Tag: Panchamsali

  • ಜೂ.27ರಂದು 50 ಪಂಚಮಸಾಲಿಗಳಿಂದ ಸಿಎಂ ಮನೆ ಮುಂದೆ ಧರಣಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

    ಜೂ.27ರಂದು 50 ಪಂಚಮಸಾಲಿಗಳಿಂದ ಸಿಎಂ ಮನೆ ಮುಂದೆ ಧರಣಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

    ಹಾವೇರಿ: 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಜೂನ್ 27ರಂದು ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ 50 ಸಾವಿರ ಪಂಚಮಸಾಲಿಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿ ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗವು ಜಿಲ್ಲೆಯಲ್ಲಿ ಸಮಾಜದ ಜನರ ಸ್ಥಿತಿಗತಿ ಕುರಿತು ಸಮೀಕ್ಷೆ ಆರಂಭಿಸಲು ಮುಂದಾಗಿದೆ. ಸಿಎಂ ಅವರಿಗೆ ಈಗಾಗಲೇ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಸರ್ಕಾರ ಭರವಸೆ ಈಡೇರಿಸುವುದಾಗಿ ಹೇಳಿ ಕೊಟ್ಟ ಮಾತು ತಪ್ಪಿದೆ. ಹಾಗಾಗಿ ಹೋರಾಟ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬ ಹೆಂಡ್ತಿಗೆ ಒಬ್ಬನೇ ತಾಳಿ ಕಟ್ಟಬಹುದು, ಇಲ್ಲಿ ಒಬ್ಬ ಹೆಂಡ್ತಿಗೆ ಇಬ್ಬಿಬ್ರು ತಾಳಿ ಕಟ್ಟಿದ್ದಾರೆ: ಸಿ.ಎಂ.ಇಬ್ರಾಹಿಂ

    ಮುಖ್ಯಮಂತ್ರಿಗಳ ನಿವಾಸವೇ ವಿಧಾನಸೌಧ ಎಂಬ ಭಾವನೆಯಿಂದ ಶಿಗ್ಗಾಂವಿಯ ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಆಯೋಗದವರು ಸಮೀಕ್ಷೆಗೆ ಬಂದಾಗ ಸಮಾಜದ ಜನರು ಲಿಂಗಾಯತರು ಅಂತ ಹೇಳದೇ ಸ್ಪಷ್ಟವಾಗಿ ಪಂಚಮಸಾಲಿಗಳು ಎಂದು ಹೇಳಬೇಕು. ನೈಜಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದ್ದಾರೆ.

    ನಮ್ಮಲ್ಲಿ ಪಕ್ಷ, ಮಠಗಳಲ್ಲಿ ಭಿನ್ನತೆ ಇರಬಹುದು. ಆದರೆ 2ಎ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಸಿಎಂ ಅವರಿಗೆ ಧರಣಿ ಸತ್ಯಾಗ್ರಹದ ಬಗ್ಗೆ ಬಹಿರಂಗ ಪತ್ರ ಕೊಟ್ಟ ಮೇಲೆ ಸಚಿವ ಸಿ.ಸಿ.ಪಾಟೀಲರು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಜೂನ್ 22ರಂದು ಸಚಿವ ಸಿ.ಸಿ.ಪಾಟೀಲ ನಿವಾಸದಲ್ಲಿ ಸಭೆ ಕರೆದಿದ್ದಾರೆ. ನಮ್ಮ ಸಮಾಜದ ಪ್ರಮುಖರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಜೂನ್ 27ರ ಒಳಗಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂಬುದು ನಮ್ಮ ಒತ್ತಾಯ. ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಂಗನವಾಡಿಯಲ್ಲಿ ಅನ್ನದ ಬಿಸಿಗಂಜಿ ಬಿದ್ದು ಆಸ್ಪತ್ರೆಗೆ ಸೇರಿದ ಮಕ್ಕಳು

    ಸಿಎಂ ಬೊಮ್ಮಾಯಿ ಅವರ ಮೇಲೆ ಇವತ್ತಿಗೂ ನಂಬಿಕೆಯಿದೆ. ಆದರೆ ಅವರು ಮೀಸಲಾತಿ ಘೋಷಣೆ ಬಗ್ಗೆ ವಿಳಂಬ ಮಾಡುತ್ತಿರುವುದರ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಇದರಿಂದ ನಮ್ಮಲ್ಲಿ ನಿರಾಶೆ ಭಾವನೆ ಬಂದಿದೆ. ನಮಗೆ ಸಿಎಂ ಅವರು ಜೂನ್ 22ರ ಸಭೆ ಮೂಲಕ ಸಿಹಿ ಸುದ್ದಿ ಕೊಡಬಹುದು ಎಂಬ ವಿಶ್ವಾಸವಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

    Live Tv

  • ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ

    ಯಾದಗಿರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ. ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

    ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿರುವ ಸ್ವಾಮೀಜಿ, ಮಾರ್ಚ್ ತಿಂಗಳ ಒಳಗೆ ಸಿಎಂ ಮೀಸಲಾತಿ ನೀಡುತ್ತೇನೆಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ನಂಬಿಕೆ, ವಿಶ್ವಾಸವಿದೆ. ಸಿಎಂ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದರು.

