Tag: Palty

  • ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಚಿತ್ರದುರ್ಗ: ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಮೀಪ ನಡೆದಿದೆ.

    ಚಳ್ಳಕೆರೆ ತಾಲೂಕಿನ ಚೌಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ವಾರ್ಡ್ ನಿಂದ ಶಿಪ್ಟ್ ಮಾಡಲು ಸ್ಟ್ರಚ್ಚರ್ ಕೂಡ ಇಲ್ಲದೇ ನಡೆಸಿಕೊಂಡೆ ಹೋದ ಅಮಾನವೀಯ ಘಟನೆ ಕೂಡ ನಡೆದಿದೆ.

    ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಖಾಸಗಿ ಟೆಂಪೋವೊಂದರಲ್ಲಿ ಚೌಳೂರಿನಿಂದ ಟಿ.ಎನ್.ಕೋಟೆ ಗ್ರಾಮಕ್ಕೆ ಕರೆತರಲಾಗುತ್ತಿತ್ತು. ಆದರೆ ಟೆಂಪೋ ಪಲ್ಟಿಯಾಗಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಪಲ್ಟಿಯಾದ ಲಾರಿಯನ್ನು ಕ್ರೇನ್ ನಲ್ಲಿ ಎತ್ತಲು ಹೋಗಿ ಮತ್ತೆ ಪಲ್ಟಿ!

    ಪಲ್ಟಿಯಾದ ಲಾರಿಯನ್ನು ಕ್ರೇನ್ ನಲ್ಲಿ ಎತ್ತಲು ಹೋಗಿ ಮತ್ತೆ ಪಲ್ಟಿ!

    ಚಿಕ್ಕಮಗಳೂರು: ಮಳೆಯ ಅವಾಂತರಕ್ಕೆ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿದ್ದು, ಪರಿಣಾಮ ಶೃಂಗೇರಿ ಮತ್ತು ಚಿಕ್ಕಮಗಳೂರು ರಸ್ತೆ ಸಂಚಾರ ಕಡಿತಗೊಂಡಿತ್ತು.

    ಚಿಕ್ಕಮಗಳೂರು ತಾಲೂಕಿನ ಎಲೆಕಲ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಕಡಿತಗೊಂಡಿತ್ತು.

    ಈ ಬಗ್ಗೆ ಮಾಹಿತಿ ತಿಳಿದ ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಲ್ಟಿಯಾದ ಲಾರಿಯನ್ನು ಕ್ರೇನ್ ಮೂಲಕ ಎತ್ತಿ ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಕ್ರೇನ್ ನಲ್ಲಿ ಎತ್ತುವ ವೇಳೆ ಲಾರಿ ಕಾಫಿ ತೋಟಕ್ಕೆ ಹಿಂಬದಿ ಚಲಿಸಿ ಮತ್ತೆ ಪಲ್ಟಿಯಾಗಿದೆ.

    ಈ ಅವಘಡದಿಂದ ಅದೃಷ್ಟವಶಾತ್ ಟಿಪ್ಪರ್ ಚಾಲಕ ಹಾಗೂ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸೇತುವೆಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾದ ರಭಸಕ್ಕೆ ಚಕ್ರಗಳೇ ಉರುಳಿದವು!

    ಸೇತುವೆಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾದ ರಭಸಕ್ಕೆ ಚಕ್ರಗಳೇ ಉರುಳಿದವು!

    ಚಿಕ್ಕಮಗಳೂರು: ಕೊಬ್ಬರಿ ತುಂಬಿದ್ದ ಲಾರಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತರೀಕೆರೆಯ ಎಪಿಎಂಸಿ ಯಾರ್ಡ್ ಬಳಿ ನಡೆದಿದೆ.

    ಹಾಸನದ ಅರಸೀಕೆರೆಯಲ್ಲಿ ಕೊಬ್ಬರಿ ಲೋಡ್ ಮಾಡಿಕೊಂಡ ಲಾರಿ ಮಹಾರಾಷ್ಟ್ರದತ್ತ ಹೊರಟಿತ್ತು. ಇಂದು ಬೆಳಗ್ಗಿನ ಜಾವ ತರೀಕೆರೆಗೆ ಬರುತ್ತಿದ್ದಂತೆ ಲಾರಿ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

    ಪಲ್ಟಿಯಾದ ರಭಸಕ್ಕೆ ಒಂದೇ ಒಂದು ಟೈರ್ ಕೂಡ ಲಾರಿಯಲ್ಲಿ ಇಲ್ಲ. ಅಷ್ಟೇ ಅಲ್ಲದೇ ಸೇತುವೆಯಿಂದ ಪಲ್ಪಿಯಾದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವತಾಶ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ತರೀಕೆರೆ ಸರ್ಕಾರಿ ಆಸ್ಪತೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ: ಭಾರೀ ಅನಾಹುತದಿಂದ ಪಾರಾದ ಚಾಲಕ!

    ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ: ಭಾರೀ ಅನಾಹುತದಿಂದ ಪಾರಾದ ಚಾಲಕ!

    ರಾಯಚೂರು: ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಯಚೂರಿನ ದೇವದುರ್ಗದ ಗಬ್ಬೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಪೆಟ್ರೋಲ್ ತುಂಬಿಕೊಂಡು ಟ್ಯಾಂಕರ್ ರಾಯಚೂರಿನಿಂದ ಕಲಬುರಗಿಗೆ ಹೊರಟಿತ್ತು. ಗಬ್ಬೂರು ಸಮೀಪದಲ್ಲಿ ಎಮ್ಮೆ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಪಕ್ಕದ ಹೊಲದಲ್ಲಿ ಬಿದ್ದಿದೆ.

    ಟ್ಯಾಂಕರ್ ನಲ್ಲಿ ಸುಮಾರು 12 ಸಾವಿರ ಲೀಟರ್ ಪೆಟ್ರೋಲ್ ಇತ್ತು. ಪಲ್ಟಿಯಾಗಿರುವ ಪರಿಣಾಮ ಸ್ವಲ್ಪ ಪ್ರಮಾಣದ ಪೆಟ್ರೋಲ್ ಸೋರಿಕೆಯಾಗಿದೆ. ಅದೃಷ್ಟವಶಾತ್ ಹೊಲದಲ್ಲಿ ಟ್ಯಾಂಕರ್ ಬಿದ್ದ ಪರಿಣಾಮ ಬೆಂಕಿ ತಗುಲದೆ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಗಬ್ಬೂರು ಪೊಲೀಸರು, ಎರಡು ಕ್ರೇನ್ ಮೂಲಕ ಟ್ಯಾಂಕರ್ ಅನ್ನು ಮೇಲೆತ್ತಿದ್ದಾರೆ. ಕಾರ್ಯಾಚರಣೆ ವೇಳೆ ಕೆಲ ಸಮಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

  • ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ತುಮಕೂರು: ಶಾಲಾ ವಾಹನ ಮಗುಚಿ ಬಿದ್ದ ಪರಿಣಾಮ ಮೂವರು ಶಿಕ್ಷಕರು ಹಾಗೂ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದ ಬಳಿ ನಡೆದಿದೆ.

    ಸತ್ಯಸಾಯಿ ಜಗದಾಂಬಾ ಖಾಸಗಿ ಶಾಲೆಯ ವಾಹನ ಇದಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಶಾಲಾವಾಹನದ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ವಾಹನದಲ್ಲಿನ ವಿದ್ಯಾರ್ಥಿಗಳನ್ನು ರಕ್ಷಿಸಿ ತಿರುಮಣಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಚಾಲಕ ಜಯರಾಮ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದೆ ವಾಹನ ಪಲ್ಟಿ ಹೊಡೆಯಲು ಕಾರಣ ಎನ್ನಲಾಗಿದೆ. ಅಪಘಾತ ಸಂಭವಿಸಿದ ನಂತರ ಚಾಲಕ ಜಯರಾಮ್ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹಾಲಿನ ಟ್ಯಾಂಕರ್ ಪಲ್ಟಿ- ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ್ರು

    ಹಾಲಿನ ಟ್ಯಾಂಕರ್ ಪಲ್ಟಿ- ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ್ರು

    ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಹಾಲೆಲ್ಲಾ ರಸ್ತೆ ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ವಾಪಸಂದ್ರ ಸೇತುವೆ ಬಳಿ ನಡೆದಿದೆ

    ಸಾದಲಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಿಂದ ಹಾಲನ್ನ ಯಲಹಂಕದ ಕೆಎಂಎಫ್ ನ ಮದರ್ ಡೈರಿಗೆ ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಪಸಂದ್ರ ಸೇತುವೆ ಕೆಳಭಾಗದ ತಿರುವಿನಲ್ಲಿ ಉರುಳಿಬಿದ್ದಿದೆ. ಹಾಲಿನ ಟ್ಯಾಂಕರ್ ಪಲ್ಟಿಯಾದ ಕಾರಣ ಟ್ಯಾಂಕರ್ ನಲ್ಲಿದ್ದ ಬಹುತೇಕ ಹಾಲು ರಸ್ತೆಪಾಲಾಗಿದೆ. ರಸ್ತೆಯ ತುಂಬೆಲ್ಲಾ ಹಾಲಿನ ಹೊಳೆಯೇ ಹರಿದಿದೆ.

