Tag: pan card

  • ಪಾನ್ ಕಾರ್ಡ್ ನಲ್ಲಿರೋ 10 ಸಂಖ್ಯೆಗಳು ಏನನ್ನು ಸೂಚಿಸುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

    ಪಾನ್ ಕಾರ್ಡ್ ನಲ್ಲಿರೋ 10 ಸಂಖ್ಯೆಗಳು ಏನನ್ನು ಸೂಚಿಸುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

    ಭಾರತದ ನಾಗರೀಕರೇ ಆಗಲಿ ಅಥವಾ ಅನಿವಾಸಿ ಭಾರತೀಯರೇ(ಎನ್‍ಆರ್‍ಐ) ಆಗಿದ್ದರೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯವಶ್ಯಕ. ಇಂದಿನ ದಿನಗಳಲ್ಲಿ ಪಾನ್‍ಕಾರ್ಡ್ ಕೇವಲ ಆದಾಯ ತೆರಿಗೆ ಪಾವತಿಗೆ ಮಾತ್ರವಲ್ಲದೇ, ಅನೇಕ ರೀತಿಯ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾದರೇ ಈ ಪಾನ್ ಕಾರ್ಡ್ ಎಂದರೇನು? ಅದರಿಂದ ಏನು ಉಪಯೋಗ? ಪಾನ್ ಕಾರ್ಡ್ ನಂಬರ್ ಹೇಗೆ ರಚಿಸಲ್ಪಡುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪಾನ್ ಕಾರ್ಡ್ ಎಂದರೇನು?
    ಭಾರತದ ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳುಳ್ಳ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಸಂಕ್ಷಿಪ್ತವಾಗಿ ಪಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಪಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ. ಇದೊಂದು ಶಾಶ್ವತ ನಂಬರ್ ಆಗಿದ್ದು, ಒಂದು ವೇಳೆ ನಿಮ್ಮ ವಿಳಾಸ ಬದಲಾವಣೆ ಆದರೂ ಸಹ ಯಾವುದೇ ಪರಿಣಾಮ ಬೀರುವುದಿಲ್ಲ.

    ಪಾನ್ ಕಾರ್ಡನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಇದು ಯುನಿವರ್ಸಲ್ ಗುರುತಿನ ಚೀಟಿಯ ಹಾಗೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿ ಹಾಗೂ ಹಣಕಾಸು ವ್ಯವಹಾರಗಳು ಈ ಖಾತೆ ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತದೆ. ಸದ್ಯ ಪಾನ್ ಕಾರ್ಡ್ ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕಡ್ಡಾಯವಾಗಿ ಬೇಕಾಗಿದೆ.

    ಏನೇನು ಇರುತ್ತದೆ?
    ಪಾನ್ ಕಾರ್ಡಿನ ಮೊದಲನೇ ಸಾಲಿನಲ್ಲಿ ವ್ಯಕ್ತಿಯ ಸಂಪೂರ್ಣ ಹೆಸರು, ಎರಡನೇ ಸಾಲಿನಲ್ಲಿ ಆಕೆಯ/ಆತನ ತಂದೆ ಹಾಗೂ ಪೋಷಕರ ಹೆಸರು. ಮೂರನೇ ಸಾಲಿನಲ್ಲಿ ಜನ್ಮದಿನಾಂಕ. ನಾಲ್ಕನೇ ಸಾಲಿನಲ್ಲಿ 10 ಅಂಕಿಗಳ ಪರ್ಮನೆಂಟ್ ಅಕೌಂಟ್ ನಂಬರ್ ಹಾಗೂ ಐದನೇ ಸಾಲಿನಲ್ಲಿ ಪಾನ್ ಕಾರ್ಡ್ ಅರ್ಜಿದಾರರ ಸಹಿ ಹಾಗೂ ಅವರ ಭಾವಚಿತ್ರ ಮುದ್ರಿತವಾಗಿರುತ್ತದೆ. ಇದಲ್ಲದೇ ಆದಾಯ ತೆರಿಗೆ ಇಲಾಖೆಯ ಹಾಲೋಗ್ರಾಮ್ ಸಹ ಇರುತ್ತದೆ. ಒಂದು ವೇಳೆ ಸಂಸ್ಥೆಗಳು ಪಾನ್ ಕಾರ್ಡ್ ಪಡೆದುಕೊಂಡಿದ್ದರೆ, ಅದರಲ್ಲಿ ಸಂಸ್ಥೆಯ ಹೆಸರು, ನೋಂದಣಿ ದಿನಾಂಕ ಹಾಗೂ ಇತರೆ ಮಾಹಿತಿಗಳು ಮುದ್ರಿತವಾಗಿರುತ್ತವೆ.

