Tag: Panchamasali Community

  • ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ: ಡಿ.ಕೆ ಶಿವಕುಮಾರ್

    ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ: ಡಿ.ಕೆ ಶಿವಕುಮಾರ್

    ಬೆಂಗಳೂರು: ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ (Panchamasali Community) ಜೊತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರುಗಳ ಜೊತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ವಿಚಾರ ನ್ಯಾಯಾಲಯದಲ್ಲಿರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು.

    ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರಿಗೆ ಗೌರವಯುತವಾಗಿ ಹೇಳಿದ್ದೇವೆ. ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಅವರ ವಿಚಾರವನ್ನು ಪರಿಗಣಿಸುತ್ತೇವೆ. ಇದೇ ವಿಚಾರಕ್ಕೆ ಹೋರಾಟ ಮಾಡುವವರಿಗೆ ನಾವು ಏನು ಹೇಳಲು ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

  • ಬಿಜೆಪಿ ಶಾಸಕರನ್ನು ಸೋಲಿಸೋದೇ ನಮ್ಮ ಗುರಿ – ಪಂಚಮಸಾಲಿ ಸಮುದಾಯದಿಂದ ಎಚ್ಚರಿಕೆ

    ಬಿಜೆಪಿ ಶಾಸಕರನ್ನು ಸೋಲಿಸೋದೇ ನಮ್ಮ ಗುರಿ – ಪಂಚಮಸಾಲಿ ಸಮುದಾಯದಿಂದ ಎಚ್ಚರಿಕೆ

    ಚಿಕ್ಕೋಡಿ: ಪಂಚಮಸಾಲಿ ಸಮಾಜಕ್ಕೆ (Panchamasali Community) 2ಎ ಮೀಸಲಾತಿ (2A Reservation) ನೀಡುವಂತೆ ಒತ್ತಾಯಿಸಿ ಶನಿವಾರ ರಾಜ್ಯಾದ್ಯಂತ ರಸ್ತೆ ತಡೆದು ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ಹತ್ತರಗಿ ಟೋಲ್ ನಾಕಾ ಬಳಿಯ ರಾಷ್ಟ್ರೀಯ ಹೆದ್ದಾರಿ 4 ತಡೆದು ಪಂಚಮಸಾಲಿ ಸಮುದಾಯದ ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ತಕ್ತಪಡಿಸಿದರು. ಚಿಕ್ಕೋಡಿಯ ಶೈಕ್ಷಣಿಕ ಜಿಲ್ಲೆಯ ಅಥಣಿ, ರಾಯಬಾಗ್ ಕಾಗವಾಡ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಯಮಕನಮರಡಿ, ಕುಡಚಿ ತಾಲೂಕು ಕ್ಷೇತ್ರಗಳಲ್ಲಿ ಸಮುದಾಯದ ಮುಖಂಡರು ಪ್ರತಿಭಟಿಸಿ ಪಟ್ಟಣದ ಪ್ರಮುಖ ರಸ್ತೆಗಳನ್ನು ತಡೆಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಲಾಭ, ನಷ್ಟ ನೋಡಿ ಅಲ್ಲ, ಜೊತೆ ಇರುವವರ ಬಗ್ಗೆಯೂ ನೋಡ್ಕೊಂಡು ನಿರ್ಧಾರ: ಸುಮಲತಾ

    ತಾಯಿಯ ಮೇಲೆ ಆಣೆ ಮಾಡಿದ ಮುಖ್ಯಮಂತ್ರಿ ಅವರು ನಂಬಿಕೆ ದ್ರೋಹ ಮಾಡಿದ್ದಾರೆ. 2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಸೋಲಿಸಿ ಅವರಿಗೆ ತಕ್ಕ ಉತ್ತರ ನೀಡಲಾಗುವುದು. ನಮ್ಮ ಹೋರಾಟಕ್ಕೆ ಜಯ ಸಿಗುವರಿಗೆ ನಾವು ಬಿಡುವುದಿಲ್ಲ. ಈ ಬಾರಿ ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಪಡೆದುಕೊಳ್ಳಬೇಕು. ಮೀಸಲಾತಿಗೆ ಯಾರು ವಿರೋಧ ಮಾಡಿದ್ದಾರೋ ಅವರ ಕ್ಷೇತ್ರಗಳಿಗೆ ಹೋಗಿ ಅವರನ್ನು ಸೋಲಿಸೋಣ ಎಂದು ಪಂಚಮಸಾಲಿ ಸಮಾಜದ ಮುಖಂಡರು ಸಮುದಾಯಕ್ಕೆ ಕರೆ ನೀಡಿದರು.

    ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಗುಂಡು ಪಾಟೀಲ್, ಶಶಿಕಾಂತ ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

  • ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ: ಜಯಮೃತ್ಯುಂಜಯ ಸ್ವಾಮೀಜಿ

    ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ: ಜಯಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ಪಂಚಮಸಾಲಿ (Panchamasali Community) ಮೀಸಲಾತಿ (Reservation) ಹೋರಾಟದ ಫಲವಾಗಿ ಪ್ರವರ್ಗ 3Bಯಲ್ಲಿದ್ದ ಮೀಸಲಾತಿಯನ್ನು ಸರ್ಕಾರ 2Dಗೆ ಸೇರಿಸಿ ಮೀಸಲಾತಿ ನೀಡಿದೆ. ಆ ಬಳಿಕ ಈ ಬಗ್ಗೆ ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ ಎಂದು ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಪ್ರತಿಕ್ರಿಯಿಸಿದ್ದಾರೆ.

    ಪ್ರವರ್ಗ 3Bಯಲ್ಲಿರುವ ಪಂಚಮಸಾಲಿ ಸಮುದಾಯ ಶೇ.5 ಮೀಸಲಾತಿ ಇದೆ. ಪ್ರವರ್ಗ 2Aಗೆ ಸೇರ್ಪಡೆ ಆದರೆ ಶೇ.15 ಮೀಸಲಾತಿ ಅನುಕೂಲ ಸಿಗುತ್ತಿತ್ತು. ಹಾಗಾಗಿ ಸರ್ಕಾರದ ಮುಂದೆ ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು. ಇದೀಗ 2D ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಕ್ಕಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಚಿವ ಸಂಪುಟದ ನಿರ್ಣಯ ನಮ್ಮ ಕೈಸೇರಿಲ್ಲ. ಸರ್ಕಾರ ಹೊಸ ವರ್ಗಗಳನ್ನು ಮಾಡಿರುವ ಬಗ್ಗೆ ಮತ್ತು ನಾವು ಕೇಳಿರುವ ಮೀಸಲಾತಿ ಪ್ರಮಾಣ ನಮಗೆ ಕೊಡಲಾಗಿದೆಯೇ ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2d ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ

    ನಾವು ಕೇಳಿರುವಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗುವ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಸಿ ಮತ್ತು ಡಿ ವರ್ಗಕ್ಕೆ ಮೀಸಲಾತಿ ನೀಡಿದೆ. ಇದರ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಉತ್ತರಿಸುತ್ತೇನೆ. ನಿರ್ಣಯದ ಪ್ರತಿಯಲ್ಲಿ ಪಂಚಮಸಾಲಿ ಹೆಸರೇ ಉಲ್ಲೇಖಿಸಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುತ್ತೇವೆ. ನಮ್ಮ ಸಮುದಾಯಕ್ಕೆ ನ್ಯಾಯ ಕೊಟ್ಟು ಉಳಿದ ಸಮುದಾಯಕ್ಕೂ ಕೊಡಲಿ ನಮ್ಮ ವಿರೋಧವಿಲ್ಲ. ಸರ್ಕಾರದ ತೀರ್ಮಾನಕ್ಕೆ ನಾವು ಬದ್ಧ. 2Dಯಲ್ಲಿ ಪಂಚಮಸಾಲಿ ಮೀಸಲಾತಿ ಎಷ್ಟಿದೆ ಎಂದು ವಿಮರ್ಶೆ ಮಾಡುತ್ತೇವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮ್ಮ ಮೀಸಲಾತಿ ಎಷ್ಟಿದೆ? ಎಷ್ಟು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ – ಡಿಪಿಆರ್ ಚುನಾವಣೆಗೆ ಮಾತ್ರ ಮೀಸಲಾಗಬಾರದು: ರೈತರ ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ

    ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ

    ಬೆಳಗಾವಿ: ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ ಮೀಸಲಾತಿಗಾಗಿ ನೋಡೋಣ ಸಿಎಂ ಏನು ಆಟ ಆಡ್ತಾರೆ, ಅವರ ಹಿಂದೆ ಯಾರ ಇದ್ದಾರೆ ನೋಡೋಣ. ಸಿಹಿ ಸುದ್ದಿನೋ ನಾಟಕನಾ ಗೊತ್ತಿಲ್ಲ. ಹುಚ್ಚು ಸಾಹಸಕ್ಕೆ ಸಿಎಂ ಕೈಹಾಕಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ವಿರುದ್ಧ ಕಿಡಿಕಾರಿದ್ದಾರೆ.

    ಪಂಚಮಸಾಲಿ 2ಎ ಮೀಸಲಾತಿ (Panchamasali Community 2A Reservation) ಹೋರಾಟ ಹಿನ್ನೆಲೆ ಬೆಳಗಾವಿಯಲ್ಲಿ (Belagavai) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ವರ್ಷ ಆಯ್ತು ಕಥೆ ಬೇಡ. ಬೇಗ ವರದಿ ತರಿಸಲು ಹೇಳಿದ್ದೆವು. ಅಂತಿಮ ವರದಿ ಎಂದು ಕಥೆ ಹೇಳ್ತಾರೆ. ಅವರ ಮೇಲಿನ ಅಂತಿಮ ದಿನದ ಭರವಸೆ. ತಂದೆ ಸಮಾನ ಎನ್ನುವವರು ಆಟವಾಡುತ್ತಿದ್ದಾರೆ. ಆಟ ಆಡಿದರೆ ಇವರ ಭವಿಷ್ಯ ಉಳಿಯಲ್ಲ, ಅವರದು ಭವಿಷ್ಯ ಇರಲ್ಲ. ಇವತ್ತು ಕ್ಯಾಬಿನೆಟ್ ಇದೆ ಮಧ್ಯಾಹ್ನ ಬಹಿರಂಗ ಪಡಿಸುತ್ತೇವೆ. ಸತ್ಯ ನ್ಯಾಯ ಎಲ್ಲಿದೆ ಅಲ್ಲೇ ಇರುತ್ತೇನೆ. ತಮ್ಮ ಭವಿಷ್ಯಕ್ಕಾಗಿ ಬಹಳ ಜನರನ್ನು ಹಾಳು ಮಾಡಲು ಹೊರಟವರು ಇದ್ದಾರೆ. ಸಾಕು ಮಗನಿಗೆ ಗೊತ್ತಾಗುತಿಲ್ಲ. ಮಾತು ಕೇಳೇ ಹಾಳಾಗ್ತಾರೆ, ಸಾಕು ತಂದೆಯ ವಚನ ಪಾಲಿಸಲು ಅವರು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ನಾವು ಕತ್ತಿ ಗನ್ ತೆಗೆದುಕೊಂಡು ಹೋಗಲ್ಲ ಪ್ರಜಾತಂತ್ರ ಇದೆ. ಒಂದೊಂದು ಸಮುದಾಯವನ್ನು ಎತ್ತಿ ಕಟ್ಟಲಾಗುತ್ತಿದೆ. ಶಕ್ತಿ ಪ್ರದರ್ಶನ ಆರಂಭ ಅಗಿದೆ. ಸಂಪುಟದಲ್ಲಿ ಯಡಿಯೂರಪ್ಪ ಇದ್ದಾಗ ಕೆಲವರು ವಿರೋಧ ಮಾಡಿದ್ರು. ಈಗ ಅವರು ಮಾಜಿ. ಯಾರು ವಿರೋಧ ಮಾಡ್ತಾರೆ ಅವರೆಲ್ಲ ಮಾಜಿ ಆಗ್ತಾರೆ. ಚುನಾವಣೆಯಲ್ಲಿ ಜನ ಪಾಠ ಕಲಿಸ್ತಾರೆ. ಇದನ್ನು ಮಾಜಿ ಸಿಎಂ ಹೇಳಬೇಕು ಬೊಮ್ಮಾಯಿ (Basavaraj Bommai) ಏನು ಪ್ರಕಟ ಮಾಡ್ತಾರೆ ಅದರ ಮೇಲೆ ನಮ್ಮ ಹೋರಾಟ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

    ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಮಧ್ಯಂತರ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿ, ಅದರಲ್ಲೇನು ಮಧ್ಯಂತರ ಎರಡು ವರ್ಷ ಸರ್ಕಾರವಿದ್ದಾಗ ಆಯೋಗ ಏನ್ ಮಾಡಿತು. ಸುಮ್ಮನೇ ಡೈವರ್ಟ್ ಮಾಡುವ ಕುತಂತ್ರ ಬೇಡ. ಮಧ್ಯಂತರ ಅಲ್ಲ ಶಾಶ್ವತ ಪರಿಪೂರ್ಣ ವರದಿ ಅಂತಾ ಡಿಕ್ಲೇರ್ ಮಾಡಿ. ನೀವು ಕೊಡ್ತಿರೋ ಇಲ್ಲವೋ ಅಷ್ಟೇ ಹೇಳಿ ಕಥೆ ಹೇಳಬೇಡಿ. ನಾನೇ ಕರ್ನಾಟಕದ ಕೊನೆಯ ಬಿಜೆಪಿ ಸಿಎಂ ಆಗ್ತೀನಿ ಅಂದ್ರೆ ಬಿಡಿ. ಮುಂಬರುವ ದಿನಗಳಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೀಸಲಾತಿ ಕೊಡದಿದ್ದರೆ ಅಧಿವೇಶನದಲ್ಲೇ ಸುವರ್ಣ ಸೌಧಕ್ಕೆ ಮುತ್ತಿಗೆ – ಸರ್ಕಾರಕ್ಕೆ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

    ಮೀಸಲಾತಿ ಕೊಡದಿದ್ದರೆ ಅಧಿವೇಶನದಲ್ಲೇ ಸುವರ್ಣ ಸೌಧಕ್ಕೆ ಮುತ್ತಿಗೆ – ಸರ್ಕಾರಕ್ಕೆ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

    ಬೆಳಗಾವಿ: ಡಿಸೆಂಬರ್ 22 ರಂದು ಸುವರ್ಣ ಸೌಧದ (Suvarna Vidhana Soudha) ಬಳಿ ವಿರಾಟ ಪಂಚಶಕ್ತಿ ಸಮಾವೇಶ ಮಾಡುವ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ (Panchamasali) ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mrityunjaya swamiji) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ (2A Reservation) ಘೋಷಿಸಲು ಸರ್ಕಾರಕ್ಕೆ ಡಿಸೆಂಬರ್ 19 ರವರೆಗೂ ಗಡುವು ನೀಡಲಾಗಿದೆ. ಮೀಸಲಾತಿ ಕೊಟ್ಟರೆ ವಿಜಯೋತ್ಸವ ಮಾಡುತ್ತೇವೆ. ಇಲ್ಲವಾದ್ರೆ ಡಿಸೆಂಬರ್ 22 ರಂದು ಸುವರ್ಣ ವಿಧಾನ ಸೌಧ ಮುತ್ತಿಗೆ ಹಾಕುತ್ತೇವೆ. ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಸುಧೀರ್ಘ ಹೋರಾಟ ಮಾಡಿದ್ದೇವೆ. ಡಿಸೆಂಬರ್ 19 ರಂದು ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ರು. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಮುಖ್ಯಮಂತ್ರಿಗಳ ನಿಲುವು ನೋಡಿಕೊಂಡು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಠಾಣ್ ದೇಶಭಕ್ತಿ ಸಿನಿಮಾ ಎಂದು ಟ್ವೀಟ್ ಮಾಡಿದ ನಟ ಶಾರುಖ್ ಖಾನ್