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುತ್ತೆನೆಂದು ಭರವಸೆ ನೀಡಿದ್ದ ಮಾಜಿ ಸಿಎಂ ಬಿಎಸ್‍ವೈ ಮೀಸಲಾತಿ ಕಲ್ಪಿಸದೇ ದ್ರೋಹ ಬಗೆದಿದ್ದಾರೆ. ಬಿಎಸ್‍ವೈ ಮೇಲೆ 10 ವರ್ಷ ನಾವು ನಂಬಿಕೆ ಇಟ್ಟಿದ್ದೆವು. ಆದರೆ ಅವರು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ:  ಮೀಸಲಾತಿ ಅವಹೇಳನ- ವಿವಾದಕ್ಕೆ ಒಳಗಾದ 83 ಸಿನಿಮಾ

    ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ, ಮಂತ್ರಿ ಸ್ಥಾನಕ್ಕಿಂತ ಮೀಸಲಾತಿ ಕಲ್ಪಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಹೋರಾಟ ನಡೆಸುತ್ತೇವೆ. ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸಿದರೆ ಸಮಾಜದ ಜನರಿಗೆ ಅನುಕೂಲವಾಗುತ್ತದೆ. ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟು ಮೀಸಲಾತಿ ಸೌಲಭ್ಯ ಕಳೆದುಕೊಳ್ಳುವುದು ಬೇಡ ಅಂತ ತಮ್ಮ ಸಮಾಜದ ಶಾಸಕರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ: ಸಿದ್ದಗಂಗಾ ಶ್ರೀ

  • ರಾಣಿ ಚೆನ್ನಮ್ಮಳ ಫೋಟೋ ಹಾಕಿದಂತೆ ಬೊಮ್ಮಾಯಿಯವರ ಫೋಟೋ ಹಾಕ್ತೇವೆ: ಮೃತ್ಯುಂಜಯ ಸ್ವಾಮೀಜಿ

    ರಾಣಿ ಚೆನ್ನಮ್ಮಳ ಫೋಟೋ ಹಾಕಿದಂತೆ ಬೊಮ್ಮಾಯಿಯವರ ಫೋಟೋ ಹಾಕ್ತೇವೆ: ಮೃತ್ಯುಂಜಯ ಸ್ವಾಮೀಜಿ

    ಹಾವೇರಿ: ಮುಖ್ಯಮಂತ್ರಿಯವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಚೆನ್ನಮ್ಮಳ ಫೋಟೋ ಹಾಕಿದಂತೆ ಬೊಮ್ಮಾಯಿಯವರ ಫೋಟೋ ಹಾಕುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಮತ್ತು ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಸಾಫ್ಟ್ ಆಗಿಲ್ಲ. ಬಸವರಾಜ ಬೊಮ್ಮಾಯಿಯವರು ನಮಗೆ ನೀಡಿದಷ್ಟು ಸ್ಪಂದನೆಯನ್ನ ಹಿಂದೆ ಯಾರೂ ನೀಡಿಲ್ಲ. ನಿಮ್ಮ ಪಾದಯಾತ್ರೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಅಂತಾ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಮತ್ತೇನು ಬೇಕು ಕೇಳಿ ಅಂತಾ ಸಿಎಂ, ಸಚಿವ ಸಿ.ಸಿ.ಪಾಟೀಲರ ಮನೆಗೆ ಬಂದಾಗ ಕೇಳಿದರು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಾಜಿ ಪ್ರತಿಮೆಗೆ ಮಸಿ – ರಣಧೀರ ಪಡೆಯ 7 ಜನರ ಬಂಧನ

    ಆಗ ನಮಗೆ 2ಎ ಮೀಸಲಾತಿ ಕೊಟ್ಟರೆ ಸಾಕು ಸಾವಿರ ಕೋಟಿ ಕೊಟ್ಟಷ್ಟು ಸಮಾಧಾನ ಆಗುತ್ತದೆ ಅಂದೆ. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ 2ಎ ಮೀಸಲಾತಿ ಹೋರಾಟದ ಸಮಾರಂಭದಲ್ಲಿ ಮಾಡಲು ಸಹಾಯ ಮಾಡಿದರು. ನಮ್ಮ ಹೋರಾಟದ ಹೆಜ್ಜೆ ಹೆಜ್ಜೆಗೂ ಮೀಸಲಾತಿಯ ಹೋರಾಟಕ್ಕೆ ಸಿಎಂ ಸ್ಪಂದನೆ ನೀಡಿದ್ದಾರೆ. ನಮ್ಮ ಸಮಾಜದ ಮುಖಂಡರ ಸಭೆಗೆ ಸ್ವತಃ ಸಿಎಂ ಬಂದು ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಅತೀ ಶೀಘ್ರದಲ್ಲಿ ಸಮಾಜಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸಿಎಂ ರವರು ಪ್ರೀತಿಯ ಆಮಂತ್ರಣ ಕೊಟ್ಟಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇವೆ. 2022ಕ್ಕೆ ಬಸವರಾಜ ಬೊಮ್ಮಾಯಿಯವರು ಹಾಲುಮತ, ವಾಲ್ಮೀಕಿ ಸಮಾಜ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುತ್ತಾರೆ. ಸಮಾಜಕ್ಕೆ ಮೀಸಲಾತಿ ಕೊಟ್ಟು ಮುಂದೆ ಅವರೆ ಮುಖ್ಯಮಂತ್ರಿ ಆಗುತ್ತಾರೆ. ಮಹಿಳಾ ರೆಜಿಮೆಂಟ್ ಗೆ ತಾಯಿ ಕಿತ್ತೂರು ಚೆನ್ನಮ್ಮಳ ಹೆಸರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಅಂತಾ ಸಿಎಂಗೆ ಮನವಿ ಮಾಡಿದರು.