    ಪಾನ್ ಕಾರ್ಡ್ ಸಲ್ಲಿಸಲು ಏನೇನು ಬೇಕು?
    ಇತ್ತೀಚಿನ ಎರಡು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ರೇಶನ್ ಕಾರ್ಡ್, ಚಾಲನಾ ಪರವಾನಗಿ, ಮತದಾನ ಗುರುತಿನ ಚೀಟಿ, ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಳು ಬೇಕು. ಅಲ್ಲದೇ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮೇಲ್ಕಂಡ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇ ಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಪಾನ್ ಕಾರ್ಡ್ ಅನ್ನು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆ ಬರುವುದಿಲ್ಲ. ಒಂದು ವೇಳೆ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಬೇಕಾದರೆ ಪೋಷಕರ ರುಜು ಕಡ್ಡಾಯವಾಗಿರುತ್ತದೆ. ಪಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆದಾಯ ತೆರಿಗೆಯ ಜಾಲತಾಣ (www.tin-nsdl.com) ಹಾಗೂ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ಸಂಸ್ಥೆಗಳ ಮೂಲಕ ಆನ್‍ಲೈನ್ ಅಥವಾ ಆಪ್‍ಲೈನ್ ಮೂಲಕ ಅರ್ಜಿಸಲ್ಲಿಸಬಹುದು.

    10 ಸಂಖ್ಯೆಗಳು ಏನನ್ನು ಸೂಚಿಸುತ್ತವೆ?
    ಪಾನ್ ಕಾರ್ಡಿನ ಮೊದಲ 5 ಇಂಗ್ಲೀಷಿನ ಅಕ್ಷರಗಳನ್ನು ಕೋರ್ ಗುಂಪುಗಳೆಂದು ಕರೆಯುತ್ತಾರೆ. ಇದರಲ್ಲಿನ ಮೊದಲನೇ 3 ಅಕ್ಷರಗಳು `ಎ’ ಇಂದ `ಝೆಡ್’ ವರೆಗೆ ಸಾಮಾನ್ಯವಾಗಿ ಇರುತ್ತವೆ. 4ನೇ ಅಕ್ಷರವು ಪಾನ್ ಕಾರ್ಡ್ ಯಾವುದಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ತೋರಿಸುತ್ತದೆ. ಸಿ-ಕಂಪನಿ, ಪಿ- ವ್ಯಕ್ತಿ, ಎಚ್-ಹಿಂದೂ ಅವಿಭಕ್ತ ಕುಟುಂಬ, ಎಫ್- ವಿಭಾಗ, ಎ-ವ್ಯಕ್ತಿಗಳ ಗುಂಪು, ಟಿ-ಟ್ರಸ್ಟ್, ಬಿ-ವ್ಯಕ್ತಿಯ ಗುರುತು, ಎಲ್-ಸ್ಥಳೀಯ ಸಂಸ್ಥೆಗಳು, ಜೆ-ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸಿರುವುದು, ಜಿ-ಸರ್ಕಾರ ಆಗಿರುತ್ತದೆ. ಅಲ್ಲದೇ 5ನೇ ಅಕ್ಷರ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವಾಗಿರುತ್ತದೆ. ಇದಲ್ಲದೇ 6 ರಿಂದ 9ನೇ ಸ್ಥಾನದಲ್ಲಿ ಬರುವ ಅಂಕಿಗಳು 0001 ರಿಂದ 9999ರವರೆಗಿನ ಸರಣಿ ಸಂಖ್ಯೆಗಳಾಗಿರುತ್ತವೆ. ಕೊನೆಯ ಇಂಗ್ಲೀಷಿನ ಸಂಖ್ಯೆ ಅಂಕಿಗಳನ್ನು ಪ್ರತಿನಿಧಿಸುವ ಅಕ್ಷರವಾಗಿರುತ್ತದೆ.