    ಇದೇ ಡಿಸೆಂಬರ್ 22 ರಂದು ಸುವರ್ಣಸೌಧದ ಬಳಿ ವಿರಾಟ ಪಂಚಶಕ್ತಿ ಸಮಾವೇಶ ಮಾಡ್ತಿದ್ದೇವೆ. ನಾಳೆ ಸವದತ್ತಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮೀಸಲಾತಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮೀಸಲಾತಿ ಕೊಟ್ಟರೆ ಯಾವ ರೀತಿ ವಿಜಯೋತ್ಸವ ಮಾಡಬೇಕು. ಮೀಸಲಾತಿ ಕೊಡದಿದ್ದರೆ ಯಾವ ರೀತಿ ಉಗ್ರ ಹೋರಾಟ ಮಾಡಬೇಕು ಎಂಬ ಸ್ಪಷ್ಟವಾದ ತೀರ್ಮಾನ ಮಾಡುತ್ತೇವೆ. ಸವದತ್ತಿಯಿಂದ ಸುವರ್ಣ ವಿಧಾನ ಸೌಧವರೆಗೂ ಪಂಚಲಕ್ಷ ಪಾದಯಾತ್ರೆ ಮಾಡುತ್ತೇವೆ. ಈ ಪಾದಯಾತ್ರೆ ಮೂಲಕ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾಗಾಗಿ 7000 ಕಿಲೋಮೀಟರ್ ರಥಯಾತ್ರೆ

    ಸವದತ್ತಿ ಸಮಾವೇಶ ಸಂಜೆ 7 ಗಂಟೆಗೆ ಮುಕ್ತಾಯವಾಗಲಿದೆ. ಅಷ್ಟರೊಳಗಾಗಿ ರಾಜ್ಯ ಸರ್ಕಾರದ ನಿರ್ಧಾರ ಗೊತ್ತಾಗಲಿದೆ. ಸರ್ಕಾರದ ನಿರ್ಧಾರ ನೋಡಿಕೊಂಡು ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸವದತ್ತಿ ಸಮಾವೇಶ ಆಯೋಜನೆ ಮಾಡಿದ್ದೇವೆ. ವಿರಾಟ ಸಮಾವೇಶಕ್ಕೆ ನೂರು ಎಕರೆ ಪ್ರದೇಶದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಂಚಮಸಾಲಿ ಶಕ್ತಿ ಪ್ರದರ್ಶನಕ್ಕೆ ಸ್ವಯಂ ಪ್ರೇರಿತರಾಗಿ ರೊಟ್ಟಿ ಬುತ್ತಿಕಟ್ಟಿಕೊಂಡು ಬರಲಿದ್ದಾರೆ. ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ್ದಕ್ಕೆ ಬಾಗಲಕೋಟೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ವಿ. ಅಂತಿಮವಾದ ಹೋರಾಟ ನಡೆಸಲು ನಾವು ಸನ್ನದ್ಧರಾಗಿದ್ದೇವೆ. ಮೀಸಲಾತಿ ನೀಡದಿದ್ದರೆ ಅಹೋರಾತ್ರಿ ಹೋರಾಟ ಮಾಡಲು ಬರುವಂತೆ ಬಸನಗೌಡ ಪಾಟೀಲ್ ಯತ್ನಾಳ್‌ ಆಹ್ವಾನಿಸಿದ್ದಾರೆ. ಮೀಸಲಾತಿ ಕೊಡದಿದ್ದರೆ ಅಹೋರಾತ್ರಿ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಂಚಮಸಾಲಿ ಸಮುದಾಯದಲ್ಲಿ ಕಲಹ – ನಿರಾಣಿ ಕೊಟ್ಟ ವಸ್ತು ಮರಳಿಸಲು ಮುಂದಾದ ಸ್ವಾಮೀಜಿ

