Tag: Panchamsali

  • ಯತ್ನಾಳ್ ಬಾಣಕ್ಕೆ ಸಿಎಂ ಶಾಕ್ – ಪಂಚಮಸಾಲಿ ಧರ್ಮ ಸಂಕಟದಲ್ಲಿ ಬಿಎಸ್‍ವೈ

    ಯತ್ನಾಳ್ ಬಾಣಕ್ಕೆ ಸಿಎಂ ಶಾಕ್ – ಪಂಚಮಸಾಲಿ ಧರ್ಮ ಸಂಕಟದಲ್ಲಿ ಬಿಎಸ್‍ವೈ

    ಬೆಂಗಳೂರು: ಪಂಚಮಸಾಲಿ ಧರ್ಮ ಸಂಕಟದಲ್ಲಿ ಸಿಲುಕಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಟ್ಟ ಬಾಣಕ್ಕೆ ಶಾಕ್ ಆಗಿದ್ದಾರೆ.

    ಬೃಹತ್ ಸಮಾವೇಶಕ್ಕೆ ಸರ್ಕಾರದ ಪರವಾಗಿ ಆಗಮಿಸಿದ ಸಚಿವ ಮುರುಗೇಶ್ ನಿರಾಣಿ ಮತ್ತು ಸಿ.ಸಿ.ಪಾಟೀಲ್ ಸ್ವಾಮೀಜಿಗಳ ಮನವೊಲಿಸಲು ಮುಂದಾದರು. ಆದ್ರೆ ಸಚಿವರ ಭರವಸೆ ಹೊರತಾಗಿಯೂ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಜಯ ಮೃತ್ಯುಂಜಯ ಸ್ವಾಮೀಜಿಗಳು ಯತ್ನಾಳ್ ಅವರಿಗೆ ಬಿಟ್ಟರು. ಈ ವೇಳೆ ಪ್ರತಿಭಟನಾನಿರತರ ಜೊತೆ ಮಾತನಾಡಿದ ಯತ್ನಾಳ್, ಯಾವ ಕಾರಣಕ್ಕೂ ಪ್ರತಿಭಟನೆ ಕೈ ಬಿಡುವುದು ಬೇಡ. ಬೇಕಾದರೆ ಹೋರಾಟ ಬೆಂಬಲಿಸಿ ಸಿಸಿ ಪಾಟೀಲ್ ಹಾಗೂ ನಿರಾಣಿ ರಾಜೀನಾಮೆ ಕೊಡಲಿ ಎಂದು ಹೊಸ ದಾಳ ಉರುಳಿಸಿದರು.

    ಪ್ರತಿಭಟನೆ ಆರಂಭವಾದಾಗಿನಿಂದಲೂ ಪಾದಯಾತ್ರೆ ತಡೆಯಲು ದಾವಣಗೆರೆ, ಹರಿಹರ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಪ್ರಯತ್ನಿಸಲಾಯ್ತು. ಇದೀಗ ಸಂತೆಗೆ ಬಂದ ಇಬ್ಬರು ವಾಪಾಸ್ ಹೋದವರು. ಈ ಹೋರಾಟಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ ಎಂದರು.

    ಯತ್ನಾಳ್ ಹೊಸ ದಾಳ ಉರುಳಿಸುತ್ತಿದ್ದಂತೆ ಸಚಿವರು ವೇದಿಕೆಯಿಂದ ವಾಪಾಸ್ ಆದರು. ಮಾರ್ಚ್ 4ರಿಂದ ವಿಧಾನ ಮಂಡಲ ಅದಿವೇಶನದವರೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು. ಮಾರ್ಚ್ 4ರೊಳಗೆ 2ಎ ಮೀಸಲಾತಿ ಘೋಷಿಸದಿದ್ದರೆ ಅಮರಣಾವಂತ ಉಪವಾಸಕ್ಕೆ ಮುಂದಾಗಿದ್ದಾರೆ.