    ಉದಾಹರಣೆಗೆ ABCPS1234A ಆಗಿದೆ.

    ಪಾನ್ ಕಾರ್ಡಿನ ಉಪಯೋಗವೇನು?
    ಪಾನ್ ಕಾರ್ಡ್ ನ್ನು ಬ್ಯಾಂಕ್ ಖಾತೆ ತೆರೆಯಲು, ಐಟಿ ರಿಟರ್ನ್ಸ್, ಆಸ್ತಿ ಮತ್ತು ವಾಹನ ಮಾರಾಟ ಹಾಗೂ ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್‍ಗಳಲ್ಲಿ ಹಣ ಹೂಡಿಕೆ ಮಾಡುವ ವೇಳೆ ಹಾಗೂ ಇನ್ನೂ ಅನೇಕ ಸಂದರ್ಭದಲ್ಲಿ ಉಪಯೋಗ ಮಾಡಿಕೊಳ್ಳಬಹುದು. ಇದಲ್ಲದೇ ಪಾನ್ ಕಾರ್ಡನ್ನು ಗುರುತಿನ ಚೀಟಿಯಾಗಿರೂ ಸಹ ಬಳಕೆ ಮಾಡಬಹುದಾಗಿದೆ.

    ಪಾನ್ ಕಾರ್ಡ್ ಮೇಲೆ ಜನರಲ್ಲಿರುವ ಅಪನಂಬಿಕೆಗಳೇನು?
    ಜನರು ಪಾನ್ ಕಾರ್ಡನ್ನು ಕೇವಲ ತೆರಿಗೆ ಪಾವತಿ ಮಾಡಲು ಬಳಸುತ್ತಾರೆ ಎನ್ನುವ ಅಪನಂಬಿಕೆಯನ್ನು ಹಲವರು ನಂಬಿಕೊಂಡಿದ್ದಾರೆ.

    ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಒಂದು ಬಾರಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಈ ಕಾರ್ಡ್ ಮಾಡಿಸಿದರೆ, ಮುಂದಿನ ದಿನಗಳಲ್ಲಿ ಈ ಕಾರ್ಡ್ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ನಾಲ್ಕು ಆಧಾರ್ ಡೆಡ್‍ಲೈನ್ ದಿನಾಂಕವನ್ನು ಮಿಸ್ ಮಾಡಬೇಡಿ

    ಈ ನಾಲ್ಕು ಆಧಾರ್ ಡೆಡ್‍ಲೈನ್ ದಿನಾಂಕವನ್ನು ಮಿಸ್ ಮಾಡಬೇಡಿ

    ಕೇಂದ್ರ ಸರ್ಕಾರ ಈಗ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಆಧಾರ್ ಪಾನ್ ಲಿಂಕ್: ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಈ ಹಿಂದೆ ಪಾನ್ ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ರಂದು ಕೊನೆಯ ದಿನಾಂಕವನ್ನು ನೀಡಿತ್ತು. ಆದರೆ ಈಗ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಸರ್ಕಾರ ಆಗಸ್ಟ್ 31 ರಿಂದ ಡಿಸೆಂಬರ್ 31 ಕ್ಕೆ ಡೆಡ್‍ಲೈನ್ ವಿಸ್ತರಿಸಿದೆ. ಆಧಾರ್ ಗೆ ಲಿಂಕ್ ಮಾಡದೇ ಇದ್ದರೆ ಆ ಪಾನ್ ನಂಬರ್ ನಿಷ್ಕ್ರಿಯವಾಗಲಿದೆ.