    ಪಂಚಮಸಾಲಿ ಸಮುದಾಯದಲ್ಲಿ ಕಲಹ – ನಿರಾಣಿ ಕೊಟ್ಟ ವಸ್ತು ಮರಳಿಸಲು ಮುಂದಾದ ಸ್ವಾಮೀಜಿ

    ಬೆಳಗಾವಿ: ಪಂಚಮಸಾಲಿ ಸಮುದಾಯದಲ್ಲಿ ಒಳಜಗಳ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿಯಲ್ಲಿ ಮೂರನೇ ಪೀಠ ಬೆಂಬಲಿಸುತ್ತಿರುವ ಸಚಿವ ನಿರಾಣಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

    ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ನಿರಾಣಿ ಈ ಹಿಂದೆ ಶ್ರೀಪೀಠಕ್ಕೆ ತಂದುಕೊಟ್ಟಿದ್ದ ವಸ್ತುಗಳನ್ನು ಅವರ ಮನೆಗೆ ಮರಳಿಸಲು ತೀರ್ಮಾನಿಸಲಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿ ನಮ್ಮ ಋಣದಲ್ಲಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಇದರಿಂದ ನಮಗೆ ನೋವಾಗಿದೆ. ನಾವು ವ್ಯಕ್ತಿಯ ಋಣದಲ್ಲಿರಲು ಬಯಸಲ್ಲ. ಸಮಾಜದ ಋಣದಲ್ಲಿ ಬಯಸುತ್ತೇವೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 15 ದಿನ ಟೋಯಿಂಗ್ ಸ್ಥಗಿತ: ಆರಗ ಜ್ಞಾನೇಂದ್ರ

    ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಪಪ್ರಚಾರ ಆಗುತ್ತಿದೆ. ಶ್ರೀ ಪೀಠಕ್ಕೆ ಎಲ್ಲರೂ ದಾನ ಧರ್ಮ ಕೊಟ್ಟಿದ್ದಾರೆ. ಅವರ ಹೆಸರಲ್ಲಿ ಪದೇ ಪದೇ ನಮ್ಮ ಋಣದಲ್ಲಿದ್ದಾರೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಮುರುಗೇಶ್ ನಿರಾಣಿ ಹೆಸರಲ್ಲಿ ಶ್ರೀ ಪೀಠಕ್ಕೆ ಕೊಟ್ಟಂತ ವಸ್ತುಗಳನ್ನು ಅವರ ಮನೆಗೆ ಕೊಡಲು ನಿರ್ಣಯ ಮಾಡಲಾಗಿದೆ. ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2A ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಒತ್ತಾಯಿಸಲಾಗುವುದು. ಕಳೆದ ಒಂದು ವರ್ಷದಿಂದ ನಿರಂತರವಾಗಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

    ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಂಡಿದ್ದೇವೆ. ಬಜೆಟ್ ಮುನ್ನ ಮೀಸಲಾತಿ ನೀಡೋದಾಗಿ ಸಿಎಂ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಬಜೆಟ್ ಅಧಿವೇಶನದೊಳಗೆ ಮೀಸಲಾತಿ ನೀಡಲು ಆಗ್ರಹ ಮಾಡಿದರು. ಸಮಾಜ ಒಡೆಯುತ್ತಿರುವ ಕುತಂತ್ರಿಗಳನ್ನು ನಿರ್ಲಕ್ಷಿಸುವುದು ಮತ್ತು ಮುರುಗೇಶ್ ನಿರಾಣಿ ಹೆಸರಲ್ಲಿ ಶ್ರೀಪೀಠಕ್ಕೆ ಕೊಟ್ಟಂತಹ ವಸ್ತುಗಳನ್ನು ಅವರ ಮನೆಗೆ ವಾಪಸ್ ಕೊಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

    ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಮಗೆ ಮೀಸಲಾತಿ ಕೊಡಬೇಕು ಅನ್ನೋ ಮನಸ್ಸಿದೆ. ಸಿಎಂ ಅವರು ಹೇಳಿದಂತೆ ಬಜೆಟ್ ಒಳಗಾಗಿ ಮೀಸಲಾತಿ ಕೊಡಬೇಕು. ವಿಳಂಬ ಆಗುತ್ತಿದೆ ಅನಿಸುತ್ತಿದೆ. ಕೊನೆಯದಾಗಿ ಹೋರಾಟ ಮಾಡುತ್ತೇವೆ. ಮೀಸಲಾತಿ ಒಡೆಯುವ ಕುತಂತ್ರ ಮಾಡುವ ವ್ಯಕ್ತಿಗಳನ್ನು ನಿರ್ಲಕ್ಷಿಸುತ್ತೇವೆ. ನನಗೆ ಮುಖ್ಯ ಇರುವುದು ಮಠ. ಮೀಸಲಾತಿ ಮಠ ಕಟ್ಟುವುದಿಲ್ಲ. ಪಂಚಮಸಾಲಿ ಮೂರನೇ ಪೀಠ, ನಾಲ್ಕನೇ ಪೀಠಕ್ಕೆ ಸ್ವಾಗತನೂ ಇಲ್ಲ ವಿರೋಧನೂ ಮಾಡಲ್ಲ ಎಂದು ಸ್ವಾಮೀಜಿ ಹೇಳಿದರು.

  • ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಒಡಕು – ನಿರಾಣಿ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

    ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಒಡಕು – ನಿರಾಣಿ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

    ಬೆಂಗಳೂರು: ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಒಡಕುಂಟಾಗಿದೆ. ಮೊನ್ನೆ ಮೊನ್ನೆಯಷ್ಟೇ ಪಂಚಮಸಾಲಿ ಮೂರನೇ ಪೀಠದ ಸ್ಥಾಪನೆಯನ್ನು ಬೆಂಬಲಿಸಿದ್ದ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.

    ನಿರಾಣಿಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನೀವು ಎಂಎಲ್‍ಎ ಆಗಬೇಕಾ, ಸಿಎಂ ಆಗಬೇಕಾ, ಜಿಲ್ಲೆಗೊಂದು, ತಾಲೂಕಿಗೊಂದು, ಗ್ರಾಮ ಪಂಚಾಯತ್‍ಗೊಂದು ಪೀಠ ಮಾಡಿಕೊಳ್ಳಿ. ಆದ್ರೆ ನಿಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳಬೇಡಿ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಯಾವ ಪೀಠ ಆದ್ರೂ ಮಾಡಿಕೊಳ್ಳಲಿ. ನಮ್ಮದೇನು ಅಭ್ಯಂತರ ಇಲ್ಲ. ನಾವು ಮೂರನೇ ಪೀಠಕ್ಕೆ ಹೆದರಲ್ಲ ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕೊರೊನಾ ಇಳಿಕೆ 17,266 ಕೇಸ್ – ಒಟ್ಟು 42,470 ಪಾಸಿಟಿವ್‌, 26 ಸಾವು

    ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ನಿರಾಣಿ ವಿರುದ್ಧ ಸಿಟ್ಟಾಗಿದ್ದಾರೆ. ಸಿಎಂ ಆಗ್ಲಿಕ್ಕೆ ನಿರಾಣಿ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಅವರ ಸಚಿವ ಸ್ಥಾನವೇ ಉಳಿಯಲ್ಲ. ಇನ್ನೆಲ್ಲಿ ಸಿಎಂ ಆಗ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ನಿರಾಣಿ ಸಹ ತಿರುಗೇಟು ನೀಡಿದ್ದಾರೆ. ಪಂಚಮಸಾಲಿ ಸಮುದಾಯ ದೊಡ್ಡದಿದೆ. ಮೂರನೇ ಪೀಠ ಆದರೆ ತಪ್ಪೇನು ಅಂತಾ ಕೇಳಿದ್ದಾರೆ. ಮೂರನೇ ಪೀಠದ ಅವಶ್ಯಕತೆಯನ್ನು ನಿರ್ಧರಿಸೋದು ಸಮಾಜದ ಜನ. ನಾನಲ್ಲ, ಸ್ವಾಮೀಜಿಗಳು ಆಪಾದನೆ ಬಿಟ್ಟು ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತಗೆದುಕೊಳ್ಳಬೇಕು. ನಾನು ಯಾವತ್ತಾದ್ರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ? ಸ್ವಾಮೀಜಿಗಳಿಗೆ ತಪ್ಪು ಕಲ್ಪನೆ ಉಂಟಾಗಿದ್ದು, ಸಮಯ ನಿಗದಿ ಮಾಡಿದ್ರೆ ನಾನೇ ಅವರನ್ನು ಭೇಟಿ ಆಗಿ ಮಾತನಾಡುತ್ತೇನೆ ಎಂದಿದ್ದಾರೆ.  ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