  • ದಿಶಾ ರವಿ ವಿಚಾರವಾಗಿ ನಾನು ಹೆಚ್ಚಿಗೆ ಹೇಳಲಾರೆ: ಬೊಮ್ಮಾಯಿ

    ದಿಶಾ ರವಿ ವಿಚಾರವಾಗಿ ನಾನು ಹೆಚ್ಚಿಗೆ ಹೇಳಲಾರೆ: ಬೊಮ್ಮಾಯಿ

    ಬೆಂಗಳೂರು: ದಿಶಾ ರವಿ ವಿಚಾರವಾಗಿ ನಾನು ಹೆಚ್ಚಿಗೆ ಏನು ಹೇಳಲಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿ ರೈತ ಪ್ರತಿಭಟನೆಯ ಟೂಲ್‍ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ದಿಶಾ ರವಿ ಬಂಧನ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತದೆ. ಪ್ರೋಟೋಕಾಲ್ ಕೆಲವೊಂದರಲ್ಲಿ ಅನುಸರಿಸಲ್ಲ. ನಾವು ಕೂಡ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತೇವೆ. ಇದೀಗ ದೆಹಲಿ ಪೊಲೀಸರ ಬಳಿ ದಿಶಾ ವಿರುದ್ಧ ಕೆಲವು ಸಾಕ್ಷ್ಯಗಳಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪ್ರಕರಣ ದೆಹಲಿ ಕೋರ್ಟ್‍ನಲ್ಲಿದೆ. ಹೀಗಾಗಿ ನಾನು ಈ ವಿಚಾರದಲ್ಲಿ ಹೆಚ್ಚಿಗೆ ಹೇಳಲಾರೆ ಎಂದು ಹೇಳಿದರು.

    21ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪಂಚಮಸಾಲಿ ಸಮಾವೇಶ ವಿಚಾರವಾಗಿ, ಪೊಲೀಸರು ಸಮಾವೇಶದಲ್ಲಿ ಅಗತ್ಯ ಭದ್ರತೆ ಕೈಗೊಳ್ಳುತ್ತಾರೆ. ಪ್ರತಿಭಟನೆ ವೇಳೆ ಜನ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಬಂದೋಬಸ್ತ್ ಮಾಡಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಲವಾರು ಹೋರಾಟಗಳು ನಡೆದಿವೆ. ಇಂತಹ ಹೋರಾಟಗಳಲ್ಲಿ ಯಾವುದೇ ತೊಂದರೆಯಾಗದಂತೆ ನಮ್ಮ ಪೊಲೀಸರು ನಿಭಾಯಿಸಿದ್ದಾರೆ. ಈ ಮುನ್ನ ಹಾಲುಮತ ಸಮಾಜದವರು ಹೋರಾಟ ನಡೆಸಿದ್ದರು. ಇದೀಗ ಫೆಬ್ರವರಿ 21 ರಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಪೊಲೀಸರು ದಕ್ಷತೆಯಿಂದ ಸುರಕ್ಷತೆಯೊಂದಿಗೆ ಕ್ರಮ ವಹಿಸುತ್ತಾರೆ ಎಂದರು.

    ರಾಜ್ಯದಲ್ಲಿ ಬಹಳಷ್ಟು ಹೋರಾಟಗಳು ನಡೆಯುತ್ತಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳು ಮೈಸೂರು, ದಾವಣಗೆರೆಗಳಲ್ಲಿ ಈಗಾಗಲೇ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಅಂತಿಮವಾಗಿ ಹೇಳಿಕೆ ನೀಡಿದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

  • ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

    ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

    – ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಲು ಪಟ್ಟು
    – ಪಂಚಮಸಾಲಿ ಹೋರಾಟ ವಿಫಲಕ್ಕೆ ಯತ್ನ ನಡೀತಿದ್ಯಾ?