    ಘಟನೆಯಲ್ಲಿ ಟ್ಯಾಂಕರ್‍ನ ಚಾಲಕ ಕ್ಲೀನರ್ ಸೇರಿದಂತೆ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲು ರಸ್ತೆ ಪಾಲಾಗುತ್ತಿದ್ದನ್ನು ಗಮನಿಸಿದ ಜನರು ಬಿಂದಿಗೆ, ಬಾಟಲ್ ಮತ್ತು ಕ್ಯಾನ್‍ಗಳಲ್ಲಿ ತುಂಬಿಸಿಕೊಂಡು ಸಂತೋಷದಿಂದ ಹೋಗಿದ್ದಾರೆ.

    ಸಾದಲಿ ಶೀತಲೀಕರಣ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ 7 ರ ಮುಖಾಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಮಾರ್ಗದಿಂದ ಯಲಹಂಕಕ್ಕೆ ಸಂಚರಿಸುತ್ತಿತ್ತು. ಆದರೆ ವಾಪಸಂದ್ರ ಸೇತುವೆ ಬಳಿ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡಿದೆ. ಅಸಲಿಗೆ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡದೆ ನೇರವಾಗಿ ಯಲಹಂಕಕ್ಕೆ ತೆರಳಬಹುದಿತ್ತು. ಆದರೆ ಟ್ಯಾಂಕರ್ ಚಾಲಕನ ಹಣದ ಆಸೆಗೆ ಮಾರ್ಗ ಮಧ್ಯೆ ಚಿಕ್ಕಬಳ್ಳಾಪುರ ನಗರಕ್ಕೆ ಪ್ರಯಾಣಿಕರನ್ನ ಹತ್ತಿಸಿಕೊಂಡಿದ್ದಾನೆ. ಅವರನ್ನ ಇಳಿಸುವ ಸಲುವಾಗಿಯೇ ಚಾಲಕ ಚಿಕ್ಕಬಳ್ಳಾಪುರ ನಗರದತ್ತ ಪ್ರವೇಶ ಮಾಡಿದ್ದಾನೆ. ಈ ವೇಳೆ ದುರದೃಷ್ಟವಶಾತ್ ಚಿಕ್ಕಬಳ್ಳಾಪುರ ನಗರ ಪ್ರವೇಶದ ಆರಂಭದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಸಹಾಯದಿಂದ ಟ್ಯಾಂಕರ್‍ನ್ನು ತೆರವುಗೊಳಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಕಾಡುಹಂದಿ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಅಂಬುಲೆನ್ಸ್-ಇಬ್ಬರಿಗೆ ಗಾಯ

    ಕಾಡುಹಂದಿ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಅಂಬುಲೆನ್ಸ್-ಇಬ್ಬರಿಗೆ ಗಾಯ

    ಮಂಡ್ಯ: ಅಂಬುಲೆನ್ಸ್ ಪಲ್ಟಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಆಂಬ್ಯುಲೆನ್ಸ್ ಚಾಲಕ ರವಿ ಮತ್ತು ಸಹಾಯಕ ಸುರೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಮಂಗಳವಾರ ರಾತ್ರಿ ನಾಗಮಂಗಲದಿಂದ ರೋಗಿಯೊಬ್ರನ್ನ ಕರೆದುಕೊಂಡು ಬಂದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾತ್ರಿ 2:30 ಸುಮಾರಿಗೆ ಬಸರಾಳು ಬಳಿ ಹೋಗುತ್ತಿದ್ದ ವೇಳೆ ಕಾಡುಹಂದಿ ಅಡ್ಡ ಬಂದಿದೆ. ಈ ಕಾಡುಹಂದಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ಪಲ್ಟಿ ಹೊಡೆದಿದೆ.

    ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ವಾಹನದೊಳಗೆ ಸಿಲುಕಿ ಒದ್ದಾಡುತ್ತಿದ್ದ ಇಬರನ್ನು ನೈಟ್ ಬೀಟ್ ಪೊಲೀಸರು ರಕ್ಷಣೆ ಮಾಡಿ ಬಸರಾಳು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.