  • ಉಲ್ಟಾ ಹೊಡೆದ ಸಿಎಂ – ಪಂಚಮಸಾಲಿ 2ಎ ಮೀಸಲಾತಿ ಸಮಗ್ರ ಅಧ್ಯಯನಕ್ಕೆ ಸೂಚನೆ

    ಉಲ್ಟಾ ಹೊಡೆದ ಸಿಎಂ – ಪಂಚಮಸಾಲಿ 2ಎ ಮೀಸಲಾತಿ ಸಮಗ್ರ ಅಧ್ಯಯನಕ್ಕೆ ಸೂಚನೆ

    ಬೆಂಗಳೂರು: ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

    ನಮ್ಮದು ರಾಷ್ಟ್ರೀಯ ಪಕ್ಷ, ಕೇಂದ್ರ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗ್ಗೆಯಷ್ಟೇ ಸದನದಲ್ಲಿ ಹೇಳಿದ್ದ ಸಿಎಂ ಇದೀಗ ರಾತ್ರಿ ಆಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗದವರು ತಮ್ಮ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡುಬಡವರಿಗೆ ತೊಂದರೆಯಾಗುವುದರಿಂದ ಸಮಾಜವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನಿಡಿದ್ದಾರೆ.

    ಬೆಳಗ್ಗೆಯಷ್ಟೇ ವಿಧಾನಸಭೆಯಲ್ಲಿ ನಮ್ಮದು ರಾಷ್ಟ್ರೀಯ ಪಕ್ಷ ಎಂದು ಕೇಂದ್ರ ನಾಯಕರ ಮೇಲೆ ಬೊಟ್ಟು ಮಾಡಿದ್ದ ಯಡಿಯೂರಪ್ಪ, ಇದೀಗ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ರಾತ್ರಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಸ್ಪಷ್ಟೀಕರಣ ನೀಡಿರುವ ಸಿಎಂ, ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅಪಾರ್ಥ ಮಾಡಿಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ನಾನು ಈಗಾಗಲೇ ಸಮಾಜದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಮತ್ತು ಶಾಸಕರ ಜೊತೆ ಚರ್ಚಿಸಿದ್ದೇನೆ. ಬಳಿಕ ಸಮಾಜದ ಇಬ್ಬರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವಂತೆ ಫೆ.4ರಂದು ಕಳುಹಿಸಿದ್ದೆ ಎಂದು ತಿಳಿಸಿದ್ದಾರೆ.

    ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ವಿಷಯ ನೀಡಿ ಅಧ್ಯಯನ ಮಾಡಿ, ವರದಿ ಸಲ್ಲಿಸಲು ಕೋರಲಾಗಿದೆ. ನಾನು ಅಧಿವೇಶನದಲ್ಲಿ ಹೇಳಿದ್ದು, ನಮ್ಮದು ರಾಷ್ಟ್ರೀಯ ಪಕ್ಷ, ಸಂಸತ್ ಸದಸ್ಯರ ಜೊತೆ ಚರ್ಚಿಸಿ, ರಾಷ್ಟ್ರೀಯ ನಾಯಕರೊಂದಿಗೆ ವಿಷಯ ಮನವರಿಕೆ ಮಾಡಿಕೊಡಬೇಕು. ನಮ್ಮ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸುವುದನ್ನು ನೆನಪಿಸಿಕೊಳ್ಳಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ಒಳಿತಿಗೆ ನಾನು ಬದ್ಧನಾಗಿದ್ದೇನೆ. ಇಂತಹ ಗಂಭೀರ ವಿಷಯಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ, ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ವಿವರಿಸಿದ್ದಾರೆ.