Tag: paneer selvam

  • ಶಶಿಕಲಾ ವಿರುದ್ಧ ಸೆಲ್ವಂ ಬಂಡಾಯದ ಕಹಳೆ – ಖಜಾಂಚಿ ಸ್ಥಾನದಿಂದ ಕಿತ್ತೆಸೆದ ಶಶಿಕಲಾ

    – ಪನ್ನೀರ್ ಸೆಲ್ವಂಗೆ ಡಿಎಂಕೆ ಸಪೋರ್ಟ್

    ಚೆನ್ನೈ: ಜಯಲಲಿತಾ ನಿಧನದ ನಂತರ ಅಸ್ಥಿರತೆಯಲ್ಲಿದ್ದ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅಮ್ಮನಿಲ್ಲದ ತಮಿಳುನಾಡಿನಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಅಮ್ಮನ ನಂಬಿಕಸ್ಥ ಬಂಟ ಪನ್ನೀರ್ ಸೆಲ್ವಂ. ಚಿನ್ನಮ್ಮ ಶಶಿಕಲಾ ವಿರುದ್ಧ ಅಮ್ಮನ ಬಲಗೈ ಬಂಟ ಪನ್ನೀರ್ ಸೆಲ್ವಂ ಬಂಡಾಯದ ಕಹಳೆ ಊದಿದ್ದಾರೆ.

    ಶಶಿಕಲಾ ನಟರಾಜನ್‍ಗಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ಓಪಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ರಾತ್ರೋರಾತ್ರಿ ಚಿನ್ನಮ್ಮನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪನ್ನೀರ್ ಸೆಲ್ವಂ, ಚೆನ್ನೈನ ಮರೀನಾ ಬೀಚ್‍ನಲ್ಲಿರೋ ಜಯಲಲಿತಾ ಸಮಾಧಿಗೆ ದಿಢೀರ್ ಭೇಟಿಕೊಟ್ಟು ಸುಮಾರು 45 ನಿಮಿಷಗಳ ಕಾಲ ಧ್ಯಾನ ಮಾಡಿದ್ರು. ಬಳಿಕ ಮಾಧ್ಯಮದ ಜೊತೆ ಮಾತಾಡಿ, ಶಶಿಕಲಾ ಅವ್ರು ತನ್ನನ್ನ ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ಬಾಂಬ್ ಹಾಕಿದ್ರು. ನಾನು ಸಿಎಂ ಆಗಬೇಕು ಅಂತ ಆಸ್ಪತ್ರೆಯಲ್ಲಿದ್ದಾಗ ಅಮ್ಮ ಬಯಸಿದ್ರು. ಆದ್ರೆ, ಶಶಿಕಲಾ ಟೀಂ ನನಗೆ ಗೊತ್ತಿಲ್ಲದೇ ಶಾಸಕಾಂಗ ಪಕ್ಷದ ಸಭೆ ಕರೆದು ಅವಮಾನ ಮಾಡ್ತು. ಈಗ ಅಮ್ಮನ ಆತ್ಮವೇ ಬಂದು ಜನರಿಗೆ ಸತ್ಯ ಹೇಳುವಂತೆ ತಿಳಿಸಿದೆ. ಈಗ ಜನ ಹಾಗೂ ಕಾರ್ಯಕರ್ತರಿಗೆ ಸತ್ಯ ತಿಳಿಸುತ್ತಿದ್ದೇನೆ ಅಂತ ಹೇಳಿ ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.

    ಜಯಾ ಸಮಾಧಿಯಿಂದ ತನ್ನ ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂಗೆ ಅಭೂತರ್ಪ ಬೆಂಬಲ ವ್ಯಕ್ತವಾಯ್ತು. ಜನರು ಸೆಲ್ವಂ ನಿವಾಸದ ಮುಂದೆ ಜಮಾಯಿಸಿ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಪೋಯಸ್ ಗಾರ್ಡನ್ ನಿವಾಸದ ಮುಂದೆ ಶಶಿಕಲಾ ಅಭಿಮಾನಿಗಳು ಸೇರತೊಡಗಿದ್ರು.