  • ಪಂಚಮಸಾಲಿ 2ಎ ಮೀಸಲಾತಿ- ಸದನದಲ್ಲಿ ಸಿಎಂ ಉತ್ತರ

    ಪಂಚಮಸಾಲಿ 2ಎ ಮೀಸಲಾತಿ- ಸದನದಲ್ಲಿ ಸಿಎಂ ಉತ್ತರ

    ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಸಿಎಂ ಉತ್ತರಕ್ಕೆ ಆಗ್ರಹಿಸಿ ಗುರುವಾರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ.

    ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ. ಆಯೋಗ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

    ದತ್ತಾಂಶಗಳಿಲ್ಲದೆ ಮಾಡಿದ ಮರಾಠ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದನ್ನು ಸಿಎಂ ಸ್ಮರಿಸಿದರು. ಪಂಚಮಸಾಲಿ ಜೊತೆಗೆ 13 ಸಮುದಾಯಗಳ ಮೀಸಲಾತಿ ಬೇಡಿಕೆ ಸರ್ಕಾರದ ಮುಂದಿದೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ

    ಈ ಬೆನ್ನಲ್ಲೇ ಅಕ್ಟೋಬರ್ 1ರಿಂದ ಹೋರಾಟ ಪ್ರಾರಂಭ ಮಾಡುವುದಾಗಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

  • ಪಂಚಮಸಾಲಿ ಮೀಸಲಾತಿ- ಮತ್ತೊಂದು ಹೋರಾಟಕ್ಕೆ ಸಿದ್ಧತೆ

    ಪಂಚಮಸಾಲಿ ಮೀಸಲಾತಿ- ಮತ್ತೊಂದು ಹೋರಾಟಕ್ಕೆ ಸಿದ್ಧತೆ

    – ಪಂಚಮಸಾಲಿ ಸ್ವಾಮೀಜಿಗಳಿಂದ ಪೂರ್ವಭಾವಿ ಸಭೆ

    ಮಡಿಕೇರಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಹೋರಾಟ ಆರಂಭವಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇಂದು ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿಭಾಗಕ್ಕೆ ತಲುಪಿದೆ.

    ಕೊಡಗಿನ ಕೋಡ್ಲಿಪೇಟೆಯ ಕಲ್ಲು ಮಠಕ್ಕೆ ಅಗಮಿಸಿದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿದರು.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಪ್ರತಿಜ್ಞಾ ಪಂಚಾಯತ್ ಅಭಿಯಾನವನ್ನು ಆರಂಭಿಸುತ್ತಿದ್ದು, ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಸೇರಿದಂತೆ ಅನೇಕ ಪಂಚಮಸಾಲಿ ಮುಖಂಡರು ಅಭಿಯಾನದಲ್ಲಿ ಭಾಗಿಯಾಗಿಯಾಗಿದ್ದರು. ಇದನ್ನೂ ಓದಿ: ನಂದಿಬೆಟ್ಟದ ಬಳಿ ಮತ್ತೆ ಭೂಕುಸಿತ – ತಾತ್ಕಾಲಿಕ ರಸ್ತೆಯೂ ಸಂಪೂರ್ಣ ಬಂದ್

    ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಸೆಪ್ಟೆಂಬರ್ 15ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ಅಷ್ಟರಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ನಂಬಿಕೆ ಇದೆ. ಬೇಡಿಕೆ ಈಡೇರದಿದ್ದರೆ 30ರ ಬಳಿಕ ಧರಣಿ ಸತ್ಯಾಗ್ರಹ ಮತ್ತೆ ನಡೆಯಲಿದೆ. ಅಕ್ಟೋಬರ್ 1ರಂದು ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಜಯಂತಿ ಇರುವುದರಿಂದ ಅದೇ ದಿನ ಜಯಂತಿ ಆಚರಿಸಿ ಅದೇ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಅಲ್ಲಿಯವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ. ಸರ್ಕಾರ ಮತ್ತು ನಮ್ಮ ಹೋರಾಟದ ನಡುವೆ ಸಚಿವ ಸಿ.ಸಿ.ಪಾಟೀಲ್ ಇದ್ದಾರೆ. ಅವರ ಮೂಲಕ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಹೋಗುತ್ತಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ತಿಳಿಸಿದರು.

    ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಮಾತಾನಾಡಿ, ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮೀಸಲಾತಿ ನೀಡುತ್ತಾರೆ ಎನ್ನುವ ಭರವಸೆ ಇದೆ. ಇಲ್ಲದಿದ್ದರೆ ಕಳೆದ ಬಾರಿಯ ಹೋರಾಟದಲ್ಲಿ 10 ಲಕ್ಷ ಜನರು ಭಾಗಿಯಾಗಿದ್ದರು. ಈ ಬಾರಿ 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲಿದ್ದಾರೆ. ಅಲ್ಲಿಯವರೆಗೆ ಮುಂದುವರಿಯಲು ರಾಜ್ಯ ಸರ್ಕಾರ ಬೀಡಬರದು ಎಂದು ತಿಳಿಸಿದರು.

  • ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

    ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

    – ಆಗಸ್ಟ್ 12ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆ
    – ಸೆಪ್ಟೆಂಬರ್ ಗೆ ಮೀಸಲಾತಿಗೆ ಕೊಟ್ಟ ಸಮಯ ಅಂತ್ಯ

    ದಾವಣಗೆರೆ: ಸೆಪ್ಟೆಂಬರ್ ಗೆ ಸರ್ಕಾರಕ್ಕೆ ನೀಡಿದ್ದ ಕಾಲಾವಧಿ ಮುಗಿಯುತ್ತದೆ. ಅಕ್ಟೋಬರ್ ಒಂದರೊಳಗೆ ಮೀಸಲಾತಿ ಪ್ರಕಟಿಸಿ ಎಂದು ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯ ಮಾಡಿದರು.

    ದಾವಣಗೆರೆಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಅಕ್ಟೋಬರ್ ಒಂದರೊಳಗಾಗಿ ಆ ಪ್ರಕಾರ ಮೀಸಲಾತಿ ನೀಡಬೇಕು. ವಿಳಂಬವಾದ್ರೆ ಮತ್ತೆ ಪ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ವಾಮೀಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಕಾಯ್ದೆಯನ್ನು ಮಂಡಿಸಿರುವುದನ್ನು ಸ್ವಾಗತಿಸುತ್ತೇನೆ. ಆಯಾ ರಾಜ್ಯಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದೆ. ಮುಂದಿನ ತಿಂಗಳು ಸರ್ಕಾರ ನೀಡಿದ್ದ ಕಾಲಮಿತಿ ಮುಕ್ತಾಯಗೊಳ್ಳುತ್ತದೆ ಎಂದರು.

    ನೂತನ ಸಿಎಂ ಬೊಮ್ಮಾಯಿ ರೈಟ್ ಟೈಮ್ ಗೆ ರೈಟ್ ಪರ್ಸನ್ ಮುಖ್ಯಮಂತ್ರಿ. ಬೊಮ್ಮಾಯಿ ನಮ್ಮವರು ಸಿಎಂ ಆಗಿರುವುದಕ್ಕೆ ಅಭಿಮಾನ ಇದೆ. ಮೀಸಲಾತಿ ಚಳುವಳಿಯಲ್ಲಿ ಬೊಮ್ಮಾಯಿ ಅಂದು ಸಂಪೂರ್ಣ ಸಹಕಾರ ಕೊಟ್ಟಿದ್ದರು. ಯಡಿಯೂರಪ್ಪನವರು ಅಂದು ಮೀಸಲಾತಿ ನೀಡುವ ವಿಚಾರವಾಗಿ ವ್ಯಕ್ತಿಯಾಗಿ ಮಾತು ಕೊಟ್ಟಿಲ್ಲ. ಒಂದು ಸರ್ಕಾರದ ಪ್ರತಿನಿಧಿಯಾಗಿ ಮಾತು ಕೊಟ್ಟಿದ್ದರು, ಈಗ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    ಮೀಸಲಾತಿ ನೀಡದಿದ್ದರೆ ಇಡೀ ಪಂಚಮಸಾಲಿ ಸಮಾಜ ಅಕ್ಟೋಬರ್ ಒಂದಕ್ಕೆ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್.ಪಟೇಲ್ ರವರ ಜನ್ಮದಿನದಂದು ಸರ್ಕಾರದ ವಿರುದ್ಧ ಹೋರಾಟ ಮಾಡ್ತೀವಿ ಎಂದರು. ಇದಕ್ಕೂ ಮುನ್ನ ನಾವು ರಾಜ್ಯ ಸರ್ಕಾರಕ್ಕೆ ನೆನಪಿಸಲು ಆಗಸ್ಟ್ 12 ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆ ನಡೆಸಲಿದ್ದು, ಈ ದುಂಡುಮೇಜಿನ ಸಭೆಯಲ್ಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ರಾಜ್ಯದ ಮೂಲೆ ಮೂಲೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

  • ಸಮುದಾಯದ ಹೆಸರೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ: ಯತ್ನಾಳ್

    ಸಮುದಾಯದ ಹೆಸರೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ: ಯತ್ನಾಳ್

    – ಅಧಿವೇಶನದಲ್ಲಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ
    – ಸಿಎಂ ನಾಪತ್ತೆ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು

    ಬೆಂಗಳೂರು: ಸಮುದಾಯದ ಹೆಸರು ಹೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ ಎಂದು ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗುರ ಉಂಟು ಮಾಡಿದರು.

    ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಅವಕಾಶ ಕೇಳಿದರು. ಆದ್ರೆ ಸ್ಪೀಕರ್ ಕೊನೆಯಲ್ಲಿ ಸಮಯ ನೀಡುತ್ತೇನೆಂದಾಗ ಕೋಪಗೊಂಡ ಯತ್ನಾಲ್ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮೊದಲೇ ನೀವೇ ಮಾತನಾಡಿ. ಸಿಎಂ ಬಂದ ನಂತರ ನಾನು ಮಾತನಾಡುತ್ತೇನೆ ಎಂದರು.

    ಸಿಎಂ ಯಡಿಯೂರಪ್ಪ ನಿನ್ನೆ ಮಾತನಾಡ್ತೀನಿ ಅಂತ ಹೊರಗಡೆ ಹೇಳಿದ್ದರು. ಆದ್ರೆ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ. ನಮ್ಮ ಸಮಾಜದ ಹೆಸರೇಳಿಕೊಂಡು ಸಿಎಂ ಆ ಖುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಸಿಎಂ ಉತ್ತರ ಕೊಡ್ತಿಲ್ಲ ಅಂದರೆ ನಾಪತ್ತೆ ಆಗಿದ್ದಾರೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಸಿಎಂ ನಾಪತ್ತೆ ಆಗಿದ್ದಾರೆಂದು ಹೇಳಬಾರದು ಎಂದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟಿತು.

