Tag: Panchayat Election

  • ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಮಡಿಕೇರಿ: ಗ್ರಾಮ ಪಂಚಾಯತ್‌ ಚುನಾವಣಾ ಕಣ ರಂಗೇರುತ್ತಿದ್ದು ಕೊಡಗಿನಲ್ಲಿ ಗಂಡನ ವಿರುದ್ಧವಾಗಿ ಹೆಂಡತಿ ಸ್ಪರ್ಧಿಸುತ್ತಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.

    22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ ಮನೆಯಲ್ಲಿ ಅಷ್ಟೇ ನಾವು ಪತಿ ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

    ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಾಗಿದೆ.

  • 2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    – ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ
    – ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ

    ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಲೋಕಲ್‌ ಫೈಟ್‌ಗೆ ದಿನಾಂಕ ನಿಗದಿಯಾಗಿದೆ.  ಡಿಸೆಂಬರ್‌ನಲ್ಲಿ 2 ಹಂತದಲ್ಲಿ ಗ್ರಾಮಪಂಚಾಯತ್‌ ಚುನಾವಣೆ ನಡೆಯಲಿದ್ದು, ಡಿ. 30 ರಂದು ಮತ ಎಣಿಕೆ ನಡೆಯಲಿದೆ.

    ಇಂದು ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿತು. ಒಟ್ಟು  5,762 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಡಿ.22 ರಂದು ಮೊದಲ ಹಂತದ ಚುನಾವಣೆ ನಡೆದರೆ ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

     

     

    ಮೊದಲ ಹಂತದಲ್ಲಿ 113 ತಾಲ್ಲೂಕುಗಳ 2,930 ಗ್ರಾಮ ಪಂಚಾಯತ್‌ಗಳು ಹಾಗೂ ಎರಡನೇ ಹಂತದಲ್ಲಿ 113 ತಾಲ್ಲೂಕುಗಳ 2,832 ಗ್ರಾಮ ಪಂಚಾಯಿತ್‌ಗಳಿಗೆ ಚುನಾವಣೆ ನಡೆಯಲಿದೆ.

     

    ರಾಜ್ಯದ 6,006 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 5,762 ಗ್ರಾಮ ಪಂಚಾಯತ್‌ಗಳ ಒಟ್ಟು 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾ.ಪಂ ಚುನಾವಣೆಗೆ ಒಟ್ಟು 11,949 ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.

     

     

     

    ಒಟ್ಟು ಮತದಾರರ ಸಂಖ್ಯೆ 2,96,15,048 ಇದ್ದು, ಒಟ್ಟು 45,125 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತಗಟ್ಟೆಗೆ ಬರುವ ಮತದಾರರಿಗೆ ಮಾಸ್ಕ್ ಧರಿಸುವುದನ್ನು  ಕಡ್ಡಾಯ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೂಕು ನುಗ್ಗಲು ತಪ್ಪಿಸಲು ಒಂದು ಮತಗಟ್ಟೆಯಲ್ಲಿ ಗರಿಷ್ಠ ಒಂದು ಸಾವಿರ ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿದೆ.

     

     

    ಯಾವ ದಿನ ಏನು?
    ಮೊದಲ ಹಂತದ ‌ಮತದಾನ ಡಿ. 22ರಂದು ನಡೆಯಲಿದ್ದು ಅಧಿಸೂಚನೆ  ಡಿ. 7 ರಂದು ಪ್ರಕಟವಾಗಲಿದೆ. ಡಿ.11ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ.14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.

    ಎರಡನೇ ಹಂತದ ಚುನಾವಣೆ  ಡಿ.27 ರಂದು ನಡೆಯಲಿದ್ದು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.

    ಬೀದರ್ ನಲ್ಲಿ ಮಾತ್ರ ಇವಿಎಂ ಮೂಲಕ ಮತದಾನ ನಡೆದರೆ,  ಬೇರೆ ಜಿಲ್ಲೆಗಳಲ್ಲಿ  ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ

  • ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ 20 ಜನ ಗಾಯಗೊಂಡಿವುದು ವರದಿಯಾಗಿದೆ.

     

    ಚುನಾವಣೆಗೂ ಮುನ್ನ 34%ರಷ್ಟು ಸ್ಥಾನಗಳಲ್ಲಿ ಅವಿರೋಧವಾಗಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಪ್ರಾರಂಭವಾದ ಚುನಾವಣೆಯು ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ.

    ಘಟನೆಗೆ ಸಂಬಂಧಿಸಿದಂತೆ ಉತ್ತರದ 24 ಪರಗಣದಿಂದ ಹಾಗೂ ದಕ್ಷಿಣದ ಬುದ್ರ್ವಾನ್, ಕೋಚ್‍ಬೆಹರ್‍ನಿಂದ 24 ಪರಗಣಗಳಿಂದ ರಾಜ್ಯ ಚುನಾವಣೆ ಆಯೋಗವು ದೂರು ದಾಖಲಿಸಿಕೊಂಡಿದೆ.

    ಉತ್ತರ ಬಂಗಾಳದ ಕೊಚ್ಬೆಗಾರ್ ಜಿಲ್ಲೆಯ ಶುಕ್ತಾಬಾರಿ ಮತದಾನದ ಬೂತ್‍ನಲ್ಲಿ ನಡೆದ ಬಾಂಬ್ ದಾಳಿ ನಡೆದಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತ, ಓರ್ವ ಮಹಿಳೆ ಸೇರಿದಂತೆ ಒಟ್ಟು 20 ಜನರು ಗಾಯಗೊಂಡಿದ್ದಾರೆ.

    ಗುಂಪೊಂದು ಉತ್ತರ ಬಂಗಾಳದ ಅಲಿಪುರ್ದಾರ್ ಬೂತ್ ಸುತ್ತ ಗೆರೆ ಏಳೆದಿದ್ದು, ಇದನ್ನು ದಾಟದಂತೆ ಮತದಾರರಿಗೆ ಸೂಚಿಸಿದೆ. ಅಲ್ಲದೇ ದಿನ್ಹಾಟ್‍ದಲ್ಲಿ ಎರಡು ಗುಂಪುಗಳ ನಡುವಿನ ಕಲಹದಿಂದಾಗಿ ಕೆಲವು ಮತದಾರಿಗೆ ಗಾಯವಾಗಿದೆ.

    ದಕ್ಷಿಣ ಪರಗಣದ ಭಾಂಗಾರ್‍ದಲ್ಲಿ ನಡೆದ ಘರ್ಷಣೆ ವೇಳೆ ಮಾಧ್ಯಮದ ವಾಹನಗಳಿಗೂ ಹಾನಿಯಾಗಿದೆ. ಬಿರ್ಪಾರಾದಲ್ಲಿ ಐದು ಜನ ಪತ್ರಕರ್ತರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಟ್ರಿಗರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಬುದ್ರ್ವಾನ್ ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಬಾಂಬ್ ಹಾಗೂ ದೊಣ್ಣೆ ಹಿಡಿದು ಮತದಾರರನ್ನು ಹೆದರಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚಿನ ವರದಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.