    ಆಧಾರ್ ಮೊಬೈಲ್ ಲಿಂಕ್: ಮೊಬೈಲ್ ನಂಬರ್‍ಗೆ ಆಧಾರ್ ಅನ್ನು ಲಿಂಕ್ ಮಾಡಿಸದಿದ್ದರೆ ಎಲ್ಲಾ ಮೊಬೈಲ್ ಫೋನ್ ನಂಬರ್‍ಗಳು 2018 ಫೆಬ್ರವರಿ ನಂತರ ನಿಷ್ರ್ಕಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಈಗ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಆಧಾರ್ ಲಿಂಕ್ ಮಾಡುವಂತೆ ಮೊಬೈಲ್ ಸಂದೇಶ ಕಳುಹಿಸುತ್ತಿದೆ.

    ಆಧಾರ್ ಬ್ಯಾಂಕ್ ಲಿಂಕ್: ಎಲ್ಲಾ ಬ್ಯಾಂಕ್‍ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ 2017ರ ಡಿಸೆಂಬರ್ 31ರ ಒಳಗಡೆ ಗ್ರಾಹಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂದು ನಿರ್ದೇಶನ ನೀಡಿದೆ. ಹಣಕಾಸು ಸಂಸ್ಥೆಗಳು ಒಂದು ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ದಾಖಲಾತಿಯನ್ನು ಸಿದ್ಧಪಡಿಸಬೇಕು. ಸಾಲವನ್ನು ಪಡೆಯುವಂತಹ ಗ್ರಾಹಕರು ತಮ್ಮ ಆಧಾರ ವಿವರವನ್ನು ನೀಡಬೇಕು ಎಂದು ತಿಳಿಸಿದೆ.

    ಆಧಾರ್ ಸಾಮಾಜಿಕ ಭದ್ರತಾ ಯೋಜನೆ ಲಿಂಕ್: ಆಧಾರ್‍ನ 12 ಡಿಜಿಟಲ್ ಸಂಖ್ಯೆಯನ್ನು ಸಾಮಾಜಿಕ ಭದ್ರತಾ ಯೋಜನೆಗಳಾದ ಎಲ್‍ಪಿಜಿ ಸಿಲಿಂಡರ್, ಪಿಂಚಣಿ, ಸರ್ಕಾರಿ ವಿದ್ಯಾರ್ಥಿ ವೇತನ ಇತರೆ ಸಾಮಾಜಿಕ ಯೋಜನೆಗಳಿಗೆ ಲಿಂಕ್ ಮಾಡಿಸಲು 2017ರ ಡಿಸೆಂಬರ್ 31ಕ್ಕೆ ನೀಡಲಾಗಿದೆ.

  • ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಚಾಮರಾಜನಗರ: ಪೋಸ್ಟ್ ಮ್ಯಾನ್‍ವೊಬ್ಬರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸದೇ ಮಣ್ಣಿನಲ್ಲಿ ಹೂತಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಲೊಕ್ಕನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಹೌದು, ಲೊಕ್ಕನಹಳ್ಳಿ ಗ್ರಾಮದ ಪೋಸ್ಟ್ ಮ್ಯಾನ್ ನಾಗರಾಜು ಎಂಬವರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸುವ ಬದಲು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಇಲ್ಲಿಯ ಗ್ರಾಮಗಳಿಗೆ ತುಂಬಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಬರುವುದರಿಂದ ತಾನು ಒಬ್ಬನೇ ಇರೋದ್ರಿಂದ ಹಂಚಲಿಕ್ಕೆ ಆಗುವುದಿಲ್ಲ ಎಂದು ತಿಳಿದು ಮಣ್ಣಲ್ಲಿ ಹೂತಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