    ತುರ್ತು ಸಭೆ ಕರೆದ ಶಶಿಕಲಾ: ದಂಗೆಯ ಮುನ್ನೆಚ್ಚರಿಕೆ ಅರಿತ ಶಶಿಕಲಾ ತಕ್ಷಣವೇ ತುರ್ತು ಸಭೆ ನಡೆಸಿದ್ರು. ಮಧ್ಯರಾತ್ರಿ 1 ಗಂಟೆವರೆಗೆ ನಡೆದ ಸಭೆಯಲ್ಲಿ ಪಕ್ಷದ ಖಜಾಂಚಿ ಸ್ಥಾನದಿಂದ ಪನ್ನೀರ್ ಸೆಲ್ವಂಗೆ ಗೇಟ್‍ಪಾಸ್ ಕೊಡಲಾಯಿತು. ಸಭೆಯಲ್ಲಿ 20 ಸಚಿವರು 80 ಶಾಸಕರು ಹಾಜರಿದ್ರು. ಸಭೆ ಬಳಿಕ ಮಾತನಾಡಿದ ಶಶಿಕಲಾ, ಅಣ್ಣಾಡಿಎಂಕೆ ಪಕ್ಷದ ಶಾಸಕರು ಒಂದೇ ಕುಟುಂಬ, ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂಗೆ ನಾನು ಒತ್ತಡ ಹಾಕಿಲ್ಲ, ಅವ್ರನ್ನ ಪಕ್ಷದಿಂದ ಹೊರಹಾಕ್ತೇವೆ ಅಂತ ಶಾಂತಚಿತ್ತವಾಗೇ ಉತ್ತರಿಸಿದ್ರು. ಈ ಹೈಡ್ರಾಮಾಗೆ ಡಿಎಂಕೆ ಕಾರಣ ಅಂತ ದೂರಿದ ಪಕ್ಷದ ಹಿರಿಯ ನಾಯಕ ತಂಬಿದೊರೈ, ಚಿನ್ನಮ್ಮ ಶಶಿಕಲಾಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡಬೇಕು ಅಂದ್ರು.

    ನನ್ನ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ನಾನು ಎಐಎಡಿಎಂಕೆ ಪಕ್ಷದ ಕಟ್ಟಾಳು. ಯಾರೂ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ. ನನ್ನನ್ನ ಖಜಾಂಚಿ ಮಾಡಿದ್ದು ಅಮ್ಮ. ನಾನು ಅದನ್ನ ಮುಂದುವರಿಸ್ತೇನೆ. ನನ್ನ ಸ್ಥಾನವನ್ನ ಯಾರಿಂದಲೂ ಕಸಿದುಕೊಳ್ಳೋಕೆ ಸಾಧ್ಯವಿಲ್ಲ. ಈ ಬೆಳವಣಿಗೆಯಲ್ಲಿ ಡಿಎಂಕೆಯ ಪಾತ್ರವಿಲ್ಲ. ಪ್ರತಿಪಕ್ಷ ನಾಯಕರತ್ತ ನೋಡೋದು, ನಗು ಚೆಲ್ಲೋದು ಅಪರಾಧ ಅಲ್ಲವೇ ಅಲ್ಲ. ಖಂಡಿತಾ ಕ್ರೈಮ್ ಅಲ್ಲ ಅಲ್ವಾ. (ಕಳೆದ ಕೆಲ ದಿನಗಳ ಹಿಂದೆ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸ್ಟಾಲಿನ್ ಕಡೆ ಸೆಲ್ವಂ ನಗು ಚೆಲ್ಲಿದ್ದರು) ನಾಳೆ ಏನಾಗುತ್ತೆ ಕಾದು ನೋಡಿ ಅಂತ ಪನ್ನೀರ್ ಸೆಲ್ವಂ ಪ್ರತಿಕ್ರಿಯಿಸಿದ್ದಾರೆ.

    ಕ್ಷಿಪ್ರ ರಾಜಕೀಯದಿಂದಾಗಿ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವನ್ನ ನೋಡಬೇಕಾಗಿದೆ. ತಮಿಳುನಾಡು ಅಸೆಂಬ್ಲಿಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ.
    * ಒಟ್ಟು ಕ್ಷೇತ್ರ – 235
    * ಸರಳ ಬಹುಮತ – 118
    * ಎಐಎಡಿಂಕೆ – 134
    * ಡಿಎಂಕೆ – 89
    * ಕಾಂಗ್ರೆಸ್ – 8
    * ಐಯುಎಂಎಲ್ – 1
    * ಖಾಲಿ – 1 (ಜಯಲಲಿತಾ ಸಾವಿನಿಂದ ಆರ್.ಕೆ. ನಗರ ಖಾಲಿ ಇದೆ)