    ಶೈಕ್ಷಣಿಕ ಸಾಮಾಜಿಕವಾಗಿ ಹಲವು ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಬೇಕಾಗಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವರನ್ನು ಪ್ರತಿನಿಧಿಸುವವರೇ ಇಲ್ಲದೆ ಅನ್ಯಾಯ ಆಗ್ತಿದೆ. ಪಂಚಮಸಾಲಿ ಸಮುದಾಯ ಸಹ ಹಿಂದುಳಿದ ವರ್ಗಕ್ಕೆ ಸೇರಬೇಕು ಎಂಬುದು 25 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದೆ. ಎಸ್‍ಎಂ ಕೃಷ್ಣ ಕಾಲದಲ್ಲಿ ಹಿಂದುಳಿದ ವರ್ಗಕ್ಕೆ ಅಧ್ಯಯನಕ್ಕೆ ಸೂಚಿಸಿದ್ದರು. ಪಂಚಮಸಾಲಿ ಸಮುದಾಯ ಎಲ್ಲಿಯೂ ತಮ್ಮ ಜಾತಿ ಹೆಸರು ಬರೆದಿಲ್ಲ. ವೀರಶೈವ ಲಿಂಗಾಯತ ಅಂತಲೇ ಬರೆದುಕೊಂಡು ಬಂದಿದ್ದರಿಂದ ಕೇಂದ್ರ ಓಬಿಸಿ ಪಟ್ಟಿಗೂ ಸೇರಿಸಿಲ್ಲ.

    ಸಿಎಂ ನೇರವಾಗಿ ಉತ್ತರ ನೀಡಲಿ: ನಮ್ಮ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಹಿಂದೆ ಆಶ್ವಾಸನೆ ಕೊಟ್ಟಿದ್ದರು. ವೀರಶೈವ ಲಿಂಗಾಯತ ಇತಿಹಾಸದಲ್ಲಿ 10 ಲಕ್ಷ ಜನ ಸೇರಿ ಹೋರಾಟ ಮಾಡಿದ್ದು ಇದೇ ಮೊದಲು ಪಂಚಮಸಾಲಿ ಅಂದ್ರೆ ಕೊನೆ ಸಾಲಿನಲ್ಲಿರುವವರು ನಾವು. ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯ ವಿಚಾರದಲ್ಲಿ ಸರ್ಕಾರದಿಂದ ಬಹಳ ಕೆಟ್ಟ ಸಂದೇಶ ಹೋಗ್ತಾ ಇದೆ. ಸಿಎಂ ಯಡಿಯೂರಪ್ಪಗೆ ನಮ್ಮ ಸಮುದಾಯದ ದೊಡ್ಡ ಮತ ನೀಡಿದೆ. ನಮಗೆ ಬೇರೆ ಯಾವುದೇ ಮಂತ್ರಿಗಳ ಉತ್ತರ ಕೊಡಬೇಕಾಗಿಲ್ಲ. ಸ್ವತಃ ಸಿಎಂ ನೇರವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ ಸದನದ ಒಳಗೆ ನಾನು ಹೋರಾಟ ಮಾಡ್ತೇನೆ. ಅಲ್ಲಿ ಸಮಾಜದವರು ಹೋರಾಟ ಮಾಡ್ತಾರೆ. ಸ್ಪೀಕರ್ ಗೂ ಕೂಡ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡಬಾರದು ಎಂಬ ಒತ್ತಡ ಇತ್ತು ಅನ್ಸುತ್ತೆ ಎಂದರು. ನಮ್ಮನ್ನು ಈ ವಿಷಯದಲ್ಲಿ ಎಳೆದು ತರಬೇಡಿ ಎಂದು ಸ್ಪೀಕರ್ ಸೂಚಿಸಿದರು.

    ನಾನೇನು ಹಾದಿ ಬೀದಿಯಲ್ಲಿ ಹೋಗುವವನಲ್ಲ. ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದೆ. ಸಮುದಾಯದ ವಿಚಾರದಲ್ಲಿ ಮಾತನಾಡುವಾಗ ರೇಣುಕಾಚಾರ್ಯ ಯಾಕೆ ಅಡ್ಡಿ ಮಾಡ್ತಾರೆ ಸಿಎಂ ಉತ್ತರ ಕೊಡದೇ ಹೋದರೆ ನಾಳೆಯಿಂದ ಶಿವರಾತ್ರಿ ಆಮರಾಣಾಂತ ಉಪವಾಸ ಶುರು ಮಾಡ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ, ಧರ್ಮದಲ್ಲಿ ರಾಜಕಾರಣ ಬೇಡ: ಲಕ್ಷ್ಮಿ ಹೆಬ್ಬಾಳ್ಕರ್

    ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ, ಧರ್ಮದಲ್ಲಿ ರಾಜಕಾರಣ ಬೇಡ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ. ಧರ್ಮದಲ್ಲಿ ರಾಜಕಾರಣ ಮಾಡೋದು ಬೇಡ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಬಿ ಟೀಮ್ ಅಂತ ನಿರಾಣಿ ಅವರು ಹೇಳಿರೋದು ತಪ್ಪು. ಪಕ್ಷಾತೀತವಾಗಿ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡಲಾಗ್ತಿದೆ. ನಿರಾಣಿ ಅವರು ಯಾಕೆ ಹೋರಾಟಕ್ಕೆ ಬೆಂಬಲ ಸೂಚಿಸಿದರು ಎಂದು ಪ್ರಶ್ನಿಸಿದರು. ಹೋರಾಟದ ಮುಂಚೂಣಿಯಲ್ಲಿದ್ದವರು ಈ ರೀತಿ ಆರೋಪ ಮಾಡೋದು ಅವರಿಗೆ ಶೋಭೆ ತರಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಸಮಾಜಕ್ಕಾಗಿ ಗುರುಗಳು ಈ ಹೋರಾಟ ಮಾಡುತ್ತಿದ್ದು, ಸ್ವಾರ್ಥಕ್ಕಲ್ಲ. ಗುರುಗಳು ಯಾರ ಕಪಿಮುಷ್ಟಿಯಲ್ಲಿಯೂ ಇಲ್ಲ. ವೀರಶೈವ ಲಿಂಗಾಯತದಲ್ಲಿ ಸುಮಾರು ನೂರು ಒಳ ಪಂಗಡಗಳಿವೆ. ಅದರಲ್ಲಿ 32 ಒಳ ಪಂಗಡಗಳಿಗೆ 2ಎ ಮಾನ್ಯತೆ ಸಿಕ್ಕಿದ್ದು, ಇನ್ನುಳಿದವರಿಗಾಗಿ ಈ ಹೋರಾಟ ನಡೆಸಲಾಗ್ತಿದೆ. ಈ ವಿಷಯವನ್ನ ಬಿಜೆಪಿಗರು ರಾಜಕೀಯವಾಗಿ ಬಳಸಿಕೊಳ್ಳಬಾರದು. ಧರ್ಮದಲ್ಲಿ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.

    ನಮ್ಮಲ್ಲಿ ಒಗ್ಗಟ್ಟಿದ್ದು, ವಿಚಾರಧಾರೆಗಳು ಭಿನ್ನವಾಗಿವೆ. ಸಚಿವರು ಸರ್ಕಾರದೊಳಗಿದ್ದಾರೆ. ಅವರಿಗೆ ಅನೇಕ ಒತ್ತಡ ಇರಬಹುದು. ಸರ್ಕಾರದ ಹೊರಗೆ ಇದ್ದು ಮಾತಾಡೋದು ಬೇರೆಯಾಗಿರುತ್ತೆ. ಸರ್ಕಾರವನ್ನ ಪ್ರತಿನಿಧಿಸುತ್ತಿರುವುದರಿಂದ ಅವರ ಧ್ವನಿ ಕಡಿಮೆಯಾಗಿದೆ. ಯಾರ ಒತ್ತಡ ಇದೆ ಗೊತ್ತಿಲ್ಲ ನಿರಾಣಿಯವರನ್ನೇ ಕೇಳಿದ್ರೇ ಗೊತ್ತಾಗುತ್ತೆ ಎಂದು ಪ್ರಶ್ನಿಸಿದರು.

  • ನಮ್ಮ ರಾಜೀನಾಮೆ ಕೇಳಲು ಯತ್ನಾಳ್ ಯಾರು?: ಮುರುಗೇಶ್ ನಿರಾಣಿ

    ನಮ್ಮ ರಾಜೀನಾಮೆ ಕೇಳಲು ಯತ್ನಾಳ್ ಯಾರು?: ಮುರುಗೇಶ್ ನಿರಾಣಿ

    – ಕಾಶಪ್ಪನವರ್ ಸ್ವಯಂಘೋಷಿತ ಅಧ್ಯಕ್ಷ

    ಬೆಂಗಳೂರು: ನಮ್ಮ ರಾಜೀನಾಮೆ ಕೇಳಲು ಬಸನಗೌಡ ಪಾಟೀಲ್ ಯತ್ನಾಳ್ ಯಾರು? ಬೇಕಿದ್ರೆ ಯತ್ನಾಳ್ ರಾಜೀನಾಮೆ ನೀಡಿ, ಪಕ್ಷೇತರರಾಗಿ ಆಯ್ಕೆಯಾಗಿ ಬರಲಿ ಎಂದು ಸಚಿವ ಮುರುಗೇಶ್ ನಿರಾಣಿ ಸವಾಲ್ ಹಾಕಿದ್ದಾರೆ.

    ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮುರುಗೇಶ್ ನಿರಾಣಿ ಏಕವಚನದಲ್ಲಿ ಯತ್ನಾಳ್ ವಿರುದ್ಧ ಕಿಡಿ ಕಾರಿದರು. ಸಿಎಂ ಬಿಎಸ್‍ವೈ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಕಳೆದ 25 ವರ್ಷಗಳಿಂದಲೂ ಯತ್ನಾಳ್ ವಾಗ್ದಾಳಿ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್ ಬಿ ಟೀಂ ಎಂಬಂತೆ ವರ್ತಿಸುತ್ತಿದ್ದಾರೆ. ಪ್ರತಿಪಕ್ಷಗಳಿಗಿಂತ ಇವರೇ ಮಾತನಾಡೋದು ಹೆಚ್ಚಾಗಿದೆ. ಮೊದಲು ರಾಜೀನಾಮೆ ಕೊಟ್ಟು ಬೇರೆಯವರ ಬಗ್ಗೆ ಯತ್ನಾಳ್ ಮಾತನಾಡೋದು ಒಳ್ಳೆಯದು ತಿರುಗೇಟು ನೀಡಿದರು.