    2013 ರಿಂದ ಲೊಕ್ಕಳ್ಳಿ, ಕೌಳ್ಳಿಹಳ್ಳಿ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನ ಕೂಬೆ ಗ್ರಾಮಗಳ ಜನರಿಗೆ ಬಂದಿದ್ದ ದಾಖಲೆಗಳನ್ನು ಅಂಚೆ ಕಚೇರಿಯ ಮುಂಭಾಗದ ಖಾಲಿ ನಿವೇಶನದಲ್ಲಿ ಹೂತಿಟ್ಟಿದ್ದರು.

    ಇದೀಗ ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಪಾಯ ತೆಗೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ನಂಜನಗೂಡಿನ ಅಂಚೆ ವಿಭಾಗದ ಅಧೀಕ್ಷರಿಗೆ ದೂರು ನೀಡಿದ್ದಾರೆ. ಅಧೀಕ್ಷಕರು ಆ ಪೋಸ್ಟ್ ಮ್ಯಾನ್ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಬೆಂಗಳೂರು: ಜುಲೈ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಹೀಗಾಗಿ ಬಹಳಷ್ಟು ಜನ ಹೇಗಪ್ಪಾ  ಆಧಾರ್ ಜೋಡಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಈ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೇವಲ ಒಂದೇ ನಿಮಿಷದ ಒಳಗಡೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

    ಸ್ಟೆಪ್ 1: ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/   ಪೋರ್ಟಲ್ ಹೋಗಿ.

    ಸ್ಟೆಪ್ 2: ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್ ಪೇಜ್‍ನ ಎಡಗಡೆ ಸರ್ವಿಸಸ್ ಎನ್ನುವ ವಿಭಾಗ ಇದೆ. ಇದರಲ್ಲಿ ಮೇಲುಗಡೆ ಲಿಂಕ್ ಆಧಾರ್ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್  ಕ್ಲಿಕ್ ಮಾಡಿ.

    ಸ್ಟೆಪ್ 3: ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪಿಸಬೇಕು. ಇದಾದ ಬಳಿಕ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಚಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪಿಸಿದ ಬಳಿಕ ಕೆಳಗಡೆ ಹಸಿರು ಬಾಕ್ಸ್ ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು. ನೀವು ಟೈಪಿಸಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್‍ಗಳು ಸರಿಯಾಗಿ ಇದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಮರುಕ್ಷಣವೇ ಬರುತ್ತದೆ. ಒಂದು ವೇಳೆ ಈ ಸಂದೇಶ ಬಾರದೇ ಇದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

     

    ಮೊಬೈಲ್ ಎಸ್‍ಎಂಎಸ್ ಮೂಲಕ ಜೋಡಣೆ ಹೇಗೆ?
    ಆಧಾರ್ ಜೋಡಣೆಯನ್ನು ಮೊಬೈಲ್ ಮೂಲಕ ಮಾಡಲು ಸಾಧ್ಯವಿದೆ. ನಿಮ್ಮ ಮೊಬೈಲ್ ನಿಂದ 56768 ಅಥವಾ 56161 ಎಸ್‍ಎಂಎಸ್ ಕಳುಹಿಸಿ ಜೋಡಣೆ ಮಾಡಬಹುದು. ನಿಮ್ಮ ಸಂದೇಶ ಈ ಮಾದರಿಯಲ್ಲಿ ಇರಬೇಕು.

    UIDPAN<SPACE><12 digit Aadhaar><Space><10 digit PAN>

    ಉದಾಹರಣೆ: UIDPAN 234567890123 ABCDE1234F

    ಜೋಡಣೆ ಯಾಕೆ ಆಗಲ್ಲ?
    ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದೇ ಇದ್ದರೆ ಈ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.