    ಬೆಂಗಳೂರು: ಮೀಸಲಾತಿ ಹೋರಾಟಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪಂಚಮಸಾಲಿ ಸಮುದಾಯದ ಶ್ರೀಗಳು 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿರುವ ಪಾದಯಾತ್ರೆ ಮತ್ತಷ್ಟು ಬಲ ಬಂದಿದೆ. ಪಂಚಮಸಾಲಿಗಳ ಹೋರಾಟದಲ್ಲಿ ವೀರಶೈವ-ಲಿಂಗಾಯತ ಶ್ರೀಗಳೂ ಕೈ ಜೋಡಿಸಿದ್ದು, ಇಡೀ ಲಿಂಗಾಯತ ಸಮುದಾಯದ 102 ಉಪ ಜಾತಿಗಳಿಗೂ ಒಬಿಸಿ ಮೀಸಲಾತಿಗಾಗಿ ಕಹಳೆ ಮೊಳಗಿಸಿದ್ದಾರೆ.

    ಏಳು ಪುಟಗಳ ಮನವಿ: ಈಗಾಗಲೇ 40 ಉಪ ಜಾತಿಗಳಿಗಿರುವ ಹಿಂದುಳಿದ ವರ್ಗದ ಮೀಸಲಾತಿ ಇತರ ಉಪ ಜಾತಿಗಳಿಗೂ ಸಿಗಲಿದ್ಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಇವತ್ತು ಬೆಳಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ 150ಕ್ಕೂ ಸ್ವಾಮೀಜಿಗಳು ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಪಂಚಮಸಾಲಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಪರಮಶಿವಯ್ಯ ಮೂಲಕ ಸಿಎಂಗೂ ಏಳು ಪುಟಗಳ ಮನವಿ ಪತ್ರ ಸಲ್ಲಿಸಿದ್ದಾರೆ.

    ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವಂತೆ ಮೋದಿ ಸರ್ಕಾರಕ್ಕೆ ಶಿಫಾರಸು ಮಾಡಿದರೆ, ಪ್ರಧಾನಿ ಬಳಿಗೂ ಮಠಾಧೀಶರ ನಿಯೋಗ ಕೊಂಡೊಯ್ಯುವುದಾಗಿ ಉಜ್ಜೈನಿ ಜಗದ್ಗುರುಗಳು ತಿಳಿಸಿದ್ದಾರೆ. ಶ್ರೀಶೈಲ ಶ್ರೀಗಳು ಮಾತನಾಡಿ, ಒಬಿಸಿ ಬೇಡಿಕೆ ಇವತ್ತಿನದ್ದಲ್ಲ. ಕಳೆದ ವರ್ಷ ಮೋದಿ, ಕಾಶಿಯ ಜಂಗಮವಾಡಿಗೆ ಬಂದಾಗಲೇ ಮನವಿ ನೀಡಲು ಸಜ್ಜಾಗಿದ್ದೀವಿ. ಇದು ಶಿಷ್ಟಾಚಾರ ಅಲ್ಲ ಎಂಬ ಕಾರಣಕ್ಕೆ ಸುಮ್ಮನಾದ್ದೀವಿ. ಈಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

