Tag: panchayat president

  • ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

    ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷರ ಕಾರು ಡಿಕ್ಕಿಯಾಗಿ ಗ್ರಾಮಸ್ಥರೋರ್ವರು ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಇದು ಅಪಘಾತವಲ್ಲ ಕೊಲೆ ಎಂಬ ಆರೋಪ ಗ್ರಾಮಸ್ಥರಲ್ಲಿ ಕೇಳಿ ಬಂದಿದೆ.

    ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್‍ನ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಅವರ ಕಾರು, ಇದೇ ಗ್ರಾಮದ ಉದಯ ಗಾಣಿಗ ಎಂಬವರ ಬೈಕ್ ನಡುವೆ ಅಪಘಾತವಾಗಿತ್ತು. ಬಳಿಕ ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದರು. ಅಪಘಾತದಲ್ಲಿ ಗಾಯಗೊಂಡ ಉದಯ ಗಾಣಿಗರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಅಂಬುಲೆನ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಅಪಘಾತ ಅಲ್ಲ ಕೊಲೆ ಎಂದು ಗ್ರಾಮದಲ್ಲಿ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಕೊಲೆ ಆರೋಪ ಬರಲು ಕಾರಣ?
    ಎಡಮೊಗೆ ಗ್ರಾಮದಲ್ಲಿ ಐವತ್ತಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಇರುವುದರಿಂದಾಗಿ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬೆನ್ನಲ್ಲೇ ಪೊಲೀಸರು ಗ್ರಾಮದ ಸುತ್ತ ಬ್ಯಾರಿಕೇಡ್ ಇಟ್ಟು ನಾಕಾಬಂದಿ ಹಾಕಿದ್ದರು. ಅಧ್ಯಕ್ಷರು ಮತ್ತು ಅವರ ಬೆಂಬಲಿಗರು ಗ್ರಾಮಕ್ಕೆ ಪ್ರವೇಶ ಮಾಡುವ ಪ್ರಮುಖ ರಸ್ತೆಯಲ್ಲಿ ಪೊಲೀಸರು ಇರಿಸಿದ್ದ ಬ್ಯಾರಿಕೇಡ್ ಸಮೀಪ ಕೂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಬೆಳವಣಿಗೆ ನಂತರ ಉದಯ ಗಾಣಿಗ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದರು.

    ಗಾಣಿಗರ ಸ್ಟೇಟಸ್ ಏನಿತ್ತು?
    ಎರಡು ದಿನಗಳ ಹಿಂದೆ ಸ್ಟೇಟಸ್ ನಲ್ಲಿ ‘ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ’. ‘ಲಾಕ್ ಡೌನ್ ಮಾಡಿ ಪೋಸು ಕೊಡಬೇಡಿ’. ‘ಕೊರೋನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ’ ಅಂತ ಉದಯ ಗಾಣಿಗ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದು ಪ್ರಾಣೇಶ್ ಯಡಿಯಾಳ್ ವಿರುದ್ಧ ಎಂದು ಗ್ರಾಮದಲ್ಲಿ ಚರ್ಚೆಯಾಗಿತ್ತು.

    ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗರ ಬೈಕ್‍ಗೆ ಪ್ರಾಣೇಶ್ ಯಡಿಯಾಳ್ ಅವರ ಕಾರು ಡಿಕ್ಕಿಯಾಗಿದೆ. ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಕಾರುಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಪ್ರಾಣೇಶ್ ಯಡಿಯಾಳ್ ಇರಲಿಲ್ಲ ಎಂಬ ಬಗ್ಗೆಯೂ ಮಾಹಿತಿಯಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಚಿಕ್ಕಮಗಳೂರು: ಜಾಯಿಂಟ್ ಅಕೌಂಟ್ ಇದ್ದಿದ್ದೇ ವರವಾಯ್ತು. 150 ಲೈಟ್‍ಗೆ 12 ಲಕ್ಷ, ನೈಸರ್ಗಿಕವಾಗಿ ಹರಿಯೋ ನೀರಿಗೆ ಲಕ್ಷ-ಲಕ್ಷ. ಖರ್ಚಿನ ಲೆಕ್ಕ ನೋಡೋಕೆ ಪಾಸ್ ಬುಕ್ ಕೇಳದ್ರೆ ಸದಸ್ಯರೇ ಅಲಕ್ಷ್ಯ. ಸಿಎಂ, ಡಿಸಿ, ಸಿಇಓ, ಇಓ, ಎಸಿಬಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದ್ರೂ ಅವರ್ಯಾರು ಹತ್ತಿರವೂ ಸುಳಿಯಲಿಲ್ಲ. ಅಧ್ಯಕ್ಷೆ ಹಾಗೂ ಪಿಡಿಓ ಬಾಯ್ಬಿಟ್ರೆ ಸಿಗಲಿದೆ ಎಲ್ಲದಕ್ಕೂ ಉತ್ತರ. ಇದು ಕಾಫಿನಾಡಿನ ಗ್ರಾಮ ಪಂಚಾಯಿತಿ ಸದಸ್ಯರ ನೋವಾಗಿದೆ.

    ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮ ಪಂಚಾಯಿತಿಗೆ ಸೇರಿದ ಹಣವನ್ನು ಲೂಟಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ ಹಾಗೂ ಪಿಡಿಓ ಮಹೇಶ್ ಹೆಸರಲ್ಲಿ ಬ್ಯಾಂಕ್‍ನಲ್ಲಿ ಜಂಟಿ ಖಾತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ಇಬ್ಬರೂ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನ ಸ್ವಾಹ ಮಾಡಿದ್ದಾರೆ.

    ಪಂಚಾಯಿತಿ ವ್ಯಾಪ್ತಿಯಲ್ಲಿ 300 ಲೈಟ್ ಪಾಯಿಂಟ್‍ಗಳಿವೆ. ಇದಕ್ಕಾಗಿ 2 ವರ್ಷದಲ್ಲಿ ಬಲ್ಬ್ ಗಾಗಿಯೇ 12 ಲಕ್ಷ ಬಿಲ್ ಮಾಡಿದ್ದಾರೆ. 25 ಸಾವಿರ ರೂಪಾಯಿ ಮೌಲ್ಯದ ಪೈಪ್ ತಂದು 1 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಮಂಜುನಾಥ್ ಈ ಹಿಂದಿನ ಪಿಡಿಓ ಮಹೇಶ್ ಹಾಗೂ ಹಾಲಿ ಅಧ್ಯಕ್ಷೆ ಸುಮಿತ ವಿರುದ್ಧ ಆರೋಪಿಸಿದ್ದಾರೆ.

    ಈ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ. ಇರೋ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. 2 ವರ್ಷದಿಂದ ತಿಂಗಳಿಗೆ 6.500 ರೂಪಾಯಿಯ ಬಾಡಿಗೆ ಕಟ್ಟಡದಲ್ಲಿದ್ದಾರೆ. ಪಂಚಾಯ್ತಿಗೆ ಒಂದು ಲಕ್ಷ ಅನುದಾನ ಬರುತ್ತದೆ. ಅದರಲ್ಲಿ 25 ಸಾವಿರ ಅಭಿವೃದ್ಧಿ ಪಾಲಾದ್ರೆ, ಉಳಿದ 75 ಸಾವಿರ ಅಧ್ಯಕ್ಷೆ ಹಾಗೂ ಪಿಡಿಓಗೆ ಸೇರುತ್ತದೆ. ಅಭಿವೃದ್ಧಿಯ ಸಭೆಗೆ ಗೈರಾಗುವ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ 2015 ರಿಂದ 2017ನೇ ಸಾಲಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಅಂತ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