    ಆಧಾರ್ ಕಡ್ಡಾಯ ಮಾಡಿದ್ದು ಯಾಕೆ?
    ಬಹಳಷ್ಟು ಜನ ತೆರಿಗೆಯನ್ನು ವಂಚಿಸಲು ಬೇರೆ ಬೇರೆ ಪಾನ್ ಕಾರ್ಡ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತೆರಿಗೆಯನ್ನು ವಂಚನೆ ಮಾಡುವ ಕುಳಗಳನ್ನು ನಿಯಂತ್ರಿಸಲು ಪಾನ್ ಕಾರ್ಡಿಗೆ ಆಧಾರ್ ಜೋಡಣೆ ಸಂಬಂಧ ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

     

  • ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜುಲೈ 1ರಿಂದ ಜಾರಿಗೆ ಬರಲಿದೆ. ಜಿಎಸ್‍ಟಿ ಜೊತೆ ಜುಲೈ 1ರಿಂದ ಇತರೇ ಕ್ಷೇತ್ರಗಳಲ್ಲೂ ಕೆಲ ಬದಲಾವಣೆಯಾಗಲಿದೆ. ಹೀಗಾಗಿ ಜುಲೈ 1ರಿಂದ ದೇಶದಲ್ಲಿ ಮತ್ತು ವಿಶ್ವದಲ್ಲಿ ಏನು ಬದಲಾವಣೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    1. ಐಟಿ ರಿಟರ್ನ್: ಜುಲೈ 1ರಿಂದ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ. ಆಧಾರ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

    2. ಪಾನ್ ಕಾರ್ಡ್: ಬೇರೆ ಬೇರೆ ಪಾನ್ ಕಾರ್ಡ್ ಬಳಸಿಕೊಂಡು ಜನರು ತೆರಿಗೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಈ ವಂಚನೆಯನ್ನು ತಡೆಗಟ್ಟಲು ಪಾನ್ ಕಾರ್ಡ್ ಗೂ ಆಧಾರ್ ಕಡ್ಡಾಯ ಮಾಡಲಾಗಿದೆ.

    3. ಪಾನ್ ಸಿಗಲ್ಲ: ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಆಧಾರ್ ನಂಬರ್ ನೀಡಲೇಬೇಕು. ಜುಲೈ 1ರಿಂದ ಆಧಾರ್ ನೀಡದೇ ಇದ್ದರೆ ನಿಮಗೆ ಪಾನ್ ಸಿಗಲ್ಲ.

    4. ಪಾಸ್ ಪೋರ್ಟ್ ಸಿಗಲ್ಲ: ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ ಮಾಡಿದೆ. ಆಧಾರ್ ನಂಬರ್ ನೀಡದೇ ಇದ್ದರೆ ನಿಮಗೆ ಪಾಸ್ ಪೋರ್ಟ್ ಸಿಗಲ್ಲ

     

    5. ಪಿಎಫ್: ಉದ್ಯೋಗಿಗಳ ಭವಿಷ್ಯ ನಿಧಿ ಸಂಘ(ಇಪಿಎಫ್‍ಓ) ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಮಾಡಿದೆ. ಆಧಾರ್ ಲಿಂಕ್ ಮಾಡಿದ ಬಳಿಕ ಪಿಎಫ್ ಹಣವನ್ನು ತೆಗೆಯುವ ಸಮಯ 20 ದಿನಗಳಿಂದ 10 ದಿನಕ್ಕೆ ಇಳಿಕೆಯಾಗಿದೆ.

    6. ರೈಲ್ವೇ ಟಿಕೆಟ್: ರೈಲ್ವೇ ಆನ್‍ಲೈನ್ ಮುಂಗಡ ಟಿಕೆಟ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹೆಚ್ಚು ಟಿಕೆಟ್‍ಗಳನ್ನು ಒಟ್ಟಿಗೆ ಕಾಯ್ದಿರಿಸುವ ವೇಳೆ ನಡೆಯುವ ಮೋಸ, ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸುವುದು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಕೇಂದ್ರ ಆಧಾರ್ ಕಡ್ಡಾಯ ಮಾಡಿದೆ.