    ಹೋರಾಟ ಅಲ್ಲ, ಹಕ್ಕೊತ್ತಾಯ: ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ಹೋರಾಟ ಮಾಡಬೇಕು ಅಂತಾ ಕರೆ ನೀಡಿದರು. ಅಂದು ಒಬಿಸಿಗೆ ಸೇರ್ಪಡೆ ಮಾಡುವ ನಿರ್ಧಾರದಿಂದ ಸಿಎಂ ಯಡಿಯೂರಪ್ಪ ಹಿಂದೆ ಸರಿಯದೇ ಇದ್ದಿದ್ರೆ ಇಂದು ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿ ಬರ್ತಿರಲಿಲ್ಲ ಅಂತಾ ಅಭಿಪ್ರಾಯಪಟ್ಟರು. ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಹೋರಾಟ ಅಲ್ಲ, ಹಕ್ಕೊತ್ತಾಯ. ಪಂಚಮಸಾಲಿಗಳ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಸಿಎಂ ಆಪ್ತರು: ವೀರಶೈವ ಲಿಂಗಾಯತ ಸಮುದಾಯ ಪಂಚಾಚಾರ್ಯರು, ವಿರಕ್ತ ಮಠಾಧೀಶರು ನಡೆಸಿದ ಬೃಹತ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಪ್ತರಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ವಿಜಯೇಂದ್ರ ಆಪ್ತ ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಪಾಲ್ಗೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡ್ತು. ಸಭೆ ಉದ್ದೇಶಿಸಿ ಮಾತನಾಡಿದ ಪರಮಶಿವಯ್ಯ, ಯಡಿಯೂರಪ್ಪ ಪಡುತ್ತಿರುವ ಹಿಂಸೆ ಕಂಡು ನೋವಾಗುತ್ತಿದೆ ಅಂದ್ರು. ಒಂದ್ಕಡೆ ಕುರುಬರು, ಮತ್ತೊಂದ್ಕಡೆ ವಾಲ್ಮೀಕಿಗಳು.. ಇನ್ನೊಂದ್ಕಡೆ ನಾವು ಸಿಎಂಗೆ ಹಿಂಸೆ ನೀಡ್ತಿದ್ದೇವೆ. ಅವರು ಮುಳ್ಳಿನ ಹಾಸಿಗೆ ಮೇಲಿದ್ದಾರೆ. ಮಹತ್ತರ ಜವಾಬ್ದಾರಿ ಸಿಎಂ ಮೇಲಿದೆ. ಆದರೂ ಫೆಬ್ರವರಿ 18-19 ರಂದು ಪ್ರಮುಖ ಮಠಾಧೀಶರ ನಿಯೋಗವನ್ನು ಸಿಎಂ ಭೇಟಿ ಮಾಡಲು ಉದ್ದೇಶಿಸಿದ್ದಾರೆ ಅಂತಾ ಪರಮಶಿವಯ್ಯ ತಿಳಿಸಿದರು.

    ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪಂಚಮಸಾಲಿ ಶ್ರೀಗಳ ಹೋರಾಟಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಅವರು ಹೋರಾಟ ಸರಿಯಾಗಿದೆ. ಆದ್ರೇ, ಅವರು ಕೇವಲ ಒಂದು ಪಂಗಡದ ಪರವಾಗಿ ಹೋರಾಟ ಮಾಡ್ತಿರೋದು ನೋವು ತಂದಿದೆ. ಮೀಸಲಾತಿ ಹೋರಾಟದ ಕಾರಣಕ್ಕೆ ನಮ್ಮ ಸಮಾಜ ಒಡೆಯಬಾರದು ಅಂತಾ ಅಭಿಪ್ರಾಯಪಟ್ರು. ಮಾಜಿ ಸಂಸದ ಪ್ರಭಾಕರ್ ಕೋರೆ ಮಾತಾಡಿ, ಪಂಚಮಸಾಲಿ ಶ್ರೀಗಳಿಗೆ ಕಾನೂನಿನ ತಿಳುವಳಿಕೆ ಕಮ್ಮಿ ಎಂದು ಕಾಣುತ್ತೆ. 2ಎಗಿಂತ ಓಬಿಸಿ ಹೆಚ್ಚು.. ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಬೇಕು ಅಂತಾ ಸಿಎಂಗೆ ಮನವಿ ಮಾಡಿದ್ದೀನಿ. ಪಂಚಮಸಾಲಿಗಳು ನಮ್ಮ ಹೋರಾಟದ ಜೊತೆ ಕೈಜೋಡಿಸಲಿ ಅಂತಾ ಹೇಳಿದರು.