    ಈಗ ಒಂದು ವೇಳೆ ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಸರ್ಕಾರ ರಚಿಸ್ತಾರೆ ಎಂದಾದರೆ ಪನ್ನೀರ್ ಸೆಲ್ವಂಗೆ ಅಣ್ಣಾಡಿಎಂಕೆಯಿಂದ 2/3 ಮೆಜಾರಿಟಿ ಅಂದ್ರೆ ಕನಿಷ್ಟ 90 ಶಾಸಕರ ಬೆಂಬಲದೊಂದಿಗೆ ಹೊರ ಹೋದರೆ ಪಕ್ಷಾಂತರ ಕಾಯ್ದೆ ಅನ್ವಯ ಆಗಲ್ಲ. ಅಷ್ಟು ಎಂಎಲ್‍ಎಗಳು ಸೆಲ್ವಂ ಹಿಂದೆ ಹೋಗ್ತಾರಾ? ಆದ್ರೆ ಪನ್ನೀರ್ ಸೆಲ್ವಂ ಜನನಾಯಕರಲ್ಲವಾದ್ದರಿಂದ ಅಷ್ಟೂ ಎಂಎಲ್‍ಎಗಳ ಬೆಂಬಲ ಸಿಗುವುದಲ್ಲ ಅಂತ ಹೇಳಲಾಗಿದೆ. ಆದರೂ, ಪನ್ನೀರ್ ಸೆಲ್ವಂಗೆ ಡಿಎಂಕೆ ಬಾಹ್ಯ ಬೆಂಬಲ ನೀಡೋದಾಗಿ ಘೋಷಿಸಿದೆ. ಒಂದೊಮ್ಮೆ 8 ಸೀಟ್ ಹೊಂದಿರೋ ಕಾಂಗ್ರೆಸ್ ಸಹ ಸಪೋರ್ಟ್ ಕೊಟ್ರೆ ಸೆಲ್ವಂ ಹಾಗೂ ಶಶಿಕಲಾ ನಡುವಿನ ನಂಬರ್ ಗೇಮ್ ಹೀಗಿರಲಿದೆ:
    * 90 ಶಾಸಕರ ಬೆಂಬಲ ಇದ್ದರೆ ಸೆಲ್ವಂ ಬಚಾವ್
    * ಸದ್ಯ ಸೆಲ್ವಂಗೆ 50 ಶಾಸಕರ ಬೆಂಬಲ..?
    * ಶಶಿಕಲಾ ನಟರಾಜನ್‍ಗೆ 84 (ಆದ್ರೆ ನೂರಕ್ಕೂ ಅಧಿಕ ಶಾಸಕರು ಮಧ್ಯರಾತ್ರಿ ಶಶಿಕಲಾ ಸಭೆಯಲ್ಲಿದ್ದರು)
    * ಸೆಲ್ವಂ+ಡಿಎಂಕೆ+ಕಾಂಗ್ರೆಸ್ – 147

    ಇತ್ತ ಸೆಲ್ವಂ, ಶಶಿಕಲಾ ಮಧ್ಯೆ ರಾಜಕೀಯ ಘರ್ಷಣೆ ನಡೀತಿದ್ರೆ. ಅತ್ತ ಶಶಿಕಲಾ ವಿರುದ್ಧವಾಗಿ ಅಖಾಡಕ್ಕೆ ಇಳಿಯೋಕೆ ಜಯಾ ಸೊಸೆ ದೀಪಾ ಸಜ್ಜಾಗ್ತಿದ್ದಾರೆ.

  • ತಮಿಳುನಾಡು ಸಿಎಂ ಆಗಲು ಚಿನ್ನಮ್ಮ ಶಶಿಕಲಾ ಸಿದ್ಧತೆ

    ಚೆನ್ನೈ: ಜಯಲಲಿತಾ ಅಕಾಲಿಕ ನಿಧನದ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಲೇ ಇದೆ. ಸದ್ಯ ಎಐಎಡಿಎಂಕೆ ಪಕ್ಷದ ಸುಪ್ರೀಮೋ, ಪ್ರಧಾನ ಕಾರ್ಯದರ್ಶಿಯಾಗಿರುವ ಚಿನ್ನಮ್ಮ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಕುರ್ಚಿಗೇರೋದು ನಿಶ್ಚಿತವಾಗ್ತಿದೆ.

    ಇಂದು ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹಾಲಿ ಸಿಎಂ ಪನ್ನೀರ್ ಸೇಲ್ವಂ ಬದಲಿಗೆ ಶಶಿಕಲಾ ಅವರನ್ನ ನೂತನ ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಯಾಗೆ ಆಪ್ತ ಅಧಿಕಾರಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇನ್ನಿಬ್ಬರು ಉನ್ನಾತಾಧಿಕಾರಿಗಳಿಗೆ ರಾಜೀನಾಮೆಗೆ ಸೂಚಿಸಿದ್ದಾರೆ.

    ಇತ್ತ ಚುನಾವಣಾ ಆಯೋಗದಿಂದ ಶಶಿಕಲಾಗೆ ಆಘಾತ ಎದುರಾಗಿದೆ. ಪಕ್ಷದ ಪ್ರಧಾನ ಕಾರ್ಯದಶಿಯಾಗಿ ಶಶಿಕಲಾ ನೇಮಕ ಸರಿಯಿಲ್ಲ ಎಂದು ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಚುನಾವಣಾ ಆಯೋಗದ ಮೆಟ್ಟಿಲೇರಿದ್ರು. ಈ ಅರ್ಜಿಯನ್ನು ಪರಿಗಣಿಸಿದ ಆಯೋಗ, ವಿವರ ಕೋರಿ ನೋಟೀಸ್ ನೀಡಿದೆ.