    ಒಟ್ಟಾರೆ ಸರ್ಕಾರದಿಂದ ಬರುವ ಅನುದಾನದಲ್ಲಿ ಪಂಚಾಯ್ತಿ ಅಭಿವೃದ್ಧಿ ಮಾಡುವ ಬದಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮತ್ತು ಪಿಡಿಓ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇನ್ನಾದರೂ ಡಿಸಿ ಹಣವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವೇದಿಕೆಯಲ್ಲಿಯೇ ಗ್ರಾ.ಪಂ. ಅಧ್ಯಕ್ಷನಿಂದ ಉಪ್ಪು ಮುಟ್ಟಿ ಪ್ರಮಾಣ

    ವೇದಿಕೆಯಲ್ಲಿಯೇ ಗ್ರಾ.ಪಂ. ಅಧ್ಯಕ್ಷನಿಂದ ಉಪ್ಪು ಮುಟ್ಟಿ ಪ್ರಮಾಣ

    ಚಾಮರಾಜನಗರ: ಲಂಚದ ಆರೋಪಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಾರ್ ಮಾಲೀಕ ವೇದಿಕೆಯಲ್ಲಿಯೇ ಉಪ್ಪು ಮುಟ್ಟಿ ಸಾರ್ವಜನಿಕವಾಗಿಯೇ ಪ್ರಮಾಣ ಮಾಡಿರುವ ಘಟನೆ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

    ಬೇಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಭೆ ನಡೆಯುತಿತ್ತು. ಗ್ರಾಮ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಸಭೆ ನಡೆಯುತ್ತಿದ್ದ ವೇದಿಕೆ ಬಳಿ ಬಂದ ಬೇಗೂರಿನ ವೆಂಕಟೇಶ್ವರ, ಬಾರ್ ನ ಮಾಲೀಕ ಗೋವಿಂದಸ್ವಾಮಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ಬಾರ್ ತೆರೆಯುವ ಸಂಬಂಧ ಗ್ರಾಮ ಪಂಚಾಯ್ತಿಯಿಂದ ಅನುಮತಿ ನೀಡಲು 50 ಸಾವಿರ ಲಂಚ ಪಡೆದಿದ್ದರು ಎಂದು ಆರೋಪಿಸಿದ್ದಾರೆ.

    ಈ ವೇಳೆ ವೇದಿಕೆಯಲ್ಲಿಯೇ ಇದ್ದ ಅಧ್ಯಕ್ಷ ಚೇತನ್ ನಾನು ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು. ಅಲ್ಲದೇ ನಾನು ಲಂಚ ಪಡೆದುಕೊಂಡಿಲ್ಲ ಎಂದು ಉಪ್ಪು ಮುಟ್ಟಿ ವೇದಿಕೆಯಲ್ಲಿಯೇ ಪ್ರಮಾಣ ಮಾಡುತ್ತೇನೆ ಗೋವಿಂದಸ್ವಾಮಿ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಅವರು ಸಹ ಉಪ್ಪು ಹಿಡಿದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಗೋವಿಂದಸ್ವಾಮಿ ಸಹ ವೇದಿಕೆಯಲ್ಲಿಯೇ ನಾನು ಚೇತನ್ ಗೆ ಲಂಚ ನೀಡಿರುವುದಾಗಿ ಉಪ್ಪು ಮುಟ್ಟಿ ಪ್ರಮಾಣ ಮಾಡಿದರು.

    ಒಬ್ಬರು ಲಂಚ ಕೊಟ್ಟಿದ್ದೇನೆ ಅನ್ನುತ್ತಾರೆ ಮತ್ತೊಬ್ಬರು ಲಂಚ ಪಡೆದಿಲ್ಲ ಎನ್ನುತ್ತಾರೆ. ವಸತಿ ಯೋಜನೆಗೆ ಸಂಬಂಧಿಸಿದಂತೆ ಕರೆದಿದ್ದ ಗ್ರಾಮಸಭೆ ಲಂಚದ ಆರೋಪಕ್ಕೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಲಂಚದ ಆರೋಪದ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.