    ಪಂಚಮಸಾಲಿ ಜೊತೆಗೆ ವೀರಶೈವ ಲಿಂಗಾಯತರನ್ನ 2ಎ ಮೀಸಲಾತಿ ನೀಡುವಂತೆ ಹಿಂದುಳಿದ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇವತ್ತೇ ಮಾಡಬೇಕು, ಸತ್ಯಾಗ್ರಹ ಮಾಡ್ತೀನಿ ಅಂದ್ರೆ ಸಂಪೂರ್ಣ ರಾಜಕೀಯ ಇದೆ. ಜಯಮೃತ್ಯಂಜಯ ಸ್ವಾಮೀಜಿಗಳು ಕೇವಲ ಇಬ್ಬರ ಮಾತು ಕೇಳಿ ನಿರ್ಧಾರ ಮಾಡಬೇಡಿ.. 80 ಲಕ್ಷ ಮಂದಿ ಸಮುದಾಯದವರಿದ್ದೀವಿ.. ಗಡುವು ಕೊಡುವುದು ಸರಿಯಲ್ಲ ಎಂದು ಮನವಿ ಮಾಡಿದರು. ಸ್ವಾಮೀಜಿ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ತಪ್ಪು ಸಂದೇಶ ಹೋಗುತ್ತೆ. ಪಾದಯಾತ್ರೆ ಮಾಡಿದ್ದೀರಿ ಎಲ್ಲರ ಗಮನಕ್ಕೆ ಬಂದಿದೆ. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡರು.

    ಸ್ವಯಂಘೋಷಿತ ಅಧ್ಯಕ್ಷ: ಮಾಜಿ ಶಾಸಕ ವಿಜಯಾನಂದ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ. ಯಾರನ್ನ ಕೇಳಿ ಕಾಶಪ್ಪನವರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಶಪ್ಪನವರ ನಡವಳಿಕೆಯಿಂದ ಸಮಾಜಕ್ಕೆ ತೊಂದರೆ ಆದ್ರೆ ಅದಕ್ಕೆ ಅವರೇ ಹೊಣೆ. ಕಾಶಪ್ಪನವರ ಮೈ ಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. 100ಕ್ಕೂ ಹೆಚ್ಚು ಕೇಸ್ ಇರುವ ಕೆಟ್ಟ ಹಿನ್ನೆಲೆ ಇರುವ ಈತ ಸಮುದಾಯದ ಅಧ್ಯಕ್ಷ ಆಗಲು ನಾಲಾಯಕ್. ಸಮುದಾಯ ಸಂಘಟನೆ ಲೀಡ್ ಮಾಡುವವರು ಪಕ್ಷಾತೀತ ವ್ಯಕ್ತಿಯಾಗಿರಬೇಕು. ಇಂತಹ ವ್ಯಕ್ತಿಗಳನ್ನ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರನ್ನ ಘೋಷಿಸಿರೋದು ಕಳಂಕ ಎಂದು ಆಕ್ರೋಶ ಹೊರ ಹಾಕಿದರು.

  • ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    – ಸರ್ಕಾರಕ್ಕೆ ಮಾರ್ಚ್ 4ರವರೆಗೂ ಡೆಡ್‍ಲೈನ್
    – ಇಕ್ಕಟ್ಟಿನಲ್ಲಿ ಸಿಎಂ ಬಿಎಸ್‍ವೈ

    ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಏಳುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ ಪಂಚಮಸಾಲಿ ಸಮುದಾಯದ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಪಂಚಮ ಪಾಂಚಜನ್ಯ ಮೊಳಗಿಸಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟವನ್ನು ನಿಲ್ಲಿಸಬೇಕೆಂದು ಸಚಿವರ ಮೂಲಕ ಸಿಎಂ ಯಡಿಯೂರಪ್ಪ ಮಾಡಿದ ಒಂದೇ ಒಂದು ತಂತ್ರವೂ ಫಲ ಕೊಡಲಿಲ್ಲ. ಬದಲಿಗೆ ಮೀಸಲು ಹೋರಾಟ ಇನ್ನಷ್ಟು ತೀವ್ರವಾಯ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಡೀ ಸಮುದಾಯ ಯತ್ನಿಸಿತು. ಅಧಿವೇಶನದಲ್ಲಿ ಅಂತಿಮ ನಿರ್ಣಯ ಆಗಲೇಬೇಕು. ಎಂಬ ಒಕ್ಕೊರಲ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿದೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಅಕ್ಷರಷಃ ಅಡಕತ್ತರಿಗೆ ಸಿಲುಕಿದ್ದಾರೆ.

    ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ಕತ್ತಿ ಝಳಪಿಸುವ ಮೂಲಕ, ವಿಜಯಾನಂದ ಕಾಶಪ್ಪನವರ್ ಕಹಳೆ ಊದುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶ ಉದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದು ಮುಕ್ತಾವಯಲ್ಲ, ಶಕ್ತಿ ಪ್ರದರ್ಶನ. ಯಾರೇನೇ ಒತ್ತಡ ಹೇರಿದರೂ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ. ಮಾರ್ಚ್ 4ರವರೆಗೂ ಶಾಂತಿಯುತ ಧರಣಿ ಮಾಡೋದಾಗಿ ಘೋಷಿಸಿದರು.