    7. ವಿದ್ಯಾರ್ಥಿವೇತನ: ಸರ್ಕಾರದಿಂದ ವಿತರಣೆಯಾಗುವ ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿ ಕಡ್ಡಾಯವಾಗಿ ಆಧಾರ್ ಹೊಂದಿರಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಹಿಂದೆಯೇ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಜೂನ್ 30ರ ನಂತರ ಆಧಾರ್ ಇಲ್ಲದೇ ಇದ್ದರೆ ಯಾವೊಬ್ಬ ವಿದ್ಯಾರ್ಥಿಗೂ ಸ್ಕಾಲರ್‍ಶಿಪ್ ನೀಡದಂತೆ ಸೂಚಿಸಿದೆ.

    8. ಪಿಡಿಎಸ್ ಸಿಗಲ್ಲ: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ(ಪಿಡಿಎಸ್) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಜುಲೈ 1ರ ಒಳಗಡೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕೆಂದು ಈಗಾಗಲೇ ಸೂಚಿಸಲಾಗಿದೆ.

    9. ಸಿಎಗೆ ಹೊಸ ಪಠ್ಯ: ಚಾರ್ಟರ್ಡ್ ಅಕೌಂಟೆಂಟ್ ಓದುವ ಮಂದಿಗೆ ಹೊಸ ಪಠ್ಯ ಜುಲೈ 1 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹೊಸ ಪಠ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಹೊಸ ಪಠ್ಯವು ಇಂಟರ್‍ನ್ಯಷನಲ್ ಫೆಡರೇಷನ್ ಆಫ್ ಅಕೌಂಟೆಂಟ್ಸ್ ಮಾನದಂಡಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಹೊಸ ತೆರಿಗೆಯಾದ ಜಿಎಸ್‍ಟಿಯೂ ಬಗ್ಗೆ ಇರಲಿದೆ.

    10. ಆನ್‍ಲೈನ್ ವೀಸಾ: ಭಾರತ ಪ್ರವಾಸಿಗರು ಜುಲೈ 1 ರಿಂದ ಆನ್‍ಲೈನ್ ಮೂಲಕ ಸಂದರ್ಶಕರ ವೀಸಾಗೆ(ವಿಸಿಟರ್ಸ್ ವೀಸಾ)ಅರ್ಜಿ ಸಲ್ಲಿಸಬಹುದು ಎಂದು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಘೋಷಿಸಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ವೀಸಾ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ.

    11. ಸೌದಿ ಕುಟುಂಬ ತೆರಿಗೆ: ವಲಸಿಗರನ್ನು ನಿಯಂತ್ರಿಸುವ ಸಲುವಾಗಿ ಸೌದಿ ಸರ್ಕಾರ ದೇಶದಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳ ಮೇಲೆ ವಿಶೇಷ ಕುಟುಂಬ ತೆರಿಗೆ ಹೇರಲು ಮುಂದಾಗಿದೆ. ಕುಟುಂಬ ತೆರಿಗೆಯಾಗಿ ಒಬ್ಬ ಸದಸ್ಯನ ಮೇಲೆ ಪ್ರತಿ ತಿಂಗಳು 100 ರಿಯಾಲ್(ಅಂದಾಜು 1700 ರೂ.) ವಿಧಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.

     

  • ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನವದೆಹಲಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಲ್ಲಿ ಇನ್ನು ಮುಂದೆ ಮೊಬೈಲ್ ಸಿಮ್ ಕಾರ್ಡ್ ಸಿಗಲ್ಲ.

    ಹೌದು. ಈಗಾಗಲೇ ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೇಳಿರುವ ಕೇಂದ್ರ ಸರ್ಕಾರ ಇದೀಗ ಮೊಬೈಲ್ ಸಿಮ್ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ.

