಸ್ಕರನ್ ಮಲ್ಹೋತ್ರ ಯುಎಸ್‍ಎ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ಈ ಹಿಂದೆ 2007ರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್‍ನಲ್ಲಿ ಆರು ಸಿಕ್ಸರ್ ಚಚ್ಚಿ ವಿಶ್ವ ದಾಖಲೆ ಮಾಡಿದ್ದರು. ಇದೀಗ ಜಸ್ಕರನ್ ಏಕದಿನ ಕ್ರಿಕೆಟ್‍ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

    https://twitter.com/usacricket/status/1436060985610100738

    ಯುವರಾಜ್ ಸಿಂಗ್ 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ 6 ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ್ದರು.

  • ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ದುಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಪಪುವಾ ನ್ಯೂಗಿನಿ ತಂಡವು (ಪಿಎನ್‍ಜಿ) ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದೆ.

    ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾನುವಾರ ನಡೆದ ಬಲಿಷ್ಠ ಕೀನ್ಯಾ ವಿರುದ್ಧ ಪಿಎನ್‍ಜಿ 45 ರನ್‍ಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಮೊತ್ತ ಮೊದಲ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟಿದೆ. ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- 2020ಗೆ ಕಮ್‍ಬ್ಯಾಕ್

    ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಿಎನ್‍ಜಿ ತಂಡವು, ಸೆಸೆ ಬಾವ್ 17 ರನ್, ನೋರ್ಮನ್ ವನುವಾ 54 ರನ್, ಜೇಸನ್ ಕಿಲಾ 12 ರನ್ ಸಹಾಯದಿಂದ ಎಲ್ಲ ವಿಕೆಟ್ ಕಳೆದುಕೊಂಡು 19.3 ಓವರ್‌ಗಳಲ್ಲಿ 118 ರನ್‍ಗಳನ್ನು ಪೇರಿಸಿತು. ಬಳಿಕ ಬೌಲಿಂಗ್‍ನಲ್ಲಿ ಮಿಂಚಿದ ಪಿಎನ್‍ಜಿ ಕೀನ್ಯಾ ತಂಡವನ್ನು 18.4 ಓವರ್‌ಗಳಲ್ಲಿ 73 ರನ್‍ಗಳಿಗೆ ಆಲ್‍ಔಟ್ ಮಾಡಿತು.

    ಕಿನ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರೂ ಪಿಎನ್‍ಜಿಗೆ ಟಿ-20 ವಿಶ್ವಕಪ್ ಅರ್ಹತೆ ಖಚಿತವಾಗಿರಲಿಲ್ಲ. ಏಕೆಂದರೆ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದ ಫಲಿತಾಂಶವನ್ನು ಆಧರಿಸಿತ್ತು. ಗ್ರೂಪ್ ಹಂತದಲ್ಲಿ ಆಡಿದ 6 ಪಂದ್ಯಗಳಲ್ಲಿ ಪಿಎನ್‍ಜಿ 5 ಗೆಲುವು ಮತ್ತು 1 ಸೋಲಿನೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿತ್ತು. ಅಂತಿಮವಾಗಿ ಉತ್ತಮ ರನ್‍ರೇಟ್ ಆಧಾರದ ಮೇರೆಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ವಿಶ್ವಕಪ್ ಟಿಕೆಟ್ ಪಡೆದುಕೊಂಡಿದೆ.

    ಬ್ರಿಟೀಷ್ ಮಿಷಿನರಿಗಳು ಪಪುವಾ ನ್ಯೂಗಿನಿಯಲ್ಲಿ 1900ರಲ್ಲಿಯೇ ಕ್ರಿಕೆಟ್ ಪರಿಚಯಿಸಿದ್ದವು. ಆದರೆ ನ್ಯೂಗಿನಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಒಂದು ಶತಮಾನವನ್ನೇ ತೆಗೆದುಕೊಂಡಿದೆ. ಟಿ-20 ವಿಶ್ವಕಪ್‍ಗೆ ಎಂಟ್ರಿ ಪಡೆದ ಪಿಎನ್‍ಜಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

    ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ 14 ರಾಷ್ಟ್ರಗಳ ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ ಪಿಎನ್‍ಜಿ ಮತ್ತು ಐರ್ಲೆಂಡ್ ಸೇರಿದಂತೆ ಆರು ತಂಡಗಳು 2020ರ ಟಿ-20 ವಿಶ್ವಕಪ್‍ನ ಮೊದಲ ಸುತ್ತಿನಲ್ಲಿ ಆಡುವ ಅವಕಾಶವನ್ನು ಪಡೆಯಲಿವೆ. ಇತರ ನಾಲ್ಕು ತಂಡಗಳನ್ನು ಅರ್ಹತಾ ಪಂದ್ಯಾವಳಿಯಿಂದಲೇ ನಿರ್ಧರಿಸಲಾಗುತ್ತದೆ. ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.