    ಸಚಿವರ ಮನವೊಲಿಕೆ ಫುಲ್ ಫೇಲ್: ಸಿಎಂ ಸಂದೇಶ ತಂದಿದ್ದ ಸಚಿವ ಸಿಸಿ ಪಾಟೀಲ್ ಮಾತನಾಡಿ, ನಮ್ಮ ಹೋರಾಟಕ್ಕೆ ಸಿಎಂ ಬೆಂಬಲ ಸೂಚಿಸಿದ್ದಾರೆ. ಹಿಂದುಳಿದ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ. ಏಕಾಏಕಿ ತೀರ್ಮಾನ ಕೈಗೊಂದರೆ ಬೇರೆಯವರು ನ್ಯಾಯಾಲಯಕ್ಕೆ ಹೋಗಬಹುದು ಎನ್ನುತ್ತಲೇ ಸಭಿಕರು ಘೋಷಣೆ ಕೂಗಿದರು. ಆದ್ರೂ ಮಾತು ಮುಂದುವರೆಸಿದ ಸಿಸಿ ಪಾಟೀಲ್, ಸಮಾವೇಶದ ನಂತರ ಪ್ರತಿಭಟನೆ ಕೈಬಿಡಿ ಮನವಿ ಮಾಡಿದರು.

    ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮೀಸಲಾತಿ ಕೊಡಿಸುವ ಸಲುವಾಗೆ ಈ ಸಮಾವೇಶ ಮಾಡ್ತಿದ್ದೇವೆ. 70 ವರ್ಷ ಆಳಿದವರು ಏನು ಮಾಡಲಿಲ್ಲ ಅಂತಾ ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂರಿಸಲು ನೋಡಿದರು. ನಾವು ಕೊಟ್ಟೇ ಕೊಡ್ತೀವಿ ಸ್ವಲ್ಪ ಟೈಮ್ ಕೊಡಿ ಎಂದು ಮನವಿ ಮಾಡಿಕೊಂಡರು.

    ಸಚಿವರ ಭರವಸೆಯನ್ನು ಒಪ್ಪಲು ತಯಾರಿಲ್ಲದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮೂಗಿಗೆ ತುಪ್ಪ ಸವರೋ ಕೆಲಸ ಮಾಡಬೇಡಿ. ಇದು ಮಾಡು ಇಲ್ಲವೇ ಮಡಿ ಹೋರಾಟ. ಮೀಸಲಾತಿ ಸಿಗವರೆಗೂ ಮನೆಗೆ ಹೋಗಲ್ಲ. ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ಹಾಕ್ತೀವಿ ಅಂತಾ ಗುಡುಗಿದರು.

    ಯತ್ನಾಳ್ ಸವಾಲ್:
    ಸಚಿವರ ಭರವಸೆಯನ್ನು ನಂಬಲು ತಯಾರಿರದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸ್ವಾಗತ ಸಮಿತಿ ಅಧ್ಯಕ್ಷ ಯತ್ನಾಳ್‍ಗೆ ನೀಡಿದ್ರು. ಈ ವೇಳೆ ಮಾತನಾಡಿದ ಯತ್ನಾಳ್, ನನ್ನ ಕೈಯಲ್ಲಿ ಕತ್ತಿ ಕೊಟ್ಟಿದ್ದಾರೆ. ಯಾಕೆ ಅಂದ್ರೆ ಮಾಡು ಇಲ್ಲವೇ ಮಡಿ ಅಂತಾ. ನಾವು ಬೆನ್ನಿಗೆ ಚೂರಿ ಹಾಕಲ್ಲ. ಎದುರು ಬಂದ್ರೆ ಹೊಡೆಯೋದೇ ಅಂತಾ ಅಬ್ಬರಿಸಿದರು. ಇಬ್ಬರು ಸಚಿವರು ಹೋಗಿ ಸಿಎಂಗೆ ಕೇಳಿ, ಇಲ್ಲವಾದ್ರೆ ರಾಜೀನಾಮೆ ಕೊಡ್ತಿನಿ ಅಂತಾ ಹೇಳಿರಿ.. ಅದ್ಯಾಕೆ ಮಾಡಲ್ಲ ನಾನು ನೋಡ್ತೀನಿ ಅಂತಾ ಓಪನ್ ವೇದಿಕೆಯಲ್ಲಿ ಸವಾಲು ಹಾಕಿದರು.

    ಶಾಸಕ ಯತ್ನಾಳ್ ಉರುಳಿಸಿದ ರಾಜಕೀಯ ದಾಳಕ್ಕೆ ಕಕ್ಕಾಬಿಕ್ಕಿಯಾದ ಸಚಿವರಿಬ್ಬರು ಕೋಪದಿಂದ ವೇದಿಕೆಯಿಂದ ಕೆಳಗಿಳಿದು ಹೊರ ನಡೆದರು. ನೇರವಾಗಿ ಸಿಎಂ ಮನೆಗೆ ಹೋಗಿ ಸಮಾವೇಶದ ವರದಿ ಒಪ್ಪಿಸಿದರು. ಇದಕ್ಕೂ ಮುನ್ನ ಜೈಲಲ್ಲಿರುವ ಮಾಜಿ ಮಂತ್ರಿ ವಿಜಯ್ ಕುಲಕರ್ಣಿ ಪತ್ನಿಯನ್ನು ವೇದಿಕೆಗೆ ಕರೆಯಿಸಿ ಸಮುದಾಯದ ಮುಖಂಡರು ಧೈರ್ಯ ತುಂಬುವ ಕೆಲಸ ಮಾಡಿದರು. ಈ ವೇಳೆ ಮಾತು ಬಾರದೇ ವಿನಯ್ ಕುಲಕರ್ಣಿ ಪತ್ನಿ ಗದ್ಗದಿತರಾದರು. ಸಮಾವೇಶದ ಮಧ್ಯೆ ಮಳೆ ಬಂದು ಕೆಲ ಕಾಲ ಜನ ಪರದಾಡಿದರು. ನಗರದಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.