    ವಿಜಯೇಂದ್ರ ವರ್ಸಸ್ ಕಾಶಪ್ಪನವರ್:
    ಮೀಸಲಾತಿ ಹೋರಾಟದಲ್ಲಿ ರಾಜಕೀಯ ನುಸುಳಿದಂತೆ ಕಾಣುತ್ತಿದೆ. ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕಲು ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ ಸಮುದಾಯದ ಎಲ್ಲಾ ಸ್ವಾಮೀಜಿಗಳನ್ನು ಎತ್ತಿಕಟ್ಟಿದ್ದಾರೆ ಎಂಬ ಗಂಭೀರ ಆಪಾದನೆ ಕೇಳಿಬಂದಿದೆ. ತುಮಕೂರಲ್ಲಿ ಮಾತಾಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಸ್ವಾಮೀಜಿಗಳ ಮೂಲಕ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬಾರದೆಂದು ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಇಲ್ಲಿ ಸಿಎಂ ಪುತ್ರ ವಿಜಯೇಂದ್ರ ನಡೆಸ್ತಿರುವ ಷಡ್ಯಂತ್ರ್ಯ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಾಶಪ್ಪನವರ್ ಆರೋಪ ಮಾಡಿದ್ದಾರೆ.

    ಪಂಚಮಸಾಲಿ ಪಾದಯಾತ್ರೆ ವೇಳೆಯೇ ಸ್ವಾಮೀಜಿಗಳನ್ನು ಸೇರಿಸಬೇಕಿತ್ತಾ? ವಿಜಯೇಂದ್ರ ಷಡ್ಯಂತ್ರ್ಯ ಫಲಪ್ರದ ಆಗಲು ಬಿಡಲ್ಲ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ರೆ ಉಗ್ರ ಹೋರಾಟ ನಡೆಸ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಸಭೆ ಹಿಂದೆ ಪ್ರಮುಖರೊಬ್ಬರ ಪುತ್ರ ಇದ್ದಾರೆ ಎನ್ನಲಾಗಿದೆ. ಸಮುದಾಯದ ಸ್ವಾಮಿಜಿಗಳ ಹೋರಾಟ ನಮ್ಮ ಹೋರಾಟಕ್ಕೆ ಪೂರಕವಾಗಿರಬೇಕು. ಹತ್ತಿಕ್ಕುವ ಪ್ರಯತ್ನ ಇದ್ರಲ್ಲಿ ಇರಬಾರದು ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಶ್ರೀಗಳು, ನಾವು ಯಾವತ್ತು ಕೂಡ ಪಂಚಮಸಾಲಿ ಶ್ರೀಗಳ ನಿಲುವಿನ ವಿರುದ್ಧ ಇಲ್ಲ. ಅವರ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿಲ್ಲ. ನಮ್ಮ ನಿಲುವು ಒಂದೇ ಎಲ್ಲರನ್ನು ಓಬಿಸಿಗೆ ಸೇರಿಸಬೇಕು ಎನ್ನುವುದಷ್ಟೇ ಆಗಿದೆ ಎಂದು ಸ್ಪಷ್ಟಪಡಿಸಿದರು.

    ವಿಜಯೇಂದ್ರ ತಿರುಗೇಟು: ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ನಾನು ಯಾವ ಹೋರಾಟವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಪ್ರಸ್ತಾಪ ಮಾಡದಿದ್ರೆ ತಿಂದ ಅನ್ನ ಅರಗೋದಿಲ್ಲ. ಯಾರ ಯೋಗ್ಯತೆ ಏನು ಗೊತ್ತಿದೆ. ಯಾರು ನನ್ನ ಬಗ್ಗೆ ಮಾತಾಡಿದ್ದು, ಬಾರ್‍ನಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲಾ ಆ ಕಾಶಪ್ಪನವರಾ ಎಂದು ಪ್ರಶ್ನಿಸಿ ಹರಿಹಾಯ್ದರು.