    ಈ ಸಂಬಂಧ ಟೆಲಿಕಾಂ ಇಲಾಖೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ನೋಟಿಸ್ ಕಳುಹಿಸಿದ್ದು, ಮೊಬೈಲ್ ಚಂದಾದಾರರ ಸಿಮ್ ಕಾರ್ಡ್‍ಗಳು ಅವರ ಆಧಾರ್ ನಂಬರ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲದೇ ಈ ಪ್ರಕ್ರಿಯೆ ವರ್ಷದೊಳಗೆ ಪೂರ್ಣಗೊಳಿಸಬೇಕು ಅಂತಾ ಇಲಾಖೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಲ್ಲಾ ಗ್ರಾಹಕರ ದಾಖಲೆಗಳನ್ನು ಆಧಾರ್ ಕಾರ್ಡ್ ಇ- ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮೂಲಕ ಮರುಪರಿಶೀಲನೆ ಮಾಡಲಿವೆ.

    ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವೆರಿಫಿಕೇಶನ್ ಕೋಡ್ ನ್ನು ಕಳುಹಿಸಲಿವೆ. ಭವಿಷ್ಯದಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ಕಾರ್ಡ್ ಏಕೈಕ ಸಾಧನವಾಗಲಿದೆ ಅಂತಾ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೂ ಆಧಾರ್ ಕಡ್ಡಾಯ: ಕಳೆದ ಮಂಗಳವಾರವಷ್ಟೇ ಸಂಸತ್ತಿನಲ್ಲಿ ಚರ್ಚೆಯಾದ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಎಂಬ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿತ್ತು. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ ಅಂತಾ ಹೇಳಲಾಗಿದೆ.

    ದೇಶದಲ್ಲಿ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಕಂಪೆನಿ ಆಧಾರ್ ಕಾರ್ಡ್ ಮೂಲಕ ಗ್ರಾಹಕರಿಗೆ ಸಿಮ್ ಕಾರ್ಡನ್ನು ಕೆಲವೇ ನಿಮಿಷಗಳಲ್ಲಿ ವಿತರಣೆ ಮಾಡಿತ್ತು. ಗ್ರಾಹಕರು ಬೆರಳಚ್ಚು ಓತ್ತಿದಾಗಲೇ ಆಧಾರ್ ದಾಖಲೆಗಳು ಸ್ಕ್ರೀನ್‍ನಲ್ಲಿ ಕಾಣುತಿತ್ತು.

  • ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ನವದೆಹಲಿ: ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವೇಳೆ  ಮತ್ತು ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

    ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಹಣಕಾಸು ಮಸೂದೆಯ ಬಗ್ಗೆ ಬುಧವಾರ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ.

    ಕಳೆದ ಕೆಲ ವರ್ಷಗಳ ಐಟಿಆರ್ ಸಲ್ಲಿಕೆಯ ಆಧಾರ್ ಐಚ್ಚಿಕವಾಗಿತ್ತು. ಭಾರತದಲ್ಲಿ ವಿದೇಶಿ ಪ್ರಜೆಗಳು ತೆರಿಗೆ ಪಾವತಿಸುತ್ತಿರುವುದರಿಂದ ಈಗ ಕೆಲ ಪ್ರಶ್ನೆಗಳು ಎದ್ದಿದ್ದು ಈ ಸಮಸ್ಯೆಗೆ ಪರಿಹಾರ ಏನು ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

    ಕೇಂದ್ರ ಸರ್ಕಾರ ಈಗ ಎಲ್ಲ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸುತ್ತಿದ್ದು, ಕೆಲ ದಿನಗಳ ಹಿಂದೆ ಬಡ ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಅಡಿಗೆ ಅನಿಲ(ಎಲ್ ಪಿಜಿ) ಸಂಪರ್ಕ ಪಡೆಯಯಲು ಆಧಾರ ಕಾರ್ಡ್ ಅನ್ನು ಕಡ್ಡಾಯಗೊಳಿಸಿತ್ತು.