  • ಸಿಎಂ ಯಡಿಯೂರಪ್ಪಗೆ ಅಷ್ಟ ಸವಾಲು – ಆತುರದ ನಿರ್ಣಯ ಬೇಡ ಎಂದ ಹೈಕಮಾಂಡ್

    ಸಿಎಂ ಯಡಿಯೂರಪ್ಪಗೆ ಅಷ್ಟ ಸವಾಲು – ಆತುರದ ನಿರ್ಣಯ ಬೇಡ ಎಂದ ಹೈಕಮಾಂಡ್

    ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ, ಸಂಪುಟ ಬಿಕ್ಕಟ್ಟು, ಪಕ್ಷದೊಳಗಿನ ವಿರೋಧಿಗಳ ರಣತಂತ್ರಗಳಿಗೆ ಹೈರಾಣಾಗಿರುವ ಸಿಎಂ ಯಡಿಯೂರಪ್ಪಗೆ ಈಗ ಹೊಸದಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ ಅಷ್ಟ ಸಂಕಷ್ಟಗಳು ಎದುರಾಗಿದೆ. ಪಂಚಮಸಾಲಿ, ಕುರುಬ ಸಮುದಾಯಗಳ ಹೋರಾಟ ನಡೆಯುತ್ತಿರೋ ಬೆನ್ನಲ್ಲೇ, ವಾಲ್ಮೀಕಿ ಸಮುದಾಯ ಕೂಡ ಸಿಡಿದೆದ್ದಿದೆ. ಇವತ್ತು ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಗಡುವು ಕೂಡ ನೀಡಲಾಗಿದೆ.

    ಇದೇ ಹೊತ್ತಲ್ಲಿ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ಕೆಲ ಸಮುದಾಯಗಳು ಪ್ರಬಲ ವಿರೋಧ ಮಾಡುತ್ತಿವೆ. ಒಬ್ಬರ ಮೀಸಲಾತಿ ಬೇಡಿಕೆ ಈಡೇರಿಸಿದ್ರೇ ಇನ್ನೊಬ್ಬರು ಸಿಡಿದೇಳ್ತಾರೆ. ಇದರಿಂದ ಯಾರಿಗೆ ಕೊಡೋದು? ಯಾರಿಗೆ ಬಿಡೋದು ಅಂತಾ ಸಿಎಂ ಯಡಿಯೂರಪ್ಪ ತಲೆ ಕೆಡಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿವೆ.

    ಹೀಗಾಗಿ ಮೀಸಲಾತಿ ಹೋರಾಟಗಳು ಕೈಮೀರೋದನ್ನು ತಡೆಯೋದಕ್ಕೆ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಎರಡು ವರ್ಷಗಳ ಕಾಲ ಮೀಸಲಾತಿ ಮುಲಾಮು ಹಚ್ಚುತ್ತಾ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪ್ಲಾನ್ ಕೂಡ ನಡೆದಿದೆ. ಇದರ ಹೊಣೆಯನ್ನು ಆಯಾ ಸಮುದಾಯಗಳ ಸಚಿವರಿಗೆ ಸಿಎಂ ವಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    1. ವಾಲ್ಮೀಕಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- ಶೇ.7.5
    ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಏರಿಸಬೇಕು. ಮೀಸಲಾತಿ ಕುರಿತು ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಹಲವು ತಿಂಗಳಾದರೂ ಬೇಡಿಕೆ ಈಡೇರಿಸಬೇಕು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. ಇಂದು ವಾಲ್ಮೀಕಿ ಶ್ರೀಗಳು ಮುಖ್ಯಮಂತ್ರಿಗಳಿಗೆ ಮಾರ್ಚ್ 9ರವರೆಗೆ ಗಡುವು ನೀಡಿದ್ದಾರೆ.

    2. ಪಂಚಮಸಾಲಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- 2ಎ
    2ಎ ಮೀಸಲಾತಿಗೆ ಒತ್ತಾಯಿಸಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿಗರು ಪಾದಯಾತ್ರೆ. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಇದಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ರಾಜಕೀಯ ಮೀಸಲಾತಿ ಬೇಡ ಎಂದು ಶ್ರೀಗಳು ಹೇಳಿದ್ದಾರೆ.

    3. ಕುರುಬ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
    ಎಸ್‍ಟಿ ಸಮುದಾಯಕ್ಕೆ ಸೇರಿಸಲು ಕುರುಬ ಸಮುದಾಯದವರು ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದ ನಿರಂಜನಾಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದ್ದಾರೆ. ಬೇಡಿಕೆ ಪರಿಶೀಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ.

    4. ಈಡಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ ಪಟ್ಟಿ ಬದಲಿಸಬೇಡಿ
    ಪಂಚಮಸಾಲಿ ಮತ್ತು ಬಲಿಷ್ಠ ಜಾತಿಗಳನ್ನು 2ಎ ಪಟ್ಟಿಗೆ ಸೇರಿಸಬಾರದು. 2ಎ ಪಟ್ಟಿಯಲ್ಲಿರುವ 102 ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಬಾರದು. 2ಎ ಮೀಸಲಾತಿ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಆಗ್ರಹಿಸಿದೆ. ಈಡಿಗ ಮತ್ತು ಈಡಿಗದ 26 ಉಪಜಾತಿಗಳು 2ಎ ಪಟ್ಟಿಯಲ್ಲಿದೆ.

    5. ಗಾಣಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
    ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಗಾಣಿಗ ಸಮಾಜ ಪಟ್ಟು ಹಿಡಿದಿದ್ದು, ಸದ್ಯದಲ್ಲೇ ಗಾಣಿಗ ಸಮುದಾಯದಿಂದ ಶಕ್ತಿ ಪ್ರದರ್ಶನ ಮಾಡ್ತೀವಿ ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

    6. ಮಾದಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಒಳ ಮೀಸಲಾತಿ
    ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವಂತೆ ಆಗ್ರಹ ವ್ಯಕ್ತವಾಗಿದ್ದು, ನ್ಯಾ.ಎ.ಜಿ ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ಪಟ್ಟು ಹಿಡಿದಿದ್ದಾರೆ. ಮಾ.25ರಿಂದ ಏ.14ರವರೆಗೂ ಪಾದಯಾತ್ರೆ ಮಾಡುವ ಎಚ್ಚರಿಕೆಯನ್ನ ಮಾದಿಗ ಸಮುದಾಯ ನೀಡಿದೆ. ದಲಿತ ಹೋರಾಟಗಾರ ಹರಿಹರದ ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

    7. ಗಂಗಾಮತಸ್ಥ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿ ಮೀಸಲಾತಿ
    ಗಂಗಾಮತಸ್ಥ ಹಾಗೂ 38 ಉಪಜಾತಿಗಳನ್ನು ಎಸ್‍ಟಿಗೆ ಸೇರಿಸಲು ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. 2014ರ ಮಾರ್ಚ್ ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು 2 ಬಾರಿ ಪ್ರಸ್ತಾವ ಮಾಡಲಾಗಿತ್ತು. ಆದ್ರೆ ಜನಗಣತಿ ಮಹಾನಿರ್ದೇಶಕರು ಪ್ರಸ್ತಾವವನ್ನ ತಿರಸ್ಕರಿಸಿದ್ದರು. 2018ರ ಅಕ್ಟೋಬರ್ ಮತ್ತು 2019ರ ಜುಲೈನಲ್ಲಿ ಹೆಚ್ಚುವರಿ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿತ್ತು. ಫೆ.2ರಂದು ಕೇಂದ್ರಕ್ಕೆ ಮತ್ತೆ ಹೆಚ್ಚುವರಿ ಮಾಹಿತಿ, ದಾಖಲೆ ಸಲ್ಲಿಕೆ ಮಾಡಲಾಗಿದೆ.

    8. ಒಕ್ಕಲಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ
    ಪ್ರಬಲ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಕೂಗು ಕೇಳಿ ಬಂದಿದೆ. ಪಂಚಮಸಾಲಿ ಬೆನ್ನಲ್ಲೇ 2ಎ ಮೀಸಲಾತಿ ಕಲ್ಪಿಸಲು ಒತ್ತಾಯ ಹಾಕಲಾಗಿದ್ದು, ಈ ಕುರಿತು ಜೆಡಿಎಸ್ ವಕ್ತಾರ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.